Tuesday, November 17, 2015

ಎರಡು ‘ಬ’ ಗಳ ನಡುವೆ ಸಿಲುಕಿಕೊಂಡಿರುವ ಮಾಧ್ಯಮಗಳು!- ಕು. ಸ. ಮಧುಸೂದನ್, ರಂಗೇನಹಳ್ಳಿ


ಎಂಬತ್ತರ ದಶಕದವರೆಗೂ ಮಾಧ್ಯಮಗಳು ಎಡಪಂಥೀಯ ವಿಚಾರಧಾರೆಗಳನ್ನು ಮತ್ತು ಸಮಾಜವಾದಿ ಚಿಂತನೆಗಳನ್ನು ನಂಬಿಕೊಂಡ ವ್ಯಕ್ತಿಗಳಿಂದ ತುಂಬಿದ್ದ ಇಂಡಿಯಾದ ಮಾಧ್ಯಮಗಳು ಇಂದು ಕೋಮುವಾದದ ಸೋಂಕಿನಿಂದ ನರಳುತ್ತಿವೆ. ಅಂದು ಅತಿ ವಿರಳವಾಗಿ ಬಲಪಂಥೀಯ ಶಕ್ತಿಗಳು ಸಕ್ರಿಯವಾಗಿದ್ದುದನ್ನು ಬಿಟ್ಟರೆ ಮಿಕ್ಕಂತೆ ಸಮಾಜಮುಖಿ ಪ್ರಗತಿಪರ ಚಿಂತನೆಯ ಹಾದಿಯಲ್ಲಿ ಅವು ನಡೆಯುತ್ತಿದ್ದವು. ಮಾಜಿ ಪ್ರಧಾನಿಯವರಾದ ಶ್ರೀಮತಿ ಇಂದಿರಾಗಾಂಧಿಯವರು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದರ ವಿರುದ್ಧ ಹೋರಾಡಿದ ಶಕ್ತಿಗಳ ಮಧ್ಯೆ ಬಲಪಂಥೀಯ ಶಕ್ತಿಗಳೂ ಇದ್ದವು. ಅಲ್ಲಿಯವರೆಗೂ ತಮ್ಮದೇ ಆದ ಕೆಲವು ಪ್ರಕಾಶನ ಸಂಸ್ಥೆಗಳ ಮೂಲಕ ಪತ್ರಿಕೆಗಳನ್ನು ಹೊರತರುತ್ತ, ತಮ್ಮ ಸಿದ್ಧ್ದಾಂತಗಳನ್ನು ಪ್ರಚುರ ಪಡಿಸುವ ಕಿರುಹೊತ್ತಿಗೆಗಳನ್ನು ಪ್ರಕಟಿಸುತ್ತಿದ್ದ ಸದರಿ ಶಕ್ತಿಗಳು ಆನಂತರ ಮಾಧ್ಯಮಗಳಲ್ಲಿ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನು ಮಾಧ್ಯಮದೊಳಗೆ ತರುವ ಪ್ರಯತ್ನ ಶುರು ಮಾಡಿದವು. ತದ ನಂತರದಲ್ಲಿ ನಿಧಾನವಾಗಿ ಮತೀಯ ಶಕ್ತಿಗಳು ಪತ್ರಿಕಾರಂಗದಲ್ಲಿ ಸಕ್ರಿಯವಾಗುತ್ತಾ ಹೋದವು.

ತದನಂತರ 1991ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್‌ರವರ ಸಂಪುಟದಲ್ಲಿ ಅರ್ಥ ಸಚಿವರಾಗಿದ್ದ ಮನಮೋಹನ್ ಸಿಂಗ್ ರವರು ಜಾರಿಗೆ ತಂದ ಮುಕ್ತ ಆರ್ಥಿಕ ನೀತಿ ಬಲಪಂಥೀಯ ಶಕ್ತಿಗಳಿಗೆ ಮತ್ತಷ್ಟು ಬಲ ನೀಡಲು ಕಾರಣವಾಗಿಬಿಟ್ಟಿತು. ಜಾಗತೀಕರಣದ ನೆಪದಲ್ಲಿ ತಮ್ಮ ಬಲ ಹೆಚ್ಚಿಸಿಕೊಂಡ ಖಾಸಗಿ ಬಂಡವಾಳಶಾಹಿ ಶಕ್ತಿಗಳಿಗೆ ತಮ್ಮನ್ನು ಬೆಂಬಲಿಸುವ ಹೊರಗಿನ ಶಕ್ತಿಯೊಂದರ ಅಗತ್ಯವಿದ್ದು, ಆ ಜಾಗವನ್ನು ಬಲಪಂಥೀಯ ಸಂಘಟನೆಗಳು ತುಂಬಿದವು. ಆನಂತರದ್ದೀಗ ಇತಿಹಾಸ. ಬಲಪಂಥೀಯ ಶಕ್ತಿಗಳು ಮತ್ತು ಬಂಡವಾಳಶಾಹಿಗಳು ಜೊತೆಗೂಡಿ ಮಾಧ್ಯಮಕ್ಷೇತ್ರವನ್ನು ತಮ್ಮ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಇರುವ ಆಯುಧವೆಂಬಂತೆ ಭಾವಿಸಿ ತಮ್ಮ ಗುಪ್ತ ಕಾರ್ಯತಂತ್ರವನ್ನು ರೂಪಿಸಿ ಜಾರಿಗೊಳಿಸ ತೊಡಗಿದವು. ಅದಕ್ಕೆ ಸರಿಯಾಗಿ ಮುಕ್ತಮಾರುಕಟ್ಟೆಯ ಪರಿಣಾಮವಾಗಿ ಮಾಧ್ಯಮಕ್ಷೇತ್ರದಲ್ಲಿ ಖಾಸಗಿ ಬಂಡವಾಳ ನೀರಿನಂತೆ ಹರಿದು ಬರತೊಡಗಿತು. ಕ್ರಮೇಣ ಇಡೀ ಇಂಡಿಯಾ ಒಂದು ಸುವಿಸ್ತಾರ ಮಾರುಕಟ್ಟೆಯಾಗಿ ಬದಲಾಗತೊಡಗಿತು. ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಟೆಲಿವಿಷನ್ ವಾಹಿನಿಗಳನ್ನು ಪ್ರಾರಂಭಿಸಿದವು. ಎಂಬತ್ತರ ದಶಕದ ಅಂತ್ಯದವರೆಗೆ ಹತ್ತೋ ಹನ್ನೆರಡೋ ಇದ್ದ ವಾಹಿನಿಗಳ ಸಂಖ್ಯೆ ಇವತ್ತು 400ನ್ನೂ ದಾಟಿವೆ. ಒಂದು ಅಂದಾಜಿನ ಪ್ರಕಾರ ಇನ್ನು ಐದು ವರ್ಷಗಳಲ್ಲಿ ಈ ಸಂಖ್ಯೆ 600ನ್ನು ದಾಟಬಹುದಾಗಿದೆ.

 ಬಂಡವಾಳಶಾಹಿ ಶಕ್ತಿಗಳು ತಮ್ಮ ಮುಕ್ತ ಮಾರುಕಟ್ಟೆ ನೀತಿಗನುಗುಣವಾಗಿ ತಮ್ಮ ಸೇವೆ ಉತ್ಪನ್ನಗಳನ್ನು ಜನರ ಬಳಿ ತಲುಪಿಸಲು ಟೆಲಿವಿಷನ್ ಮಾಧ್ಯಮವನ್ನು ಆಯುಧವಾಗಿ ಬಳಸಿಕೊಳ್ಳತೊಡಗಿದವು. ಅದೇ ಕಾಲಕ್ಕೆ ಬಲಪಂಥೀಯ ಶಕ್ತಿಗಳು ಬಂಡವಾಳಶಾಹಿಗಳ ನೆರವಿನೊಂದಿಗೆ ಅದೇ ಟೆಲಿವಿಷನ್ ಮಾಧ್ಯಮವನ್ನು ತನ್ನ ಕೋಮುವಾದವನ್ನು ಸಮಾಜದ ಉದ್ದಗಲಕ್ಕೂ ಪಸರಿಸಲು ಬಳಸಿಕೊಳ್ಳತೊಡಗಿತು. ಹೀಗೆ ಎರಡೂ ಶಕ್ತಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತ ಹೋಗುತ್ತಿವೆ. ಇದಕ್ಕೆ ಸರಿಯಾಗಿ ಕೇವಲ ರಾಷ್ಟ್ರಮಟ್ಟದಲ್ಲಿದ್ದ ಕೆಲವೇ ಕೆಲವು ಇಂಗ್ಲಿಷ್ ಸುದ್ದಿ ಮಾಧ್ಯಮಗಳ ಜಾಗದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಸುದ್ದಿವಾಹಿನಿಗಳು ನಾಯಿಕೊಡೆಗಳಂತೆ ತಲೆ ಎತ್ತಿದವು. ಈ ಬೆಳವಣಿಗೆಯನ್ನು ತನ್ನ ಗುಪ್ತಕಾರ್ಯಸೂಚಿಗೆ ಬಳಸಿಕೊಂಡ ಬಲಪಂಥೀಯ ಸಂಘಟನೆಗಳು ತಮ್ಮ ಪರವಾದ ಸುದ್ದಿಗಳು ಪ್ರಕಟವಾಗುವಂತೆ ನೋಡಿ ಕೊಳ್ಳುತ್ತಾ, ತಮ್ಮನ್ನು ವಿರೋಧಿಸುವ ಎಡಪಂಥೀಯ ವಿಚಾರಧಾರೆಯ ವ್ಯಕ್ತಿ ಸಂಘಟನೆಗಳ ವಿರುದ್ಧ್ದ ಸದ್ದಿಲ್ಲದೆ ಪಿತೂರಿ ನಡೆಸತೊಡಗಿದವು. ಜೊತೆಗೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿರುದ್ಧ ಷಡ್ಯಂತ್ರಗಳನ್ನು ನಡೆಸುತ್ತ ಆ ವರ್ಗದ ನಾಯಕರ ಕಾರ್ಯವೈಖರಿಯನ್ನು ಭೂತಗನ್ನಡಿಯಲ್ಲಿ ನೋಡುತ್ತ ಅವರ ತಪ್ಪುಗಳನ್ನು ವೈಭವೀಕರಿಸುತ್ತ, ತಮ್ಮ ಬಲಪಂಥೀಯ ನಾಯಕರನ್ನು ಅವತಾರ ಪುರುಷರಂತೆ ಬಿಂಬಿಸತೊಡಗಿದವು. ಹೀಗಾಗಿಯೇ ಇವತ್ತು ನಮ್ಮ ಬಹುತೇಕ ಮಾಧ್ಯಮಗಳಲ್ಲಿ ಭಾಜಪ, ಸಂಘಪರಿವಾರದವರ ನಾಯಕರಿಗೆ ಸಿಗುತ್ತಿರುವ ಸಕಾರಾತ್ಮಕ ಪ್ರಚಾರದ ಒಂದಂಶವೂ ಉಳಿದ ನಾಯಕರಿಗೆ ದೊರೆಯುತ್ತಿಲ್ಲ. ಇಂತಹದೊಂದು ನಡವಳಿಕೆಗೆ ಉತ್ತಮ ಉದಾಹರಣೆಯೆಂದರೆ ಕಳೆದ ಲೋಕಸಭಾ ಚುನಾವಣೆಗೂ ಮುಂಚೆ ಈ ದೇಶದ ಬಹುತೇಕ ಮಾಧ್ಯಮಗಳು ನರೇಂದ್ರ ಮೋದಿಯನ್ನು ಅವತಾರಪುರುಷನೆಂಬಂತೆ ಚಿತ್ರಿಸಿ ಅವರಿಗೊಂದು ಕ್ಲೀನ್ ಇಮೇಜನ್ನು ಸೃಷ್ಟಿಸಿ, ಅವರ ಪರವಾದ ಅಲೆಯೊಂದನ್ನು ಕೃತಕವಾಗಿ ಹುಟ್ಟಿಸಿದ್ದು. ಅದರ ಮೂಲಕ ಭಾಜಪ ಚುನಾವಣೆಯನ್ನು ಗೆಲ್ಲುವಂತೆಮಾಡಿದ್ದು. ಇದಕ್ಕೆ ಪೂರಕವಾಗಿ ಹೇಳುವುದಾದರೆ ಇಂದಿಗೂ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ರಾಬ್ಡೀದೇವಿ, ನಿತೀಶ್ ಕುಮಾರ್, ದೇವೇಗೌಡರನ್ನು ಲೇವಡಿ ಮಾಡುವ ಸುದ್ದಿಗಳನ್ನು ಪ್ರಸಾರ ಮಾಡುತ್ತ ಜನರ ದೃಷ್ಟಿಯಲ್ಲಿ ಅವರ ಇಮೇಜನ್ನು ಹಾಳುಗೆಡಹುವ ಪ್ರಯತ್ನವನ್ನು ಮಾಧ್ಯಮಗಳು ಮಾಡುತ್ತಿವೆ.

ಯುಪಿಎ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರನ್ನು ಸೋನಿಯಾಗಾಂಧಿಯವರ ಕೈಗೊಂಬೆಯೆಂದು ಬಣ್ಣಿಸುತ್ತ ಸಿಂಗ್ ರವರ ರಿಮೋಟ್ ಸೋನಿಯಾ ಕೈಲಿ ಇದೆಯೆಂದು ಕುಹಕವಾಡುತ್ತಿದ್ದ ಮಾಧ್ಯಮಗಳಿಂದು ಪ್ರಧಾನಿ ಮೋದಿ ಆರೆಸ್ಸೆಸ್‌ನ ಕೈಗೊಂಬೆಯಂತೆ ವರ್ತಿಸುವುದನ್ನು ನೋಡಿಯೂ ನೋಡದಂತೆ ನಟಿಸುತ್ತಿವೆ. ತೀರಾ ನಮ್ಮ ರಾಜ್ಯದ ಮಟ್ಟಿಗೆ ಬರುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದವರು ಮತ್ತು ಬಲಪಂಥೀಯ ವಿಚಾರಧಾರೆಯ ಕಟು ಟೀಕಾಕಾರರು ಆಗಿರುವುದರಿಂದಲೇ ಅವರು ಜಾರಿಗೆ ತಂದ ಬಹುತೇಕ ಯೋಜನೆಗಳನ್ನು ಭಾಜಪದವರು ಟೀಕಿಸುವುದಕ್ಕೆ ಮುಂಚೆಯೇ ಹಲವು ಮಾಧ್ಯಮಗಳು ಲೇವಡಿಯ ವಿಷಯವನ್ನಾಗಿ ಮಾಡಿ ಸುದ್ದಿಗಳನ್ನು ಬಿತ್ತರಿಸ ತೊಡಗಿದವು. ಅವರ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಮುಂತಾದ ಯೋಜನೆಗಳ್ನು ಇವತ್ತಿಗೂ ಮಾಧ್ಯಮಗಳು ಲೇವಡಿ ಮಾಡುತ್ತಾ ಭಾಜಪ ನಾಯಕರ ನಗಣ್ಯವಾದ ಟೀಕೆಗಳಿಗೂ ಭಾರೀ ಪ್ರಚಾರ ನೀಡುತ್ತ, ತಮ್ಮ ಬಲಪಂಥೀಯ ವಿಚಾರಧಾರೆಯ ವಿಷವನ್ನು ಕಕ್ಕುತ್ತಿವೆ. ಆಗಾಗ ನಡೆಯುವ ಕುಟುಕು ಕಾರ್ಯಾಚರಣೆಯ ಹಿಂದಿನ ಉದ್ದೇಶವೂ ಇಂತಹುದೇ ಬಲಪಂಥೀಯ ಅಸಹನೆಯಾಗಿದೆ.

ಬಂಡವಾಳಶಾಹಿ ಮತ್ತು ಬಲಪಂಥೀಯ ಎಂಬ ಎರಡು ‘ಬ’ ಗಳ ನಡುವೆ ಸಿಕ್ಕಿಹಾಕಿಕೊಂಡ ನಮ್ಮ ಮಾಧ್ಯಮಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸದೆ ಕಣ್ಣಿಗೆ ಹಳದಿಪಟ್ಟಿ ಕಟ್ಟಿದ ರೀತಿಯಲ್ಲಿ ತಮ್ಮನ್ನು ತಾವು ಮುನ್ನಡೆಸಿಕೊಂಡು ನಡೆಯುತ್ತಿವೆ ಎಂಬುದೇ ನಮ್ಮನ್ನು ಗಾಬರಿಗೊಳಿಸುವ ವಿಚಾರ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...