Saturday, November 28, 2015

ಸಿದ್ದು ಸತ್ಯಣ್ಣವರ ಎರಡು ಕವಿತೆಗಳು


 
1
ಭವಿಷ್ಯ ಹಿಡಿದು ನಿಂತ ಅವ್ವ


ವಂಶವಾಹಿಯ ಕುರುಹಾದ
ಅಜ್ಜನ ಖುಷ್ಕಿ ಕೃಷಿಭೂಮಿಯಲಿ
ನಿಟ್ಟುಸಿರು,  ವಿಷಾದ ಹೆಪ್ಪುಗಟ್ಟಿದ ಮೈಲಿಗಲ್ಲು ಬಿಟ್ಟರೆ
ಅಪ್ಪನ ಪಾದದ ಗುರುತುಗಳ ಢಾಳ ಮೌನ
ಫಸಲೆಲ್ಲಾ ಸೊಲ್ಲಡರಿ ಕಪ್ಪಿಟ್ಟಾಗ
ಅಪ್ಪ ಅಲ್ಲಿ ನೆಟ್ಟದ್ದು ರಕ್ತ ಮಾಂಸಗಳ ಹೊರತಾದ ಒಲವಿರಬಹುದೇ? 

ತಾ ತಿನ್ನುವ ಎರಡು ತುತ್ತಿಗೆ
ಊರನ್ನೇ ಹುಗಿಯಬಹುದಾದ ಕರಿ ಹಲ್ಲ ಹೊತ್ತು
ನಗುತ್ತಿದ್ದ ಹೊಲಕ್ಕೆ
ಅಪ್ಪ ಪ್ರಕೃತಿಗೆ ಇದಿರಾಗಿ ಅದೆಷ್ಟು ಬಡಿದಾಡಿಕೊಂಡಿದ್ದು?
ಕತ್ತಲನ್ನೇ ಕಕ್ಕಿದ ಹಗಲು

ವಜನ, ಭಜನೆ, ಭಕ್ತಿಗಳ ಬದುವಾಚೆಗೆ ಮೂಟೆ ಕಟ್ಟಿ
ಎಳೆ ಉಳ್ಳಾಗಡ್ಡಿ ಹುಟ್ಟದೆ, ಸಾಲ ಕೊಟ್ಟವ
ಬಾಯಲಿ ಕೊಸರ್ಯಾಡಿದಾಗ ನಿಜವಾದ  ಕುರುಕ್ಷೇತ್ರ ನನ್ನಪಾಲಿಗೆ
ನೀರಿಗೂ ದಾಹದ ರುಚಿ ಗೊತ್ತಾದ ಘಳಿಗೆಯದು 

ಹುಟ್ಟದ ಪೀಕು, ಪ್ರೇಯಸಿಯನ್ನು ಕಸಿದು
ಮುಂಗಾರಿಯಿಂದ ಹಿಂಗಾರಿಗೆ ಮತ್ತೇನೋ
ಬಿತ್ತಿದಾಗ ಅಲ್ಲಲ್ಲಿ ಹುಟ್ಟಿ, ನೆರಳನ್ನೇ ತುಳಿದು
ಕಾಡಿದ್ದು ಇನ್ನಿಲ್ಲದಷ್ಟು

ದೀಪಕ್ಕೆ ಮುತ್ತಿಟ್ಟ ತುಟಿಗಳು ಸುಟ್ಟಾಗ
ಅಲ್ಲಿ ಅಂಥಾ ಗಾಯದ ಗುಲಗಂಜಿ ಗುರುತೂ ಇಲ್ಲ
ಅಪ್ಪನ ಕನಸುಗಳೇ ಈಗ ನೀರಾವರಿ
ಅದಕ್ಕೆ ಅವ್ವ, ಅವ್ವನೆಂದು ಕರೆಸಿಕೊಳ್ಳುತ್ತಿರಬೇಕು
ಪಿಂಗಾಣಿಯ ಪಾತ್ರೆಯಲಿ ಭವಿಷ್ಯವ ಹಿಡಿದು

2
ಸತ್ತು ಹುಟ್ಟಿದವರುಎದೆಯ ಮೇಲೆ ಗುಲಾಬಿ ಚಿಗುರು
ಹಸಿವಿಗೆ ಅನ್ನವಿಲ್ಲದಿದ್ದರೂ ನಮ್ಮವರ ನೆನಪುಗಳು
ಅದೋ ನೋಡಿ ಅಲ್ಲಿ
ನೀವು ನಕ್ಕ ಚಿತ್ರಗಳೂ ನಮ್ಮ ಬತ್ತಳಿಕೆಯಲಿ 

ಹೊನ್ನಂಬರಿಕೆಯ ಗರಿಕೆಗಳು
ಜೀವನದ ಪುಟಗಳಲಿ ಶಾಯಿ
ಬೇರಿನ ಮಣ್ಣು ಎದೆಯ ಹರವಿನ ಮೇಲೆ
ತುಂತುರು ಹನಿಗಳನ್ನು ದಾಹಕ್ಕೆ ಮದ್ದಾಗಿ ಬಳಸಿಕೊಳ್ಳುವುದು ಗೊತ್ತು
ಅದು ನೀವೆ ಕಲಿಸಿದ ವಿದ್ಯೆ.....! 

ಗೋಡೆಗಾತು ನಿಂತ ಚಪ್ಪಲಿಗಳಿಗೀಗ ನಿರಾಳ
ಕಾಲ ಗುರುತುಗಳು ನೆಲದ ಮೇಲೆ
ಪಾದಬರಹ ಹಣೆಬರಹವಾಗಬಾರದೇಕೆ?
ನಾವೊಂದೆ ಕಡೆ ತಿರುಗಾಡಿಲ್ಲ
ಅಲ್ಲಿ ಏನುಂಟು ಏನಿಲ್ಲ 

ಸತ್ತ ವಸಾಹತುಗಳ ಹುಡುಕಾಟದಲಿ
ಇದ್ದ ಬದುಕು ನಿರ್ಜೀವ ಆಸ್ತಿ
ನಾಲ್ಕು ತುತ್ತಿಗಾಗಿ ಅಲ್ಲಿ ಕಣ್ಣೀರ ಕೋವಿ
ಬತ್ತದ ಅವ್ವನ ಹಾಲು,  ನಾ ಸತ್ತಾಗಲೂ?
ಅಪ್ಪನೊಂದಿಗೆ ಅವಳ ಬಿಟ್ಟರೆ ನೆಚ್ಚಿಕೊಳ್ಳಲಿನ್ನ್ಯಾರು?
ಜಗತ್ತಿನ ತುಂಬಾ ಸಹೃದಯಿ ಅನಾಥ ಮಾತಾಪಿತೃಗಳು

ಆ ಬೀದಿಯ ಹೊಟ್ಟೆಯ ತುಂಬಾ
ಪುಟ್ಟ ಜಗತ್ತಿನ ಅನವರತ ಕಾದಾಟ, ಚೀರಾಟ
ಬ್ರಹ್ಮಾಂಡದಲ್ಲಿ ಬದುಕಿದವರು ಒಳಗಿನ ಒಂದು
ಬಂಧೀಖಾನೆಯ ಗೆಲ್ಲಲಾಗಲಿಲ್ಲ
ಅವ್ವನ ರಾಟಿ ಯಂತ್ರ ಶತಮಾನ ದಾಟಿ
ತಂಗಿ ಕೈಯ್ಯಲ್ಲೀಗ ಚಿಕ್ಕ ಸೂಜಿ
ಹೆಂಡತಿಯದ್ದೋ ಬರೀ ನೂಲು ರೇಷ್ಮೆಯ ಮಾತು

ಕಿಡಿಗೇಡಿಗಳ ಕಿಡಿ ಅಬ್ಬಾ! ಅದೆಂಥಾ ಬೆಂಕಿ
ಹೆ ಹೆ ಅವರು ಕಡ್ಡಿಗೀರಿದ್ದು ನೀರಿನ ಮನೆಯ ಮೇಲೆ
ಹುಟ್ಟಿ ಸತ್ತವರಲ್ಲ ನಾವು
ಸತ್ತು ಹುಟ್ಟಿದವರು,  ಬದುಕು ಗೊತ್ತು
ಜೊತೆಗದರ ನೀತಿಗಳು ದಾರಿಯ ಮುಂದೆಸಿದ್ದು ಸತ್ಯಣ್ಣವರ ಯುವ ಕವಿ ಸಿದ್ದು ಸತ್ಯಣ್ಣವರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದವರು. ಸಧ್ಯ ಧಾರವಾಡದಲ್ಲಿ ಸುವರ್ಣ ವಾಹಿನಿಯ ಪತ್ರಕರ್ತರು. ಅವರ ಮೊದಲ ಪುಸ್ತಕ ' ಹೊಲ, ಅಪ್ಪ ಮತ್ತು ನಾನು' ಪ್ರಬಂಧಗಳ ಸಂಕಲನ ಮುಂದಿನ ವಾರ ಬಿಡುಗಡೆಯಾಗಲಿದೆ.


siddumcj@gmail.com


9632338494 


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...