Sunday, November 01, 2015

ನಾನು ಯಾಕೆ ನನ್ನ ರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ?
ಆನಂದ ಪಟವರ್ಧನ್

 ಭಾರತ ಕವಲು ದಾರಿಯಲ್ಲಿದೆ ಎನ್ನುತ್ತಾರೆ ಖ್ಯಾತ ಸಾಕ್ಷಚಿತ್ರ ನಿರ್ದೇಶಕ

ರಾಷ್ಟ್ರ ಪ್ರಶಸ್ತಿಗಳು ನನ್ನ ಸರ್ವಸ್ವವೂ ಆಗಿವೆ. ಅವುಗಳು ನನಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಖಾಸಗಿ ಸಂಸ್ಥೆಗಳು ಕೊಡುವ ಪ್ರಶಸ್ತಿಗಳಿಗಿಂತಲೂ ಹೆಚ್ಚು ಶ್ರೇಷ್ಠ. ಯಾಕೆಂದರೆ, ಈ ಪ್ರಶಸ್ತಿಗಳು ನಮ್ಮ ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಭಾರತ ಸರಕಾರ ಮುಂದಾದ ಕ್ಷಣಗಳನ್ನು ನೆನಪಿಸುತ್ತವೆ.
ಇಂದು ಈ ಆಶಯಗಳು ದುರ್ಬಲಗೊಳ್ಳುತ್ತಿವೆ. ನಮ್ಮ ದೇಶ ಕವಲು ದಾರಿಯಲ್ಲಿದೆ. ಒಂದು ಬದಿಯಲ್ಲಿ ನಮ್ಮ ಸ್ವಾತಂತ್ರ ಹೋರಾಟಗಾರರು ನಮಗಾಗಿ ನಿರ್ಮಿಸಿಕೊಟ್ಟ ಜಾತ್ಯತೀತ ರಸ್ತೆಯಿದೆ ಹಾಗೂ ಇನ್ನೊಂದು ಬದಿಯಲ್ಲಿ, ನಮ್ಮ ಈಗಿನ ಸರಕಾರ ಉತ್ಸುಕತೆ ತೋರುತ್ತಿರುವ ಬಹುಸಂಖ್ಯಾತ ಫ್ಯಾಶಿಸಂನ ದಾರಿಯಿದೆ. ಈಗಾಗಲೇ ನಮ್ಮದು ಫ್ಯಾಶಿಸ್ಟ್ ದೇಶವಾಗಿದೆ ಎಂದು ನಾನು ಹೇಳುತ್ತಿಲ್ಲ, ಆದರೆ, ಅದರ ಪೂರ್ವ ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದು ನಾನು ಹೇಳುತ್ತಿದ್ದೇನೆ.

 ಸಮಯ ಮೀರುವ ಮೊದಲು ಧ್ವನಿ ಎತ್ತುವುದು ಎಲ್ಲ ನಾಗರಿಕರ ಕರ್ತವ್ಯವಾಗಿದೆ. ಚಿತ್ರ ನಿರ್ಮಾಪಕರು, ಯೋಚಿಸುವ ನಾಗರಿಕರು ಈ ಬೆಳವಣಿಗೆಯನ್ನು ಗಮನಿಸದೇ ಇರಲು ಸಾಧ್ಯವಿಲ್ಲ. ಅನರ್ಹ ಕೇಸರಿ ಆಡಳಿತಗಾರರನ್ನು ಎಫ್‌ಟಿಐಐ ಮೇಲೆ ಹೇರಲು ಸರಕಾರ ಪ್ರಯತ್ನಿಸಿದಾಗ ವಿದ್ಯಾರ್ಥಿಗಳು ಮುಷ್ಕರ ನಡೆಸಿದರು. ಮುಷ್ಕರ ಅಭೂತಪೂರ್ವ ನಾಲ್ಕು ತಿಂಗಳುಗಳ ಕಾಲ ಮುಂದುವರಿಯಿತು. ಈ ಅವಧಿಯಲ್ಲಿ ಸಮಾಜದ ಎಲ್ಲ ಸ್ತರಗಳ ಪ್ರಜ್ಞಾವಂತರು ಎಚ್ಚೆತ್ತುಕೊಂಡರು ಹಾಗೂ ತಮಗೆ ಗೊತ್ತಿರುವ ಭಾರತ ಅಪಾಯಕಾರಿ ಹೊಸ ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿದುಕೊಂಡರು. ವಿಚಾರವಾದಿಗಳ ಹತ್ಯೆ, ತೀಸ್ತಾ ಸೆಟಲ್ವಾಡ್ ಮತ್ತು ಸಂಜೀವ ಭಟ್ ಮುಂತಾದ ಸಾಮಾಜಿಕ ಕಾರ್ಯಕರ್ತರ ಬೇಟೆ, ಧರ್ಮಾಧಾರಿತ ಮತ್ತು ಜಾತಿಯಾಧಾರಿತ ಹತ್ಯಾಕಾಂಡಗಳ ಸಂತ್ರಸ್ತರಿಗೆ ನ್ಯಾಯ ನಿರಾಕರಣೆ, ಧರ್ಮದ ಅಮಲನ್ನು ತಲೆಗೇರಿಸಿಕೊಂಡ ಗುಂಪುಗಳ ವಿಜೃಂಭಣೆ ಮತ್ತು ಧರ್ಮದ ಹೆಸರಿನಲ್ಲಿ ಕೊಲ್ಲುವ ಹಾಗೂ ಕೊಲ್ಲಲು ಪ್ರೇರಣೆ ನೀಡುವವರಿಗೆ ಸಿಗುವ ಕಾನೂನಿನ ರಕ್ಷಣೆ ಎಗ್ಗಿಲ್ಲದೆ ಸಾಗುತ್ತಿದೆ. ಜೊತೆಗೆ ಇತಿಹಾಸದ ಸಾರಾಸಗಟು ಮರುಸೃಷ್ಟಿಯಾಗುತ್ತಿದೆ. ವೈಜ್ಞಾನಿಕ ತನಿಖೆಗೆ ಎಳ್ಳುನೀರು ಬಿಡಲಾಗುತ್ತಿದೆ ಹಾಗೂ ಇವೆಲ್ಲವುಗಳ ಫಲಶ್ರುತಿಯಾಗಿ ವಿವೇಚನಾ ಶೂನ್ಯ ತಲೆಮಾರೊಂದರ ಉತ್ಪಾದನೆಯಾಗುತಿ್ತದೆ ಹಾಗೂ ಆ ತಲೆಮಾರಿಗೆ ಜ್ಞಾನದ ಹಸಿವಿನ ಬದಲಿಗೆ ದ್ವೇಷಿಸುವುದಕ್ಕಾಗಿ ಶತ್ರುವೊಂದನ್ನು ಸೃಷ್ಟಿಸಲಾಗುತ್ತದೆ.

ಹಾಗಾಗಿ, ನಮ್ಮ ಮುಂಬೈ ನಗರಕ್ಕೆ ಸಿಕ್ಕಿದ ಪ್ರಥಮ ರಾಷ್ಟ್ರ ಪ್ರಶಸ್ತಿಯನ್ನು ಭಾರವಾದ ಹೃದಯದಿಂದ ಹಿಂದಿರುಗಿಸುತ್ತಿದ್ದೇನೆ. 1985ರಲ್ಲಿ ನಾವು ಈ ಪ್ರಶಸ್ತಿಯನ್ನು ಗೆದ್ದಾಗಲೂ ನಾನು ಚಿತ್ರಿಸಿದ ಜನರ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ನಾನು ಪ್ರಶಸ್ತಿಯನ್ನು ಸ್ವೀಕರಿಸಲು ಹೋಗಲಿಲ್ಲ. ಬದಲಿಗೆ ವಿಮಲ್ ದಿನಕರ್ ಹೆಡವು (ಅವರ ಬಾಂದ್ರದ ಮನೆಯನ್ನು ಆಗಷ್ಟೇ ಧ್ವಂಸಗೊಳಿಸಲಾಗಿತ್ತು) ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ಹೋದರು. ಅಲ್ಲಿ ಅವರು ಮನೆಯಿಲ್ಲದವರ ಸಮಸ್ಯೆಗಳನ್ನು ಒಳಗೊಂಡ ಕರಪತ್ರಗಳನ್ನು ವಿತರಿಸಿದರು. ಪ್ರಶಸ್ತಿ ಜೊತೆಗೆ ಲಭಿಸಿದ ನಗದು ಹಣ ಕೊಳೆಗೇರಿ ನಿವಾಸಿಗಳ ಚಳವಳಿಗೆ ಹೋಯಿತು. ಇಂದು ನಾನು ಪದಕವನ್ನು ಹಿಂದಿರುಗಿಸುತ್ತಿದ್ದೇನೆ.

ಈ ಸರಕಾರದಿಂದ ನಾವು ಏನನ್ನು ಬಯಸುತ್ತೇವೆ? ಹೆಚ್ಚೇನಿಲ್ಲ. ಕೇವಲ ಅದರ ರಾಜೀನಾಮೆ. ಅದು ಶೀಘ್ರದಲ್ಲಿ ಸಂಭವಿಸುತ್ತದೆಯೇ? ಸಾಧ್ಯತೆ ಇಲ್ಲ. ಭಾರತದ ಜನರಿಂದ ನಾವು ಏನನ್ನು ಬಯಸುತ್ತೇವೆ? ಹೆಚ್ಚೇನಿಲ್ಲ. ನಿರಂತರ ಜಾಗೃತಿಯಷ್ಟೆ.

ಸೌಜನ್ಯ : ವಾರ್ತಾಭಾರತಿ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...