Thursday, November 19, 2015

ಸೆಲೆಬಿರಿಟಿ ಆಗುತ್ತಿರುವ ಸ್ವಾಮಿಗಳು


ಡಾ ಶಶಿಕಾಂತ ಪಟ್ಟಣ -ಪೂನಾಸೆಲೆಬಿರಿಟಿ ಆಗುತ್ತಿರುವ ಸ್ವಾಮಿಗಳು 

 
ಸಮತೆಯೇ ಭಕ್ತಿ,
ಸತ್ಯವೆ ಲಿಂಗವು,
ಅಸತ್ಯವೇ ಅನ್ಯದೈವ
ರೋಷವಿಲ್ಲದಿಹುದೇ ಪೂಜೆ,
ಆಸೆಇಲ್ಲದಿಹುದೇ ಪ್ರಸಾದ,
ಇಷ್ಟಲಿಂಗದಲ್ಲಿ ನಿರತನಾಗಿದ್ದಾತನೆ
ಕಪಿಲಸಿದ್ಧಮಲ್ಲೇಶ್ವರ ದೇವನು
 
 
 
 
 
ಹನ್ನೆರಡನೆಯ ಶತಮಾನವು ದೇಶವು ಕಂಡ ಸುವರ್ಣ ಯುಗ .ಬಸವಣ್ಣ ಅಲ್ಲಮ ಅಕ್ಕ ಮಹಾದೇವಿ ,ಸಿದ್ದರಾಮ ,ಚೆನ್ನಬಸವಣ್ಣ ,ಮಡಿವಾಳ ಮಾಚಿತಂದೆ ,ಹರಳಯ್ಯ ,ಕಕ್ಕಯ್ಯ ,ದಾಸಿಮಯ್ಯ ಮುಂತಾದ ೭೭೦ ಅಮರ ಗಣ೦ಗಳು. ಬಸವ ಪೂರ್ವದಲ್ಲಿದ್ದ ಶಿವ ಪ್ರಭೇದಗಳಾದ ಕಾಳಮುಖಿ,ಲಕುಲಿಶ  , ಮುಂತಾದವರು ಶರಣ ಚಳುವಳಿಯಲ್ಲಿ ಪಾಲ್ಗೊಂಡರು.  ಕಲ್ಯಾಣದ ಕ್ರಾಂತಿಯ ನಂತರ ಮತ್ತೆ ತಮ್ಮ ಶೈವ ಧರ್ಮದ ಉಳಿವಿಗಾಗಿ ತಮ್ಮ ಅಸ್ತಿತ್ವಕ್ಕೆ ಮಠಗಳ ವ್ಯವಸ್ಥೆ 
ಮಾಡಿಕೊಂಡರು.

     ಗುಡಿ ವ್ಯವಸ್ಥೆಯನ್ನು ಕಟುವಾಗಿ ವಿರೋದಿಸಿದ ಶರಣರು ಮಠಗಳನ್ನು ಹೇಗೆ ಒಪ್ಪಿಕೊಂಡರು ಎನ್ನುವದು ಯಕ್ಷ ಪ್ರಶ್ನೆ? ಅಥವಾ ಕಲ್ಯಾಣ ಕ್ರಾಂತಿಯ ನಂತರ ಮಠಗಳ ವ್ಯವಸ್ಥೆ ಹುಟ್ಟಿಕೊಂಡವೆ ಎಂಬುದು ನಮ್ಮ ಸಂಶಯ .ಅಹುದು ಬಸವ ಪೂರ್ವಯುಗದಲಿದ್ದ ಅನೇಕ ಶೈವ ಪ್ರಭೆದಗಳದ ಕಾಳಮುಖಿ .ಲಕುಲಿಶ .ಕಾಪಾಲಿಕ ,ಮುಂತಾದ ಕೆಲ ಶೈವರು ಶರಣ ಸಂಸ್ಕೃತಿಯಲ್ಲಿ ಬಸವ ಧರ್ಮದಲ್ಲಿ ಸೇರಿಕೊಂಡು ಕಲ್ಯಾಣ ಕ್ರಾಂತಿಯ ನಂತರ ಈ ಶೈವ  ಪ್ರಭೇದಗಳು ತಮ್ಮ ತಮ್ಮ ಅಸ್ತಿತ್ವ ಉಳುಸಿಕೊಳ್ಳಲು ಇಂತಹ ಮಠಗಳ ವ್ಯವಸ್ಥೆಯನ್ನು ಹುಟ್ಟು ಹಾಕಿದವು .

ಮಠದೊಳಗಿನ ಬೆಕ್ಕು ಇಲಿಯ ಕಂಡು ಪುಟಿದು ನೆಗೆದಂತಾಗಿತ್ತೆನ್ನ ಭಕ್ತಿ -ಎಂದು ದೇವರ ದಾಸಿಮಯ್ಯ ಮಠಗಳ ವ್ಯವಸ್ಥೆಯನ್ನು ಅಂದಿನ ಡಾಂಭಿಕ  ಪದ್ದತಿಯನ್ನು ಟೀಕಿಸಿದ್ದಾರೆ .
 
ಲಿಂಗಾಯತ ಧರ್ಮದ ಹಾಗೂ ಅದರ ಮಠಗಗಳು ಪ್ರಾಯಶಯ ೧೫-೧೬ನೆ ಶತಮಾನದಲ್ಲಿ ಕಾಳಾಮುಖಿ ಶೈವರಿಂದ ಹುಟ್ಟಿಕೊಂಡಿವೆ. 15 ನೆ ಶತಮಾನದಲ್ಲಿ  ಎಡೆಯೂರು ಸಿದ್ದಲಿಂಗ ಯತಿಗಳು ಹಾಗೂ ೧೦೧ ವಿರಕ್ತರು ದೇಶದ ತುಂಬೆಲ್ಲ ಸಂಚರಿಸಿ ಶರಣರ ವಚನಗಳನ್ನು ಸಂಗ್ರಹಿಸಿ ಸಂಪಾದಿಸಿ ಬಸವ ಚಳುವಳಿಗೆ ಮತ್ತೆ ಜೀವ ನೀಡಿದರು .ಆದರೆ ಅವರು ಕೂಡ ಮಠದ ವ್ಯವಸ್ಥೆಯನ್ನು ಬೆಳೆಸಲಿಲ್ಲ . ಕಾಲಘಟ್ಟದಲ್ಲಿ ಕೆಲ ಕುತಂತ್ರಿ ಶೈವರು ಬಸವಣ್ಣನ ಹೆಸರು ಬಂಡವಾಳ ಮಾಡಿ ಮಠಗಳ ವ್ಯವಸ್ಥೆಯನ್ನು ಬೆಳೆಸಿದರು . ಅಂದು ಬಸವಣ್ಣನಿಗೆ ಹಾಗು ಆತನ ಕ್ರಾಂತಿಗೆ ಮುಳುವಾದವರು ವೈದಿಕ ಸನಾತನಿಗಳು ಸಂಪ್ರದಾಯಿಗಳು . ಆದರೆ ಇಂದು ಬಸವ ಧರ್ಮಕ್ಕೆ ಮುಳುವಾದವರು ಜಾತಿ ಜಂಗಮರು ಮಾಹೆಶ್ವರರು ಅಥವಾ ಅಯ್ಯನವರು .ಇದು ಮಠದ ಹುಟ್ಟು ಬೆಳವಣಿಗೆಗೆ ಕಾರಣವಾಯಿತು .
 
                     ಲಿಂಗಾಯತ ಸ್ವಾಮಿಗಳಿಗೆ  ಬಸವ ತತ್ವದ ಅರಿವಿಲ್ಲ ,ಆದರೆ ಬಸವಣ್ಣನ ಹೆಸರು ಬಳಿಸಿ ಉಧ್ಯಮ ಸುರು ಮಾಡಿದ್ದಾರೆ .ಪಾದ ಪೂಜೆ ,ಲಕ್ಷದೇಪೊತ್ಸವ -ಒಂದು ಶೋಷಣೆಯಲ್ಲವೇ? ಕೋಟಿ ಬಿಲ್ಲವಾರ್ಚನೆ ಯಾವ ಪುರುಷಾರ್ಥಕ್ಕೆ ?ಗದ್ದಿಗೆ ಪೂಜೆ ಹವನ ಹೋಮ ಪಾದುಕೆ ಪೂಜೆ ಅನೇಕ ಮಠಗಳಲ್ಲಿ ಇನ್ನು ಮೂರ್ತಿ ಪೂಜೆ ಜೀವಂತವಾಗಿದೆ. ಇದು ಬುದ್ಧ ಬಸವ ತತ್ವಗಳಿಗೆ ವಿರೋದವಾಗಿದೆ . ಮಠದ ಸ್ವಾಮಿಗಳಿಗೇಕೆ  ಬೇಕು ಚಿನ್ನದ ಕಿರೀಟ ಮತ್ತು ಬೆಳ್ಳಿಯ ಸಿಂಹಾಸನ ,ಯಾಕೆ ಈ ಪ್ರಗತಿಪರ ಮಠಾಧೀಶರು ಒಮ್ಮೊಮ್ಮೆ ಜಾಣ ಮೌನ ತೋರುತ್ತಾರೆ ? ಇತ್ತೀಚಿಗೆ ಮಠಾಧೀಶರು ಸೆಲೆಬ್ರಿಟಿಗಳಾಗುತ್ತಿದ್ದಾರೆ .
 
          ಸ್ವಾಮೀಗಳಿಗೆ   ಕೇಂದ್ರ ಹಾಗೂ ರಾಜ್ಯ ಶಾಸನದ ಅನುದಾನವೆಕೆ ಬೇಕು ?ಇದ್ದ ಬಡ ವಿದ್ಯಾರ್ಥಿಗಳ ವಸತಿನಿಲಯ  ಕೆಡುವಿ, ಕಲ್ಯಾಣ ಮಂಟಪವನ್ನು ಕಾಲೇಜು ಆಗಿ ಪರವರ್ತಿಸಿದ ಶ್ರೀಗಳ  ಸ್ವಾಮಿಗಳು ಜನರಿಂದಾ ತುಂಬಾ ದೂರ ಸರೆದಿದ್ದಾರೆ .ಸರಕಾರದ ದುಡ್ಡಿಗೆ ಜೊಲ್ಲು ಸುರಿಸುವ ಹಾಗೂ ಭಕ್ತರು ಕೊಟ್ಟ ಆಸ್ತಿಯನ್ನು ತಮ್ಮ ಸ್ವಂತಿಕೆಗೆ ಬಳಸುವ ಸ್ವಾಮಿಗಳು ಮೊದಲು ತಮ್ಮ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲಿ ,ಡೊನೇಷನ್ ಗಾಗಿ ಮೆಡಿಕಲ್ ಇ೦ಜಿನಿಯರಿಂಗ ಕಾಲೇಜು ಆರಂಭಿಸುವ ಅನೇಕ ಸ್ವಾಮಿಗಳು ತಮ್ಮ ಮೂಲ ಕರ್ತವ್ಯವನ್ನು ಮರೆತಿದ್ದಾರೆ .ಪ್ರತಿಯೊಬ್ಬ ಶ್ರೀಗಳು ಭಕ್ತರಲ್ಲಿ ತಮ್ಮ ಹಾಗು ತಮ್ಮ ಗುರುಗಳ ನಿಷ್ಠೆಯನ್ನು ಬೆಳಿಸಿದ್ದಾರೆ ಹೊರತು ಬಸವ ಪ್ರಜ್ಞೆಯನ್ನು ಬೆಳೆಸಲಿಲ್ಲ .ಅನೇಕ ಮಠಗಳಲ್ಲಿ ಇನ್ನೂ ಬಸವ ಅಲ್ಲಮರ ಅಕ್ಕನ ಸಿದ್ದರಾಮರ ಮಡಿವಾಳನ  ಭಾವ ಚಿತ್ರಗಳಿಲ್ಲ ,ಶರಣರ ಭಾವ ಚಿತ್ರವಿರುವ ಮಠಗಳು ಇಲ್ಲವೆ ಇಲ್ಲ . ಆದರೆ ತಮ್ಮ ಮಠದ ಮೂಲ ಪುರುಷರ ಭಾವಚಿತ್ರ ಅವರ ಜನ್ಮ ಶತಮಾನೋತ್ಸವ ,ಪುಣ್ಯತಿಥಿಯಲ್ಲಿ ತಮ್ಮನ್ನು ತಮ್ಮ ಶ್ರೀಗಳನ್ನು ವೈಭವಿಕರಿಸುವ ಕೆಲಸದಲ್ಲಿ ಸ್ವಾಮಿಗಳು ಕಾಲ ಹರಣ ಮಾಡುತ್ತಿದ್ದಾರೆ .
 
        ಒಂದು  ವೇಳೆ  ಮೇದಾರ ಕೇತಯ್ಯ ಮಡಿವಾಳ ಮಾಚಿದೇವ ,ಸಮಗಾರ ಹರಳಯ್ಯ ,ನುಲಿಯ ಚಂದಯ್ಯ ಅಂಬಿಗರ ಚೌಡಯ್ಯನ ,ಮಾದರ ಚನ್ನಯ್ಯರ ಭಾವ ಚಿತ್ರ ಮತ್ತು ಈ ಶರಣರ ಜಯಂತಿಯನ್ನು ಕಡ್ಡಾಯವಾಗಿ ಮಠಗಳಲ್ಲಿ ಆಚರಣೆ ಮಾಡಿದ್ದೆ ಆದರೆ ಖಂಡಿತ ಲಿಂಗಾಯತ ಧರ್ಮ ಇಂದಿನ ಪರಿಸ್ತಿತಿಗೆ ಬರುತ್ತಿರಲಿಲ್ಲ .ಬಹುತೇಕ ಮಠಗಳು ಬಸವಣ್ಣನನ್ನು ಮಾತ್ರ ಮುಂದೆ ಮಾಡಿ ಸಿಕ್ಕಾ ಪಟ್ಟೆ ಹಣ ಆಸ್ತಿ ಮಾಡಿ ಈಗ ಸಮಾಜದಿಂದ ದೂರವಾಗುತ್ತಿದ್ದರೆ .
 
ಸ್ವಾಮಿಗಳಿಗೆ ಹಣ ಆಸ್ತಿ ಅಂತಸ್ತು ಮುಖ್ಯ .ಅಥಣಿಯ ಶ್ರೀ ಮುರುಗೆಂದ್ರ ಶಿವಯೋಗಿಗಳು ಸ್ವಾಮಿಗಳು , ಮುಳುಗುಂದದ ಬಾಲಲೀಲಾ ಶ್ರೀ ಮಹಾಂತ ಶಿವಯೋಗಿಗಳು ,ಮುರುಗೋಡದ ಶ್ರೀ ಮಹಾಂತ ಶಿವಯೋಗಿಗಳು ,ಕಲ್ಲೆಮಠದ ಘನಲಿಂಗ ಚಕ್ರ ವರ್ತಿಗಳು,ಸರ್ಪಭೂಷ ಶಿವಯೋಗಿಗಳು  ಇಂತಹ ಮಹಾ ಮಣಿಹ ಶ್ರೀಗಳು ನಮ್ಮ ಇಂದಿನ  ಮಠದ ಸ್ವಾಮಿಗಳಿಗೆ  ಏಕೆ ಕಾಣುವದಿಲ್ಲ ?
 
       ಬಸವಣ್ಣ ಜಗವು ಕಂಡ ಶ್ರೇಷ್ಠ  ಚಿಂತಕ -ಶ್ರಮಿಕ ಜನವನ್ನು ಸಂಘಟಿಸಿ ಎಲ್ಲ ಭೇಧಗಳನ್ನು ಕಿತ್ತು ಹಾಕಿ ಸರ್ವತಂತ್ರ ಸ್ವತಂತ್ರ ಸಮಾನತೆಯ ಸಮಾಜವನ್ನು ಕಟ್ಟಿದ ಹೆಗ್ಗಳಿಕೆ ಅಪ್ಪ ಬಸವಣ್ಣನಿಗೆ ಸಲ್ಲಲೇ ಬೇಕು.ಪೌರೋಹಿತ್ಯರ ಕಪಿ ಮುಷ್ಟಿ ಯಲ್ಲಿ ಸಮಾಜ ನಲುಗಿತ್ತು . ಅಂಧ ಶ್ರದ್ಧೆ ಕಂಧಾಚಾರ ,ಪ್ರಾಣಿಬಲಿ , ಹೆಣ್ಣು ಶಿಶು ಹತ್ಯೆ .ಯಜ್ಞ ಹವನ  ಹೋಮ ಕಲ್ಲು ಪೂಜೆ ಮೂರ್ತಿ ಪೂಜೆ, ಅಸ್ಪ್ರಶ್ಯತೆ  ,ಇಂತಹ ಅನೇಕ ಸಮಸ್ಯೆಗಳಿಗೆ  ಬಸವಣ್ಣ ಉತ್ತರವಾದನು .ಎಲ್ಲವನ್ನು ಹೊರತುಪಡಿಸಿ ಸುಂದರ ಸಮಾಜವನ್ನು ಬಸವಣ್ಣ ನಿರ್ಮಿಸಿದ .ಅದುವೇ ಲಿಂಗವಂತ ಧರ್ಮ .
 
                     
  ಸ್ಥಾವರಕ್ಕೆ ಬಾಗಿದ ಭಕ್ತರು ಮತ್ತು ಸ್ವಾಮಿಗಳು


        ದಲಿತರಿಗೆ  ಮಹಿಳೆಯರಿಗೆ ಗುಡಿ ಗುಂಡಾರಗಳಲ್ಲಿ ಪ್ರವೇಶ ನಿರಾಕರಿಸಿದಾಗ ಅದಕ್ಕೆ ಪರ್ಯಾಯವಾಗಿ ದೇಹವನ್ನೇ ದೇವಾಲಯ ಮಾಡಿದ ಮಹಾನುಭಾವ ಬಸವಣ್ಣ .ನಮ್ಮ ಚಿತ್ಕಳೆಯನ್ನೇ ಅರಿವಿನ ಕುರುಹಾಗಿ  ಇಸ್ಟಲಿಂಗವನ್ನು  ಭಕ್ತನ ಕೈಗೆ ಕೊಟ್ಟ ಬಸವಣ್ಣನ ಆಶಯಗಳಿಗೆ ಇಂದು ಕೊಡಲಿ ಏಟು ನೀಡಲು ಅನೇಕರು ಸನ್ನದ್ಧರಾಗಿದ್ದಾರೆ
 
                                           ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
                                              ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
                                                   ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
                                                        ದೈವ ದೈವವೆಂದು ಕಾಲಿಡಲಿಂಬಿಲ್ಲ,
                                                      ದೈವನೊಬ್ಬನೆ ಕೂಡಲಸಂಗಮದೇವ

 ಇಂದು ಮಾತಾಜಿ ೧೦೮  ಅಡಿ ಕಾವಿದಾರಿ ಬಸವಣ್ಣನನ್ನು ಬಸವ ಕಲ್ಯಾಣದಲ್ಲಿ ನಿರ್ಮಿಸಿದ್ದಾರೆ ,ಬಸವಣ್ಣ ಕಾವಿಯನ್ನು ಎಂದು ಒಪ್ಪಿಲ್ಲ ,ಗದಗ ನಲ್ಲಿ ೧೧೧ ಫೂಟಿನ ಬಸವಣ್ಣನ ಕಂಚಿನ ಮೂರ್ತಿ ,ಸಧ್ಯ ಚಿತ್ರದುರ್ಗದ ಶ್ರೀ ಮುರುಘಾ ಶರಣರು 262    ಅಡಿಯ ೧೫೮ ಕೋಟಿ ಹಣದಲ್ಲಿ ಕಂಚಿನ ಪ್ರತಿಮೆ ನಿಲ್ಲಿಸಲು ಹೊರಟಿದ್ದು ಖಂಡನೀಯ.
 
        ಸ್ಥಾವರದಿಂದ ಮತ್ತೆ ದುಡ್ಡು ಮಾಡುವ ಹುನ್ನಾರ ನಮ್ಮ ಶ್ರೀಗಳಿಗೆ , ಲಿಂಗ ಒಂದು ವಸ್ತು ಅಲ್ಲ ಅದು ಸಮಷ್ಟೀಯ ಪ್ರತೀಕ .ಲಿಂಗವ ಪೂಜಿಸಿ ಫಲವೇನು ? ಎರೆದರೆ ನೆನೆಯದು ಮರೆದರೆ ಬಾಡದು ಹುರುಲಿಲ್ಲಾ ಹುರುಳಿಲ್ಲ ಲಿಂಗಾರ್ಚನೆ,  ಜಂಗಮಕ್ಕೆ ಎರೆದರೆ ಸ್ಥಾವರ ನೆನೆಯಿತ್ತು ,ಮರದ ಬಾಯಿ ಬೇರೆಂದು ಕೆಳಕ್ಕೆ ನೀರೆರದರೆ ಮೇಲೆ ಪಲ್ಲವಿಸಿತ್ತು ,ಲಿಂಗದ ಬಾಯಿ ಜಂಗಮ ಅಂತ ಸಕಲ ಪಡಿ ಪದಾರ್ಥ ನಿಡು " ಬಸವಣ್ಣನವರಿಗೆ  ಜಂಗಮ ಚೇತನವನ್ನು ಗೌರವಿಸಿದ ಆದರಿಸಿದ ಸಮಾಜ ವಿಜ್ಞಾನಿ .
   
             ಆದಿಯಲ್ಲಿ ನೀನೇ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
ಆದಿಯಲ್ಲಿ ನೀನೇ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ
ಆದಿಯಲ್ಲಿ ನೀನೇ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ ಪ್ರಸಾದ
ಆದಿಯಲ್ಲಿ ನೀನೇ ಪ್ರಸಾದಿಯಾದ ಕಾರಣ
ಗುಹೇಶ್ವರ ಲಿಂಗದಲ್ಲಿ ಚಂದಯ್ಯಂಗೆ ಲಿಂಗದ ನಿಜವ ತಿಳುಹಿಸ ಸಂಗನಬಸವಣ್ಣ..

ಅನೇಕ ಬಾರಿ ಗುರು ವಿರಕ್ತರು ಹೊರಗೆ ಬಡೆದಾಡಿದರು, ಒಳಗೊಳಗೇ ಒಂದೇ ಆಗಿರುತ್ತಾರೆ, ಪಂಚ ಪೀಠದ ಜಗದ್ಗುರುಗಳು ೧೪-ಮತ್ತು ೧೫ ನೆ ಶತಮಾನದಲ್ಲಿ ಉಗಮವಾದರು .ಅಲ್ಲಿಯವರೆಗೆ ವೀರಶೈವ ಅಂತ ಇರಲಿಲ್ಲ.ಈಗ ಗುರು ವಿರಕ್ತರ ಮದ್ಧೆ ಇರುವ ಜಗಳ ಅಂದ್ರೆ ,ಬಸವಣ್ಣ ಲಿಂಗಾಯತ ಧರ್ಮಸ್ಥಾಪಿಸಿದರು ಅಂತ ಬಸವ ಭಕ್ತರು ವಿರಕ್ತರು ಹೇಳಿದರೆ ,ಪಂಚ ಪೀಠ ದ ಜಗದ್ಗುರುಗಳು ಇವರು ಬಸವ ಪೂರ್ವದ ವೀರಶೈವ ಧರ್ಮದ ಕಪೋಲಕಲ್ಪಿತ ವಿಚಾರಗಳನ್ನು ಇಡುತ್ತಾರೆ .
 
ಹಾನಗಲ ಶ್ರೀ ಕುಮಾರೇಶ್ವರ ಸ್ವಾಮಿಗಳು  ೧೯೦೬ ರಲ್ಲಿ ಶಿವಯೋಗ ಮಂದಿರ ಸ್ಥಾಪನೆ ಮಾಡಿದ ಮೇಲೆ ಅದು ಕೇವಲ ಮಾಹೇಶ್ವರ ವರ್ಗಕ್ಕೆ ಸೇರಿದ ಸ್ವಾಮಿಗಳನ್ನು ಸ್ಥಾಪಿಸುವ ಫ್ಯಾಕ್ಟರಿ ಆಗಿ ಪರಣಮಿಸಿತು. ಅಲ್ಲೊಂದು ಇಲ್ಲೊಂದು ಭಕ್ತವರ್ಗದ ಜನರನ್ನು ಬಿಟ್ಟರೆ ೯೦ % ವಟುಗಳು ಜಾತಿಯಿಂದಾ ಜಂಗಮರು..
 
ಹೀಗಾಗಿ ಇಲ್ಲಿ ಹುಟ್ಟುವ ವಿವಾದಕ್ಕೆ ಪ್ರಭುದೇವರು ಉತ್ತರ ನೀಡಿದ್ದಾರೆ. ಬಸವಣ್ಣನವರು ಲಿಂಗಾಯತ ಧರ್ಮದ  ಸ್ಥಾಪಕರು ಮತ್ತು ಧರ್ಮ ಗುರುಗಳು . ಇಂದು ಗುರುಗಳು ವಿರಕ್ತರು .ಮಾತಾಜಿ  ಪಂಚ ಪೀಠದವರು ತಮ್ಮನ್ನು ಜಗದ್ಗುರು ಅಂತ ಹೇಳಿಕೊಂಡಿದ್ದಾರೆ .

ಜಾತಿಗೊಬ್ಬ ಜಗದ್ಗುರು ಮತ್ತು ಉಪಪಂಗಡಗಳ ಸಮಾವೇಶ  

ಓಲೆ ಹತ್ತಿ ಉರಿದೊಡೆ ನಿಲ್ಲ ಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಲುಬಹುದೇ ? ಎಂದು ಅಪ್ಪ ಬಸವಣ್ಣನವರೆ ಕೇಳಿದಾಗ .ಜವಾಬ್ದಾರಿಯುತವಾದ ಸ್ವಾಮಿಗಗಳು ಪೀಠಧಿಪತಿ ಇಂದು ಜಾತಿಗೊಂದು ಜಗದ್ಗುರು ಅಂತ ಮಾಡಿರುವುದು ಖಂಡನೀಯ ಮತ್ತು ನಾಚಿಕೆಗೆಡಿತನ.ಇಂದು ಲಿಂಗಾಯತ ಧರ್ಮದ ಪ್ರತಿಯೊಂದು ಉಪಪಂಗಡವು  ಪೀಠ ಹೊಂದಿದೆ. ಜಾತಿಗೊಬ್ಬ ಜಗದ್ಗುರು ಹೀಗಾಗಿ ಲಿ೦ಗಾಯತ ಧರ್ಮವು ಸಂಘಟನೆಗಿಂತ ವಿಘಟನೆಯತ್ತ ಸಾಗಿದೆ , ಇಂದು ಪಂಚಮಸಾಲಿ .ಬಣಜಿಗರು,ನೋಣಬರು ಸಾದರು,ಬಣಗಾರರು ,ಕುರುಹಿನಶೆಟ್ಟಿ, ಜಂಗಮ ,ಸಿಂಪಿ ,ಜಾಡರು,ಒಕ್ಕಲಿಗರು  ಕುಡ ಒಕ್ಕಲಿಗರು,ಗಾಣಿಗರು ಮಡಿವಾಳರು  ಹೀಗೆ  ಎಲ್ಲ ಉಪ ಜಾತಿ ಮತ್ತು  ಉಪಪಂಗಡಗಳ ಸಮಾವೇಶಗಳು ಅತ್ಯಂತ ಅದ್ಧೂರಿಯಾಗಿ ನಡೆದಿವೆ .ದುರಂತವೆಂದರೆ ಸಮಾಜವನ್ನೇ ಸಂಘಟಿಸುವ ಸ್ವಾಮಿಗಳು ಇಂತಹ ಉಪಪಂಗಡಗಳ ಸಮಾವೇಶದಲ್ಲಿ ಪಾಲ್ಗೊಂಡು ಬಸವಣ್ಣನವರ  ಆಶಯಕ್ಕೆ ಎಳ್ಳು ನೀರು ಬಿಡುತ್ತಾರೆ . .
 
ಇಂದು ಲಿಂಗವಂತರ ಪರಿಸ್ಥಿತಿ ಹೇಗಾಗಿದೆ ಅಂದರೆ ಮುಳುಗಲಾಗದ ತೆಲಲೂ ಆಗದ ಸ್ಥಿತಿ ಆಗಿದೆ .ಕಾಲಲಿ ಕಟ್ಟಿದ ಗುಂಡು ಕೊರಳಲ್ಲಿ ಕಟ್ಟಿದ ಬೆಂಡು ತೇಲಲಿಯದು ಗುಂಡು ಮುಳಗಲಿಯದು ಚೆಂಡು ,ಎಂದು ಬಸವಣ್ಣನವರೆ ನೋವು ತೋಡಿಕೊಂಡಂತೆ ಆಗಿದೆ ನಮ್ಮ ಪರಿಸ್ಥಿತಿ .

            ಮೌಡ್ಯಗಳ ಮಹಾ ಸಂಪುಟವಾದ ಮಠಗಳು .
       
ಮಠಗಳು ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸುವ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳಾಗಬೇಕು .ಶರಣರ ಕ್ರಾಂತಿಯು ಭಕ್ತರಿಗೆ ತಲುಪಬೇಕು
 
  ಆದರೆ ಬಸವಾದಿ ಶರಣರ ವಚನಗಳು ಕನ್ನಡವನ್ನು ವಿಶ್ವ ಮಟ್ಟಕ್ಕೆ ಒಯ್ದ ಕೀರ್ತಿ ಇದ್ದರೆ, ನಮ್ಮ ಸ್ವಾಮಿಗಳು ಮಠದೊಳಗಿನ  ಕನ್ನಡ ಶಾಲೆಗಳನ್ನು ಮುಚ್ಚಿಸಿ ಅಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಂಬಿಸಿದ್ದಾರೆ  .ಇನ್ನು ಅನೇಕ ಮಠಗಳಲ್ಲಿ ಸಂಸ್ಕೃತ ಪಾಠಶಾಲೆಗಳು ರಾರಾಜಿಸುತ್ತಿವೆ.ಇದು ಸ್ವಾಮಿಗಳ ಪೌರೋಹಿತ್ಯ ಮನಸ್ಸು ಪ್ರತಿನಿಧಿಸುತ್ತಿದೆ .ನಾಡಿನ ಶ್ರೇಷ್ಠ ಮಠದ ಜಗದ್ಗುರು ಕನ್ನಡಕ್ಕೆ ಉಪವಾಸ ಕುಳಿತವರು ,ಕನ್ನಡಕೊಬ್ಬನೇ ಜಗದ್ಗುರು ,ಜನತಾ ಜಗದ್ಗುರು ಎಂಬುವ ಸ್ವಾಮಿಗಳು  ಸಹಿತ ಕಾನ್ವೆಂಟ ಇಂಗ್ಲಿಷ ಮಾಧ್ಯಮ ಶಾಲೆಗಳನ್ನು ತೆಗೆದಿದ್ದಾರೆ .
 
               ಮಠಗಳಲ್ಲಿ ಒಳಪಂಕ್ತಿಯ ಯ ಹೊರಪಂಕ್ತಿಯ ಜಾತಿಬೇದದ   ಪ್ರಸಾದದ ವ್ಯವಸ್ಥೆ ಇರುತ್ತೆ  . ಶ್ರೀಮಂತರಿಗೆ ಮ್ರುಷ್ಟಾನ್ನದ ಆದರ ,ಬಡವರಿಗೆ ದಲಿತರಿಗೆ ಕೂಳು ಕುಚ್ಚುವ ಪ್ರಸಂಗ ಕಾಣುತ್ತೇವೆ .ವೈದಿಕತೆಯ ಸಂಪ್ರದಾಯಗಳು ಇನ್ನು ಲಿಂಗಾಯತ ವಿರಕ್ತ ಬಸವ ಪರಮಪರೆಯಲ್ಲಿ ಬಂದಿವೆ .
 
ಅವುಗಳಲ್ಲಿ  ೧ )ಅಯ್ಯಾಚಾರ   ೨) ಪಾದಪೂಜೆ / ಕರಣ ಪ್ರಸಾದ ೩ ) ಮಠದೊಳಗಿನ ಗದ್ದಿಗೆ ಪೂಜೆ ೪ ) ಬಿಲ್ವಾರ್ಚನೆ ಪಂಚಭಿಸೇಕ ,ರುದ್ರಾಭಿಸೇಕ ,
 
೫ ) ಲಕ್ಷದೀಪೋತ್ಸವ  ೬ )ಅಡ್ಡಪಲ್ಲಕ್ಕಿ ೭ ) ಸ್ವಾಮಿಗಳ  ಸಿಂಹಾಸನ ಮತ್ತು ಕೀರಿಟ.೮ ) ಸ್ವಾಮಿಗಳ ತುಲಾಬಾರ.
ಹೀಗೆ ಒಂದೋ ಎರಡೋ ದೊಡ್ಡ ಲಿಸ್ಟೇ ನಮ್ಮ ಮುಂದೆ ನಿಲ್ಲುತ್ತದೆ .ಸುಮಾರು ೮೦೦ ವರುಷಗಳ ವರೆಗೆ ವಚನಗಳನ್ನು ವ್ಯವಸ್ತಿತವಾಗಿ  ಹೂತಿದ್ದರು .ವಚನ ಬಂದ ಮೇಲೂ ನಮ್ಮ ಬಸವ ಪರ೦ಪರೆಯ ಸ್ವಾಮಿಗಳು ಬಸವ ತತ್ವಕ್ಕೆ ದುಡಿಯದೆ ಮಠದ ಆಡಳಿತ ನೋಡುವ ಉಸ್ತುವಾರಿ ಮಂತ್ರಿಗಳಾಗಿ ಯಾರಿಗೂ  ಏನನ್ನು ಆಡದೆ ಮಠದ  ಆಸ್ತಿ ನೋಡಿಕೊಂಡು ತಮ್ಮ ಪರಮಪರೆಯನ್ನು ಮುಂದುವರೆಸುತ್ತಾರೆ .
 
    ಶರಣಸಾಹಿತ್ಯದ ಪ್ರಚಾರಕರಾದ ನಮ್ಮ ದೊಡ್ಡ ದೊಡ್ಡ ಸ್ವಾಮಿಗಳು ನಂದಿಗೆ ಹಾಲು ತುಪ್ಪ ಜೇನು ಸುರುವುತ್ತಾರೆ . ಮಠಗಳಲ್ಲಿ ಮಾಟಮಂತ್ರ ತಾಯತ ನಿಂಬೆ ಹಣ್ಣು ,ತೆಂಗಿನ ಕಾಯಿ ಮಂತ್ರಿಸಿ ಕೊಡುವುದು ಬೂದಿ ಅಂಗಾರ ತೀರ್ಥ ,ಕುಂಬಳ ಕಾಯಿ ಒಡೆಯುವದು ಒಟ್ಟಾರೆ ಮೌಡ್ಯದ ಎಲ್ಲ ಪಾಠಗಳು ಮಠಗಳಲ್ಲಿ ಸಾಂಗವಾಗಿ ನಡೆಯುತ್ತವೆ 
 
 ಸೆಲೆಬಿರಿಟಿ ಆಗುತ್ತಿರುವ ಸ್ವಾಮಿ ಅಕ್ಕ ಮಾತೆಯರು
 

ಸ್ವಾಮಿಗಳಿಗೆ ಮಾತಜಿಗೆ ಅಕ್ಕನವರಿಗೆ ಎಷ್ಟು ಮಾಧ್ಯಮದ ಹುಚ್ಚು ಅಂದ್ರೆ ಅವರ ಫೋಟೋ ನಿತ್ಯ ಟಿ ವಿ ಪಪೆರಿನಲ್ಲಿ ಬರದೆ ಇದ್ದಾರೆ ನಿದ್ದೆ ಬರೋಲ್ಲ .ಗುಡಿ ಪೂಜೆ ಕಳಸಾರೋಹನ,ಗುಡಿಗೆ ಗುದ್ದಲಿ ಪೂಜೆ ಬಿಯರ್ ಬಾರನ ಅಂಗಡಿ ಉದ್ಘಾಟನೆ ,ಚಪ್ಪಲಿನ ಅಂಗಡಿಯ ಪೂಜೆ ಲಕ್ಷ್ಮಿ ಪೂಜೆ ಹೀಗೆ ಎಲ್ಲ ವೈದಿಕ ಪೂಜೆ ಗೆ ಇಸ್ತ್ರಿ ಮಾಡಿದ ಸ್ಟಾರ್ಚ  ಹಾಕಿದ ಗರಿ ಗರಿ ಕಾವಿ. ಕೈಯಲ್ಲಿ ಒಂದು ಡೈರಿ ಅಂದ್ರೆ ಭಕ್ತರು ಹಣದ ಪಾಕೆಟು ಕೊಟ್ಟರ ಇಟ್ಟಕೊಳ್ಳಕ. ಮುಖವರ್ಧಕ ಬಳಸಿ ಪೋಟೋ ಗಳಲ್ಲಿ ಚೆನ್ನಾಗಿ ಕಾಣಬೇಕು . ಜಾತ್ರೆ ಸಮಾರಂಭದಲ್ಲಿ ಫ್ಲೆಕ್ಸು ಬ್ಯಾನರು  ಊರ ತುಂಬಾ ಸ್ವಾಮಿಗಳ ಕಟೋಟುಗಳು ,ಮೂಲೆಯಲ್ಲಿ ಸ್ಥಳವಿದ್ದರೆ ಬಸವಣ್ಣನವರ ಪೋಟೋ  
 
  ನಿರಂಜನ ದಿಕ್ಷೆಯ ಸಮಯದಲ್ಲಿ ಸ್ವಾಮೀ ಆಗಬೇಕೆನ್ನುವವರು . ತಾವು ಯಾವುದೇ  ವ್ಯಕ್ತಿಗತ ಹುಟ್ಟು ಹಬ್ಬ ವರ್ದತಿಉತ್ಸವ ,ಸ್ವಂತ  ಖಾಸಗಿ ಸಭೆ ಸಮಾರಂಭ ಮಾಡುವದಿಲ್ಲ ಅಂತ ಪ್ರಮಾಣ ಮಾಡುತ್ತಾರೆ .ಆದರೆ ಈ ವಿಧಿ ಕದ್ದು ಮುಚ್ಚಿ ಆಗುವ ಪ್ರಮಾಣ ಹೀಗಾಗಿ ಗುರುಗಳು ಶಿಷ್ಯರು ಎಲ್ಲರಿಗೂ ವೇದಿಕೆಯ ಮೇಲೆ ರಾರಾಜಿಸುವ ಚಪಲ .  ಗುರುವಂದನೆಯ   ಸಮಯದಲ್ಲಿ ಸ್ವಾಮಿಗಳ ಪಾದದ ಮೇಲೆ ಕ್ವಿಂಟಾಲ  ಹೂವು ಪತ್ರಿ ಅವರಿಗೆ ಕೀರಿಟ,ಬೆಳ್ಳಿ ಸಿಂಹಾಸನ ಪಾದ ಪೂಜೆ .
ಇತ್ತೀಚಿಗೆ  ನಿಷ್ಕಲ ಮಂಟಪದ ನಿಜಗುಣಾನ೦ದ  ಶ್ರೀಗಳು ತಮ್ಮ ೫೦ ನೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡರು ,ಮತ್ತು ಲಿಂಗಾಯತ ಧರ್ಮವನ್ನು ಸ್ವೀಕರಿಸಿದ ೨೫ ವರ್ಷ ಈ ಕಾರ್ಯಕ್ರಮವೂ ಯಾವುದೇ ಮಂತ್ರಿಯ ಕಾರ್ಯಕ್ರಮಕ್ಕೆ ಕಡಿಮೆ ಇರಲಿಲ್ಲ .ಅಲ್ಲಿ ಗದಗಿನ ಶ್ರೀಗಳು ವೇದಿಕೆಯ ಮೇಲಿರುವ ಅಕ್ಕನನ್ನು ,ಅಕ್ಕಮಹಾದೇವಿಗೆ ಹೋಲಿಸಿದರು , ಗದಗ ಶ್ರೀಗಳಿಗೆ ಇಂತಹ ಬಾಲಿಸತನವು  ತರವಲ್ಲ . ಅಲ್ಲಿ ನೆರದಿದ್ದ ಪ್ರೇಕ್ಷಕರು ಭಕ್ತರು ತಬ್ಬಿಬ್ಬಾದರು  .ಅದೆಷ್ಟೋಜನರು ಅಕ್ಕಮಹಾದೇವಿ ಹೀಗಿದ್ದರಾ?  ಅಂತಾ ಗುಸು ಗುಸು ಮಾತನಾಡಿದರು ಹೊಗಳಿಕೆ ಪ್ರಸಂಸೆ ಇರಬೇಕು ಆದರೆ ಶರಣರನ್ನು ಹೋಲಿಸುವ ವೈಭವೀಕರಣ ತರವಲ್ಲ .

ನಡೆದಾಡುವ ದೇವರು 

ಭಕ್ತರು ಮುಗ್ದರು ಅಪ್ಪಟ ಸ್ವಾಮಿಗಳನ್ನು ಒಮ್ಮೊಮ್ಮೆ ದೇವರಿಗಿಂತ ದೊಡ್ಡವರು ಅಂತಾ ಹೇಳ್ತಾ ನಡೆದಾಡುವ ದೇವರು ಅಂತಾ ಕರೆಯುವುದು ಉಂಟು .
 
ಇದೆ ರೀತಿ ಎಲ್ಲ ಸ್ವಾಮಿಗಳು ಜಗದ್ಗುರುಗಳು ಮಾತೆಯರು ಅಕ್ಕನವರು ಅತಿಯಾದ ಪ್ರಚಾರ ಬಯಸುತ್ತಾರೆ . ಇವರೆಲ್ಲ ನಡೆದಾಡುವ ದೇವರಾದರೆ ನಾವೇನು ಕುಣಿದಾಡುವ ಮಂಗಗಳೇ ?ಇಂತಹ ಕೆಲ ನಡೆದಾಡುವ ದೇವರು ವೇದಿಕೆಯ ಮೇಲೆ ಸಾವಿರಾರು ಭಕ್ತರ ಮುಂದೆ ಒಂದು ಘಂಟೆ ಪ್ರವಚನ ಮಾಡುತ್ತಾರೆ ವೇದ ಉಪನಿಸತ್ತು ,ಆಗಮ ಶಾಸ್ತ್ರ , ಸಮಯ ಸಿಕ್ಕರೆ ಆಗೊಮ್ಮೆ  ಈಗೊಮ್ಮೆ ಶರಣರ ವಚನಗಳು . ವಿಚಿತ್ರ ಆದರು ಸತ್ಯ ವೇದಿಕೆಯ ಮೇಲೆ ಬಸವಣ್ಣನವರ ಭಾವಚಿತ್ರವನ್ನು ಈ ನಡೆದಾಡುವ ದೇವರು ಇಡಲು ಕೊಡುವದಿಲ್ಲ . ನಮಗೆ ವ್ಯಕ್ತಿ ಎಷ್ಟೇ ದೊಡ್ದವರಿದ್ದರೂ ಬಸವ ಪ್ರಜ್ಞೆಯನ್ನು ಬಸವ ಚಿಂತನವನ್ನು ಬೆಳೆಸಬೇಕು .
 
ಪ್ರವಚನ ಕೀರ್ತನ ಆತ್ಮೊದ್ದಾರದ ಹಾದಿಯಾಗಬೇಕು .ಪುರಾಣ ಪ್ರವಚನ ರಂಜನಿಯವಾಗಿರದೆ ಬದುಕಿಗೆ ಉರುಗೊಲಾಗಬೇಕು. ಇದು ಶರಣರ ಆಶಯಗಳು .
 
ಅಪ್ಪ ಬಸವಣ್ಣನವರೇ   ಹೇಳಿದ್ದಾರೆ ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿನ್ತಾ ಹಿರಿಯರಿಲ್ಲ .ಬುದ್ಧ ಬಸವ ಈ ಜಗವು ಕಂಡ ಶ್ರೇಷ್ಟ ಚಿಂತನಕಾರರು . ಅವರ ವಾರುಸದಾರರಾದ ನಾವು ಅವರ ಆಶಯಕ್ಕೆ ಪೂರಕವಾಗಿ ನಡೆದು ಕೊಳ್ಳೋಣ . ಶ್ರೀಗಳು ಮಾತೆಯವ್ರು ಜಗದ್ಗುರುಗಳನ್ನು ಅಕ್ಕನನ್ನು ಟೀಕಿಸುವುದೆ ನನ್ನ ಉದ್ದೇಶ ಅಲ್ಲ .ಆದರೆ ಬಸವ  ತತ್ವ ಹೇಳುವ ಸಾಧಕರೆ ಹೀಗೆ ತಪ್ಪಿದರೆ ಅವರಿಗೆ ಹೇಳುವದು ಶರಣರ ಬ್ರತ್ಯಾಚಾರ ಗಣಾಚಾರ ಅಂತಾ ನಾನು ತಿಳಿದಿದ್ದೇನೆ.
 
ಮಠಗಳು ನೊಂದವರ ಕಣ್ಣಿರು ವರೆಸುವ ಕೇಂದ್ರಗಳಾಗಲಿ ,ಬಡವರಿಗೆ ದಲಿತರಿಗೆ ಅನಾಥರಿಗೆ ನೆಮ್ಮದಿಯ ಮಾರ್ಗದರ್ಶನದ ಕೇಂದ್ರವಾಗಲಿ .ಟಿ ವಿಯಲ್ಲಿ ಕಾಳಿ ಮಠದ ಋಷಿಕುಮಾರ ಸ್ವಾಮಿ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದರೂ ಸುಮ್ಮನೆ ಕುಳಿತು ಕೊಳ್ಳುವ ಭಕ್ತರು ,ಹಿರಿಯ ಸ್ವಾಮಿಗಳು ಅವರನ್ನು ಮತ್ತೆ ಮತ್ತೆ ಟಿವಿಯಲ್ಲಿ ಕರೆದು ಸ೦ದರ್ಶನ ಮಾಡುವ ಮಾಧ್ಯಮ ಲಿಂಗಾಯತ ಧರ್ಮವನ್ನು ಹರಾಜು ಹಾಕುವ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು .
ನಮ್ಮ ಮಠಗಳು ಅತ್ಮೊದ್ದಾರದ ಅದ್ಯಾತ್ಮಿಕ ಧಾರ್ಮಿಕ ಕೆಂದ್ರಗಾಳಗಬೇಕು,ಸ್ವಾಮಿಗಳ ನಿಸ್ವಾರ್ಥ ಜೀವನ ಸಾಧನ ಸಾರ್ಥಕಗೊಳ್ಳಬೇಕು.

 ಮುಗಿಸುವ ಮುನ್ನ

ಬ್ರಹ್ಮ ಚರ್ಯೆ ,ಸ್ವಾಮಿತ್ವವನ್ನು ಶರಣರು ಎಂದೂ ಒಪ್ಪಿಲ್ಲ ಶರಣರು ಕಾವಿ ಎಂದೂ ದರಿಸಿಲ್ಲ ,ಸತಿಪತಿಗಳಿಂದಾದ ಭಕ್ತಿ ಹಿತ ಒಪ್ಪುದು ಶಿವಂಗೆ ,ಇಂದ್ರಿಯ ನಿಗ್ರಹಿಸಿದರೆ ಹೊಂದುವವು ಗುಣದೋಷಗಳು ,ಬಸವಣ್ಣ ಮತ್ತು ಶರಣರು ಪ್ರಾಪಂಚಿಕ ಬದುಕಿನಲ್ಲಿ ಪಾರಮಾರ್ಥಿಕ ಚಿಂತನೆ ಮಾಡಿದವರು .ಬ್ರಹ್ಮ ಚರ್ಯೆ ,ಸ್ವಾಮಿತ್ವ  ಅಸಹಜ ಮತ್ತು ಅಸ್ವಾಭಾವಿಕ ಬದುಕು. ಎಲ್ಲರೂ   ಬ್ರಹ್ಮ ಚರ್ಯೆ ,ಸ್ವಾಮಿತ್ವಕ್ಕೆ ಮಾರು ಹೋದರೆ ಜೈವಿಕ ವಿಕಾಸ ಹೊಂದುವುದು ಹೇಗೆ ?
 
ಮಠಗಳಲ್ಲಿ ಹೆಚ್ಚಿದ ಲೈಂಗಿಕ ಅತ್ಯಾಚಾರ ಆರೋಪ ಬಹುತೇಕ  ಮಠಗಳಲ್ಲಿ ಕೇಳಿ ಬರುತ್ತಿದೆ .ಕಾಗೆ ವಿಷ್ಟೀಸುವ ಹೊನ್ನ ಕಳಸಕಿಂತ ನಿಮ್ಮ ಶರಣರ ಚೆಮ್ಮಾವುಗೆ ಮಾಡಯ್ಯ.  ಎಂದು ಬಸವಣ್ಣನವರೆ ಹೇಳಿದಾಗ ಚರ್ಮದ ಚೆಮ್ಮಾವುಗೆ   ಹೊರತು ಪಡಿಸಿ  ಈಗ ಶರಣರು ಕಟ್ಟಿಗೆಯ ಆವುಗೆಗಳನ್ನು ಏಕೆ ದರಿಸುತ್ತಾರೆ ?
 
ಬಸವಣ್ಣ ಮತ್ತು ಶರಣರು ಅಧುನಿಕರಲ್ಲಿ ಆಧುನಿಕರು .ಇಂತಹ ಗೊಡ್ಡು ಸಂಪ್ರದಾಯಗಳನ್ನು ಸಂಪೂರ್ಣವಾಗಿ ಬಿಟ್ಟು ವ್ಯವಸ್ಥೆಯಲ್ಲಿ ನಮ್ಮ ಸ್ವಾಮಿಗಳು ಶರಣರು ಅಕ್ಕನವರು ಮಾತೆಯರು ಬದಲಾಗುವ ಅನಿವಾರ್ಯತೆ ಇದೆ ಮಠಗಳ ಮೇಲೆ ಭಕ್ತರ ನಂಬಿಕೆ ಶ್ರದ್ಧೆ ಕಡಿಮೆಯಾಗುತ್ತಿದೆ .ಕಾರಣ ಇವರ ಬದುಕು ಸುಚಿಗೊಂಡು ನಮ್ಮನ್ನು ಮಾರ್ಗದರ್ಶನ ಮಾಡುವ ಹೊಸ ಚೈತನ್ಯ ಇವರಲ್ಲಿ ಮೂಡಿಬರಲಿ . ಬೆಲೆಯ ಭೂಮಿಯಲಿ ಪ್ರಳಯಸದ ಕಸ ಹುಟ್ಟಿ ತಿಲ್ಯಲಿಯದು ಎಚ್ಚರಲಿಯದು ಕಸವ ಕಿತ್ತೆಸದರೆ ಸುಳಿದೆಗೆದು ಬೆಳೆವೆ  ಅಂತಾ ಬಸವಣ್ಣ ಆರ್ತ್ರನಾದಗೊಂಡಿದ್ದಾನೆ. ಎನ್ನ ತಪ್ಪು ಅನಂತ ಕೋಟಿ,ನಿಮ್ಮ ಸೈರಣಗೆ ಲೆಕ್ಕವಿಲ್ಲ  .ಇನ್ನು ತಪ್ಪದ೦ತೆ ಸಲುಹು ,ಅಂತಾ ಅಪ್ಪ ಬಸವಣ್ಣ ಘೋಗರೆದಿದ್ದಾರೆ ಬಹುSya  ಮುಂದಿನ ಜನಾಂಗಕ್ಕಾಗಿ  ಅವರ ವಾಕ್ಯಗಳು ಜೀವಂತ ನುಡಿಗಳು. 
ಶರಣು ಶರಣಾರ್ತಿ 
***Dr.Shashikant.Pattan-C-103 SANGRIA APARTMENT,MEGAPOLIS,3RD PHASE HINJEWADI,PUNE,411057 MAHARSTRHA.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...