Sunday, November 08, 2015

ಯಾವುದು ಸಮಾಜ ವ್ಯಾಧಿ ?

ಎಂದಿನಂತೆ ತುಂಬ ಬಿಜಿಯಾದ ಒಂದು ಮಳೆಗಾಲದ ದಿನ. ಹೊರಗೆ ಆಸ್ಲೆ ಮಳೆ ಧೋ ಎಂದು ಸುರಿಯುತ್ತ ಮಳೆಗಪ್ಪು ಸಂಜೆ ಆರಕ್ಕೇ ಆವರಿಸಿಕೊಂಡಿತ್ತು. ’ಈ ಮಳೇಲೂ ಇವರು ಹೇಗಪ್ಪಾ ಬರ‍್ತಾರೆ?’ ಎಂದು ನಾನು ಅಚ್ಚರಿಗೊಳ್ಳುವಷ್ಟು ಕ್ಲಿನಿಕ್ ರೋಗಿಗಳಿಂದ ಕಿಕ್ಕಿರಿದಿತ್ತು. ಬೇಗ ಬೇಗ ತಮ್ಮ ಸರದಿ ಮುಗಿಸಿ ಮನೆಗೆ ಹೋಗಲು ಮನಸ್ಸಲ್ಲೇ ತಯಾರಾಗುತ್ತಿದ್ದ ರೋಗಿಗಳು ನನ್ನ ಸುತ್ತ ಕೋಟೆ ಕಟ್ಟಿದಂತೆ ನಿಂತಿದ್ದರು. ’ಊಟ ಮಾಡೋ ಹೊತ್ತಾದ್ರೂ ಮನೆಗೆ ಬರಲ್ಲ ನೀನು. ಆ ಪೇಶೆಂಟೆಲ್ಲ ವಾಪಸ್ ಕಳಿಸು’ ಎಂದು ಕಿರಿಮಗಳ ಬಳಿ ಬೈಸಿಕೊಳ್ಳಲು ನಾನೂ ತಯಾರಾಗುತ್ತಿದ್ದೆ, ಇವತ್ತೂ ಎಂಟೂವರೆ ಒಳಗೆ ಬಾಗಿಲು ಹಾಕಲು ಆಗುವುದಿಲ್ಲವೆಂದು ಗೊತ್ತಾಗಿತ್ತು.  

ಆಗ ಒಳಬಂದವರು ಆ ಅಮ್ಮ ಮಗಳು. ಹುಡುಗಿ ಪೂರ್ತಿ ನೆಂದು ತೊಪ್ಪೆಯಾಗಿದ್ದಾಳೆ. ಹನ್ನೆರಡು ಹದಿಮೂರರ ಹುಡುಗಿ ಗಡಗಡ ನಡುಗುತ್ತ, ದಾಳಿಂಬೆ ಜೋಡಿಸಿಟ್ಟಂತ ಹಲ್ಲುಗಳನ್ನು ಕಟಕಟ ಕಡಿಯುತ್ತ ನಿಂತಿದೆ. 

’ಕೂತ್ಕೊಳ್ಳಿ. ಅವಳು ಅಷ್ಟು ಹೇಗೆ ನೆಂದಳು? ಛತ್ರಿ ತರಲಿಲ್ವೆ?’ ಎಂಬ ನನ್ನ ಪ್ರಶ್ನೆಗೆ ಅಮ್ಮ ಮೌನವಾದರು. ಅವರ ಸರದಿ ಬಂದಾಗ ಹುಡುಗಿ ನಡುಗುತ್ತಲೇ ಟೇಬಲ್ ಹತ್ತಿ ಮಲಗಿ ಮುದುರಿ ಮುದ್ದೆಯಾದಳು. 

’ನಿನ್ನ ಹೆಸರೇನಮ್ಮಾ?

’ಸೌಮ್ಯ’ 

’ಏನು ಚಳಿಜ್ವರನಾ? ನಡುಗ್ತಾ ಇದೀ, ಕಣ್ಣೂ ಕೆಂಪಾಗಿದೆ.’ 

ಮಾತಿಲ್ಲ. ಒಂದು ನಿಮಿಷ ಇಬ್ಬರೂ ಮಾತಿಲ್ಲದೇ ನಿಂತರು. ಕೆಲವೊಮ್ಮೆ ಹೇಳಿಕೊಳ್ಳಲು ತುಂಬಾ ಇದ್ದು, ಹಿಂಜರಿಕೆಯೂ ಇದ್ದರೆ ಹೀಗೇ ಆಗುತ್ತದೆ. ಮೊದಲ ಬಾರಿ ಬಂದ ಪೇಶೆಂಟುಗಳಲ್ಲಿ ಸಾಮಾನ್ಯ ಹೀಗೇ. ಅವರೇ ಲಹರಿಗೆ ಬರಲಿ ಅಂತ ನಾನು ಕೇವಲ ಮುಗುಳ್ನಗುತ್ತ ನಿಂತೆ. 

ಅವಳಮ್ಮ ಕಣ್ಣೀರಾದರು. ’ಡಾಕ್ಟ್ರೇ, ನಂಗೆ ಎಂತ ಹೇಳುದು ತಿಳೀತಿಲ್ಲೆ. ಇಡೀ ದಿನ ಹಠ ಮಾಡೋ ಈ ಹುಡುಗಿ ಸಂಗ್ತಿ ನಂಗಂತೂ ಸಾಕಾಗಿ ಹೋಯ್ದು. ತ್ವಾಟದ ಕೆಲ್ಸದೋರು ಬತ್ರು, ಅಡಿಕೆ ಸುಲಿಯೋರು ಬತ್ರು, ನಾ ಮನೆ ಚಾಕ್ರಿ ಮಾಡ್ಕ ಆ ಆಳುಮಕ್ಕಳಿಗೆ ಚಾ ತಿಂಡಿ ಮಾಡ್ಲೋ, ಅಥವಾ ಈ ನನ್ನ ಮಗಳ ಹೊಟ್ಟೆ ತುಂಬುಸ್ಲೋ ಎಂತದೂ ತಿಳೀತಿಲ್ಲೆ. ಆಸ್ಪತ್ರೆಗೆ ಹೋಗುವ ಅಂದ್ರೂ ಬತ್ತಿಲ್ಲೆ ಅಂತು. ಇಂದು ಹೆಂಗೆಂಗೋ ಮಾಡಿ ಎಳ್ಕ ಬಂದಿದೀನಿ. ವಾಪಸ್ ಓಡಿ ಹೊರಟಿದ್ದನ್ನ ಮತ್ತೆ ಕರ‍್ಕಬಂದೆ ಅನ್ನೋ ಸಿಟ್ಟಿಗೆ ನನ್ನ ಕೈಯಾಗೆ ಛತ್ರಿ ಇದ್ರೂ ನೋಡಿ ಹೆಂಗೆ ನೆನಕಂಡೇ ಬಂದಿದಾಳೆ ಅಂತ. ಅಷ್ಟು ಹಠ. ಬದ್ಧ ನಂಗೆ ಜೀವನವೇ ಬೇಡಾಗಿ ಹೋಗಿದೆ ಡಾಕ್ಟ್ರೇ’ ಎನ್ನುತ್ತ ಮುಖ ಮುಚ್ಚಿಕೊಂಡರು. 

ಸಮಸ್ಯೆ ಸ್ಪಷ್ಟವಾಗಲಿಲ್ಲ. ಅವರೇ ಮುಂದುವರೆಸಲಿ ಎಂದು ಹ್ಞೂಂಗುಡುತ್ತ ಕೇಳಿದೆ. ’ಶಾಲೆಗೆ ಹೋದ್ರೆ ಈ ಸಲ ಎಸ್ಸೆಲ್ಸಿ ಆಗ್ತಿತ್ತು ಮೇಡಂ. ಏಳನೆತ್ತೆ ತನಕ ಮನೆ ಪಕ್ಕದ ಶಾಲೆಗೇ ಹೋಗ್ತಿತ್ತು. ಆಮೇಲೆ ನಾಕು ಮೈಲು ನಡದು ಹೈಸ್ಕೂಲಿಗೆ ಹೋಗಬೇಕಿತ್ತು. ಎಂತ ಮಾಡ್ರೂ ಕಳಸಕ್ಕಾಗಲಿಲ್ಲ. ಮನೇಲಿ ಒಂದು ಕಡ್ಡಿ ಎತ್ತಿ ಆಚೆ ಇಡಲ್ಲ. ಇಡೀ ದಿನ ಅದ್ಕೆ ಒಂದೇ ದ್ಯಾನ’ ಎನ್ನುತ್ತ ಸೌಮ್ಯಳತ್ತ ಒಮ್ಮೆ ವಾರೆಗಣ್ಣಿಂದ ನೋಡಿ ನಿಂತರು. 

ದಡದಡ ಮಂಚದಿಂದಿಳಿದ ಸೌಮ್ಯ ನನ್ನ ಟೇಬಲ್ ಎದುರು ಹೋಗಿ ಕೂತಳು. ನಾನೂ ಅವಳಮ್ಮನಿಗೆ ಕುಳಿತೇ ಮಾತನಾಡುವ ಬನ್ನಿ ಎಂದು ಸನ್ನೆ ಮಾಡಿ ಈಚೆ ಕರಕೊಂಡು ಬಂದೆ. ಅಳುವ ಮಕ್ಕಳನ್ನು ಸುಮ್ಮನಿರಿಸಲು ಇಟ್ಟುಕೊಂಡಿದ್ದ ಚಾಕಲೇಟ್ ಡಬ್ಬಿ ತೆಗೆದು ಆಚೀಚೆ ನೋಡುತ್ತಿದ್ದಳು ಸೌಮ್ಯ. ’ಬೇಕಾದ್ರೆ ತಗೋ’ ಎಂತ ನಾನು ಹೇಳುವುದನ್ನೇ ಕಾಯುತ್ತಿದ್ದಂತೆ ಸರಸರ ಎಂಟ್ಹತ್ತು ಚಾಕಲೇಟ್ ಸುಲಿದು ತಿಂದಳು. 

’ಹಸಿವೆ ಆಗಿರಬೇಕಲ್ವಾ ಸೌಮ್ಯ?’ ಅಂತ ನಾನು ಕೇಳಿದ್ದೇ ಮುಖ ಬಿಗಿದು ಗಂಟಲು ನರಗಳೆಲ್ಲ ಉಬ್ಬಿದವು. ’ಇಇವವ್ರು ತಿತಿನ್ನಕ್ಕೆ ಕೊಡ್ಲಿಕ್ಕೆ ಜೀಂವಾ ಬಿಟ್ಟು ಸಾಸಾಯ್ತಾರೆ’ ಅಂತೊಂದು ಮಾತು ಬಿಸಾಕಿದಳು. ತೊದಲಲ್ಲ, ಸಿಟ್ಟಿಗೆ ಮಾತು ತಡೆಯುತ್ತಿತ್ತು. 

’ಇದೇ ನೋಡಿ ಮೇಡಂ ಈ ಮಗಿನ ಸಮಸ್ಯೆ. ಇಡೀ ದಿನ ಇದಕ್ಕೆ ತಿಂಬುದೊಂದು ಬಿಟ್ರೆ ಮತ್ತೆಂತ ಗ್ಯಾನವೇ ಇಲ್ಲ. ಮತ್ತೂ ಇಬ್ರು ಹುಡುಗ್ರಿದಾರೆ, ಅವು ಹಿಂಗಲ್ಲ. ಒಬ್ಳೇ ಮಗಳು ಅಂತ ಅಪ್ಪ ಮುದ್ದಿಂದ ಬೆಳೆಸಿ ಹಿಂಗಾಯ್ತೋ, ಅತವಾ ಅದ್ಯಾವದಾರೂ ಬಕಾಸುರ ಇವಳ ಹೊಟ್ಟೆ ಹೊಕ್ಕಂಡಿದಾನೋ ನಂಗಂತ್ತೂ ತಿಳಿತಿಲ್ಲೆ. ನಾವು ವೈದಿಕರು. ತಲೆತಲಾಂತ್ರದಿಂದ ಪರಾನ್ನನೇ ತಿಂದೋರು. ಆ ಅನ್ನದ ಋಣಕ್ಕೆ ಹೀಗಾಯ್ತೋ, ಒಟ್ಟಲ್ಲಿ ಈ ಮಗಿಂದು ಬರೀ ತಿಂಬುದೊಂದೇ ಹಾಡು’ ಎನ್ನುತ್ತ ಅವಳಮ್ಮ ನಿಟ್ಟುಸಿರುಗರೆದರು. 

***
ಈ ರೋಗ-ರೋಗಿಗಳ ಬಗ್ಗೆ ಇದ್ದ ವೈಯಕ್ತಿಕ ಅನುಭವದ ಹಿನ್ನೆಲೆಯಿಂದಲೇ ಸೌಮ್ಯಳ ಬಗ್ಗೆ ನನಗೆ ಅತೀವ ಆಸ್ಥೆ ಹುಟ್ಟಿತು.
 ನಾಲ್ಕೆಕರೆ ಅಡಿಕೆ ತೋಟದ ಶಂಕರ ಭಟ್ರ ಒಬ್ಬಳೇ ಮಗಳು ಸೌಮ್ಯ. ಅವಳಣ್ಣ ಎಸ್ಸೆಲ್ಸಿ ಮುಗಿಸಿ ಪಾಠಶಾಲೆಯಲ್ಲಿ ಸಂಸ್ಕೃತ ಕಲಿಯುತ್ತಿದ್ದರೆ, ಕಿರಿಯ ತಮ್ಮ ನಾಲ್ಕನೇ ಕ್ಲಾಸು. ಅಪಾರ ಶಿಷ್ಯ ವರ್ಗ ಹೊಂದಿರುವ ಭಟ್ಟರು ಕಾರ್ಯ-ಕಟ್ಟಲೆ ಅಂತ ತಿರುಗಾಟದಲ್ಲಿ ಮನೆಯಲ್ಲಿ ಮಧ್ಯಾಹ್ನ ಊಟಕ್ಕೆ ನಿಂತಿದ್ದೇ ಕಮ್ಮಿ. ಬರುವಾಗ ಪುರೋಹಿತರಿಗೆಂದು ಊಟದ ಮನೆಯವರು ಕಟ್ಟಿಕೊಟ್ಟ ತಿಂಡಿ ತಂದು ಮಕ್ಕಳಿಗೆ ಹಂಚುವ ವಾಡಿಕೆ. 

ಹಾಲು ಮೈ, ಕಪ್ಪು ಕಣ್ಣು, ಕಪ್ಪು ಕೂದಲಿನ ಮುದ್ದು ಮುಖದ ಸೌಮ್ಯ ಅವರು ತಮದ ತಿಂಡಿಯಲ್ಲಿ ಯಾವಾಗಲೂ ಬಹುಪಾಲು ಕಬಳಿಸುವವಳು. ಈಗಂತೂ ಅವಳ ವಯಸ್ಸಿನವರ ಮೂರುಪಟ್ಟು ತಿನ್ನುತ್ತಿದ್ದಳು. ’ನಮ್ಮ ಅಜ್ಜಯ್ಯನೂ ಸರೀ ತಿಂತಿದ್ನಂತೆ. ಬೆನ್ನುಫಣಿ ಆಗಿ ಸಾಯೋ ತಂಕ ಬೆಳಿಗ್ಗೆ ಒಂದು ಮೆದೆ ದೋಸೆ ಬೆಲ್ಲ, ಊಟಕ್ಕೆ ಅಚ್ಚೇರಕ್ಕಿ ಅನ್ನ ಉಣ್ತಿದ್ದನಂತೆ’ ಎಂದು ಮಗಳ ತಿನ್ನುವ ಚಟಕ್ಕೆ ’ವಂಶಪಾರಂಪರ‍್ಯ’ದ ಬಿರುದು ಕೊಡುತ್ತಿದ್ದರು ಭಟ್ಟರು. 

ಯಾವಾಗ ಮಗಳು ಹಸಿವೆ ಎಂದು ಮನೆಪಕ್ಕದ ಶಾಲೆಯಿಂದ ಮಧ್ಯೆಮಧ್ಯೆ ಮನೆಗೆ ಬಂದು ತಿಂದು ಹೋಗಲು ಶುರುಮಾಡಿದಳೋ, ಆಗ ಅವರಿಗೆ ಜಿಜ್ಞಾಸೆ ಶುರುವಾಯ್ತು. ಜಾತಕ ನೋಡಿ ಸಂಧಿ ಶಾಂತಿ ಮಾಡಿ ಆಯಿತು, ಜಪ ಮಾಡಿಸಿ ಆಯಿತು, ಕುಲದೇವತಾ ಸನ್ನಿಧಾನಕ್ಕೆ ಕುಟುಂಬ ಸಮೇತ ಹೋಗಿ ಸೇವೆ ಮಾಡಿ ಬಂದಾಯಿತು, ಯಂತ್ರ-ತಾಯಿತ ಕಟ್ಟಾಯಿತು, ಏನು ಮಾಡಿದರೂ ಹಸಿವೆ ಹೆಚ್ಚುತ್ತಲೇ ಹೋಯ್ತು. ಬರಬರುತ್ತ ಎರಡು ಮೂರು ತಾಸಿಗೊಮ್ಮೆ ಊಟ ಹಾಕುವಂತಾಯ್ತು. ರಾತ್ರಿ ಐದಾರು ಬಾರಿ ಮೂತ್ರಕ್ಕೆಂದು ಅಮ್ಮನನ್ನು ಎಬ್ಬಿಸುವುದು, ಎದ್ದಾಗಲೆಲ್ಲ ತಿನ್ನುವುದು ಸಾಧಾರಣವಾಯಿತು.. ಅಮ್ಮ ಸಾವಿತ್ರಿ ರಾತ್ರಿ ಎದ್ದು ಅವಲಕ್ಕಿ ಮೊಸರು ಕಲೆಸಿ ಕೊಟ್ಟದ್ದಿದೆ, ಬಿಸ್ಕತ್ತು-ತಿಂಡಿ ಕೊಟ್ಟು ಡಬ್ಬಿ ಖಾಲಿ ಮಾಡಿದ್ದಿದೆ.

ಚೂರು ಪಾರು ಕೊಟ್ಟರೆ ಸಾಕಾಗುವಂತಿಲ್ಲ. ಅಲ್ಲೇ ಅತ್ತು ಹೊರಳಿ ರಂಪಾಟ ಮಾಡಿಬಿಡುತ್ತಿದ್ದಳು. ಭಟ್ಟರು ಮತ್ತು ಸಾವಿತ್ರಿ ಚತುರೋಪಾಯಗಳನ್ನು ಮಗಳ ಮೇಲೆ ಪ್ರಯೋಗ ಮಾಡಿದರೂ ತಿನ್ನುವ ಚಟ ಇಳಿಯಲಿಲ್ಲ. ತೋಟ ಮನೆ ಕೆಲಸಕ್ಕೆ ಬರುವ ಆಳು ಕಾಳಿಗೆ ಮಾಡಿದ್ದರಲ್ಲೂ ಅವಳಿಗೊಂದು ಪಾಲು. ಯಾರದಾದರೂ ಮನೆಗೆ ವಿಶೇಷದ ಊಟಕ್ಕೆ ಹೋಗುವ ಮೊದಲು ಮನೆಯಲ್ಲೇ ಒಂದು ಸಣ್ಣ ಊಟ ಮಾಡಿಸಿಕೊಂಡೇ ಹೋಗಬೇಕು. ಇಲ್ಲದಿದ್ದರೆ ಎಲೆ ಮುಂದೆ ಬಡಿಸುವುದರಲ್ಲಿ ಹಸಿವೆಯೆಂದು ರಂಪ ಎಬ್ಬಿಸುತ್ತಿದ್ದಳು. ಬಂದದ್ದನ್ನೆಲ್ಲ ಹಾಕಿಸಿಕೊಂಡು, ಒಂಚೂರೂ ಚೆಲ್ಲದೆ ತಿಂದು, ಎಲೆ ಚೊಕ್ಕ ಮಾಡುವ ಅವಳನ್ನು ಎಲ್ಲ ದುರುಗುಟ್ಟಿ ನೋಡುವವರೇ. ಯಾರ ಕೆಟ್ಟ ಕಣ್ಣೂ ಅವಳ ಹೊಟ್ಟೆಯ ಹಸಿವನ್ನು ಕಡಿಮೆ ಮಾಡಲಿಲ್ಲವೆಂದರೆ ಅದೆಂಥ ಹಸಿವೆಯೆಂಬುದು ಇಬ್ಬರಿಗೂ ಅರ್ಥವಾಗಲಿಲ್ಲ. 

ಈ ಹಸಿವೆ ಇತ್ತೀಚೆಗೆ ತಾರಕ್ಕೇರಿತು. ಅಮ್ಮ ಕೊಟ್ಟಿದ್ದೆಲ್ಲ ತಿಂದು, ಅಕ್ಕ ಪಕ್ಕದ ಮನೆಯಲ್ಲೂ ಕೇಳಿ ತಿಂದು ಬರಲು ಶುರು ಮಾಡಿದಳು. ಎಲೆ ಅಡಿಕೆ ಕವಳವನ್ನು ಬಾಯ್ತುಂಬ ಹಾಕಿಕೊಂಡು ಜಗಿಯುತ್ತಿದ್ದಳು. ಏನೂ ಸಿಗದಿದ್ದರೆ ಕೊಟ್ಟಿಗೆ ಕೆಲಸದ ಸುಬ್ಬಿಗೆ ಮನೆಗೆ ಒಯ್ಯಲು ಇಟ್ಟ ತಂಗಳನ್ನ - ಸಾರು - ಮಜ್ಜಿಗೆಯನ್ನೇ ಕಬಳಿಸುತ್ತಿದ್ದಳು. ಇಷ್ಟು ತಿಂದುತಿಂದೂ ಸಪೂರವಾಗುತ್ತ ಹೋದ ಸೌಮ್ಯ ’ಕಂಡರೆ ಮಾಣಿ, ಉಂಡರೆ ಗೋಣಿ’ ಎಂಬ ಗಾದೆಗೆ ಉದಾಹರಣೆಯಾದಳು. ಮಿತಿಮೀರಿದ ಹಸಿವೆಯಂತೆಯೇ ಅತಿ ಭಯಂಕರ ಸಿಟ್ಟು. ಆಯಿಯ ಬಳಿಯಂತೂ ಆಯಿತು, ಅಣ್ಣನ ಬಳಿ ಜಗಳ, ತಮ್ಮನನ್ನು ಬೈಯುವುದು, ಅಪ್ಪನ ಬಳಿಯೂ ಮಾತು ಬಿಡುವುದು ಮುಂದುವರೆಯಿತು. ಒಟ್ಟಾರೆ ಭಟ್ಟರಿಗೆ ಇದು ಮಂತ್ರ ತಂತ್ರದಿಂದ ಸರಿಯಾಗುವಂತದಲ್ಲ ಎಂದು ಮನವರಿಕೆಯಾಯಿತು. ತನ್ನಪ್ಪ ಹೇಳುತ್ತಿದ್ದ ‘ಲಿವರ್ ಕಾಯಿಲೆ’ ಇದೇ ಎಂದೂ ಆತಂಕಗೊಂಡು ಹೇಗಾದರೂ ಆಸ್ಪತ್ರೆಗೆ ಕಳಿಸಲೇಬೇಕೆಂದು ಅಂದು ಸಂಜೆ ಅಮ್ಮ ಮಗಳನ್ನು ಕಳಿಸಿದ್ದರು.

’ಮನೇಲಿರೋ ಉಳಿದ ನಾಕು ಜನ ತಿಂದಷ್ಟನ್ನು ಇವಳೊಬ್ಳೇ ತಿಂದ್ರು ಅದು ಹೆಂಗೆ ಅರಗುಸ್ತಾಳೆ ಡಾಕ್ಷ್ರೇ? ಒಂದಿನ ಹೊಟ್ಟೆ ಕೆಟ್ಟಿಲ್ಲ. ಸಿಕ್ಕಿದ್ದೆಲ್ಲ ತಿಂದ ನಂಜಿಗೆ ಮೈ ತುಂಬ ಗಾಯ. ಹುಟ್ತಾ ಮೂರೂಮುಕ್ಕಾಲು ಕೆಜಿ ಇದ್ಲು. ಈಗ ತಿಂದಿದ್ದೆಲ್ಲ ಅದೆಲ್ಲಿ ಹೋಗ್ತಿದೆಯೋ ಏನೋ, ಎಷ್ಟು ಬಾರೀಕಾಗಿದಾಳೆ ನೋಡಿ. ನೀವು ನಂ ಹುಡ್ಗೀನೊಂದು ಸರಿ ಮಾಡ್ಕೊಡಿ ಡಾಕ್ಟ್ರೇ, ತಂಪು ಹೊತ್ತಲ್ಲಿ ನಿಮ್ಮ ಹೆಸರೇಳ್ಕಂಡು ದಿನಾ ಊಟ ಮಾಡ್ತೀವಿ.’ ಎನ್ನುತ್ತ ಅವಳಮ್ಮ ಮತ್ತೆ ಕಣ್ಣೀರು ಕರೆದರು. 

ಬಾಹ್ಯಲಕ್ಷಣಗಳಿಂದ, ಅವರು ನೀಡಿದ ವಿವರಗಳಿಂದ ಕಾಯಿಲೆಯ ವಾಸನೆ ನನಗಾಗಲೇ ಹತ್ತಿತ್ತಾದರೂ ಒಮ್ಮೆಲೇ ಹೇಳುವುದು ತರವಲ್ಲ. ರಕ್ತ ಮೂತ್ರ ತಪಾಸಣೆ ಮಾಡಬೇಕಂತ ಹೇಳಿ ಸೌಮ್ಯನ್ನ ಪಕ್ಕದ ಲ್ಯಾಬೋರೇಟರಿ ರೂಮಿಗೆ ಕರಕೊಂಡು ಹೋದೆ. ಮಾಸ್ತಿ ತನ್ನ ಮಗಳು ಹೆತ್ತದ್ದಕ್ಕೆ ಅಂತ ಕೊಟ್ಟು ಹೋದ ಸಕ್ರೆ - ಬಾಳೆಹಣ್ಣು ಅಲ್ಲೇ ಮೇಜಿನ ಮೇಲಿತ್ತು. ಮೂರು ಬಾಳೆಹಣ್ಣು ತಿಂದು ಪ್ರಸನ್ನವಾದ ಅವಳ ಬಳಿ ಶಾಲೆಯ ಬಗ್ಗೆ, ಅವಳ ಗೆಳತಿಯರ ಬಗ್ಗೆ, ಅವಳು ಕಲಿತ ಹಿಂದೂಸ್ಥಾನಿ ರಾಗಗಳ ಬಗ್ಗೆ, ಅವಳ ಮನೆಯ ಗಂಟಿ - ಕರುಗಳ ಬಗ್ಗೆ ಮಾತನಾಡುತ್ತ ಹೋದೆ. 

ಅಮ್ಮ ಎದುರಿಗಿಲ್ಲದಿದ್ದರೆ ಶಾಂತವಾಗಿರುತ್ತಾಳೆ ಹಾಗೂ ತಿನ್ನುವ ವಸ್ತು ಎದುರಿಗಿದ್ದರೆ ಪ್ರಸನ್ನಳಾಗುತ್ತಾಳೆಂದು ಗಮನಿಸಿದೆ. ಅವಳ ಮನವೊಲಿಸಿ ರಕ್ತ - ಮೂತ್ರದ ಸ್ಯಾಂಪಲ್ ತೆಗೆದುಕೊಂಡೆ. ಲ್ಯಾಬಿನಿಂದ ಹೊರ ಬರುವಾಗ ನನಗೊಬ್ಬ ಪುಟ್ಟ ಗೆಳತಿ ದೊರಕಿದ್ದಳು. ರಕ್ತ ಪರೀಕ್ಷೆಯ ರಿಪೋರ್ಟ್ ನನ್ನ ಅನುಮಾನವನ್ನು ಧೃಡಪಡಿಸಿತ್ತು. ಅವಳಮ್ಮನ ಬಳಿ ಏನು ಹೇಳುವುದೆಂದು ಲೆಕ್ಕ ಹಾಕುತ್ತಾ ಹೊರಬಂದೆ. ಸೌಮ್ಯಳನ್ನು ಟೆಕ್ನೀಶಿಯನ್ ಬಳಿ ಲ್ಯಾಬಿನಲ್ಲೇ ಬಿಟ್ಟು ಬಂದಿದ್ದೆ. 

’ಅಮ್ಮಾ, ಗಾಬರಿಯಾಗದೇ ನಾನು ಹೇಳುವುದನ್ನು ಕೇಳಿ. ಅವಳಿಗೆ ಸಿಹಿಮೂತ್ರ ಕಾಯಿಲೆ ಇದೆ. ಇದಕ್ಕೆ ’ಜುವೆನೈಲ್ ಡಯಾಬಿಟಿಸ್’ ಎನ್ನುತ್ತಾರೆ. ಮಕ್ಕಳಿಗೇ ಬರುವ ಕಾಯಿಲೆ ಇದು. ಇದೇನು ಔಷಧಿಯಿಲ್ಲದ, ಪ್ರಾಣಾಂತಿಕ ಕಾಯಿಲೆ ಅಲ್ಲ. ಆದರೂ ಚಿಕಿತ್ಸೆ, ಪಥ್ಯ ಅತಿ ಅವಶ್ಯ. ಇಷ್ಟೇ ಅಲ್ಲ, ನಿಮ್ಮೆಲ್ಲರ ಪ್ರೀತಿ ಮಾತ್ರ ಅವಳನ್ನು ಹಸಿವಿನ ಹತಾಶೆಯಿಂದ ಪಾರುಮಾಡಬಲ್ಲದು. ಅವಳ ತಂದೆಯ ಬಳಿಯೂ ಈ ಬಗ್ಗೆ ಮಾತಾಡಬೇಕು. ನಾಳೆ ಹೇಗಿದ್ದರೂ ಭಾನುವಾರ, ನನಗೂ ಪುರುಸೊತ್ತಿರುತ್ತದೆ. ಭಟ್ಟರನ್ನೂ ಕರಕೊಂಡು ಬನ್ನಿ’ ಎಂದು ಅವಳ ತಾಯಿಗೆ ಹೇಳಿದಾಗ ಕಲ್ಲಾಗಿ ಕುಳಿತವರು ಪ್ರಶ್ನೆಗಳನ್ನೇ ಉಸಿರಾಡುತ್ತಿದ್ದಂತೆ ಕಂಡರು. ನನ್ನ ಮಗಳಿಗಾಗಿ ತಂದಿಟ್ಟುಕೊಂಡಿದ್ದ ’ಚಂದಮಾಮ’ ವನ್ನು ಸೌಮ್ಯಳಿಗೆ ಕೊಟ್ಟು, ಬರುವಾಗ ತೆಗೆದುಕೊಂಡು ಬಾ ಎಂದು ಹೇಳಿ ಕಳಿಸಿದಾಗ ನನ್ನ ಕಣ್ಣೂ ಮರೆಮರೆ..   

***


ಮನೆಗೆ ಬಂದರೂ ತಲೆಯಲ್ಲಿ ಸೌಮ್ಯಳೇ. ಅನ್ಯಮನಸ್ಕಳಾಗಿ ಊಟ - ಮಾತು ಮುಗಿಸುವ ಹೊತ್ತಿಗೆ ಅಮ್ಮನ ಫೋನು ಬಂತು. ಅದೇ ನೋವಿನ ಪಲ್ಲವಿಯ ಹಾಡು. ’ನಿಮ್ಮಣ್ಣಂಗಂತೂ ಏನು ಮಾಡುವುದು ಅಂತ್ಲೇ ನಂಗೆ ತಿಳಿತಿಲ್ಲ ಕಣೆ. ಕಾಲಿನ ಗಾಯ ತುಂಬ ಹೆಚ್ಚಾಗಿ ದಿನಕ್ಕೆರಡು ಬಾರಿ ಡ್ರೆಸಿಂಗ್ ಮಾಡಿದ್ರೂ ಕೆಟ್ಟ ವಾಸನೆ ಬರುತ್ತೆ. ಕೀವೂ ಬರ‍್ತನೇ ಇದೆ. ಇವತ್ತು ಗ್ಲುಕೋಮಿಟರಿನಲ್ಲಿ ನೋಡ್ತಿನಿ, ಶುಗರ್ ಐನೂರಿಪ್ಪತ್ತು ಇದೆ. ನಿಂಗೆ ಫೋನ್ ಮಾಡೋದು ಬೇಡ ಅಂತ ಮೊದ್ಲೇ ಹೇಳಿದಾರೆ. ಹೆಗಡೆ ಡಾಕ್ಟ್ರ ಹತ್ರನೂ ಬರೋಲ್ಲವಂತೆ. ಇರ‍್ಲಿ ಬಿಡು, ಸತ್ರೆ ಒಳ್ಳೇದಾಯ್ತು ಅಂತಾರೆ. ಮೊನ್ನೆ ಪಂಚಮಿ ದಿನ ಮೇಲಿನ ಬಾಡಿಗೆ ಮನೆಯೋರು ಕೊಟ್ರು ಅಂತ ಎಳ್ಳುಂಡೆ, ಸೇಂಗಾ ಉಂಡೆ, ತಂಬಿಟ್ಟು ಎಲ್ಲ ತಿಂದಕಂಡು ಬಂದಿದಾರೆ. ಇನ್ನು ರಾತ್ರಿಡೀ ಉರಿಉರಿ ಅಂತ ಕಾಲು ಹಿಡಕಂಡು ಕೂತರೆ ಆಯ್ತು, ನಂಗೂ ನಿದ್ದೆ ಕೊಡಲ್ಲ..’ ಅಮ್ಮನಿಗೆ ಮಾತು ಮುಂದೆ ಹೊರಡದಂತೆ ಅಣ್ಣ ಅವಳ ಗಂಟಲಲ್ಲಿ ಸಿಕ್ಕ ಬಿಕ್ಕಳಿಕೆಯಾದರು. 

ಸೌಮ್ಯಳನ್ನು ನೋಡಿ ಬಂದ ಮೇಲೆ ನನ್ನ ಮನಸ್ಸೆಲ್ಲ ಆವರಿಸಿದ್ದು ಅಣ್ಣ ಅಂತ ನಾವು ಕರೆಯುವ ಅಪ್ಪ. ಕಾಲೇಜು ಪ್ರಿನ್ಸಿಪಾಲ್ ಆಗಿದ್ದ ಅಣ್ಣ್ಣ ಕನ್ನಡ-ಇಂಗ್ಲಿಷ್ ಸಾಹಿತ್ಯ ತುಂಬ ಓದಿಕೊಂಡವರು. ಒಳ್ಳೆಯ ಪಾಠ ಮಾಡುತ್ತ ವಿದ್ಯಾರ್ಥಿಗಳ ನೆಚ್ಚಿನ ’ಸರ್’ ಆಗಿದ್ದವರು. ಅಜಾನುಬಾಹು ಸ್ಥೂಲ ದೇಹಿ ಅಣ್ಣ ಸ್ವಲ್ಪ ಹೆಚ್ಚೇ ಎನ್ನುವಷ್ಟು ತಿನ್ನುತ್ತಿದ್ದರು. ವಾರಾಂತ್ಯಕ್ಕೆ ’ವಿಶೇಷ’ ಅಂತ ಅಮ್ಮ ಏನಾದರೂ ಸಿಹಿತಿಂಡಿ ಮಾಡುವುದೇ-ಅಷ್ಟು ಸಿಹಿ ಪ್ರಿಯರು. ಅಂತಹ ಅವರಿಗೆ ಎಷ್ಟು ಬೇಗ-ಮುವ್ವತ್ತೈದು ವರ್ಷಕ್ಕೆಲ್ಲ- ಡಯಾಬಿಟೀಸ್ ಶುರುವಾಗಿ ಸಿಹಿಪ್ರಿಯ ಅಣ್ಣನನ್ನು ಖಾಯಂ ಪಥ್ಯದ ಕಷ್ಟಕ್ಕೆ ತಳ್ಳಿತು. ’ಬಾಲ್ಯ ಕಾಲದಲ್ಲಂತೂ ವಾರಾನ್ನ ಆಯ್ತು. ಅವರಿವರ ಮನೆಯಲ್ಲಿ ಹಾಕಿದ್ದನ್ನೇ, ಹಾಕಿದಷ್ಟನ್ನೇ ತಿಂದಿದ್ದಾಯ್ತು. ಈಗ ಉಂಡು ಉಡಲಿಕ್ಕೆ ಕೊರತೆ ಇಲ್ಲದಿರುವಾಗ ಈ ರೋಗ ಒಂದು ಎಲ್ಲಿಂದ ಬಂತು?’ ಎನ್ನುವುದು ಅವರ ಅನುದಿನದ ಜಿಜ್ಞಾಸೆಯಾಯಿತು. 

ಅದರ ಬಗ್ಗೆ ಚಿಂತೆ ಮಾಡಿದಷ್ಟೂ ಏರುತ್ತಲೇ ಹೋಗುವ ಕಾಯಿಲೆ ಡಯಾಬಿಟೀಸ್. ಅಣ್ಣನಿಗೆ ಆಗಿದ್ದೂ ಇದೇ. ಅದೇ ವೇಳೆಗೆ ಮೆಡಿಕಲ್ ಓದಿಗೆ ನಾನೂ ಮನೆಬಿಟ್ಟು ದೂರದ ಬಳ್ಳಾರಿಗೆ ಹೋದೆ. ತಮ್ಮನೂ ಇಂಜಿನಿಯರಿಂಗ್ ಸೇರಿ ಹಾಸ್ಟೆಲ್‌ವಾಸಿಯಾದ. ನಾನು ರಜೆಗೆ ಮನೆಗೆ ಹೋದಾಗ ಅವರು ಎಗ್ಗಿಲ್ಲದೇ ಸಿಹಿ ತಿನ್ನುತ್ತಿದ್ದುದನ್ನು ಗಮನಿಸುತ್ತಿದ್ದೆ. ನಾನೇನಾದರೂ ಹೇಳಲು ಹೋದರೆ, ’ಮನೆಯೋರ‍್ನ ಡಾಕ್ಟ್ರು ಮಾಡಿದ್ರೆ ಇದೇ ಕಷ್ಟ ನೋಡು. ಹೀಗೆ ನಿಲ್ಲಬೇಡಿ, ಕೂರುವುದು ತಪ್ಪು, ಇದು ತಿನ್ನಬೇಡಿ ಅಂತ ಬರೀ ಉಪದೇಶನೇ ಕೇಳ್ಬೇಕಾಗುತ್ತೆ’. ಅಂತ ಮಾತು ತುಂಡರಿಸುತ್ತಿದ್ದರು. ನಾನವರ ಶಿಷ್ಯೆಯೂ ಆಗಿದ್ದರಿಂದ ಭಯಮಿಶ್ರಿತ ಗುರುಭಾವನೆಯೊಂದು ಅವರ ಮೇಲಿತ್ತು. ಅವರ ಬಳಿ ಸಲಿಗೆ ಕಡಿಮೆಯಿತ್ತು. ಹಾಗಾಗಿ ಅಮ್ಮನ ಹತ್ರವೇ ಡಯಾಬಿಟೀಸ್ ಕಾಯಿಲೆ, ಅದರ ಕಾಂಪ್ಲಿಕೇಶನ್ನುಗಳು, ಮಾಡಬೇಕಾದ ಪಥ್ಯ ಇವುಗಳ ಬಗ್ಗೆ ಕೊರೆಯುತ್ತಿದ್ದೆ. ಟೀಚರಾಗಿದ್ದ ಅಮ್ಮ ಸ್ಕೂಲ, ಮನೆಗೆಲಸ ಅಂತ ಬಸವಳಿದಿದ್ದರೂ ಅಣ್ಣಂಗೆ ಚಪಾತಿ, ಪಲ್ಯ, ಮುದ್ದೆ, ಮೊಳಕೆ ಕಾಳು ಅಂತ ಏನೇನೋ ಮಾಡಿ ಕೊಡುತ್ತಿದ್ದಳು. ಅವರಿಗಾಗಿ ತಾನೂ ಸಿಹಿ ತಿಂಡಿ ತಿನ್ನುವುದನ್ನೂ, ಮಾಡುವುದನ್ನೂ ನಿಲ್ಲಿಸಿಬಿಟ್ಟಳು. ಆದರೆ ಅಣ್ಣ ಮಾತ್ರ ಹೋಟೆಲಿಗೆ, ಅವರಿವರ ಮನೆಗೆ ಹೋಗಿ ಯಥೇಚ್ಚ ಸಿಹಿ ತಿಂದು ಬರುತ್ತಿದ್ದರು. ಒಟ್ಟಾರೆ, ಅಣ್ಣಂಗೆ ಕಾಯಿಲೆ-ಪಥ್ಯ ಮಾಡುವುದು ನಮ್ಮಮ್ಮ ಗಾಂಧಾರಿ ಅನ್ನುವಂತಾಗಿಬಿಟ್ಟಿತು. ನನ್ನ ಮೆಚ್ಚಿನ ಗುರುಗಳೂ, ಮೆಡಿಕಲ್ ಪ್ರೊಫೆಸರೂ ಆಗಿದ್ದ ಡಾ. ರಾಜಣ್ಣ ಅವರ ಬಳಿ ಅಣ್ಣನ್ನ ಕರೆದೊಯ್ದಿದ್ದೆ ಒಮ್ಮೆ. ಅವರೂ ತುಂಬ ಸಹನೆಯಿಂದ, ಬಹಳ ಹೊತ್ತು ಅದೂ ಇದೂ ಮಾತನಾಡಿ ಸೋದಾಹರಣ ಸಹಿತ ಡಯಾಬಿಟೀಸ್ ಬಗ್ಗೆ ಹೇಳಿದ್ದರು. ಅಣ್ಣಂಗೆ ಅದೆಲ್ಲ ಗೊತ್ತಿದ್ದದ್ದೇ ಆಗಿತ್ತು. ಯಾವ್ಯಾವುದೋ ಪುಸ್ತಕ, ಪತ್ರಿಕೆಗಳಲ್ಲಿ ಓದಿ ತಮ್ಮ ಕಾಯಿಲೆ ಬಗ್ಗೆ ಆಮೂಲಾಗ್ರ ತಿಳಿದುಕೊಂಡಿದ್ದರು. ಯಾವುದನ್ನೂ ಆಚರಣೆಗೆ ತರುತ್ತಿರಲಿಲ್ಲ ಅಷ್ಟೆ. ಮೇಷ್ಟರಾಗಿ ಉಪದೇಶ ಮಾಡಿ ಗೊತ್ತಿತ್ತೇ ವಿನಾ ಕೇಳಿ ಗೊತ್ತಿರಲಿಲ್ಲ.  

ಈಗ ನನ್ನ ತಮ್ಮ ಸಂಸಾರದೊಂದಿಗೆ ಅಮೆರಿಕಾದಲ್ಲಿದ್ದರೆ, ನಾನು ಈ ದೂರದೂರಿನ ನರ್ಸಿಂಗ್ ಹೋಂ ಜಂಜಾಟದಲ್ಲಿ ಮುಳುಗಿ ಹೋಗಿದ್ದೇನೆ. ರಿಟೈರಾದ ಮೇಲೆ ಇಲ್ಲೇ ಬಂದಿರಿ ಅಂತ ಅಳಿಯ ಎಷ್ಟು ಹೇಳಿದರೂ ಸುತರಾಂ ಒಪ್ಪಲಿಲ್ಲ ಅಣ್ಣ. ಇಬ್ಬರೂ ಶಿವಮೊಗ್ಗದಲ್ಲೆ ಉಳಿದರು. ಅಣ್ಣ ಹಗಲೆಲ್ಲ ಹೊರಗೆ ಗೆಳೆಯರ-ಶಿಷ್ಯರ ಮನೆ ಅಂತ ತಿರುಗುತ್ತ; ಪಥ್ಯ ಅಂತ ಮನೆಯಲ್ಲಿ ಹೆಂಡತಿ ರುಚಿಯಾದ್ದು ಮಾಡಿ ಹೊಟ್ಟೆಗೆ ಹಾಕುವುದಿಲ್ಲವೆಂದೂ, ಬರೀ ಮಗಳ ಮನೆ, ನೆಂಟರಿಷ್ಟರ ಮನೆ, ಮದುವೆ ಮುಂಜಿ ಅಂತ ತಿರುಗಾಡುತ್ತ ತನ್ನ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸುವುದಿಲ್ಲವೆಂದೂ ಹೇಳುತ್ತ ಅನುಕಂಪ ಗಿಟ್ಟಿಸಲು ಪ್ರಯತ್ನಿಸಿದರು. ಇಳಿವಯಸ್ಸಿನ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದ ಕೊರತೆಯಾಗಿ ಅವರಿಬ್ಬರೂ ಆಪ್ತ ಮಾತುಕತೆಯನ್ನೇ ಬಿಟ್ಟಿದ್ದಾರೆನ್ನುವುದು ನಮಗೆ ಅತ್ಯಂತ ನೋವಿನ ಸಂಗತಿ. ಅಮ್ಮನ ಹತಾಶೆ, ಅಸಹಾಯಕತೆ, ನೋವುಗಳೆಲ್ಲ ಡಿಪ್ರೆಶನ್ ಹೆಸರಿನಲ್ಲಿ ಹೊರ ಬರುತ್ತಿದೆ. ಡಯಾಬಿಟೀಸ್‌ನಲ್ಲಿ ಕುಗ್ಗುವ ಲೈಂಗಿಕ ಸಾಮರ್ಥ್ಯವೂ ಅವರ ನಡುವಿನ ಕಂದರ ಹೆಚ್ಚಿಸಿತೇ ಎಂದು ಹಲವು ಬಾರಿ ಯೋಚಿಸಿದ್ದೇನೆ. ಮಕ್ಕಳಿಬ್ಬರೂ ಸೆಟ್ಲ್ ಆಗಿದ್ದು ಯಾವುದೇ ಆರ್ಥಿಕ ಕಷ್ಟಗಳಿರದೇ ಇರುವ, ಸುಖವಾಗಿರಬೇಕಾಗಿದ್ದ ಅವರ ಜೀವನದ ಮುಸ್ಸಂಜೆಯಲ್ಲಿ ಡಯಾಬಿಟೀಸ್ ಒಂದು ಗೋಡೆಯಾಗಿ ಅವರ ಮಧ್ಯೆ ನಿಂತಿದೆ. ಗುಣವಾಗದ ಅಣ್ಣನ ಕಾಯಿಲೆ ಬಗಲ ಹಾವಾಗಿ ಅವರನ್ನು ಬೆದರಿಸುತ್ತಿದೆ.  
***

ಇದೆಲ್ಲ ಈಗ ಹಳೆಯದಾಯಿತು. ಸೌಮ್ಯಳ ತಂದೆಯ ಇಚ್ಛೆಯಂತೆ ಅವಳನ್ನು ಒಂದೆರೆಡು ವಾರ ಮಟ್ಟಿಗೆ ಆಸ್ಪತ್ರೆಯಲ್ಲಿ ಆಡ್ಮಿಟ್ ಮಾಡಿ ಫಿಸಿಷಿಯನ್ ಕರೆಸಿ ಚಿಕಿತ್ಸೆ ಕೊಡಿಸಿದೆವು. ದಿನವೂ ಮೂತ್ರ ತಪಾಸಣೆ ಮಾಡುತ್ತಾ, ಇನ್ಸುಲಿನ್ ಇಂಜೆಕ್ಷನ್ ಚುಚ್ಚುತ್ತಾ, ಅವಳ ಬಳಿ ಲೋಕಾಭಿರಾಮವಾಗಿ ಮಾತನಾಡುತ್ತ ವಿಶ್ವಾಸ ಗಳಿಸಿಕೊಂಡೆವು. ರಕ್ತದ ಸಕ್ಕರೆ ಅಂಶ ಇಳಿಯುತ್ತಾ ನಾರ್ಮಲ್ ಆಗುವ ಹೊತ್ತಿಗೆ ಹಸಿವೆ ಮತ್ತು ಸಿಟ್ಟೂ ಇಳಿಯುತ್ತಾ ಬಂದವು. ನನ್ನಿಬ್ಬರು ಮಕ್ಕಳೂ ಆಸ್ಪತ್ರೆಗೆ ಬಂದು, ಅವಳ ಬಳಿ ಮಾತನಾಡಿ, ಅವರ ವೀಡಿಯೋ ಗೇಮ್, ಪುಸ್ತಕಗಳನ್ನು ಅವಳಿಗೆ ಕೊಟ್ಟು, ಬಹುಬೇಗ ಗೆಳತಿಯರಾದರು. ಉತ್ತಮ ದೈವದತ್ತ ಕಂಠವಿದ್ದ ಅವಳನ್ನು ಓಪಿಡಿಯಲ್ಲಿ ಕೂರಿಸಿ ಹಾಡು ಹೇಳಿಸುತ್ತಿದ್ದೆ. ಅವಳ ಹಿಂದೂಸ್ಥಾನಿ ರಾಗಗಳಿಗೆ ಸಂವಾದಿಯಾಗಿರುವ ಕರ್ನಾಟಕ ಸಂಗೀತದ ರಾಗಗಳನ್ನು ಹಾಡಿ ತೋರಿಸುತ್ತಿದ್ದೆ. ಆಸ್ಪತ್ರೆಯಲ್ಲಿರುವಾಗಲೇ ನಮ್ಮ ಮಕ್ಕಳ ಹಲವು ಪುಸ್ತಕಗಳನ್ನು ಓದಿ ಮುಗಿಸಿದಳು.  

ಮೊದಮೊದಲು ಅನ್ನಕ್ಕೆ, ತಿಂಡಿಗೆ ಹಪಹಪಿಸುತ್ತಿದ್ದವಳು ಈಗ ನಾಕೈದು ತಾಸಿಗೊಮ್ಮೆ ತಿಂದರೆ ಸಾಕೆನ್ನುವಷ್ಟಾಯಿತು. ಹದಿನೈದು ವರ್ಷದ ಹುಡುಗಿ ಬರೀ ಮೂವತ್ತೊಂದು ಕೆಜಿ ಇದ್ದವಳು ಸ್ವಲ್ಪ ಮೈಕೈ ತುಂಬಿಕೊಳ್ಳುವಂತಾದಳು. ಬರಬರುತ್ತ ಇನ್ಸುಲಿನ್ ಇಂಜೆಕ್ಷನ್ ಹೇಗೆ ತೆಗೆದುಕೊಳ್ಳುವುದು, ಹೇಗೆ ಸಿರಿಂಜಿಗೆ ತುಂಬುವುದು ಎನ್ನುವುದನ್ನೆಲ್ಲ ನರ್ಸುಗಳ ಹತ್ತಿರ ವಿಚಾರಿಸಿ ಪೂರಾ ತಿಳಿದುಕೊಂಡಳು. ಅವಳಲ್ಲಾದ ಬದಲಾವಣೆಯಿಂದ ಭಟ್ಟರು ಮತ್ತು ಸಾವಿತ್ರಿ ಸಂತೋಷಗೊಂಡರು. ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸೋಣವೆಂದುಕೊಳ್ಳುವಾಗಲೇ ರೌಂಡ್ಸ್ ಮಾಡುವಾಗ ’ಇನ್ನೆಷ್ಟು ದಿನ ಆಸ್ಪತ್ರೇಲಿ ಇರಬೇಕು ಮೇಡಂ? ಇನ್ಮೇಲೆ ನಾನೂ ಶಾಲೆಗೆ ಹೋಪುಲೆ ಅಡ್ಡಿಲ್ಯಾ?’ ಎಂದು ಕೇಳಿದಳು. ಅವಳ ಈ ಪ್ರಶ್ನೆಗೇ ಕಾದಿದ್ದಂತೆ, ಅವಳು ಹಾಗೂ ಅವಳಪ್ಪ ಅಮ್ಮನ್ನ ಕೂರಿಸಿಕೊಂಡು ಡಯಾಬಿಟಿಸ್ ಕುರಿತ ಮಾಹಿತಿ ನೀಡಿ ಅದು ವಿಶ್ರಾಂತಿ ಬೇಕಾದ ಕಾಯಿಲೆ ಅಲ್ಲವೆಂದೂ, ಮುಂಚಿನಂತೆಯೇ ಅವಳು ದೈನಂದಿನ ಚಟುವಟಿಕೆಯಲ್ಲಿ ತೊಡಗಬಹುದೆಂದೂ ಸೂಚಿಸಿದೆವು. ಸಮಯಕ್ಕೆ ಸರಿಯಾಗಿ ಇನ್ಸುಲಿನ್ ಮತ್ತು ಆಹಾರ ತೆಗೆದುಕೊಳ್ಳುವುದು ಹಾಗೂ ಗಾಯವಾಗದ ಹಾಗೆ ನೋಡಿಕೊಳ್ಳುವುದು, ಇವೆರೆಡರ ಬಗ್ಗೆ ನಿಗಾ ಇಡಬೇಕೆಂದೂ ಹೇಳಿದೆ. 

ಆಸ್ಪತ್ರೆಯಿಂದ ಹೋಗುವಾಗ ಸೌಮ್ಯ ನನಗೊಂದು ನವಿಲುಗರಿ ಕೊಟ್ಟು ಹೋದಳು.  

ಸ್ವಲ್ಪ ಲೇಟಾಗಿತ್ತಾದರೂ ಆ ವರ್ಷವೇ ಅವಳನ್ನು ಹೈಸ್ಕೂಲಿಗೆ ಸೇರಿಸಿದರು. ಸಂಗೀತ ಕ್ಲಾಸೂ ನಡೆದೇ ಇತ್ತು. ಮೂರು ತಿಂಗಳಿಗೊಮ್ಮೆ ತಪ್ಪದೆ ರಕ್ತ ಪರೀಕ್ಷೆಗೆ ಬರುತ್ತಿದ್ದಳು. ಸಾಧಾರಣವಾಗಿ ಭಾನುವಾರವೇ ಬರುತ್ತಿದ್ದುದರಿಂದ, ಮೊದಲು ಸೀದಾ ನಮ್ಮ ಮನೆಗೆ ಹೋಗಿ ಮಕ್ಕಳ ಬಳಿ ಮಾತಾಡಿ, ಮುಂಚೆ ತಗೊಂಡು ಹೋದ ಪುಸ್ತಕ ಕೊಟ್ಟು ಮತ್ತೊಂದನ್ನು ತೆಗೆದುಕೊಂಡು ನಂತರ ಕ್ಲಿನಿಕ್ಕಿಗೆ ಬರುತ್ತಿದ್ದಳು.

ಈ ನಡುವೆ ಅಣ್ಣನ ಶುಗರ್ ಮಿತಿಮೀರಿ, ಕಾಲು ಗ್ಯಾಂಗ್ರೀನ್ ಆಗಿ, ಮಣಿಪಾಲದಲ್ಲಿ ಬಲಗಾಲು ಮೊಣಕಾಲ ಕೆಳಗಿನ ಭಾಗ ಶಸ್ತ್ರಕ್ರಿಯೆ ನಡೆಸಿ ಕತ್ತರಿಸಿ ಹಾಕಿದ್ದರು. ಬಲವಂತವಾಗಿ ನಂತರ ನಮ್ಮನೆಯಲ್ಲೇ ತಂದಿಟ್ಟುಕೊಂಡೆ. ಗಾಯಕ್ಕೆ ದಿನವೂ ಡ್ರೆಸಿಂಗ್ ಮಾಡುತ್ತ, ಅವರ ಬಳಿ ನಾನಾ ರೋಗಿಗಳ ಬಣ್ಣಬಣ್ಣದ ಕತೆಗಳನ್ನು ಹೇಳುತ್ತ, ಕಟ್ಟು ಪಥ್ಯ ನಡೆಸುತ್ತ, ಅಣ್ಣ ಇನ್ನೇನು ಗೆಲುವಾಗಿಬಿಟ್ಟರು ಎನ್ನುವಾಗ ಒಂದು ರಾತ್ರಿ ಮಲಗಿದವರು ಬೆಳಿಗ್ಗೆ ಮೇಲೇಳಲಿಲ್ಲ. ಒಂದು ’ಸೈಲೆಂಟ್ ಎಂಐ’ (ನೋವಿಲ್ಲದ ಹ್ಲೃದಯ ಬೇನೆ) ಅವರನ್ನು ಖಾಯಮ್ಮಾಗಿ ಸೈಲೆಂಟ್ ಮಾಡಿಬಿಟ್ಟಿತು. ನಂತರ ಒಬ್ಬಳೇ ಇರುವುದು ಬೇಡವೆಂದು ಅಮ್ಮನೂ ಶಿವಮೊಗ್ಗದ ಮನೆ ಬಾಡಿಗೆಗೆ ಕೊಟ್ಟು ನನ್ನ ಬಳಿಯೇ ಉಳಿದಳು.

***

ಈಗ ನೀವು ಸೌಮ್ಯನ್ನ ನೋಡಿದರೆ ಗುರುತು ಹಿಡಿಯಲಾರಿರಿ. ಬೆಳ್ಳಗೆ, ಎತ್ತರಕ್ಕೆ ಬೆಳೆದ ಸೌಮ್ಯ ಯಾವ ಹೀರೋಯಿನ್ನನ್ನೂ ನಾಚಿಸುವಂತಾಗಿದ್ದಾಳೆ. ಸಂಗೀತ ವಿದ್ವತ್ ಪರೀಕ್ಷೆಗೆ ಕೂತಿದ್ದಾಳೆ. ಬಿಎಸ್ಸಿ ಕೊನೇ ವರ್ಷದಲ್ಲಿದ್ದಾಳೆ. ಟೀಚರ್ ಆಗುವ ಆಸೆ ಹೊಂದಿದ್ದಾಳೆ. ಒಮ್ಮೆ ಅವಳು ಬಂದಾಗಲೇ ರುಜಾರಿಯೋ ಬಂದ. ಅವನೂ ಐಟಿಐ ಆಟೋಮೊಬೈಲ್ ಓದುತ್ತಿರುವ, ಎಂಟೊಂಭತ್ತು ವರ್ಷದಿಂದ ಜುವೆನೈಲ್ ಡಯಾಬಿಟೀಸ್ ಬಾಧಿಸುತ್ತಿರುವ ಹುಡುಗ. 

’ಸೌಮ್ಯ, ರೋಗಿಗಳನ್ನು ಕಾಯಿಲೆ ಹೇಳಿ ಪರಿಚಯಿಸಬಾರದು. ಆದರೂ ನೀನೊಬ್ಬಳೇ ಈ ಕಾಯಿಲೆ ಇರುವವಳಲ್ಲ ಅನ್ನಲಿಕ್ಕೆ ಹೇಳ್ತಿದೀನಿ, ಇಗೋ ಇವನು ರುಜಾರಿಯೋ. ಇವನಿಗೂ ನಿನ್ನದೇ ಕಾಯಿಲೆ’ ಎಂದೆ. ಕಟ್ಟು ಮಸ್ತಾದ ಕಪ್ಪು ರುಜಾರಿಯೋನ ಕಣ್ಣರಳಿಸಿ ಪರಿಚಯಿಸಿಕೊಂಡಳು. ಪರಸ್ಪರರ ಊರು, ವಿದ್ಯಾಭ್ಯಾಸದ ಬಗ್ಗೆ ಕೇಳಿಕೊಂಡರು. ನಂತರವೂ ಹೊರಗೆ ಅವರು ಮಾತನಾಡಿಕೊಳ್ಳುತ್ತಿದ್ದುದು ಕೇಳುತ್ತಿತ್ತು. 

ಮುಂದಿನ ಒಂದೆರಡು ಬಾರಿ ಅವರಿಬ್ಬರೂ ಚೆಕಪ್‌ಗೆ ಒಂದೇ ದಿನ ಬಂದರು. ಆ ಬಾರಿ ಸೌಮ್ಯ ಬಹಳ ಖುಷಿಯಾಗಿದ್ದಂತೆ ತೋರಿತು. ರುಜಾರಿಯೋನೂ ಅವಳೊಟ್ಟಿಗೇ ಇದ್ದ. 

’ಮೇಡಂ ನಮಗೆ ಸಿಹಿ ತಿನ್ನಬೇಡಿ ಅಂತೀರಿ, ಆದ್ರೂ ನಾವು ನಿಮಗೆ ಸಿಹಿ ಕೊಡುತ್ತಿದ್ದೇವೆ ತಗೊಳ್ಳಿ. ನಂದು ಬಿಎಸ್ಸಿ ಫಸ್ಟ್ ಕ್ಲಾಸ್‌ನಲ್ಲಿ ಆಗಿದೆ. ಕೆಮಿಸ್ಟ್ರಿ, ಬಯಾಲಜಿ ನಾನೇ ಹೈಯೆಸ್ಟ್. ಭಟ್ಕಳದಲ್ಲಿ ಪಿಜಿಗೆ ಸೇರುತ್ತೇನೆ’ ಅಂತ ಸಂಭ್ರಮಿಸುತ್ತ ಎಂದಳು. ’ನಂದೂ ಐಟಿಐ ಆಯ್ತು ಮೇಡಂ. ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಮೈಸೂರಿನ ಟಿವಿಎಸ್ ಕಂಪನಿಯವರು ಆಯ್ಕೆ ಮಾಡಿದಾರೆ. ಬರುವ ತಿಂಗಳು ಹೋಗಬೇಕು’ ಅಂತ ರುಜಾರಿಯೋ ಅಂದು ಇಬ್ಬರೂ ಒಟ್ಟು ತಂದಿದ್ದ ಪೇಡೆ ನನ್ನ ಮುಂದೆ ಹಿಡಿದರು. 
ಇಬ್ಬರನ್ನೂ ಅಭಿನಂದಿಸುತ್ತಾ, ಅವರ ಮುಂದಿನ ಕೆರಿಯರ್ ಪ್ಲಾನ್‌ಗಳ ಬಗ್ಗೆ ಕೇಳುತ್ತಾ, ಎಚ್ಚರಿಕೆಯ ಮಾತುಗಳ ಸಲಹೆ ನೀಡುತ್ತ ಇದ್ದಂತೆ, ಸೌಮ್ಯ ’ಮೇಡಂ, ಎಲ್ಲ ಸರಿ. ಈ ಕಾಯಿಲೆ ನಮಗೇ ಏಕೆ ಬಂತು?’ ಅಂತ ಇದ್ದಕ್ಕಿದ್ದಂತೆ ಕೇಳಿದಳು.
 ’ನಮ್ಮ ಬಣ್ಣ, ರೂಪ, ಗುಣದ ಹಾಗೇ ಕೆಲವು ಕಾಯಿಲೆಗಳೂ ಹುಟ್ಟಿನಿಂದಲೇ ಬೀಜರೂಪದಲ್ಲಿ ನಮ್ಮೊಳಗಿದ್ದು ಕಾಲ ಬಂದಾಗ ಮೊಳೆಯುತ್ತವೆ. ಕೋಟಿಗಟ್ಟಲೆ ವೀರ‍್ಯಾಣುಗಳಲ್ಲಿ ಒಂದು, ತತ್ತಿಯೊಡನೆ ಫಲಿತವಾಗಿ ಈ ’ನಾನು’ ಎನ್ನುವ ನಾನು ಹುಟ್ಟಿದ್ದು ಅಲ್ಲವೆ? ಅಷ್ಟು ಅಸಂಖ್ಯ ಸಾಧ್ಯತೆಗಳ ನಡುವೆಯೂ ’ನಾನೇ’ ಹೇಗೆ ಹುಟ್ಟಿಬಂದೆ ಎಂಬುದಕ್ಕೆ ಹೇಗೆ ಉತ್ತರವಿಲ್ಲವೋ ಹಾಗೇ ’ನನಗೇ ಯಾಕೆ ಈ ಕಾಯಿಲೆ ಬಂತು’ ಎನ್ನಲಿಕ್ಕೂ ಖಚಿತ ಉತ್ತರವಿಲ್ಲ. ಪೂರ್ವಜನ್ಮದ ಕರ್ಮ, ಪಾಪ ಇದರ ಬಗ್ಗೆ ನನಗೆ ತಿಳುವಳಿಕೆಯಾಗಲೀ, ನಂಬಿಕೆಯಾಗಲೀ ಇಲ್ಲ ಸೌಮ್ಯ. ಯಾಕೆ, ಹೇಗೆ ಬಂತೆನ್ನುವ ಜಿಜ್ಞಾಸೆಯಿಂದಲೂ ಪ್ರಯೋಜನವಿಲ್ಲ. ಬಂದದ್ದನ್ನು ಅನುಭವಿಸಿಯೇ ಮುಗಿಸಬೇಕು. ಕಾಯಿಲೆಯ ಜತೆಗಿನ ಬದುಕನ್ನು ರೂಢಿಸಿಕೊಳ್ಳಬೇಕು. ಖಾಯಂ ಕಾಯಿಲೆಗಳ ಬಗ್ಗೆ ಚಿಂತಿಸಿ ಫಲವಿಲ್ಲ, ಬದುಕಿನಲ್ಲಿ ಸುಖ ಗಗನ ಕುಸುಮವಲ್ಲ. ನಮಗೆ ಸಿಗುವಷ್ಟೇ ಮೇಲೆ ಇರುತ್ತದೆ. ಆ ಎತ್ತರ ಏರಲು ತಕ್ಕ ಎಣಿ ಒದಗಿಸಿಕೊಂಡ ಜಾಣ ಸುಖಿಯಾಗಿರುತ್ತಾನೆ ಅಷ್ಟೆ’ ಎನ್ನುತ್ತ ಬದುಕು-ಸಾವು-ಕಾಯಿಲೆ ಬಗ್ಗೆ ಒಂದು ಸಣ್ಣ ಭಾಷಣ ಬಿಗಿದೆ.

ಹತ್ತಾರು ನಿಮಿಷದ ಮೌನ. ನಂತರ ಮಾತು ಮುಂದುವರೆಯಿತು. ಕಾಯಿಲೆ ಬಗ್ಗೆ, ಅದರ ಜತೆಗಿನ ಮುಂದಿನ ಬದುಕಿನ ಬಗ್ಗೆ ಇಬ್ಬರೂ ತುಂಬ ಹೊತ್ತು ಮಾತಾಡಿ ಊರಿಗೆ ಬಂದಾಗ ಭೇಟಿಮಾಡುತ್ತೇವೆಂದು ನನ್ನ ಕೈಕುಲುಕಿ ಹೋದರು. ಯಾವುದೇ ಜಾತಿ, ಧರ್ಮ, ಲಿಂಗ, ವರ್ಗ ಭೇದವಿಲ್ಲದೇ ಬರುವ ಡಯಾಬಿಟೀಸ್ ನೈಜ ಸಮಾಜವಾದಿ ಅಂದುಕೊಳ್ಳುತ್ತಾ ಕ್ಲಿನಿಕ್ ಮುಚ್ಚಿ ಹೊರಟಾಗ ದೂರದ ಮರದಡಿಯಲ್ಲಿ ಇಬ್ಬರೂ ಮಾತಾಡುತ್ತಾ ನಗುತ್ತಾ ನಿಂತಿದ್ದು ನೋಡಿದೆ. 

ಹುಣ್ಣಿಮೆಯ ಚಂದಿರ ಪೂರ್ವ ದಿಗಂತದಿಂದ ನಗುತ್ತಾ ಮೇಲೇರುತ್ತಿದ್ದ..

ಡಾ. ಎಚ್. ಎಸ್. ಅನುಪಮಾ  ವೈದ್ಯೆ. ಮೂಲತಃ ಶಿವಮೊಗ್ಗ ಜಿಲ್ಲೆಯವರು. ಈಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೃತ್ತಿ ನಿರತರು. ಕವಿತೆ, ಕಥೆ, ವೈಚಾರಿಕ, ವೈದ್ಯಕೀಯ, ಪ್ರವಾಸ ಬರಹಗಳನ್ನು ಬರೆಯುವ ಇವರ 29 ಪುಸ್ತಕಗಳು ಪ್ರಕಟಗೊಂಡಿವೆ. ಅದರಲ್ಲಿ ಸಂಪಾದನೆ ಮತ್ತು ಅನುವಾದ ಪುಸ್ತಕಗಳೂ ಸೇರಿವೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಡಾ. ಎಚ್. ಎಸ್. ಅನುಪಮಾ
ಜಲಜಾ ಹೆರಿಗೆ ಮತ್ತು ಜನರಲ್ ಆಸ್ಪತ್ರೆ
ಕವಲಕ್ಕಿ-581361
ತಾ: ಹೊನ್ನಾವರ ಜಿ: ಉತ್ತರ ಕನ್ನಡ

anukrishna93@gmail.com


9480211320

ಈ ರೋಗ-ರೋಗಿಗಳ ಬಗ್ಗೆ ಇದ್ದ ವೈಯಕ್ತಿಕ ಅನುಭವದ ಹಿನ್ನೆಲೆಯಿಂದಲೇ ಸೌಮ್ಯಳ ಬಗ್ಗೆ ನನಗೆ ಅತೀವ ಆಸ್ಥೆ ಹುಟ್ಟಿತು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...