Thursday, November 26, 2015

ಸಂವಿಧಾನ ರಚನೆಯ ಹಿಂದಿದೆ ಬಾಬಾಸಾಹೇಬರ ಹೋರಾಟ...!-ನಾಗೇಂದ್ರ ಪಿ. ವೌರ್ಯ
 
 
 

ನವೆಂಬರ್ 26, 1949-ಸಂವಿಧಾನ ಸಮರ್ಪಣಾ ದಿನ
 
ಎರಡನೆ ಜಾಗತಿಕ ಮಹಾಯುದ್ಧದ ನಂತರ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ಕೊಡುವ ತೀರ್ಮಾನ ಕೈಗೊಂಡು 1945ರಲ್ಲಿ ಸಂವಿಧಾನ ರಚನಾ ಸಮಿತಿಗೆ ಚುನಾವಣೆ ನಡೆಸಲು ನಿರ್ಧರಿಸಿದರು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಬಾರದೆಂದು ಕಾಂಗ್ರೆಸಿಗರು ತೀರ್ಮಾನಿಸಿ ಅನೇಕ ರೀತಿಯ ಷಡ್ಯಂತ್ರಗಳನ್ನು ರೂಪಿಸಿದರು. ಸಂವಿಧಾನ ರಚನಾ ಸಭೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರ ವಿರುದ್ಧ ಕಜರ್ ಹೋಳ್ಕರ್ ಎಂಬ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸುತ್ತಾರೆ. ನಂತರ ಪೂರ್ವ ಬಂಗಾಳದ ಜೈಸೂರ್-ಕುಲ್ನಾ ಕ್ಷೇತ್ರದ ಮುಸ್ಲಿಂ ಲೀಗ್‌ನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಯ ರಾಜೀನಾಮೆಯಿಂದಾಗಿ ಅಂಬೇಡ್ಕರ್ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ.


ಇದರಿಂದ ಹತಾಶರಾದ ಕಾಂಗ್ರೆಸಿಗರು ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಬಾಬಾಸಾಹೇಬರು ಪ್ರತಿನಿಧಿಸಿದ್ದ ಜೈಸೂರ್-ಕುಲ್ನಾ ಕ್ಷೇತ್ರವಿರುವ ಪೂರ್ವ ಬಂಗಾಳ ಪ್ರಾಂತವನ್ನು ಪಾಕಿಸ್ತಾನಕ್ಕೆ ಒಲ್ಲದ ಮನಸ್ಸಿನಿಂದ ಬಿಟ್ಟುಕೊಡುತ್ತಾರೆ. ಅಪ್ಪಟ ಭಾರತ ರಾಷ್ಟ್ರೀಯವಾದಿಯಾದ ಅಂಬೇಡ್ಕರ್ ಅವರು ಪಾಕಿಸ್ತಾನಕ್ಕೆ ಸೇರಿದ ಜೈಸೂರ್-ಕುಲ್ನಾ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ನಂತರ ಲಂಡನ್‌ಗೆ ತೆರಳಿ ಬ್ರಿಟನ್ ಪ್ರಧಾನಿ ರ್ಯಾಮ್ಸೆ ಮ್ಯಾಕ್ ಡೊನಾಲ್ಡ್ ಅವರನ್ನು ಭೇಟಿ ಮಾಡಿ ಕಾಂಗ್ರೆಸಿಗರ ಷಡ್ಯಂತ್ರವನ್ನು ತಿಳಿಸಿ, 1935ರ ಕಾಯ್ದೆಯಲ್ಲಿ ಜಾರಿಯಾಗಿರುವ ಅಸ್ಪಶ್ಯರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಸಂರಕ್ಷಿಸಬೇಕಾದರೆ ನಾನು ಸಂವಿಧಾನ ರಚನಾ ಸಭೆಗೆ ಆಯ್ಕೆ ಆಗಲೇಬೇಕು, ಇದಕ್ಕಾಗಿ ನೀವು ನನಗೆ ಸಹಾಯ ಮಾಡಲೇಬೇಕೆಂದು ಒತ್ತಾಯಿಸುತ್ತಾರೆ. ಅಸ್ಪಶ್ಯರ ಸಮಸ್ಯೆ, ಬಾಬಾಸಾಹೇಬರ ವಿದ್ವತ್ತು ಹಾಗೂ ಹೋರಾಟವನ್ನು ಅರಿತಿದ್ದ ಬ್ರಿಟನ್ ಪ್ರಧಾನಿಯವರು ಗಾಂಧಿ ಮತ್ತು ಕಾಂಗ್ರೆಸಿಗರ ಮೇಲೆ ತೀವ್ರ ಒತ್ತಡ ಹೇರಿ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಭೆಗೆ ಆಯ್ಕೆ ಮಾಡಲೇಬೇಕೆಂದು ಸೂಚಿಸುತ್ತಾರೆ. ಗಾಂಧಿ ಮತ್ತು ಕಾಂಗ್ರೆಸಿಗರು ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಪೂನಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿಯ ರಾಜೀನಾಮೆ ಪಡೆದುದರಿಂದ ಆ ಕ್ಷೇತ್ರದಿಂದ ಅಂಬೇಡ್ಕರ್ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಮೊದಲನೆ ಸಂವಿಧಾನ ರಚನಾ ಸಮಿತಿ ಸಭೆ: 1946ರ ಡಿಸೆಂಬರ್ 9ರಂದು ದಿಲ್ಲಿಯ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಡಾ. ಸಚ್ಚಿದಾನಂದ ಸಿನ್ಹಾ ಅವರ ಹಂಗಾಮಿ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯ ಪ್ರಥಮ ಸಭೆ ನಡೆಯಿತು. ಈ ಸಭೆಯಲ್ಲಿ 211 ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ ಮುಸ್ಲಿಂ ಲೀಗ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನಿಟ್ಟು ಈ ಸಭೆಯನ್ನು ಬಹಿಷ್ಕರಿಸಿತು.

ಎರಡನೆ ಸಭೆ: ಸಂವಿಧಾನ ರಚನಾ ಸಮಿತಿಯ 2ನೆ ಸಭೆಯು ಡಿಸೆಂಬರ್ 11, 1946ರಂದು ನಡೆಯಿತು. ಈ ಸಭೆಯಲ್ಲಿ ಡಾ. ಬಾಬು ರಾಜೇಂದ್ರಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ, ಡಾ. ಎಚ್.ಸಿ.ಮುಖರ್ಜಿ ಅವರು ಉಪಾಧ್ಯಕ್ಷರಾಗಿ, ಬಿ.ಎನ್.ರಾಯ್ ಅವರು ಸಲಹೆಗಾರರಾಗಿ ಹಾಗೂ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು.


ಸಂವಿಧಾನ ಕರಡು ರಚನಾ ಸಮಿತಿ: ಆಗಸ್ಟ್ 29, 1947ರಂದು ಸಂವಿಧಾನದ ಕರಡನ್ನು ರಚಿಸಲು ಸಮಿತಿಯನ್ನು ರಚಿಸಲಾಯಿತು. ಜಗತ್ತಿನ ಅಗ್ರಗಣ್ಯ ವಿದ್ವಾಂಸರಲ್ಲೊಬ್ಬರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ರಚನಾ ಸಮಿತಿಯ ಸದಸ್ಯರುಗಳಾಗಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್, ಕೆ.ಎಂ.ಮುನ್ಷಿ, ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಸೈಯದ್ ಮುಹಮ್ಮದ್ ಸಾದುಲ್ಲಾ, ಎನ್.ಮಾಧವರಾವ್-ಇವರ ಅನಾರೋಗ್ಯದ ನಿಮಿತ್ತ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಿ.ಎಲ್.ಲಿಟ್ಟರ್, ಟಿ.ವಿ.ಕೃಷ್ಣಮಾಚಾರಿ-ಇವರು 1948ರಲ್ಲಿ ನಿಧನರಾದುದರಿಂದ ತೆರವಾದ ಸ್ಥಾನಕ್ಕೆ ಡಿ.ಪಿ.ಕೈತಾನ್ ಅವರನ್ನು ನೇಮಕ ಮಾಡಲಾಯಿತು.

ಸಂವಿಧಾನ ರಚನಾ ಸಮಿತಿಯ ಒಟ್ಟು ಸದಸ್ಯರ ಸಂಖ್ಯೆ 299. ಫ್ರಾಂಕ್ ಅಂಥೋನಿ (ಆಂಗ್ಲೋ ಇಂಡಿಯನ್), ಸೋಮನಾಥ ಲಹರಿ (ಕಮ್ಯುನಿಷ್ಟ್), ಡಾ.ಬಿ.ಆರ್.ಅಂಬೇಡ್ಕರ್ (ನಿಮ್ನ ವರ್ಗಗಳು), ಹರಿ ಬಹದ್ದೂರ್ (ಗೂರ್ಖ), ಸರ್ದಾರ್ ಬಲದೇವ್ ಸಿಂಗ್, ಸರ್ದಾರ್ ಹುಕುಂ ಸಿಂಗ್ ಮತ್ತು ರಾಜಕುಮಾರಿ ಅಮೃತ ಕೌರ್ (ಸಿಖ್), ಎಚ್.ಸಿ.ಮುಖರ್ಜಿ (ಭಾರತೀಯ ಕ್ರೈಸ್ತ), ಇಸ್ಮಾಯೀಲ್ ಖಾನ್ ಮತ್ತು ಮೌಲಾನಾ ಹಝ್ರತ್ ಮುಹಾನಿ (ಇಸ್ಲಾಂ) ವಿವಿಧ ಸಮುದಾಯಗಳಿಂದ ಪ್ರತಿನಿಧಿಸಿದ್ದರು. ಜೊತೆಗೆ ಕೊಡಗು ಪ್ರಾಂತದಿಂದ ಕೆ.ಎಂ.ಪೊನ್ನಪ್ಪ, ಬಾಂಬೆ ಪ್ರಾಂತದಿಂದ ಎಸ್.ನಿಜಲಿಂಗಪ್ಪ ಮತ್ತು ದಿವಾಕರ್, ಮೈಸೂರು ಪ್ರಾಂತದಿಂದ ಕೆ. ಚಂಗಲರಾಯ ರೆಡ್ಡಿ, ಟಿ.ಸಿದ್ದಲಿಂಗಯ್ಯ, ಎಚ್.ಎಲ್.ಗುರುದೇವರೆಡ್ಡಿ, ಎಸ್.ವಿ.ಕೃಷ್ಣಮೂರ್ತಿರಾವ್, ಕೆಂಗಲ್ ಹನುಮಂತಯ್ಯ, ಎಚ್.ಸಿದ್ದವೀರಪ್ಪ ಮುಂತಾದವರು ಆಯ್ಕೆಯಾಗಿದ್ದರು. ಮಹಿಳಾ ಪ್ರತಿನಿಧಿಗಳಾಗಿ ಸರೋಜಿನಿ ನಾಯ್ಡು, ಹಂಸ ಮೆಹತಾ, ಅಮ್ಮುಸ್ವಾಮಿನಾಥ, ವಿಜಯಲಕ್ಷ್ಮೀ ಪಂಡಿತ್, ಪೂರ್ಣಿಮಾ ಬ್ಯಾನರ್ಜಿ, ಪೂರ್ಣಿಮಾ ದಾಕ್ಷಾಯಿಣಿ, ಮಾಲತಿ ಚೌದರಿ ಅವರು ಪ್ರತಿನಿಧಿಸಿದ್ದರು.

ಕರಡು ರಚನಾ ಸಮಿತಿಯ ಕೆಲವು ಸದಸ್ಯರ ಅನುಪಸ್ಥಿತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರೇ ರಾಷ್ಟ್ರದ ಏಕತೆ ಹಾಗೂ ಪ್ರಗತಿಗಾಗಿ ತಮ್ಮ ವಿದ್ವತ್ತನ್ನು ಧಾರೆ ಎರೆದು ಹಗಲಿರುಳು ಶ್ರಮಿಸಿ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿದರು. ತಮ್ಮ ದೈಹಿಕ ಆರೋಗ್ಯ ಸ್ಥಿತಿಯು ಕ್ಷೀಣಿಸುತ್ತಿದ್ದರೂ ಸಹ ಲೆಕ್ಕಿಸದೇ ದೇಶದ ಶೋಷಿತ ಬಹುಜನರಾದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿಮೋಚನೆ ಮತ್ತು ದೇಶದ ಐಕ್ಯತೆಗಾಗಿ ಪ್ರಪಂಚದ ಸುಮಾರು 60 ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ದೇಶದ ಜನತೆ ಮತ್ತು ಅಖಂಡತೆಗೆ ಪೂರಕವಾದ ಅಂಶಗಳನ್ನು ಎರವಲು ಪಡೆದು ಸಂವಿಧಾನವನ್ನು ರಚಿಸಿದರು. ಬ್ರಿಟನ್ ಸಂವಿಧಾನದಿಂದ ಸಂಸದೀಯ ಪದ್ಧತಿ, ಏಕಪೌರತ್ವ, ಕ್ಯಾಬಿನೆಟ್ ಪದ್ಧತಿ, ರಿಟ್‌ಗಳು, ದ್ವಿಸದನ ಪದ್ಧತಿ; ಅಮೆರಿಕ ಸಂವಿಧಾನದಿಂದ ಮೂಲಭೂತ ಹಕ್ಕುಗಳು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ನ್ಯಾಯಾಂಗ ಪರಾಮರ್ಶೆ, ಮಹಾಭಿಯೋಗ; ಆಸ್ಟ್ರೇಲಿಯಾ ಸಂವಿಧಾನದಿಂದ ಸಮವರ್ತಿ ಪಟ್ಟಿ, ಜಂಟಿ ಸದನ; ಜರ್ಮನಿ ಸಂವಿಧಾನದಿಂದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ವಜಾ; ರಷ್ಯಾ ಸಂವಿಧಾನದಿಂದ ಮೂಲಭೂತ ಕರ್ತವ್ಯಗಳು; ದಕ್ಷಿಣಾ ಆಫ್ರಿಕಾ ಸಂವಿಧಾನದಿಂದ ಸಂವಿಧಾನ ತಿದ್ದುಪಡಿ; ಕೆನಡಾ ಸಂವಿಧಾನದಿಂದ ಕೇಂದ್ರದ ಶೇಷಾಧಿಕಾರ, ಕೇಂದ್ರದಿಂದ ರಾಜ್ಯಪಾಲರ ನೇಮಕ; ಐರಿಷ್ ಸಂವಿಧಾನದಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ.

ಅಂಬೇಡ್ಕರ್ ಅವರು ತಾವು ಗಳಿಸಿದ ವಿದ್ವತ್ತಿನ ಪ್ರತಿರೂಪವಾದ ಸಂವಿಧಾನದ ಕರಡು ಪ್ರತಿಯನ್ನು ನವೆಂಬರ್ 4, 1948ರಂದು ಸಂವಿಧಾನ ರಚನಾ ಸಮಿತಿಯ ಮುಂದೆ ಮಂಡಿಸಿದರು. ಇದರ ಬಗ್ಗೆ ನವೆಂಬರ್ 9ರವರೆಗೆ ಅಂದರೆ 5 ದಿನಗಳ ಕಾಲ ಸುದೀರ್ಘ ಚರ್ಚೆ ನಡೆಯಿತು. ಮತ್ತೆ 1948ರ ನವೆಂಬರ್ 15ರಂದು ಅಂಬೇಡ್ಕರ್ ಅವರು ಎರಡನೆ ಬಾರಿಗೆ ಸಂವಿಧಾನದ ಕರಡು ಪ್ರತಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ 7,653 ಅಂಶಗಳನ್ನು ತಿದ್ದುಪಡಿ ಮಾಡಬೇಕೆಂದು ಸಮಿತಿಯು ತೀರ್ಮಾನಿಸಿತು. ಅವುಗಳಲ್ಲಿ 2,475 ಅಂಶಗಳನ್ನು ಅಕ್ಟೋಬರ್ 17, 1949ರವರೆಗೆ ಚರ್ಚಿಸಿ, ತಿದ್ದುಪಡಿ ಮಾಡಲಾಯಿತು. ಅಂಬೇಡ್ಕರ್ ಅವರು ಮೂರನೆ ಬಾರಿಗೆ ನವೆಂಬರ್ 14, 1949ರಂದು ಮತ್ತೊಮ್ಮೆ ಮಂಡಿಸಿದರು. ಈ ಸಂಬಂಧ ನಡೆದ ಸುದೀರ್ಘ ಚರ್ಚೆಯಲ್ಲಿ ಪ್ರತಿಯೊಂದು ವಿಷಯಗಳಿಗೂ ಸ್ಪಷ್ಟವಾದ ಮತ್ತು ನಿಖರವಾದ ವಿವರಣೆ ಹಾಗೂ ಸಮಜಾಯಿಷಿಗಳನ್ನು ನೀಡಿದ ಅಂಬೇಡ್ಕರ್ ಅವರ ವಿದ್ವತ್ತು, ವಾಕ್‌ಚಾತುರ್ಯ ಮತ್ತು ಕಾರ್ಯವೈಖರಿಯನ್ನು ಒಪ್ಪಿಕೊಂಡ ರಚನಾ ಸಮಿತಿಯ ಸದಸ್ಯರೆಲ್ಲರೂ ಬಾಬಾಸಾಹೇಬರನ್ನು ಪ್ರಶಂಸಿಸಿದರು.

 ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾದ ಭಾರತದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಮಾನತೆ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರಕಿಸಿಕೊಡುವ ಮೂಲಕ ವೈಯಕ್ತಿಕ ಘನತೆ ಮತ್ತು ರಾಷ್ಟ್ರದ ಅಖಂಡತೆಯೊಂದಿಗೆ ದೇಶದ ಪ್ರಜೆಗಳಲ್ಲಿ ಭ್ರಾತೃಭಾವನೆಯನ್ನು ವೃದ್ಧಿಗೊಳಿಸುವ ಪ್ರಸ್ತಾವನೆಯನ್ನು ಅಡಕಗೊಳಿಸಿದ ಅಂಬೇಡ್ಕರ್ ಅವರ ಸಂವಿಧಾನವನ್ನು ಸಂವಿಧಾನ ರಚನಾ ಸಭೆಯು 1949ನೆಯ ನವೆಂಬರ್ 26ರಂದು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿತು.

 ಅಂಬೇಡ್ಕರ್ ರಚಿತ ಸಂವಿಧಾನವು 8 ಅನುಸೂಚಿಗಳು, 22 ಭಾಗಗಳು, 395 ವಿಧಿಗಳನ್ನು ಒಳಗೊಂಡಿದ್ದು, ಹಲವಾರು ತಿದ್ದುಪಡಿಗಳ ತರುವಾಯ ಪ್ರಸ್ತುತದಲ್ಲಿ 12 ಅನುಸೂಚಿಗಳು, 25 ಭಾಗಗಳು ಮತ್ತು 450 ವಿಧಿಗಳನ್ನು ಒಳಗೊಂಡಿದೆ. ಬಾಬಾಸಾಹೇಬರು ತಾವು ರಚಿಸಿದ ಸಂವಿಧಾನವನ್ನು ಕುರಿತು,  “The Constitution of India has been framed after ransacking all the known Constitution of the World” ಎಂದು ಪರಿಭಾವಿಸುತ್ತಾರೆ. ಇಂತಹ ಮಹಾನ್ ಜಾಗತಿಕ ಮೇಧಾವಿ, ರಾಜನೀತಿತಜ್ಞ, ಶ್ರೇಷ್ಠ ಮಾನವ ಹಕ್ಕುಗಳ ಪ್ರತಿಪಾದಕ ತಮ್ಮ ವಿದ್ವತ್ತನ್ನು ಧಾರೆ ಎರೆದು ಪಟ್ಟ ಶ್ರಮವನ್ನು ಅರಿತುಕೊಂಡಾಗ ಮಾತ್ರ ಭಾರತದ ಸರ್ವಶ್ರೇಷ್ಠ ರಾಷ್ಟ್ರಗ್ರಂಥವಾದ ಸಂವಿಧಾನದ ಮಹತ್ವ ಮನವರಿಕೆಯಾಗುತ್ತದೆ. ಭಾರತದ ಸಂವಿಧಾನವು ಧರ್ಮಗ್ರಂಥಗಳಿಗೆಲ್ಲ ಮೇಲ್ಪಂಕ್ತಿಯ ಸ್ಥಾನವನ್ನು ಪಡೆದಿದೆ. ಇಡೀ ಭಾರತದ ಜನರಿಗೆ ಉಸಿರಾಡಲು ಬೇಕಾದ ಆಮ್ಲಜನಕ, ನರನಾಡಿಗಳಿಗೆ ಪ್ರವಹಿಸುವ ಜೀವಜಲ ಭಾರತದ ಸಂವಿಧಾನದಲ್ಲಿದೆ ಎಂದರೆ ಅತಿಶಯೋಕ್ತಿಯಾಗಲಾರದು....!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...