Saturday, November 14, 2015

ವರ್ತಮಾನದ ಚಲಾವಣೆಯಲ್ಲಿ ಟಿಪ್ಪು

ಜಿ.ಪಿ.ಬಸವರಾಜು
ಟಿಪ್ಪು ಸದ್ಯಕ್ಕೆ ಚಲಾವಣೆಯಲ್ಲಿರುವ ನಾಣ್ಯ. ಈ ನಾಣ್ಯವನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು, ಸಂಘಟನೆಗಳು ಉತ್ಸುಕವಾಗಿರುವುದು ಕರ್ನಾಟಕದ ಸದ್ಯದ ವರ್ತಮಾನ. ಇತಿಹಾಸದಲ್ಲಿ ಆಗಿಹೋದ ಜನಪರ ವ್ಯಕ್ತಿಯನ್ನು ಗೌರವಿಸುವ, ವರ್ತಮಾನದ ಬದುಕಿಗೆ ಪ್ರೇರಣೆಯಾಗಿ ಬಳಸಿಕೊಳ್ಳುವ ಬದಲು, ರಾಜಕೀಯ ಚದುರಂಗದ ಆಟಗಾರರು ಇತಿಹಾಸದ ವ್ಯಕ್ತಿಗಳನ್ನು ಚದುರಂಗದ ದಾಳವಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.

ವಾಲ್ಮೀಕಿ, ಬುದ್ಧ, ಬಸವ, ಕನಕ, ಗಾಂಧೀ, ಅಂಬೇಡ್ಕರ್ ಹೀಗೆ ಅನೇಕ ಮಹತ್ವದ ವ್ಯಕ್ತಿಗಳ ಜಯಂತಿಯನ್ನು ಕರ್ನಾಟಕ ಸರ್ಕಾರ ಆಚರಿಸುತ್ತ ಬಂದಿದೆ. ಕೆಲವು ಸಾಂಪ್ರದಾಯಿಕವಾದ ಆಚರಣೆಗಳಾದರೆ, ಮತ್ತೆ ಕೆಲವು ಹೊಸ ಆಚರಣೆಗಳಾಗಿವೆ. ಈ ಆಚರಣೆಗಳ ಹಿಂದಿನ ಉದ್ದೇಶ ಏನೇ ಇರಲಿ, ಇವು ಯಾವುವೂ ವಿವಾದಕ್ಕೆ ಒಳಗಾಗಿರಲಿಲ್ಲ. ಇದೀಗ ಟಿಪ್ಪು ಜಯಂತಿ ವಿವಾದವನ್ನು ಹುಟ್ಟು ಹಾಕಿದೆ. ಯಾಕೆ ಹೀಗೆ? ಟಿಪ್ಪು ವಿವಾದಾತ್ಮಕ ವ್ಯಕ್ತಿಯೇ? ಹದಿನೆಂಟನೇ ಶತಮಾನದಲ್ಲಿ ಅಂದರೆ ಕೇವಲ ೨೧೬ ವರ್ಷಗಳ ಹಿಂದೆ ಮೈಸೂರು ಸಂಸ್ಥಾನವನ್ನು ಆಳಿದ ಈ ಸುಲ್ತಾನ ಜನಪರವಾದ ಯಾವ ಕೆಲಸಗಳನ್ನೂ ಮಾಡಲಿಲ್ಲವೇ? ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಈ ಸುಲ್ತಾನ ನಡೆಸಿದ ಹೋರಾಟ ಅರ್ಥವಿಲ್ಲದ್ದೇ? ಈತ ಧರ್ಮಾಂಧನಾಗಿದ್ದನೇ? ಸಾವಿರಾರು ಜನ ಅನ್ಯಧರ್ಮೀಯರನ್ನು ತನ್ನ ಧರ್ಮಕ್ಕೆ iತಾಂತರಗೊಳಿಸಿದನೆ? ಜನರಿಗೆ ತೀವ್ರ ಹಿಂಸೆಯನ್ನು ನೀಡಿ ದರ್ಪವನ್ನು ಮೆರೆದನೇ?-ಇಂಥ ಪ್ರಶ್ನೆಗಳು ಈಗ ನಮ್ಮ ಮುಂದಿವೆ.

ಮೌಖಿಕ ಪರಂಪರೆಯಲ್ಲಿಯೇ ಬದುಕಿ ಬಂದ ನಮ್ಮ ಸಮಾಜದಲ್ಲಿ ದಾಖಲೀಕರಣ ಎಂಬುದೇ ಹೊಸದು. ಬ್ರಿಟಿಷರ ಆಗಮನದ ನಂತರವೇ ಈ ದಾಖಲೀಕರಣದ ಅರಿವು ನಮಗಾಗಿದ್ದು. ಶಿಲಾಶಾಸನ ಮತ್ತು ತಾಮ್ರಪತ್ರಗಳ ಮೂಲಕ ನಮ್ಮ ದೊರೆಗಳು ಇತಿಹಾಸದ ಪುಟಗಳನ್ನು ಕಟ್ಟುತ್ತಿದ್ದರೆಂಬುದು ನಿಜ. ಆದರೆ ಅವೆಲ್ಲ ಬಹುಪರಾಕ್ ಸಂಸ್ಕೃತಿಯಲ್ಲಿಯೇ ಚಿಗುರಿದ ಗಿಡಗಳು. ನಿಜವಾದ ಇತಿಹಾಸ ನಮಗೆ ಸಿಕ್ಕುವುದು ಮೌಖಿಕ ಪರಂಪರೆಯ ವಿಧಾನಗಳಲ್ಲಿಯೇ. ಲಾವಣಿಗಳು, ಕತೆಗಳು, ಸಾಮಾನ್ಯ ಜನರು ಕಟ್ಟಿಕೊಂಡ ಇತರ ವಿಧಾನಗಳಲ್ಲಿ ನಮ್ಮ ನಿಜವಾದ ಇತಿಹಾಸ ಉಳಿದುಕೊಂಡಿರುತ್ತದೆ. ದೊರೆಗಳು, ಸುಲ್ತಾನರು ಮಾಡಿಹೋದ ಮಹತ್ವದ ಕೆಲಸಗಳಲ್ಲಿಯೂ ಇತಿಹಾಸ ಕಾಣಿಸುತ್ತದೆ. ಇದನ್ನೆಲ್ಲ ಗಮನಿಸಿ ಇತಿಹಾಸವನ್ನು ಬರೆಯುವುದು ನಮ್ಮ ಇತಿಹಾಸಕಾರರ, ವಿದ್ವಾಂಸರ ಮುಂದಿರುವ ಸವಾಲು. ಸದ್ಯದ ರಾಜಕೀಯವನ್ನು ಉಪೇಕ್ಷಿಸಿ, ಲಾಭ-ನಷ್ಟಗಳ ಪ್ರಶ್ನೆಗಳನ್ನು ಬದಿಗೆ ಸರಿಸಿ, ನಿಜ ಸಂಗತಿ ಯಾವುದು ಎಂಬುದನ್ನು ನೋಡುವ ಧೀರ ಇತಿಹಾಸಕಾರರು ’ಕಾಣುವುದೇ’ ಇತಿಹಾಸ.

ಆದರೆ ಇಂಥ ಇತಿಹಾಸವನ್ನು ಕಾಣುವುದು ಹೇಗೆ? ಅಂಥ ಚಿಂತನೆಗೇ ಅವಕಾಶವಿಲ್ಲದ ಅತಿಸೂಕ್ಷ್ಮ ಸನ್ನಿವೇಶವನ್ನು ನಾವು ಹುಟ್ಟುಹಾಕಿದ್ದೇವೆ. ಇತಿಹಾಸದ ರಾಜನನ್ನು, ಸುಲ್ತಾನನನ್ನು ನೋಡುವುದು ಮೊದಲು ಅವನ ಧರ್ಮದ ಮೂಲಕ; ಜಾತಿಯ ಮೂಲಕ; ಭಾಷೆಯ ಮೂಲಕ. ನೂರಿನ್ನೂರು ವರ್ಷಗಳ ಇತಿಹಾಸದ ಸಂದರ್ಭದಲ್ಲಿ ಯಾವ ಭಾಷೆ, ಯಾವ ಧರ್ಮ, ಯಾವ ಜಾತಿ ಪ್ರಾಮುಖ್ಯತೆ ಪಡೆದುಕೊಂಡಿತ್ತು, ಅವತ್ತಿನ ಸನ್ನಿವೇಶಗಳು ಯಾವುವು, ಅದನ್ನು ಆ ದೊರೆ ಹೇಗೆ ನಿಭಾಯಿಸಿ ತನ್ನ ರಾಜ್ಯವನ್ನು ಆಳಿದ, ತನ್ನ ಪ್ರಜೆಗಳನ್ನು ಹೇಗೆ ನೋಡಿಕೊಂಡ ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳದ ನಾವು, ವರ್ತಮಾನದ ಸಂದರ್ಭವನ್ನಷ್ಟೆ ನೋಡುತ್ತ ರಾಜರನ್ನು, ಸುಲ್ತಾನರನ್ನು ಅಳೆಯಲು ನೋಡುತ್ತೇವೆ. ನಮಗೆ ಇತಿಹಾಸವೇ ಮುಖ್ಯವಾಗಿರದೆ, ವರ್ತಮಾನದ ರಾಜಕೀಯ ಮತ್ತು ರಾಜಕೀಯದ ಲಾಭ-ನಷ್ಟಗಳಷ್ಟೆ ಮುಖ್ಯವಾಗಿರುತ್ತವೆ.

ಟಿಪ್ಪು ’ಧರ್ಮಾಂಧನೇ?’ ಗುಲ್ಬರ್ಗದ ಬಂದೇನವಾಜ್ ನಮಗೆ ಗೊತ್ತು. ಆತ ಸೂಫಿ ಸಂತ; ಚಿಸ್ತಿ ಪರಂಪರೆಯವನು. ಟಿಪ್ಪು ಮೂಲವನ್ನು ಹುಡುಕುವವರಿಗೆ ಈತ ಈ ಪರಂಪರೆಗೆ ಸೇರಿದವನು ಎಂಬುದು ತಿಳಿಯುತ್ತದೆ. ಸೂಫಿ ಪರಂಪರೆ ಬಹುದೊಡ್ಡ, ವಿಶಾಲ ಹೃದಯದ ಪರಂಪರೆ. ’ಧರ್ಮಾಂಧತೆ’ ಎನ್ನುವುದಕ್ಕೆ ಅಲ್ಲಿ ಜಾಗವೇ ಇಲ್ಲ. ಸುಲ್ತಾನನಾಗಿಯೂ ಟಿಪ್ಪು ಅನ್ಯಧರ್ಮಗಳನ್ನು ಸಹಿಸುವವನಾಗಿದ್ದ. ಹಾಗೆ ಸಹಿಸದೇ ಹೋದರೆ ತನ್ನ ರಾಜ್ಯದಲ್ಲಿ ಶಾಂತಿ-ಸೌಹಾರ್ದಗಳು ಕಷ್ಟ ಎನ್ನುವ ವ್ಯಾವಹಾರಿಕ ಸತ್ಯವೂ ಅವನಿಗೆ ತಿಳಿದಿತ್ತು. ಹೀಗಾಗಿಯೇ ಆತ ಈ ಸಹಿಷ್ಣತೆಯನ್ನು ಒಂದು ಮೌಲ್ಯವಾಗಿ ರೂಢಿಸಿಕೊಂಡಿದ್ದ. ಹಿಂದೂ ದೇವಾಲಯಗಳಿಗೆ ಆತ ನೀಡಿದ ಹಣ, ಜಮೀನು, ಚಿನ್ನ, ವಾರ್ಷಿಕ ಅನುದಾನ ಇತ್ಯಾದಿ ಕೊಡುಗೆಯೇ ಈ ಮಾತನ್ನು ಸಾಬೀತುಪಡಿಸುತ್ತದೆ. ಈತ ಬರೆಸಿದ ಸಾವಿರಾರು ಪತ್ರಗಳಲ್ಲಿಯೂ ಇಂಥ ಗುಣಗಳು ಕಾಣಿಸುತ್ತವೆ ಎಂಬುದು ಇತಿಹಾಸಕಾರರ ಅಭಿಪ್ರಾಯ. (ಟಿಪ್ಪು ತನ್ನ ಕೈಯಲ್ಲಿಯೇ ಬರೆದ ೨೦೦೦ ಪತ್ರಗಳು ಸಿಕ್ಕಿವೆ ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ.)

ಟಿಪ್ಪುವಿನ ವ್ಯಕ್ತಿತ್ವವನ್ನು ಕಂಡುಕೊಳ್ಳುವಾಗ ಇನ್ನೊಂದು ಪ್ರಮುಖ ಅಂಶವೂ ಕಣ್ಮುಂದೆ ಬರುತ್ತದೆ. ಅದು ಆತ ಬ್ರಿಟಿಷರ ದಬ್ಬಾಳಿಕೆಗೆ ತಲೆಬಾಗದೆ, ಅದರ ವಿರುದ್ಧ ಸಮರ ಹೂಡಿದ್ದು. ಆ ಹೊತ್ತಿಗೆ ಬ್ರಿಟಿಷರ ಆಧಿಪತ್ಯ, ಆಟಾಟೋಪ ಭಾರತದ ಅನೇಕ ರಾಜ್ಯಗಳಲ್ಲಿ ಮೆರೆಯುತ್ತಿದ್ದವು. ಬ್ರಿಟಿಷರನ್ನು ಎದುರಿಸುವ ಕಷ್ಟವನ್ನೇ ತೆಗೆದುಕೊಳ್ಳದೆ ಅನೇಕ ರಾಜರು ಶರಣಾಗಿ, ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದರು. ಮರಾಠರ ಪೇಶ್ವೆಗಳು, ಹೈದರಾಬಾದಿನ ನಿಜಾಮರು, ಟ್ರಾವಂಕೂರಿನ ರಾಜರು ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಂಡವರಾಗಿದ್ದರು. ಅಂಥ ಹೊತ್ತಿನಲ್ಲಿ ಟಿಪ್ಪು ಬ್ರಿಟಿಷರ ವಿರುದ್ಧ ಯುದ್ಧ ಹೂಡಿದ್ದ. ಆಗ ಅವನು ಬ್ರಿಟಿಷರನ್ನು ಬೆಂಬಲಿಸಿದವರ ವಿರುದ್ಧ ಕಾದುವುದೂ ಅನಿವಾರ್ಯವಾಗಿತ್ತು ಎಂಬುದನ್ನು ನಾವು ಮರೆಯಬಾರದು. ಅದನ್ನು ಸುಲ್ತಾನನ ದಬ್ಬಾಳಿಕೆ, ಕ್ರೌರ್ಯ ಎಂದು ವಿಶ್ಲೇಷಿಸುವುದು ಸರಿಯಾಗಲಾರದು. ಟಿಪ್ಪುವಿನ ಈ ಸ್ವಾತಂತ್ರ್ಯ ಹೋರಾಟದಲ್ಲಿ ಆತ ತನ್ನ ಇಬ್ಬರು ಎಳೆಯ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಾಳುಗಳಾಗಿ ಮಾಡಬೇಕಾಯಿತು ಎಂಬು ಅಂಶವನ್ನು ಮರೆಯುವುದಾದರೂ ಹೇಗೆ?

ಟಿಪ್ಪುವಿನ ಆಡಳಿತ ವಿಧಾನವನ್ನು ಗಮನಿಸಿದರೆ: ಫ್ರಾನ್ಸ್, ಟರ್ಕಿ, ಆಫ್ಘಾನಿಸ್ತಾನ, ಪರ್ಶಿಯಗಳ ಜೊತೆ ಆತ ರಾಜತಾಂತ್ರಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದ. ಬ್ರಿಟಿಷರ ಜೊತೆಯಲ್ಲಿ  ಸೆಣಸಬೇಕಾದರೆ ಈ ಸಂಬಂಧ ಮುಖ್ಯ ಎಂಬುದರ ತಿಳುವಳಿಕೆ ಅವನಿಗಿತ್ತು. ವಿಜ್ಞಾನದ ಮಹತ್ವವನ್ನೂ ಅವನು ತಿಳಿದಿದ್ದ. ಶ್ರೀರಂಗಪಟ್ಟಣದಲ್ಲಿ ಮೊದಲ ರಾಕೆಟ್ ಕೇಂದ್ರವನ್ನು ಸ್ಥಾಪಿಸಿದ ಕೀರ್ತಿಯೂ ಅವನಿಗೇ ಸಲ್ಲಬೇಕು. ಚೀನಾದಿಂದ ರೇಷ್ಮೆಯನ್ನು ತರಿಸಿ ಮೈಸೂರು ರಾಜ್ಯದಲ್ಲಿ ರೇಷ್ಮೆ ಬೆಳೆ ನೆಲೆ ನಿಲ್ಲುವಂತೆ ಮಾಡಿದ. ಪಾನ ನಿರೋಧವನ್ನು ತನ್ನ ರಾಜ್ಯದಲ್ಲಿ ಟಿಪ್ಪು ಜಾರಿಗೆ ತಂದ ಎಂದರೆ ಆತನ ಮನೋಧರ್ಮ ಎಂಥದಿತ್ತು ಎಂಬುದನ್ನು ತಿಳಿಯಬಹುದು. ವಾಲ್ಟರ್, ರೂಸೋ ಅವರ ಪುಸ್ತಕಗಳು ಪರ್ಶಿಯನ್ ಭಾಷೆಗೆ ಅನುವಾದಗೊಂಡು ತನ್ನ ಗ್ರಂಥಾಲಯದಲ್ಲಿ ಇರಬೇಕು, ಅಂಥ ಕಾಣಿಕೆಯನ್ನು ಕೊಡುವುದಾದರೆ ಕೊಡು ಎಂದು ತನ್ನ ತಂದೆಯನ್ನು ಕೇಳಿಕೊಂಡ ಅಪರೂಪದ ವ್ಯಕ್ತಿ ಟಿಪ್ಪು. ಫ್ರೆಂಚ್‌ಕ್ರಾಂತಿಯ ಬಗ್ಗೆ ಕುತೂಹಲಿಯಾಗಿದ್ದ ಟಿಪ್ಪು, ಶ್ರೀರಂಗಪಟ್ಟಣದಲ್ಲಿ ಜಾಕೋಬಿಯನ್ ಕ್ಲಬ್ಬನ್ನು ಸ್ಥಾಪಿಸಿದ್ದ. ಮಲಬಾರ್ ಪ್ರದೇಶದಲ್ಲಿ ಕೆಳಜಾತಿಯ ಹೆಂಗಸರು ಸೊಂಟದ ಮೇಲೆ ಬಟ್ಟೆ ತೊಡಬಾರದು ಎಂಬ ನಿಯಮವನ್ನು ಕಿತ್ತುಹಾಕಿದವನೆಂದೂ ಟಿಪ್ಪುವನ್ನು ಗುರುತಿಸಲಾಗುತ್ತಿದೆ.

ಇದರ ಆಚೆಗಿನ ಇನ್ನೂ ಹಲವಾರು ಸಂಗತಿಗಳಿವೆ ಎಂದು ಇತಿಹಾಸಕಾರರು ಗುರುತಿಸುತ್ತಾರೆ. ಈ ಅಂಶಗಳಿಗೆ ವ್ಯತಿರಿಕ್ತವಾದ ಸಂಗತಿಗಳೂ ಇರಬಹುದು. ಅದನ್ನು ಆ ಕ್ಷೇತ್ರದ ವಿದ್ವಾಂಸರು ಚರ್ಚಿಸಬಹುದು. ಇತಿಹಾಸ ಯಾವಾಗಲೂ ಸರಳವಾಗಿರುವುದಿಲ್ಲ; ನೇರವಾಗಿಯೂ ಇರುವುದಿಲ್ಲ. ಕಂಡಂತೆ, ಕಾಣದಂತೆ, ಮಸುಕು ಮಸುಕಾಗಿರುವಂತೆ, ನಿಚ್ಚಳವಾಗಿರುವಂತೆ-ಹೀಗೆ ಅನೇಕ ಮುಖಗಳು ಎಲ್ಲ ರಾಜರ, ಸುಲ್ತಾನರ ಸುತ್ತಲೂ ಇರುತ್ತವೆ. ಅವನ್ನು ನೋಡುವ ತಾಳ್ಮೆ, ಗ್ರಹಿಸುವ ಆಸಕ್ತಿ, ವಿಶ್ಲೇಷಿಸುವ ಮನೋಧರ್ಮ ವಿದ್ವಾಂಸರಲ್ಲಿ ಇರಬೇಕಾಗುತ್ತದೆ. ಅವರ ಮುಕ್ತ ಸಂವಾದಕ್ಕೂ ಅವಕಾಶ ಇರಬೇಕು. ಅದೇ ಸಮಾಜದ ಸಹಿಸುವ ಗುಣ. ಅದನ್ನು ಕಳೆದುಕೊಂಡರೆ ನಿಜವಾದ ಇತಿಹಾಸ ನಮ್ಮಿಂದ ದೂರವೇ ಉಳಿಯುತ್ತದೆ.

ಇದು ಯಾವುದೂ ತಿಳಿಯದೆ, ಸರಳ ಅಭಿಪ್ರಾಯಗಳನ್ನು ಕಟ್ಟಿಕೊಂಡು ಅವುಗಳಿಗೇ ಇತಿಹಾಸವನ್ನು ಬಗ್ಗಿಸಲು ನೋಡುವುದು ರಾಜಕೀಯ ಹುನ್ನಾರವಾಗುತ್ತದೆ. ಇಂಥ ಹುನ್ನಾರ ಮತಗಟ್ಟೆಯ ಮೇಲೆ ಕಣ್ಣಿಟ್ಟ ಹುನ್ನಾರ. ಚುನಾವಣೆ ಮುಗಿದ ಕೂಡಲೇ ಅಂಥವರಿಗೆ ಟಿಪ್ಪು ಏನೂ ಅಲ್ಲದ ವ್ಯಕ್ತಿಯಾಗುತ್ತಾನೆ; ಇತಿಹಾಸ ಎನ್ನುವುದರ ಬಗ್ಗೆ ಅವರಿಗೆ ಆಸಕ್ತಿಯೂ ಇರುವುದಿಲ್ಲ.
ನಿಜವಾಗಿಯೂ ಟಿಪ್ಪು ಎಂಥ ಸುಲ್ತಾನನಾಗಿದ್ದ?-ಇದನ್ನು ತಿಳಿಯಲು ನಿಜವಾದ ಆಸಕ್ತಿ ಬೇಕಾಗುತ್ತದೆ.


-ಜಿ.ಪಿ.ಬಸವರಾಜು
೯೪೮೦೦ ೫೭೫೮೦


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...