Monday, November 16, 2015

ಸರಸ್ವತಿ ಕೆ. ಬಿ. ಎರಡು ಕವಿತೆಗಳು






೧ 

ಸ್ವಾತಂತ್ರ್ಯದ ಹಕ್ಕಿಗಳು



ಸ್ವಾತಂತ್ರ್ಯದ ಹಕ್ಕಿಗಳು ಈ ವರುಷ
ವಲಸೆ ಬರುವುದಿಲ್ಲವಂತೆ
ಹವಾಮಾನ ಇಲಾಖೆಯ ಗುಮಾಸ್ತನಿಗೆ
ನೆನಪು ಮರೆತುಹೋಗಿದೆ.
ಅಹಂಕಾರವೆಂಬ ಕೊಡಕ್ಕೆ
ನೀರು ತುಂಬಲು ಜನ ಕಾಯುತ್ತಿದ್ದಾರೆ.
ಜಾಹೀರಾತುಗಳು ಎಲ್ಲಾ ಜನರ
ನಾಲಿಗೆಗೆ ಬೀಗ ಹಾಕಬೇಕು ಪಾಪ
ಬಿಡುವೆಲ್ಲಿದೆ?
ಈ ಸೊಕ್ಕಿನ ಹಕ್ಕಿಗಳಿಗೆ
ಎಂತ ಧಾಡಿ?
ಸುಮ್ಮನೆ ಬಂದು ಹೋಗಲಿ
ಎಷ್ಟು ಬೇಕು ದುಡ್ಡು, ಬಿಸಾಕುವುದಿಲ್ಲವಾ?
ಮರಗಳಿಲ್ಲದೇ ಹೋದರೇನು, ತಂತಿ ಕಂಬಗಳಿಲ್ಲವಾ?
ಬೇಲಿಗಳನ್ನು ನುಂಗಿರುವ ನುಣುಪಾದ ಹೆದ್ದಾರಿಗಳಿಲ್ಲವಾ?
ಭ್ರಷ್ಟತೆಯ ಫಸಲು ಹೊತ್ತ ಸಮೃದ್ಧ ಹೊಲಗಳಿಲ್ಲವಾ?
ಮುಟ್ಟಿದರೆ ಮುನಿಯುವವರನ್ನು ಹಿಡಿದಿಡಿದು ಅರೆಯುತ್ತಿಲ್ಲವಾ?
ರಕ್ಷಿಸುವವರೆಂದು ಸೋಗು ಹಾಕುತ್ತಲೇ ನನ್ನ ದೇಹವನ್ನು ಅಡ್ಡ-ಉದ್ದ ಸೀಳುತ್ತಿಲ್ಲವಾ?
ಮತ್ತೇನು ಬೇಕು?
ಓ ನನ್ನ ದೇಶವೇ,
ಭಯ ಹೊತ್ತಿ ಉರಿಯುತ್ತಿದೆ,
ಎಲ್ಲಾದರೂ ಇರಲಿ, ರೆಕ್ಕೆ ಸುಟ್ಟುಕೊಳ್ಳದಿರಲಿ
ಹಕ್ಕಿಗಳು ಬರದಿರಲಿ ಈ ನಾಡಿಗೆ.
***


೨ 
ಅಕ್ಷರಗಳು


ದಣಿವಾಗಿದೆ ಅಕ್ಷರಗಳಿಗೆ
ಪದ, ಸೊಲ್ಲುಗಳಿಗೆ; ಬೇಸಿಗೆ ಬಂತಲ್ಲ
ಎಲ್ಲದಕ್ಕೂ ತತ್ವಾರ.
ಪಿಸುದನಿಯಿಲ್ಲ, ಬುಡುಬುಡಿಕೆ ಮಾತ್ರ
ಚಳಿಗಾಲ ಕಳೆಯಿತಲ್ಲ.
ಹರಡಿರುವಿರಿ ಹಳದಿ ಉದುರಿದ ಎಲೆಗಳಂತೆ
ಜಗಳ, ಕೇಕೆ ಆರ್ಭಟ ಮಾತ್ರ
ಹನಿತು ಮೊಳೆಯಲು ಸಂಜೆಯಾಯಿತಲ್ಲ.
ನಿಮ್ಮೊಂದಿಗೆ ನನ್ನ ಜಗಳವಿದೆ,
ಮಾತುಗಳ ಮೇಲಿನ ಆರ್ದ್ರತೆ
ಆವಿಯಾಗಿದೆ, ಬರದಿಂದ
ನಿಮ್ಮ ಉಸಿರಿಗೆ ಕರಗುತ್ತಿಲ್ಲ ಇಬ್ಬನಿ
ಆದರೂ
ಬಡಿದಾಡುವ ಆನಂದ ನಿಮಗೆ
ಸೋತು ಮಲಗಿದಾಗ ಮುದ್ದು ಮುಖ
ತುಂಬಿಕೊಳ್ಳುವ ಸಂಭ್ರಮ ನನಗೆ.


ಸರಸ್ವತಿ ಕೆ. ಬಿ. (೧೯೭೪) ತಿಪಟೂರು ತಾಲ್ಲೂಕು ಕಂಚಾಗಟ್ಟದವರು. ತಿಪಟೂರಿನಲ್ಲಿ ಪದವಿ ಮುಗಿಸಿದ ಮೇಲೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲ ಸಾಹಿತ್ಯ ಸ್ನಾತ್ತಕೋತ್ತರ ಪದವಿ ಮತ್ತು ದಲಿತ ಸಂಕಥನಗಳಲ್ಲಿ ಜಾತಿ ಮತ್ತು ಲಿಂಗ ಮುಖಾಮುಖಿ: ಒಂದು ಅಧ್ಯಯನ ಪಿಎಚ್‌ಡಿ ಪ್ರಬಂಧ ಪಡೆದಿದ್ದಾರೆ. ದಕ್ಷಿಣಮುಖಿ ವಿಮರ್ಶಾ ಲೇಖನ ಸಂಕಲನ ಪ್ರಕಟವಾಗಿದೆ (೨೦೧೫). ಸದ್ಯ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಳಾಸ: ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು, ೫೭೨೨೦೧.


n.sarassri@rediffmail.com

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...