Sunday, November 22, 2015

ಮಾಧ್ಯಮ ಜವಾಬ್ದಾರಿ ಮತ್ತು ಕನ್ನಡ ಸುದ್ದಿವಾಹಿನಿಗಳು-ಐ.ಸೇಸುನಾಥನ್


ಮೈಸೂರು ಜೀವಬೆದರಿಕೆ ಘಟನೆ ಕುರಿತು ಪ್ರತಿಕ್ರಿಯೆ ಪಡೆಯಲು ತೆರಳಿದ್ದ ಹಿಂದಿ, ಇಂಗ್ಲಿಷ್ ಹಾಗೂ ಇತರ ಭಾಷೆಗಳ ಪತ್ರಕರ್ತರನ್ನು ಮನೆಯೊಳಗೆ ಕರೆದು ಸಂದರ್ಶನ ನೀಡಿದ ಸಾಹಿತಿ ಗಿರೀಶ್ ಕಾರ್ನಾಡ್ ಅವರು, ಕನ್ನಡ ಸುದ್ದಿವಾಹಿನಿಗಳು ಪ್ರಕರಣದ ಹಾದಿ ತಪ್ಪಿಸುತ್ತಿವೆ ಎಂದು ಹೇಳಿ ಸಂದರ್ಶನದಿಂದ ಹೊರಗಿಟ್ಟ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಕಾರ್ನಾಡರ ಈ ಪ್ರತಿಭಟನೆ ಕನ್ನಡ ಸುದ್ದಿವಾಹಿನಿಗಳಿಗೆ ಚಾಟಿ ಏಟೇ ಸರಿ.

ಅಷ್ಟಕ್ಕೂ ಟಿಪ್ಪುಜಯಂತಿ ಸಂದರ್ಭದಲ್ಲಿ ಕಾರ್ನಾಡರ ಆಕ್ಷೇಪಿತ ಅಭಿಪ್ರಾಯ, ಭಾಷಣದ ಮಧ್ಯೆ ಸಹಜವಾಗಿ ಮೂಡಿ ಬಂದಿದೆಯೇ ಹೊರತು ಉದ್ದೇಶಪೂರ್ವಕವಾಗಿ ಹೇಳಿದ್ದಲ್ಲ. ಆದರೆ ಕನ್ನಡ ಸುದ್ದಿವಾಹಿನಿಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಿದವು. ಕಾರ್ನಾಡರು ಹೀಗೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಮತ್ತೆ ಮತ್ತೆ ಅವರ ಭಾಷಣದ ತುಣುಕನ್ನು ತೋರಿಸಿ ವಿವಾದ ಸೃಷ್ಟಿಸಿದವು. ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಕಾಣಿಸಿಕೊಂಡ ಅನೇಕ ಅನಪೇಕ್ಷಿತ ವಿವಾದಗಳಿಗೆ ತುಪ್ಪಸುರಿದು ಪೋಷಿಸಿದ್ದು ದೃಶ್ಯ ಮಾಧ್ಯಮಗಳೇ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಸುದ್ದಿಯನ್ನು ಇದ್ದ ಹಾಗೇ ವರದಿ ಮಾಡುವುದು ಪತ್ರಿಕಾಧರ್ಮ. ಸುದ್ದಿ ಪ್ರಸಾರ ಮಾಡುವಾಗ ವರದಿಗಾರನ ಅಥವಾ ನಿರೂಪಕನ ವೈಯಕ್ತಿಕ ಅಭಿಪ್ರಾಯಗಳನ್ನು ಹೇರಬಾರದು. ಆದರೆ ನಮ್ಮ ಕನ್ನಡ ವಾಹಿನಿಗಳನ್ನು ನೋಡಿದರೆ ಸುದ್ದಿಗಿಂತ ವೈಯಕ್ತಿಕ ಅಭಿಪ್ರಾಯಗಳೇ ಎದ್ದು ಕಾಣುತ್ತವೆ. ಘಟನಾಸ್ಥಳದಲ್ಲಿ ಸಿಕ್ಕ ಸುದ್ದಿಗೆ ಸ್ಟುಡಿಯೋದಲ್ಲಿ ಕಣ್ಣು-ಮೂಗು-ಬಾಯಿ ಸೇರಿಸಿ ಪ್ರಸಾರ ಮಾಡಲಾಗುತ್ತದೆ. ಹಲವೊಮ್ಮೆ ಸುದ್ದಿಯನ್ನೇ ತಿರುಚಲಾಗುತ್ತದೆ.


ಮಾಧ್ಯಮಗಳಿಗೆ ಸುದ್ದಿ ಪ್ರಸಾರ ಮಾಡುವಾಗ ಎಚ್ಚರಿಕೆ ಅಗತ್ಯ. ಕೋಮು ಸೌಹಾರ್ದತೆಯನ್ನು ಕೆಡಹುವ ಸುದ್ದಿ ಅಥವಾ ಭಾಷಣದ ತುಣುಕುಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುವುದು ಜನರನ್ನು ಕೆರಳಿಸುತ್ತದೆ. ಆದರೆ ಸುದ್ದಿವಾಹಿನಿಗಳಿಗೆ ಅದೇನು ವಿಕೃತ ಖುಷಿಯೋ ಅಂತಹ ಸುದ್ದಿಗಳನ್ನೇ ಪ್ರಸಾರ ಮಾಡಿ, ಅದರ ಬಗ್ಗೆ ದೂರವಾಣಿಯಲ್ಲಿ ನಾಲ್ಕು ಜನರ ಹೇಳಿಕೆ(ಬೈಗುಳ!)ಗಳನ್ನು ಪಡೆದು ಬಿತ್ತರಿಸಿ ಒಂದಷ್ಟು ಜನ ಬೀದಿಗಿಳಿದು ಪ್ರತಿಭಟನೆ ಮಾಡುವವರೆಗೂ ಬಿಡುವುದಿಲ್ಲ. ಸುದ್ದಿಯ ಬೆನ್ನು ಹತ್ತುವುದೆಂದರೆ ಇದೇನಾ!? ಬಂದ್ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆ ಸಂಭವಿಸುವ ಸಾಧ್ಯತೆ ಇದೆಯಾ? ಎಂದು ಕೇಳುವ ನಿರೂಪಕನಿಗೆ ವರದಿಗಾರನ ಉತ್ತರ-ಇನ್ನೂ ಅಹಿತಕರ ಘಟನೆ ಯಾವುದೂ ವರದಿಯಾಗಿಲ್ಲ. ಕಾದು ನೋಡಬೇಕಷ್ಟೇ! ಅಹಿತಕರ ಘಟನೆ ಇನ್ನೂ ಸಂಭವಿಸಿಲ್ಲವಲ್ಲ ಎಂಬ ತವಕ ಇಬ್ಬರಿಗೂ! ಚರ್ಚೆಯ ನೆಪದಲ್ಲಿ ಸ್ಟುಡಿಯೋದಲ್ಲಿ ನಡೆಸುವ ವಾದ-ವಿವಾದ ಬೀದಿ ಜಗಳಕ್ಕಿಂತಲೂ ಕಡೆ. ಆರೋಗ್ಯಪೂರ್ಣ ಚರ್ಚೆಯಾಗುವ ಬದಲು ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳುವ ಪೊಳ್ಳು ಮಾತುಗಳ ವಿಜೃಂಭಣೆ. ಚರ್ಚೆಯನ್ನು ನಡೆಸಿಕೊಡುವ ನಿರೂಪಕರೇ ಪಕ್ಷಪಾತಿಗಳಂತೆ ವರ್ತಿಸುವ ವಿಪರ್ಯಾಸ ಬೇರೆ! 

ಇತ್ತೀಚೆಗೆ ಸಾಹಿತಿ ಕೆ.ಎಸ್.ಭಗವಾನ್ ಅವರೊಂದಿಗೆ ವಾಹಿನಿಯೊಂದರಲ್ಲಿ ಚರ್ಚೆ ನಡೆಯಿತು. ಅವರ ಜೊತೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ಕಲ್ಪಿಸಿ ಕೊಡಲಾಯಿತು. ಆದರೆ ಮೂವರೂ ಆ ಸಾಹಿತಿ ವಿರುದ್ಧ ಮಾತಾಡುವವರೇ ಆಗಿದ್ದರು. ತಮಾಷೆ ಎಂದರೆ ನಾಸ್ತಿಕರೆಂದು ಗುರುತಿಸಿಕೊಂಡಿರುವ ಆ ಸಾಹಿತಿ ಸೌಮ್ಯವಾಗಿ ಮಾತಾಡುತ್ತಿದ್ದರು; ಆಸ್ತಿಕರೆನಿಸಿದ ಆ ಮೂವರೂ ಮೈಮೇಲೆ ದೇವರು ಬಂದಂತೆ ಒಂದೇ ಸಮನೆ ಅಬ್ಬರಿಸುತ್ತಿದ್ದರು! ಚರ್ಚೆ ಎಂದರೆ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವುದೇ? ಕನ್ನಡ ಸುದ್ದಿವಾಹಿನಿಗಳ ಸಂಖ್ಯೆ ನಾಯಿಕೊಡೆಗಳಂತೆ ಹೆಚ್ಚಾಗುತ್ತಿದ್ದರೂ ಗುಣಮಟ್ಟ ಮಾತ್ರ ಸುಧಾರಣೆಯಾಗಿಲ್ಲ. ಯಾವ ಸುದ್ದಿಗೆ ಎಷ್ಟು ಮಹತ್ವ ನೀಡಬೇಕೆಂಬ ಪರಿಜ್ಞಾನ ಇಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಾಣಿಜ್ಯ ಸುದ್ದಿಗೆ ಅವಕಾಶವಿಲ್ಲ. ಎಷ್ಟೋ ಬಾರಿ ಸೆಲೆಬ್ರಟಿಗಳ ಕೌಟುಂಬಿಕ ಜಗಳಗಳನ್ನೇ ದಿನಗಟ್ಟಲೆ ಪ್ರಸಾರ ಮಾಡಿದ್ದೂ ಇದೆ. ಚಿತ್ರನಟರಾದ ದರ್ಶನ್, ದುನಿಯಾ ವಿಜಯ್ ಮುಂತಾದವರ ಕೌಟುಂಬಿಕ ವಿಷಯಗಳನ್ನು ಸುದ್ದಿವಾಹಿನಿಗಳು ಹೇಗೆಲ್ಲ ಎಳೆದಾಡಿದ್ದುವೆಂದು ಎಲ್ಲರಿಗೂ ಗೊತ್ತಿದೆ. ಮನರಂಜನಾ ಸುದ್ದಿ ವಿಭಾಗದಲ್ಲಿ ಒಂದರ್ಧ ನಿಮಿಷದಲ್ಲಿ ಮುಗಿಯಬೇಕಾದ ಸುದ್ದಿ ದಿನವಿಡೀ ಪ್ರಸಾರವಾಗುತ್ತದೆ. ಊಟಕ್ಕೆ ಉಪ್ಪಿನಕಾಯಿ ಇರಬೇಕು ನಿಜ; ಆದರೆ ಉಪ್ಪಿನ ಕಾಯಿಯನ್ನೇ ಊಟವಾಗಿ ಬಡಿಸಿದರೆ ಹೇಗೆ? ಕನ್ನಡ ವಾಹಿನಿಗಳು ಶ್ರಮಪಟ್ಟು ಸುದ್ದಿಗಳನ್ನು ಸಂಗ್ರಹಿಸುವ ಗೋಜಿಗೇ ಹೋಗುವುದಿಲ್ಲ. ಸಿಕ್ಕಿದ್ದನ್ನೆಲ್ಲಾ ಸುದ್ದಿಯೆಂದು ಪ್ರಸಾರ ಮಾಡುತ್ತವೆ. ರಾಜಕಾರಣಿಗಳ ಮಕ್ಕಳಿಗೆ ನಿಶ್ಚಿತಾರ್ಥ-ಮದುವೆಯಾದರೆ ಅದು ಬ್ರೇಕಿಂಗ್ ನ್ಯೂಸ್! ಸೆಲೆಬ್ರೆಟಿಗಳು ಕೆಮ್ಮಿದ್ದು-ಸೀನಿದ್ದೆಲ್ಲಾ ಬ್ರೇಕಿಂಗ್ ನ್ಯೂಸ್! ಹುಚ್ಚ ವೆಂಕಟ್ ಬಿಗ್‌ಬಾಸ್ ಮನೆಯಿಂದ ಹೊರಬಂದದ್ದು ಎಲ್ಲಾ ವಾಹಿನಿಗಳಲ್ಲೂ ಬ್ರೇಕಿಂಗ್ ನ್ಯೂಸ್! ಮರುದಿನ ಎಲ್ಲಾ ವಾಹಿನಿಗಳಲ್ಲೂ ದಿನವಿಡೀ ಹುಚ್ಚು ಹಿಡಿಸುವಷ್ಟು ಹುಚ್ಚ ವೆಂಕಟ್‌ನದ್ದೇ ಸಂದರ್ಶನ! ಕನ್ನಡ ಸುದ್ದಿವಾಹಿನಿಗಳ ಇಂಥಾ ಹುಚ್ಚಾಟಗಳಿಗೆ ಏನೆನ್ನಬೇಕು!

ಯಾವುದೋ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ ಎಂಬ ಸಮಯ ಹಾಳು ಕಾರ್ಯಕ್ರಮವನ್ನು ಎಲ್ಲಾ ಸುದ್ದಿವಾಹಿನಿಗಳು ಮರುಪ್ರಸಾರ ಮಾಡುತ್ತವೆ. ಇಂತಹ ಕಾರ್ಯಕ್ರವಗಳಿಂದ ಸಮಾಜಕ್ಕಾಗುವ ಲಾಭವಾದರೂ ಏನು? ಆ ಮೂಲಕ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ? ಮಕ್ಕಳ ಮನಸ್ಸುಗಳ ಮೇಲೆ ಇದು ಯಾವ ರೀತಿಯ ಪರಿಣಾಮವನ್ನು ಉಂಟುಮಾಡಬಹುದು?

ಕೆಲವು ಸುದ್ದಿವಾಹಿನಿಗಳು ನಿರ್ದಿಷ್ಟ ಹಿತಾಸಕ್ತಿಗಳ ಪರ ಕಾರ್ಯನಿರ್ವಹಿಸುತ್ತಿರುವುದು ಕೂಡ ಆತಂಕಕಾರಿ ಬೆಳವಣಿಗೆ. ಅಂತಹ ವಾಹಿನಿಗಳು ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತವೆ. ಇಂದಿನ ತಾಂತ್ರಿಕ ಯುಗದಲ್ಲಿ ಮಾಧ್ಯಮಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯಾವುದೇ ಸುದ್ದಿಯನ್ನು ವೈಭವೀಕರಿಸದೆ ಪ್ರಸಾರ ಮಾಡಬೇಕು. ಒಂದು ಸುದ್ದಿ ಇತರ ಅನೇಕ ಸುದ್ದಿಗಳನ್ನು ನುಂಗಿ ಹಾಕಬಾರದು. ಸಮಾಜದಲ್ಲಿ ಅನೇಕ ಪ್ರಚಲಿತ ಸಮಸ್ಯೆಗಳಿವೆ. ಅಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಒತ್ತುನೀಡಬೇಕು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...