Monday, November 02, 2015

ಹರಿದು ಕೂಡುವ ಕಡಲು : ವಿಷಾದವೆ ಇಲ್ಲಿನ ಕವಿತೆಗಳ ಸ್ಥಾಯಿ ಭಾವ

ಪುಸ್ತಕ ವಿಮರ್ಶೆ


  ಉದಯಕುಮಾರ ಹಬ್ಬು

ಸೌಜನ್ಯ : ಇಂಡಿಯಾರಿ  ( INDIAREE ) ವೆಬ್ ಮ್ಯಾಗಜಿನ್
ಹರಿದು ಕೂಡುವ ಕಡಲು: 45 ಗಜಲ್‍ಗಳು
ಗಣೇಶ ಹೊಸ್ಮನೆ,
ಪ್ರಕಾಶಕರು : ಲಡಾಯಿ ಪ್ರಕಾಶನ, ಗದಗ
ಬೆಲೆ : 60 ರೂ

ಕಾವ್ಯಸೃಷ್ಟಿಯ ಪ್ರಕ್ರಿಯೆಯಲ್ಲಿ ಈ ಮೂರು ಅಂಶಗಳು ಬಹು ಪ್ರಮುಖ ಎನಿಸಿವೆ: ರೂಪ, ಆಶಯ ಮತ್ತು ಧ್ವನಿ ಅಥವಾ ದನಿ. ಸಂಸ್ಕೃತಸಾಹಿತ್ಯ ಮೀಮಾಂಸೆಯ ದೃಷ್ಟಿಯಲ್ಲಿ ಸಾಹಿತ್ಯವೆಲ್ಲವೂ ಕಾವ್ಯವೆ ಆಗಿದೆ. ಶುದ್ಧ ಕಾವ್ಯ ಪರಂಪರೆಯಲ್ಲಿ ಛಂದಸ್ಸು, ಲಯ, ರೂಪಕಗಳು, ಸಂಕೇತಗಳು ಇವು ರೂಪಗಳಾದರೆ, ಕವಿಯು ತನ್ನ ಆಶಯವನ್ನು ವ್ಯಕ್ತಪಡಿಸುತ್ತಾನೆ. ಅವನ ಆಶಯವು ಓದುಗನಿಗೆ ಅಥವಾ ವಿಮರ್ಶಕನಿಗೆ ಬೇರೊಂದಾಗಿ ಧ್ವನಿಸಬಹುದು. ಕವಿಯ ಆಶಯಕ್ಕಿಂತ ಭಿನ್ನವಾದ ಅಗಾಧವಾದ ಬಾಹುಳ್ಯತೆಯ ಸಾಮಥ್ರ್ಯ ಮತ್ತು ಸಾಧ್ಯತೆಯುಳ್ಳ ಕಾವ್ಯ ಅದಾಗಬಹುದು. ಪರಂಪರೆಯನ್ನು ಮುರಿದು ಮೂರ್ತಿಭಂಜಕ ಕವಿ ಸೃಜನಶೀಲ ಕವಿಯಾಗುತ್ತಾನೆ. ಡಿ ಆರ್ ನಾಗರಾಜ್ ವ್ಯಾಖ್ಯಾನಿಸಿದ ಹಾಗೆ `ಪ್ರತಿಭೆ' ಎಂದರೆ ಹೊಳಹು. ಅದು ಅರ್ಥದ ಸ್ಫೋಟ. ಶಬ್ದಗಳಲ್ಲಿ ಅಂತರ್ಗತವಾಗಿದ್ದ ನೋಟ ಒಮ್ಮೆಗೇ ಸಿಡಿದು ಹೊರಹೊಮ್ಮಿ ಶಬ್ದಾರ್ಥದೀಪ್ತಿಯಾಗಿಬಿಡುತ್ತದೆ.' (ಸಾಹಿತ್ಯ ಕಥನ) ಸೃಜನಶೀಲ ಕವಿ `ಬರೆದುದನೆ ಬರೆಬರೆದು ಬಿನ್ನಗಾಗಿದೆ ಮನವು' ಎಂಬ ತಲ್ಲಣದಿಂದ ಹೊಸತನ್ನು ಹುಡುಕಿ ಹೋಗುತ್ತಾನೆ. ಹಳೆಯ ರೂಪಕ್ಕೆ ಹೊಸ ಆಶಯವನ್ನು ಸೇರಿಸಬಹುದು. ಅಥವಾ ನವ್ಯರು ಮಾಡಿದಂತೆ ಹೊಸ ರೂಪವನ್ನೆ ಹೊಸ ಆಶಯವನ್ನೆ ಕಾವ್ಯಕ್ಕೆ ತೊಡಿಸಬಹುದು. ಸಂಪ್ರದಾಯದಿಂದ ಕವಿ ಪ್ರತ್ಯೇಕವಾಗಿರಲು ಕವಿಗೆ ಕಷ್ಟಸಾಧ್ಯ. ಸಂಪ್ರದಾಯವನ್ನು ಭಂಜಿಸದೆ, ಮುರಿಯದೆ ಕವಿ ತನ್ನ ವೈಯುಕ್ತಿಕ ಪ್ರತಿಭೆಯನ್ನು ತನ್ನ ಸೃಜನಶೀಲತೆಯನ್ನು ಹೊರಹಾಕಲಾರ. ಈ ಇಕ್ಕಟ್ಟನ್ನು ಎಲ್ಲ ಪ್ರಜ್ಞಾವಂತ ಕವಿಗಳು ಅನುಭವಿಸುತ್ತಾರೆ.

ಈ ಅನಿಸಿಕೆಗಳು ಪ್ರತಿಭಾವಂತ ಕಾವ್ಯರ್ಷಿಯಾಗಿ ಮೂಡಿಬರುತ್ತಿರುವ ಗಣೇಶ ಹೊಸ್ಮನೆಯವರ ಗಜಲ್‍ಗಳನ್ನು ಓದಿ ಆನಂದಿಸುವಾಗ ಮೂಡಿಬಂದದ್ದಾಗಿವೆ. ಇಲ್ಲಿ ಕವಿ ಗಜಲ್‍ಗಳ ಸಾಂಪ್ರದಾಯಿಕ ಆಶಯವನ್ನೆ ಮುರಿದು ಹೊಸ ಆಶಯಗಳನ್ನು ತಾವು ರಚಿಸಿದ ಗಜûಲ್‍ಗಳಿಗೆ ತೊಡಿಸಿದ್ದಾರೆ. ಆ ಲೆಕ್ಕದಲ್ಲಿ ಈ ಕವಿ ಮೂರ್ತಿಭಂಜಕ ಸೃಜನಶೀಲತೆಯನ್ನು ತಮ್ಮ ಕಾವ್ಯದಲ್ಲಿ ಮೆರೆದಿದ್ದಾರೆ. ಅವರು ತಮ್ಮ ಪ್ರಸ್ತಾವನೆಯಲ್ಲಿ `ಗಜಲ್'ಗಳೆಂದರೆ ಯಾವ ಪ್ರಕಾರದ ಕಾವ್ಯ ಎಂದು ಬಗೆಯುತ್ತ ಹೀಗೆ ಬರೆಯುತ್ತಾರೆ. `ಬಂಧಿಸಿಡಲಾಗದ ಭಾವಗಳನ್ನು ಛಂದೋಬದ್ಧ ದ್ವಿಪದಿಗಳಲ್ಲಿ ಬಂಧಿಸಿ ಅಭಿವ್ಯಕ್ತಿಸುವ ಒಂದು ಕಾವ್ಯಕ್ರಮ. ಮೂಲತಃ ಅರಬ್ಬಿ-ಪಾರ್ಸಿ ಭಾಷೆಯಿಂದ ಬಂದು ಉರ್ದುವಿನ ಮೂಲಕ ಜನಪ್ರಿಯಗೊಂಡು ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಯೋಗ ಕಂಡ ಪ್ರಕಾರ. ಗಜಲ್ ಪದದ ಮೂಲಾರ್ಥ `ಹೆಂಗಸರೊಡನೆ ಮಾತನಾಡುವುದು' `ಮಧುಪಾತ್ರೆ ಕೊಡುವವರೊಡನೆ ಸಂಭಾಷಿಸುವುದು' ಎಂದಿದೆಯಾದರೂ, ಅದು ಕಾಲಕಾಲಕ್ಕೆ ಭಾಷೆ-ಸಮುದಾಯ-ಸಂಸ್ಕøತಿಯೊಡನೆ ಬೆರೆಯುತ್ತ ಮಧುಶಾಲೆ-ಮಧು ಪಾತ್ರೆಗಳ ಹಿನ್ನೆಲೆಯನ್ನು ತೊರೆದು ಮೂಲ ಪದದ ಔಪಚಾರಿಕತೆಯನ್ನಷ್ಟೇ ಉಳಿಸಿಕೊಂಡಿದೆ. ಅಂದರೆ, ಮಧುಶಾಲೆಯೊಡನೆ-ಪ್ರೇಯಸಿಯೊಡನೆಯಷ್ಟೇ ತನ್ನ ಮಾತುಗಳನ್ನು ಸೀಮಿತಗೊಳಿಸದೆ ಉಳಿಸಿಕೊಂಡಿದೆ ಜನಸಾಮಾನ್ಯನೊಂದಿಗೆ ಸಂವಾದಿಸುತ್ತ ತನ್ನ ಭಾವ್ಯಾಪ್ತಿಯನ್ನು ಕಾಲವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೆ ಬಂದಿದೆ.' ಎನ್ನುತ್ತಾರೆ. ಮತ್ತು ತಾವು ಗಜಲ್ ಛಂದಸ್ಸು-ಚರಿತ್ರೆಯ ಬಗ್ಗೆ ಪೂರ್ತಿಯಾಗಿ ಅರಿತಿದ್ದು ಶಾಂತರಸರ `ಗಜಲ್ ಮತ್ತು ಬಿಡಿ ದ್ವಿಪದಿಗಳು; ಕೃತಿಯನ್ನು ಓದಿದ ನಂತರವೇ. ಅಲ್ಲದೆ ಗಜûಲ್ ಕೃತಿ `ಮೌನ'ದ ಕವಿ-ಸ್ನೇಹಿತ ಚಿದಾನಂದ ಸಾಲಿಯವರ ಒಡನಾಟ, ಹುಮ್ಮಸ್ಸು ಗಜಲ್ ಬಗ್ಗೆ ಮತ್ತಷ್ಟು ಆಸಕ್ತಿ ಹುಟ್ಟಲು, ಕೃತಿಯನ್ನು ತರುವ ಮಟ್ಟಿಗೆ ಬರೆಯಲು ಕಾರಣವಾಯಿತು.' ಎಂದು ತನ್ನ ಕೃತಿರಚನೆಯ ಸ್ಪೂರ್ತಿಯ ಕುರಿತು ಹಿನ್ನೆಲೆಯ ಕುರಿತು ಬರೆಯುತ್ತಾರೆ. 

ಕಾವ್ಯ ಎಂದರೆ ಜನಸಾಮಾನ್ಯರೊಂದಿಗಿನ ಸಂವಾದ ಎನ್ನುವ ಮಾತು ಸರಿಯೆ. ಕವಿ ಹೊಸ್ಮನೆ `ಗಜಲ್ ಒಂದು ಇಡಿಯಾಗಿ ನೀಡುವ ಅನುಭವ ಪ್ರತ್ಯೇಕ' ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಾರೆ. ಪ್ರಸ್ತಾವನೆಯಲ್ಲಿ ಗಜಲ್ ನ ಛಂದಸ್ಸುಗಳ ಬಗ್ಗೆಯೂ ಬರೆದಿದ್ದಾರೆ. ಆದ್ದರಿಂದ ಈ ಗಜಲ್ ಸಂಕಲನವು ಗಜಲ್ ಕಾವ್ಯಪ್ರಕಾರವನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ತಮ್ಮ ಪ್ರತಿಭೆಯನ್ನು ಹೊಳೆಯಿಸುವವರಿಗೂ ಒಂದು ತರಬೇತಿಯನ್ನು ನೀಡುವ ಪಠ್ಯದಂತಿದೆ.

ಹಾಗೆ ಓದಿನ ಸ್ವಾದವನ್ನು ಅನುಭವಿಸುತ್ತಿದ್ದಂತೆ ಡಿವಿಜಿಯ ಮಂಕುತಿಮ್ಮನ ಕಗ್ಗ ನೆನಪಾಗಿದ್ದು ಸುಳ್ಳಲ್ಲ. `ಪೋಯೆಟ್ರಿ ಬಿಗಿನ್ಸ್ ವಿಥ್ ಡಿಲೈಟ್ ಎಂಡ್ ಎಂಡ್ಸ ಇನ್ ವಿಸ್ಡಮ್' ಎಂದು ಉತ್ತಮ ಕವಿತೆಯ ಬಗ್ಗೆ ರೊಬರ್ಟ್ ಫ್ರೊಸ್ಟ್ ಎಂಬ ಕವಿ ಹೇಳುತ್ತಾನೆ. ಈ ಮಾತು ದ ರಾ ಬೇಂದ್ರೆ ಕವಿತೆಗಳಿಗೆ ಎಷ್ಟು ಅನ್ವಯವಾಗುವುದೊ ಅಷ್ಟೆ ಹೊಸ್ಮನೆ ಕವಿತೆಗಳಿಗೂ ಅನ್ವಯವಾಗುತ್ತವೆ. ಕವಿ ತನ್ನ ಗಜಲ್ ಗಳಲ್ಲಿ ಮನುಷ್ಯ ಲೋಕದ ದುಃಖಗಳ ಬಗ್ಗೆ, ಕಣ್ಣೀರಿನ ಬಗ್ಗೆ ಸಾಕಷ್ಟು ಬರೆಯುತ್ತಾರೆ. ವಿಷಾದವೆ ಇಲ್ಲಿನ ಕವಿತೆಗಳ ಸ್ಥಾಯಿ ಭಾವವಾಗಿದೆ. ಮನುಷ್ಯತ್ವ ಮತ್ತು ಮಾನವಕುಲದ ಬಗ್ಗೆ, ಮತ್ತು ಬದುಕಿನ ಬಗ್ಗೆ ಅಪಾರ ಪ್ರೀತಿ ಇಲ್ಲಿ ವ್ಯಕ್ತವಾಗುವುದರೊಂದಿಗೆ ಮನುಷ್ಯನ ದುಃಖಗಳಿಗೆ ಮನುಷ್ಯನೆ ಅವನ ಸಣ್ಣತನ, ಸ್ವಾರ್ಥ, ಮತ್ತು ಮತ್ಸರ ಲೋಭವೆ ಕಾರಣ ಎನ್ನುತ್ತಾರೆ ಕವಿ. ಕಾಣದ ಕತ್ತಿ 

ಸುರಿವ ಬೆಳದಿಂಗಳೊಳು ಬಿಡದೆ ಕಾಡುತಿದೆ ಕಾಣದ ಕತ್ತಿಯಲಗು'/
ಬಿರಿದ ಜೀವವನು ಇರಿದು ಸಾಗುತಿದೆ ಕಾಣದ ಕತ್ತಿಯಲಗು
ಕಣ್ಗಳಲಿ, ಎದೆ-ಒಡಲಿನಲಿ ಎಲ್ಲಿಯೂ ಇರಬಹುದು ಗಾಯ
ಮತ್ಸರ ತಾತ್ಸಾರದಿಂದಲೇ ಗೀರುತ ಮೂಡಿಸಿದೆ ಕಾಣದ ಕತ್ತಿಯಲಗು
....ನೆತ್ತರಿಗೂ ಬಣ್ಣಗಳ ಬೆರೆಸಿ ಉರಿಸುತ್ತ ಬಂದವರಾರೋ
ಚೆಲ್ಲಿದ ನೆತ್ತರಿನ ನೋವು ಒಂದೇ ಎಂಬುದನು ರುಜುಗೊಳಿಸಿದೆ ಕಾಣದ ಕತ್ತಿಯಲಗು.

ಕತ್ತಿ ಹಿಂಸೆಯ ಸಂಕೇತ. ಆಧುನಿಕ ಮನುಷ್ಯ ಎಷ್ಟೊಂದು ಹಿಂಸಾಪರನಾಗಿದ್ದಾನೆಂದರೆ ಧರ್ಮ, ದೇಶದ ಹೆಸರಿನಲ್ಲಿ ರಕ್ತ ಹರಿಸುತ್ತಾನೆ. `ನೆತ್ತರಿನ ನೋವು ಒಂದೇ' ಎಂಬ ಅರಿವಿಲ್ಲದ ಸ್ಥಿತಿಗೆ ಮನುಷ್ಯ ಬಂದುಮುಟ್ಟಿದ್ದಾನೆ ಇದಕ್ಕೆ ಕೊನೆಯಿಲ್ಲವೆ? ಇದೆ. ಮನುಷ್ಯತ್ವವನ್ನು ಹೊದ್ದ ದಯೆ ಪ್ರೀತಿ ಮತ್ತು ಜೀವನ ಪ್ರೀತಿಯನ್ನು ಹೊತ್ತ ಸೈನಿಕರ ಪಡೆ ತಯಾರಾಗಬೇಕಿದೆ. 

ಬದುಕು ಬಯಸಲಾರದು ಅದು ನನ್ನಂತೆಯೇ ಯುದ್ಧ ನೆತ್ತರಿನೋಕುಳಿಯ/
ಪ್ರೀತಿಯಲ್ಲದೆ ಬೇರೇನನ್ನೂ ನೀಡಬೇಕಾಗಿಲ್ಲ ಅದಕಾಗಿ ನಾನು
ಬಯಸುವುದು ಅನ್ನ, ಆಹಾರ ನೀರು, ಪ್ರೀತಿ ಸ್ನೇಹ ತುಸುವಾದರೂ/
ಅಸ್ತ್ರ-ಶಸ್ತ್ರಗಳ ಶೇಖರಿಸಬೇಕಿಲ್ಲ ಅದಕಾಗಿ ನಾನು
ಎಂದು ಕವಿ ಹೇಳುತ್ತಾನೆ. ಮನುಷ್ಯ ಸದಾ ಯುದ್ಧ ಸನ್ನದ್ಧ. ಆದರೆ ಬದುಕಿಗೆ ಅದು ಬೇಡ. ಜಗತ್ತು ಹೇಗಿದೆ? 

ಕೆಡುಗಾಲವಿದು, ಉಣ್ಣುವ ಅನ್ನದಲಿ ವಿಷವಿರಬಾಸದೆಂದೇನೂ ಇಲ್ಲ/
ನಡೆ ನುಡಿಗಳಲಿ ಸುಳ್ಳು ನುಸುಳಬಾರದೆಂದೇನೂ ಇಲ್ಲ.
ಇಡಿ ಜಗತ್ತಿನಲಿ ಕತ್ತಲೆ ಕವಿದಿದೆ ಮನುಷ್ಯನ ಬದುಕು ನರಕಪ್ರಾಯವಾಗಿದೆ. ಆದರೆ ಕವಿಯ ಆಶಾವಾದ ವ್ಯಕ್ತವಾಗುವುದು ಹೀಗೆ: 

ಕಾದರೆ ಕತ್ತಲಿನಲ್ಲೇ ಬೆಳಕು ದೊರಕುವುದು `ಹೊಸ್ಮನೆ'
ಪರಿಮಳದ ಹೂವುಗಳು ಕೆಸರಿನಲಿ ಅರಳಬಾರದೆಂದೇನೂ ಇಲ್ಲ.

ಹೀಗೆ ಕವಿ ಕರಾಳ ಜಗತ್ತನ್ನು, ಮತ್ತು ಕ್ರೂರಿ ಮನುಷ್ಯನನ್ನು ಚಿತ್ರಿಸಿ ವಿಷಾದಿಸಿದ ಹಾಗೆ ಅಲ್ಲಲ್ಲಿ ಪ್ರೀತಿ ಪ್ರೇಮ ಸ್ನೇಹಗಳ ಅಸ್ತಿತ್ವಕ್ಕಾಗಿ ಹಂಬಲಿಸುತ್ತ ತಮ್ಮ ತಲ್ಲಣಗಳನ್ನು ವ್ಯಕ್ತಪಡಿಸುತ್ತಾರೆ. ಕವಿಯ ಪ್ರತ್ಯುಪ್ತನ್ನ ಮತಿಯು ಮನುಷ್ಯರ ಸಂಕಟ ಮತ್ತು ನೋವು, ದುಃಖ, ಮೋಸ ವಂಚನೆಗಳಿಗೆ ಸಂವಾದಿಯಾಗುವ ಬದುಕಿನ ಸಂಕೀರ್ಣ ಅನುಭವಗಳಿಗೆ ಅನುಭಾವಿಯ ಮುಖಾಮುಖಿಯಾಗುವುದು ಇಲ್ಲಿನ ಕವಿತೆಗಳ ವೈಶಿಷ್ಟ್ಯವಾಗಿದೆ. ತನ್ನ ಭಾವನೆಗಳು ತತ್ವಗಳನ್ನು ಅಭಿವ್ಯಕ್ತಿಸಲು ಪ್ರಕೃತಿಯ ಶಬ್ದರೂಪಕಗಳನ್ನು ಪೋಣಿಸುವ ಜಾಣ್ಮೆ ಕವಿಗೆ ಕರಗತವಾಗಿದೆ. ಇಬ್ಬನಿಯನ್ನು ಕಣ್ಣೀರಿಗೆ ಹೋಲಿಸುತ್ತಾರೆ, ಕಣ್ಣೀರು ಇಲ್ಲಿನ ಹಲವಾರು ಕವಿತೆಗಳಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗಿವೆ. ಕತ್ತಲೆಯನ್ನು ಬಯಸದ ಕವಿ ಕತ್ತಲೆಯನ್ನು ಸಹಿಸಲೇಬೇಕಾದ ಅನಿವಾರ್ಯ ಅಸಹಾಯಕತೆಗೆ ತಮ್ಮನ್ನು ಒಡ್ಡಿಕೊಳ್ಳುತ್ತ 

ನಿತ್ಯ ಇರುಳಿನಲಿ ಕಣ್ಣುಗಳ ಕಾಡದಿರು ಕತ್ತಲೆಯೇ/
ಹೊಳೆವ ಬೆಳಕಲಾದರೂ ನುಸುಳಿ ಬಾರದಿರು ಕತ್ತಲೆಯೇ
ಹಗಲುಗಳು ಬಿಸಿಲಿನಲಿ ಹೊತ್ತಿ ಉರಿಯುತಿವೆ/
ನಿಂತ ನೆರಳುಗಳನಳಿಸಿ ಹೋಗದಿರು ಕತ್ತಲೆಯೇ
ಕತ್ತಲೆ ವಿಷಾದದ ಪ್ರತೀಕವಾಗಿರಬಹುದೆ ಅಥವಾ ಚರ್ವಿತ ಅಜ್ಞಾನದ ಸಂಕೇತವಾಗಿರಬಹುದೆ ಅಥವಾ ಕತ್ತಲಿನಂಥಹ ಮನುಷ್ಯ ಪ್ರಾಣಿಯ ಕುರಿತಾಗಿ ಇರಬಹುದೆ. ಅಂತೂ ಜಗತ್ತಿನಲ್ಲಿ ಕತ್ತಲಂತೂ ಇದೆ. ಅದಿಲ್ಲದೆ ಬದುಕಿಲ್ಲ ಆದರೆ ಕವಿ ಬಯಸುತ್ತಾನೆ 

ಬೆಳಕ ಹಂಗನು ತೊರೆದು ರೆಪ್ಪೆಗಳ ಮುಚ್ಚಿರುವೆ/
ಮನದ ಬೆಳದಿಂಗಳಿಗೆ ಕವಿಯದಿರು ಕತ್ತಲೆಯೇ
ಬದುಕು ಹೇಗಿದೆ? `ಕೊನೆಯಿರದ ನೋವಿನಿಂದಲೇ ನರಳುತ್ತ ಸಾಗಿ ಬಂದಿದೆ ಬದುಕು/ ಆದರೆ ಕತ್ತಲೆಗೆ ಅಂದರೆ ಮನುಷ್ಯ ಸಂತೋಷವನ್ನು ಹಾಳುಮಾಡುವ ಕತ್ತಲೆಂಥಹ ಮನುಷ್ಯರಿಗೆ ಕವಿ ಹೇಳುತ್ತಾನೆ: `ನರಳಿ ಅರಳಿರುವ ಹೂಗಳ ಮೇಲೆ ಹರಿಯದಿರು ಕತ್ತಲೆಯೇ,' ಕೊನೆಯ ಸಾಲು ಕಾಮಾಂಧರಿಗೆ ಹೇಳಿದ ಮಾತುಗಳಿರಬಹುದೆ. ವಿಘ್ನಸಂತೋಷಿಗಳ ಸಂಕೇತವಾಗಿರಬಹುದೆ? ಕವಿತೆಗಳನ್ನು ಮನುಷ್ಯನ ಅಹಂಕಾರ, ಮುನಿಸು, ಆಕ್ರೋಷಗಳ ದ್ವೇಷಗಳ ಕುರಿತು ವಿಷಾದಿಸುತ್ತ ಒಂದು ಬುದ್ಧಿ ಮಾತನ್ನು ಕವಿ ಹೇಳುತ್ತಾನೆ. ಇದನ್ನು ಅನುಸರಿಸಿದರೆ ಈ ಪ್ರಪಂಚದಲ್ಲಿ ಸುಖವೆ ಸುಖ ಬೆಳದಿಂಗಳಿನಂತೆ `ನನದು-ನಿನದೆಂಬ ಗುಣಭೇದಗಳ ಹುಡುಕಿ ನುಡಿಯುವುದೇಕೆ?/ ಇರುವುದೆಲ್ಲವೂ ನಮ್ಮದೇ ಭಾವಗಳೆಂದು ತಿಳಿಯೋಣ ಜೊತೆಯಾಗಿ.' ಇದು ಕವಿಯ ಕನಸು. `ಕಳೆದು ಹೋದರೂ ದ್ವೇಷ-ಹಗೆಯಲಿ ಉರಿದು/ಸಾವ ದುಃಖದಲ್ಲಾದರೂ ಒಂದಾಗಬೇಕಲ್ಲ!' `ಎದೆಯ ಒಲವಿನಲ್ಲಾದರೂ ಒಂದಾಗಬೇಕಲ್ಲ.' ಹಾಗಾಗುತ್ತಿದ್ದಾರೆಯೆ ಮನುಷ್ಯರು ಎಂಬುದೆ ಕವಿಯ ಯಕ್ಷಪ್ರಶ್ನೆಯಾಗಿದೆ. `ಒಂದು ಹನಿಗಾಗಿ ಜೀವ ಪರಿತಪಿಸುತಿದೆ`ಹೊಸ್ಮನೆ'/ಪ್ರೀತಿ ಬೇಕಿದೆ ಎಂದು ಜಗವ ದ್ವೇಷಿಸುವುದು ಹೇಗೆ?!' ಇಲ್ಲಿ ಪ್ರೀತಿ-ದ್ವೇಷಗಳ ದ್ವಂದ್ವ ಕವಿನ್ನು ಕಾಡುತ್ತಿದೆ, ಮತ್ತು ಇಂದಿನ ಆಧುನಿಕರನು ಕಾಡಿದೆ. `ನೋವು-ನಿಟ್ಟುಸಿರು ಎದೆಯ ಸುಡುತಿದೆ ಈಗ/ದಾಹವಾಗಿದೆ ಎಂದು ನೆತ್ತರನು ಕುಡಿವುದು ಹೇಗೆ?' ಮನುಷ್ಯನು ಈ ಪಾಠವನು ಕಲಿಯುವುದು ಯಾವಾಗ?' ಇಲ್ಲಿ ವ್ಯಕ್ತಿ-ಸಮಷ್ಟಿಗಳ ನಡುವೆ ರುದ್ರಬಿರುಕು ಎಷ್ಟು ಅತ್ಯಂತಿಕವಾಗಿದೆಯೆಂದರೆ ಕವಿಗೆ ಅಸಹಾಯಕ ನಿಟ್ಟುಸಿರು ಬಿಟ್ಟರೆ ಅನ್ಯ ಮಾರ್ಗವಿಲ್ಲವಾಗಿದೆ. ಇಲ್ಲಿ ವಾಸ್ತವತೆ ಮತ್ತು ಆದರ್ಶವಾದ ಪರಸ್ಪರ ಮುಖಾಮುಖಿಯಾಗಿ ಕವಿಯ ನಿಟ್ಟುಸಿರಾಗಿ ಹೊರಹೊಮ್ಮಿದೆ. ತಾತ್ವಿಕತೆ ಮತ್ತು ಕಾವ್ಯದ ಲಾವಣ್ಯ ಸಾಮರಸ್ಯವಾಗಿ ಮೂಡಿಬಂದಿದೆ. ``ಸಾಹಿತ್ಯದಲ್ಲಿ ಅರ್ಥ ಮಿಂಚಂತೆ ಗುಡುಗು, ಸಿಡಿಲು, ಮಳೆಗಳೊಡನೆ ಸಹಜವಾಗಿ ಅವತರಿಸಬೇಕು. ಸರಳವಾಗಿ ಸಿಗುವ ಅರ್ಥ ಅರ್ಥವಲ್ಲ. ಹಾಗೆಯೇ ತೀರಾ ತಾತ್ವಿಕನಾದವನ ಸಾಹಿತ್ಯ ಸಾಹಿತ್ಯವಲ್ಲ. ಅದು ತತ್ವದ ರಗಳೆ.

``ಈ ಹಿನ್ನೆಲೆಯಲ್ಲಿ ಸಾಹಿತ್ಯದ ಅಗತ್ಯತೆ ಎಂದರೆ ಎಲ್ಲ ತಿಳಿದಿದ್ದೂ `ಮೂಲ ಮುಗ್ಧತೆಯನ್ನು' ಉಳಿಸಿಕೊಳ್ಳಬೇಕಾದದ್ದು. ತತ್ವದ ಸಂಪರ್ಕ ಇರದಿದ್ದರೆ ಸಾಹಿತ್ಯ ಲಘುವಾಗುತ್ತದೆ. ಹಾಗೆಯೇ ತತ್ವದ ಘನತೆ ಸಾಹಿತ್ಯದ ಜೈವಿಕ ಲಘುತ್ವವನ್ನು ನಾಶಮಾಡಬಲ್ಲದು.ಸಾಹಿತ್ಯಕ್ಕೆ ಲಘುತ್ವವಿಲ್ಲದಿದ್ದರೆ ಲಾವಣ್ಯವೇ ಇಲ್ಲ. ತತ್ವವಿರದಿದ್ದರೆ ಘನತೆಯೇ ಇಲ್ಲ. ದರ್ಶನದ ಪರಿಭಾಷೆಯಲ್ಲಿ ಹೇಳುವುದಿದ್ದರೆ ಸಾಹಿತ್ಯದಲ್ಲಿ ವ್ಯಾವಹಾರಿಕ ಸಖ್ಯವೂ ಮುಖ್ಯ, ಪಾರಮಾರ್ಥಿಕ ಸತ್ಯವೂ ಮುಖ್ಯ.' (ಡಿ ಆರ್ ನಾಗರಾಜ್-ಜೈನ ಕಥಾ ಸ್ವರೂಪ ) ಭಾರತೀಯ ಸಂಸ್ಕøತಿಯ ಈ ಸನ್ನಿವೇಶದಲ್ಲಿ ಈ ವೈರುಧ್ಯಕರ ಸತ್ಯವನ್ನು ತೀವ್ರವಾಗಿ ಗ್ರಹಿಸಿದ ಕವಿ ಎಂದರೆ ಗಣೇಶ ಹೊಸ್ಮನೆ. ಈ ಸಾಲುಗಳು ನಾನು ಹೇಳಿದ್ದಕ್ಕೆ ಪುರಾವೆಯಾಗಿವೆ: 

ನಗುವು ಸುಂದರವೆಂದು ಅಳದೇ ಇರುವುದು ಹೇಗೆ?/
ನಗುತ ಬದುಕಲಾಗದು ಎಂದು ಸಾವು ಕರೆವುದು ಹೇಗೆ?
ಕವಿಯ ಆಶಯ ಈ ಸಾಲಿನಲ್ಲಿದೆ: ಹಗಲಿರುಳೂ ದೇವರನು ಪ್ರಾರ್ಥಿಸಿದರೇನು?/ ಮನುಷ್ಯರನ್ನು ಪ್ರೀತಿಸದೇ ಇಹದ ಪಾಪ ಕಳೆಯುವುದಿಲ್ಲ.'' ಕತ್ತಲು-ಬೆಳಕು, ದುಃಖ-ಸುಖ, ನೋವು-ನಲಿವು ಪ್ರೀತಿ-ದ್ವೇಷ, ಬದುಕು-ಸಾವು ನೆತ್ತರು-ನೀರು ಸೌಂದರ್ಯ-ಕುರೂಪತೆ ಕಣ್ಣೀರು-ಮುಸಿನಗೆ, ಹೂವು-ಮುಳ್ಳು, ಸಿಹಿ-ಕಹಿ ಇವೆಲ್ಲ ವೈದೃಶ್ಯಗಳ ಬದುಕನ್ನು ಕಟ್ಟಿಕೊಡುವ ಕವಿ ಬದುಕಿನ ಎಲ್ಲ ನೋವನ್ನು ನಿವಾರಿಸುವ ಬುದ್ಧನಂತೆ ದುಃಖದ ಸ್ವರೂಪವನ್ನೂ, ದುಖದ ಕಾರಣವನ್ನೂ ಮತ್ತು ದುಃಖದ ಅಂತ್ಯವನ್ನೂ ಹೇಳಿಬಿಡುತ್ತಾನೆ. ಆದರೆ ಬುದ್ಧನಂತೆ ಬದುಕಿಗೆ ಅಂಟಿಕೊಳ್ಳದಿರುವುದನ್ನು ಕವಿ ಬೋಧಿಸುವುದಿಲ್ಲ. ಇಲ್ಲಿನ ಕವಿತೆಯ ಸಾಲುಗಳಲ್ಲಿ ಕುಷ್ಟ ರೋಗಿಯು ಮೈಯೆಲ್ಲ ಕೊಳೆತು ಹೋಗುತ್ತಿದ್ದರೂ ಬದುಕಿನ ಪ್ರೀತಿ ಉಳಿಸಿಕೊಂಡ ಹಾಗೆ, ಬದುಕು ಬೊದಿಲೇರನ ನರಕ ಪ್ರಪಂಚವಾದರೂ ಜೀವನೋನ್ಮುಖಿ ಉಲ್ಲಾಸ, ಪ್ರೀತಿ ಮೇಫ್ಲವರ್ ಗಿಡದಂತೆ ಮೈತುಂಬ ಕೆಂಪು ಹೂಗಳನ್ನು ಅರಳಿಸುತ್ತವೆ. ಮಹಾಭಾರತ ಕಾವ್ಯದಲ್ಲಿ ಬದುಕಿನ ಪ್ರೀತಿಯ ತೀವ್ರತೆಯ ಬಗ್ಗೆ ಒಂದು ರೂಪಕ ಹೀಗಿದೆ: `ಒಬ್ಬ ಗಾಢಾಂಧಕರದ ಕೂಪಕ್ಕೆ ಬೀಳುತ್ತಾನೆ. ಅಲ್ಲಿರುವ ಬೇರಿನೆಡೆಯಲ್ಲಿ ಸಿಕ್ಕಿಬೀಳುತ್ತಾನೆ. ಮೇಲೆ ಹುಲಿಯೊಂದು ಅವನು ಹೊರಬರುವುದನ್ನೆ ದಡದಲ್ಲಿ ಕಾದುಕುಳಿತಿದೆ. ಕೆಳಗೆ ಕಾರ್ಕೋಟಕ ವಿಷಸರ್ಪವೊಂದು ಕಚ್ಚಲು ಹೊಂಚು ಹಾಕುತ್ತಿದೆ. ಬಿಳಿಲಿನ ನಡುವೆ ಜೇನು ಹಾಳೆಯಿಂದ ಜೇನು ಸುರಿಯುತ್ತಿದೆ. ಆ ಜೇನು ತೊಟ್ಟಿಕ್ಕಿದಾಗ ಈ ಮನುಷ್ಯ ನಾಲಿಗೆ ಚಾಚಿ ಬಾಯಿ ಚಪ್ಪರಿಸುತ್ತಿದ್ದಾನೆ.' ಅಂಥಹ ಜೀವನಪ್ರೀತಿಯನ್ನು ನಾವು ಈ ಕವಿತೆಗಳಲ್ಲಿ ಕಾಣುತ್ತಿದ್ದೇನೆ. 

ಉಪನಿಷತ್ ಸಾಹಿತ್ಯದಲ್ಲಿ ಕಂಡುಬರುವ ಒಳನೋಟಗಳಲ್ಲಿ ಮುಖ್ಯವಾದುದು ಒಂದು ಇದು.
`ಇಹಚೇತ್ ಅವೇದಿತ್ ಅಥ ಸತ್ಯಮಸ್ತಿ. ನೋಚೇತ್ ಮಹತಿ ವಿನಷ್ಟಿ:' ಎಂಬ ಮಾತು.
ಇದೊಂದು ಬೀಜವಾಕ್ಯ. ಈ ಮಾತಿನ ತಾತ್ಪರ್ಯ ಹೀಗೆ ಕಾಣಿಸಬಹುದು `ಇಲ್ಲಿ, ಈ ಬದುಕಿನಲ್ಲಿ, ಇಹದ ಈ ಸಂದರ್ಭದಲ್ಲಿ ನಿಜವಾದ ಅರಿವನ್ನು ಪಡೆಯುವುದು ಸಾಧ್ಯ. ಹಾಗೆ ಅರಿವನ್ನು ಪಡೆದರೆ ಅದಕ್ಕಿಂತ ದೊಡ್ಡ ಲಾಭ ಇನ್ನಾವುದೂ ಇಲ್ಲ. ಇನ್ನಾವುದೂ ಇಲ್ಲ. ಆದರೆ, ಇಲ್ಲಿ ಅರಿವು ಪಡೆಯಲಾಗದಿದ್ದರೆ ಅದಕ್ಕಿಂತ ದೊಡ್ಡ ನಷ್ಟವೂ ಇನ್ನಾವುದೂ ಇಲ್ಲ.. ಅಂದರೆ ಬದುಕು ಇರುವುದು ಅರಿವು ಪಡೆಯುವುದಕ್ಕಾಗಿಯೇ ಎನ್ನಬಹುದು.' ಈ ಮಾತು ಹೊಸ್ಮನೆಯವರ ಕವಿತೆಗೆ ಹಿಡಿದ ಕನ್ನಡಿ ಎಂದು ನನ್ನ ಭಾವನೆಯಾಗಿದೆ. `ಈ ಪ್ರಪಂಚದಲ್ಲಿ ಹೂವು-ಮುಳ್ಳು, ಸಿಹಿ-ಕಹಿ, ಕತ್ತಲೆ-ಬೆಳಕು ಎಲ್ಲವೂಇದೆ. ಇದು ದ್ವಂದಮಯ ಪ್ರಪಂಚ. ಇದರಲ್ಲಿ ನಮಗೆ ಒಂದು ಬೇಕಾಗುತ್ತದೆ, ಮತ್ತೊಂದು ಬೇಡವಾಗುತ್ತದೆ. ಬೇಕು-ಬೇಡ ಎಂಬೆರಡೂ ಬಂಧನಕಾರಿಯೆ. ಇವೆರಡನ್ನೂ ಮೀರಿದವನು ಯತಿ.' ಬಹುಶಃ ಈ ಕವಿ ಆ ಯತಿ ಸ್ಥಾನದ ಮೆಟ್ಟಿಲುಗಳನ್ನು ಏರುತ್ತಿದ್ದಾನೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ನಮ್ಮಲ್ಲಿನ ಇಂಥಹ ಉತ್ತಮ ಕವಿಗೆ ಮತ್ತು ಇಂಥಹ ಉತ್ತಮ ಕವಿತೆಗಳನ್ನು ಶಬ್ದರೂಪಕಗಳನ್ನು ಕಟ್ಟಿಕೊಡಲು ಅವಕಾಶ ನೀಡಿದ ಕನ್ನಡಕ್ಕೆ ನಮೋನಮೋ. ವಿದೇಶಿಯ ನೆಲದಲ್ಲಿ ಹುಟ್ಟಿದ ಗಜಲ್ ಗಣೇಶ ಹೊಸ್ಮನೆಯ ಶಬ್ದನಿರ್ಮಿತಿಯಲ್ಲಿ ದೇಸೀ ಕಾವ್ಯವಾಗಿ ನಮ್ಮೆಲ್ಲರನ್ನೂ ಎಲ್ಲ ಕಾವ್ಯಾಸಕ್ತರನ್ನೂ ಆವರಿಸುವುದು ಖಂಡಿತ.
**

ಉದಯಕುಮಾರ ಹಬ್ಬು  ಕಿನ್ನಿಗೊಲಿಯಲ್ಲಿ ನೆಲೆಸಿರುವ ಉದಯಕುಮಾರ ಹಬ್ಬು ಕವಿ, ಕತೆಗಾರ, ಕಾದಂಬರಿಕಾರ ಮತ್ತು ಸಂಶೋಧಕರು. ನಾಥ ಪಂಥ ಮತ್ತು ಯೋಗ ತಂತ್ರಗಳ ಕುರಿತು ಪುಸ್ತಕ ಪ್ರಕಟಿಸಿರುವ ಇವರು ಕಾರ್ಕಳದ ವಿ ವಿ ಪಿ ಯು ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕತೆ ಮತ್ತು ವಿಮರ್ಶೆಗಾಗಿ ಪ್ರಶಸ್ತಿ ಪಡೆದಿರುವ ಹಬ್ಬುರವರ “ದ್ರೋಣ” ಎಂಬ ಗಮನಾರ್ಹ ಕಾದಂಬರಿ ಆಂಗ್ಲ ಭಾಷೆಗೂ ಅನುವಾದವಾಗಿದೆ. ಈವರೆಗೆ ನಾಲ್ಕು ಕಥಾಸಂಕಲನ ಮತ್ತು ಐದು ವಿಮರ್ಶಾ ಸಂಕಲನ ಪ್ರಕಟಿಸಿದ್ದಾರೆ. ಬೌಧ್ದ ಧರ್ಮ ಮತ್ತು ವಿಪಾಸನದ ಕುರಿತಾದ ಅವರ ಪುಸ್ತಕ ಇತ್ತೀಚೆ ಪ್ರಕಟವಾಗಿದೆ.

ಗಣೇಶ ಹೊಸ್ಮನೆ  ಕವಿ ಗಣೇಶ ಹೊಸ್ಮನೆ ಶಿರಸಿಯ ಬಳಿ ವ್ಯವಸಾಯ ಮಾಡಿಕೊಂಡಿದ್ದಾರೆ. ಲಡಾಯಿ ಪ್ರಕಾಶನದಿಂದ ಹೊರಬಂದಿರುವ ಗಜಲುಗಳ ಸಂಕಲನ ಇವರ ಎರಡನೆಯ ಕೃತಿಯಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...