Friday, November 13, 2015

ಪುಟ್ಟ ಮಕ್ಕಳು ಮತ್ತೆ ಚಪ್ಪಾಳೆ ತಟ್ಟಲಿಡಾ. ಆರ್ಕೆ ಮಣಿಪಾಲ


ಮುದ್ರಣಯುಗ ಪ್ರಾರಂಭವಾದಂದಿನಿಂದ 1975ರ ವರೆಗೆ ಕನ್ನಡ ಕವಿಗಳು ಬರೆದ ‘ಮಕ್ಕಳ ಪದ್ಯ’ಗಳಿಂದ ಆರಿಸಿರುವ ‘ನೂರಾರು’ ಪದ್ಯಗಳ ಅಪರೂಪದ ಸಂಕಲನ. 47 ಸುಪ್ರಸಿದ್ಧ ಕಲಾವಿದರು ಜೊತೆಗೂಡಿ ಮಕ್ಕಳಿಗಾಗಿ ರಚಿಸಿಕೊಟ್ಟ ‘ನೂರೆಂಟು’ ಮುದ್ದುಚಿತ್ರಗಳ ಸಂಗ್ರಹ ಎಂಬ ಸೂಚನೆ ಒಳ ಶೀರ್ಷಿಕಾ ಪುಟಕ್ಕೆ ಮುನ್ನ ಬರುತ್ತದೆ. ಇದರಲ್ಲಿ ಯಾವ ಸ್ವಪ್ರಚಾರದ ಅತಿಶಯೋಕ್ತಿಯಿಲ್ಲ. ಪ್ರತಿಯಾಗಿ ಸಂಗ್ರಹದ ವ್ಯಾಪ್ತಿ, ಅದು ಈಗಿನ ರೂಪ ಪಡೆಯಲು ಸಂಪಾದಕರು ವಹಿಸಿದ ಶ್ರಮ, ಅವರ ಸಂಘಟನಾ ಸಾಮರ್ಥ್ಯ ಮತ್ತು ಮಕ್ಕಳ ಪುಸ್ತಕದಂಥ ಸದುದ್ದೇಶದಲ್ಲಿ ಹತ್ತಾರು ಮಂದಿಗಳ ಶ್ರದ್ಧಾಪೂರ್ಣ ಸಹಕಾರವನ್ನು ಕನ್ನಡಿಸುತ್ತದೆ. ಮೊದಲ ನೋಟಕ್ಕೇ ಒಳಗೂ ಹೊರಗೂ ಆಕರ್ಷಕವಾಗಿ ಮೂಡಿ ಬಂದಿರುವ ಅಪರೂಪದ ಗ್ರಂಥ ಎಂದು ಹೇಳಲೇಬೇಕಾಗುತ್ತದೆ.


ಒಳಶೀರ್ಷಿಕಾ ಪುಟದಲ್ಲಿ ‘‘ಮಕ್ಕಳು ಆಯ್ದ ನೂರಾರು ಪದ್ಯಗಳು’’ ಎಂಬ ಉಪಶೀರ್ಷಿಕೆ (ಶೀರ್ಷಿಕೆಗೆ ವಿವರಣೆ ಬಂದಿದೆ) ಹಾಗಿದ್ದರೂ ಸಂಪಾದಕರು ಮಕ್ಕಳೆಂದಿರದೆ ಅಥವಾ ಆಯ್ಕೆ ಮಾಡಿದ ಮಕ್ಕಳ ಹೆಸರಿರದೆ ‘ಬೊಳುವಾರು ಮಹಮದ್ ಕುಂಞಿ’’ ಎಂದಿದೆ. ಪ್ರತಿಯಾಗಿ ಅವರ ಮಕ್ಕಳ ಹೆಸರೇ ಇರಬಹುದಾಗಿತ್ತು. ಏಕೆಂದರೆ ಪುಟ 55ರಲ್ಲಿ ನಮೂದಿಸಿದಂತೆ ಈ ಮಕ್ಕಳೇ ಪದ್ಯಗಳ ಆಯ್ಕೆ ವಯೋವಿಂಗಡನೆಗಾಗಿ ಕೆಲಸ ಮಾಡಿದ್ದು.

ಈ ಸಂಗ್ರಹದಲ್ಲಿ ಮೂರು ವಿಭಾಗಗಳಿವೆ.
1) ಚಿಗುರು (5ರಿಂದ 7 ವಯೋಮಿತಿಯವರಿಗೆ) 45 ಪದ್ಯಗಳಿವೆ.
2) ಮುಗುಳು (8ರಿಂದ 10 ವಯೋಮಿತಿಯವರಿಗೆ) 37 ಪದ್ಯಗಳಿವೆ.
3) ಅರಳು (11ರಿಂದ ಮೇಲಿನ ಮಕ್ಕಳಿಗೆ) 24 ಪದ್ಯಗಳಿವೆ.

ಹಿರಿಯ ಸಾಹಿತಿ ಕೆ. ಶಿವರಾಮ ಕಾರಂತರು ‘ಮುನ್ನುಡಿ’ಯಲ್ಲಿ ತಮ್ಮ ಎಂದಿನ ವಿವೇಕದ ಮಾತುಗಳನ್ನು ಆಡಿದ್ದಾರೆ. ಶಿಶುಗೀತೆಗಳ ಇಂಥ ಸಂಗ್ರಹವನ್ನು ಹೊರತರಲು ಬೊಳುವಾರು ವಹಿಸಿದ ಶ್ರಮಕ್ಕಾಗಿ ಸಹಜವಾಗಿಯೇ ಪ್ರಶಂಸಿಸಿದ್ದಾರೆ. ತನ್ನ ಪದ್ಯಕ್ಕೆ ಸ್ವತಃ ತಾವೆೇ ಚಿತ್ರ ಬರೆದು ಕೊಟ್ಟಿದ್ದಾರೆ.

ಪ್ರಸ್ತಾವನೆಯಲ್ಲಿ (27-58) ಬೊಳುವಾರು ತನ್ನ ಸಂಗ್ರಹದ ಕ್ರಮ, ಧ್ಯೇಯ ಹಾಗೂ ಸಹಕರಿಸಿದ ವ್ಯಕ್ತಿ, ಸಂಘಸಂಸ್ಥೆಗಳ ಬಗ್ಗೆ ಬರೆದಿದ್ದಾರೆ. ಅಗಾಧವಾದ ಶ್ರಮ, ವ್ಯಾಪಕ ತಿರುಗಾಟ, ಸಹನೆ ಅಗತ್ಯವಾದ ಈ ಕೆಲಸವನ್ನು ಅವರು ನಿರ್ವಹಿಸಿದ ಬಗೆಯ ಇಣುಕುನೋಟ ಇಲ್ಲಿ ಸಿಗುತ್ತದೆ. ಒಳ್ಳೆಯ ಕೆಲಸಕ್ಕೆ ಸಹಕಾರ ನೀಡುವವರು ಈಗಲೂ ಸಿಗುತ್ತಾರೆಂಬುದನ್ನು ಈ ಗ್ರಂಥದ ಮೂಲಕ ನಿರೂಪಿಸಿದ್ದಾರೆ. ಅವರು ಈ ಗ್ರಂಥದ ತಯಾರಿಯ ವಿಷಯದಲ್ಲಿ ಆಡಿದ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ.
ಬಾಲ ಸಾಹಿತ್ಯಕ್ಕೆ ಕೊಡುಗೆ ನೀಡಿದ ಎಲ್ಲ ಪ್ರಮುಖ ಸಾಹಿತಿಗಳ ರಚನೆಗಳೂ ಇಲ್ಲಿವೆ. ಆಯಾ ಪದ್ಯಕ್ಕೆ ಕಳೆಗಟ್ಟಿರುವ ಚಿತ್ರ. ಕೊನೆಯಲ್ಲಿ ಮೂಲ ಗ್ರಂಥದ ಹೆಸರು ಮತ್ತು ಪ್ರಕಟನಾ ವರ್ಷದ ನಮೂದು ಬಂದಿದ್ದು ಹೆಚ್ಚಿನ ಆಸಕ್ತಿ ಇರುವವರಿಗೆ ಉಪಯುಕ್ತವಾಗಿದೆ.

ಸುಪ್ರಸಿದ್ಧ ‘ನಾಯಿಮರಿ, ತುತ್ತೂರಿ, ನನ್ನ ಕುದುರೆ, ಕೋಟುಗೀಟು, ಯಾಕೋ ಗೊತ್ತಿಲ್ಲ, ಬಣ್ಣದ ಹಕ್ಕಿ, ಬಾಬಾ ಗಿಳಿಯೆ, ಗುಬ್ಬಿ, ಮರುಳಕಾಗೆ, ಚಂದಿರನೇತಕೆ ಓಡುವನಮ್ಮ, ದಡ್ಡನ ಹಾಡು, ಅನ್ನದಾತ, ಹಾವಿನ ಹಾಡು, ಬಾವಿಯಲ್ಲಿ ಚಂದ್ರ, ಗಡಿಯಾರ, ಅಂಚೆಯ ಅಣ್ಣ, ಸುಗ್ಗಿ, ಮಂಗಗಳ ಉಪವಾಸ, ಮಂಗನ ಮದುವೆ, ನೀ ನನಗಿದ್ದರೆ, ಗೋವಿನ ಚರಿತೆ, ಪಂಜರದ ಪಕ್ಷಿ, ಗಿರಿಗಿರಿಗಿಂಡಿ, ಪಾತರಗಿತ್ತಿ ಪಕ್ಕ, ಹಿಂದಿನ ಸಾಲಿನ ಹುಡುಗರು, ತಿರುಕನ ಕನಸು, ಗೋವಿನ ಹಾಡು’ ಮುಂತಾದ ಹಾಡುಗಳು ಇಲ್ಲಿವೆಯೆಂದೇ ಸಂಕಲನ ಅಮೂಲ್ಯವೆನಿಸಿದೆ. ಪ್ರೌಢರಿಗೂ ತಮ್ಮ ಬಾಲ್ಯದ ದಿನಗಳ ಹಸಿರು ನೆನಪುಗಳನ್ನು ಗರಿಗೆದರಿಸಿ ಬಿಡುತ್ತದೆ. ಸೃಜನಶೀಲ ಲೇಖಕರಾದ ಬೊಳುವಾರು ಒಬ್ಬ ತಂದೆಯಾಗಿ ಕೂಡಾ ಮಕ್ಕಳ ವಿಷಯದಲ್ಲಿ ತನ್ನ ಕರ್ತವ್ಯದ ಬಗ್ಗೆ ತಲೆಗೆಡಿಸಿಕೊಂಡಿದ್ದಾರೆ. ಎಲ್ಲ ತಂದೆಯಂದಿರನ್ನು ಋಣಭಾರಕ್ಕೆ ಸಿಕ್ಕಿಸಿದ್ದಾರೆ. ಮಕ್ಕಳು ಹಾಡಿ ನಲಿಯುವ, ನಲಿದು ಹಾಡುವ, ಸುಂದರ, ಕಲಾತ್ಮಕ ಹಾಗೂ ಲಯಬದ್ಧ ರಚನೆಗಳನ್ನೇ ಆಯ್ಕೆ ಮಾಡಿರುವುದು ಅವರ ರಸಿಕತೆಯ ದ್ಯೋತಕ. ದುರಂತವೆಂದರೆ ಇವೊತ್ತಿನ ಆಂಗ್ಲ ಮಾಧ್ಯಮದ ಹುಚ್ಚಿನಲ್ಲಿ ಇಂಥ ಹಾಡುಗಳು ಮೂಲೆಗುಂಪಾಗುತ್ತಿವೆ. ಇವುಗಳನ್ನು ಮತ್ತೆ ಪ್ರಚುರಪಡಿಸಲು ಮಾಧ್ಯಮ ಕುರಿತ ನಮ್ಮ ಧೋರಣೆಯ ತಿದ್ದುಪಡಿಯಾಗಬೇಕಾಗಿದೆ. ಇಂಥ ಸಂಧಿಕಾಲದಲ್ಲಿ ಇಂಥ ಸಂಕಲನದ ಅಗತ್ಯ ತೀರಾ ತುರ್ತಾಗಿದ್ದು, ಬೊಳುವಾರು ಇದನ್ನು ನಿರ್ವಹಿಸಿದ್ದಾರೆ.


‘ತರಕಾರಿ’ ಮೊದಲ ವಿಭಾಗದಲ್ಲಿ ಸೇರಿಸಲು ಯೋಗ್ಯ. ನಾಟಕಾಭಿನಯ, ಆಂಗಿಕ ಚಲನವಲನದ ಕೌಶಲ್ಯದ ಬೆಳವಣಿಗೆಗೆ ಆಸ್ಪದ ಕೊಡುವ ಪದ್ಯ.

ಕೇವಲ ಮಕ್ಕಳ ಪದ್ಯವಷ್ಟೇ ಆಗಿರದೆ ತಾತ್ವಿಕ ಅರ್ಥವನ್ನೂ ಧ್ವನಿಸುವವು ಕೊನೆಯ ವಿಭಾಗದಲ್ಲಿವೆ. ‘ಉದಯರಾಗ, ಬೆಕ್ಕನ್ನು ಕುರಿತು, ಕರಡಿ ಕುಣಿತ, ಸಿಡಿಲು, ಗಿರಿಗಿರಿಗಿಂಡಿ, ಪಾತರಗಿತ್ತಿ ಪಕ್ಕ, ಹಿಂದಿನ ಸಾಲಿನ ಹುಡುಗರು’ ಇದು ಅರ್ಥಪೂರ್ಣ. ಇಲ್ಲಿಯ ಕೆಲವು ಹಾಡುಗಳನ್ನು ಮಕ್ಕಳ ಹಾಡೆಂದು ಕರೆಯುವಂತಿಲ್ಲ.

ಅವುಗಳ ತಾತ್ವಿಕ ನಿರ್ಭರತೆಯೇ ಅವುಗಳು ಕೇವಲ ಮಕ್ಕಳ ಗೀತೆಯಾಗಿ ಬಿಡದಂತೆ ಮಾಡಿದೆ. ಅನುಬಂಧದಲ್ಲಿ ಕೆಲವು ಪುಟಗಳನ್ನು ಖಾಲಿ ಬಿಡಲಾಗಿದ್ದು, ಮಕ್ಕಳು ತಮಗೆ ಬೇಕಾದ ಇತರ ಪದ್ಯಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಮೂಲಕ ಈ ಗ್ರಂಥ ಸಮಗ್ರವೇನಲ್ಲ ಎಂಬುದನ್ನು ಸಂಪಾದಕರು ಧ್ವನಿಸಿದಂತಾಗಿದೆ.
ಹಾಡುಗಳ ಅಕಾರಾದಿ, ಕವಿಗಳ, ಚಿತ್ರಕಾರರ ವಿವರ, ವಿಳಾಸಗಳನ್ನು ಕೊನೆಗೆ ಕೊಟ್ಟಿರುವುದರಿಂದಾಗಿ ಗ್ರಂಥದ ಉಪಯುಕ್ತತೆ ಹೆಚ್ಚಿದೆ.


ಇನ್ನೊಂದೆರಡು ವರ್ಷಗಳಷ್ಟು ಕಾಲ ಸಂಗ್ರಹಣ- ವಿಶ್ಲೇಷಣೆಗಳಿಗೆ ವ್ಯಯಿಸುತ್ತಿದ್ದರೆ ಸಂಕಲನ ಮತ್ತಷ್ಟು ಸಮಗ್ರವೂ, ವೌಲಿಕವಾಗಬಹುದಾಗಿತ್ತಾದರೂ, ಈಗಿನ ರೂಪದಲ್ಲಿ ಸಂಕಲನ ಕಡಿಮೆ ವೌಲ್ಯದ್ದೇನಲ್ಲ. ಉತ್ತಮ ಹಾಳೆ, ಒಳ್ಳೆಯ ಮುದ್ರಣ, ರಕ್ಷಾಪುಟ, ವಿನ್ಯಾಸ, ದಪ್ಪ ಮೊಳೆಗಳು ಈ ಎಲ್ಲದ್ದರಿಂದ ಸಂಗ್ರಹಕಾರರಿಗೆ ಈ ಸಂಕಲನ ಈ ಪ್ರಕಾರದಲ್ಲಿ ಒಂದು ಮಾದರಿಯೊದಗಿಸಿದೆ. ಮಕ್ಕಳಿಗೂ, ಮಕ್ಕಳ ಸಾಹಿತ್ಯದ ಅಭ್ಯಾಸಿಗಳಿಗೂ ಅಮೂಲ್ಯ ಆಕರವಾಗಬಲ್ಲ ಈ ಗ್ರಂಥವನ್ನು ಸರಕಾರ ಸುಲಭದರದಲ್ಲಿ ಜನತೆಗೆ ಒದಗಿಸಬೇಕು. ಸಬ್ಸಿಡಿ ಮೂಲಕ ಕನಿಷ್ಠ 25,000 ಪ್ರತಿಗಳಷ್ಟನ್ನಾದರೂ ಮುದ್ರಿಸಿ ಮಕ್ಕಳಿಗೆ ದೊರಕಿಸಬೇಕು. ಹಿರಿಯರು ತಮ್ಮ ಮಕ್ಕಳಿಗೂ ಇತರರ ಮಕ್ಕಳಿಗೂ ಇಂಥದ್ದೊಂದು ಪುಸ್ತಕವನ್ನು ಉಡುಗೊರೆ ಕೊಡುವಂತಾಗಬೇಕು. ಈ ಗ್ರಂಥ ಮಕ್ಕಳ ಮತ್ತು ಕನ್ನಡಿಗರೆಲ್ಲರ ಬಾಳಿನ ಬುತ್ತಿಯಾಗುವಂತಾಗಬೇಕು.

ಕೊನೆಯ ಮಾತು: ಈ ಮಕ್ಕಳ ಪದ್ಯಗಳ ಸಂಕಲನ 24 ವರ್ಷಗಳ ನಂತರವೂ ಮರುಮುದ್ರಣವಾಗಿಲ್ಲವೆಂಬುದು ಅಚ್ಚರಿಯ ಸಂಗತಿ. ಈ ಮರುಮುದ್ರಣದ ಕೆಲಸವನ್ನು ಬೊಳುವಾರರೇ ಮಾಡಬೇಕೆಂದೇನೂ ಇಲ್ಲ. ಮಕ್ಕಳ ಸಂಘಟನೆಗಳು, ಅಕಾಡಮಿಗಳು, ಪೋಷಕರ ಸಮುದಾಯ ತಮ್ಮ ಮಕ್ಕಳಿಗಷ್ಟೇ ಅಲ್ಲ, ಮುಂದಿನ ಜನಾಂಗದ ಮಕ್ಕಳಿಗೆ ಉಡುಗೊರೆಯಾಗಿ ನೀಡಬಹುದಾಗಿತ್ತು. ಅಲ್ಲದೆ ಈ ಸಂಕಲನದ ಕೊನೆಯಲ್ಲಿ ಕೆಲವು ಖಾಲಿ ಪುಟಗಳನ್ನು ಬಿಟ್ಟಿದ್ದು, ಅಲ್ಲಿ ಮಕ್ಕಳು ಸೇರಿಸಿರಬಹುದಾದ ತಮ್ಮ ಇಷ್ಟದ ಪದ್ಯಗಳನ್ನು ಪರಿಶೀಲಿಸಿ ಎರಡನೆ ಆವೃತ್ತಿ ತರಬಹುದಾಗಿತ್ತು. ನನ್ನ ದೃಷ್ಟಿಯಲ್ಲಿ ಇದು ಪೋಷಕರ ಮತ್ತು ಸಮಾಜದ ಕರ್ತವ್ಯ.

‘ಇಂದಿನ ಮಕ್ಕಳೇ ಮುಂದಿನ ಜನಾಂಗ’ ಎಂದು ಬಜಾಯಿಸುವ ಪೋಷಕರು ಮತ್ತು ನಮ್ಮ ನಾಯಕರು ಏನು ಮಾಡುತ್ತಿದ್ದಾರೆ?

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...