Sunday, November 08, 2015

ದೇಶದಲ್ಲಿ ಸಹಿಷ್ಣುತೆ ಇದೆ...ಇದೆ...ಇದೆ...!

 ಚೇಳಯ್ಯ

‘ಅಸಹಿಷ್ಣುತೆ...ಅಸಹಿಷ್ಣುತೆ...’ ದೇಶಾದ್ಯಂತ ಆಕ್ರಂದನ, ಚೀರಾಟ. ಆದರೆ ಮೋದಿ ಬಳಗ ಮಾತ್ರ ‘ದೇಶದಲ್ಲಿ ಶಾಂತಿ ನೆಲೆಯಾಡುತ್ತಿದೆ....ಆರೆಸ್ಸೆಸ್ ದೇಶದಲ್ಲಿ ಶಾಂತಿಯನ್ನು ಉತ್ಪಾದಿಸುತ್ತಿದೆ. ಶೀಘ್ರದಲ್ಲೇ ಆರೆಸ್ಸೆಸ್ ಮತ್ತು ಸನಾತನ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿದೆ’’ ಎಂದು ಹೇಳುತ್ತಿತ್ತು.

  ಪತ್ರಕರ್ತ ಎಂಜಲು ಕಾಸಿಗೆ ಸಖತ್ ಗೊಂದಲ. ಒಂದೆಡೆ ಅಸಹಿಷ್ಣುತೆ ಎಂದು ತಮ್ಮ ಚಿಕ್ಕಪುಟ್ಟ ಪ್ರಶಸ್ತಿಗಳನ್ನೂ ಸಾಹಿತಿಗಳು ಹಿಂದಿರುಗಿಸುತ್ತಿದ್ದಾರೆ. ಸಾಧಾರಣವಾಗಿ ಸಾಹಿತಿಗಳಿಗೆ ಪ್ರಶಸ್ತಿಗೆ ಲಾಬಿ ಮಾಡಿ ಗೊತ್ತೇ ಹೊರತು, ಪ್ರಶಸ್ತಿ ಬೇಡ ಎಂದಿರುವುದು ಕಡಿಮೆ. ಇಂತಹ ಸಾಹಿತಿಗಳೇ ಪ್ರಶಸ್ತಿ ವಾಪಸ್‌ಕೊಟ್ಟು ಅಸಹಿಷ್ಣುತೆ ಎಂದು ಬೊಬ್ಬಿಡುತ್ತಿರುವಾಗ ಯಾರನ್ನು ನಂಬುವುದು, ಯಾರನ್ನು ಬಿಡುವುದು? ಆದುದರಿಂದ ಸ್ವತಃ ಪತ್ರಕರ್ತ ಎಂಜಲು ಕಾಸಿಯೇ ಜೋಳಿಗೆಯೇರಿಸಿ ದೇಶದಲ್ಲಿ ಸಹಿಷ್ಣುತೆ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ದೇಶ ಪರ್ಯಟಣೆಗೆ ಹೊರಟ. ಅವನು ಹೆದರುತ್ತಲೇ ಸಾಗುತ್ತಿದ್ದ. ಆದರೆ ಎಲ್ಲವೂ ಎಂದಿನಂತೆಯೇ ಇತ್ತು. ಬಸ್ಸು ತುಂಬಿ ತುಳುಕುತ್ತಿತ್ತು. ಮಾಲ್‌ಗಳಲ್ಲಿ ಜನರು ಶಾಪಿಂಗ್‌ಗೆಂದು ನೆರೆದಿದ್ದರು. ರಸ್ತೆಯಲ್ಲಿ ಬಸ್ಸು ಕಾರು ಓಡಾಡುತ್ತಿತ್ತು. ಸ್ವಲ್ಪ ದೂರ ಸಾಗುತ್ತಿದ್ದಂತೆ ಒಂದೆಡೆ ಒಂದಿಷ್ಟು ಜನರ ಸೇರಿದ್ದರು. ಅವರು ಕಾವಿ ತೊಟ್ಟಿದ್ದರು. ಬಹುಶಃ ಸನ್ಯಾಸಿಗಳಿರಬಹುದೋ ಎಂದು ಹತ್ತಿರ ಹೋದರೆ ಅವರೆಲ್ಲರೂ ಒಬ್ಬನನ್ನು ಯದ್ವಾತದ್ವಾ ಥಳಿಸುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಅವನು ಪ್ರಾಣ ಬಿಟ್ಟ.

ಕಾಸಿ ಹೆದರುತ್ತಾ ಹೆದರುತ್ತಾ ಒಬ್ಬ ಕಾವಿಧಾರಿಯಲ್ಲಿ ಕೇಳಿದ ‘‘ಅವನನ್ಯಾಕೆ ಥಳಿಸಿ ಕೊಂದಿರಿ’’

‘‘ಮತ್ತೆ ಕೊಲ್ಲದೆ? ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಸುಳ್ಳು ಸುಳ್ಳೇ ಹೇಳುತ್ತಿದ್ದ. ಅದಕ್ಕೆ ಕೊಂದೆವು’’

ಕಾಸಿ ಬೆಚ್ಚಿ ಬಿದ್ದ. ಕಾವಿಧಾರಿ ಮುಂದುವರಿಸಿದ ‘‘ನೋಡ್ರಿ ಹೀಗೆ ಅಸಹಿಷ್ಣುತೆ ಎಂದು ಹೇಳುವುದರಿಂದ ದೇಶಕ್ಕೆ ಎಷ್ಟು ಅವಮಾನ. ವಿದೇಶಿಯರು ನಮ್ಮ ಬಗ್ಗೆ ಏನೆಂದು ತಿಳಿದುಕೊಳ್ಳಬೇಕು? ನಮ್ಮ ದೇಶದ ವರ್ಚಸ್ಸು ಏನಾಗಬೇಕು? ನೀವೇ ಹೇಳಿ, ಈ ದೇಶದಲ್ಲಿ ಅಸಹಿಷ್ಣುತೆ ಇದೆಯಾ?’’

ಕಾಸಿ ಹೆದರಿ ತೊದಲುತ್ತಾ ಹೇಳಿದ ‘‘ಇಲ್ಲ...ಇಲ್ಲ...ದೇಶದಲ್ಲಿ ಅಸಹಿಷ್ಣುತೆ ಇಲ್ಲ....’’

ಅಲ್ಲಿಂದ ನೇರವಾಗಿ ಹೊಟೇಲ್‌ಗೆ ಹೋದ. ಊಟಕ್ಕೆ ಆರ್ಡರ್ ಕೊಟ್ಟ. ವೈಟರ್ ಕೇಳಿದ ‘‘ಬೇರೇನು ಬೇಕು ಸಾರ್?’’
‘‘ಮೊಟ್ಟೆ ಸಾರು ಕೊಡಿ...’’ ಎಂದ.

‘‘ಏನ್ರೀ...ಮೊಟ್ಟೆ ತಿಂದು ನಮ್ಮ ಭಾವನೆಗಳಿಗೆ ಧಕ್ಕೆ ತರುತ್ತೀರಾ?’’ ಮೂವರು ಧಡೂತಿಗಳು ಕಾಸಿಯನ್ನು ಸುತ್ತುವರಿದರು.
‘‘ನಾನು ಮೊಟ್ಟೆ ತಿಂದ್ರೆ ನಿಮ್ಮ ಭಾವನೆಗಳಿಗೆ ಹೇಗೆ ಧಕ್ಕೆಯಾಗುತ್ತದೆ....’’ ಕಾಸಿ ಆತಂಕದಿಂದ ಕೇಳಿದ.

‘‘ನೋಡ್ರಿ ನಾವು ಮೊಟ್ಟೆ ತಿನ್ನುವುದಿಲ್ಲ. ಮೊಟ್ಟೆಯಿಂದ ಕೋಳಿ. ಅದು ಮೊಟ್ಟೆಯಿಡುವುದು ಮರಿ ಮಾಡುವುದಕ್ಕೆ ನೀವು ಮೊಟ್ಟೆಗಳನ್ನೆಲ್ಲ ತಿಂದರೆ ನಾಳೆ ಕೋಳಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಕೋಳಿಯ ಸಂಖ್ಯೆಯೇ ಕಡಿಮೆಯಾಗುತ್ತದೆ... ನೀವು ಮೊಟ್ಟೆ ತಿಂದರೆ ನಮ್ಮ ಭಾವನೆಗಳಿಗೆ ಧಕ್ಕೆ ಯಾಗುತ್ತದೆ...’’ ಅವರು ಅಬ್ಬರಿಸಿದರು.
ಕಾಸಿ ಭಯವಾಯಿತು ‘‘ಸಾರ್...ಹಾಗಾದರೆ ನಾನು ಏನು ತಿನ್ನಬೇಕು...’’

‘‘ಬೇಕಾದರೆ ಸೆಗಣಿ ತಿನ್ನು. ನೀನು ಏನು ತಿನ್ನಬಾರದು ಎನ್ನುವ ಪಟ್ಟಿ ನಾವು ಕೊಡುತ್ತೇವೆ...ಏನು ತಿನ್ನಬೇಕು ಎನ್ನುವುದು ನಿನ್ನ ಸಮಸ್ಯೆ ನಮ್ಮದಲ್ಲ...’’ ಎಂದು ಪಟ್ಟಿಕೊಟ್ಟರು. ಇಡೀ ಪಟ್ಟಿಯನ್ನು ಓದಿದ. ನಾನು ಏನೇನು ತಿಂದರೆ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎನ್ನುವುದು ಅದರಲ್ಲಿತ್ತು. ‘‘ಸಾರ್...ಇದು ಅಸಹಿಷ್ಣುತೆ...’’ ಕಾಸಿ ತಡವರಿಸಿ ಹೇಳಿದ.
ಅಷ್ಟರಲ್ಲಿ ಹೊರಗಿನಿಂದ ಗದ್ದಲ ಕೇಳಿತು ‘‘ಯಾರ್ರೀ ಅದು ಅಸಹಿಷ್ಣುತೆ ಎನ್ನುವುದು. ಹಿಡಿಯಿರಿ ದೇಶದ್ರೋಹಿಯನ್ನು...ಥಳಿಸಿರಿ, ಕೊಲ್ಲಿರಿ...’’ ಎಂಜಲು ಕಾಸಿ ಅಲ್ಲಿಂದ ಓಡತೊಡಗಿದ.

ಬಸ್‌ಸ್ಟಾಂಡ್‌ನಲ್ಲಿ ಹೋಗಿ ನಿಂತುಕೊಂಡ. ಬಸ್‌ಯಾವಾಗ ಬರುತ್ತೆ ಎಂದು ಗೊತ್ತಿರಲಿಲ್ಲ. ಪಕ್ಕದಲ್ಲೇ ಒಂದು ಹೆಂಗಸು ನಿಂತಿತ್ತು ‘‘ಅಮ್ಮಾ...ಬೆಂಗಳೂರು ಬಸ್ಸು ಯಾವಾಗ ಬರುತ್ತೆ?’’ ಕೇಳಿದ.

ಅಷ್ಟರಲ್ಲಿ ನಾಲ್ಕೈದು ಜನರು ಸುತ್ತುವರಿದರು. ‘‘ಏನ್ರೀ...ಹಿಂದೂ ಮಹಿಳೆಯ ಜೊತೆಗೆ ಚಕ್ಕಂದ ಆಡುತ್ತೀಯಾ? ಲವ್ ಜಿಹಾದ್ ಮಾಡು ತ್ತಿದ್ದೀಯ?’’

‘‘ಇಲ್ಲ ಸಾರ್ ಬಸ್ ಯಾವಾಗ ಬರುತ್ತೆ ಎಂದು ಅವರಲ್ಲಿ ಕೇಳಿದೆ’’ ಕಾಸಿ ಅಂಗಲಾಚಿದ.
‘‘ಇಲ್ಲಿ ಗಂಡಸಿರಲಿಲ್ಲವಾ? ನಿನ್ನ ಧರ್ಮ ಯಾವುದು?’’

‘‘ಹಿಂದೂ ಸಾರ್?’’

‘‘ಮತ್ತೆ ಗಡ್ಡ ಇಟ್ಟಿದ್ದೀಯಾ?’’

‘‘ಅದು ಇಟ್ಟದ್ದಲ್ಲ, ತನ್ನಷ್ಟಕ್ಕೆ ಬಂದಿದ್ದು...’’

‘‘ಎಲ್ಲಿ ಚಡ್ಡಿ ಕಳಚು’’

‘‘ಯಾಕೆ ಸಾರ್? ನಾನು ಆರೆಸ್ಸೆಸ್ ಅಲ್ಲ...ಚಡ್ಡಿ ಹಾಕಲ್ಲ...ಬರೇ ನಿಕ್ಕರ್ ಹಾಕಿದ್ದೀನಿ...’’

‘‘ನಿನ್ನ ಧರ್ಮ ಯಾವುದು ಎಂದು ಗುರುತಿಸಲು...ಅದನ್ನು ನೋಡಬೇಕು...ಕಳಚು’’ ನೋಡಿ ನಿರಾಶರಾಗಿ ‘‘ಏನ್ರೀ ನೀವು, ಮೊದಲೇ ಹೇಳಬಾರದ...ನೋಡಿ ತಕ್ಷಣ ಆ ಗಡ್ಡ ತೆಗೀರಿ. ನಮ್ಮ ಭಾವನೆಗಳಿಗೆ ಧಕ್ಕೆಯಾಗತ್ತೆ’’ ಎಂದರು. ‘‘ಆಯ್ತು ಸಾರ್...ಈಗಲೇ ತೆಗೀತೀನಿ....’’ ಎಂದು ಕಾಸಿ ಕ್ಷೌರದಂಗಡಿಗೆ ಹೋಗಿ ಶೇವಿಂಗ್ ಮಾಡಿಸಿದ.

ಕೊನೆಗೂ ಬಸ್ಸು ಹಿಡಿದು ಸೀಟಲ್ಲಿ ಕುಳಿತುಕೊಂಡು ಜೋಳಿಗೆಯಲ್ಲಿದ್ದ ಪುಸ್ತಕ ಬಿಡಿಸಿ ಓದ ತೊಡಗಿದ. ಅಷ್ಟರಲ್ಲಿ ಬಸ್ಸಲ್ಲಿದ್ದ ಇಬ್ಬರು ಕೇಳಿದರು ‘‘ಏನ್ರೀ...ಯಾವ ಪುಸ್ತಕ ಓದುತ್ತಿದ್ದೀರಿ...’’

ಕಾಸಿ ಪುಸ್ತಕದ ಹೆಸರು ಹೇಳಿದ ‘‘ಏನ್ರೀ...ಬುದ್ಧಿ ಜೀವಿಗಳ ಪುಸ್ತಕ ಓದುತ್ತಿದ್ದೀರ...ನಮ್ಮ ಭಾವನೆಗಳಿಗೆ ಧಕ್ಕೆಯಾಗುತ್ತೆ. ತಕ್ಷಣ ಪುಸ್ತಕವನ್ನು ಹೊರಗೆಸೆಯಿರಿ...’’ ಎಂದರು.

‘‘ಸಾರ್...ಇವರು ಖ್ಯಾತ ಚಿಂತಕರು ಸಾರ್...’’ ಕಾಸಿ ಅಂಗಲಾಚಿದ.

‘‘ಮೋದಿ ಸರಕಾರ ವಿರೋಧಿಸಿ ಅಕಾಡಮಿ ಅವಾರ್ಡ್ ವಾಪಸ್ ಕೊಟ್ಟಿದ್ದಾರೆ. ಇವರು ದೇಶದ್ರೋಹಿಗಳು...ದೇಶದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ....ಗೊತ್ತಲ್ಲ ಕಲಬುರ್ಗಿಗೆ ಏನಾಯಿತು ಅಂತಾ?’’
ಕಾಸಿ ಹೆದರುತ್ತಲೇ ಹೇಳಿದ ‘‘ಸಾರ್...ಇದು ಅಸಹಿಷ್ಣುತೆ ಸಾರ್...’’

ಅಷ್ಟರಲ್ಲಿ ಯಾರೋ ಹೊರಗಿನಿಂದ ಬೊಬ್ಬೆ ಹಾಕಿದರು ‘‘ಯಾರ್ರೀ ಅದು ಅಸಹಿಷ್ಣುತೆ ಎಂದು ಹೇಳೋದು...ದೇಶದ್ರೋಹಿಗಳು...ಹಿಡೀರಿ ಅವನನ್ನು. ಥಳಿಸಿರಿ, ಕೊಲ್ಲಿರಿ...ದೇಶದ ವರ್ಚಸ್ಸನ್ನು ಕಾಪಾಡಿ...’’ ಕಾಸಿ ಬಸ್ಸಿನಿಂದ ಇಳಿದವನೇ ಓಡ ಹತ್ತಿದ. ಕೊನೆಗೂ ಪತ್ರಿಕಾಕಚೇರಿ ಮುಟ್ಟುವಲ್ಲಿ ಯಶಸ್ವಿಯಾದ.
ಸಂಪಾದಕರು ಕೇಳಿದರು ‘‘ಏನ್ರೀ...ದೇಶದಲ್ಲಿ ಅಸಹಿಷ್ಣುತೆ ಇದೆಯೋ ಇಲ್ಲವೋ?’’
ಕಾಸಿ ನಡುಗುತ್ತಾ ಉತ್ತರಿಸಿದ ‘‘ಇದೆ ಸಾರ್... ದೇಶದಲ್ಲಿ ಏಲ್ಲಾ ಕಡೆ ಸಹಿಷ್ಣುತೆ, ಶಾಂತಿ ನೆಲೆಸಿದೆ’’

ಮರುದಿನ ಅದೇ ಹೇಳಿಕೆ ಪತ್ರಿಕೆಯ ತಲೆಬರಹವಾಗಿ ಮುದ್ರಣಗೊಂಡಿತು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...