Saturday, November 14, 2015

ಸರಸ್ವತಿ ದು ಎರಡು ಕವಿತೆಗಳು೧ 

ನಡುವಿನಂತರ ಒಂದಡಿ


ಬಸಿವ ನೆತ್ತರು
ಸುರಿವ ಹಾಲು
ನಡುವಿನಂತರ ಒಂದಡಿ ಕಂಡು
ಬೆಚ್ಚಿದರು
ಹುಚ್ಚತ್ತಿಸಿಕೊಂಡರು
ಕಿಚ್ಚತ್ತಿಸಿಕೊಂಡರು
ನಾಚಿದರು
ಸ್ವತ್ತೆಂದು ಬೇಲಿಯಾದರು
ಸಂಪತ್ತೆಂದು ಕಾವಲು ಕಾದರು
ತಿಳಿಯದೆ ತರಾವರಿ ಹೆಸರಿಕ್ಕಿದರು

ತೊಡೆಸಂದಿನ ಮೂರುಕೋನವು
ನುಂಗಿಕೊಂಡ ಆಕ್ರಮಣವ
ಹಿಡಿದಿಟ್ಟ ಹಿಡಿಚೀಲ
ಎಡಬಿಡದೆ ಮುರಿಮುರಿದು
ಜೀವಕಣವಾಗಿಸಿ
ಉಸಿರ ಹೂವಾಗಿಸಿತು
ಅಂಗಾಂಗದಂಗುಲಂಗುಲವು ಸಿದ್ಧವಾಗಿ
ಹಾಲುನೆತ್ತರಾದವು ಉಸಿರ ಹೂವಿಗೆ

ಹಾಲುನೆತ್ತರೆರಡರೊಳಗರಿವುದೊಂದೇ ಜೀವಜಲ
ಅದಕ್ಕಿಲ್ಲ ಬಣ್ಣವೆಂದರಿಯದೆ
ಬಣ್ಣಕ್ಕೆ ಅಂಜಿದ
ಚಿತ್ತಗಳಲ್ಲೋಲಕಲ್ಲೋಲವಾದವು
ಕಣ್ಣುಗಳು ಪೊರೆಗಟ್ಟಿದವು
***


೨ 
ಕಿತ್ತು ಬಿಸಾಡಿರುತ್ತಿದ್ದೆ ಎಂದೋ


ಕಿತ್ತು ಬಿಸಾಡಿರುತ್ತಿದ್ದೆ ಎಂದೊ
ಮೊಲೆಯೋನಿತೊಗಲಮೆತ್ತೆಗಳ

ಕಟ್ಟಿದ್ದ ನೆತ್ತರಮೆತ್ತೆ ಕಿತ್ತು ಬರುವ
ಜೀವ ಹೊತ್ತ ಸತ್ತೆ ಬರುವ
ಸ್ಖಲನ ಹರಿಬಿಟ್ಟ
ಮಿಲಿಯಾಂತರ ಜೊಳ್ಳು ಬಿತ್ತಗಳು
ಹೊತ್ತು ತರುವ ಏಕೈಕ ಬಸುರಿ ಬಿತ್ತ ಬರುವ
ನರನಾಡಿಗಳೆಲ್ಲೆಡೆ ಅಡಗಿರುವ
ನವಿರುಗಳು ಮೆಲುಕಂಪನದ ಬಿಂದುವಾಗುವ
ದಾರಿಯಾಗಿರದ್ದಿದ್ದರೆ

ಕಣಕಣಗಳ ಕಿಣಿಕಿಣಿಸುವ
ಪುಳಕಗಳಿಗೆ ನಿಮಿರಿ ನಿಲ್ಲುವ ಕಣಕಗಳು
ಹಸಿ ಕೂಸಿನ ಹಸಿವು ನೀಗಿಸಿ
ಕಸುವಾಗಿಸುವ
ಹಾಲಬುಗ್ಗೆಗಳಾಗಿರದಿದ್ದರೆ

ತೊಗಲ ದೇಗುಲದ
ಒಳಗಿನ ಮೂಲ ಬೆಳಕಿನ ಸೆಲೆಗೆ
ಆಗಿರದಿದ್ದರೆ ನೆಲೆ

    ನಿನ್ನ ಉದ್ರೇಕವನು
    ಏರಿಸಿ ಇಳಿಸುವ
    ಮೊಲೆಯೋನಿತೊಗಲಮೆತ್ತೆಗಳ
    ಎಂದೋ ಕೆತ್ತಿ ಬಿಸಾಡಿರುತ್ತಿದ್ದೆ
    ಇತ್ತೆಂಬ ಗುರುತಿಲ್ಲದಂತೆ
***


ಸರಸ್ವತಿ ದು. (೧೯೬೩) ಬೆಂಗಳೂರಿನವರು. ಹಲವಾರು ವರ್ಷಗಳಿಂದ ಮಹಿಳಾ ಸಂಘಟನೆ, ಗುತ್ತಿಗೆ ಪೌರ ಕಾರ್ಮಿಕ ಬೆಂಬಲ ಗುಂಪು, ಗಾರ್ಮೆಂಟ್ಸ್ ಕೆಲಸಗಾರರ ಸಂಘಟನೆ ಅಲ್ಲದೆ ಹಲವು ಅಸಂಘಟಿತ ಕಾರ್ಮಿಕ ಸಂಘಟನೆಗಳೊಡನೆ ಕೆಲಸ ಮಾಡುತ್ತಿರುವವರು. ‘ಮಾನಸ ತಿಂಗಳ ಪತ್ರಿಕೆ’ಯ ಸಂಪಾದಕ ಬಳಗದಲ್ಲಿದ್ದು ಕೆಲಸ ಮಾಡಿರುವ ಸರಸ್ವತಿ ಉತ್ತಮ ರಂಗ ಕಲಾವಿದೆ. ಸಾಹಿತ್ಯದಲ್ಲೂ ಸೂಕ್ಷ್ಮ ಅಭಿವ್ಯಕ್ತಿ ಹೊಂದಿದ್ದಾರೆ. ಇದುವರೆಗೆ ‘ಹೆಣೆದರೆ ಜೇಡನಂತೆ’, ‘ಜೀವ ಸಂಪಿಗೆ’ ಎಂಬ ಎರಡು ಕವನ ಸಂಕಲನಗಳು, ‘ಈಗೇನ್ಮಾಡೀರಿ’ ಎಂಬ ಅನುಭವ ಕಥನ, ಎ. ರೇವತಿಯವರ ಹಿಜ್ರಾ ಒಬ್ಬಳ ಆತ್ಮಕಥನ ಪುಸ್ತಕವನ್ನು ‘ಬದುಕು-ಬಯಲು’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದು ಯಶಸ್ವಿಯಾಗಿ ರಂಗ ಪ್ರಯೋಗವನ್ನೂ ಕಂಡಿದೆ. ‘ನೀರದಾರಿ’ ಎಂಬ ದಲಿತ ಮಹಿಳಾ ಪ್ರಜ್ಞೆ ಕುರಿತ ಪುಸ್ತಕ ಸಂಪಾದಿಸಿರುವ ಸರಸ್ವತಿ ಹಲವು ಪ್ರಶಸ್ತಿ, ಸಮ್ಮಾನ ಪಡೆದಿದ್ದಾರೆ. ಪ್ರಸ್ತುತ ಬಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ನಿರತರಾಗಿದ್ದಾರೆ.

ವಿಳಾಸ: ಎಂ ಫ್ಲಾಟ್ ನಂ, ೦೦೬, ಶಾಂತಿ ನಿವಾಸ್, ತುಮಕೂರ್ ರೋಡ್, ಯಶವಂತಪುರ, ಬೆಂಗಳೂರು - ೫೬೦೦೨೨.
koliunja@gmail.com

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...