Tuesday, November 24, 2015

ಪುಷ್ಪಾ ಎಚ್. ಎಲ್. ಎರಡು ಕವಿತೆಗಳು

೧ 

ಕ್ಲಿಯೋಪಾತ್ರಳ ಉತ್ಸವನೌಕೆತಹತಹಿಸುತ್ತಿದ್ದಾನೆ ಆಂಟನಿ
ಸಿಂಹಾಸನವೆಂಬ ಮುಳ್ಳು ಮೆತ್ತೆಯ ಮೇಲೆ
ತುಳುಕಾಡುವ ಕಡಲ ಬಟ್ಟಲಲಿ
ತೇಲುತ ಹಾಡುತಾ ಬರುತಿದೆ
ಚಿನ್ನದ ರೇಕಿನ, ನೇರಳೆ ಬಣ್ಣದ ಪಟಗಳ
ಬೆಳ್ಳಿಯ ಹುಟ್ಟುಗಳೊಂದಿಗೆ
ಕಾಮನ ರಂಗಲಿ ಮಿರುಗುವ ಉತ್ಸವನೌಕೆ
ನಟ್ಟನಡುವಲಿ ಕಿನ್ನರಿ ಕ್ಲಿಯೋಪಾತ್ರ.

ಸುಂದರ ಸಖಿಯರೆ ನಾವಿಕರಾಗಿ
ಪಿಳ್ಳಂಗೋವಿಗಳ ಮಿಡುಕಾಟ, ಹಾರ್ಪಗಳಲಿ ಮಿಡಿವಾಟ
ಎಲ್ಲಿದೆ ಮದಿರೆ, ಎಲ್ಲಿದೆ ಸ್ವರ್ಗ
ತೇಲುವ ತೊರೆಗಳ ತೊನೆದಾಟದಲಿ
ಇಲ್ಲೇ, ಇಲ್ಲೇ ಕಡಲ ಬಟ್ಟಲಲಿ
ಸುರಸುಂದರಿ ಹೆಣ್ಣಿನ ನಿರಿಗೆಯಲಿ
ಕೂಡುವ, ಕಾಡುವ, ಕಾದಲನ ಕಾಮನೆಯಲ್ಲಿ.

ಚಿನ್ನದ ರೇಕಿನ ಹಡಗಿನ ಹುಡುಗಿಯ
ಎದೆಯಲ್ಲಡಗಿದೆ ಈಜಿಪ್ಟಿನ ಮಣ್ಣ ಋಣ
ರಕ್ತದ ಕಣಕಣದಲ್ಲೂ ನಾಡೇ ಅಡಗಿ
ಪ್ರಣಯವು ಗೆಲ್ಲುವ ಆಟವೇ ಆಗಿ
ಮುಳುಗಿದ ಆಂಟನಿ ತೇಲಲೇ ಇಲ್ಲ.
ಬೈಗುಳದ ಬದಲು ಬಯಕೆಯ ಆಳಕೆ ಕುಸಿದು
ರಾಜ್ಯಗಳೆಲ್ಲವ ಕೊಡುತಲೇ ಹೋದ
ಬಯಕೆಗೂ ಬೈಗುಳಕೂ ಅಂತರವೇ ಇಲ್ಲ

ಬೊಕ್ಕತಲೆಯ ಜಾರ ಸೀಸರನನ್ನು
ಕೂಡಿದ್ದು ಈಜಿಪ್ಟಿಗಾಗಿಯೇ
ಆಂಟನಿಗೆ ಮೈತೆತ್ತಿದ್ದು ಈಜಿಪ್ಟಿಗಾಗಿಯೇ
ಮೋಹದ ಹೆಣ್ಣಿನ ಮೈಮನದಲ್ಲಿ
ನನ್ನದು ನನ್ನದು ಎಂಬ ಮಣ್ಣಿನ ಮಿಡಿತ
ಎದೆಯಲಿ ಮಿಡಿ ನಾಗರ ಮೊರೆತ.

ಸೀಸರ್ ಸತ್ತ, ಆಂಟನಿ ಸತ್ತ
ಉಳಿದದ್ದೇನು? ಚೆಲುವೇ ಒಲವೇ
ಮೆತ್ತನೆ ಮೊಲೆಗಳ ನಡುವಿನ ಮಿಡಿನಾಗರ ಮೊರೆತವೇ
ತುಳುಕಾಡುವ ಕಡಲ ಬಟ್ಟಲಲಿ
ಕಾಮನ ರಂಗಿನ ಉತ್ಸವನೌಕೆ
ನೊರೆತೆರೆಗಳ ತೊನೆದಾಟದ ನಡುವೆ
ಅಂತ್ಯವೇ ಇಲ್ಲದ ಕಡಲಿನ ಕನ್ಯೆಯ
ಸಾವಿನ ಹಾಡು ಮಾತ್ರವೇ ಉಳಿದು
ಮಣ್ಣಿನ ಋಣ ಮಿಗಿಲಾಗಿತ್ತು
ಚಿನ್ನದ ರೇಕಿನ, ನೇರಳೆ ಬಣ್ಣದ
ಬೆಳ್ಳಿಯ ಹುಟ್ಟಿನ ಉತ್ಸವ ನೌಕೆ
ಎಂದೂ ಮರೆಯದ ಕತೆಯಾಗಿತ್ತು.
***


೨ 

ಎಕ್ಕದ ಬೀಜದಂತೆ ಮಾತು

           
ತೋರಲಾಗುವುದಿಲ್ಲ ತೋರುಬೆರಳಲ್ಲಿ
ನಾನಾ ವರ್ಣದ ಅನಂತ ಲೋಕ
ಹೂಬಿಸಿಲಿನ ನಯಕ್ಕೆ ಸೋತವರಿಗೆ
ನೆತ್ತಿ ಸುಡುವ ಬಿಸಿಲು ರಾಚುತ್ತದೆ
ಚರ್ಮ ಅಂದ ಕಳಕೊಳ್ಳುತ್ತದೆಂದು
ಎಷ್ಟೋ ವರ್ಷಗಳ ಅಭ್ಯಾಸ ಬಿಡಲಾದೀತೆ
ಈಗೀಗ ನೆರಳಿಗಿಂತ ಬಿಸಿಲೇ ಹಿತ.

ವ್ಯಸನ ಪೀಡಿತರಿಂದ ಪೀಡಿಸಿಕೊಂಡಷ್ಟು
ತಮ್ಮಲ್ಲೇ ನಂಬಿಕೆ ಕಳಕೊಳ್ಳುತ್ತಾರೆ ಮಂದಿ
ನೆರಳು ನೆರಳಿನೊಂದಿಗೆ ಘರ್ಷಿಸುತ್ತಾ
ಯಾವುದು, ಯಾವುದೋ ಅಯೋಮಯ
ಸಂಬಂಧಗಳು ಸಂಬಂಧಗಳೊಂದಿಗೆ
ವ್ಯಾಖ್ಯಾನ ಮರುವ್ಯಾಖ್ಯಾನಕ್ಕೆ ಒಳಗಾಗಿ ಕುಸಿಯುತ್ತವೆ
ಪದಗಳು ಪದಗಳೊಂದಿಗೆ ಹಾದರಕ್ಕಿಳಿಯುತ್ತವೆ
ಒಂದಷ್ಟು ಬಣ್ಣ ಮೆತ್ತಿಕೊಂಡು ರಂಜಕವಾಗುತ್ತವೆ.

ಈಗೀಗ ಬೆಡ್ರೂಮ್ಮಲ್ಲೂ ಇಣುಕಿ ನೋಡುವ ಮಂದಿ
ಸಿಕ್ಕಷ್ಟು ಸುದ್ದಿಬಾಚಿ ರಾತ್ರೋರಾತ್ರಿ ರೆಕ್ಕೆಪುಕ್ಕಗಳಿಲ್ಲದೆಯೇ
ಹಾರಿಬಿಡುತ್ತಾರೆ ಮೇಘದೂತರೆಂಬಂತೆ
ಎಕ್ಕದಬೀಜದ ಎಳೆಗಳು ಮೆಲ್ಲನೆ ಬೇರೂರುತ್ತವೆ.

ಎಲ್ಲರಿಗೋ ಅವಸರದ ಕಾಲ
ಎದೆ ಒಳಗೇ ಸೇರಿಹೋದ ಮಾತಿಗೆ ಹೊರಬರಲಾಗುತ್ತಿಲ್ಲ
ಪುರಸೊತ್ತಿಲ್ಲ ಗಂಡನಿಗೆ ಹೆಂಡತಿಯ ಏಕಾಕಿತನಕ್ಕೆ
ಕೈಗೆಟುಕುತ್ತಿಲ್ಲ ದಾಂಪತ್ಯ ತೂಗಿಸುವ ಮಾತುಗಳು
ಕಳೆದು ಹೋಗಿದ್ದಾಳೆ ಮಗಳು ಸ್ಪರ್ಧೆಯ ಜಗತ್ತಲ್ಲಿ
ಮಗ ಮಳುಗಿದ್ದಾನೆ ಎಸ್‌ಎಂಎಸ್ ಸಂತೆಯಲಿ.

ಬೀದಿಗೆ ಬಂದಿದೆ ಮಾತು ಬಾಗಿಲು ತೆರೆದು
ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತೆವಳುತ್ತಾ
ಅಕ್ಕರಗಳು ತೇಲಾಡುತ್ತವೆ ಅಕ್ಕರೆಯಿಲ್ಲದೆ
ಗೊತ್ತುಗುರಿಯಿಲ್ಲದ ಪದಗಳು ಡಿಕ್ಕಿಯೊಡೆಯುತ್ತವೆ
ಯಾರದೋ ಮನೆಯಿಂದ ಹೊರಬಂದು
ಎಡೆತಾಗಿದೆಡೆಯೆಲ್ಲಾ ಬೇರುಬಿಟ್ಟು
ರೆಕ್ಕೆಪುಕ್ಕಗಳ ಕಳಕೊಂಡ ಗುಲಗಂಜಿಮಾತು
ಹಗುರ ನಾಲಿಗೆಗಳ ಮೇಲೆ ನರ್ತಿಸಲಾರಂಭಿಸುತ್ತದೆ.

ಆಗ ಒಂದೊಂದು ದೇಹಕ್ಕೆ ಎರಡೆರಡು ನೆರಳುಗಳು
ಮೂಡುತ್ತಾ ಪಿಶಾಚಿಗಳಂತೆ ಹೊರಳಾಡಿ
ಎಕ್ಕದ ಬೀಜದಂತ ಮಾತು ಮಾತಾಗದೆ
ಬೇರು ಬಿಡುವ ಮುನ್ನವೇ
ಬೇಡವಾದ ಅಕ್ಕರ, ಪದಗಳನ್ನು ಹೊರಹಾಕಿ
ಬೇಕಾದುದನ್ನು ಇಡಬೇಕು ಇಡಗಂಟೆಂಬಂತೆ
ಕೀಟಗಳ ದಾಳಿಗೆ ಒಳಗಾಗದಂತೆ.
***ಪುಷ್ಪಾ ಎಚ್. ಎಲ್. (೧೯೬೨) ವಿಜ್ಞಾನ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವಿ ಪಡೆದು ಹಂಪಿ ವಿವಿಯಿಂದ ‘ಆಧುನಿಕ ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ’ ಎಂಬ ವಿಷಯ ಕುರಿತು ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದುವರೆಗೆ ಆರು ಕವಿತೆ ಪುಸ್ತಕಗಳು (ಸಂಪಾದನೆಯೂ ಸೇರಿ), ಮೂರು ನಾಟಕಗಳು ಹಾಗೂ ಐದು ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಪುತಿನ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಸಮ್ಮಾನಗಳು ಸಂದಿವೆ.

ವಿಳಾಸ: ಜಿಸಿ ಫಸ್ಟ್ ಫ್ಲೋರ್, ಮಾತಾ ತನಿಶಾ ಅಪಾರ್ಟ್‌ಮೆಂಟ್, ೪ನೇ ಕ್ರಾಸ್, ಸೈಟ್ ನಂ ೧೦/೧೧, ಕೆಎಸ್ಸಾರ‍್ಟಿಸಿ ಲೇಔಟ್, ಚಿಕ್ಕಲಸಂದ್ರ, ಬೆಂಗಳೂರು - ೫೬೦೦೬೧,

hl_pushpa@yahoo.co.in

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...