Monday, November 09, 2015

ಟಿಪ್ಪು... ನಿನ್ನೊಳಗೇ ಮಹಾ ಭಾರತ!

- ಬಿ.ಎಂ. ಬಶೀರ್


ಟಿಪ್ಪು... ನಿನ್ನೊಳಗೇ ಮಹಾ ಭಾರತ!


ನಿನ್ನೊಳಗೊಬ್ಬ ದುರ್ಯೋಧನ
ಶಕ್ತಿಯಲ್ಲ್ಲಿ ಭೀಮ, ಗುರಿಯಲ್ಲಿ ಅರ್ಜುನ
ಸಂಚಿನ ಮನೆಯೊಳಗೆ ಸಿಲುಕಿಕೊಂಡ ಅಭಿಮನ್ಯು


ಒಳಗೆ ಕಣ್ಣೀರಿಡುವ ಕರ್ಣ ಇತಿಹಾಸ ಕತ್ತರಿಸಿಕೊಂಡ ಏಕಲವ್ಯನ ಹೆಬ್ಬೆರಳು ಟಿಪ್ಪು....
ನಿನ್ನೊಳಗೇ ಒಂದು ಮಹಾ ಭಾರತ!

ಮುಡಿದುಕೊಂಡೆ ಕೆಂಡದಂತಹ ಕನಸುಗಳ
ಏರಿದ್ದು ಕುದುರೆಯನ್ನಲ್ಲ, ಹುಲಿಯನ್ನು!
ಕೆಳಗಿಳಿಯುವಂತಿಲ್ಲ!
ಮುಳ್ಳು ಹಾಸಿನ ಮೇಲೆ ವಿಶ್ರಾಂತಿ!
ನಾಲ್ದಿಕ್ಕುಗಳಲ್ಲಿ ಉರುಳುತ್ತಿರುವ ದಾಳಗಳು
ಕನಸು ನನಸಾಗುವುದು ಸುಲಭವಿಲ್ಲ!

ಕಟ್ಟಿಕೊಂಡೆ ನೆಲದ ಜನರನ್ನು ಬೆನ್ನಲ್ಲಿ
ದಲಿತ ಮಕ್ಕಳಿಗೆ ಎದೆಯ ಊಡಿಸಿದೆ
ಮಾನ ಮುಚ್ಚಿಕೊಳ್ಳಲು ತೆರಿಗೆ ಕಟ್ಟಬೇಕಾದ
ಮಾನಗೇಡಿ ಸಮಾಜದ ವಿರುದ್ಧ ಕತ್ತಿ ಹಿರಿದೆ
ಸಾರಾಯಿಯ ಉರುಳಿಂದ ಉಳಿಸಿದೆ
ಹರಿವ ನದಿಗೆ ಒಡ್ಡು ಕಟ್ಟಿದೆ
ಕೆಸರು ಗದ್ದೆಯಲ್ಲಿ ಹಸಿರು ಬೆಳೆದೆ
ಪುಸ್ತಕ, ವಿಜ್ಞಾನ,ಕಾವ್ಯ ಎಂದು
ಯುದ್ಧರಂಗದಲ್ಲೇ ಕೂತು ತಲೆಕೆಡಿಸಿಕೊಂಡೆ
ನಿನ್ನ ಯೋಚನೆಗೆ ರಾಕೆಟ್‌ನ ವೇಗ
ರಾಜತಂತ್ರಕ್ಕೆ ಹೊಸ ಭಾಷ್ಯ ಬರೆದೆ

ನರಿಗಳು ಬರೆದ ನಿನ್ನ ಚರಿತ್ರೆಯನ್ನು
ನರಿಗಳೇ ಓದಿ ವಿಶ್ಲೇಷಿಸುವಾಗ
ನಿನ್ನ ಮತಾಂಧನೆಂದು ಜರೆವಾಗ
ಶೃಂಗೇರಿ, ಕೊಲ್ಲೂರು, ಶ್ರೀರಂಗಪಟ್ಟಣ
ದೇಗುಲಗಳ ಘಂಟಾನಾದ ನಾಡನ್ನು ಎಚ್ಚರಿಸುತ್ತವೆ!
ಲೂಟಿಕೋರ ಮರಾಠಿಗರಿಂದ, ನಿಜಾಮರಿಂದ, ಬ್ರಿಟಿಷರಿಂದ

ರಕ್ಷಿಸಲ್ಪಟ್ಟ ನಾಡು, ಮನೆ, ಮಠ, ದೇಗುಲಗಳ ಗೋಡೆಗಳು ಇತಿಹಾಸದ ಹಸಿ ಸತ್ಯಗಳನ್ನು ತೆರೆದಿಡುತ್ತವೆ

ಯಾವುದು ಮತಾಂತರ!?
ಚಂಡಾಲನನ್ನು ಮನುಷ್ಯನನ್ನಾಗಿ ಪರಿವರ್ತಿಸುವುದು?
ಹೌದು, ಒಂದಿಷ್ಟು ಜನರು ಮತಾಂತರಗೊಂಡರು
ಬದುಕು ಕಂಡುಕೊಂಡರು...
ತಮ್ಮದೇ ಕೆರೆ ನೀರನ್ನು ಬೊಗಸೆಯೆತ್ತಿ ಕುಡಿಯುವಂತಾದರು

ನೀನು ಈ ನೆಲವನ್ನು ಪ್ರೀತಿಸಿದಷ್ಟು ಇನ್ನಾರೂ ಪ್ರೀತಿಸಲಿಲ್ಲ
ತನ್ನ ತಾಯಿ, ಪತ್ನಿ, ಮಕ್ಕಳಿಗಿಂತಲೂ ಹೆಚ್ಚೆಂದು ಬಗೆದೆ
ನಿನ್ನದಾದುದನ್ನೆಲ್ಲ ನಾಡಿಗಾಗಿ ಅರ್ಪಿಸಿ
ಬರಿದಾಗುತ್ತಾ ಹೋದೆ...
ಋಣ ಮುಗಿಯಲಿಲ್ಲ
ತಾಯಿನಾಡಿನ ಋಣವನ್ನು ಒಬ್ಬ ಯೋಧ
ತನ್ನ ಪ್ರಾಣವನ್ನು ಅರ್ಪಿಸದೇ ತೀರಿಸುವುದು ಸಾಧ್ಯವೂ ಇಲ್ಲ

ಬದುಕು ರಣರಂಗವೆಂದು ಹೇಳುವರು
ನಿನಗೋ ರಣರಂಗವೇ ಬದುಕು
ನಿನ್ನನ್ನು ಕೆಡವಿದ್ದು ಬ್ರಿಟಿಷರ ಗುಂಡುಗಳಲ್ಲ
ತನ್ನವರ ವಂಚನೆ, ದ್ರೋಹ

ಇತಿಹಾಸದ ಹಿತ್ತಲಲ್ಲಿ ಹೆಣವಾಗಿ ಪೂರ್ಣಯ್ಯ, ಮೀರ್‌ಸಾದಿಕ್‌ಗಳು ಕೊಳೆಯುತ್ತಿದ್ದಾರೆ...
ನೀನೋ ಮತ್ತೆ ಈ ದೇಶದ ಜನಮನದ ಕಣ್ಣುಗಳಲ್ಲಿ
ಬೆಂಕಿಯಾಗಿ ಉರಿಯುತ್ತಿರುವೆ
ಈ ದೇಶವನ್ನು ಕಾಯುತಿರುವೆ! ಪೊರೆಯುತಿರುವೆ!!

***


ಬಿ ಎಂ ಬಶೀರ್ : ಬಿ.ಎಂ.ಬಶೀರ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. (ಚಿನ್ನದ ಪದಕದ ಜೊತೆ) ಐದು ವರ್ಷ ಮುಂಬಯಿಯ ’ಕರ್ನಾಟಕ ಮಲ್ಲ’ ಕನ್ನಡ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ. ಇದಾದ ಬಳಿಕ ಜನವಾಹಿನಿ ದೈನಿಕದಲ್ಲಿ ಐದು ವರ್ಷಹಿರಿಯ ಉಪಸಂಪಾದಕರಾಗಿ ದುಡಿಮೆ. ಮೊದಲ ಕವನ ಸಂಕಲನ ’ಪ್ರವಾದಿಯಕನಸು’. ಮುದ್ದಣ ಕಾವ್ಯ ಪ್ರಶಸ್ತಿ ಸಂದಿದೆ. ಪ್ರಕಟಿತ ಕಥಾಸಂಕಲನ ’ಬಾಳೆಗಿಡ ಗೊನೆ ಹಾಕಿತು’. ಮೈಸೂರಿನ ಚದುರಂಗ ಪ್ರತಿಷ್ಠಾನ ಪ್ರಶಸ್ತಿ ಕೃತಿಗೆ ಸಂದಿದೆ. ’ಅಂಗೈಯಲ್ಲೇ ಆಕಾಶ’ ಎಂಬ ಹನಿ ಹನಿ ಕತೆಗಳ ಪ್ರಕಟವಾಗಿದೆ. ಇದಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ ಸಿಕ್ಕಿದೆ. 'ಬಾಡೂಟದ ಜೊತೆಗೆ ಗಾಂಧಿ ಜಯಂತಿ' ಅವರ ಪ್ರಕಟಿತ ಇನ್ನೊಂದು ಪುಸ್ತಕ. ಕಳೆದ ಹತ್ತು ವರ್ಷಗಳಿಂದ ’ವಾರ್ತಾಭಾರತಿ’ ಕನ್ನಡ ದೈನಿಕದಲಿ ಸುದ್ದಿ ಸಂಪಾದಕರಾಗಿ ವೃತ್ತಿ ಬದುಕು ನಡೆಸುತ್ತಿದ್ದಾರೆ.
 
bmbasheer12@gmail.com


9448835621

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...