Thursday, November 19, 2015

ಕಮಲ ಎಂ. ಆರ್. ಎರಡು ಕವಿತೆಗಳು


೧ 
ಹಾಗಾದರೆ ‘ಮಾರಿಬಿಡಿ’...


ಅಮ್ಮನ ಒಂದು ಜೊತೆ ಬಂಗಾರದ ಬಳೆ
ಅವಳ ಬದುಕಿನಂತೆಯೇ ನವೆದು, ಸವೆದು
ಬಣ್ಣ ಕಳಕೊಂಡು ಕೊನೆಗೀಗ ಮುರಿದೇ ಹೋಗಿದೆ
‘ಮಾರಿಬಿಡಿ’... ಯಾರೋ ಟಿವಿಯಲ್ಲಿ ಅರಚುತ್ತಿದ್ದಾರೆ!

ಮಾರಬಹುದೇ ಅವಳ ಬಳೆ ತೊಟ್ಟ ಸಂಭ್ರಮವನ್ನು
ಕಾಸಿಗೆ ಕಾಸು ಕೂಡಿಟ್ಟು ಕೊಂಡ ಚಿನ್ನಗನಸನ್ನು
ಗಾಜು ಬಳೆಗಳ ನಡುವೆ ಫಳಫಳಿಸಿದ ಆಸೆಯನ್ನು
ಹಬ್ಬವೋ ತಿಥಿಯೋ ಸೌಟು ಹಿಡಿದಾಗೆಲ್ಲ ಝಣತ್ಕರಿಸಿದ್ದನ್ನು
ಒನಕೆಯಲ್ಲಿ ಕುಣಿದು, ಬೀಸುವ ಕಲ್ಲಿನಲ್ಲಿ ಸುತ್ತಿಸುತ್ತಿ
ನೀರೆಳೆವಾಗ ಕೊಡದಂತೆ ಜಾರಿ ಮೇಲೆ ಬಂದಿದ್ದನ್ನು
ನೋವು-ನಲಿವಿಗೆ, ಮದುವೆ-ಮಸಣಕ್ಕೆ ಸಾಕ್ಷಿಯಾಗಿದ್ದನ್ನು
ಮಕ್ಕಳಿಗೆ ಬಳೆಯ ಜೊತೆ ರವಾನಿಸಿದ ಕೆಲಸದ ಹುಚ್ಚನ್ನು?

ಹಳೆ ಮನೆ ಸೋರುತ್ತಿದೆ, ಹೆಂಚು ಹಾರಿ ಹೋಗಿದೆ
ನೆಲ ಕರೆಗಟ್ಟಿದೆ, ಗೋಡೆ ಬಿರುಕು ಬಿಡುತ್ತಿದೆ
ಅಂಗಳದ ವೃಂದಾವನ ಮುರಿದೇ ಬಿದ್ದಿದೆ
‘ಮಾರಿಬಿಡಿ’.... ಯಾರೋ ಟಿವಿಯಲ್ಲಿ ಅರಚುತ್ತಿದ್ದಾರೆ!

ಮಾರಬಹುದೇ ಪುಟ್ಟ ಹೆಜ್ಜೆಗಳಿಟ್ಟಿದ್ದ ಖುಷಿಯನ್ನು
ತೊದಲಿನ ಮೊದಲನ್ನು, ಎಡವಿ ಬಿದ್ದು ಅಲ್ಲೇ ಎದ್ದದ್ದನ್ನು,
ಹಿತ್ತಲಿನ ನಿಂಬೆ, ದಾಳಿಂಬೆ, ಕರಿಬೇವಿನ ಘಮವನ್ನು
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಕರೆಗಳನ್ನು
ಬೇರು ಬಿಡುತ್ತ ಬೇರಾದರೂ ಬೇರಾಗದ ಕಳ್ಳುಬಳ್ಳಿಗಳನ್ನು
ಅಂಗಳದಲ್ಲಿ ಹರಿದ ಬೆಳುದಿಂಗಳ ಹೊಳೆಯನ್ನು
ಜಗಲಿ ಕಟ್ಟೆಯ ಮಾತಲ್ಲಿ ಹುಟ್ಟಿ ಕಟ್ಟಿದ ಜಗತ್ತನ್ನು?

ಅತ್ಯಾಚಾರ, ದುರಾಚಾರ, ಮಾನಭಂಗ, ಶೀಲಭಂಗ..
ಭರಿಸಬಹುದೇ ಹೆಂಗೂಸುಗಳು ಇಂಥ ಪದ ಭಾರವನ್ನು
‘ದೇಹ ಮಾರುವುದ ಕಾನೂನುಬದ್ಧಗೊಳಿಸಿ’ - ಯಾರೋ ಕೂಗುತ್ತಾರೆ
ಮಾರುವ ‘ಮಾರಿ’ ಹೊಕ್ಕಿದ್ದು ನಿನ್ನೆ ಮೊನ್ನೆಯೇನಲ್ಲ
‘ಪತಿಗಳೆನ್ನನು ಮಾರಿ ಧರ್ಮಸ್ಥಿತಿಯ ಕೈಗೊಂಡರು’
ಎಂದು ಪಾಂಚಾಲಿ ಒರಲಿದಷ್ಟೇ,
ಚಂದ್ರಮತಿ ಹರಾಜು ಕಟ್ಟೆಯಲಿ ನಿಂತಷ್ಟೇ ಹಳೆಯದು.

ಆದರೂ ಮಾರಬಹುದೇ ನೀವು ಅವಳ ಘನತೆಯನ್ನು
ಕಟ್ಟುಪಾಡಿಲ್ಲದೇ ಕಟ್ಟಿ ಹಿಡಿವ ತಾಯ್ತನದ ಮಮತೆಯನ್ನು?
 ***

 
೨ 
ಮುಖವಾಡಗಳ ಮಾರುವ ಊರಿನಲ್ಲೊಂದು ಸುತ್ತು (ವೆನಿಸ್ ನಗರ) ಹಬ್ಬಕ್ಕೆಂದೇ ಮುಖವಾಡಗಳ ಧರಿಸಬೇಕಿಲ್ಲ
ಇಲ್ಲಿ ಅದು ತೀರಾ ಚರ್ಮಕ್ಕೇ ಹತ್ತಿ ಕೂತಿದೆ
ಹಡಗಾಗಿ, ಸರಕಾಗಿ, ದೋಣಿಯ ಹಾಡಾಗಿ
ಕೊನೆಗೆ ನೀರೊಳಗೆ ಬಿದ್ದ ಸೂರ್ಯನಿಗೂ ಮೆತ್ತಿದೆ!

ಮುಷ್ಠಿಯಲಿ ಏನೋ ಮುಚ್ಚಿಟ್ಟಂತೆ, ತುಸು ಬಿಚ್ಚಿಟ್ಟಂತೆ ಕಾಣುವ
ನಕಾಶೆ ಹಿಡಿದು ಹೊರಟರೆ... ಎದುರಾಗುವವರು ಯಾರು?
‘ಪರದೇಸಿ’ಗಳಾದ ದೇಸಿಗಳೋ, ‘ದೇಸಿ’ಗಳಾದ ಪರದೇಸಿಗಳೋ
ನೆಲದ ದಾರಿಗೆ ನೀರು ದಡವೋ, ನೀರ ದಾರಿಗೆ ನೆಲವು ದಡವೋ
ಮನೆಗಳೇ ಮಾರುಕಟ್ಟೆಗಳೋ, ಮಾರುಕಟ್ಟೆಗಳೇ ಮನೆಗಳೋ
ಬಡಕೊಂಡರೂ ಸುಳಿವು ಬಿಟ್ಟು ಕೊಡದ ‘ಸುಡೊಕೊ’


ರಾತ್ರಿ ದೀಪ ಹೊತ್ತಿಕೊಂಡರೆ..
ನೀರು-ನೆಲ ಬೆಸೆದ ಸಗ್ಗ ನಿಧಾನಕ್ಕೆ ಬಿಚ್ಚಿಕೊಳ್ಳುತ್ತದೆ
ಮನೆ ಮನೆಗಳಿಂದ ಹರಿದು ಬಂದ ‘ಹುಗ್ಗಿಯ ಹೊಳೆ’
‘ಗೊಂಡೊಲಾ’ಗಳ ಮುತ್ತಿಕ್ಕುವ ಬೆಳದಿಂಗಳ ಅಲೆ
ಇರುಳಿನಲ್ಲೂ ಸೂರ್ಯನ ಹಾಡು ಹಾಡುವ ದೋಣಿಕಾರ
ಔ soಟe, ಔ soಟe mio, sಣ ಟಿ’ಜಿಡಿoಟಿಣe ಚಿ ಣe!
(ಓ ಸೂರ್ಯ, ಓ ನನ್ನ ಸೂರ್ಯ, ನಿನ್ನ ಮುಖದ ಮೇಲೆ)
ಯಾರದೋ ಸೂರ್ಯ, ಯಾರ ಮೊಗದ ಮೇಲೋ!


ಒಂದು ಪೌಂಡ್ ಮಾಂಸವನ್ನೇ ಕೊಡು ಎಂದು ಪಟ್ಟು
ಹಿಡಿದ ‘ವೆನಿಸ್‌ನ ವರ್ತಕ’ ಕಣ್ಮುಂದೆ ಸುಳಿದರೂ
ಅಲ್ಲೇ ಕೂತು ಕವಿತೆ ಬರೆದ ಗಯಟೆಯೂ ಜೊತೆಯಲ್ಲೇ
ಆ ದಡದಿಂದ ಈ ದಡ, ಈ ದಡದಿಂದ ಆ ದಡಕ್ಕೆ
ಕನಸ ದೋಣಿಯಲಿ ಕಳೆದು ಹೋಗುವ ಕಂದಮ್ಮಗಳು
ಎದೆಯೊಳಗೆ ಸುಡು ಸುಡು ಆತಂಕದ ಅಮ್ಮಂದಿರು

ವೆನಿಸ್ ನಗರದಲ್ಲಿ ಯಾವ ಭಾಷೆಯಾದರೂ ನಡೆದೀತು
ಇಟಾಲಿಯನ್, ಫ್ರೆಂಚ್, ಜರ್ಮನ್ ಕೊನೆಗೆ ಕನ್ನಡ, ತಮಿಳು!
ಮಾರಿ-ಕೊಳ್ಳುವುದಕ್ಕೆ ಬೇಕೆ ತಾಯ್ತನ, ತಾಯಿ ಭಾಷೆ?
***


ಕಮಲ ಎಂ.ಆರ್. (೧೯೫೯) ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್‌ಎಲ್.ಬಿ., ಫ್ರೆಂಚ್ ಭಾಷಾ ಪದವೀಧರೆ. ಶಕುಂತಲೋಪಾಖ್ಯಾನ, ಜಾಣೆ ಮತ್ತು ಇತರ ಕವಿತೆಗಳು, ಹೂವು ಚೆಲ್ಲಿದ ಹಾದಿ ಕಾವ್ಯ ಸಂಗ್ರಹಗಳು ಪ್ರಕಟಗೊಂಡಿದೆ. ಬಂಗಾಲದ ಮಹತ್ವದ ಕವಿ ಜೀವನಾನಂದರ ಕವಿತೆಗಳನ್ನು ಕೇಂದ್ರ ಸಾಹಿತ್ಯ ಅಕಾದೆಮಿಗಾಗಿ ಅನುವಾದಿಸಿದ್ದಾರೆ. ಆಫ್ರಿಕನ್-ಅಮೆರಿಕನ್, ಆಫ್ರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಶ್ರಮ ಹೊಂದಿದ್ದಾರೆ. ಕತ್ತಲ ಹೂವಿನ ಹಾಡು ಇವರು ಸಂಪಾದಿಸಿ, ಕನ್ನಡಿಸಿರುವ ಕಪ್ಪು ಲೇಖಕಿಯರ ಕಾವ್ಯ ಸಂಗ್ರಹ. ಇದರ ಮುಂದುವರಿಕೆಯಾಗಿ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಕೃತಿ ಸರಣಿಯ ನಾಲ್ಕು ಪುಸ್ತಕಗಳು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಎಸ್.ವಿ.ಪಿ. ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ೨೦೧೧-೧೨ರ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮೊದಲಾದ ಸಮ್ಮಾನಗಳು ಬಂದಿವೆ.

ವಿಳಾಸ: ಎಂ ಆರ್. ಕಮಲ, ನಂ ೪೦೫, ಉಮಾಶಂಕರ, ಫಸ್ಟ್ ಎನ್ ಬ್ಲಾಕ್, ೧೯ನೇ ಜಿ ಮೇನ್, ರಾಜಾಜಿನಗರ, ಬೆಂಗಳೂರು - ೫೬೦೦೧೦


rustic.kamala@gmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...