Sunday, November 22, 2015

ಬಿಜೆಪಿ ವಿರೋಧಿ ರಂಗ ಇಂದಿನ ಅನಿವಾರ್ಯತೆ


ಸನತ್ ಕುಮಾರ್ ಬೆಳಗಲಿ
ಬಿಹಾರ ರಾಜಧಾನಿ ಪಾಟ್ನಾದ ಗಾಂಧಿ ಮೈದಾನ ಹಲವಾರು ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಸಂಘಪರಿವಾರ ಜೆ.ಪಿ. ಚಳವಳಿಯಲ್ಲಿ ನುಸುಳಿಕೊಂಡು ಬಾಲ ಬಿಚ್ಚಿದ್ದು ಇದೇ ಮೈದಾನದಲ್ಲಿ. ಈಗ ಇದೇ ಗಾಂಧಿ ಮೈದಾನ ಇನ್ನೊಂದು ಐತಿಹಾಸಿಕ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ದುರಹಂಕಾರವನ್ನು ಮೆಟ್ಟಿ, ಆರೆಸ್ಸೆಸ್ ಹುನ್ನಾರಗಳನ್ನು ಹಿಮ್ಮೆಟ್ಟಿಸಿ ಜಯಶಾಲಿಯಾದ ನಿತೀಶ್ ಕುಮಾರ್ ಇದೇ ಮೈದಾನದಲ್ಲಿ ಶುಕ್ರವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 

ಇದು ರಾಜ್ಯವೊಂದರ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭ ಮಾತ್ರವಾಗಿದ್ದರೆ ಅಷ್ಟು ಪ್ರಾಮುಖ್ಯತೆ ಪಡೆಯುತ್ತಿರಲಿಲ್ಲ. ಆದರೆ ದೇಶದಲ್ಲಿ ತನ್ನ ಏಕಚಕ್ರಾಧಿಪತ್ಯ ಸ್ಥಾಪಿಸುವ ಹಗಲು ಕನಸು ಕಾಣುತ್ತಿದ್ದ ಅಂಬಾನಿ-ಅದಾನಿ ಕೃಪಾಪೋಷಿತ ನರೇಂದ್ರ ಮೋದಿಯ ದಿಲ್ಲಿ ಸಿಂಹಾಸನವನ್ನು ಅಲುಗಾಡಿಸುವ ಬಿರುಗಾಳಿ ಬೀಸುವ ಮುನ್ಸೂಚನೆಯನ್ನು ಈ ಸಮಾರಂಭ ನೀಡಿತು. ಜೊತೆಗೆ ‘ಹಿಂದೂರಾಷ್ಟ್ರ’ ನಿರ್ಮಿಸುವ ಮೋಹನ್ ಭಾಗವತ್ ಕವಾಯತು ಪಡೆಯ ಕನಸನ್ನೂ ಇದು ಭಗ್ನಗೊಳಿಸಿತು. ಭಾರತದ ಜಾತ್ಯತೀತ ಜನತಂತ್ರ ವ್ಯವಸ್ಥೆಯ ಉಳಿವಿಗೆ ಅಗತ್ಯವಾಗಿರುವ ಬಿಜೆಪಿ ವಿರೋಧಿ ರಂಗವೊಂದು ಮೂಡಿ ಬರುವ ಎಲ್ಲ ಸೂಚನೆಗಳು ಇಲ್ಲಿ ಗೋಚರಿಸಿದವು. ಸಂಘಪರಿವಾರವನ್ನು ವಿರೋಧಿಸುವ ಎಲ್ಲ ಸಮಾನ ಮನಸ್ಕ ರಾಜಕೀಯ ನೇತಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಹಾರ ಚುನಾವಣೆಗೆ ಮೊದಲು ಪರಸ್ಪರ ಮುಖ ನೋಡಲು ಇಷ್ಟಪಡದವರು ಈ ವೇದಿಕೆಯಲ್ಲಿ ಒಂದಾಗಿದ್ದರು. ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶರದ್ ಪವಾರ್, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಎಂ.ಕೆ.ಸ್ಟಾಲಿನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಪಿಐನ ಸುಧಾಕರ ರೆಡ್ಡಿ, ಜಾರ್ಖಂಡ್ ಮುಕ್ತಿಮೋರ್ಚಾದ ಹೇಮಂತ ಸೂರೆನ್ ಹೀಗೆ ಎಲ್ಲರೂ ಬಂದಿದ್ದರು. ಇವರೆಲ್ಲರ ಗುರಿ ಒಂದೇ ಆಗಿದೆ. ದಾರಿಗಳು ಮಾತ್ರ ಬೇರೆ ಬೇರೆ ಆಗಿವೆ. 

ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಕೆಲ ಘಟನೆಗಳಿಂದ ಇಡೀ ದೇಶ ತಲ್ಲಣಗೊಂಡಿತ್ತು. ದಾಭೋಲ್ಕರ್, ಗೋವಿಂದ್ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಹತ್ಯೆ ನಡೆಯಿತು. ಇಷ್ಟೇ ಅಲ್ಲ. ಗೋಮಾಂಸವಿದೆ ಎಂದು ದಾದ್ರಿಯ ಅಖ್ಲಾಕ್‌ನ ಅಡಿಗೆ ಮನೆ ತಡಕಾಡಿ ಆತನನ್ನು ಜೀವಂತ ಕೊಚ್ಚಿ ಕೊಂದು ಹಾಕಲಾಯಿತು. ಹರ್ಯಾಣದಲ್ಲಿ ದಲಿತ ಕುಟುಂಬದ ಮಕ್ಕಳಿಬ್ಬರನ್ನು ಜೀವಂತ ಸುಟ್ಟು ಹಾಕಲಾಯಿತು. ಆಗ ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿದ್ದ ಅಂಬಾನಿ ಕೃಪಾಪೋಷಿತ ಮೋದಿ ಈ ಬಗ್ಗೆ ಬಾಯಿ ಬಿಡಲಿಲ್ಲ. ಆದರೆ ಬಾಯಿ ಬಿಟ್ಟವರು ಸಂಘಪರಿವಾರದ ಪ್ರಚಾರಕರು. ಗೋರಕಪುರದ ಸಂಸದ ಮಹಂತ ಆದಿತ್ಯನಾಥ, ಸಾಕ್ಷಿ ಮಹಾರಾಜ, ಸಾಧ್ವಿ ಪ್ರಾಚಿ, ಕೇಂದ್ರ ಮಂತ್ರಿಗಳಾದ ಗಿರಿರಾಜ್ ಸಿಂಗ್, ಕೆ.ಎನ್.ಸಿಂಗ್, ರಮೇಶ್ ಶರ್ಮಾ ಈ ಅವಿವೇಕಿಗಳದ್ದೆಲ್ಲ ಒಂದೇ ಮಾತು ಗೋಮಾಂಸ ಸೇವಿಸುವವರು ಪಾಕಿಸ್ತಾನಕ್ಕೆ ಹೋಗಬೇಕಂತೆ. ಆದರೆ ಗೋಮಾಂಸ ರಫ್ತು ಮಾಡುವ ವ್ಯಾಪಾರಿಗಳೆಲ್ಲ ಇವರದೇ ಪರಿವಾರಕ್ಕೆ ಸೇರಿದವರೆಂಬುದನ್ನು ಇವರು ಮುಚ್ಚಿಟ್ಟರು.

ಇಂಥ ಆತಂಕದ ಸನ್ನಿವೇಶದಲ್ಲಿ ಸುಮ್ಮನಿರುವುದು ಅಪರಾಧ ಎಂದು ಭಾವಿಸಿದ ದೇಶದ ಹೆಸರಾಂತ ಸಾಹಿತಿಗಳು, ವಿಜ್ಞಾನಿಗಳು, ಚಿತ್ರ ನಿರ್ದೇಶಕರು, ಕಲಾವಿದರು ತಮಗೆ ಬಂದ ಪ್ರಶಸ್ತಿಗಳನ್ನು ವಾಪಸು ಮಾಡಿದರು. ಇನ್ಫೋಸಿಸ್ ನಾರಾಯಣ ಮೂರ್ತಿ ಅಂಥವರು, ‘‘ಅಲ್ಪಸಂಖ್ಯಾತರಲ್ಲಿ ಅಭದ್ರತೆ ಭಾವನೆ ಮಾಡಿದೆ’’ ಎಂದು ಕಳವಳ ವ್ಯಕ್ತಪಡಿಸಿದರು. ಇದರಿಂದ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಹೇಳಿದರು. 

ಅಂತಾರಾಷ್ಟ್ರೀಯ ಖ್ಯಾತಿಯ ಚಿಂತಕರ ಆತಂಕಕ್ಕೂ ಸ್ಪಂದಿಸದ ಫ್ಯಾಶಿಸ್ಟ್ ಪರಿವಾರದವರಿಗೆ ಅಧಿಕಾರದ ಸೊಕ್ಕು ಯಾವ ಮಟ್ಟಿಗೆ ಹೋಗಿತ್ತೆಂದರೆ ಕೇಂದ್ರ ಮಂತ್ರಿ ಅರುಣ್ ಜೇಟ್ಲಿ, ‘ಇದು ಪ್ರಾಯೋಜಿತ ಪ್ರತಿಭಟನೆ’ ಎಂದರು. ದೇಶದಲ್ಲಿ ಅಸಹಿಷ್ಣುತೆ ಎಲ್ಲಿದೆ?. ಇದೆಲ್ಲ ವಿರೋಧಿಗಳ ಸೃಷ್ಟಿ ಎಂದು ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿ ಹೊಂಕರಿಸಿದರು. ಈ ಅವಿವೇಕಿಗಳ ಅಹಂಕಾರ ಯಾವ ಮಟ್ಟಿಗೆ ಹೋಗಿತ್ತೆಂದರೆ ಸುಬ್ರಹ್ಮಣ್ಯನ್ ಸ್ವಾಮಿ ಎಂಬ ಕೋಡಂಗಿ ರಿಸರ್ವ್ ಬ್ಯಾಂಕ್ ಗವರ್ನರ್ ರಾಘರಾಮ್ ರಾಜನ್‌ರನ್ನು ಟೀಕಿಸುತ್ತ ‘‘ಆತ ಮುದುಕರಂತೆ ಮಾತಾಡದೇ ತನ್ನ ಕೆಲಸ ತಾನು ಮಾಡಲಿ’’ ಎಂದು ಹೇಳಿದರು. ಕರ್ನಾಟಕದ ಬಿಜೆಪಿ ಸಂಸದನೊಬ್ಬ ‘‘ಇನ್ಫೋಸಿಸ್ ನಾರಾಯಣ ಮೂರ್ತಿ ತಮ್ಮ ಸಂಸ್ಥೆಯನ್ನು ಮೊದಲು ಸರಿಪಡಿಸಿಕೊಳ್ಳಲಿ’’ ಎಂದು ವ್ಯಂಗ್ಯವಾಡಿದ. ಈ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎಲ್ಲಿ ಕುಸಿದು ಬೀಳುತ್ತದೋ ಎಂಬ ಆತಂಕ ಉಂಟಾಗಿರುವಾಗಲೇ ಮೋಹನ್ ಭಾಗವತ್ ಕಡೆಯಿಂದ ಹಿಂದೂ ರಾಷ್ಟ್ರ ನಿರ್ಮಾಣದ ಕರೆಗಳು ಬರತೊಡಗಿದ್ದವು. 

ಪ್ರಧಾನಿ ಮೋದಿ ಅದಕ್ಕೆ ಒಳಗೊಳಗೆ ಕುಮ್ಮಕ್ಕು ಕೊಡತೊಡಗಿದ್ದರು. ಮೀಸಲಾತಿಗೆ ಚಟ್ಟ ಕಟ್ಟುವ ಸಂಚು ನಡೆದಿತ್ತು. ಇಂಥ ಸನ್ನಿವೇಶದಲ್ಲೇ ನಡೆದ ಬಿಹಾರ ಚುನಾವಣೆಯಲ್ಲಿ ಹೌಹಾರಿ ಓಡಾಡಿದ ನರೇಂದ್ರ ಮೋದಿ ಐವತ್ತಕ್ಕೂ ಹೆಚ್ಚು ಸಭೆಗಳನ್ನು ಉದ್ದೇಶಿಸಿ ಕೈಗಳನ್ನು ಮೇಲೆತ್ತಿ ಆಂಗಿಕ ಅಭಿನಯ ಮಾಡಿ ಭಾಷಣಗಳನ್ನು ಮಾಡಿದರು. ಆದರೆ ಬಿಹಾರದ ಜನತೆ ಈ ವಂಚಕರ ಮಾತಿಗೆ ಮರುಳಾಗಲಿಲ್ಲ. ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದರು. 

ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಅಲ್ಲಿಗೆ ಮಾತ್ರ ಸೀಮಿತವಾಗಿ ಉಳಿಯುವುದಿಲ್ಲ. ಮುಂಬರುವ ಪಶ್ಚಿಮ ಬಂಗಾಳ, ಕೇರಳ, ಉತ್ತರ ಪ್ರದೇಶ ಮುಂತಾದ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ. ‘‘2019ರ ನಂತರ ದಿಲ್ಲಿಗೆ ಬರಲು ಸಿದ್ಧರಾಗಿರಿ’’ ಎಂದು ನಿತೀಶ್ ಕುಮಾರ್ ಅವರಿಗೆ ಡಾ.ಫಾರೂಕ್ ಅಬ್ದುಲ್ಲಾ ಗಾಂಧಿ ಮೈದಾನದ ಈ ಸಭೆಯಲ್ಲಿ ಆಹ್ವಾನಿಸಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಕಡೆಗಣಿಸಿ ರಾಜಕಾರಣ ಮಾಡುವುದು ಸುಲಭವಲ್ಲ ಎಂಬ ಸಂದೇಶವನ್ನು ಬಿಹಾರ ವಿಧನಸಭಾ ಚುನಾವಣೆ ಫಲಿತಾಂಶ ನೀಡಿದೆ. 

ನಿತೀಶ್‌ಕುಮಾರ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಬಹುತೇಕ ಎಲ್ಲ ಪ್ರಾದೇಶಿಕ ಪಕ್ಷಗಳ ನೇತಾರರು ಬಂದಿದ್ದರು. ಅವರೆಲ್ಲ ಹಿಂದೂ ರಾಷ್ಟ್ರ ನಿರ್ಮಾಣವನ್ನು ಸ್ಪಷ್ಟವಾಗಿ ವಿರೋಧಿಸುತ್ತಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷದಲ್ಲೇ ಮತದಾರರು ತಿರುಗಿ ಬಿದ್ದಿದ್ದಾರೆ. ‘‘ಇದು ಯಾವುದೋ ಒಂದು ಧರ್ಮಕ್ಕೆ ಸೇರಿದ ರಾಷ್ಟ್ರವಲ್ಲ. ಎಲ್ಲ ಜಾತಿ-ಧರ್ಮಗಳ ದುಡಿಯುವ ಜನತೆ ಸೇರಿ ಕಟ್ಟಿದ ರಾಷ್ಟ್ರ ಇದು’’ ಎಂದು ದಿಲ್ಲಿ ಮತ್ತು ಬಿಹಾರದ ಜನತೆ ಹೇಳಿದ್ದಾರೆ. ನಾಳೆ ಕೇರಳ, ಬಂಗಾಳ, ಉತ್ತರಪ್ರದೇಶ ಜನತೆ ಹೇಳುತ್ತಾರೆ. 

ರಾಜ್ಯಸಭೆಯಲ್ಲಿ ಭೂಸ್ವಾಧೀನ ಮಸೂದೆ ಅಂಗೀಕಾರ ಪಡೆಯುವ ಮೋದಿ ಯತ್ನ ಈಗಾಗಲೇ ಭಗ್ನಗೊಂಡಿದೆ. ಇನ್ನು ಮುಂದೆಯೂ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆ ಇರುವುದಿಲ್ಲ. ಕಾಂಗ್ರೆಸ್, ಸಂಯುಕ್ತ ಜನತಾದಳ, ಜಾತ್ಯತೀತ ಜನತಾದಳ ಹಾಗೂ ಎಡಪಕ್ಷಗಳು ಜೊತೆಗೂಡಿ ಜಾತ್ಯತೀತ ರಂಗವೊಂದನ್ನು ನಿರ್ಮಿಸಿದರೆ ಸಹಜವಾಗಿ ಪ್ರಾದೇಶಿಕ ಪಕ್ಷಗಳು ಜೊತೆ ಸೇರುತ್ತವೆ. ನರೇಂದ್ರ ಮೋದಿ ನೇತೃತ್ವದ ಫ್ಯಾಶಿಸ್ಟ್ ಪರಿವಾರಕ್ಕೆ ಪರ್ಯಾಯವೊಂದು ರೂಪುಗೊಂಡರೆ ಅದಕ್ಕೆ ನಾಯಕತ್ವ ನೀಡುವ ಸಾಮರ್ಥ್ಯ ನಿತೀಶ್ ಕುಮಾರ್ ಅವರಿಗಿದೆ. ಸಮ್ಮಿಶ್ರ ಸರಕಾರವನ್ನು ಯಶಸ್ವಿಯಾಗಿ ನಡೆಸಿದ ಅನುಭವವೂ ಅವರಿಗಿದೆ. ಕಾಂಗ್ರೆಸ್ ಕೊಂಚ ಸಹನೆಯಿಂದ ವರ್ತಿಸಿದರೆ ಅದೂ ಕೂಡ ಚೇತರಿಸುತ್ತದೆ. ಈ ದೇಶದ ಜಾತ್ಯತೀತ ಜನತಾಂತ್ರಿಕ ವ್ಯವಸ್ಥೆಯನ್ನು ನಾಶ ಮಾಡಲು ನೂರು ಭಾಗವತರು, ಇನ್ನೂರು ಮೋದಿಗಳು, ಸಾವಿರ ಚಡ್ಡಿಗಳು ಬಂದರೂ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಾರಾಡುವ ಕಿಡಿಗೇಡಿಗಳಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದನ್ನು ಬಿಹಾರದ ಜನತೆ ಸಾರಿ ಹೇಳಿದ್ದಾರೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...