Saturday, November 14, 2015

ಟಿಪ್ಪು ಸುಲ್ತಾನರ ಜೊತೆ ಕಾಸಿಯ ಸಂದರ್ಶನಚೇಳಯ್ಯ

ಟಿಪ್ಪು ಜಯಂತಿ ಪರ ವಿರೋಧ ಚರ್ಚೆಗಳ ನಡುವೆ ಪತ್ರಕರ್ತ ಎಂಜಲು ಕಾಸಿ ತುಂಬಾ ತುಂಬಾ ಕನ್‌ಫ್ಯೂಸ್ ಆಗಿದ್ದ. ಹಿಂದೆಲ್ಲ ‘‘ಹಳ್ಳಿ ಮೇಲೋ, ಪಟ್ಟಣ ಮೇಲೋ’’ ಎಂಬ ವಿಷಯದ ಬಗ್ಗೆ ಶಾಲೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈಗ ‘‘ಟಿಪ್ಪು ಮತಾಂಧನೋ, ಅಲ್ಲವೋ’ ಎನ್ನುವ ಕುರಿತಂತೆ ಚರ್ಚೆ ನಡೆಯುತ್ತಿದೆ. ಇದಕ್ಕೆಲ್ಲ ಒಂದು ಕೊನೆಯನ್ನು ಕಾಣಿಸಲೇ ಬೇಕಾಗಿದೆ. ಏನು ಮಾಡೋದು? ನೇರವಾಗಿ ಟಿಪ್ಪು ಸುಲ್ತಾನ್‌ನನ್ನೇ ಸಂದರ್ಶನ ಮಾಡಿದರೆ ಹೇಗೆ? ಆದರೆ ಇದು ಹೇಗೆ ಸಾಧ್ಯ? ಇದನ್ನೇ ಕನವರಿಸುತ್ತಾ ಎಂಜಲು ಕಾಸಿ ರಾತ್ರಿ ನಿದ್ದೆ ಮಾಡಿದ. ನಿದ್ದೆಯಲ್ಲಿ ಎಂಜಲು ಕಾಸಿಗೆ ಸ್ವಯಂ ಟಿಪ್ಪು ಸುಲ್ತಾನರ ಕನಸೇ ಬೀಳಬೇಕೆ? ಟಿಪ್ಪು ಸ್ವರ್ಗದಲ್ಲಿ ಅದಾಗಷ್ಟೇ ನಮಾಝ್ ಮುಗಿಸಿ, ತನ್ನ ಸಿಂಹಾಸನದಲ್ಲಿ ಕುಳಿತಿದ್ದರು. ಎಂಜಲು ಕಾಸಿ ನೇರವಾಗಿ ಆತನ ಮುಂದೆ ಮಂಡಿಯೂರಿ ‘‘ಅಸ್ಸಲಾಂ ಅಲೈಕುಂ’’ ಎಂದು ಹೇಳಿಬಿಟ್ಟ.

‘‘ಎಲ್ಲಿಂದ ಬಂದಿರಿ? ನೋಡಿದರೆ ಮೈಸೂರಿನವರ ಹಾಗೆ ಕಾಣುತ್ತೀರಿ...’’ ಟಿಪ್ಪು ರಾಜಗಾಂಭೀರ್ಯದಿಂದ ಕೇಳಿದರು.
‘‘ಹೌದು...ಸುಲ್ತಾನರೇ...ನಾನು ಕರ್ನಾಟಕದ ಪತ್ರಕರ್ತ. ನಿಮ್ಮನ್ನು ಇಂಟರ್ಯೂ ಮಾಡಲು ಬಂದಿದ್ದೇನೆ...ನೀವು ಮತಾಂಧರು ಹೌದೋ, ಅಲ್ಲವೋ ಎನ್ನುವುದು ನಮಗೆ ತಿಳಿಯಬೇಕಾಗಿತ್ತು...’’

ಟಿಪ್ಪು ವಿಷಾದದಿಂದ ನಕ್ಕ ‘‘ಗೊತ್ತು ಗೊತ್ತು... ಭೂಮಿಯಲ್ಲಿ ನನ್ನದೇ ಚರ್ಚೆಯಂತೆ...’’

‘‘ನಿಮ್ಮಿಂದ ಭಾರೀ ಹತ್ಯಾಕಾಂಡಗಳು ನಡೆದಿದೆ ಯಂತೆ ಹೌದಾ?’’ ಎಂಜಲು ಕಾಸಿ ಕೇಳಿದ.

‘‘ಟಿಪ್ಪು ಸತ್ತು ಹಲವು ನೂರು ವರ್ಷಗಳಾದವು. ಗುಜರಾತ್‌ನಲ್ಲಿ ಹತ್ಯಾಕಾಂಡ ನಡೆಯಿತು. ಪಂಜಾಬ್‌ನಲ್ಲಿ ಸಿಖ್ಖರ ಹತ್ಯಾಕಾಂಡ ನಡೆಯಿತು. ಹತ್ಯಾಕಾಂಡ ನಡೆಯುತ್ತಲೇ ಇದೆ...ಟಿಪ್ಪು ಇಲ್ಲದಿದ್ದರೂ... ಹೀಗಿರುವಾಗ ನೀವು ಟಿಪ್ಪುವಿನ ಕಾಲದ ಹತ್ಯಾಕಾಂಡದ ಬಗ್ಗೆಯೇ ಯಾಕೆ ಚಿಂತಿತರಾಗಿದ್ದೀರಿ?’’

‘‘ಹಾಗಲ್ಲ...ಟಿಪ್ಪು ಜಯಂತಿಯ ಹೆಸರಿನಲ್ಲಿ ಕೆಲವು ದುಷ್ಕರ್ಮಿಗಳು ಅಶಾಂತಿ ಹಬ್ಬಿಸುತ್ತಿದ್ದಾರೆ...’’ ಕಾಸಿ ಗೊಂದಲದಿಂದ ಕೇಳಿದರು.

‘‘ಟಿಪ್ಪು ಜಯಂತಿ ಆಚರಿಸುವ ಮೊದಲು ನಿಮ್ಮಲ್ಲಿ ಎಲ್ಲವೂ ಶಾಂತಿಯಿಂದ ತುಂಬಿ ತುಳುಕುತ್ತಿತ್ತೇ?’’ ಟಿಪ್ಪು ಮರು ಪ್ರಶ್ನೆ ಹಾಕಿದ. ‘‘ನಾನು ಮತ್ತು ನನ್ನ ಜನರು ಪ್ರಾಣವನ್ನು, ಹೆಂಡತಿ ಮಕ್ಕಳನ್ನು ಬಲಿಕೊಟ್ಟು ಕಟ್ಟಿದ ನಾಡನ್ನು ಎಂತಹ ಸ್ಥಿತಿಗೆ ತಂದು ಬಿಟ್ಟಿರಿ...’’

‘‘ಬ್ರಿಟಿಷರನ್ನು ನಾವು ಓಡಿಸಿದ್ದೇವೆ ಸುಲ್ತಾನರೇ...ಈಗ ನಮ್ಮ ದೇಶ ಸ್ವತಂತ್ರವಾಗಿದೆ...’’ ಕಾಸಿ ಶುಭ ಸುದ್ದಿ ಹಂಚಿಕೊಂಡ. ‘‘ಹೌದೇ? ಹಾಗಾದರೆ ಪ್ರಧಾನಿ ಮೋದಿಯವರು ಆಂಗ್ಲರ ದೇಶದಲ್ಲಿ ಕುಳಿತು ಅದೇನು ಮಾಡುತ್ತಿದ್ದಾರೆ? ನಮ್ಮ ದೇಶಕ್ಕೆ ಬನ್ನಿ, ನಮ್ಮ ದೇಶಕ್ಕೆ ಬನ್ನಿ ಎಂದು ಅವರೇಕೆ ಆಂಗ್ಲರನ್ನು ಕರೆಯುತ್ತಿದ್ದಾರೆ?’’ ಸುಲ್ತಾನರು ಮರು ಪ್ರಶ್ನೆ ಹಾಕಿದರು.
‘‘ನಮ್ಮಲ್ಲಿ ಬಂಡವಾಳ ಹೂಡುವುದಕ್ಕೆ ಕರೆಯುತ್ತಿದ್ದಾರೆ ಸುಲ್ತಾನರೇ?’’ ಕಾಸಿ ವಿವರಿಸಿದ.

‘‘ಅಂದರೆ ಮತ್ತೆ ವ್ಯಾಪಾರಕ್ಕೆ? ಈಸ್ಟ್ ಇಂಡಿಯಾ ಕಂಪೆನಿಯರು ಈ ದೇಶದಲ್ಲಿ ಬಂಡವಾಳ ಹೂಡುವುದಕ್ಕೆಂದೇ ಬಂದವರು, ನಮಗೆ ಎಂತಹ ಸ್ಥಿತಿ ತಂದಿಟ್ಟರು ಎಂದು ಗೊತ್ತಿಲ್ಲವೇ?’’

‘‘ಹಾಗಲ್ಲ ಸುಲ್ತಾನರೇ.. ದೊಡ್ಡ ದೊಡ್ಡ ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಬರುತ್ತಿದ್ದಾರೆ...’’ ಕಾಸಿ ವಿವರಿಸಿದ.
‘‘ನಾನು ಜಮೀನ್ದಾರರಿಂದ ಭೂಮಿಯನ್ನು ಬಿಡಿಸಿ, ರೈತರಿಗೆ ಹಂಚಿದೆ. ನಿಮ್ಮ ದೊರೆಗಳು ಇದೀಗ ಮತ್ತೆ ರೈತರಿಂದ ಭೂಮಿಯನ್ನು ಬಿಡಿಸಿ ಜಮೀನ್ದಾರರಿಗೆ ಹಂಚುತ್ತಿದ್ದಾರೆ...’’

ಟಿಪ್ಪು ಆತಂಕ ವ್ಯಕ್ತಪಡಿಸಿದರು.

‘‘ಅವರು ಜಮೀನ್ದಾರರಲ್ಲ, ಉದ್ಯಮಿಗಳು ಸುಲ್ತಾನರೇ...’’ ಕಾಸಿ ಸ್ಪಷ್ಟಪಡಿಸಿದ.

‘‘ಭಾಷೆಯಲ್ಲಷ್ಟೇ ವ್ಯತ್ಯಾಸ...ಬ್ರಿಟಿಷರಿಗೆ ಗುಲಾಮನಾಗುವುದು ಬೇಡ ಎಂದು ನಾನು ನನ್ನ ಮಕ್ಕಳನ್ನು ಅವರಿಗೆ ಒತ್ತೆಯಿಟ್ಟೆ....ಇಂದು...ನೀವು...ಇಡೀ ದೇಶವನ್ನೇ ಅವರಿಗೆ ಒತ್ತೆಯಿಟ್ಟಿದ್ದೀರಿ...’’ ಟಿಪ್ಪು ಆಕ್ರೋಶ ವ್ಯಕ್ತಪಡಿಸಿದರು.

‘‘ಅದು ಹೇಗೆ ಸುಲ್ತಾನರೇ...’’ ಕಾಸಿ ಅರ್ಥವಾಗದೇ ಕೇಳಿದ.

‘‘ಮತ್ತೆಂತದು...ವಿಶ್ವ ಬ್ಯಾಂಕಿನ ಸಾಲಕ್ಕಾಗಿ ನೀವು ಭಾರತದ ಎಲ್ಲವನ್ನೂ ಒತ್ತೆಯಿಟ್ಟಿದ್ದೀರಿ. ಆ ಸಾಲಕ್ಕೆ ಬಡ್ಡಿಯನ್ನು ತೆರುತ್ತಾ ತೆರುತ್ತಾ ಜನರು ಕಂಗಾಲಾಗಿದ್ದಾರೆ. ದೇಶದ ಅರ್ಥವ್ಯವಸ್ಥೆಯನ್ನು ವಿಶ್ವಬ್ಯಾಂಕಿಗೆ ಅನುಗುಣವಾಗಿ ರೂಪಿಸುವಂತಹ ಸ್ಥಿತಿ ಬಂದಿದೆ. ನಾನು ನನ್ನ ಮಕ್ಕಳನ್ನು ಒತ್ತೆಯಿಟ್ಟು ನಾಡು ರಕ್ಷಿಸಿದೆ. ಆದರೆ ಇಂದು ನಿಮ್ಮ ದೊರೆ, ಇಡೀ ದೇಶದ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಿಟ್ಟಿದ್ದಾರೆ.....’’ ಟಿಪ್ಪು ಗದ್ಗದ ಕಂಠದಿಂದ ಹೇಳಿದ.

‘‘ದಲಿತರಿಗೆ ಮೊಲೆ ಮುಚ್ಚುವ ತೆರಿಗೆ ಹಾಕಿದ ನಂಬೂದರರಿಗೆ ನಾನು ಸರಿಯಾದ ಪಾಠ ಕಲಿಸಿದೆ. ಇಂದು ಎದೆ ತೆರೆದು ಓಡಾಡುವುದು ಫ್ಯಾಶನ್ ಆಗಿ ಬಿಟ್ಟಿದೆ....ಅವರಿಗೆ ಸಮಾಜದಲ್ಲಿ ಮರ್ಯಾದೆ ಬೇರೆ...ಮಗದೊಂದೆಡೆ ದಲಿತರನ್ನು ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ಸುಟ್ಟು ಹಾಕುತ್ತಿದ್ದಾರೆ...’’ ಟಿಪ್ಪು ಆಕ್ರೋಶದಿಂದ ತನ್ನ ಮೀಸೆಗೆ ಕೈ ಹಾಕಿದಾಗ ಕಾಸಿ ಆತಂಕಗೊಂಡ.
‘‘ನೀವು ಮತ್ತೆ ಹುಟ್ಟಿ ಬರಬಾರದಾ...ಇದೆಲ್ಲವನ್ನು ಸರಿ ಮಾಡಬಾರದೇ ಸುಲ್ತಾನರೇ?’’ ಕಾಸಿ ವಿನೀತವಾಗಿ ಬೇಡಿದ.

‘‘ಹ್ಙಹ್ಙ ನಾನು ಈಗ ಹುಟ್ಟಿ ಬಂದರೆ, ಮುಸ್ಲಿಮರು, ಹಿಂದೂಗಳು, ಕ್ರೈಸ್ತರು ಜೊತೆ ಸೇರಿ ನನ್ನನ್ನು ಕೊಂದು ಹಾಕುತ್ತಾರೆ. ಬ್ರಿಟಿಷರು ನನ್ನನ್ನು ಐಸಿಸ್ ಪಟ್ಟಿಗೆ ಸೇರಿಸಿ ಬಿಡುತ್ತಾರೆ. ಭಾರತ ಸರಕಾರ ಉಗ್ರಗಾಮಿ ಎನ್ನಬಹುದು. ಕೆಲವರು ನಕ್ಸಲೈಟ್ ಎಂದು ಕರೆಯ ಬಹುದು. ಇನ್ನು ಕೆಲವರು ನನ್ನನ್ನು ತಮ್ಮ ಹಸಿರು ಬಾವುಟಕ್ಕೆ ನೇತು ಹಾಕಿಯೇ ಕೊಂದು ಹಾಕಿ ಬಿಡಬಹುದು...ಕನ್ನಡಿಗರು ನನ್ನ ವಿರುದ್ಧ ಕನ್ನಡ ವಿರೋಧಿ ಎಂಬ ಘೋಷಣೆ ಕೂಗಬಹುದು. ನನ್ನನ್ನು ಪರ್ಶಿಯಾಕ್ಕೆ ಓಡಿಸುವುದಕ್ಕೇ ಒಂದು ಚಳವಳಿ ಶುರುವಾಗಬಹುದು...ಆದುದರಿಂದ ನಾನು ಇಲ್ಲಿಯೇ ಇರುತ್ತೇನೆ....ನಿಮ್ಮಲ್ಲಿ ಇರುವ ನೆಮ್ಮದಿಯನ್ನು ಕೆಡಿಸುವುದಿಲ್ಲ’’

‘‘ಸುಲ್ತಾನರೇ...ಒಂದು ಬಾರಿ ಮೈಸೂರಿನ ದಸರಾ ನೋಡುವುದಕ್ಕಾದರೂ ನೀವು ಬರಬೇಕಾಗಿತ್ತು...’’ ಕಾಸಿ ಹೇಳಿದ.
‘‘ಹ್ಹ ಹ್ಹ...ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರು ವಾಗ...ರಾಜ್ಯದಲ್ಲಿ ಕರೆಂಟೇ ಇಲ್ಲದಿರುವಾಗ ವಿದ್ಯುತ್‌ನ್ನು ಅಪಾರವಾಗಿ ಪೋಲು ಮಾಡುತ್ತಾ ಆನೆಯಲ್ಲಿ ಮೆರೆಯಲು ನಾನೇನು ಒಡೆಯರ್ ವಂಶಸ್ಥನಲ್ಲ....’’

‘‘ಸಿದ್ದರಾಮಯ್ಯರು ನಿಮ್ಮ ಹುಟ್ಟಿದ ದಿನವನ್ನು ಸರಕಾರಿ ದಿನವಾಗಿ ಆಚರಿಸಲು ಮುಂದಾಗಿ ದ್ದಾರೆ...ರಾಜ್ಯದಲ್ಲೆಲ್ಲ ಕೆಲವರು ಅದರ ವಿರುದ್ಧ ಮಾತನಾಡುತ್ತಿದ್ದಾರೆ...ಸಂಘರ್ಷಗಳು ನಡೆಯುತ್ತಿವೆ...’’ ಕಾಸಿ ಅಭಿಪ್ರಾಯ ಕೇಳಿದ.

‘‘ನನ್ನ ಹುಟ್ಟಿದ ದಿನವನ್ನು ಆಚರಿಸಿದರೆಷ್ಟು ಬಿಟ್ಟರೆಷ್ಟು? ಈ ದೇಶಕ್ಕೆ ಮತ್ತೆ ಬ್ರಿಟಿಷರು ಕಾಲಿಡುತ್ತಿರುವಾಗ, ದಲಿತರಿಗೆ ನನ್ನ ನಾಡಲ್ಲಿ ಅನ್ಯಾಯವಾಗುತ್ತಿರುವಾಗ, ರೈತರ ಭೂಮಿಯನ್ನು ಜಮೀನ್ದಾರರು ಮತ್ತೆ ಕಿತ್ತುಕೊಳ್ಳುತ್ತಿರುವಾಗ, ನಂಬೂದಿರಿಗಳಂತಹ ವೈದಿಕ ಶೋಷಕರು ಮತ್ತೆ ತಲೆಯೆತ್ತಿರುವಾಗ ನನ್ನ ಹುಟ್ಟಿದ ದಿನ ಆಚರಣೆಯೇ ನನಗೆ ಅವಮಾನ....ಇನ್ನು ನೀವು ಹೋಗಬಹುದು....’’ ಟಿಪ್ಪು ಸುಲ್ತಾನರು ಅಪ್ಪಣೆಕೊಡಿಸಿದರು.

ಆಗ ಕಾಸಿಗೆ ಕಂಡಿತು. ಟಿಪ್ಪುವಿನ ಬೆನ್ನಿನಲ್ಲಿ ನೂರಾರು ಚೂರಿಗಳು ಚುಚ್ಚಲ್ಪಟ್ಟಿದ್ದವು..ರಕ್ತ ಒಸರುತ್ತಿತ್ತು ‘‘ಸುಲ್ತಾನರೇ ನಿಮ್ಮ ಬೆನ್ನಲ್ಲಿ ಚೂರಿ...’’ ಕಾಸಿ ಆತಂಕದಿಂದ ಕೇಳಿದ.

ಟಿಪ್ಪು ವಿಷಾದದಿಂದ ಹೇಳಿದ ‘‘ಅದು ನಮ್ಮವರೇ ಹಾಕಿದ ಚೂರಿ. ಒಂದು ಸಣ್ಣ ಚೂರಿ ಕಾಣುತ್ತಿದೆಯಲ್ಲ, ಅದು ಪೂರ್ಣಯ್ಯರು ಹಾಕಿದ ಚೂರಿ. ಹಸಿರು ಹಿಡಿ ಇರುವ ಒಂದು ತಲವಾರು ಇದೆಯಲ್ಲ, ಅದು ಮೀರ್ ಸಾದಿಕ್ ಹಾಕಿದ ತಲವಾರು...ಮಗದೊಂದು ಕಠಾರಿ ಮರಾಠಿಯವರು ಬೆನ್ನಿಗೆ ತೂರಿಸಿದ್ದು, ಇನ್ನೊಂದು...ನಿಜಾಮರು....’’

ಕಾಸಿಗೆ ಕಣ್ಣೀರು ಉಕ್ಕಿ ಬಂತು ‘‘ಸುಲ್ತಾನರೇ...ನಿಮ್ಮ ಬೆನ್ನಿನಲ್ಲಿ ಈಗಷ್ಟೇ ಪಳಪಳ ಹೊಳೆಯುವ ಹೊಸ ಚೂರಿ ಕಾಣುತ್ತಿದೆಯಲ್ಲ....’’ ಅಚ್ಚರಿಯಿಂದ ಕೇಳಿದ.

‘‘ಓ ಅದಾ...ಇದು ಇತ್ತೀಚೆಗೆ ಚಿದಾನಂದ ಮೂರ್ತಿ ಮತ್ತು ಭೈರಪ್ಪ ಜೊತೆ ಸೇರಿ ಹಾಕಿದ ಚೂರಿ....’’ ಎಂದು ನಕ್ಕರು.

ಅಷ್ಟರಲ್ಲಿ ಕಾಸಿಗೆ ಎಚ್ಚರವಾಯಿತು. ‘‘ಓಹ್ ಕನಸು’’ ಎಂದು ಕಾಸಿ ನಿಟ್ಟುಸಿರು ಬಿಟ್ಟ. ಆದರೆ ಆತನ ಕಣ್ಣಿಂದ ಹರಿದ ಕಣ್ಣೀರು ಕೆನ್ನೆಯಿಂದ ಇಳಿಯುತ್ತಿತ್ತು.

1 comment:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...