Tuesday, November 10, 2015

ಸುನಂದಾ ಕಡಮೆ ಎರಡು ಕವಿತೆಗಳು


೧ 
ಗಾದಿ ಕಾರಖಾನೆಯ ಬೀದಿಜೀರ್ಣವಾಗಿದೆ ಹತ್ತಿ ಹಾಸಿಗೆ
ಬಂದು ಬಿದ್ದಿದೆ ಬೀದಿಗೆ
ಮೂರಂಗುಲ ಆರಂಗುಲ
ಆಯತವು ಈ ಬಯಲಿಗೆ

ಮುದ್ದೆಯಾಗಿದೆ ಹತ್ತಿ ನಿರಿಗೆ
ಚಿಂದಿ ಮಾಸಿದೆ ಹೊದಿಕೆ
ರಟ್ಟೆ ಬೆತ್ತದ ಕೋಲಿನೇಟು
ಹೊಟ್ಟೆ ಪಾಡಿನ ಮರ್ಮದೊಗಟು

ಪೆಟ್ಟಿಗನುಗುಣ ಬಿಡಿ-ಬಿಡಿಸಿ ನವಿರಾಗಿ
ಜೀವ ಕಂಪನಗಳೆಲ್ಲ ಮಿಡು-ಮಿಡುಕಿ
ತೊನೆದಾಡಿ
ಬೆಚ್ಚನೆ ಮೋಡದ ಹದ ಬೇಡಿ

ಹಳೆ ಹತ್ತಿಯಲಿ ಹೊಸ ಹೂವರಳಿ
ಬಾನಂಗಳ ತುಂಬ ಧೂಮ ಧೂಳಿ
ಅಣು ಅಣುವಿನಲ್ಲೂ ಹಚ್ಚನೆ ಹೋಳಿ

ರಂಗು ರಂಗಿನ ಅರಿವೆ ತೊಡಿಸಿ
ಮತ್ತೆ ಸೇರಿಸಿ ಹೊಲಿದು ಜೋಡಿಸಿ
ಗಾದಿಯಂಚಿನ ಹೊಲಿಗೆ ಗೆರೆ
ಭದ್ರಗೊಳಿಸಿದೆ ಭವದ ಕರೆ

ಜೀವ ರಟ್ಟೆಯ ಬಲವೆಲ್ಲ
ಮೆತ್ತ ಮೆತ್ತನೆ ಹಾಸಾಗಿ
ಶ್ರಮಿಕನೊಡಲ ಕೂಸಾಗಿ

ಒಳಗೆ ಅದೇ ಜೀವಾತ್ಮ
ಹೊರಗೆ ಹೊಸ ಹೊದಿಕೆ

ಗೋಲ ಕಾಲಚಕ್ರದ ಹಾದಿ
ಗಾದಿ ಕಾರಖಾನೆಯ ಬೀದಿ
***

೨ 
ಸಮಯವಿನ್ನೂ ಮೀರಿಲ್ಲ

ಈಗಲೂ ಆಡಿಸಬಲ್ಲೆವು ಅಂತ ಎಣಿಸಿದ್ದರೆ ನೀವು
ಅವೇ ಅವೇ ಆಟಗಳನ್ನು ನಾವೂ ಆಡಿಸಬಲ್ಲೆವು
ಆಟದ ಕಾಲ ಮಾತ್ರ ಬೇರೆ

ಕಾಳುಗಳ ಗೆದ್ದು ಒಳಹಾಕಿದ ಮಾತ್ರಕ್ಕೆ
ಅಂಗಳ ಎಂದೂ ಬರಡಾಗುವದಿಲ್ಲ
ಹೊಸ ಆಟದ ನಿಯಮಗಳು ಸಿದ್ದಗೊಂಡರೆ
ದಾಳಗಳೇ ಅದಲು ಬದಲಾಗುತ್ತವೆ

ಬರಿ ನಾಲ್ಕು ಮುಖಗಳ ದಾಳವಲ್ಲ ಅದು
ಸಂದೇಶಗಳ ತುಂಬ ಸಾವಿರ ರಂಧ್ರಗಳು

ದಾಳದ ಎಲ್ಲ ಬದಿಯೂ ಕಾಣುವುದು ಒಂದೇ ತರಹ
ಹಸ್ತದಲ್ಲಿ ಎಷ್ಟು ತಿಕ್ಕಿ ಎಸೆದರೂ ಅದೇ ಹಣೆಬರಹ

ಬರ್ರನೆ ಬೈಕಲ್ಲಿ ಎದೆಯ ಮೇಲೆ ಸವಾರಿ ಹೋದರೆ
ದಾಳದ ಆಯುಷ್ಯ ಮುಗಿಯುತ್ತದೆ

ಇನ್ ಶರ್ಟ ಮಾಡಿ ಪ್ಯಾಂಟಿನ ಮೇಲೆ ಬೆಲ್ಟು ಬಿಗಿದು ಕೂತರೆ
ಹೊರಗಿನ ಚೀತ್ಕಾರಗಳೆಲ್ಲ ಒಳಗಿಂದಲೇ ಕೇಳಿಯಾವು

ದಾಳಗಳನ್ನೇ ಕಸಿದು ಜೇಬಿನಲ್ಲಿಟ್ಟುಕೊಂಡ ಮಾತ್ರಕ್ಕೆ
ಆಟದ ಗೆಲುವು ಯಾರ ಸ್ವತ್ತೂ ಅಲ್ಲ

ಅರ್ಧ ಸೀಳಿಟ್ಟರೂ ಬೇರು ಹಸಿ ಆಳದಲ್ಲಿ
ಕಾಳಿನ ಸತ್ವ ಎಂದೂ ಕೈಕೊಡುವುದಿಲ್ಲ

ದಾಳದ ಗೋಲ ಬಿಂದು ಗಟ್ಟಿಯಾಗಿದೆ ಎಂದು
ವಸರುವ ಜೀವರಸ ಈಗ ರೇಷ್ಮೆ ಗೂಡಾಗದು.  

ವಾಚು ಕಟ್ಟುವ ನೆಪದಲ್ಲಿ ನರಕತ್ತರಿಸುವ
ದ್ಯೂತದ ಹರಿತವಿನ್ನೂ ಮೊಂಡಾಗಿಲ್ಲ    

ಕಾಲರ್ ಪಟ್ಟಿಯಲ್ಲೇ ಕಾಲವಿದೆ ಅಂತ ಬೀಗಿದರೆ
ಕತ್ತಿಗೆ ಟೈ ಬಿಗಿಯುವ ಕೈಗಳ ಸಮಯವಿನ್ನೂ ಮೀರಿಲ್ಲ
***ಸುನಂದಾ ಪ್ರಕಾಶ ಕಡಮೆ (೧೯೬೭) ಉತ್ತರಕನ್ನಡ ಜಿಲ್ಲೆಯವರು. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಹಾಗೂ ಕರ್ನಾಟಕ ವಿ.ವಿ ಧಾರವಾಡದಲ್ಲಿ ಕನ್ನಡ ಎಂಎ ಮಾಡಿರುವ ಸುನಂದಾ ಕವಿ ಪ್ರಕಾಶ ಕಡಮೆಯವರೊಂದಿಗೆ ಗೃಹಿಣಿಯಾಗಿ ಹುಬ್ಬಳ್ಳಿಂiiಲ್ಲಿ ವಾಸವಾಗಿದ್ದಾರೆ. ೧೯೯೭ರಿಂದ ಬರವಣಿಗೆ ಆರಂಭಿಸಿರುವ ಅವರು ಇದುವರೆಗೆ ೩ ಕಥಾ ಸಂಕಲನ, ೨ ಕಾದಂಬರಿ, ಒಂದು ಮಕ್ಕಳ ಕಾದಂಬರಿ, ಒಂದು ಕವನ ಸಂಕಲನ, ಎರಡು ಅಂಕಣ ಬರಹಗಳ ಸಂಗ್ರಹವನ್ನು ಹೊರತಂದಿದ್ದಾರೆ. ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಶಿವಮೊಗ್ಗ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಿಳಾಸ: # ೯೦, ’ನಾಗಸುಧೆ’ ೬/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ-೫೮೦೦೩೧.

sunandakadame@gmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...