Sunday, November 01, 2015

ನಮ್ಮ ನೆಲದ ಶಿವಾಜಿ: ಶಿವಾಜಿಯ ಹಿಂದುತ್ವ ವರ್ಸಸ್ ಪೇಶ್ವೆ ಹಿಂದುತ್ವ


ಬಿ ಎಂ ಬಶೀರ್ಶಿವಾಜಿಯ ಕಾಲದಲ್ಲಿ ನಡೆದ ಒಂದು ವಿಸ್ಮಯ ವೆಂದರೆ, ಆತನ ಹೋರಾಟ ಅಪ್ರಜ್ಞಾಪೂರ್ವಕವಾಗಿ ಒಂದು ಜಾತ್ಯತೀತ ಭಾರತೀಯ ಕಲ್ಪನೆ ತನಗೆ ತಾನೆ ಸಹಜವಾಗಿ ಅರಳಿಕೊಳ್ಳಲು ಕಾರಣವಾದುದು. ಶಿವಾಜಿ ಎಂದೂ ತನ್ನ ಹೋರಾಟ ಸಂದರ್ಭದಲ್ಲಾಗಲಿ, ಪತ್ರ ವ್ಯವಹಾರ ಸಂದರ್ಭ ದಲ್ಲಾಗಲಿ ‘ಹಿಂದೂ’ ಎನ್ನುವ ಶಬ್ದವನ್ನು ಬಳಸಿಲ್ಲ. ಹಿಂದೂ ಎನ್ನುವ ಶಬ್ದ ಆಗ ರಾಜಕೀಯ, ಧಾರ್ಮಿಕ ಅರ್ಥವನ್ನೂ ಪಡೆದುಕೊಂಡಿರಲಿಲ್ಲ. ಅವನ ಮಗ ಸಾಂಭಾಜಿ ಪತ್ರದಲ್ಲಿ ಒಂದೆಡೆ ಹೈಂದವ ಎನ್ನುವ ಶಬ್ದವನ್ನು ಬಳಸುತ್ತಾನೆ. ಹಾಗೆಂದು ನಾವು ಶಿವಾಜಿ ಯನ್ನು ಸಮತಾವಾದಿ, ಜಾತ್ಯತೀತ ಎಂಬಿತ್ಯಾದಿ ಆಧುನಿಕ ಪರಿಭಾಷೆಗಳಿಂದ ಗುರುತಿಸುವುದೂ ಹಾಸ್ಯಾಸ್ಪದ. ಅವನ ಕಾಲ ಮತ್ತು ಸಂದರ್ಭ ಎಲ್ಲರನ್ನು ಒಳಗೊಂಡ ಭಾರತೀಯತೆಯೊಂದನ್ನು ಅವನ ಮೂಲಕ ಕಂಡುಕೊಂಡಿತು. ಶಿವಾಜಿ ಮರಾಠರು, ಕುಣಬಿಗಳು, ಬ್ರಾಹ್ಮಣರು, ಕ್ಷತ್ರಿಯರು, ಮಹಾರ ದಲಿತರು, ಮುಸ್ಲಿಮರು, ಕೋಳಿ, ಭಂಡಾರಿ, ಕುರುಬ, ಪ್ರಭು, ರಾಮೋಶಿ, ನಾವಲಿಗ, ಶೆಣವಿ ಹೀಗೆ ಸುಮಾರು 56 ಜಾತಿಯ ಜನರನ್ನು ತನ್ನ ಪಡೆಯಲ್ಲಿ ಸೇರಿಸಿಕೊಂಡಿದ್ದ. ಜಾತಿ ವ್ಯವಸ್ಥೆ ಉಲ್ಬಣಾವಸ್ಥೆಯಲ್ಲಿದ್ದ ಹೊತ್ತಿನಲ್ಲಿ ಶಿವಾಜಿ ಇವರೆಲ್ಲರನ್ನು ಸಂಘಟಿಸಿ ಒಂದು ವೇದಿಕೆಗೆ ತಂದುದು ಸಣ್ಣ ವಿಷಯವಲ್ಲ. ಆದರೆ ಇದು ಮುಂದೆ ಶಿವಾಜಿಯ ವಂಶಸ್ಥ ರಿಂದ ರಾಜ್ಯವನ್ನು ಮೋಸದಿಂದ ಕೈವಶಮಾಡಿ ಕೊಂಡ ಬ್ರಾಹ್ಮಣ ಪೇಶ್ವೆಗಳಿಗೆ ಸಾಧ್ಯವಾಗಲಿಲ್ಲ. ಶಿವಾಜಿಯ ಹಿಂದುತ್ವವೇ ಬೇರೆ. ಪೇಶ್ವೆಗಳ ಹಿಂದುತ್ವವೇ ಬೇರೆ. ಶಿವಾಜಿಯ ಸುಮಾರು ಎಂಟು ವರ್ಷದ ಆಳ್ವಿಕೆ ಮುಗಿದು, ಮೂರು ತಲೆಮಾರುಗಳಲ್ಲೇ ಈ ಜಾತ್ಯತೀತ ಸಂಘಟನೆ ಪೇಶ್ವೇ ಗಳಿಂದಾಗಿ ಒಡೆದು ಹೋಯಿತು. ಯಾವಾಗ ಶಿವಾಜಿ ವಂಶಸ್ಥರಿಂದ ಆಡಳಿತ ಚಿತ್ಪಾವನ ಬ್ರಾಹ್ಮಣವಂಶಜರಾದ ಪೇಶ್ವೆಗಳ ಕೈಗೆ ಹಸ್ತಾಂತರವಾಯಿತೋ ಅಲ್ಲಿಂದಲೇ ಮತ್ತೆ ಜಾತೀಯತೆ ಭುಗಿಲೆದ್ದಿತು. ಶಿವಾಜಿಯ ಹಿಂದುತ್ವ, ಧಾರ್ಮಿಕತೆ ಎಲ್ಲ ಧರ್ಮೀಯರನ್ನು ಒಟ್ಟು ಸೇರಿಸಿ ಒಂದು ನಾಡನ್ನು ಕಟ್ಟಲು ಕಾರಣವಾದರೆ, ಪೇಶ್ವೆಗಳ ಬ್ರಾಹ್ಮಣ್ಯ ರೂಪದ ಹಿಂದುತ್ವ ಸೇನೆಯನ್ನು ಒಡೆಯಿತು. ಜಾತೀಯತೆಯನ್ನು ಬೆಳೆಸಿತು. ದಲಿತರು ಬಂಡೆದ್ದು ಬ್ರಿಟಿಷರ ಸೇನೆಯನ್ನು ಸೇರಿ, ಪೇಶ್ವೆಗಳನ್ನು ಸೋಲಿಸುವಲ್ಲಿಗೆ ಇದು ಅಂತ್ಯವಾಯಿತು. ಶಿವಾಜಿಯ ಕನಸು ಪೇಶ್ವೆಗಳ ದೆಸೆಯಿಂದ ಸುಟ್ಟು ಬೂದಿಯಾಯಿತು.


ಶಿವಾಜಿ ಪೇಶ್ವೆಗಳಂತೆ ಯಾವತ್ತೂ ಧರ್ಮಾಂಧ ನಾಗಿರಲಿಲ್ಲ. ಆದುದರಿಂದಲೇ ಶಿವಾಜಿಯನ್ನು ಮುಸ್ಲಿಮರು, ದಲಿತರೂ ಎದೆ ತುಂಬಿ ಪ್ರೀತಿಸಿದರು. ಅವನಿಗಾಗಿ ಪ್ರಾಣವನ್ನು ತೆತ್ತರು. ಸೇನೆಯಲ್ಲಿ ಮುಸ್ಲಿಮರ ಕುರಿತಂತೆ ಶಿವಾಜಿಗೆ ಅದೆಷ್ಟು ಹೆಮ್ಮೆಯಿತ್ತೆಂದರೆ ರಾಯಗಡದಲ್ಲಿ ಮುಸ್ಲಿಮ್ ಸೈನಿಕರಿಗಾಗಿಯೇ ಮಸೀದಿಯನ್ನು ಕಟ್ಟಿಸಿದ್ದ. ಜಿಝಿಯಾ ಕರವನ್ನು ವಿರೋಧಿಸಿ ಶಿವಾಜಿಯು ಔರಂಗಜೇಬನಿಗೆ ಬರೆದ ಪತ್ರದ ಸಾಲುಗಳು ಶಿವಾಜಿಯ ವ್ಯಕ್ತಿತ್ವವನ್ನು, ಅವನ ಆಡಳಿತದ ಮುನ್ನೋಟವನ್ನು ತಿಳಿಸುತ್ತದೆ. ಅವನು ಎಷ್ಟು ಸೂಕ್ಷ್ಮವಾಗಿ, ಹೃದ್ಯವಾಗಿ ಆ ಪತ್ರವನ್ನು ಬರೆಯು ತ್ತಾನೆಂದರೆ, ಅಕ್ಬರ್, ಜಹಂಗೀರ್ ಮೊದಲಾದ ವರನ್ನು ಆ ಪತ್ರದಲ್ಲಿ ಮನಬಿಚ್ಚಿ ಹೊಗಳುತ್ತಾನೆ. ಅದರ ಆಯ್ದ ಕೆಲವು ಸಾಲುಗಳನ್ನು ಇಲ್ಲಿವೆ ‘‘.....ಈ ಹಿಂದೆ ಅಕಬರ ಬಾದಶಹಾ ನ್ಯಾಯದಿಂದ ಐವತ್ತೆರಡು ವರ್ಷ ರಾಜ್ಯವಾಳಿದರು. ಇದರಿಂದ ಈಸವಿ, ದಾವುದಿ, ಮಹಮದಿ ಮುಂತಾದವರು, ಬ್ರಾಹ್ಮಣ, ಶೆವಡೆ ವಗೈರೆ ಧರ್ಮ ಚೆನ್ನಾಗಿ ನಡೆಯಿತು. ಆ ಧರ್ಮಕ್ಕೆ ಬಾದಶಹಾ ಸಹಾಯ ಮಾಡಿದ್ದರಿಂದ ಜಗದ್ಗುರು ಎಂದು ಪ್ರಸಿದ್ಧರಾದರು. ಇಂತಹ ಸದ್ವಿವೇಕದ ನೋಟ ಎಲ್ಲೆಡೆ ಇರುತ್ತಿತ್ತು. ಯಶವೂ ಸಿಗುತ್ತಿತ್ತು.....ಆ ಬಳಿಕ ನೂರುದ್ದೀನ ಜಹಂಗೀರ್ ಬಾದಶಹಾ ಅವರು ದೇವರ ಮೇಲೆ ನಂಬಿಕೆಯಿಟ್ಟು ಇಪ್ಪತ್ತೆರಡು ವರ್ಷ ರಾಜ್ಯವಾಳಿ ದರು......ಶಹಜಹಾನ ಸಾಹೇಬ ಕಿರಾನ ಅವರು ಮೂವತ್ತೆರಡು ವರ್ಷ ರಾಜ್ಯವಾಳಿ ಪ್ರಸಿದ್ಧರಾದರು. ಒಳ್ಳೆಯ ರೀತಿಯಲ್ಲಿ ಬದುಕಿ ಕೀರ್ತಿ ಸಂಪಾದಿಸಿ ದರು..... ಆ ಬಾದಶಹರೂ ಜಿಝಿಯಾ ಕರ ಹೇರಲು ಸಮರ್ಥರಾಗಿದ್ದರು. ಆದರೆ ಚಿಕ್ಕವರು ದೊಡ್ಡವರು ತಂತಮ್ಮ ಧರ್ಮದಲ್ಲಿದ್ದಾರೆ. ಅದೆಲ್ಲ ದೇವರದ್ದು ಎಂದು ಭಾವಿಸಿ ಯಾರ ಮೇಲೂ ಅನ್ಯಾಯವಾಗದಂತೆ ನೋಡಿಕೊಂಡರು. ಅವರ ಉಪಕಾರ ಇವತ್ತಿಗೂ ಉಳಿದಿದೆ... ಎಲ್ಲರ ಬಾಯಲ್ಲಿ ಅವರ ಸ್ತುತಿಯಿದೆ...’’ ಹೀಗೆ ಬಾಯಿ ತುಂಬಾ ಅಕ್ಬರ್, ಜಹಂಗೀರ್, ಶಹಜಹಾನ್ ಅವರನ್ನು ಹೊಗಳುತ್ತಾ, ಔರಂಗಜೇಬನನ್ನು ಪರೋಕ್ಷವಾಗಿ ಟೀಕಿಸುತ್ತಾ ಹೋಗುತ್ತಾನೆ ಶಿವಾಜಿ. ವಿಶೇಷವೆಂದರೆ ತನ್ನ ಪತ್ರದಲ್ಲಿ ಕುರ್‌ಆನನ್ನು ಸ್ಮರಿಸಿ ಔರಂಗಜೇಬನಿಗೆ ಉಪದೇಶ ಮಾಡುತ್ತಾನೆ ಶಿವಾಜಿ ‘‘ಕುರ್‌ಆನ್ ಇದು ಆಕಾಶವಾಣಿಯ ಗ್ರಂಥ. ಅದು ದೇವರ ವಾಣಿ. ಅದರಲ್ಲಿ ಆಜ್ಞಾಪಿಸಿ ದ್ದೇನೆಂದರೆ, ದೇವರು ಜಗತ್ತಿನವನು, ಇಲ್ಲವೇ ಮುಸಲ್ಮಾನವರನು, ಒಳ್ಳೆಯವರಿರಲಿ, ಕೆಟ್ಟವರಿರಲಿ, ಅವರೆಲ್ಲ ಈಶ್ವರನ ಸೃಷ್ಟಿ...ಮಸೀದಿಯಲ್ಲಿ ದೇವರನ್ನು ಕೂಗಿ ಕರೆದು ಸ್ಮರಣೆ ಮಾಡುತ್ತಾರೆ. ದೇಗುಲದಲ್ಲಿ ಗಂಟೆ ಬಾರಿಸುತ್ತಾರೆ...’’ ಶಿವಾಜಿ ಕಟ್ಟಿದ ಸಾಮ್ರಾಜ್ಯದ ಪತನ ಆರಂಭ ವಾದದ್ದು ಪೇಶ್ವೆಗಳಿಂದ. ಶಿವಾಜಿ ವಂಶಸ್ಥರಿಂದ ಚಿತ್ಪಾವನ ಬ್ರಾಹ್ಮಣರು- (ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಕೂಡ ಚಿತ್ಪಾವನ ಬ್ರಾಹ್ಮಣನಾಗಿದ್ದ) ಚುಕ್ಕಾಣಿ ಯನ್ನು ಕೈ ವಶ ಮಾಡಿದ್ದೇ, ದಲಿತರ ಸ್ಥಿತಿ ಸೇನೆ ಯಲ್ಲಿ ಹೀನಾಯವಾಗತೊಡಗಿತು. ಜಾತಿವ್ಯವಸ್ಥೆ ಮತ್ತೆ ತಾಂಡವವಾಡತೊಡಗಿತು. ಒಂದು ಕಾಲದಲ್ಲಿ ಸಂತ ತುಕರಾಮರು ತಮ್ಮ ಅಭಂಗದಲ್ಲಿ ‘‘ಮಹಾರಾಸಿ ಶಿವೇ-ಕೋಪೇತೋ ಬ್ರಾಹ್ಮಣ ನವ್ಹೆ’’ ಎಂದು ಹೇಳಿದ್ದರು. ಬ್ರಾಹ್ಮಣರಿಗಿಂತ ಮಹಾರರು ಮಹಾ ಮಹಿಮರು ಎಂದು ಇದರ ಅರ್ಥ. ಶಿವಾಜಿಯ ಸೇನೆಯಲ್ಲಿ ದಲಿತ ಮಹಾರರ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ. ಮಹಾರರ ಮೇಲೆ ಶಿವಾಜಿಗೆ ಅಪಾರ ನಂಬಿಕೆಯಿತ್ತು. (ಇದೇ ಮಹಾರ್ ಜಾತಿಯಲ್ಲಿ ಮುಂದೆ ಬಿ. ಆರ್. ಅಂಬೇಡ್ಕರ್ ಹುಟ್ಟುತ್ತಾರೆ. ದಲಿತರ ಹಕ್ಕಿಗಾಗಿ ಹೋರಾಡುತ್ತಾರೆ)ಅವರದೇ ಆದ ವಿಶೇಷ ತುಕಡಿಯೂ ಶಿವಾಜಿಯ ಸೇನೆಯಲ್ಲಿತ್ತು. ಮಹಾರರನ್ನು ಕಿಲ್ಲೇದಾರರು ಎಂಬ ಜವಾಬ್ದಾರಿ ಯುತ್ತ ಪದವಿಗೆ ಆಯ್ದುಕೊಳ್ಳುತ್ತಿದ್ದ್ದ. ಆದರೆ ಪೇಶ್ವೆಕಾಲದಲ್ಲಿ ಇದು ತಿರುವು ಮುರುವಾಯಿತು. ಜಾತಿ ಮತ್ತೆ ಪ್ರಾಬಲ್ಯವನ್ನು ಪಡೆಯಿತು. ಇದನ್ನು ಸಹಿಸಿ ಸಾಕಾದ ದಲಿತರು ಅಂತಿಮವಾಗಿ ಬಂಡೆದ್ದರು. ಬ್ರಿಟಿಷರ ಸೇನೆ ಸೇರಿದರು. ಪೇಶ್ವೆಗಳ ನಾಶಕ್ಕೆ ಅದುವೇ ಕಾರಣ ವಾಯಿತು. ಪೇಶ್ವೆಗಳು ನಾಶವಾದ ಈ ದಿನವನ್ನು ಇಂದಿಗೂ ದಲಿತರು ಸಂಭ್ರಮದ ರೂಪದಲ್ಲಿ ಆಚರಿಸುತ್ತಾರೆ. ಕೋರೆಗಾವ ಕದನದಲ್ಲಿ ದಲಿತರು ಪಡೆದ ದಿಗ್ವಿಜಯ, ಜಾತೀಯತೆಯ ವಿರುದ್ಧ ಪಡೆದ ಜಯವೂ ಹೌದು. ಈ ಕೋರೆಗಾವ ಯುದ್ಧದಲ್ಲಿ ಅಂತಿಮವಾಗಿ ಗೆದ್ದಿರುವುದು ಬ್ರಿಟಿಷರೇ ಆದರೂ, ಪೇಶ್ವೆಗಳ ಜಾತೀಯತೆ ಈ ಯುದ್ಧದಲ್ಲಿ ತಕ್ಕ ಫಲವನ್ನು ಅನುಭವಿಸಿತು.

ಶಿವಾಜಿಯ ಸಂಯಮ, ಹೃದಯ ವೈಶಾಲ್ಯತೆ ಪೇಶ್ವೆಗಳಲ್ಲಿ ಇರಲಿಲ್ಲ. ಒಂದು ರಾಜ್ಯವನ್ನು ಗೆಲ್ಲುವ ಸಂದರ್ಭದಲ್ಲಾಗಲಿ, ಅದನ್ನು ಲೂಟಿ ಮಾಡುವ ಸಂದರ್ಭದಲ್ಲಾಗಲಿ ಇದು ಎದ್ದು ಕಾಣುತ್ತಿತ್ತು. ಶೃಂಗೇರಿ ಮಠದ ಮೇಲೆ ಪೇಶ್ವೆಗಳು ನಡೆಸಿದ ದಾಳಿ, ಮತ್ತು ಮಠದ ದರೋಡೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಸಂದರ್ಭದಲ್ಲಿ ಶೃಂಗೇರಿ ಮಠದ ನೆರವಿಗೆ ನಿಂತದ್ದು ಟಿಪ್ಪು ಸುಲ್ತಾನ್ ಎನ್ನುವುದು ಇತಿಹಾಸ.

    ಮೊದಲನೆ ಬಾಜಿರಾಯನ ಕಾಲದಲ್ಲಿ ಪೇಶ್ವೆಗಳ ತಂತ್ರ ಕುತಂತ್ರಗಳು ಪರಾಕಾಷ್ಠೆಯನ್ನು ತಲುಪಿತು.. ಪುಣೆ ಸಾಂಸ್ಕೃತಿಕವಾಗಿ ವಿಜೃಂಭಿಸಿದ್ದೂ ಇದೇ ಕಾಲದಲ್ಲಿ ಎನ್ನುವುದನ್ನು ನಾವು ಗಮನಿಸಬೇಕು. ಆದರೆ ಇದೇ ಸಂದರ್ಭದಲ್ಲಿ ಜಾತೀಯತೆ ಸೇನೆಯಲ್ಲಿ ತಾಂಡವವಾಡತೊಡಗಿತು. ದಲಿತರ ಕುರಿತಂತೆ ತಾರತಮ್ಯಗಳು ಹೆಚ್ಚಾಗತೊಡಗಿದವು. ದಲಿತರಲ್ಲಿ, ಮುಖ್ಯವಾಗಿ ಮಹಾರ್ ಯೋಧರು ಒಳಗೊಳಗೆ ಭುಸುಗುಡತೊಡಗಿದರು. ಇದು ಎರಡನೆ ಬಾಜಿರಾಯನ ಕಾಲದಲ್ಲಿ ಸ್ಫೋಟಿಸಿತು. ಭೀಮಾ ಕೋರೆಗಾವ ಕದನದಲ್ಲಿ ದಲಿತರು ಬಂಡೆದ್ದು ಬ್ರಿಟಿಷರನ್ನು ಸೇರಿಕೊಂಡರು. ಬ್ರಿಟಿಷರ ಪಡೆಯಲ್ಲಿ ಮರಾಠರು, ಮುಸ್ಲಿಮರು, ಕ್ರಿಶ್ಚಿಯನ್ನರು ಇದ್ದರೂ, ದೊಡ್ಡ ಮಟ್ಟದಲ್ಲಿ ಮಹಾರರಿದ್ದರು. ಕೋರೆಗಾವ ಕದನದಲ್ಲಿ 20 ಸಾವಿರದಷ್ಟಿದ್ದ ಮರಾಠ ಸೇನೆಯನ್ನು ಪುಟ್ಟ ಮಹಾರ ಪಡೆ ಸೋಲಿಸಿತು. ಕೋರೆಗಾವ ಕದನದಲ್ಲಿ ಹುತಾತ್ಮರಾದ ದಲಿತರು ಮತ್ತು ಇತರರಿಗಾಗಿ ಬ್ರಿಟಿಷರು ಸ್ಮಾರಕಸ್ತಂಭವೊಂದನ್ನು ನಿರ್ಮಿಸಿದರು. 26 ಮಾರ್ಚ್ 1821ರಲ್ಲಿ ಈ ಸ್ತಂಭಕ್ಕೆ ಅಡಿಗಲ್ಲು ಹಾಕಲಾಯಿತು. ಇದಕ್ಕೆ ಮಹಾರಸ್ತಂಭ ಎಂದೂ ಕರೆಯಲಾಗುತ್ತದೆ. ಮಹಾರರ ಬೆಂಬಲವಿಲ್ಲದೇ ಇರುತ್ತಿದ್ದರೆ ಪೇಶ್ವೆಗಳನ್ನು ಗೆಲ್ಲುವುದಕ್ಕೆ ಯಾವ ಕಾರಣದಿಂದಲೂ ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದಾರೆ.

   ಪೇಶ್ವೆಗಳನ್ನು ಬ್ರಿಟಿಷರು ಸೋಲಿಸಿದ ಈ ಘಟನೆ ನಿಜಕ್ಕೂ ವಿಶಿಷ್ಟವಾದುದು. ಭಾರತೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ಇದು ಸಹಾಯ ಮಾಡುತ್ತದೆ. ಶಿವಾಜಿ ಮಹಾರರನ್ನು ತನ್ನವರೆಂದು ಬಗೆದು ಸಾಮ್ರಾಜ್ಯವನ್ನು ಕಟ್ಟಿದ. ಆದರೆ ದಲಿತರನ್ನು ಪರಕೀಯರೆಂದು ಬಗೆದ ಪೇಶ್ವೆಗಳು ತಮ್ಮ ರಾಜ್ಯವನ್ನು ಕಳೆದು ಕೊಂಡರು. ಪರಕೀಯರಾದ ಬ್ರಿಟಿಷರು ತಮಗೆ ಗೌರವನೀಡಿದರೆಂಬ ಒಂದೇ ಕಾರಣಕ್ಕೆ ಮಹಾರರು ಬ್ರಿಟಿಷರ ಪರವಾಗಿ ನಿಂತು, ಪೇಶ್ವೆಗಳನ್ನು ಸೋಲಿಸಿದರು. ದೇಶದ ಪಾಲಿಗೆ ಇದು ಬ್ರಿಟಿಷರ ಗೆಲುವಾಗಿರಬಹುದು. ಆದರೆ ದಲಿತರ ಪಾಲಿಗೆ ಇದು ಶೋಷಿತರ, ನೊಂದವರ ಗೆಲುವು. ಡಾ. ಬಿ.ಆರ್. ಅಂಬೇಡ್ಕರ್ ಜನವರಿ1, 1927ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಭೀಮಾ-ಕೋರೆಗಾವಕ್ಕೆ ಬಂದು ಮಹಾರ್ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಅಂದಿನಿಂದ ಕೋರೆಗಾವ ಕದನದ ಮಹಾರ ಕಲಿಗಳ ಸ್ಮತಿ ದಿನವನ್ನಾಗಿ ಆಚರಿಸಲಾ ಯಿತು. ಇಂದಿಗೂ ಜನವರಿ 1ರಂದು ದೇಶದ ದಲಿತರೆಲ್ಲ ಕೋರೆಗಾವ ಕದನವನ್ನು ನೆನಪಿಸಿಕೊಂಡು, ಹುತಾತ್ಮರಾದ ಮಹಾರರಿಗೆ ತಮ್ಮ ಶೃದ್ಧಾಂಜಲಿಯನ್ನು ಸಲ್ಲಿಸುತ್ತಾರೆ.

ಇಂದು ಆರೆಸ್ಸೆಸ್ ಸೇರಿದಂತೆ ಸಂಘಪರಿವಾರ ಪೇಶ್ವೆ ಹಿಂದುತ್ವವನ್ನು ದೇಶದ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಶಿವಾಜಿಯ ನಿಜವಾದ ವ್ಯಕ್ತಿತ್ವವನ್ನು ಕುರೂಪಗೊಳಿಸಿ, ಅವನ ವ್ಯಕ್ತಿತ್ವಕ್ಕೇ ಕಳಂಕ ಎಸಗುತ್ತಿದೆ. ಶಿವಾಜಿ ಕೇವಲ ಮಹಾರಾಷ್ಟ್ರೀಯನಲ್ಲ. ಕೇವಲ್ಲ ಬೋಸಲೆಯೂ ಅಲ್ಲ. ಕೇವಲ ಹಿಂದೂ ಕೂಡ ಅಲ್ಲ. ಅವನು ಅಪ್ಪಟ ಭಾರತೀಯ. ಈ ದೇಶದ ಪ್ರತಿಯೊಬ್ಬರಿಗೂ ಸೇರಿದವನು ಶಿವಾಜಿ. ಅವನನ್ನು ತಮ್ಮ ಕ್ಷುಲ್ಲಕ ಭಾಷಾ ರಾಜಕೀಯಕ್ಕೆ, ಬ್ರಾಹ್ಮಣ್ಯ ರಾಜಕೀಯಕ್ಕೆ ಬಳಸಿಕೊಳ್ಳುವುದು ಭಾರತೀಯತೆಗೆ ಮಾಡುವ ಅಪಚಾರ. ನಮಗಿಂದು ಬೇಕಾದುದು ಶಿವಾಜಿಯ ಹಿಂದುತ್ವವೇ ಹೊರತು ಪೇಶ್ವೆಗಳ ಹಿಂದುತ್ವವಲ್ಲ. ಪೇಶ್ವೆಗಳ ಹಿಂದುತ್ವ ಶಿವಾಜಿ ಸಾಮ್ರಾಜ್ಯವನ್ನು ಸರ್ವನಾಶ ಮಾಡಿ, ಬ್ರಿಟಿಷರಿಗೆ ತಲೆಬಾಗುವಂತೆ ಮಾಡಿತು. ನಮಗಿಂದು ಬೇಕಾದುದು ಪೇಶ್ವೆ ವಂಶಜನಾದ ನಾಥೂರಾಂ ಗೋಡ್ಸೆ ಹಿಂದುತ್ವವಲ್ಲ. ದಲಿತ ಮಾಹಾರರ ವಂಶಜರಾದ ಬಿ. ಆರ್. ಅಂಬೇಡ್ಕರ್ ಹಿಂದುತ್ವ. ನಾಥೂರಾಂನಿಂದ ಕಗ್ಗೊಲೆಗೀಡಾದ ಮಹಾತ್ಮಗಾಂಧೀಜಿಯ ಹಿಂದುತ್ವ. ಅದು ಮಾತ್ರ ಈ ದೇಶವನ್ನು ಒಂದಾಗಿರುವಂತೆ ಮಾಡೀತು. ದಲಿತರು, ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಒಟ್ಟಾಗಿ ಕೊಂಡು ಹೋಗುವ ಶಿವಾಜಿಯಂತಹ ನಾಯಕನ ದೂರದೃಷ್ಟಿ ರಾಜಕಾರಣ ಮಾತ್ರ ಈ ದೇಶವನ್ನು ಉಳಿಸೀತು. ಬೆಳೆಸೀತು.


ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’
ಸುಧಾಕರ ಖಾಂಬೆ: ಭೀಮಾ ಕೋರೆಗಾವಾಚಾ ವಿಜಯಸ್ತಂಭಬಿ ಎಂ ಬಶೀರ್  ಬಿ.ಎಂ.ಬಶೀರ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ. ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. (ಚಿನ್ನದ ಪದಕದ ಜೊತೆ) ಐದು ವರ್ಷ ಮುಂಬಯಿಯ ’ಕರ್ನಾಟಕ ಮಲ್ಲ’ ಕನ್ನಡ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ. ಇದಾದ ಬಳಿಕ ಜನವಾಹಿನಿ ದೈನಿಕದಲ್ಲಿ ಐದು ವರ್ಷಹಿರಿಯ ಉಪಸಂಪಾದಕರಾಗಿ ದುಡಿಮೆ. ಮೊದಲ ಕವನ ಸಂಕಲನ ’ಪ್ರವಾದಿಯಕನಸು’. ಮುದ್ದಣ ಕಾವ್ಯ ಪ್ರಶಸ್ತಿ ಸಂದಿದೆ. ಪ್ರಕಟಿತ ಕಥಾಸಂಕಲನ ’ಬಾಳೆಗಿಡ ಗೊನೆ ಹಾಕಿತು’. ಮೈಸೂರಿನ ಚದುರಂಗ ಪ್ರತಿಷ್ಠಾನ ಪ್ರಶಸ್ತಿ ಕೃತಿಗೆ ಸಂದಿದೆ. ’ಅಂಗೈಯಲ್ಲೇ ಆಕಾಶ’ ಎಂಬ ಹನಿ ಹನಿ ಕತೆಗಳ ಪ್ರಕಟವಾಗಿದೆ. ಇದಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ ಸಿಕ್ಕಿದೆ. 'ಬಾಡೂಟದ ಜೊತೆಗೆ ಗಾಂಧಿ ಜಯಂತಿ' ಅವರ ಪ್ರಕಟಿತ ಇನ್ನೊಂದು ಪುಸ್ತಕ. ಕಳೆದ ಹತ್ತು ವರ್ಷಗಳಿಂದ ’ವಾರ್ತಾಭಾರತಿ’ ಕನ್ನಡ ದೈನಿಕದಲಿ ಸುದ್ದಿ ಸಂಪಾದಕರಾಗಿ ವೃತ್ತಿ ಬದುಕು ನಡೆಸುತ್ತಿದ್ದಾರೆ.

bmbasheer12@gmail.com

9448835621

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...