Thursday, November 12, 2015

ದ್ವಿಪದಿಗಳು






1
ಕವಿಯೇ, ಹಗಲ ಹಪಾಹಪಿಗೆ ಬೇಸರಿಸಿ ಇರುಳಿಗೆ ದಾಟಿಕೊಂಡೆ
ಯಾಕೆ ಹಸಿವು ರೂಪು ಬದಲಿಸಿಕೊಂಡು ನಿನದೇ ಬೆನ್ನಿಗಂಟಿತು?

2
ಎದೆಯ ಪಿಸುಮಾತು ಬಿಸಿಬೆತ್ತಲೆ ಬರಿ ನೆಲದ ಕನಸು ಯಾರೊ ಆರಿಸಿದ ಹಣತೆ ಎಷ್ಷೆಲ್ಲ ಒಳಗುಟ್ಟು
ಭ್ರಮೆ ಬಗೆಗೆ ಮಾತಾಡುವ ಲೋಕವೆ ಹಗಲು ನೆಮ್ಮದಿಯಾಗಿರಲಿ ಇರುಳ ಮೇಲಿನ ಪರದೆ ಸರಿಸದಿರು

3

ಕತ್ತಲಲ್ಲಿ ಎದುರುಬದುರಾದೆವು
ಎಲ್ಲೊ ಹೊತ್ತಿದ ಉರಿ, ಮುಖ ಕಾಣತೊಡಗಿತು

4
ಬೆಳಕಿನ ಹುಚ್ಚು ಉನ್ಮಾದಕೇರಿ ಕಡೆಗೂ ಬೇಲಿಯಾದರೆ?
ಚಿಂತೆಯಿಲ್ಲ ಹೊರಬರುವ ವಿದ್ಯೆಯನ್ನು ಇರುಳು ಕಲಿಸಿದೆ

5

ಉರಿವ ಹಣತೆಗಳ ಸಾಲು ನೋಡಿದ ಕಂಗಳಲಿ ಆಹಾ! ಬೆಳಕಿನ ಮಿಂಚು
ಉರಿದು ಸುಟ್ಟುಕೊಳುವ ಗಾಯಗಳೇ ಬೆಳಕಾಗುವ ಅರಿವು ಯಾರಿಗಿತ್ತು ?

6
ಹಣತೆಯಾದರೂ, ಕಾಡಿಗೆ ಸೂರ್ಯನಾದರೂ, ಇದ್ದೇಯಿದೆ  ಸಮಪಾಲ ಕತ್ತಲು
ಮಗಳ ಇಷ್ಟಿಷ್ಟೇ ನಗುವಿನ ಉಲಿಯ ನಡುನಡುವೆ ಡೆಡ್ ಆಗುವ ಎದೆಯ ಫೋನು

7
ಸುಡುವ ಶಬ್ದ ಗಾಯದ ತುಣುಕು ಎರಡೇ ಸಾಲಲಿ ಎಷ್ಟೊಂದಿವೆಯಲ್ಲ ಅವರಿಗಚ್ಚರಿ
ಲೋಕವೆ ಉರಿವ ಹಣತೆಯಲಿ ತಣ್ಣನೆ ಬೆಳಕು ಕಂಡ ದಿನ ನನ್ನ ಸಾಲು ಬದಲಾಗಲಿ

8

ಮತ್ತೇರಲು ಮಧು ಬೇಡ
ನೀ ಸಾಕು!

9
ಲೋಕದ ಎಣಿಕೆ ಮೀರಿ ಮಗಳೆಂಬ ಸಸಿ ಹುಲುಸಾಗಿ ಬೆಳವಣಿಗೆ ಕಂಡಿತು
ಜತೆ ಬದುಕಿದವಳ ನೆನಪಲಿ ಕಣ್ಣೀರು ಕನಸಿನೊಡಗೂಡಿ ಬೇರಿಗೆ ನೀರಾಯಿತು

10

ಲೋಕಪ್ರೀತಿಯ ಬೆರಳಿಗೆ ಗಾಯಗೊಂಡ ರೆಕ್ಕೆಗಳ ಶುಶ್ರೂಷೆಯೇ ಬದುಕು
ಕೊನೆಗುಳಿಯುವುದೇನು ರೆಕ್ಕೆ ಗುಣವಾಗಿ ಹಕ್ಕಿ ಹಾರಿಹೋದ ಖಾಲಿ ಗೂಡು


11
ಬೊಗಸೆ ನೀರು ಅರ್ಧ ಗಂಟಲಕಿಳಿದು ಇನ್ನರ್ಧ ನೆಲ ತೋಯಿಸಿತು
ನೆಂದ ಮಣ್ಣಲಿ ಸೋಣೆ ಹೂವರಳಿ ನೀರ ಹನಿಸಿದ ಮುಡಿಯ ಸೇರಿತು

12

ಎಲ್ಲರಂತೆ ಗೆಲುವುದಕೆಂದೇ ಹುಟ್ಟಿದವನು ಎಂಬಂತಿದೆ ಬದುಕು
ಕೆಳ ನೋಡಿದರೆ ಆಹಾ! ಸೋಲಿಸುವ ಕಾಲದ ಪಾದರಕ್ಷೆ ಧರಿಸಿದ ಕಾಲು

 13
ನೆಲದಡಿ ಹಕ್ಕಿ ತಿನ್ನದೇ ಬಿಟ್ಟ ಕಾಳು ಕಂಡವು
ತಲೆ ಎತ್ತಿದೆ ಕಾಳಿಲ್ಲದ ಖಾಲಿ ತೆನೆ ಕಣ್ಣಿಗೆ ಬಿತ್ತು
 ***

ಚಿತ್ರಗಳು : ಡಾ. ಕೃಷ್ಣ ಗಿಳಿಯಾರ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...