Saturday, November 14, 2015

ಅಸಹಿಷ್ಣತೆ : ದೇವನೂರು ಮಹಾದೇವ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪದ್ಮಶ್ರೀ ವಾಪಸ್


ಯಾಕಾಗಿ ವಾಪಸ್ಸಾತಿ ದೇವನೂರು ಮಹಾದೇವರಿಂದ ಪತ್ರಯಾವುದೇ ಆಳ್ವಿಕೆಯು, ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ ಕಲಾವಿದ ಪ್ರಜ್ಞಾವಂತರು ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ ‘ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂತಿರುಗಿಸುತ್ತಿರುವ’ ಈ ಸಂದರ್ಭದಲ್ಲಿ ನನ್ನ ಸ್ವಭಾವಕ್ಕೆ ವಿರುದ್ಧವಾಗಿ ಸಂಯಮಿಸಿಕೊಂಡೇ ಬಂದೆ. ಆದರೆ ಯಾವಾಗ ಕೆಲ ಲೇಖಕ-ಕಲಾವಿದರು ಆಳ್ವಿಕೆ ಪರ ಸಂಘಟಿತರಾಗಿ ನಿಂತರೋ ಅದು ಕೇಡಿನ ಲಕ್ಷಣ ಅನ್ನಿಸಿಬಿಟ್ಟಿತು. ಇದಕ್ಕೆ ಜಿಗುಪ್ಸೆಗೊಂಡು, ನಾನು ಪಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ. ಈಗ ಹಿಂತಿರುಗಿಸುತ್ತಿರುವುದು ಸಾಂಕೇತಿಕವಾಗಿ ಮಾತ್ರವೆ, ಯಾಕೆಂದರೆ ಅವುಗಳನ್ನು ಪಡೆದಿದ್ದರಿಂದ ಪರೋಕ್ಷವಾಗಿ ಪಡೆದಿರಬಹುದಾದ ಸ್ಥಾನಮಾನಗಳನ್ನು ಹಿಂತಿರುಗಿಸಲಾಗುತ್ತಿಲ್ಲ ಎಂಬ ಸಂಕೋಚವೂ ನನಗಿದೆ.
ನಮ್ಮ ಸ್ವಾತಂತ್ರ್ಯ ಹೋರಾಟದ ಕನಸುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ, ಸಾಮಾಜಿಕ ನ್ಯಾಯ ಇತ್ಯಾದಿ ಮೌಲ್ಯಗಳು ನೆಹರೂಯುಗದ ನಂತರ ಒಂದಲ್ಲಾ ಒಂದು ಕ್ಷೀಣಿಸುತ್ತಾ ಬಂದು ಈಗ ತತ್ತರಿಸುತ್ತಿವೆ. ಈ ಮೌಲ್ಯಗಳು ಕಣ್ಣಿಗೆ ಕಾಣುವಂತೆ ಭೌತಿಕ ಅಲ್ಲದಿರಬಹುದು, ಆದರೆ ನಾವು ಕಟ್ಟಬೇಕಾದ ಸಾಂಸ್ಕೃತಿಕ, ಸಾಮಾಜಿಕ ಭಾರತದ ಉಸಿರಾಟದಂತೆ.  ಈ ಅರಿವಿನ ಕೊರತೆಯೇ ಇಂದಿನ ಅಸಹಿಷ್ಣುತೆಗೆ ಕಾರಣವೆನ್ನಿಸುತ್ತಿದೆ.

ಇದಲ್ಲದಿದ್ದರೆ, ದಾದ್ರಿಯಂಥ ಘಟನೆಗಳೋ ಅಥವಾ ವೈಚಾರಿಕತೆ ಭಿನ್ನಾಭಿಪ್ರಾಯಗಳಿಂದ ನಡೆಯುತ್ತಿರುವ ಹತ್ಯೆಗಳೋ ಇವನ್ನು ಆಯಾಯ ರಾಜ್ಯಗಳ ಸಮಸ್ಯೆ ಎಂದು ಆಳ್ವಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರದ ವರಿಷ್ಠರೇ ಹೇಳುವ ದುರಂತ ಸಂಭವಿಸುತ್ತಿರಲಿಲ್ಲ. ಹಾಗೆಯೇ ‘ಸಾಮಾಜಿಕ ಸಾಂಸ್ಕೃತಿಕ ಅಸಹಿಷ್ಣುತೆಗೆ ಅಸಹಕಾರವಾಗಿ ಈ ಪ್ರಜ್ಞಾವಂತರ ಪ್ರಶಸ್ತಿ ಹಿಂತಿರುಗಿಸುವ ಪ್ರತಿಕ್ರಿಯೆ’ ಎಂಬ ಕನಿಷ್ಠ ಅರಿವಿದ್ದರೂ ಕಾನೂನು ಸಚಿವರು ಅದನ್ನು ‘ಮೋದಿಯವರ ವಿರುದ್ಧ ಸೈದ್ಧಾಂತಿಕ ಅಸಹಿಷ್ಣುತೆ’ ಎಂಬ ಆತ್ಮನಾಶಕ ಮಾತುಗಳನ್ನಾಡುತ್ತಿರಲಿಲ್ಲ. ಬದಲಾಗಿ ಹೆಚ್ಚು ಸಂವೇದನಾಶೀಲರಾಗಲು ಆಳ್ವಿಕೆ ನಡೆಸುತ್ತಿರುವವರಿಗೆ ಸಹಕಾರಿ ಎಂದೇ ಸ್ವೀಕರಿಸಬಹುದಿತ್ತು. ಹಾಗೇ ಸಮಾಜದ ಪಟ್ಟಭದ್ರರಾದ ಪೇಜಾವರಶ್ರೀ ಅಂಥವರು ‘ಮಸೀದಿ ಮುಂದೆ ಹಂದಿ ಮಾಂಸ ಬೇಯಿಸಿದರೆ ಸುಮ್ಮನಾಗುತ್ತಾರ?’ ಎಂದು ಮೂದಲಿಸುವುದೂ ಕೂಡ ಅಂಥದೇ ಮನಸ್ಥಿತಿಯಾಗಿದೆ. ಕೃಷ್ಣಮಠದ ಯತಿಗಳ ಮನಸ್ಸೊಳಗೆ ಮಸೀದಿ, ಹಂದಿಮಾಂಸ ತುಂಬಿರುವುದು ತರವಲ್ಲ ಎಂದು ಹೇಳುವರು ಯಾರು? ಆಳ್ವಿಕೆ ನಡೆಸುತ್ತಿರುವವರ ಹಾಗೂ ಪಟ್ಟಭದ್ರರ ಇಂಥ ಧೋರಣೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಮಾಜದಲ್ಲಿ ಅಸಹಿಷ್ಣುತೆ, ಹಿಂಸೆ ಹೆಚ್ಚಾಗಲು ಪ್ರಚೋದನೆ ನೀಡುತ್ತಿವೆ.

ಯಾಕೆಂದರೆ ಇಂದು ಅಸಹಿಷ್ಣುತೆಯ ಅಟ್ಟಹಾಸ ಎಸಗುತ್ತಿರುವ ಗುಂಪಿಗೆ ತಾನು ಗೆಲ್ಲಿಸಿದವರೇ ಕೇಂದ್ರ ಸರ್ಕಾರವಾಗಿರುವುದರಿಂದ ‘ತಾನು ಏನೇ ಮಾಡಿದರೂ ಮೇಲಿನವರ ಕೃಪೆಯಿಂದ ಬಚಾವಾಗಬಲ್ಲೆ’ ಎಂಬ ಭೀತಿಯಿಲ್ಲದ ಭಾವನೆ ಇರುವುದರಿಂದಲೇ ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿದ್ದ ಅಸಹನೆಯ ಹಿಂಸಾಕೃತ್ಯಗಳು ಇಂದು ಹಾಡಹಗಲೇ ಜರುಗುತ್ತಿವೆ. ಈ ಹಿಂದೆ ಎಂದೂ ಇಂಥ ಪರಿಸ್ಥಿತಿ ಉಂಟಾಗಿರಲಿಲ್ಲ. ಇದನ್ನು ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಹಾಲಿ ಕೇಂದ್ರ ಸರ್ಕಾರವು, ತಾನೂ ಸರ್ಕಾರರ ಕೊಡಬಲ್ಲುದು.

ಈ ಸಂದರ್ಭದಲ್ಲಿ ಎಂದೋ ಎಲ್ಲೋ ಓದಿದ ಕತೆಯೊಂದು ನೆನಪಾಗುತ್ತಿದೆ : ಒಂದು ದರೋಡೆ, ಸುಲಿಗೆ ಹಿಂಸೆಯ ಸಮುದಾಯದ ಬಲಿಷ್ಠ ವ್ಯಕ್ತಿಯೊಬ್ಬನು ದುರ್ಬಲ ರಾಜನನ್ನು ಸೋಲಿಸಿ ತಾನೇ ರಾಜನಾದಾಗ ಆತ ಮಾಡುವ ಮೊದಲ ಕೆಲಸ – ತನ್ನ ಸಮುದಾಯದ ದರೋಡೆ ಹಿಂಸೆ ಅಪರಾಧಗಳಿಗೆ ಯಾವ ರಿಯಾಯಿತಿಯನ್ನು ಕೊಡದೆ ಹತ್ತಿಕ್ಕಿ ಅವರನ್ನು ಸುಸಂಸ್ಕೃತ ಸಭ್ಯ ಪ್ರಜೆಗಳನ್ನಾಗಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕಾರಣನಾಗುತ್ತಾನಂತೆ -ಚರಿತ್ರೆಯು, ನಮ್ಮ ಹಾಲಿ ಪ್ರಧಾನಿಗಳ ಮುಂದೆ ಒಂದು ದೊಡ್ಡ ಸವಾಲನ್ನು ಇಟ್ಟು ಕಿರುನಗೆ ಬೀರುತ್ತಿರುವಂತಿದೆ.

ಒಟ್ಟಿನಲ್ಲಿ ಇದು ಎಲ್ಲರಿಗೂ ಆತ್ಮಾವಲೋಕನದ ಕಾಲ. ಜನರಲ್ ಮುಷರಫ್ರ ಕೊನೆಗಾಲದ ಆತ್ಮಾವಲೋಕದ ಮಾತುಗಳೂ ನಮಗೆ ಪಾಠವಾಗಬಲ್ಲುವು – ಸಯೀದ್, ಲಖ್ವಿ ಇವರುಗಳು ಕಾಶ್ಮೀರದ ವಿಮೋಚನಾ ಹೋರಾಟಗಾರರಾಗಿದ್ದಾಗ ಅವರು ನಮ್ಮ ಹೀರೋಗಳಾಗಿದ್ದರು. ಯಾವಾಗ ಅವರ ಹೋರಾಟಕ್ಕೆ ಧಾರ್ಮಿಕ ಉಗ್ರವಾದ ಅಂಟಿತೊ ಆಗ ಅದು ಭಯೋತ್ಪಾದನೆಯಾಗಿ ಮಾರ್ಪಟ್ಟಿತು. ಈಗ ಆ ಭಯೋತ್ಪಾದನೆ ತಮ್ಮ ಜನರನ್ನೇ ಅಂದರೆ ನಮ್ಮವರನ್ನೇ ಕೊಲ್ಲುವಲ್ಲಿಗೆ ಬಂದು ನಿಂತಿದೆ – ಇದನ್ನು ಚರಿತ್ರೆ ಕೂಗಿ ಕೂಗಿ ಹೇಳುತ್ತಾ ಬಂದಿದೆ. ಹಾಗೇ ‘ಧರ್ಮ ದೇವರ ಹೆಸರಲ್ಲಿ ಕೊಲೆ-ಸುಲಿಗೆ ದ್ವೇಷ ಮಾಡುವವರನ್ನು ದೇವರೂ ಕೂಡ ಕಾಪಾಡಲಾರ’ ಎಂಬ ಯೋಗಿಯ ಮಾತೂ ಇದೆ. – ಇದನ್ನು ಈ ಸಂದರ್ಭದಲ್ಲಿ ನೆನಪಿಸುವುದಕ್ಕಾಗಿ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದೇನೆ.

ದೇವನೂರ ಮಹಾದೇವ
No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...