Wednesday, November 04, 2015

ಮುದ್ದು ತೀರ್ಥಹಳ್ಳಿ ಎರಡು ಕವಿತೆಗಳು
 ಮುದ್ದು ತೀರ್ಥಹಳ್ಳಿ


೧.    
ಅವಕಾಶವ ಮತ್ತೆ ಕೊಡು ಒಡೆಯನೇ...
ನನಗೊಂದು ಅವಕಾಶವ
ಮತ್ತೆ ಕೊಡು...

ಅದೆಷ್ಟು ಬಾರಿ ನಿನ್ನೆದುರು ಮೊಣಕಾಲೂರಿ
ಎದೆಗಡಲ ಕಟ್ಟೆಯೊಡೆದು ಉಕ್ಕುಕ್ಕಿ ಕಂಬನಿ ಹರಿಸಿ
ನೀನೆನ್ನ ಕ್ಷಮಿಸಿ ಮತ್ತೆ ಮತ್ತೆ
ಅವಕಾಶಗಳ ಕರುಣಿಸಿದಾಗೆಲ್ಲ
ನನ್ನ ಬದುಕಿಗೆ ಹೊಸದೊಂದು ಶುರುವಾತು

ಹೇಗೆ...
ಭೀಷಣ ಕಣ್ಣೀರು, ಬೊಬ್ಬೆ, ಕಿರುಚಾಟಗಳು
ಮಾರ‍್ದನಿಸಿ ಕೂರ‍್ದಸಿಯಂತೆ ಕಿವಿಗಿರಿವ
ಸಾವಿನ ಮನೆಯೊಳಗೆ ಕೂತಷ್ಟೂ ಹೊತ್ತು
ಕರ‍್ಗನೆ ಮೋಡ ಕವಿದಂತೆ
ಒಳಗೆ ಮೌನ ವೈರಾಗ್ಯ
ಸಾವಿನ ಮನೆಯ ಹೊಸ್ತಿಲು ದಾಟಿದರೆ
ಹೊರಜಗದ ಹರ‍್ಷೋಲ್ಲಾಸ ಸುಖ ಸೌಖ್ಯ-
ದೊಳಗೆ ಮತ್ತೆ ಬೆರೆತು ಕರಗಿಬಿಡುವಂತೆ

ಹಾಗೆ...
ಹೊಸ ಶುರುವಾತೆಂದು ಶುರುವಿಟ್ಟು
ಮತ್ತದೇ ತಪ್ಪುಗಳ ಪುನರಾವರ‍್ತನ ನರ‍್ತನ
ಮತ್ತೆ ನಿನ್ನೆದುರು ಮೊಣಕಾಲೂರಿ
ಕ್ಷಮೆಗಾಗಿ ರೋದನ

ಕ್ಷಮೆ ಕೇಳಿ ಕೇಳಿ
ಕ್ಷಮೆಯೆಂಬ ಪದದ ಮೇಲೆಯೇ ರೇಜಿಗೆ ಹುಟ್ಟಿ
ಶಿಕ್ಷೆಯನೇ ಕೊಡೆಂದು ಪರಿಪರಿಯಾಗಿ ಬೇಡಿದಾಗಲೂ
ಮೌನವಾಗಿಯೇ ಕ್ಷಮಿಸಿಬಿಟ್ಟ
ನನ್ನೊಡೆಯ ನೀನು

ಕೊನೆಯಬಾರಿಗೊಮ್ಮೆ
ನನಗವಕಾಶವ ನೀಡು
ವರುಷಗಳಿಂದ ಮೇಲೆಳೆದುಕೊಂಡ ಭಾರಕ್ಕೆ
ಇಂದು ಬೆನ್ನು ಮುರಿದುಬೀಳುವ ಮುನ್ನ
ಎಚ್ಚೆತ್ತುಕೊಳ್ಳುತ್ತೇನೆ...!
***


ಗೋಡೆಯೇ ಒಮ್ಮೆಯಾದರೂ ಬಾಯಿಬಿಡು 


             
ಗೋಡೆಯೇ ನೀನದೆಷ್ಟು ಶತಮಾನಗಳಿಂದ
ಹೀಗೆಯೇ ಎದೆಯುಬ್ಬಿಸಿ ನಿಂತಿರುವೆ
ಒಮ್ಮೆಯಾದರೂ ಬಾಯಿಬಿಡು
ಎಲ್ಲರೆನ್ನುತ್ತಾರೆ ನಿನಗೂ ಕಿವಿಗಳುಂಟೆಂದು
ಶತ ಶತಮಾನಗಳಿಂದ ಕೇಳಿದ್ದನ್ನೆಲ್ಲ
ಒಡಲಾಳದಿ ಅದುಮಿಟ್ಟೇಕೆ ಮೌನವಾಗಿದ್ದೀ?
ಒಮ್ಮೆಯಾದರೂ ಬಾಯಿಬಿಡು

ಆಗರ‍್ಭ ವಿಲಾಸೀ ಅರಮನೆಯೊಳಗಿನ
ಗೋಡೆಗಳ ತುಂಬ ಬಂಗಾರ ಬಳ್ಳಿ ವಿನ್ಯಾಸ
ವೈಭವೋಪೇತ ರೇಷಿಮೆ ಪರದೆ ಭೂಷ್ಯ
ಪುರಾತನ ಖಡ್ಗ ಗುರಾಣಿ ಶಸ್ತ್ರಾಸ್ತ್ರ
ಮಹಾ ರಾಜ ರಾಣಿಯರ ವರ‍್ಣ ಚಿತ್ರ
ಹೊತ್ತು ನಿಂತ ಭವ್ಯ ಗೋಡೆಯೇ

ರಾಜಾಧಿರಾಜ ನೂರಾರು ರಾಣಿಯರ
ರಾಜಕೋಶ ಖಜಾನೆ, ದಾಸ್ತಾನು ಸಂದೂಕಗಳ
ಭದ್ರವಾಗಿರಿಸಿ ಬೆಚ್ಚಗಿರಿಸಿದೆ ನೀನು
ಸುಖ ಲೋಲುಪತೆ, ಅಧಿಕಾರ ದಾಹ, ಜೂಜಾಟ
ಬಹು ಪತ್ನಿಯರ ಕಿತ್ತಾಟ, ಕಾದಾಟ
ರಣರಂಗದಲಿ ಮುಗಿಯದ ಸೆಣಸಾಟ
ದಿಡ್ಡಿ ಬಾಗಿಲುಗಳ ಮುರಿದು ಮುನ್ನುಗ್ಗಿ
ವೈರಿಪಡೆ ಅರಮನೆ ಆಕ್ರಮಿಸಿದಾಗ
ಅಮಾಯಕರ ಚಿತ್ಕಾರ ಚೀರಾಟ
ನಿನ್ನ ಕಿವಿಗಳೊಳಗೆ ಅದೆಷ್ಟು ಕಾಲ ಮಾರ‍್ದನಿಸಿತ್ತು!
ಜೋಹರಿನ ಕುಂಡಗಳಲಿ ಬೇಯುವ ಶವಗಳ
ಖಮಟುವಾಸನೆ ಸಹಿಸುತ್ತ
ಗೋಡೆಯಂತೆ ನಿಂತ ಗೋಡೆಯೇ
ಒಮ್ಮೆಯಾದರೂ ಬಾಯಿಬಿಡು

ಮಳೆ ಬಿಸಿಲು ಗಾಳಿ ಚಳಿ
ರಕ್ಷಣೆಗಾಗಿ ಹುಟ್ಟಿರುವೆ
ಅದೆಷ್ಟು ಅನಾಚಾರ ಅವ್ಯವಹಾರಗಳಿಗೆ
ಮನೆಮಾಡಿಕೊಟ್ಟಿರುವೆ
ಗೋಡೆಯೇ ನೀನು ಕೂಡಿ ಬೆಸೆದದ್ದೆಷ್ಟು
ನೀನದೆಷ್ಟು ಗಟ್ಟಿಮುಟ್ಟಾದ ಕಟ್ಟೋಣವೆಂದರೂ
ಗೋಡೆಯೇ ನೀನೊಂದು ಬರಿದೆ ಹಗೆಯ ಹೊಗೆ

ಅಡುಗೆ ಮನೆಯ ನಾಲ್ಕು ಗೋಡೆಗಳ
ಮಧ್ಯೆ ಕುಗ್ಗಿ ತಗ್ಗಿ ಕೊಳೆತ ದೇಹಗಳೆಷ್ಟೋ
ಒಳಗೆಲ್ಲ ಕ್ಷಣ ಪುರುಸೊತ್ತಿಲ್ಲದ
ದುಡಿತ ದುರಿತ ಹೊಡೆತ ಬಡಿತ ತುಳಿತ
ಒಲೆಯ ಬೆಂಕಿಯಲಿ ಜೀವಂತ
ದಹಿಸಿ ಹೋಗುವಾಗಿನ ಬೊಬ್ಬೆ ಕಿರುಚಾಟಗಳು
ಹೊರಗೆ ಕೇಳದಂತೆ ತಡೆದಿಟ್ಟ ತಡೆಗೋಡೆ ನೀನು

ಒಂದು ಕೋಣೆ ಎರಡಾಗಲು
ಒಂದು ಗೋಡೆ ನಡುವೆ ಸಾಕು
ಆ ಕೋಣೆಯೊಳಗಿರುವವನ ಕೊಲ್ಲಲು
ಈ ಕೋಣೆಯೊಳಗೆ ನಡೆವ ಸಂಚು
ಎಲ್ಲ ಹುದುಗಿಸಿಕೊಂಡೂ ಮುಗುಮ್ಮಾಗಿದ್ದೆ ನಡುಗೋಡೆ
ಹಸಿ ರಕ್ತ ಪಚಲ್ಲೆಂದು ನಿನ್ನಮೇಲೆ ಸಿಡಿದಾಗಲೂ
ಆ ಕಲೆಗಳ ಯಾರೋ ಉಜ್ಜುಜ್ಜಿ ತೊಳೆದಾಗಲೂ
ಹೆಣಗಳೆಂಬ ಹೆಣಗಳ, ಮತ್ತಷ್ಟು ಕುರುಹುಗಳ
ನಿನ್ನ ಪಾದದಡಿಯ ಪಾತಾಳದಲಿ ಹೂತಾಗಲೂ
ಗರಬಡಿದಂತೆ ಮೌನದಾಳಿದ್ದ ಗೋಡೆ ನೀನು

ಇಟ್ಟಿಗೆ ಇಟ್ಟಿಗೆಗಳಲೂ ಸಾಕ್ಷ್ಯ ಮುಚ್ಚಿಟ್ಟ
ನಿಷ್ಪಂದಿತ ಗೋಡೆಯೇ ನಿನ್ನ ಕಥೆಯೇ ಹೀಗಾದರೆ
ಇನ್ನು ಆ ಗುಡಿಸಲುಗಳ ತಟ್ಟಿಗಳ ಪ್ರತಿ ಎಳೆ ಎಳೆಯೊಳಗೂ
ಅದಿನ್ನೆಷ್ಟು ಕಥೆಗಳಗಿದ್ದಾವು!

ಸುಣ್ಣಬಣ್ಣದಿ ಸುಶೋಭಿತ, ಮಿನುಗು ದೀಪ ಝಗಮಗಿತ
ಚಿತ್ರ ಚಿತ್ತಾರಾಲಂಕೃತ ಅಹಂಕಾರಿ ಗೋಡೆಯೇ
ನೀನಿನ್ನೂ ಆ ಕಪ್ಪು ಹೂಗಳ
ಆರ‍್ತನಾದ ಆಕ್ರಂದನಗಳ ಕಂಡುಕೇಳಿಲ್ಲ
ಯಾಕೆಂದರೆ
ಅವು ನಿನ್ನರಮನೆಗೆ ಕಾಲಿಡುವುದಿರಲಿ
ನಿನ್ನಿಂದ ಮೈಲುಗಳ ದೂರದಲಿ ನಡೆದಾಡುವಾಗಲೂ
ಪೊರಕೆ ಕಟ್ಟಿಕೊಳ್ಳಬೇಕಂತೆ ಕಾಲುಗಳಿಗೆ!

ಮೂಕ ಗೋಡೆಯೇ..
ಅದೆಷ್ಟು ಎತ್ತರಕೆ ಬೆಳೆದಿದ್ದೀ
ಒಮ್ಮೆ ಕೆಳಕ್ಕೆ ಬಗ್ಗಿ ನೋಡು
ನಿನ್ನಡಿಪಾಯದಲಿ ಬೆವರ ಒರತೆಗಳು
ಅವೆಷ್ಟು ಹಸಿ ನೆತ್ತರದ ನದ ನದಿಗಳು
ಉಕ್ಕುಕ್ಕಿ ಹರಿಯುತಿದೆ

ಮೂಕ ಗೋಡೆಯೇ
ಒಮ್ಮೆಯಾದರೂ ಬಾಯಿಬಿಡು
ಇಲ್ಲವೇ
ಭೂಮಿಯೇ ನೀನಾದರೂ ಬಾಯಿಬಿಡು
ಗೋಡೆಗಳೆಲ್ಲ ಕುಸಿದು
ಉಳಿಯಲಲ್ಲಿ ಬರಿದೆ ಬಯಲು! 

ಮುದ್ದು ತೀರ್ಥಹಳ್ಳಿ  ಮುದ್ದು ತೀರ್ಥಹಳ್ಳಿ  ಕಾವ್ಯನಾಮವನ್ನಿಟ್ಟುಕೊಂಡು ಬರೆವ ಯುವ ಕವಿಯತ್ರಿಯ ಮೂಲ ಹೆಸರು ವಿತಾಶಾ ರಿಯಾ.  ತೀರ್ಥಹಳ್ಳಿಯ ಸರ‍್ಕಾರಿ ಪದವಿಪೂರ‍್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ದ್ವಿತೀಯ ಪಿ.ಯುಸಿ ಓದುವ ವಿದ್ಯಾರ್ಥಿನಿ. ಇಷ್ಟು ಕಿರಿವಯದಲ್ಲಿ ಪ್ರಕಟವಾದ ಪುಸ್ತಕಗಳು ಐದು. ಅದರಲ್ಲಿ ಮೂರು ಕವನ ಸಂಕಲನಗಳು ಸೇರಿವೆ.
ಹೂಗೊಂಚಲು (ಕವನ ಮತ್ತು ಕಥೆ), ಕಾನನ ಕಲರವ (ಕವಿತೆ), ಎಷ್ಟು ಬಣ್ಣದ ಇರುಳು! (ಕವಿತೆ), ಒಂದು ಚಂದ್ರನ ತುಂಡು (ಲಲಿತ ಪ್ರಬಂಧ), ಕಾಡಹಾದಿಯ ಹೂಗಳು (ಕಾದಂಬರಿ)  ಐದು ವರ‍್ಷಗಳ ಕಾಲ ಮುದ್ದು ನಡೆಸಿದ ಪತ್ರಿಕೆ  ಮಂದಾನಿಲ. ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ,

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...