Friday, November 13, 2015

ಛಾಯಾ ಭಗವತಿ : ಮಕ್ಕಳ ಏಳು ಪದ್ಯಗಳು

ಹೊಸ ವರ್ಷ


ಗುಬ್ಬಿ ಗುಬ್ಬಿ ಬಾರೆಲೆ ಗುಬ್ಬಿ
ಬಂದಿತು ಹೊಸವರುಷದ ಸಿರಿ ಸುಗ್ಗಿ
ಮಬ್ಬಿನ ಜಗವನು ಬೆಳಕಿಗೆ ಜಗ್ಗಿ
ಚಿಂವ್ ಚಿಂವ್ ರಾಗವ ಹಾಡೆಲೆ ಹಿಗ್ಗಿ

ಬಳ್ಳಿಯು ಅರಸುತ ಹೂಮರ ಹಬ್ಬಿ
ಹರಡಿದೆ ಹೂಕಂಪು ಭರ ಭರ ನುಗ್ಗಿ
ಹಕ್ಕಿಯ ಉಲಿ ನಲಿವಿಂಪಿನ ಇಂಚರ
ಜುಳು ಜುಳು ನದಿ ಹೊಳೆ ಹಳ್ಳವೆ ಸುಂದರ

ಸಂಪಿಗೆ ಮರಗಳ ಚಿಗುರಿನ ಮರೆಯಲಿ
ಹಳದಿಯ ಹೂಗಳು ನಗುತಲಿವೆ
ಕಾಮನ ಬಿಲ್ಲಿನ ಬಣ್ಣದ ಸಡಗರ
ಚಿಣ್ಣರ ನಗಿಸುತ ಮೆರೆಯುತಿದೆ!
***
               


ನಮ್ಮ ರಜೆ


ಅವ್ವ ತಾತ ಹರುಷದಿಂದ ಹೊಲದಿ ಮಾವು ಬೆಳೆದರು
ಬನ್ನಿರಪ್ಪ ತಿನ್ನಿ ಮಾವು ಎಂದು ನಮ್ಮ ಕರೆದರು

ಹೊಲದ ತುಂಬ ಮಾವು ಬೇವು ತಂಪು ಕಂಪು ಕಂಡೆವು
ಅವ್ವ ಮಾಡಿದಂಥ ರೊಟ್ಟಿ ಕೆನೆಮೊಸರನು ಉಂಡೆವು

ಬಾವಿದಡದಿ ಕುಳಿತೆವೊಮ್ಮೆ ಕೈಯನಿಟ್ಟು ಗದ್ದಕೆ
ಜೊತೆಗೆ ಸುಳಿದ ಗಾಳಿ ಗಂಧ, ತೇಗ ಮುಗಿಲಿನುದ್ದಕೆ

ಬೆಳ್ಳಿ, ಹಳದಿ, ಕೆಂಪು ಎಷ್ಟು ಬಗೆಯ ಮೀನ ರಾಶಿಯು
ಪುಳಕ್ಕೆಂದು ಕಾಲ ಸೋಕಿ ಒಡನೆ ಮಿಂಚಿ ಮಾಯವು

ಅದೋ ಅಲ್ಲಿ ಸೋನಿ ಹಸುವು ತನ್ನ ಕರುವ ಕರೆದಿದೆ
ದೂರ ಬಾನಿನಂಚಿನಲ್ಲಿ ನೇಸರವು ಸರಿದಿದೆ

ಮರದ ಅಂಚಿನಲ್ಲಿ ಎಲ್ಲೋ ಹಕ್ಕಿ ಗೀತ ಹಾಡಿದೆ
ರಜೆಯು ಮುಗಿದೇ ಹೋಯಿತಲ್ಲ ಎಂಬ ಚಿಂತೆ ಕಾಡಿದೆ

ಅವ್ವ ತಾತ ಸಂಭ್ರಮದಲಿ ಒಂಟಿತನವ ಮರೆತರು
ಇದುವೆ ನಿಜದ ಹಬ್ಬವೆಂದು ಜೊತೆಗೆ ಆಡಿ ನಲಿದರು
***


 ಅಜ್ಜ ಮತ್ತು ಪಿಜ್ಜಾ

ಎಂದಿನಂತೆ ರಜೆಗೆ ಕರೆಯಲೆಂದು ಅಜ್ಜ ಬಂದರು
ವಜ್ಜಿ ಚೀಲದಲ್ಲಿ ರಾಶಿ ತಿಂಡಿ ತಿನಿಸು ತಂದರು

ಅವ್ವ ಮಾಡಿಕೊಟ್ಟ ಉಂಡಿ ಚಕ್ಕುಲಿಗಳು ನಕ್ಕವು
ಕೇಳಿದಾಗಲೆರಡು ಮೂರು ನಮಗೆ ಅವು ಸಿಕ್ಕವು

ಕವಡೆ ಚೆಸ್ಸು ಆಟ ಮುಗಿಸಿ ಪೇಟೆಗೆಂದು ಹೋದೆವು
ಜೋಕರಣ್ಣ ಜೊತೆಗೆ ಪಿಜ್ಜಾ ಚಿತ್ರವನ್ನು ಕಂಡೆವು

ಕಣ್ಣ ತುಂಬಾ ಆಸೆ ಬಾಯಿ ತುಂಬ ನೀರು ತುಂಬಿತು
ಸಜ್ಜುಗೊಂಡ ಹೆಜ್ಜೆ ಅಜ್ಜನೊಡನೆ ಅತ್ತ ನಡೆಯಿತು

ಗೋಲರೂಪ ಪನ್ನೀರಂಗಿ ತೊಟ್ಟ ಪಿಜ್ಜಾ ಬಂದಿತು
ಕೈಯ್ಯಿ ಬಾಯಿ ಏಕವಾಗಿ ನಿಮಿಷದಲ್ಲಿ ಕರಗಿತು

ಅಯ್ಯೋ ಪುಟ್ಟ ತಿನ್ನಬೇಕೇ ಕಾಸು ಕೊಟ್ಟು ರಬ್ಬರು
ಎಂದ ಅಜ್ಜ ಬೊಚ್ಚು ಬಾಯನಗಲಿಸುತ್ತ ನಕ್ಕರು

ಅವ್ವ ಮಾಡೋ ಅಕ್ಕಿ ರೊಟ್ಟಿ ಕಾಯಿಚಟ್ನಿ ಅದ್ಭುತ
ಮಮತೆಯಿಂದ ಮಾಡಿನೀಡೋ ಮನೆಯೂಟವೇ ಬಲುಹಿತ!
***


ಹೊಂದಿಸಿ ಬರೆಯಿರಿ


ಹೊಂದಿಸಿ ಬರೆಯಿರಿ ಎಂದರು ಮಿಸ್ಸು
ಶಾಲೆಯಲೊಂದು ದಿನ
ಎಡಕೂ ಬಲಕೂ ಪದಗಳ ಪಟ್ಟಿ
ಯೋಚಿಸತೊಡಗಿದೆ ನಾ!

ಒಪ್ಪುವ ಉತ್ತರ ಮನದಲಿ ಹೊಳೆದು
ಮೇಲೂ ಕೆಳಗೂ ಗೆರೆಗಳ ಎಳೆದು
ಆಯಾ ಪದಗಳ ಸೇರಿಸಿ ಬೆಸೆದು
ಬರೆವುದೇ ಆನಂದ!

ಏರುಪೇರುಗಳು ಇಲ್ಲಿಯೂ ಉಂಟು
ಹೊಂದಿಕೆ ಬದುಕಿಗೆ ಬೇಕಿಹ ಅಂಟು
ನಗುವಳುವೆರಡರ ಗಂಟನು ಹೊತ್ತು
ನಡೆವುದೇ ಅನುಬಂಧ!

ಜೀವನದಲ್ಲಿಯೂ ಹೀಗೆಯೇ ಅಲ್ಲವೇ?
ನಂಬಿಕೆ ಪ್ರೀತಿಯ ಹೊಂದಿಸಬಲ್ಲೆವೆ?
ಎಡಬಲವೆರಡ ಸಾನುಬಂಧದಲಿ
ಇರುವುದೊಂದು ಚೆಂದ!
 ***

ನನ್ನ ಅಮ್ಮ


ನನ್ನ ಅಮ್ಮ ಈ ಬಾಳ ಜೀವ
ತಂಪಿರುಳ ಜೀವನಾಡಿ
ಹಗಲು ಇರುಳು ಒಂದಾಗಿ ಪೊರೆದು
ಹರಿಸಿಹಳು ಒಲವ ಕೋಡಿ!

ಬಾಚಿ ತಬ್ಬಿ ಬಂಗಾರ ನೀನು
ಎಂದೆನುತ ಪ್ರೀತಿ ಮಾಡಿ
ಅಮ್ಮಾ ಎನಲು ತಾನೆಲ್ಲೆ ಇರಲಿ
ಕರೆದಾಗ ಬರುವಳೋಡಿ!

ಬೆಲ್ಲದುಂಡೆ ಸವಿ ಸೊಲ್ಲ ನುಡಿದು
ನೂರಾರು ಕತೆಯ ಹೇಳಿ
ಮಮತೆಯಿಂದ ಕೈ ತುತ್ತನುಣಿಸಿ
ಮಲಗಿಸುವಳೆಮ್ಮ ಹಾಡಿ!

ನಗುವು-ನಲಿವು ಹುಸಿಮುನಿಸಿನಾಟ
ನಮ್ಮೆಲ್ಲ ಹುಚ್ಚು ಸಹಿಸಿ
ಅಳುವುಕ್ಕಿದಾಗ ತೊಡೆದೆಲ್ಲ ನೋವು
ಅಪ್ಪುವಳು ಮೋಡಿ ಮಾಡಿ!

ಅಮ್ಮ, ನಿನ್ನ ಹ್ರುದಯದಲಿ
ಒಂದು ಹಿಡಿ ಪ್ರೀತಿ ದಕ್ಕುತಿರಲಿ
ನಾವು ಮರೆತರೂ ನಿನ್ನ ಒಲವ
ಸಿರಿ ಒರತೆ ಬತ್ತದಿರಲಿ!
***


ಮಗ್ಗಿಯ ಗಮ್ಮತ್ತು . . .

ಒಂದು ಎರಡು ಬಾಳೆಲೆಯ ಹರಡು
ಆ ಹಳೆಯ ಮಗ್ಗಿ ಸುಲಭ
ಕೂಡು ಕಳೆದು ಭಾಗಿಸುವ ಬವಣೆ
ಕಡು ಕಷ್ಟ ಕಷ್ಟ ಅಬ್ಬ!

ಎರಡೊಂದ್ಲ ಎರಡು ಎಂದೆಲ್ಲ
ಕಲಿತು ಒಪ್ಪಿಸುವ ಕಷ್ಟವೆಷ್ಟು?
ನಾಕೊಂದ್ಲ ನಾಕು ಕಲಿತಾದ ಮೇಲೆ
ಖುಷಿ ಹೇಳಿದಾಗ ಸಾಕು!

ತಿರುಗು ಮುರುಗು ಉರು ಹೊಡೆದರೂನೂ
ಮರೆಯುವವು ನೂರು ಲೆಕ್ಕ
ಯಾರು ಕಂಡು ಹಿಡಿದವರೋ ಇದನು
ಅರಿಯದೆಯೆ ನಮ್ಮ ದುಃಖ!

ಲಬ್ಧವಾಗಿ ಗುಣ ಭಾಗ ಕಳೆದು
ಕೂಡಿಸುವ ಸಂಖ್ಯೆಯಾಟ
ಸಂಖ್ಯೆಯ ನಂಟೊಳು ಬದುಕಿನ
ಲೆಕ್ಕವ ಅರಿವುದೊಂದು ಪಾಠ!

ಸೊನ್ನೆ ಬರಿದೆ ಆಕಾರವಲ್ಲ
ಪೂರ್ಣತೆಯ ಫಲಿತ ವ್ರುತ್ತ!
ಕಲಿಯಬೇಕು ಕಳಿತಂತೆ ಬಾಳೆ
ಅಂಕೆಗಳ ನಡುವಿರುತ್ತ!
***

ಅಮ್ಮನ ಟಿಕಳಿ

ಬಣ್ಣದ ಟಿಕಳಿಯೇ ಅಮ್ಮನ ಬೊಟ್ಟು
ಬಗೆ ಬಗೆ ಆಕಾರ
ಗೋಲ ತಿಲಕ ಗೆರೆ ಚೌಕಗಳೆಂಬ
ವಿಧ ವಿಧ ವಿನ್ಯಾಸ

ಒಂದರಂತೆ ಇನ್ನೊಂದು ಇಲ್ಲ
ದಿನಕ್ಕೊಂದು ಬೊಟ್ಟು
ಮುಗಿದ ಮೇಲೆ ಮುಖದಲಂಕಾರ
ತಿದ್ದುವಳು ಬೆಳಕನಿಟ್ಟು

ಎರಡು ಹುಬ್ಬುಗಳ ನಡುವೆ ಮೂಡುವುದು
ಪುಟ್ಟದೊಂದು ಸೂರ್ಯ
ಟಿಕಳಿಯ ಮೆರುಗಲಿ ಕಣ್ಣು ಬಿಟ್ಟು
ನೋಡುವಳು ತೋರಿ ಧೈರ್ಯ!

ಅಜ್ಜಿಯ ಹಣೆಯಲಿ ಕಾಸಗಲದ್ದು
ಅಜ್ಜನ ಹಣೆಯಲಿ ಹಣೆಯುದ್ದದ್ದು
ಅಕ್ಕನ ಹಣೆಯಲಿ ಉದ್ದನೆ ತಿಲಕ
ನೋಡುವುದೇ ಒಂದು ಪುಳಕ!
***


ಛಾಯಾ ಭಗವತಿ  (೧೯೭೭) ಹಗರಿಬೊಮ್ಮನಹಳ್ಳಿಯವರು. ಸ್ನಾತಕೋತ್ತರ ಇಂಗ್ಲಿಷ್ ಪದವಿ ಪಡೆದಿರುವ ಛಾಯಾ
ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ನಂತರ ಟೆಕ್ನಿಕಲ್ ರೈಟರ್ ಆಗಿ ಕೆಲಸ ನಿರ್ವಹಿಸಿ, ೨ ವರ್ಷ ಆಕಾಶವಾಣಿಯ ಬೆಂಗಳೂರು ಕೇಂದ್ರದ ಕಾಮನಬಿಲ್ಲು ವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಸಧ್ಯಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಯಾಸ್‌ನಲ್ಲಿ ಕಿರಿಯ ಸಂಶೋಧನಾ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಸ, ಬರವಣಿಗೆ, ಸಂಗೀತ, ಶಿಕ್ಷಣ - ಆಸಕ್ತಿಯ ವಿಚಾರಗಳು. ಮೊದಲ ಕವನ ಸಂಕಲನ ’ಪುಟಾಣಿ ಕೆಂಪು ಶೂ’ ಬಳ್ಳಾರಿಯ ಲೋಹಿಯಾ ಪ್ರಕಾಶನದಿಂದ ಪ್ರಕಟವಾಗಿದೆ.

ವಿಳಾಸ: ಗುರುಬಸವರಾಜ ದೇವರಮನಿ, ನಂ. ೭, ಆರನೆಯ ಅಡ್ಡರಸ್ತೆ, ಪೈಪ್ ಲೈನ್, ವಿಜಯನಗರ, ಜೆಪಿ ಉದ್ಯಾನವನದ ಹತ್ತಿರ, ಜೈನ ಮಂದಿರದ ಎದುರು, ಬೆಂಗಳೂರು - ೫೬೦ ೦೨೩.

chayaguru@gmail.com  

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...