Thursday, November 19, 2015

ಆರತಿ ಎಚ್. ಎನ್. ಎರಡು ಕವಿತೆಗಳು

೧ 

ಲಿಫ್ಟ್


ನಮ್ಮದಲ್ಲದ ಈ ಜಾಗಕ್ಕೆ
ಧಡಕ್ಕನೇ ತೆರೆಯುವ ಬಾಗಿಲು
ಒಳ ಹೊಕ್ಕ ಕೂಡಲೇ ಹರಡುವ
ಕೃತಕ ಕಸಿವಿಸಿಯ ಮೌನ,
ಯಾರದೋ ಬೇಡದ ಸಾವಿಗೆ
ಗೌರವ ಸೂಚಿಸುವ ಶೋಕಸಭೆ
ಈಗ ಲಿಫ್ಟಿನೊಳಗೆ
ಉಸಿರ ಹಿಡಿದು ನಡುವೆ ಸುಳಿವಾತ್ಮ
ಸಂಭಾವಿತನೂ ಅಲ್ಲ, ಅಪಾಪೋಲಿಯೂ ಅಲ್ಲ!

ಇಲ್ಲೇಕೆ ಇನ್ನೂ ಇದೆ,,
ಯಾರೋ ಬಂದು ಹೋದ ಮೈಗಂಧ?
ಉದುರಿ ಚಪ್ಪಟೆಯಾದ ಹೂ ಎಸಳು,
ಬೆಳಕಂತೆ ಹರಡಿದ ಹುಸಿಮುನಿಸು,
ಹಿಡಿದು ಎಳೆದಂತಿದೆ ಯಾರೋ ಕೈ,
ತೊಟ್ಟಿಕ್ಕಿರುವಂತಾ ನೋವ ಕಣ್ಣೀರು,
ಪಕ್ಕದಲ್ಲೇ ಆವರಿಸಿದ ಮುಗುಳುನಗು,
ಹೊಸ ಪ್ರೇಮಿಯ ತುಟಿ ತುಳುಕುವ
ಗಾಢ ಅಭೀಪ್ಸೆ...

ಹತ್ತಬೇಕು, ಮೆಟ್ಟಿಲು ಮೆಟ್ಟಿಲು,
ಒಂದೊಂದೇ. ನಿಂತು, ಕೂತು
ಎಡವಿ, ಬಾಯಾರಿ, ಕುರುಳ ನೇವರಿಸಿ
ಗಾಳಿಯುಸಿರ ಸೇರಬೇಕು...ಅಂದುಕೊಂಡಿದ್ದೆ.
ಹೋಗಬಹುದೇ ಹೀಗೆ?
ಧಿಗ್ಗನೇ ಹುಚ್ಚೆದ್ದವರ ಹಾಗೆ
ಎಲ್ಲೆಂದರಲ್ಲಿಗೆ? ತಟ್ಟಬಹುದೇ ಹೀಗೆ
ಬೆರಳಸಂಜ್ಞೆಯಲ್ಲಿ ಸುಖದ ಬಾಗಿಲು?

ಕಾಯುವುದು ಸುಳ್ಳು, ನಿರೀಕ್ಷಿಸುತ್ತಾ
ನಾವು ಬರುವುದನ್ನು, ಯಾರೂ
ಕಣ್ಣದೀಪ ಹಚ್ಚಿ, ಸುಖಾಸುಮ್ಮನೆ ಬಾಗಿಲಲ್ಲಿ...
ಮೇಲೆ ಹೋದವರು ಕೆಳಗೆ ಬರಲೇಬೇಕು
ನಿಯಮ ಮುರಿಯುವುದು ನಿಮಗೆ ಸರಿಯಿಲ್ಲ.
ಸರಸರನೆ ಸರಸವಾಡಿದಷ್ಟೇ ಸುಲಭ
ಸರ್ರನೆ ಹತ್ತುವುದು, ಜರ್ರನೆ ಇಳಿಯುವುದು
ಆಟವೆಂದವರಿಗೆ, ಏನು ತಾನೆ ಹೇಳುವುದು?
ಕೊಟ್ಟ ಕುದುರೆಯನೇರದವನು
ವೀರನೂ ಅಲ್ಲ, ಧೀರನೂ ಅಲ್ಲ
ಕಡು ಪ್ರೇಮಿ ಇವನು, ಮೋಹಿತೆ ನಾನು!

ಇದು ಲಿಫ್ಟ್ ಯಾತ್ರೆ, ಸುತ್ತ ಕನ್ನಡಿ...
ಇರುವ ಒಂದು ಮುಖಕ್ಕೆ ಹತ್ತು ಪ್ರತಿಬಿಂಬ.
ನೀನೋ ಬಹುರೂಪಿ, ಮುಖವಾಡ ತೊಟ್ಟವಳು ನಾನು.
ಬರುವವರು ಬರಲಿ,
ಲೆಕ್ಕ ಇಡುವುದುಂಟೇ ಹೋದವರ?
ಖಾತ್ರಿಯಿಲ್ಲ, ಜೊತೆಯಲ್ಲಿದ್ದವರು ಇರುತ್ತಾರೆಂದು
ಒಟ್ಟಿಗೇ ಹೋದವರು, ಬರಬೇಕಿಲ್ಲ ಜೊತೆಯಲ್ಲೇ,
ನಿರ್ಗಮಿಸಬಹುದು ಹಾಗೇ ದಾರಿ ಮಧ್ಯೆ...

ಅಂತಸ್ತುಗಳಿವೆ ಇಲ್ಲಿ ಸಂಬಂಧಕ್ಕೆ
ಹಲವು ನೆಲೆಗಳಿವೆ, ದಾಟಲು ಗೆರೆಗಳಿವೆ.
ಖಾಲಿಯಾಗಿದೆ ಜಾಗ ಅಂದುಕೊಳ್ಳುವುದರಲ್ಲಿ
ತೆರೆದೇ ತೆರೆಯುತ್ತದೆ ಬೇರೊಂದು ಬಾಗಿಲು.
ಮತ್ತೆ ಸಮುದ್ರ ಮಂಥನ ಮನ,
ಬರುವುದು ಅಮೃತವೋ ವಿಷವೋ?
ಆಗಬೇಕೇನೋ ಮತ್ತೆ ನಾನು ವಿಷಕನ್ನಿಕೆ...
***
೨ 
ಹೊರಡಬೇಕಿದೆ ಎಲ್ಲ ಬಿಟ್ಟು


ಹೊರಡಬೇಕಿದೆ ಎಲ್ಲ ಬಿಟ್ಟು ಜರೂರಾಗಿ,
ಭೂಪಟ ತೆರೆದರೆ, ಬರೀ ಗಡಿರೇಖೆ
ಸರಹದ್ದು, ಮುಳ್ಳುಬೇಲಿಗಳೇ.
ಹೊರಟ ಜಾಗಕ್ಕೂ ಇಲ್ಲಿಗೂ ಹೆಚ್ಚೇನೂ
ವ್ಯತ್ಯಾಸವಿಲ್ಲ... ನಿಯಮ ಇರುವುದು
ಕೇವಲ ಮುರಿಯುವುದಕ್ಕಲ್ಲ
ಪಾಲಿಸಲು ಪರಮಾತ್ಮನಾಗಬೇಕಿಲ್ಲ,
ಪತಿವ್ರತೆಯಾದರೆ ಸಾಕು!

ಹೊತ್ತು ತಂದ ಪೆಟ್ಟಿಗೆಯಲ್ಲಿರುವುದೇನೂ
ಕಡಿಮೆಯಲ್ಲ, ಕಠೋರಭಾರ.
ಹಸಿರುಬಳೆ ತುಂಡಾಗದೇ
ಚೂರುಚೂರಾಗಿ ಒಡೆದ ಸದ್ದು,
ಗದರುವ ದನಿಗೆ ಸತ್ತಮಾತು,
ಒದ್ದೆ ನಗುವ ಸದೆ ಬಡಿದ ಸಂತಾಪಸಂಭ್ರಮ,
ಹಾಕದ ಬರೆಗೆ ತಂನಿಂತಾನೇ ಸುಟ್ಟಕನಸು,
ಅವರಿಚ್ಛೆಯ ತಾಳಕ್ಕೆ ಕುಣಿದ
ತಕಥೈ ದಿಧಿತ್ತಾಂ - ಅಳುವ ಗೆಜ್ಜೆ...

ಕಟ್ಟಿಕೊಂಡಷ್ಟು ಸುಲಭವಲ್ಲ
ಬಿಟ್ಟುಬಿಡುವುದು.
ನಾರಿ ಕರೆದಾಕ್ಷಣ ಬಂದು
ಒದಗುವುದಕ್ಕೆ ನರಹರಿಯು
ನಾಚಿಕೆಯ ಮೂರ್ತಿ.
ಕಣ್ಣ ಕಾಡಿಗೆ ದೃಷ್ಟಿಬೊಟ್ಟು ಇಟ್ಟು
ಬಗ್ಗಿದರಾಯ್ತು, ಹರಸಿ ಹಾರೈಸುತ್ತಾರೆ,
ಮುತೈದೆತನ ಸಾವಿರ ವರುಷಕೂ ಸಲೀಸು...

ಹೊರಡಬೇಕಿದೆ ಎಲ್ಲ ಬಿಟ್ಟು,
ಕರೆಯುತ್ತಾರೆಂದು ಕೈ ಹಿಡಿಯಲಾಗದು.
ಕಣ್ಣನೋಟ ಹೆಣಭಾರವಾದರೆ,
ನಮ್ಮ ದೇಹವ ನಾವೇ ಹೊರಬೇಕು
ಹೊರೆಯಾಗದಂತೆ.
ಸುಮ್ಮನೇ ಹುಚ್ಚು ಬಳ್ಳಿ ಬಳುಕುವುದು
ಗಾಳಿಯಾಟದಂತೆ
ಹೂ ಬಿಟ್ಟರೆ ತಾನೆ,
ಗಂಧ-ಘಮಲಿನ ಚಿಂತೆ?!

ತಿಟ್ಟು ಹತ್ತಿದ ಮೇಲೆ, ತಿರುಗಿ ನೋಡಬಾರದು
ಹೆಣ್ಣು, ಹಳೆಯ ನೆನಪುಗಳ
ಹಸಿರು ಸೀರೆಯುಟ್ಟು.
ಬಿಟ್ಟು ಹೊರಡುವುದೂ
ಕೊಟ್ಟು ಸೋಲುವ ಹಾಗೆ,
ಹೋದವರಾರೂ ತಿರುಗಿ ಬರುವುದಿಲ್ಲ.
ಹೊರಡುತ್ತೇನೆ ಈ ಕ್ಷಣ, ಎಲ್ಲ ಬಿಟ್ಟು
ಎನ್ನುವವರು
ಯಾರೂ, ಯಾವತ್ತೂ, ಯಾರಿಗೂ
ಹೇಳಿ ಹೋಗುವುದಿಲ್ಲ!
***

ಆರತಿ ಎಚ್. ಎನ್. (೧೯೬೬) ಜರ್ನಲಿಸಂ ಕಲಿತವರು. ಡೆಕ್ಕನ್ ಹೆರಾಲ್ಡ್ ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸ ಮಾಡಿ ೨೨ ವರ್ಷಗಳಿಂದ ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ದೂರದರ್ಶನದ ಹಿರಿಯ ಕಾರ್ಯಕ್ರಮ ನಿರೂಪಕಿ. ಜನಪ್ರಿಯ ಕಾರ್ಯಕ್ರಮ ‘ಥಟ್ ಅಂತ ಹೇಳಿ’ಯ ನಿರ್ದೇಶಕಿ. ಇದುವರೆಗೆ ೨ ಕವನ ಸಂಕಲನ, ೨ ಇಂಗ್ಲಿಷ್‌ನಿಂದ ಅನುವಾದ ಹಾಗೂ ಒಂದು ನಾಟಕ ಪ್ರಕಟಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಲಿಂಗಸೂಕ್ಷ್ಮತೆಯ ಪತ್ರಿಕೋದ್ಯಮಕ್ಕೆ ನೀಡುವ ಲಾಡ್ಲಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿ ಸಮ್ಮಾನಗಳನ್ನು ಪಡೆದಿದ್ದಾರೆ.

ವಿಳಾಸ: ನಂ. ೭, ಸೌಂದರ್ಯ ಲಿಂಕ್ಸ್, ಲಿಂಕ್ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - ೨೦.


arathihn@gmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...