Tuesday, December 01, 2015

ಬಂಗಾಳದ ಅಕ್ಷರದೀಪ: ಬೇಗಂ ರುಖಿಯಾ ಶೆಖಾವತ್ ಹುಸೇನ್


ಡಾ. ಎಚ್. ಎಸ್. ಅನುಪಮಾಧರ್ಮಗುರುವೊಬ್ಬರು ಹೆಣ್ಣು ಹೆರಲಿಕ್ಕಷ್ಟೆ ಲಾಯಕ್ಕು, ಲೋಕವ್ಯಾಪಾರಗಳ ಗಂಡೇ ನೋಡಿಕೊಳ್ಳಬೇಕು ಎಂದು ಹೇಳಿರುವುದರ ಬೆನ್ನಿಗೆ ಮಹಾರಾಷ್ಟ್ರದ ಶನಿ ಸಿಂಗ್ನಾಪುರದ ದೇವಸ್ಥಾನ ಎಂಬ ಮಹಿಳಾ ನಿಷೇಧಿತ ದೇವಳಕ್ಕೆ ಹೆಣ್ಣು ಹೋದಳೆಂದು ಶುದ್ಧತಾ ಕಾರ್ಯ ನಡೆದಿದೆ. ಮಾನವ ಹಕ್ಕು, ಲಿಂಗ ಸಮಾನತೆಯ ಪ್ರತಿಪಾದನೆಗಳು ಹೆಚ್ಚೆಚ್ಚು ಆಗುತ್ತ ಹೋದಹಾಗೆ ಜೀವವಿರೋಧಿ, ಮಹಿಳಾ ವಿರೋಧಿ ಘಟನೆಗಳೂ ಸಾಕಷ್ಟು ಜರುಗುತ್ತಿವೆ.

ಹೀಗಿರುತ್ತ ಮಹಿಳಾ ಚಳುವಳಿ ಜಗತ್ತಿನ ಅತ್ಯಂತ ದೀರ್ಘ ವಿಮೋಚನಾ ಹೋರಾಟವಾಗಲಿರುವ ಬಗೆಗೆ ಯಾವುದೇ ಅನುಮಾನವಿಲ್ಲ. ದಿನನಿತ್ಯ ಬಂದೆರಗುವ ಒಳಸಂಕಟಗಳ ವರದಿಗಳು ಹುಟ್ಟಿಸುವ ಹತಾಶೆಯ ನಡುವೆಯೆ ಮಹಿಳಾ ಹೋರಾಟದ ಅಂತಿಮ ಬಿಂದು ಯಾವುದು ಎಂಬ ಪ್ರಶ್ನೆಯೂ ತೇಲಿಬರುತ್ತಿದೆ. ಹೆಣ್ಮಕ್ಕಳ ಕನಸಿನ ಆದರ್ಶ ಸಮಾಜ ಹೇಗಿರಬೇಕು? ಕೊನೆಗೂ ಹೆಣ್ಣಿಗೆ ಬೇಕಿರುವುದಾದರೂ ಏನು? ಹೆಣ್ಣಿನ ಜೈವಿಕ ಹಾಗೂ ಸಾಮಾಜಿಕ ಪಾತ್ರಗಳ ನಿಭಾವಣೆಗೆ ಸಹಕರಿಸುವಲ್ಲಿ ಗಂಡಸಿನ ಪಾತ್ರವೇನು? ಲಿಂಗಾಧಾರಿತ ಪಾತ್ರಗಳ ತಿರುವುಮುರುವು ಮಹಿಳಾ ಹೋರಾಟದ ತುದಿಯಿರಬಹುದೆ? ಎಂಬಿತ್ಯಾದಿ ಚರ್ಚೆಯೂ ನಡೆಯುತ್ತಿದೆ.

ಇದರ ನಡುವೆ ೧೦೭ ವರ್ಷ ಕೆಳಗೆ ನಮ್ಮ ಪೂರ್ವಮಾತೆಯೊಬ್ಬರು ಬರೆದ ಬರಹವನ್ನು ಇತ್ತೀಚೆಗೆ ಓದಿದೆ. ಒಂದು ಜಾಗೃತ ಸ್ತ್ರೀ ಮನಸು ಬರೆದ ಆ ಬರಹ ಸ್ತ್ರೀವಾದದ ನಾಳೆಯ ಕನಸು ಇರಬಹುದೆ ಎಂಬ ಚರ್ಚೆ ಹುಟ್ಟುಹಾಕಿದೆ. ಅದು ೧೯೦೮ರಲ್ಲಿ ಬರೆಯಲ್ಪಟ್ಟ ‘ಸುಲ್ತಾನಾಳ ಕನಸು’ ಎಂಬ ಕಥೆ ಅಥವಾ ಲಘು ಪ್ರಬಂಧ. ಅದರಲ್ಲಿ ಸುಲ್ತಾನಾ ಎಂಬ ಹೆಣ್ಣುಮಗಳು ತನ್ನ ಕನಸಿನಲ್ಲಿ ಮಹಿಳಾ ರಾಜ್ಯಕ್ಕೆ (ಲೇಡಿ ಲ್ಯಾಂಡ್) ಹೋಗಿಬರುತ್ತಾಳೆ. ಆ ರಾಜ್ಯದಲ್ಲಿದ್ದ ತನ್ನ ಬಾಲ್ಯ ಸ್ನೇಹಿತೆಯೊಂದಿಗೆ ಮಾತಾಡುತ್ತ, ತಿರುಗಾಡುತ್ತ ಕಂಡ ಅಚ್ಚರಿಗಳು ಅವರ ಸಂಭಾಷಣೆಯಲ್ಲಿ ಬಿಚ್ಚಿಕೊಳ್ಳುತ್ತವೆ. ವೈಜ್ಞಾನಿಕ ಜ್ಞಾನ ಹೊಂದಿ ಸಂಪೂರ್ಣ ನಿರ್ಭಯರಾಗಿ ಬದುಕುವ ಹೆಣ್ಣುಮಕ್ಕಳ ಆ ರಾಜ್ಯ ಕನಸಿನ ರಾಜ್ಯವೇ ಸರಿ ಎಂದು ಸುಲ್ತಾನಾಳಿಗೆ ಅನಿಸುವ ಹೊತ್ತಿಗೆ ಎಚ್ಚರವಾಗುತ್ತದೆ!

ಸಂಕ್ಷಿಪ್ತವಾಗಿ ಆ ಕತೆ ಹೀಗಿದೆ:

ಸುಲ್ತಾನಾ ರಾತ್ರಿಯ ಕನಸಿನಲ್ಲಿ ಬಾಲ್ಯದ ಗೆಳತಿ ಸಾರಾ ಜೊತೆಗೆ ಒಂದು ರಾಜ್ಯಕ್ಕೆ ಹೋದಳು. ಅಲ್ಲಿ ಗಂಡಸರು ರಸ್ತೆ ಮೇಲೆಲ್ಲೂ ಕಾಣದೇ ಹೋದಾಗ ಗೆಳತಿಯು ಗಂಡಸರು ಅಡಿಗೆ, ಮನೆಗೆಲಸ, ಮಕ್ಕಳ ಕಾಳಜಿ ನೋಡಿಕೊಳ್ಳುತ್ತಿದ್ದಾರೆಂದೂ, ಅದು ಮಹಿಳಾ ರಾಜ್ಯ ಎಂದೂ ತಿಳಿಸುತ್ತಾಳೆ. ಅದು ಹೇಗೆ ಈ ಪರಿಸ್ಥಿತಿ ಸಾಧ್ಯವಾಯಿತು ಎಂದು ಅಚ್ಚರಿಗೊಂಡ ಸುಲ್ತಾನಾ ಕೇಳಿದಾಗ ಸಾರಾ ತಮ್ಮ ರಾಜ್ಯದ ಪೂರ್ವೇತಿಹಾಸ ಬಿಚ್ಚಿಡುತ್ತಾಳೆ: ಅವರದು ರಾಣಿ ಆಳುತ್ತಿದ್ದ ರಾಜ್ಯ. ಮಹಿಳಾ ಶಿಕ್ಷಣಕ್ಕೆ ಅಲ್ಲಿ ಬಹು ಪ್ರಾಮುಖ್ಯತೆ. ಅವರ ರಾಜ್ಯದಲ್ಲಿ ಎರಡು ಮಹಿಳಾ ವಿಶ್ವವಿದ್ಯಾಲಯಗಳಿದ್ದು ಅತ್ಯಾಧುನಿಕ ವಿಜ್ಞಾನ ಪರಿಕರಗಳನ್ನು ಸಂಶೋಧನೆ ಮೂಲಕ ಅಭಿವೃದ್ಧಿಗೊಳಿಸಿರುತ್ತವೆ. ಅದರಲ್ಲಿ ಒಂದು ಸೂರ್ಯನ ಶಾಖ ಹೀರಿ ಶಕ್ತಿಯಾಗಿ ಸಂಗ್ರಹಿಸಿಟ್ಟು ಅಡಿಗೆ, ವಾಹನ ಚಾಲನೆ, ಯಂತ್ರೋಪಕರಣ ಚಾಲನೆ ಮತ್ತಿತರ ಕೆಲಸಗಳಿಗೆ ಬೇಕಾದಾಗ ಬೇಕಾದಷ್ಟು ಬಳಸುವಂತಹದು. ಮತ್ತೊಂದು, ಮೋಡದಲ್ಲಿನ ಮಳೆನೀರನ್ನು ಮೊದಲೇ ಹೀರಿ ಸಂಗ್ರಹಿಸುವುದು. ಈ ಎರಡೂ ಸಂಶೋಧನೆಗಳು ನೆರೆ-ಬರವನ್ನು ತಡೆಗಟ್ಟಬಲ್ಲವಾಗಿದ್ದರೂ ಗಂಡಸರಿಂದ ‘ಅತಿಭಾವುಕ ಕನಸು’ ಎಂಬ ಹೀಯಾಳಿಕೆಗೆ ಒಳಗಾಗಿರುತ್ತವೆ. ಒಮ್ಮೆ ನೆರೆರಾಜ್ಯದ ದಾಳಿಗೆ ಈ ರಾಜ್ಯದ ಸೇನೆ ಹತಗೊಂಡು ಗಾಯಗೊಳ್ಳುತ್ತದೆ. ಇನ್ನೇನು ರಾಜ್ಯವು ಶತ್ರುಗಳ ಕೈಸೇರಬೇಕು, ಆಗ ರಾಣಿ ಯುದ್ಧ ಗೆಲ್ಲುವ ಮೊದಲ ಅವಕಾಶ ಮತ್ತು ಕೊನೆಯ ಪ್ರಯತ್ನವನ್ನು ಹೆಂಗಸರಿಗೆ ವಹಿಸಿ ಕೊಡುವ ನಿರ್ಧಾರಕ್ಕೆ ಬರುತ್ತಾಳೆ. ಆ ವೇಳೆಗಾಗಲೇ ಗಾಯಗೊಂಡು ದಣಿದಿದ್ದ ಗಂಡಸರು ಅಡುಗೆ, ಮನೆಗೆಲಸ, ಮಕ್ಕಳ ನೋಡಿಕೊಳ್ಳುವುದಾಗಿ ಮಾತುಕೊಟ್ಟು ತಾವು ‘ಮರ್ದಾನಾ’ದಲ್ಲಿದ್ದು ರಣರಂಗಕ್ಕೆ ಮಹಿಳೆಯರನ್ನು ಕಳಿಸುತ್ತಾರೆ. ಎರಡು ಸಾವಿರ ವಿದ್ಯಾರ್ಥಿನಿಯರೊಂದಿಗೆ ಯುದ್ಧ ರಂಗಕ್ಕೆ ತೆರಳಿದ ಮಹಿಳಾ ವಿಶ್ವವಿದ್ಯಾಲಯದ ಮುಖ್ಯಸ್ಥೆ ತಾವು ಸಂಗ್ರಹಿಸಿಕೊಂಡ ಸೂರ್ಯ ಶಕ್ತಿಯ ಬೆಳಕು, ಶಾಖವನ್ನು ಶತ್ರುಗಳ ಮೇಲೆ ಹರಿಸಿ ರಕ್ತಪಾತವಿಲ್ಲದೆ ಅವರನ್ನು ಹಿಮ್ಮೆಟ್ಟಿಸುತ್ತಾರೆ. ಇವರ ಹೊಸ ತೆರನ ಅಸ್ತ್ರಕ್ಕೆ ಹೆದರಿ ನಂತರ ಯಾವ ಶತ್ರುವೂ ಅವರ ಮೇಲೆ ಯುದ್ಧಕ್ಕೆ ಬರುವುದಿಲ್ಲ!

ಹೀಗೆ ಸುಲಭದಲ್ಲಿ ಯುದ್ಧ ಗೆದ್ದು ‘ಶಕ್ತಿ’ವಂತೆಯರಾದ ಹೆಂಗಸರು ಎಲ್ಲ ಕಚೇರಿ, ಶಾಲಾ ಕಾಲೇಜು, ಕೃಷಿ, ಕೂಲಿ ಕೆಲಸಗಳನ್ನು ಮಾಡುತ್ತ ಸಾರ್ವಜನಿಕ ಬದುಕಿಗಿಳಿಯುತ್ತಾರೆ. ಮರ್ದಾನಾ ಸೇರಿದ ಗಂಡಸರು ಒಂದಷ್ಟು ಕಾಲ ಗೊಣಗುಟ್ಟಿದರೂ ಕ್ರಮೇಣ ಅದಕ್ಕೆ ಹೊಂದಿಕೊಂಡುಬಿಡುತ್ತಾರೆ. ಆ ರಾಜ್ಯದ ಚಿತ್ರಣವೇ ಬದಲಾಗುತ್ತದೆ. ಅಲ್ಲೀಗ ಸೊಳ್ಳೆಯಿಲ್ಲ, ರೋಗವಿಲ್ಲ. ಅಡಿಗೆಮನೆಯಲ್ಲಿ ಕಣ್ಣೀರು ಸುರಿಯಲು ಕಾರಣವಾದ ಹೊಗೆಯಿಲ್ಲ, ಕರಿಮಸಿಯಿಲ್ಲ. ಕಾರಣ ಹಣ್ಣು ಅವರ ಮುಖ್ಯ ಆಹಾರ. ಸೂರ್ಯನ ಶಾಖದಿಂದ ಅಡಿಗೆಯನ್ನೂ ಸುಲಭ, ಸರಳಗೊಳಿಸಲಾಗಿರುತ್ತದೆ. ಗಂಡಸರು ಏಳು ತಾಸು ಕೆಲಸ ಮಾಡಿದರೂ ಮುಗಿಯದಿದ್ದ ಕಚೇರಿ ಕೆಲಸ ಹೆಂಗಸರ ಎರಡೇ ತಾಸಿನ ಕೆಲಸಕ್ಕೆ ಮುಗಿಯುತ್ತಿರುತ್ತದೆ. ಸೂರ್ಯಶಕ್ತಿ ಮತ್ತು ಹೈಡ್ರೋಜನ್ ಬಲೂನಿನ ಸಹಾಯದಿಂದ ನೆಲದಿಂದ ಎಂಟ್ಹತ್ತು ಅಡಿ ಮೇಲೆ ಅವರ ಓಡಾಟ. ಅವರಿಗೆ ರಸ್ತೆ, ರೈಲುಹಳಿಗಳಲ್ಲಿ ಚಲಿಸುವ ಅವಶ್ಯಕತೆಯೇ ಇಲ್ಲವಾದ್ದರಿಂದ ಅಪಘಾತವೇ ಇಲ್ಲ. ಅಪರಾಧ ಮಾಡುವವರು ಹಾಗೂ ಅಪರಾಧ ತಡೆಯದೆ ಸುಮ್ಮನಿರುವವರು ಮರ್ದಾನಾದಲ್ಲಿ ಒಳಗಿರುವುದರಿಂದ ಅಪರಾಧವಿಲ್ಲ. ಪೊಲೀಸ್ ಸ್ಟೇಷನ್ನೂ ಇಲ್ಲ, ನ್ಯಾಯಾಲಯವೂ ಬೇಕಿಲ್ಲ. ಅಕಸ್ಮಾತ್ ಒಮ್ಮೆ ತಪ್ಪೆಸಗಿದರೆ ಎಚ್ಚರಿಸಿ ಕ್ಷಮಿಸಲಾಗುತ್ತದೆ, ಮತ್ತೆಮತ್ತೆ ತಪ್ಪು ಮಾಡಿದರೆ ಗಡೀಪಾರು ಮಾಡಲಾಗುತ್ತದೆ. ದೇವರ ಸೃಷ್ಟಿಯನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲವೆಂದು ನಂಬಿರುವುದರಿಂದ ಮರಣದಂಡನೆ ಶಿಕ್ಷೆ ಅಲ್ಲಿ ಇಲ್ಲವೆ ಇಲ್ಲ. ಯಾವ ಅತಿಗಳೂ ಇರದ, ನೋವಿರದ, ಸಂಕಟವಿರದ ಕನಸಿನ ರಾಜ್ಯ ಆ ಮಹಿಳಾ ರಾಜ್ಯ.

ಅಂದಹಾಗೆ ಆ ರಾಜ್ಯದ ರಾಜಧರ್ಮ ಸತ್ಯ ಮತ್ತು ಪ್ರೀತಿ!

ಆಹಾ ಕಲ್ಪನೆಯೇ! ಈ ಕನಸ ರಾಜ್ಯಕ್ಕೆ ಹೋಗಿಬಂದೆನೆಂದು ಬರೆದಾಕೆ ಯಾರು ಗೊತ್ತೆ? ಬಾಂಗ್ಲಾದೇಶದ ಸ್ತ್ರೀವಾದಿ, ಲೇಖಕಿ, ಶಿಕ್ಷಣತಜ್ಞೆ ಬೇಗಂ ರುಖಿಯಾ ಶೆಖಾವತ್ ಹುಸೇನ್.

***

ಬಾಂಗ್ಲಾದೇಶ ಎಂದ ಕೂಡಲೇ ನಮಗೆ ಅಲ್ಲಿನ ನಿರಾಶ್ರಿತರು ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ ಅರೆಹೊಟ್ಟೆ, ಅರೆಸೂರು ಹೊಂದಿ ಅರ್ಧಜೀವನ ನಡೆಸುತ್ತಿರುವ ಕಷ್ಟ ಕಣ್ಣೆದುರು ಕಟ್ಟುತ್ತದೆ. ಅತ್ಯಂತ ಫಲವತ್ತಾದ ನದಿಬಯಲು ಹೊಂದಿಯೂ ಅಸಂಖ್ಯ ನಿರಾಶ್ರಿತರನ್ನು ಹೊರಕಳಿಸುತ್ತಲೇ ಇರುವ ಆ ದೇಶದ ಬಡತನವಾದರೂ ಎಂಥದು ಎಂದು ಆಶ್ಚರ್ಯವಾಗುತ್ತದೆ. ಕಳೆದ ಎರಡು ದಶಕಗಳಿಂದ ಇಬ್ಬರು ಹೆಣ್ಣುಮಕ್ಕಳು ಒಬ್ಬರಾದ ಮೇಲೊಬ್ಬರು ಬಾಂಗ್ಲಾದೇಶವನ್ನಾಳುತ್ತಿದ್ದಾರೆ. ಈಗ ಪ್ರಧಾನಿಯಾಗಿರುವ ಶೇಕ್ ಹಸೀನಾ ನಾಲ್ಕು ದಶಕಗಳಿಂದ ಬಾಂಗ್ಲಾ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಆದರೇನು? ಇಬ್ಬರು ಹೆಣ್ಣುಮಕ್ಕಳು ಆಳುವವರೆಂದು ಹೆಣ್ಣಿನ ದನಿ ಗಟ್ಟಿಯಾಗಿದೆಯೆ? ಹದಿನೇಳು ಕೋಟಿ ಜನಸಂಖ್ಯೆಯ ಬಾಂಗ್ಲಾದೇಶ ತಸ್ಲೀಮಾ ನಸ್ರೀನ್ ಎಂಬ ಬರಹಗಾರ್ತಿಗೆ ತನ್ನ ನೆಲದಲ್ಲಿ ಇರಲು ಜಾಗ ಕೊಡದೇ ಆಕೆ  ೧೯೯೪ರಿಂದ ದೇಶಭ್ರಷ್ಟಳಾಗಿ ದೇಶದೇಶ ತಿರುಗುವಂತಾಗಿದೆ. ಬರಬರುತ್ತ ಬಾಂಗ್ಲಾ ಸಮಾಜವು ಇಸ್ಲಾಂ ಮೂಲಭೂತವಾದದತ್ತ ಸಾಗುತ್ತಿದೆ. ಇತ್ತೀಚೆಗೆ ಮುಕ್ತವಾಗಿ ಬರೆಯುವುದು, ಮಾತನಾಡುವುದೆ ಕಷ್ಟವಾಗಿರುವ ಅಲ್ಲಿ ಹತ್ತಾರು ಅಂತರ್ಜಾಲ ಬ್ಲಾಗ್ ನಡೆಸುವ ಬ್ಲಾಗರುಗಳು ಹತ್ಯೆಯಾಗಿದ್ದಾರೆ.

ಆದರೆ ಬಾಂಗ್ಲಾದೇಶ ಇವತ್ತು ಹೀಗಿದೆ. ಅವಿಭಜಿತ ಬಾಂಗ್ಲಾ ಹೀಗಿರಲಿಲ್ಲ. ಅದು ಜಾಗೃತಿ ಅಂತರ್ಗತವಾಗಿ ಹರಿದ ನೆಲ. ಶತಮಾನದ ಹಿಂದೆ ತೀವ್ರ ನಿರ್ಬಂಧ, ಪ್ರತಿಕೂಲ ಪರಿಸ್ಥಿತಿಗಳ ನಡುವೆ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದ, ಬರೆದ, ಸಂಘಟಿಸಿದ ಮುಸ್ಲಿಂ ಮಹಿಳೆ ಬೇಗಂ ರುಖಿಯಾ ಶೆಖಾವತ್ ಹುಸೇನ್ (೧೮೮೦-೧೯೩೨) ಅದಕ್ಕೊಂದು ಉದಾಹರಣೆ. ಅವರು ತೆರೆದ ಶೆಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್ ಇವತ್ತಿಗೂ ಕೋಲ್ಕತಾದಲ್ಲಿ ನಡೆಯುತ್ತಿದೆ. ಆಕೆ ಕೇವಲ ಶಾಲೆ ತೆರೆದು ಸುಮ್ಮನಿರಲಿಲ್ಲ, ೨೦ನೇ ಶತಮಾನದ ಅವಿಭಜಿತ ಬಂಗಾಳದ ಪ್ರಮುಖ ಲೇಖಕಿಯಾಗಿ ಹೊಮ್ಮಿದರು. ವಿಧವೆಯಾಗಿದ್ದ, ಮಕ್ಕಳಿರದ ರುಖಿಯಾ ವಿಸ್ತೃತ ಬರವಣಿಗೆ ಮಾಡಿದರು. ಪತ್ರಿಕೆಗಳಲ್ಲಿ ಕತೆ, ಕವಿತೆ, ಕಾದಂಬರಿ, ಲೇಖನ ಬರೆದರು. ಮುಸ್ಲಿಂ ಮಹಿಳೆಯರ ಸಂಘಟನೆ ಶುರುಮಾಡಿದರು. ಭಾರತೀಯ ಮುಸ್ಲಿಂ ಮಹಿಳೆಯರ ಪಾಲಿಗೆ ಹಾಗೂ ಮುಸ್ಲಿಂ ಸಹೋದರಿಯರಿಗಾಗಿ ಮಿಡಿಯುವ ಉಳಿದವರ ಪಾಲಿಗೆ ಅವರ ಬದುಕಿನ ವಿವರಗಳು ಸ್ಫೂರ್ತಿದಾಯಕವಾಗುವಂತಿದ್ದು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ:

ಇವತ್ತಿನ ಬಾಂಗ್ಲಾದಲ್ಲಿರುವ ರಂಗಾಪುರ ಜಿಲ್ಲೆಯ ಪೈರಾಬೊಂದ್ ಹಳ್ಳಿಯಲ್ಲಿ ಸಾಂಪ್ರದಾಯಿಕ ಮುಸ್ಲಿಂ ಕೂಡು ಕುಟುಂಬದಲ್ಲಿ ತನ್ನ ತಂದೆಯ ನಾಲ್ಕನೇ ಹೆಂಡತಿಯ ಆರು ಮಕ್ಕಳಲ್ಲಿ ಒಬ್ಬಳಾಗಿ ರುಖಿಯಾ ಹುಟ್ಟಿದಳು. ಆ ಮನೆಯ ಹೆಣ್ಮಕ್ಕಳನ್ನು ಉರ್ದು, ಅರೆಬಿಕ್ ಶಾಲೆಗೆ ಕಳಿಸಿದರೆ ಹುಡುಗರನ್ನು ಬಂಗಾಳಿ, ಇಂಗ್ಲಿಷ್ ಶಾಲೆಗೆ ಕಳಿಸುತ್ತಿದ್ದರು. ಪರ್ದಾ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿತ್ತು. ರುಖಿಯಾಳ ಸೋದರರು ತಮ್ಮ ಸೋದರಿಯರಿಗೆ ಕದ್ದುಮುಚ್ಚಿ ನಡುರಾತ್ರಿ ಬಂಗಾಳಿ ಮತ್ತು ಇಂಗ್ಲಿಷ್ ಹೇಳಿಕೊಟ್ಟು ಸೋದರಿಯರು ಆ ಭಾಷೆ ಕಲಿಯಲು ಕಾರಣರಾದರು. ರುಖಿಯಾ ಅಕ್ಕ ಕರೀಮುನ್ನೀಸಾ ಬಂಗಾಳಿ ಕವಿಯಾದಳು.

ರುಖಿಯಾಗೆ ೧೬ ವರ್ಷವಾದಾಗ ಮದುವೆಯಾಯಿತು. ಆಕೆಯನ್ನು ಮದುವೆಯಾದವರು ಖಾನ್ ಬಹಾದುರ್ ಶೆಖಾವತ್ ಹುಸೇನ್ ಎಂಬ ೩೬ ವರ್ಷದ ವಿಧುರರು. ಇಂದಿನ ಬಿಹಾರದ ಭಾಗಲ್ಪುರದ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದ ಅವರು ಉದಾರ ಮನಸಿನವರು. ತಮ್ಮ ಪತ್ನಿ ಬುರ್ಖಾ ತೊಡುವುದು ಬೇಡವೆಂದು ಅವರೇ ಹೇಳಿದಾಗ ರುಖಿಯಾ ತಲೆಮೇಲೆ ಸೆರಗೆಳೆದುಕೊಂಡು ವ್ಯವಹರಿಸತೊಡಗಿದರು. ಅರ್ಧ ಕಲಿತು ಬಿಟ್ಟ ಇಂಗ್ಲಿಷ್ ಮತ್ತು ಬಂಗಾಳಿಯನ್ನು ಹೆಂಡತಿಗೆ ಕಲಿಸುವ ವ್ಯವಸ್ಥೆ ಮಾಡಿದ ಶೆಖಾವತ್ ರುಖಿಯಾಗೆ ಬರೆಯಲು, ಅದರಲ್ಲೂ ಎಲ್ಲರಿಗೂ ಅರ್ಥವಾಗುವಂತೆ ಬಂಗಾಳಿಯಲ್ಲೇ ಬರೆಯಲು ಪ್ರೋತ್ಸಾಹಿಸಿದರು. ಹೀಗೆ ಗಂಡನ ಒತ್ತಾಸೆಯಿಂದ ೧೯೦೨ರಲ್ಲಿ ರುಖಿಯಾ ಬರೆದ ಮೊದಲ ಬಂಗಾಳಿ ಬರಹ ಪಿಪಾಸಾ ಪ್ರಕಟವಾಯಿತು. ನಂತರ ಅವರ ಪೆನ್ನು ವಿಶ್ರಾಂತಿ ಪಡೆಯಲೇ ಇಲ್ಲ. ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆದರು. ೧೯೦೫ರಲ್ಲಿ ಮೋತಿಚೂರ್, ೧೯೦೮ರಲ್ಲಿ ಸುಲ್ತಾನಾಸ್ ಡ್ರೀಂ ಎಂಬ ಇಂಗ್ಲಿಷ್ ಕೃತಿ, ಪದ್ಮರಾಗ ಎಂಬ ಕಾದಂಬರಿ ಪ್ರಕಟವಾದವು.

೧೯೦೯ರಲ್ಲಿ ಪತಿ ತೀರಿಕೊಂಡಾಗ ಅವರಿಚ್ಛೆಯಂತೆ ಭಾಗಲ್ಪುರದಲ್ಲಿ ಮುಸ್ಲಿಂ ಹುಡುಗಿಯರ ಪ್ರಾಥಮಿಕ ಶಾಲೆ ತೆರೆದರು. ಕೇವಲ ಐದು ಹೆಣ್ಣುಮಕ್ಕಳು ದಾಖಲಾದರು. ನಂತರ ಮಲಮಗಳ ತಗಾದೆಗಳಿಂದ ಬೇಸತ್ತು ಎರಡೇ ವರ್ಷದಲ್ಲಿ ಶಾಲೆಯನ್ನು ಕೋಲ್ಕತಾಗೆ ಸ್ಥಳಾಂತರಿಸಿದರು. ಶೆಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್ ಕೋಲ್ಕತಾದಲ್ಲಿ ಶುರುವಾಯಿತು. ಮೊದಲು ಕೇವಲ ಎಂಟು ಹುಡುಗಿಯರು ಬಂದರಾದರೂ ನಂತರ ಹೆಚ್ಚೆಚ್ಚು ಸಂಖ್ಯೆಯ ಹೆಣ್ಣುಮಕ್ಕಳು ದಾಖಲಾಗುತ್ತ ಹೋದರು. ತೀವ್ರ ಟೀಕೆ, ಕಟಕಿ, ಕಾಲೆಳೆಯುವವರ ನಡುವೆಯೇ ಶಾಲೆ ನಡೆಸಿದರು.

ಅದೇನೂ ಆ ಕಾಲದ ಮೊದಲ ಮಹಿಳಾ ಶಾಲೆಯಾಗಿರಲಿಲ್ಲ. ಅವರಿಗಿಂತ ಮುನ್ನ ನವಾಬ್ ಬಿರುದನ್ನು ವಿಕ್ಟೋರಿಯಾ ರಾಣಿಯಿಂದ ಪಡೆದ ಮೊದಲ ಮಹಿಳೆ ಫೈಜುನ್ನಿಸಾ ಚೌಧುರಿ (೧೮೩೪ ಜನನ) ಮುಸ್ಲಿಂ ಮಹಿಳಾ ಶಿಕ್ಷಣದ ಸಲುವಾಗಿ ಕೆಲಸ ಮಾಡಿದ್ದರು. ಅದನ್ನು ರುಖಿಯಾ ವಿಸ್ತೃತವಾಗಿ, ವ್ಯವಸ್ಥಿತವಾಗಿ ಮುಂದುವರೆಸಿದರು. ಅವರ ಶಾಲೆಯಲ್ಲಿ ಹೆಣ್ಮಕ್ಕಳನ್ನು ಆಕರ್ಷಿಸಲು ಕರಕುಶಲ ತರಬೇತಿ, ಗೃಹವಿಜ್ಞಾನ, ತೋಟಗಾರಿಕೆ ಹೇಳಿಕೊಡುವುದೇ ಅಲ್ಲದೇ ದೈಹಿಕ ಕಸರತ್ತುಗಳನ್ನೂ ಕಲಿಸಲಾಗುತ್ತಿತ್ತು. ಆದರೆ ಶಾಲೆಯಲ್ಲಿ ಪರ್ದಾ ಇಲ್ಲದೆ ಕಲಿಸುವುದು ಸಾಧ್ಯವಾಗಲಿಲ್ಲ. ಶಾಲೆಗೆ ಕರೆತರಲು ಕಿಟಕಿ ಮುಚ್ಚಿದ ವಾಹನ ಕಳಿಸಬೇಕಿತ್ತು. ಬುರ್ಖಾ ಬದಲು ತಲೆಮೇಲೆ ಹೊದೆವಸ್ತ್ರ ಹೊದೆಯುವಂತೆ ಮಕ್ಕಳನ್ನು, ಅವರ ಪಾಲಕರನ್ನು ಮನವೊಲಿಸಲು ಹರಸಾಹಸಪಡಬೇಕಾಯಿತು. ಕೊಂಚ ರಾಜಿಯಾಗದಿದ್ದರೆ ಮಕ್ಕಳನ್ನು ಶಾಲೆಗೆ ಕಳಿಸುತ್ತಲೇ ಇರಲಿಲ್ಲ. ಹೀಗಾಗಿ ಪುರುಷರ ಸಂಪರ್ಕಕ್ಕೆ ಬರದಂತೆ ಹೆಣ್ಮಕ್ಕಳನ್ನು ಕಟ್ಟುನಿಟ್ಟಾಗಿ ದೂರವೇ ಇಡಬೇಕಾಯಿತು.

ಶಾಲೆಯಲ್ಲಿ ಆಗದಿದ್ದರೂ ತಮ್ಮ ಬರವಣಿಗೆಗಳಲ್ಲಿ ವ್ಯಂಗ್ಯವಾಗಿ, ವಿಡಂಬನಾತ್ಮಕವಾಗಿ ಅವರು ಪರ್ದಾ ಕುರಿತು ಚರ್ಚಿಸಿದರು.
ಬುರ್ಖಾ ಧರಿಸಿದ್ದ ಕಾರಣ ರೈಲಿನಡಿ ಸಿಕ್ಕಿಕೊಂಡರೂ ಸಹಾಯಕ್ಕೆ ಕೂಗಲು ಸಾಧ್ಯವಾಗದೇ ತನ್ನ ಚಿಕ್ಕಮ್ಮ ತೀರಿಕೊಂಡಿದ್ದನ್ನು ಎಳೆಯವರಾಗಿದ್ದಾಗ ರುಖಿಯಾ ನೋಡಿದ್ದರು. ಆ ಅನುಭವದ ಹಿನ್ನೆಲೆಯಲ್ಲೋ ಏನೋ, ತಮ್ಮ ಬರವಣಿಗೆಗಳಲ್ಲಿ ಹಾಗೂ ವೈಯಕ್ತಿಕವಾಗಿ ಬುರ್ಖಾ ಧರಿಸುವುದನ್ನು ವಿರೋಧಿಸುತ್ತಿದ್ದರು. ತಮಾಷೆ, ವ್ಯಂಗ್ಯ, ವಿಡಂಬನೆಗಳ ಮೂಲಕ ತಮ್ಮ ಬರಹಗಳಲ್ಲಿ ಬಂಗಾಳಿ ಮುಸ್ಲಿಂ ಹೆಣ್ಮಕ್ಕಳು ಅನುಭವಿಸುವ ತಾರತಮ್ಯ ವಿವರಿಸಿದರು. ಭ್ರಷ್ಟಗೊಂಡ ಇಸ್ಲಾಮಿನ ಸ್ವರೂಪವು ಹೆಣ್ಮಕ್ಕಳ ಮೇಲೆ ಸಲ್ಲದ ದಬ್ಬಾಳಿಕೆ ಹೇರುತ್ತಿದ್ದು ಮಹಿಳೆ ತನ್ನ ಸಾಮರ್ಥ್ಯ ಬಳಸಿಕೊಳ್ಳಲು ಅವಕಾಶ ಕೊಟ್ಟರೆ ದೇವರ ಔದಾರ್ಯ ಇನ್ನಷ್ಟು ಪ್ರಕಟವಾಗುತ್ತದೆ ಎಂದು ಹೇಳಿದರು.

ಅರ್ಧಾಂಗಿ, ಬುರ್ಖಾ, ಗೃಹ ಮೊದಲಾದ ತಮ್ಮ ಪ್ರಬಂಧಗಳಲ್ಲಿ ಗಂಡಸರ ಪ್ರತಿಷ್ಠೆ ಮತ್ತು ಅನುಕೂಲಕ್ಕೆ ತಕ್ಕಂತೆ ಹೇಗೆ ಪರ್ದಾ ಒಳಗೆ ಹೆಣ್ಣನ್ನು ಬಂಧಿಸಲಾಗಿದೆ; ಹೇಗೆ ಆರ್ಥಿಕ ಸ್ವಾವಲಂಬನೆ ಸಾಧಿಸದಿರುವುದು ಹೆಣ್ಮಕ್ಕಳು ಮುಂದುವರೆಯದಂತೆ ತೊಡಕಾಗಿದೆ ಎಂದು ಚರ್ಚಿಸಿದರು. ಸುಗೃಹಿಣಿ ಪ್ರಬಂಧದಲ್ಲಿ ಬುರ್ಖಾ ಧಾರಣೆ ಮತ್ತು ಪುರುಷರಿಂದ ಬೇರ್ಪಡಿಸುವಿಕೆ ಕುರಾನಿನಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಹಾಗೂ ಷರಿಯಾದಲ್ಲಿ ಹೇಳಿಲ್ಲ; ಲಿಂಗಾಧಾರಿತ ಬೇರ್ಪಡಿಸುವಿಕೆ ಮಾಯದ ಗಾಯದಂತಲ್ಲ; ಅದು ನಿಧಾನ ಕೊಲ್ಲುವ ಕಾರ್ಬನ್ ಮೊನಾಕ್ಸೈಡ್ ವಿಷದಂತೆ ಎಂದು ಬರೆದರು. ಶಿಕ್ಷಣ ನೀಡಿದರೆ ಹೆಣ್ಮಕ್ಕಳು ಕೆಟ್ಟುಹೋಗುತ್ತಾರೆ ಎಂಬ ವಾದ ಆಗ ಚಾಲ್ತಿಯಲ್ಲಿತ್ತು. ಆದರೆ ಕುರಾನಿನಲ್ಲಿ ಮಹಿಳಾ ಶಿಕ್ಷಣ ಕುರಿತು ಒತ್ತು ನೀಡಿದ ಮಾತುಗಳಿದ್ದವು. ಇವತ್ತಿನ ಇಸ್ಲಾಂ ವಿರೂಪಗೊಂಡಿರುವುದಷ್ಟೇ ಅಲ್ಲ, ಭ್ರಷ್ಟಗೊಂಡಿದೆ ಎಂದು ಅವರಿಗೆ ಅನಿಸಿತು. ‘ಶಿಕ್ಷಣ ನೀಡಿದರೆ ಮಹಿಳೆಯರು ತಮ್ಮ ಪಾತ್ರವನ್ನು ಜ್ಞಾನದಿಂದಲೂ, ವೃತ್ತಿಪರವಾಗಿಯೂ ನಿಭಾಯಿಸಲು ಸಾಧ್ಯವಾಗಿ ದೇಶ ಅಭಿವೃದ್ಧಿಯಾಗುತ್ತದೆ; ಗಂಡಸರ ಸಮಸಮ ಹೆಜ್ಜೆಹಾಕಲು ಸಹಾಯವಾಗುತ್ತದೆ. ಹೆಣ್ಣುಮಕ್ಕಳು ಓದಿದರೆ ಕೆಟ್ಟುಹೋಗುತ್ತಾರೆನ್ನುವುದು ಸುಳ್ಳು. ತಮ್ಮನ್ನು ಮುಸ್ಲಿಂ ಎಂದು ಕರೆದುಕೊಳ್ಳುವ ಗಂಡಸರು ಮಹಿಳೆಯರಿಗೂ ಸಮಾನ ಶಿಕ್ಷಣದ ಹಕ್ಕು ನೀಡಿದ ಇಸ್ಲಾಮಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆದ ಗಂಡಸು ಹಾಳಾಗಿಹೋಗುವುದಿಲ್ಲ ಎಂದಾದರೆ ಹೆಣ್ಣೇಕೆ ಹಾಳಾಗುತ್ತಾಳೆ?’ ಎಂದು ಪ್ರಶ್ನಿಸಿದರು. ಗಾಡ್ ಗಿವ್ಸ್, ಮೆನ್ ರಾಬ್ಸ್ ಎಂಬ ಪುಸ್ತಕ (೧೯೨೭) ಬರೆದರು.

ಶಾಲೆ ನಡೆಸುತ್ತ, ಬರವಣಿಗೆ ಮಾಡುತ್ತಲೇ ಇಸ್ಲಾಮಿಕ್ ಮಹಿಳಾ ಸಂಘಟನೆಯಾದ ‘ಅಂಜುಮನ್ ಇ ಖವಾತೀನ್ ಇ ಇಸ್ಲಾಂ’ ಶುರುಮಾಡಿದರು. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪರಿಸ್ಥಿತಿಯ ಕುರಿತು ಚರ್ಚೆ, ಸಮ್ಮೇಳನ, ಸಂವಾದ ಏರ್ಪಡಿಸಿದರು. ಬ್ರಿಟಿಷ್ ಭಾರತದಲ್ಲಿ ಅತಿಸಾಂಪ್ರದಾಯಿಕತೆ ಮತ್ತು ಅತಿ ಧಾರ್ಮಿಕ ನಿಷ್ಠೆಯೇ ಮುಸ್ಲಿಂ ಸಮಾಜವು ಉಳಿದೆಲ್ಲ ಸಮಾಜಗಳಿಗಿಂತ ಹಿಂದುಳಿಯಲು ಕಾರಣವಾಗಿದೆ ಎಂದು ಪ್ರತಿಪಾದಿಸಿದರು.

ಆದರೆ ಇಷ್ಟು ನೇರವಾಗಿ ಮತ್ತು ದಿಟ್ಟವಾಗಿ ಬರೆದ ಬಂಗಾಳದ ಮುಸ್ಲಿಂ ಮಹಿಳಾ ಧ್ವನಿ ತನ್ನ ಕಾಲದಲ್ಲಿ ತಾನು ಜನಪ್ರಿಯವಾಗಲಿಲ್ಲ. ಕ್ರೈಸ್ತಪರ, ಪಶ್ಚಿಮಪ್ರೇಮಿ, ಯೂರೋಪಿ ಮನಸ್ಥಿತಿ ಎಂದೆಲ್ಲ ಅವರನ್ನು ಬಣ್ಣಿಸಲಾಯಿತು. ಯಾವ ಹಿಂಜಗ್ಗುವಿಕೆಗೂ ಮಣಿಯದೆ ಜೀವಮಾನವಿಡೀ ಬರಹ, ಸಂಘಟನೆ, ಶಾಲಾ ಚಟುವಟಿಕೆಗಳಲ್ಲಿ ತೊಡಗಿದ್ದ ರುಖಿಯಾ ತಮ್ಮ ೫೨ನೇ ಹುಟ್ಟುಹಬ್ಬದ ದಿನವೇ ತೀರಿಕೊಂಡರು. ಈಗಲೂ ಆ ದಿನವನ್ನು ಬಾಂಗ್ಲಾದೇಶದಲ್ಲಿ ‘ರುಖಿಯಾ ದಿನ’ ಎಂದು ಆಚರಿಸಲಾಗುತ್ತದೆ.

ಒಟ್ಟಾರೆ ಬೇಗಂ ರುಖಿಯಾ ಅವರ ಒಟ್ಟೂ ಪ್ರತಿಪಾದನೆ ಮತ್ತು ‘ಸುಲ್ತಾನಾಳ ಕನಸು’ ಬರಹದ ಹಿನ್ನೆಲೆಯಲ್ಲಿ ಕೆಲ ವಿಷಯಗಳನ್ನು ಇಲ್ಲಿ ಚರ್ಚಿಸಬಹುದು.

    ಧಾರ್ಮಿಕ ಮೂಲಭೂತವಾದವು ಹೇಗೆ ಒಂದು ಜಾಗೃತ ಸಮಾಜವನ್ನು ಸಂಪ್ರದಾಯವಾದಿ ಚೌಕಟ್ಟಿನಲ್ಲಿ ಬಂಧಿಸಿ ಹಿಂದಕ್ಕೊಯ್ಯಬಹುದು ಎನ್ನಲು ನೆರೆಯ ಬಾಂಗ್ಲಾ ಒಂದು ಉದಾಹರಣೆಯಾಗಿದೆ. ಬಂಗಾಳ ಮತ್ತು ಬಂಗಾಳಿ ಎರಡೂ ಜಾಗೃತ ಸ್ಥಿತಿಯ ರೂಪಕಗಳಾಗಿದ್ದ ಹೊತ್ತಿನಲ್ಲಿ ಬಂಗಾಳದ ವಿಭಜನೆ ನಡೆಯಿತು. ಧರ್ಮಾಧಾರಿತ ವಿಭಜನೆ ಗಡಿಗಳ ಹಿರಿದುಗೊಳಿಸಿ ಇಡೀ ಪ್ರದೇಶವನ್ನು ಧಾರ್ಮಿಕ ಮೂಲಭೂತವಾದವು ನುಂಗಿಹಾಕಿತು. ಇವತ್ತು ತಸ್ಲೀಮಾ ಎಂಬ ಮಹಿಳೆಯ ಸಂಕಷ್ಟ ನೋಡಬೇಕಾಗಿರುವುದು ಕೇವಲ ಒಬ್ಬ ಮಹಿಳೆಯ ನೆಲೆ ಸಿಗದ ಬದುಕಿನ ಕಷ್ಟವಾಗಿ ಅಲ್ಲ, ಬದಲಾಗಿ ಭಿನ್ನಮತವನ್ನು ಗಡೀಪಾರು ಮಾಡುವ ಅಸಹಿಷ್ಣುತೆಯಲ್ಲಿ. ಈ ದೃಷ್ಟಿಯಿಂದ ಭಿನ್ನಮತದ  ಮನಸುಗಳು, ಮಹಿಳೆಯರು ಇರುವ ದೇಶ/ಪ್ರದೇಶವು ಆರೋಗ್ಯಕರ ಸಮಾಜ ಹೊಂದಿದೆ ಎಂದು ನಿರ್ಧರಿಸಬಹುದು.
    ಇವತ್ತು ವಿಜ್ಞಾನ ತಂತ್ರಜ್ಞಾನ ಬಳಕೆ, ಶಿಕ್ಷಣ, ಉದ್ಯೋಗ, ಮೀಸಲಾತಿ ಮೊದಲಾದವು ಹೆಣ್ಣಿನ ಅವಕಾಶಗಳ ಪರಿಧಿಯನ್ನು ವಿಸ್ತರಿಸುವುದು ನಿಜವೇ. ಆದರೆ ಸ್ವಾವಲಂಬನೆ ಸಾಧಿಸಲು ಪೂರಕವಾದ ಈ ಎಲ್ಲ ಕ್ರಮಗಳ ಹೊರತಾಗಿಯೂ ಮಹಿಳೆ ಸ್ವಾಯತ್ತ ಬದುಕನ್ನು ಪಡೆಯಲಾಗಿಲ್ಲ ಎಂಬುದೂ ನಿಜವೇ. ಕುಟುಂಬದಲ್ಲಿ ವಿಧಿಸಲ್ಪಟ್ಟ ಲಿಂಗಾಧಾರಿತ ಪಾತ್ರವು ಈಗಲೂ ಅವಳು ಸಾಮಾಜಿಕ ಜವಾಬ್ದಾರಿಗಳ ನಿಭಾಯಿಸುವಲ್ಲಿರುವ ಕಾಲ್ತೊಡಕೇ ಆಗಿದೆ. ಅಡುಗೆ, ಸಂಸಾರ ನಿಭಾವಣೆ, ಮಕ್ಕಳ ಸಾಕುವಿಕೆ ಎಂಬ ಕೊನೆಮೊದಲಿರದ ಗಹನ ಜವಾಬ್ದಾರಿಗಳು ಹೆಣ್ಣಿಗೆ ಒಂದಲ್ಲ ಒಮ್ಮೆ ಹೊರೆಯೆನಿಸಿ ಅವು ಕಳಚಿಕೊಳ್ಳಬೇಕಾದವು ಎನಿಸಿದರೆ ಆಶ್ಚರ್ಯವಿಲ್ಲ. ಹೀಗೆ ಜವಾಬ್ದಾರಿಗಳ ಕಳೆದುಕೊಂಡ ಸ್ಥಿತಿ ಮಹಿಳೆಯ ಕನಸೇ? ವೈಜ್ಞಾನಿಕ ಆವಿಷ್ಕಾರಗಳ ಕಾರಣವಾಗಿ ಸುಗಮಗೊಂಡ, ಅಪರಾಧಗಳೇ ಇಲ್ಲದ ಬದುಕು ಅವಳ ಕನಸೇ? ಗಂಡಸರ ಕೆಲಸಗಳು ಹೆಂಗಸಿನ ಜವಾಬ್ದಾರಿಯೊಂದಿಗೆ ಅದಲುಬದಲಾಗುವುದು ಮಹಿಳಾವಾದದ ಗುರಿಯೆ? ಹಾಗಾದರೆ ಇವತ್ತಿನ ಸ್ತ್ರೀವಾದಿಗಳ ಕನಸೇನು? ಅವರ ಹೋರಾಟದ ತುದಿಬಿಂದು ಯಾವುದು?

ಮತ್ತೆಮತ್ತೆ ಕೇಳಿಬರುವ ಈ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವೂ ಇಲ್ಲ, ಸುಲಭವೂ ಇಲ್ಲ. ಮಹಿಳಾವಾದಕ್ಕೆ ಅಪರಾಧವಿರದ, ಯುದ್ಧವಿರದ ನಾಡಿನ ಕನಸಿರುವುದು ನಿಜ. ಸಮನಾಗಿ ಜವಾಬ್ದಾರಿ ಹಂಚಿಕೊಳ್ಳುವ ದಿನಗಳ ಹಂಬಲವಿರುವುದೂ ನಿಜ. ಸತ್ಯ ಮತ್ತು ಪ್ರೀತಿಯೇ ಧರ್ಮವಾಗಿರುವ; ಸುಭಿಕ್ಷವೂ ಶಾಂತಿಯುತವಾಗಿಯೂ ಆಗಿರುವ ಒಂದು ನಾಡು ಅವಳ ಕನಸೆಂಬುದೂ ನಿಜ. ಅವಳ ಸಾಮಾಜಿಕ ಚಹರೆಗಿಂತ ಕೌಟುಂಬಿಕ ಮೌಲ್ಯವೇ ವಿಜೃಂಭಿಸಲ್ಪಡುವಾಗ ಲಿಂಗಾಧಾರಿತ ಜವಾಬ್ದಾರಿ ಅದಲುಬದಲಾಗುವುದು ಅಥವಾ ಸಮಸಮನಾಗಿ ಹಂಚಿಕೊಳ್ಳುವುದು ಎಂಬ ‘ಸುಲ್ತಾನಾಳ ಕನಸು’ ನಮ್ಮ ಕನಸೂ ಆಗಿರಬಹುದೆನಿಸುತ್ತದೆ. ಬಹುಶಃ ತನ್ನ ಜೈವಿಕ ಅನನ್ಯತೆ ಕೊಡುವ ಜವಾಬ್ದಾರಿಯನ್ನು ತಾನು ನಿಭಾಯಿಸುತ್ತ ಮಿಕ್ಕ ಜವಾಬ್ದಾರಿಗಳನ್ನು ಸಮಸಮನಾಗಿ ಹಂಚಿಕೊಳ್ಳುವಂತೆ ಮಾಡುವುದು ಸ್ತ್ರೀವಾದದ ಅಂತಿಮ ಗುರಿ ಆಗಿದೆ.

    ಯಾವುದೇ ತೆರನ ಧಾರ್ಮಿಕ ಮೂಲಭೂತವಾದವು ಮೊದಲು ಮಹಿಳೆಯರ ಬಾಯಿ ಕಟ್ಟಲು ಯತ್ನಿಸುತ್ತದೆ. ಒಂದಾನೊಂದು ಕಾಲದಲ್ಲಿ ಮಹಿಳಾ ಸ್ನೇಹಿ ಧರ್ಮವಾಗಿ ಹುಟ್ಟಿಕೊಂಡ ಇಸ್ಲಾಂ ಕೂಡಾ ಇದರಿಂದ ಹೊರತಲ್ಲ. ನೈಜೀರಿಯಾದ ಉಗ್ರವಾದಿ ಸಂಘಟನೆ ಬೋಕೊ ಹರಾಂ ಸೇರಿದಂತೆ ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳ ಮಹಿಳಾ ವಿರೋಧಿ ನಡೆಗಳು ಇದಕ್ಕೆ ಪುಷ್ಟಿ ಕೊಡುತ್ತವೆ. ಬೋಕೋ ಹರಾಂ ಎಂದರೆ ‘ಪಾಶ್ಚಾತ್ಯ ಆಧುನಿಕ ಶಿಕ್ಷಣ ವರ್ಜ್ಯ’ ಎಂದೇ ಆಗಿದೆ. ಆ ಸಂಘಟನೆ ಶಾಲೆಗಳಿಂದ, ವಸತಿ ಶಾಲೆಗಳಿಂದ ಎಳೆಮಕ್ಕಳನ್ನು, ಅದರಲ್ಲು ಎಳೆಯ ಹೆಣ್ಣುಮಕ್ಕಳನ್ನು ಅಪಹರಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮಾರುಕಟ್ಟೆ ಆಧಾರಿತ ಆರ್ಥಿಕನೀತಿಯ ತಂತ್ರಗಳು ಹೆಣ್ಣನ್ನು ಹಳೆಯ ಚೌಕಟ್ಟಿನೊಳಗೇ ಇಡಲೆತ್ನಿಸುತ್ತಿದ್ದರೆ, ಪುರುಷ ಮನಸುಗಳು ಅತಿಧಾರ್ಮಿಕತೆಯನ್ನು ಪ್ರತಿಪಾದಿಸುತ್ತ ಸಂಪ್ರದಾಯಗಳ ಹೊರೆಗೆ ನಲುಗುತ್ತಿವೆ. ಅದರಲ್ಲೂ ಮುಸ್ಲಿಂ ಧರ್ಮದಲ್ಲಿ ಪುರುಷ ಪಾರಮ್ಯ ಅತಿ ಹೆಚ್ಚಿದ್ದು ಮುಸ್ಲಿಂ ಮಹಿಳೆ ಮತ್ತಷ್ಟು ಮೂಲೆಗೊತ್ತಲ್ಪಟ್ಟಿದ್ದಾಳೆ. ಹೀಗಿರುತ್ತ ಇಸ್ಲಾಂ ಮತ್ತು ಸ್ತ್ರೀವಾದ ಎರಡೂ ವಿರುದ್ಧ ಪದಗಳೇನೋ ಎಂಬಂತೆ ಇಸ್ಲಾಮಿನ ಪ್ರತಿಪಾದನೆಯಾಗುತ್ತಿರುವ ಹೊತ್ತಿನಲ್ಲಿ ಇಸ್ಲಾಮಿನ ಮಹಿಳಾ ದನಿಗಳನ್ನು ಕೇಳಿಸಿಕೊಳ್ಳುವುದು ತುಂಬ ಮುಖ್ಯವಾಗಿದೆ. ಮಹಿಳೆಯರು ದಿಟ್ಟವಾಗಿ ಸುಲ್ತಾನಾ ಕಂಡಂತಹ ದೂರದ ಕನಸನ್ನು ಕಂಡದ್ದೇ ಆದಲ್ಲಿ ಅದು ಅವರನ್ನಷ್ಟೆ ಅಲ್ಲ, ಇಡೀ ಸಮುದಾಯವನ್ನೇ ಮೇಲೆತ್ತಲು ಶಕ್ತವಾಗುತ್ತದೆ.

    ಒಂದೆಡೆ ಅಂತಾರಾಷ್ಟ್ರೀಯ ಮುಸ್ಲಿಂ ಮೂಲಭೂತವಾದದಿಂದ ಮುಸ್ಲಿಮೇತರರು ಮುಸ್ಲಿಮರ ಬಗೆಗೆ ಹೊಂದಿರುವ ಭಾವನೆ; ಇನ್ನೊಂದೆಡೆ ಬೆಳೆಯುತ್ತಿರುವ ಹಿಂದೂತ್ವ ಭಯೋತ್ಪಾದಕರಿಂದ ಸೃಷ್ಟಿಯಾಗಿರುವ ಅಭದ್ರತೆ - ಈ ಎರಡೂ ಮುಸ್ಲಿಂ ಮಹಿಳೆಯರನ್ನು ಮತ್ತಷ್ಟು ಪರದೆಯೊಳಗೆ ತಳ್ಳಿ ಅಸಹಾಯಕರನ್ನಾಗಿಸಿವೆ. ಲಕ್ಷಾಂತರ ಮುಸ್ಲಿಂ ಹೆಣ್ಣುಮಕ್ಕಳು ಬಡತನದ ಕಾರಣವಾಗಿ ಶಾಲೆಗೆ ಹೋಗಲಾರದ ಪರಿಸ್ಥಿತಿ ಒಂದುಕಡೆಯಿದ್ದರೆ; ಹೋಗುವವರೂ ಉರ್ದು ಶಾಲೆಗೆ ಹೋಗುವುದು ಸ್ಥಳೀಯ/ಇಂಗ್ಲಿಷ್ ಭಾಷೆಯ ಸಂವಹನಕ್ಕೆ ತೊಡಕಾಗಿ ಸಂಭವಿಸಿದೆ. ಧರ್ಮಕ್ಕೊಂದು ಭಾಷೆಯೆನ್ನುವಂತೆ ಉರ್ದುವು ಮುಸ್ಲಿಮರ ಭಾಷೆಯಾಗಿ ಉಳಿದಿರುವುದು ಆ ಭಾಷಾ ಉನ್ನತಿಯ ದೃಷ್ಟಿಯಿಂದಲೂ, ಅದನ್ನು ಬಳಸುವವರ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎನ್ನಬೇಕಾಗಿದೆ. ಈಗಲೂ ಹೆಣ್ಮಕ್ಕಳಿಗೆ ಕೇವಲ ಉರ್ದು ಕಲಿಸುವ, ಗಂಡು ಹುಡುಗರನ್ನು ಸ್ಥಳೀಯ ಭಾಷೆಗೆ ಕೊಂಚ ತೆರೆಯುವ ಪರಿಪಾಠ ಮುಸ್ಲಿಂ ಸಮುದಾಯದಲ್ಲಿರುವುದರಿಂದ ಸಾಮೂಹಿಕ ಶಿಕ್ಷಣದ ಭಾಗವಾಗಿ ಸರ್ವ ಸಮುದಾಯಗಳ ಜೊತೆಗೆ ಮುಸ್ಲಿಂ ಹುಡುಗ ಹುಡುಗಿಯರು ಕಲಿಯುವುದು ಅವಶ್ಯವಾಗಿದೆ.

ಹೀಗಿರುತ್ತ ಬೇಗಂ ರುಖಿಯಾ ಈಗ್ಗೆ ೧೧೦ ವರ್ಷ ಕೆಳಗೆ ಬಂಗಾಳದಲ್ಲಿ ಬಂಗಾಳಿ, ಇಂಗ್ಲಿಷ್ ಭಾಷೆ ಕಲಿತು; ಅದರಲ್ಲೇ ಬರೆದು; ತನ್ನಂತೆಯೇ ಇತರ ಹೆಣ್ಮಕ್ಕಳೂ ಕಲಿಯಲೆಂದು ಶಾಲೆ ತೆರೆದು; ಕೊನೆಗೂ ಮಹಿಳೆ ಬಯಸುವ ಯುಟೋಪಿಯಾದ ರೂಪುರೇಷೆಗಳನ್ನು ಸೃಜನಶೀಲ ಕೃತಿಯೊಂದರಲ್ಲಿ ಬಿಚ್ಚಿಟ್ಟು ಮಹಿಳಾ ಮಾರ್ಗ ಅರಸುವವರಿಗೆಲ್ಲ ದಾರಿದೀಪವಾಗಿದ್ದಾರೆ. ಆ ಚೇತನ ಎಲ್ಲರಲ್ಲು ಇಷ್ಟಿಷ್ಟು ತುಂಬಿಕೊಳ್ಳಲಿ. ಸುತ್ತ ಕತ್ತಲೆಂದು ಗೊಣಗದೆ ಕತ್ತಲಲ್ಲಿರುವವರ ಕೈಗೊಂದು ಹಚ್ಚಿದ ಹಣತೆಯನಾದರೂ ಇಡುವ ಕೆಲಸ ಆಗಲಿ.

ಡಾ. ಎಚ್. ಎಸ್. ಅನುಪಮಾ  ವೈದ್ಯೆ. ಮೂಲತಃ ಶಿವಮೊಗ್ಗ ಜಿಲ್ಲೆಯವರು. ಈಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೃತ್ತಿ ನಿರತರು. ಕವಿತೆ, ಕಥೆ, ವೈಚಾರಿಕ, ವೈದ್ಯಕೀಯ, ಪ್ರವಾಸ ಬರಹಗಳನ್ನು ಬರೆಯುವ ಇವರ 29 ಪುಸ್ತಕಗಳು ಪ್ರಕಟಗೊಂಡಿವೆ. ಅದರಲ್ಲಿ ಸಂಪಾದನೆ ಮತ್ತು ಅನುವಾದ ಪುಸ್ತಕಗಳೂ ಸೇರಿವೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಡಾ. ಎಚ್. ಎಸ್. ಅನುಪಮಾ
ಜಲಜಾ ಹೆರಿಗೆ ಮತ್ತು ಜನರಲ್ ಆಸ್ಪತ್ರೆ
ಕವಲಕ್ಕಿ-581361
ತಾ: ಹೊನ್ನಾವರ ಜಿ: ಉತ್ತರ ಕನ್ನಡ

anukrishna93@gmail.com


9480211320
     

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...