Thursday, November 12, 2015

ಸವಿತಾ ನಾಗಭೂಷಣ ಎರಡು ಕವಿತೆಗಳು


೧ 
ಭಾವ ಶುದ್ಧಿ ಮಾಡೋ...ಸಿಟ್ಟು ಮಾಡಲೇನು
ಬೆಟ್ಟು ತೋರಲೇನು
ಗೀರಿ ಗೀರಿ ಗೀರಿ
ಗಾಯಗೊಳಿಸಲೇನು...

ಹೊಡೆದು ಹಾಕಲೇನು
ಬಡಿದು ಹಾಕಲೇನು
ಸಿಗಿದು ಸಿಗಿದು ಸಿಗಿದು
ಸಿಪ್ಪೆ ಮಾಡಲೇನು...

ನೇಣು ಹಾಕಲೇನು
ಗೋಣು ಮುರಿಯಲೇನು
ಉಗಿದು ಉಗಿದು ಉಗಿದು
ಉರಿಯ ಹಚ್ಚಲೇನು...

ಭಂಗ ಮಾಡಿ ಲಿಂಗ
ಮಾಡದಂಗೆ ಸಂಗ
ಬಗೆದು ಬಗೆದು ಬಗೆದು
ಭಿನ್ನ ಮಾಡಲೇನು...॒

ಬುಸ್ಸೆಂದರೇನು
ಉಸ್ಸೆಂದರೇನು
ಹಲ್ಲು ಕಡಿದರೇನು
ಹುಲ್ಲು ತುಳಿದರೇನು
ಬೇಶಾಯಿತೇನು
ಲೇಸಾಯಿತೇನು...॒

ಸೊಕ್ಕಿದವನ ಕುಕ್ಕಿ
ಕುಕ್ಕಿ ಕುಕ್ಕಿ ಕುಕ್ಕಿ
ಜೀವ ತೆಗೆದರೇನು
ಗರುವ ಅಳಿವುದೇನು...

ಬಿಕ್ಕಿ ಬಿಕ್ಕಿ ಅತ್ತೆ
ಮುಕ್ಕಿ ಮುಕ್ಕಿ ಸತ್ತೆ
ಎಷ್ಟು ಬೆಂದರೇನು
ಎಷ್ಟು ನೊಂದರೇನು
ತಗ್ಗಲಿಲ್ಲ ಅವನು
ಬಗ್ಗಲಿಲ್ಲ ಅವನು

ತಿದ್ದಿ ತಿದ್ದಿ ತೀಡೋ
ಭಾವ ಶುದ್ಧಿ ಮಾಡೋ
ಗುದ್ದಿ ಗುದ್ದಿ ಬುದ್ಧಿ
ಭಾವಶುದ್ಧಿ ಮಾಡೋ...

ಬೇಡಿಕೊಂಡೆ ಶಿವನ
ಹಾಡಿಕೊಂಡೆ ಕವನ.
***
                
೨ 

ಬದುಕಿದ್ದಾಗ ಬನ್ನಿ...ಬದುಕಿದ್ದಾಗ ಬನ್ನಿ
ಕೂಡಿ ಆಡಿ ಒಂದಿಷ್ಟು ಮಾತನಾಡಿ
ಕಣ್ಣಲ್ಲಿ ಕಣ್ಣಿಟ್ಟು ನೋಡಿ
ನಿಮಗಿಷ್ಟವಾದ ಹಾಡು ಹಾಡಿ

ಕಾಡಿ... ಬೇಡಿ...
ತೋಡಿಕೊಳ್ಳಿ ಎಷ್ಟು ಬೇಕಾದರೂ
ಗತವೈಭವ ನೆನೆಸಿಕೊಂಡು
ಅತ್ತೂ ಕರೆದೂ ಹಗುರಾಗಿ

ಈ ಹೊತ್ತು ಹೀಗೇಕೆ
ನಿಂತಲ್ಲೇ ಇದೆ ಎಂದು
ಕನಲಿ ಕಂಬನಿ ಮಿಡಿಯಿರಿ

ಬಸ್ಸಾರು, ಬಿಸಿ ಮುದ್ದೆ ರೊಟ್ಟಿ ಪಲ್ಲೆ
ಮಾಡಿ ಉಣಿಸುವೆನು
ಹುರಿದವರೆ, ನೆಲಗಡಲೆ ಕೊಬ್ಬರಿ
ಬೆಲ್ಲವನಿತ್ತು ಸತ್ಕರಿಸುವೆನು

ಬಾಗಿ ಬೆನ್ನು ಮಂಜಾಗಿದೆ ಕಣ್ಣು
ಇನ್ನೇನು ಉದುರಲಿದೆ ಮಾಗಿ ಹಣ್ಣು

ಅಕ್ಕರೆಯಿಂದ ಅಪ್ಪಿ ಮುದ್ದಾಡಿ
ಕೂಗಿ ಬಾಯ್ತುಂಬ ಹೆಸರು
ಫಡಫಡಿಸಿ ಹಾರಿ ಹೋಗಲಿರುವ
ಪ್ರಾಣ ಪಕ್ಷಿಯನು ಒಂದು ಚಣ
ತಡೆದು ನಿಲ್ಲಿಸಿ

ಕಾವಳದ ಮುಂಜಾವು
ಕೊರಡಿನಂತಾಗಿ ಕೈ-ಕಾಲು
ಜೀವ ಗಡಗಡ ನಡುಗಿ
ಉಸಿರು ಉಡುಗಲು
ಹರಿಸದಿರಿ ಮೊಸಳೆ ಕಣ್ಣೀರು
ಜಗಜ್ಜಾಹೀರು ಮಾಡದಿರಿ ನಿರ್ಗಮನ
ಹೇಗೋ ಸೇರಿಕೊಳ್ಳುವೆ ಶಿವನ ಪಾದ

ಅದಕಿಂತ ಮೊದಲು
ಬನ್ನಿ ಬದುಕಿದ್ದಾಗ ಬನ್ನಿ...
***

ಸವಿತಾ ನಾಗಭೂಷಣ (೧೯೬೧) ಚಿಕ್ಕಮಗಳೂರಿನವರು. ಶಿವಮೊಗ್ಗದಲ್ಲಿ ಶಿಕ್ಷಣ ಪಡೆದ ಸವಿತಾ ಇತಿಹಾಸ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ೨೦ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದು ಈಗ ಸ್ವಯಂನಿವೃತ್ತಿ ಪಡೆದು ಶಿವಮೊಗ್ಗದಲ್ಲಿ ಪತಿ ಡಿ.ಎಸ್. ನಾಗಭೂಷಣ ಅವರೊಂದಿಗೆ ನೆಲೆಸಿದ್ದಾರೆ. ಈವರೆಗೆ ಐದು ಕವನ ಸಂಕಲನಗಳನ್ನೂ, ’ಸ್ತ್ರೀಲೋಕ’(೧೯೯೬) ಎಂಬ ವಿಶಿಷ್ಟ ಕಾದಂಬರಿಯನ್ನೂ ಮತ್ತು ’ಹೂ ಮನಸ್ಸಿನ ಹೋರಾಟಗಾರ ಮತ್ತು ಇತರ ಲೇಖನಗಳು’(೨೦೧೧) ಎಂಬ ಗದ್ಯ ಲೇಖನಗಳ ಸಂಗ್ರಹವನ್ನೂ ಪ್ರಕಟಿಸಿದ್ದಾರೆ. ’ಆಕಾಶ ಮಲ್ಲಿಗೆ’ (೨೦೦೦), ’ಕಾಡು ಲಿಲ್ಲಿ ಹೂವುಗಳು’(೨೦೦೬) ಹಾಗೂ ’ಹಳ್ಳಿಯ ದಾರಿ’(೨೦೧೧) ಆಯ್ದ ಕವನಗಳ ಸಂಕಲನಗಳು. ’ಮುಡಿ ಮಲ್ಲಿಗೆ’-ಮಹಿಳಾ ಸಾಹಿತ್ಯ ಸ್ಪಂದನ(೧೯೯೨), ಕವಿತೆ-೧೯೯೭ (ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ), ’ಹಣತೆ’-ಜಿ.ಎಸ್.ಎಸ್. ಅಭಿನಂದನ ಗ್ರಂಥ (೨೦೦೦), ’ಸುವರ್ಣ ಕಾವ್ಯ’-ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ (೨೦೦೬) ಇವರ ಸಂಪಾದಿತ/ಸಹ ಸಂಪಾದಿತ ಕೃತಿಗಳು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಪು.ತಿ.ನ. ಕಾವ್ಯ ಪುರಸ್ಕಾರ, ಡಾ|| ಡಿ.ಎಸ್. ಕರ್ಕಿ ಕಾವ್ಯ ಪುರಸ್ಕಾರ, ಎಂ.ಕೆ. ಇಂದಿರಾ ಪ್ರಶಸ್ತಿ, ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ, ಮೊದಲಾದ ಪ್ರಶಸ್ತಿ ಪಡೆದಿದ್ದಾರೆ. ಐದು ವರ್ಷಗಳಿಂದ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಟ್ರಸ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಳಾಸ: ಎಚ್.ಐ.ಜಿ.-೫, ’ನುಡಿ’, ಕಲ್ಲಳ್ಳಿ ಬಡಾವಣೆ, ವಿನೋಬನಗರ, ಶಿವಮೊಗ್ಗ-೫೭೭ ೨೦೪No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...