Sunday, November 29, 2015

ಇದು ಭಾರತದ ಫ್ಯಾಶಿಸಂನ ಕರಾಳ ಮುಖಸನತ್ ಕುಮಾರ್ ಬೆಳಗಲಿ‘‘ಭಾರತದಲ್ಲಿ ಒಂದು ವೇಳೆ ಫ್ಯಾಶಿಸಂ ಬಂದರೆ ಅದು ಬಹುಸಂಖ್ಯಾತ ಕೋಮುವಾದದ ಮೂಲಕ ಬರಹುದು’’ ಎಂದು ಜವಾಹರಲಾಲ್ ನೆಹರೂ ಎಂಬತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ಪರಿಸ್ಥಿತಿ ಅಂದಿಗೂ ಇಂದಿಗೂ ತುಂಬ ಬದಲಾಗಿದೆ. ಇಲ್ಲಿ ಫ್ಯಾಶಿಸಂ ಜರ್ಮನಿಯ ಹಿಟ್ಲರ್ ಮಾದರಿಯಲ್ಲಿ, ಇಟಲಿಯ ಮುಸಲೋನಿಯ ಮಾದರಿಯಲ್ಲಿ ನೇರವಾಗಿ ಬರುವುದಿಲ್ಲ. ಇಲ್ಲಿಯ ಮನುವಾದದ ಮಿಶ್ರಣದೊಂದಿಗೆ ೫೬ ಇಂಚಿನ ಎದೆಯ ನಾಯಕನ ನೇತೃತ್ವದಲ್ಲಿ ನಯವಾಗಿ ಬರುತ್ತದೆ ಎಂಬ ಸೂಚನೆಗಳು ಕಾಣುತ್ತಿವೆ. ಇಲ್ಲಿಯ ಫ್ಯಾಶಿಸಂ ಸ್ವರೂಪ ಹೇಗಿರುತ್ತದೆ ಅಂದರೆ, ಆಳುವವರ ಅಂತರಂಗದಲ್ಲಿ ‘ಹಿಂದೂರಾಷ್ಟ್ರ ನಿರ್ಮಾಣದ ಮಸಲತ್ತು ಮಡುಗಟ್ಟಿ ನಿಂತಿರುತ್ತದೆ. ಬಹಿರಂಗದಲ್ಲಿ ಸಾಮರಸ್ಯ ಸಂಸ್ಕೃತಿಯ ಗುಣಗಾನ ನಡೆಯುತ್ತಿರುತ್ತದೆ. ‘ನಮ್ಮದು ಭಾರತ ಧರ್ಮ’ ಎಂದು ಹೇಳುತ್ತಲೇ; ತಮ್ಮ ಧರ್ಮ ಸಹನೆಯ ಶಿಖರ ಎಂಬ ಅಹಂಕಾರದಿಂದ ಕೂಡಿದ ಹೆಮ್ಮೆ ಉಕ್ಕೆರುತ್ತಿರುತ್ತದೆ. ಇನ್ನೊಂದೆಡೆ ಸಂಪತ್ತು ಅದರ ಪಾಲಿಗೆ ಕಲಾಪ ನಡೆಸುತ್ತದೆ. ಆದರೆ ಸಂವಿಧಾನೇತರ ಧರ್ಮ ಸಂಪತ್ತು ಕಾರ್ಯಸೂಚಿಗಳನ್ನು ತೀರ್ಮಾನಿಸುತ್ತದೆ. ಹಿಟ್ಲರ್ ಕಾಲದಲ್ಲಿ ಬಂಡವಾಳಶಾಹಿ ಬಿಕ್ಕಟ್ಟಿನ ನಡುವೆ ಹೊರಳಾಡುತ್ತಿತ್ತು. ಸಮಾಜವಾದಿ ಸೋವಿಯತ್ ರಶ್ಯ ಇತ್ತು. ಈಗ ನವಉದಾರವಾದದ ಕಾಲ ಮಾರುಕಟ್ಟೆ ಶಕ್ತಿಗಳು, ಮನುವಾದಿ ಕುಯುಕ್ತಿಗಳ ಜೊತೆ ಸೇರಿ ಮಸಲತ್ತು ನಡೆಸಿರುವ ಈ ಕಾಲದಲ್ಲಿ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಮುಂದಿಟ್ಟುಕೊಂಡೇ ಅದನ್ನು ನಿರರ್ಥಕಗೊಳಿಸುವ ಹುನ್ನಾರಗಳು ನಡೆದಿವೆ. ಸಮಾಜವಾದಿ ಆಶಯದ ವಿರುದ್ಧ ಸಂಚುಗಳು ತೀವ್ರಗೊಂಡಿವೆ. ವಾಸ್ತವವಾಗಿ ೧೯೫೦ ಜನವರಿ ೨೬ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ. ಆದರೆ ಈ ಸರಕಾರಕ್ಕೆ ತನ್ನ ಮುಖ ಮುಚ್ಚಿಕೊಳ್ಳಲು ಈಗ ತುರ್ತಾಗಿ ಅದರ ಅಗತ್ಯವಿತ್ತು. ಅಂತಲೇ ನವೆಂಬರ್ ೨೬ರಂದು ಸಂವಿಧಾನ ದಿನವೆಂದು ಸಂಸತ್ ಅಧಿವೇಶನ ನಡೆಸಿತು. ಗಾಂಧಿ ಜಯಂತಿಯನ್ನು ಇದೇ ರೀತಿ ಅಪವ್ಯಾಖ್ಯಾನಗೊಳಿಸಲಾಗಿತ್ತು. ಚರಿತ್ರೆಯನ್ನು ಬದಲಿಸುವುದು ಈಗ ಅಧಿಕಾರದಲ್ಲಿರುವವರ ಅಜೆಂಡಾ. ಅದಕ್ಕೆ ಪೂರಕವಾಗಿ ಎಲ್ಲವೂ ನಡೆಯುತ್ತವೆ. ಇವರದು ಗಣಪತಿಗೆ ಹಾಲು ಕುಡಿಸಿದ ಪರಂಪರೆ ಅಲ್ಲವೇ?

‘‘ಸಮಾಜವಾದ ಮತ್ತು ಜಾತ್ಯತೀತತೆ ಭಾರತಕ್ಕೆ ಪರಕೀಯ ಶಬ್ದಗಳು’’ ಎಂದು ಆರೆಸ್ಸೆಸ್ ಸರಸಂಘಚಾಲಕ ಮಾಧವ್ ಸದಾಶಿವ ಗೊಳ್ವಲ್ಕರ್ ಎಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ಅದೇ ಗುರೂಜಿಯ ಶಿಷ್ಯರಾದ ಗೃಹ ಸಚಿವ ರಾಜನಾಥ್ ಸಿಂಗ್ ಅದೇ ಜಾತ್ಯತೀತತೆ ಮತ್ತು ಸಂವಿಧಾನದ ಮೇಲೆ ಸಂಸತ್ತಿನಲ್ಲಿ ದಾಳಿ ಮಾಡಿದ್ದಾರೆ. ಸಂವಿಧಾನದಲ್ಲಿ ಅನಂತರ ಇವುಗಳನ್ನು ಸೇರಿಸಲಾಗಿದೆಯೆಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತಾಡಿದ ಹಣಕಾಸು ಸಚಿವ ಅರುಣ್‌ಜೇಟ್ಲಿ ೧೯೩೩ರಲ್ಲಿ ಜರ್ಮನಿಯಲ್ಲಿ ತುರ್ತು ಸ್ಥಿತಿ ಹೇರಿದ ಹಿಟ್ಲರ್‌ಗೂ ೧೯೭೫ರಲ್ಲಿ ತುರ್ತು ಸ್ಥಿತಿ ಹೇರಿದ ಇಂದಿರಾ ಗಾಂಧಿಗೂ ಹೋಲಿಕೆ ಮಾಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಬರಬೇಕಾದಷ್ಟು ಪ್ರತಿರೋಧ ಬರಲಿಲ್ಲ. ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ‘‘ನಾವು ದಲಿತರು ಈ ದೇಶದ ಮೂಲನಿವಾಸಿಗಳು. ಆರ್ಯರು ಹೊರಗಿನವರು. ನೀವು ಬೇಕಾದರೆ ದೇಶಬಿಟ್ಟು ಹೋಗಿ’’ ಎಂದು ಗುಡುಗಿದರು. ಆದರೆ ಹಿಟ್ಲರ್‌ಗೂ ಸಂಘಪರಿವಾರಕ್ಕೆ ಇರುವ ಸೈದ್ಧಾಂತಿಕ ನಂಟಿನ ಬಗ್ಗೆ ಕಾಂಗ್ರೆಸ್ ಸಂಸದರು ಮಾತಾಡಬೇಕಿತ್ತು. ಆದರೆ ಅಂಥ ಅಧ್ಯಯನಶೀಲತೆ ಕಾಂಗ್ರೆಸ್ ಸದಸ್ಯರಲ್ಲಿ ಕಾಣುತ್ತಿಲ್ಲ.

ರಾಜ್ಯಸಭೆಯಲ್ಲಿ ಸಿಪಿಎಂನ ಸೀತಾರಾಂ ಯೆಚೂರಿ ಅವರು ಮಾತ್ರ ಗೊಳ್ವಲ್ಕರರು ಹಿಟ್ಲರ್‌ನನ್ನು ಶ್ಲಾಘಿಸಿ ಬರೆದ ಪುಸ್ತಕವನ್ನು ಓದಿ ನೀವು ಆ ಪರಂಪರೆಗೆ ಸೇರಿದವರು ಎಂದು ಟೀಕಿಸಿದರು. ದಾದ್ರಿಯ ಕಗ್ಗೊಲೆ, ಹರ್ಯಾಣದಲ್ಲಿ ದಲಿತ ಮಕ್ಕಳಿಬ್ಬರ ಜೀವಂತ ದಹನ, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿಯವರ ಹತ್ಯೆ, ಆದಿತ್ಯನಾಥ, ಸಾಕ್ಷಿ ಮಹಾರಾಜ, ಸಾಧ್ವಿ ಪ್ರಾಚಿ, ನಿರಂಜನ ಜ್ಯೋತಿ ಮುಂತಾದವರ ಹೇಳಿಕೆಗಳ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮುನ್ನವೇ ಪ್ರಧಾನಿ ಮೋದಿ ‘ಭಾರತವೇ ನಮ್ಮ ಧರ್ಮ’ ಎಂದು ತಿಪ್ಪೆ ಸಾರಿಸಿದರು. ತಮ್ಮ ಪಾತಕಗಳನ್ನು ಮುಚ್ಚಿಕೊಳ್ಳಲು ತುರ್ತು ಸ್ಥಿತಿ ಆಲಾಪ ಮಾಡಿದರು. ಇದು ಈ ದೇಶದ ಸಂಘಿ ಫ್ಯಾಶಿಸಂನ ವೈಖರಿ. ದೇಶದ ತುಂಬೆಲ್ಲ ನಿತ್ಯ ಪ್ರಚೋದನಾಕಾರಿ ಚಟುವಟಿಕೆಗಳು ನಡೆಯುತ್ತಲೇ ಇವೆ. ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಎಂಬ ತರುಣನನ್ನು ಮುಸ್ಲಿಂ ಗೆಳೆಯನೊಂದಿಗೆ ಹೊರಟಾಗ ಇರಿದು ಕೊಂದರು. ಬಜರಂಗದಳ ಕಾರ್ಯಕರ್ತರು ಎಂದಾಗ ಬಾಯಿಮುಚ್ಚಿಕೊಂಡರು. ಈ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಜರಂಗದಳದ ಭುವಿತ್ ಶೆಟ್ಟಿ ಬಂಧನಕ್ಕೊಳಗಾಗಿದ್ದಾರೆ. ಯಾವುದೇ ವ್ಯಕ್ತಿಗತ ದ್ವೇಷ, ವೃತ್ತಿ, ಮತ್ಸರ ಯಾವುದೂ ಇಲ್ಲದೆ ಭುವಿತ್ ಶೆಟ್ಟಿ ಸಮೀವುಲ್ಲಾ ಎಂಬ ತರುಣನನ್ನು ಮುಸ್ಲಿಂ ಎಂಬ ಕಾರಣಕ್ಕೆ ಹತ್ಯೆ ಮಾಡಲು ಯತ್ನಿಸುತ್ತಾನೆಂದರೆ, ಮುಸ್ಲಿಂ ಇರಬಹುದು ಎಂಬ ಕಾರಣಕ್ಕೆ ಹರೀಶ್ ಪೂಜಾರಿಯನ್ನು ಕೊಲ್ಲುವುದಾದರೆ ಕೋಮುವಾದ ಯಾವ ಪರಿ ಜನರನ್ನು ಹುಚ್ಚರನ್ನಾಗಿ ಮಾಡಿದೆ ಎಂಬುವುದು ಸ್ಪಷ್ಟವಾಗುತ್ತದೆ. ಇದಕ್ಕಾಗಿ ಯಾರನ್ನೂ ವೈಯಕ್ತಿಕವಾಗಿ ರೂಪಿಸದೇ ಭುವಿತ್ ಶೆಟ್ಟಿ ಅಂತ ವಿಕೃತರನ್ನು ಸೃಷ್ಟಿಸಿದ ಸಂಘಟನೆ ಯಾವುದು? ನಾಥೂರಾಂ ಗೊಡ್ಸೆಯನ್ನು ಸೃಷ್ಟಿಸಿದ ಆ ಸಿದ್ಧಾಂತವೇ ಈ ಭುವಿತ್ ಶೆಟ್ಟಿ ಅವರಂಥ ತರುಣ್‌ರನ್ನು ಕೊಲೆಗಡುಕರನ್ನಾಗಿ ಮಾಡುವುದಲ್ಲವೇ? ಬಹಿರಂಗ ಸಭೆಯಲ್ಲಿ ಸಾಮರಸ್ಯ, ಶಾಂತಿ ಎಂದು ನಾಟಕವಾಡುತ್ತ ಗುಪ್ತ ಬೈಠಕ್‌ಗಳಲ್ಲಿ ಅಮಾಯಕರ ಹತ್ಯೆಯ ಸಂಚುಗಳು ರೂಪುಗೊಳ್ಳುತ್ತಿಲ್ಲವೇ?

ಭುವಿತ್ ಶೆಟ್ಟಿಯಂಥ ಲಕ್ಷಾಂತರ ಯುವಕರ ತಲೆಯಲ್ಲಿ ಜನಾಂಗ ದ್ವೇಷದ ವಿಷಬೀಜ ಬಿತ್ತಿ ಅವರ ಬದುಕನ್ನು ಹಾಳು ಮಾಡಿದವರು ಯಾರು? ಅಸಹಿಷ್ಣುತೆ ಪ್ರತಿಭಟಿಸಿ ಸಾಹಿತಿಗಳು ಪ್ರಶಸ್ತಿ ವಾಪಸು ಮಾಡಿದರೆ ‘‘ಎಲ್ಲಿದೆ ಅಸಹಿಷ್ಣುತೆ’’ ಎಂದು ಕೂಗುಮಾರಿಗಳಂತೆ ಅರಚಾಡುವವರು ಹರೀಶ್ ಪೂಜಾರಿ ಹತ್ಯೆಯ ಬಗ್ಗೆ ಅವರೇನು ಹೇಳುತ್ತಾರೆ?
ಇದೇ ಭಾರತದ ನವೀನ ಫ್ಯಾಶಿಸಂನ ಸ್ವರೂಪ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುತ್ತದೆ. ಸಂಸತ್ ಕಲಾಪ ಅದರ ಪಾಡಿಗೆ ನಡೆಯುತ್ತಿರುತ್ತದೆ. ಪ್ರಧಾನಿ ಸಂಸತ್ತಿನಲ್ಲಿ ‘‘ಭಾರತವೇ ಸರಕಾರದ ಧರ್ಮ’ ಎಂದು ಹೇಳುತ್ತಿರುತ್ತಾರೆ. ಹೊರಗಡೆ ಘರ್‌ವಾಪಸಿ, ದಾದ್ರಿ ಹತ್ಯಾಕಾಂಡ, ದಲಿತರ ಕಗ್ಗೊಲೆ ಕೋಮು ಪ್ರಚೋದನೆಗಳು ನಡೆಯುತ್ತಿರುತ್ತವೆ. ಹಿಟ್ಲರ್‌ನಂತೆ ತುರ್ತುಸ್ಥಿತಿ ಹೇರದೆ ಫ್ಯಾಶಿಸಂ ಇಲ್ಲಿ ಕರಾಳರೂಪದಲ್ಲಿ ಬರುತ್ತದೆ. ಆದರೆ ಇಲ್ಲಿ ಅಂಬೇಡ್ಕರ್ ರೂಪಿಸಿದ ಸಂವಿಧಾನವಿದೆ. ಗಾಂಧಿ ನೆಹರೂ ಹಾಕಿದ ಪ್ರಜಾಪ್ರಭುತ್ವದ ಪರಂಪರೆ ಅಚಲವಾಗಿದೆ. ಸಾರ್ವಜನಿಕ ಅಭಿಪ್ರಾಯ ಜಾಗೃತವಾಗಿದೆ. ಮಾಧ್ಯಮಗಳು ಎಷ್ಟೇ ತಪ್ಪುಗಳ ನಡುವೆಯೂ ಕ್ರಿಯಾಶೀಲವಾಗಿವೆ. ಜನಪರ ಸಂಘಟನೆಗಳು ಜೀವಂತವಾಗಿವೆ. ಹೀಗಾಗಿ ಮೋಹನ್ ಭಾಗವತ್‌ರ ಹಿಟ್ಲರ್ ಮಾದರಿ ಹಿಂದೂರಾಷ್ಟ್ರದ ಹುನ್ನಾರ ಯಶಸ್ವಿಯಾಗುವುದಿಲ್ಲ.

ಭಾರತದ ಫ್ಯಾಶಿಸಂನ ಈ ಭಯಾನಕ ಸ್ವರೂಪದ ಬಗ್ಗೆ ಜಾಗೃತಿ ಮಾಡಿಸಬೇಕಿದೆ. ೧೯೪೭ರಿಂದ ೧೯೯೨ರವರೆಗೆ ಈ ದೇಶ ನೆಮ್ಮದಿಯಾಗಿತ್ತು. ತೊಂಬತ್ತರ ದಶಕದ ಬಾಬರಿ ಮಸೀದಿ ನೆಲಸಮ ಘಟನೆ ಅನಂತರ ಪರಿಸ್ಥಿತಿ ಬಿಗಡಾಯಿಸುತ್ತಲೇ ಬಂದಿದೆ. ಮೊದಲು ಬ್ರಾಹ್ಮಣ, ಬನಿಯಾ ಸಂಘಟನೆ ಎಂದು ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಆರೆಸ್ಸೆಸ್, ನಿರಂತರ ದ್ವೇಷದ ವಿಷಬೀಜ ಬಿತ್ತಿ ಹಿಂದೂ, ಮುಸಲ್ಮಾನ, ಕ್ರೈಸ್ತರ ನಡುವೆ ಅಲ್ಲಲ್ಲಿ ಅಪನಂಬಿಕೆಯ ಕಂದಕ ನಿರ್ಮಿಸಿದೆ. ಜಗತ್ತಿನ ಬಂಡವಾಳಶಾಹಿ ಮತ್ತು ಭಾರತದ ಬ್ರಾಹ್ಮಣ ಬಿಕ್ಕಟ್ಟಿನಲ್ಲಿದ್ದಾಗ ಇಂಥ ಹುನ್ನಾರಗಳನ್ನು ನಡೆಸುತ್ತದೆ. ಅಲ್ಪಸಂಖ್ಯಾತರನ್ನು ಮೂಲೆಗೆ ತಳ್ಳಿದ ಅನಂತರ ದಲಿತರು ಮತ್ತು ಹಿಂದುಳಿದವರ ಮೀಸಲಾತಿಯನ್ನು ನಾಶ ಮಾಡುವ ರಹಸ್ಯ ಕಾರ್ಯಸೂಚಿಯನ್ನು ಅದು ಹೊಂದಿದೆ. ಇದನ್ನು ಮೋಹನ್ ಭಾಗವತ್ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದಾರೆ. ಇಂಥ ಸನ್ನಿವೇಶದಲ್ಲಿ ಫ್ಯಾಶಿಸಂಗೆ ವಿರೋಧವಾದ ಬಲಿಷ್ಠ ಅಲೆಯೊಂದು ಈ ದೇಶದಲ್ಲಿ ಬರಬೇಕಾಗಿದೆ. ಪ್ರಗತಿಪರ, ಜಾತ್ಯತೀತ, ದಲಿತ, ಹಿಂದುಳಿದ ಜನವರ್ಗಗಳು ಈ ದೇಶವನ್ನು ಉಳಿಸಲು ಒಂದಾಗಿ ನಿಲ್ಲಬೇಕಾಗಿದೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...