Tuesday, December 01, 2015

ಆ ಶ್ವೇತಭವನ ಮತ್ತು ಹೆಣ್ತನದ ಅಂಜಿಕೆಗಳು..... !!
(ಥ್ಯಾಂಕ್ಯೂ ಮೌಷುಮಿ.. ಥ್ಯಾಂಕ್ಯೂ ರ‍್ಯಾಗಿಂಗ್.... !)
ಸುಧಾ ಚಿದಾನಂದಗೌಡಆ ಬಿಲ್ಡಿಂಗ್ ಯಾವ್ದು ಗೊತ್ತಾ....? you better not stare at that building….”
 
ಅದು ಪಕ್ಕದಲ್ಲೇ, ಹೆಗಲ ಮೇಲಿನಿಂದ ಧ್ವನಿಸಿ ಸದಾ ಹೆದರಿಸುತ್ತಿದ್ದ ಅವಳದೇ ದನಿ..

ಅವಳ ಹೆಸರು ಮೌಷುಮಿ ಡಿಸೋಜಾ. ಬಂಗಾಳದಿಂದ ಬಂದಿದ್ದಳು ಮೌಂಟ್ ಕಾರ್ಮೆಲಿನಲಿ ಪಿಯುಸಿ ಸೈನ್ಸ್ ಓದಲು.
ನಾನು ಹಗರಿಬೊಮ್ಮನಹಳ್ಳಿಯೆಂಬ ತಾಲೂಕು ಕೇಂದ್ರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವೆಂಬೋ ಸಂಪ್ರದಾಯಸ್ಥ ಕನ್ನಡ-ಇಂಗ್ಲಿಷ್ ಮಿಶ್ರಿತ ಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿ ಫಸ್ಟ್ ಪಿಯುಸಿಗೆ ಈ ಮೌಂಟ್ ಕಾರ್ಮೆಲ್ ಎಂಬ ಕಾಣದ ಜಗತ್ತಿಗೆ ಇದ್ದಕ್ಕಿದ್ದಂತೆ ಅಡಿಯಿಟ್ಟಿದ್ದೆ. ಶಿಕ್ಷಣದ ಕುರಿತು ಉನ್ನತ ಯೋಚನೆಗಳ ನನ್ನ ಅಪ್ಪಾಜಿಗೆ ಸದಾ ತಮ್ಮ ನಾಲ್ವರು ಮಕ್ಕಳ ಅರ್ಥಾತ್ ನನ್ನ, ನನ್ನ ತಂಗಿ ಮತ್ತು ತಮ್ಮಂದಿರ ವಿದ್ಯಾಭ್ಯಾಸದ್ದೇ ಚಿಂತೆ. ಯಾಕೇಂದ್ರೆ ಅವರು ಸರ್ಕಾರಿ ವೈದ್ಯರಾಗಿದ್ರು. ಮೂರು-ನಾಲ್ಕು ವರ್ಷಗಳಿಗೊಂದಾವರ್ತಿ ವರ್ಗಾವಣೆ ಖಚಿತ. ಆಗೆಲ್ಲಾ ಇಡೀ ಕುಟುಂಬ ಷಿಫ್ಟ್ ಆಗಬೇಕಾದ್ದು ಅನಿವಾರ್ಯ. ಅವರು ತಾಲೂಕು ವೈದ್ಯಾಧಿಕಾರಿಗಳಾಗಿದ್ದುದರಿಂದ ಯಾವುದೋ ಒಂದು ತಾಲೂಕಿಗೇ ನಾವು ಮುಂದೊಮ್ಮೆ ಹೋಗಬೇಕು ಎಂಬ ಅರಿವು ನನಗೆ ಐದು ವರ್ಷಗಳಾಗಿದ್ದಾಗಲೇ ಬಂದುಬಿಟ್ಟಿತ್ತು. ಮಾನಸಿಕವಾಗಿ ನಾನದಕ್ಕೆ ಸಿದ್ಧಳಾಗೇ ಇರ‍್ತಿದ್ದೆ. ಆದರೆ ಅಪ್ಪಾಜಿ ಚಿಂತೆಯೆಂದರೆ ಅಲ್ಲಿ ಇಂಗ್ಲಿಷ್ ಸ್ಕೂಲ್ ಇರ‍್ತದೋ ಇಲ್ಲವೋ ಎಂದೇ. ಅದೂ ನನಗೆ ಅರ್ಥವಾಗಿತ್ತು ಮತ್ತು ಸಂದರ್ಭ ಬಂದಾಗಲೆಲ್ಲಾ ಜೋರುಜೋರಾಗೇ ಹೇಳ್ತಿದ್ದೆ.. ಯಾವ ಸ್ಕೂಲ್ ಗೆ ಆಗ್ಲಿ, ನಾನು ಚೆನ್ನಾಗೇ ಅಡ್ಜಸ್ಟ್ ಆಗ್ತೀನಿ
ಅಪ್ಪಾಜಿಯೂ ನಕ್ಕು.. ನೀನು ಯಾಕೆ ಹೀಗೆ ಯಾಕೆ ಹೇಳ್ತೀ ಅಂತ ನಂಗೆ ಗೊತ್ತವಾ ಪಾಪೂ... ಎನ್ನುತ್ತಿದ್ದರು.

ಅವರ ಜೊತೆಗೆ ಅಮ್ಮ, ಆಂಟಿ, ಅತ್ತೆ.. ಹೀಗೆ ಮನೇಲಿ ಇದ್ದಬದ್ದವರೆಲ್ಲಾ ನಗ್ತಿದ್ರು. ಯಾಕೇಂದ್ರೆ ನಾನು ಭಯಂಕರ ಹೆದರುತ್ತಿದ್ದುದು ಬೋರ್ಡಿಂಗ್ ಗೆ ಅಂತ ಅವ್ರಿಗೆಲ್ಲಾ ಗೊತ್ತಿತ್ತು. ಹೈಸ್ಕೂಲಿಗೇನೆ ಒಳ್ಳೆ ಬೋರ್ಡಿಂಗ್ ಗೆ ಹಾಕಿಬಿಡೋಣ.. ನನ್ನ ಟ್ರಾನ್ಸ್ ಫರ್ ಗಳಿಂದ ಎಜುಕೇಶನ್ ಗೆ ತೊಂದರೆಯಾಗೋದು ಬೇಡ ಎಂದೆಲ್ಲ ಅಪ್ಪ ಅಮ್ಮನೊಂದಿಗೆ ಚರ್ಚಿಸುವಾಗ ನನಗೆ ಹೃದಯವೇ ಬಾಯಿಗೆ ಬಂದಂತಾಗುತ್ತಿತ್ತು. ಎಂಥಾ ಹಳ್ಳಿಶಾಲೆಗೆ ಬೇಕಾದರೂ ಹೋಗಲು ಸಿದ್ಧಳಿದ್ದೆ ಆದರೆ ಹಾಸ್ಟೆಲ್ ಮಾತ್ರ.. ...ಊಹೂಂ..... ಸತ್ರೂ ಹೋಗಲ್ಲ ಎಂಬುದು ನನ್ನ ಎಳೆಮನಸಿನ ತೀರ್ಮಾನವಾಗಿಬಿಟ್ಟಿತ್ತು..... ಆದರೆ ಎಲ್ಲೀತಂಕಾ.. ..? ರಾಷ್ಟ್ರೋತ್ಥಾನದ ಹೈಸ್ಕೂಲ್ ದಿನಗಳು ಮನೆಯಲ್ಲಿದ್ದು ಓದಬಹುದಾದ ಕೊನೆಯ ದಿನಗಳು ತಾನೇ..? ನಂತರ ಕಾಲೇಜಿಗೆ ಬೆಂಗಳೂರೇ.. ಅದಕ್ಕೆ ಸಿದ್ಧಳಾಗೇ ಎಸೆಸೆಲ್ಸಿ ಮುಗಿಸಿದ್ದು.... ನಂತರ ಮೌಂಟ್ ಕಾರ್ಮೆಲ್ ಕಾಲೇಜಿನ ಪಿಯುಸಿ ಸೈನ್ಸ್ ವಿಭಾಗಕ್ಕೆ ಅರ್ಜಿ ತುಂಬಿದ್ದು. ಇಂಟರ್ ವ್ಯೂ ಅಟೆಂಡ್ ಆಗಿ ಸೆಲೆಕ್ಟ್ ಆಗಿದ್ದು.. .. ಬಳಿಕ  One fine finer finest morning  ಅಪ್ಪ, ಅಮ್ಮ, ಮಾಮ ಎಲ್ಲರೂ ಸೇರಿ ಮದರ್ ಮೇರಿ ಮೆಮೊರಿಯಲ್ ಹಾಸ್ಟೆಲ್ ಎಂಬ ಬೋರ್ಡ ಇದ್ದ ಸೊಗಸಾದ ಕಟ್ಟಡದೊಳಕ್ಕೆ ನನ್ನನ್ನು ಲಗೇಜ್ ಸಮೇತ ದಬ್ಬಿ ರಾತ್ರಿಯೇ ಹೊರಟು ಹೋದ್ರಲ್ಲಾ... ..

ಅವೊತ್ತೇ ರಾತ್ರಿ ಡೈನಿಂಗ್ ಹಾಲ್ ನ ಎಂಟ್ರೆನ್ಸ್ ನಲ್ಲಿದ್ದ ಆಳುದ್ದದ ಜೀಸಸ್ ಪ್ರತಿಮೆಯನ್ನ ನೋಡ್ತಾ ನೋಡ್ತಾ...
ನಂ ರಾಷ್ಟ್ರೋತ್ಥಾನದ ಸ್ಟೈಲ್ ನಲ್ಲಿ ಒಮ್ಮೆ ಸಾಷ್ಟಾಂಗ ಅಡ್ಡಬಿದ್ದುಬಿಡ್ಲಾ ಅಥವಾ ಹಣೆಯಿಂದಾರಂಭಿಸಿ ಎದೆ ಮೇಲೆ ಕ್ರಾಸ್ ಮಾಡಿಕೊಳ್ಳಲಾ ಎಂದೆಲ್ಲಾ ಗೊಂದಲಗೊಂಡು ಎರಡನ್ನೂ ಮಾಡದೆ ಸುಮ್ಮನೆ ನಿಂತಿದ್ನಾ.. ..

ಪಕ್ಕದಲ್ಲೇ, ನನ್ನ ಬಲಹೆಗಲ ಮೇಲಿಂದ ಕೇಳಿಸಿತು “don’t stare at it…get inside…”

ಎಷ್ಟು ಬೆಚ್ಚಿದೆನೆಂದರೆ.... ಆ ಪರಿ ಯಾವತ್ತೂ ಮೆಟ್ಟಿಬಿದ್ದಿರಲಿಲ್ಲ....

ಅಲ್ಲಿಯವರೆಗೂ ನಂ ಸ್ಕೂಲಲ್ಲಿ ತುಂಬ ಜಾಣೆಯೆಂದು ಹೆಸರಾದವಳು ನಾನು.... ಇವ್ಳೇನು ಹೇಳೋದು ಏನ್ ನೋಡ್ಬೇಕು ಏನ್ ನೋಡಬಾರ‍್ದು ಅಂತ..?

ಸಿಟ್ಟೂ ಬಂದಿತ್ತು.. ... ಆ ಸಿಟ್ಟು ನನ್ನ ಮುಖದಲ್ಲೂ ಕಾಣಿಸಿತೇನೋ.. ....


“What…..? don’t stare at me now….go go go…”


ನನ್ನ ಸಿಟ್ಟು ನೆತ್ತಿಗೇರೋದೊಂದೇ ಬಾಕಿ.. ಎಷ್ಟು ಸೊಕ್ಕಿದ್ರೆ ನಂಗೆ ಹೋಗು ಹೋಗು ಅಂದಾಳು ಈಕಿ.. ..?
ಆದ್ರೆ ನಿಜಕ್ಕೂ ಅವಳು ಗೋ ಗೋ ಎನ್ನುವುದನ್ನು ತುಂಬ ಹೆದರಿಕೆಯಿಂದ ಹೇಳಿದ್ದಳು.
ವಿಷ್ಯ ಏನೂಂದ್ರೆ, ಮೌಂಟ್ ಕಾರ್ಮೆಲ್ ನಲ್ಲಿ ರ‍್ಯಾಗಿಂಗ್ ಇತ್ಯಾದಿ ಧಾಂಧಲೆಗಳು ಸಂಪೂರ್ಣ ನಿಷಿದ್ಧ. ಹೊಸಬರೊಂದಿಗೆ ಒರಟಾಗಿ ಮಾತಾಡುವಂತೆಯೂ ಇಲ್ಲ.

ಮೌಷುಮಿ ಕದ್ದುಮುಚ್ಚಿ ನನ್ನನ್ನು ರ‍್ಯಾಗ್ ಮಾಡಿ, ಮಜಾ ತಗೋಳದರಲ್ಲಿದ್ಳು.. ಅಷ್ಟರಲ್ಲಿ ಸಿಸ್ಟರ್ ಜ್ವನಿತಾ, ಮದರ್ ಲೂಸಿ ಕಿಚನ್ ಕಡೆಯಿಂದ ಡೈನಿಂಗ್ ಹಾಲ್ ನೊಳಕ್ಕೆ ಬರ‍್ತಾ ಇದ್ರು..... ಇವಳು ಅವರನ್ನು ನೋಡಿ, ಹೆದರಿ ಹಾಗೆ ಹೇಳಿದ್ದಳು... ನನಗದು ಆ ಕ್ಷಣಕ್ಕೆ ಏನೂ ಗೊತ್ತಿರಲಿಲ್ಲ.. ಗೊತ್ತಿದ್ದದ್ದು ಇವ್ಳು ಹೋಗು ಹೋಗು ಎಂದು ಗದರಿಸಿದಳಲ್ಲ ಎಂಬ ಸಿಟ್ಟು ಮಾತ್ರವೇ.. ..
ಆ ಕ್ಷಣಕ್ಕೇನೋ ಅವಳಿಂದ ತಪ್ಪಿಸಿಕೊಂಡೆ.. ಆದ್ರೆ.. ..

ಒಂದೆರಡು ದಿನಗಳ ನಂತರ ಸಂಜೆ ಲ್ಯಾಬ್ ಮುಗಿಸಿಕೊಂಡು ಬಂದು, ಕಾಡುವ ಮನೆಯ, ಅಮ್ಮನ ನೆನಪಿನಿಂದ ತಪ್ಪಿಸಿಕೊಳ್ಳಲು ನನ್ನ ರೂಮಿನ ಎದುರಿಗೇ ಇದ್ದ ರೀಡಿಂಗ್ ಲಾಂಜ್ ನ ವಿಶಾಲ ಕಿಟಕಿಗೆ ಮುಖವೊಡ್ಡಿ, ತಂಗಾಳಿಗೆ ಮೈಯೊಡ್ಡಿ ಹೊರಗಿನ ಲಾನ್ ನ ಹಸಿರಿನಲ್ಲಿ ಮುಳುಗಿ ಇನ್ನೇನು ಕಳೆದುಹೋಗುವವಳೇ ಇದ್ದೆ.....

ಆಗ ಆ ಕಾಣಿಸಿತು ಆ ಕಟ್ಟಡ.. ..

ಅದರ ಸುತ್ತಲೂ ಕಾಂಪೋಂಡೇನೋ ಇತ್ತು. ಆದರೆ ಅಂಥಾ ಪರಿಯೇನೂ ಶಿಸ್ತಿಗೊಳಪಡದೆ ಕಾಡಿನಂತೆ ಬೆಳೆದ ಕುರುಚಲು ಗಿಡಗಳು.. ಕಿಟಕಿಗಂಟಿಕೊಂಡು ಬೆಳೆದ ದಟ್ಟಬಳ್ಳಿ.. ಅದರ ಮಧ್ಯೆಯೇ ಮಿನುಗುಕಾಂತಿಯ ಸ್ವಚ್ಛ ಬಿಳಿಬಣ್ಣ ಹೊದ್ದ, ದೊಡ್ಡದೊಡ್ಡ ಪ್ರೆಂಚ್ ಶೈಲಿಯ ಕಿಟಕಿ ಬಾಗಿಲುಗಳಿದ್ದ ಸಾಕಷ್ಟು ವಿಶಾಲವೆನಿಸುವ ಮೂರಂತಸ್ತಿನ ಕಟ್ಟಡ..... ಫಕ್ಕನೆ ನೋಡಿದರೆ ಊರಿನಲ್ಲಿ ಸುಣ್ಣ ಬಳಿದುಕೊಂಡು ಬಿಳಿಯೆಂದರೆ ಬಿಳಿ ಎಂಬಂಥಾ ಅಜ್ಜನ ಒಂದೇ ಅಂತಸ್ತಿನ ದೊಡ್ಡ ಮನೆಯನ್ನು ನೆನಪಿಸುವಂತೆ ಇದ್ದಿದ್ದರಿಂದಲೋ ಏನೋ.. ಅದು ನನಗೆ ಬಿಸಿಲಿನಲ್ಲಿ ತಂಪಾಗಿ ಬೆಳದಿಂಗಳಲ್ಲಿ ಜೇನಾಗಿ ಕಾಣುತ್ತಿತ್ತು. ..
ಮೌಷುಮಿಗೆ ಹೇಗೆ ಕಂಡಿತೋ ನಾನು ಆ ಕಟ್ಟಡದ ಕಡೆಗೊಂದು ಮೋಹ ಬೆಳೆಸಿಕೊಂಡದ್ದು.... !
ಬೆನ್ನುಬಿದ್ದುಬಿಟ್ಟಳು.. ..

Don’t stare at that building…Do you know what it is..?”
 
ಕಂಡಾಗೆಲ್ಲಾ ಇದೇ ವಾಕ್ಯ, ಕಣ್ಣಲ್ಲೊಂಥರಾ ಭಾವನೆ.. ಅದೇನು ಕುಹಕವೋ, ವ್ಯಂಗ್ಯವೋ, ಇವಳನ್ನು ಹೆದರಿಸಿದೆನೆಂಬ ಸ್ಯಾಡಿಸ್ಟ್ ನೆಮ್ಮದಿಯೋ..... ಈ ಹುಂಬುಹುಡುಗಿಗೇನೂ ಗೊತ್ತಿಲ್ಲ, ಗೊತ್ತಾಗೋದೂ ಇಲ್ಲ ಎಂಬ ಉಡಾಫೆಯೋ.. ಅಥವಾ ಅದಾವುದೂ ಅಲ್ಲದೆ ಸುಮ್ಮನೆ ರೇಗಿಸೋಕೆ ಹೇಳ್ತಿದ್ಲೋ..  ಇವೊತ್ತಿಗೂ  ಗೊಂದಲವೇ.. .
ಆದರೆ ಒಂದಂತೂ ನಿಜ.
ಅವಳು ಹಾಗೆ ಕೇಳುತ್ತಾ ಹೋದಂತೆಲ್ಲಾ ಅದೇನಿರಬಹುದೆಂಬ ಕುತೂಹಲ ನನ್ನಲ್ಲಿ ಗರಿಗೆದರಿಬಿಟ್ಟಿತು....!
ನಿಜಕ್ಕೂ ಆ ಬಿಲ್ಡಿಂಗ್ ಏನೂ ಆಗಿರಲಿ, ಆದರೆ ಇವಳು ಏನು ಹೇಳುವವಳಿದಾಳೆ..? ಏನು ಹೇಳಿ ನನ್ನನ್ನು ಹೆದರಿಸಬೇಕೆಂದಿದ್ದಾಳೆ..? ಆ ಕುತೂಹಲ ನನ್ನ ಮೈಯೆಲ್ಲಾ ಹೊಕ್ಕು, ಬೆಳೆದು ನಿಂತುಬಿಟ್ಟಿತು.
ಅದೇ ಸಂಜೆ ಅವಳು ಬರಲಿ ಎಂದೇ ಬಹಳ ಹೊತ್ತು ಕಿಟಕಿಗೆ ಅಂಟಿಕೊಂಡವಳಂತೆ ನಿಂತೆ..
ಬಹುಷಃ ಅವೊತ್ತು ಅವಳಿಗೆ ಲ್ಯಾಬ್ ಇತ್ತು. ಅವಳ ಮುಖದಲ್ಲಿ ಬಳಲಿಕೆಯನ್ನು ದೂರದಿಂದಲೇ ಗುರುತಿಸಿ, ಬರ‍್ತಾಳೋ ಇಲ್ವೋ ಅಂದುಕೊಳ್ಳುತ್ತಿದ್ದಂತೆಯೇ. ಕೈಯಲ್ಲಿ ಪ್ರಾಕ್ಟಿಕಲ್ ರೆಕಾರ್ಡು. ಮ್ಯಾನ್ಯುಯಲ್, ಇನ್‌ಸ್ಟ್ರುಮೆಂಟ್ ಕಿಟ್ ಎಲ್ಲಾ ಹಿಡ್ಕೊಂಡೇ ಸೀದಾ ಬಂದೇಬಿಟ್ಟಳು.. ನಂಗೂ ಅದೇ ತಾನೆ ಬೇಕಾಗಿತ್ತು..?? ಅವೊತ್ತು ಧೈರ್ಯವಾಗಿ ಅವಳನ್ನೆದುರಿಸಿದೆ.. ತಿಳ್ಕೊಂಡೇ ಬಿಡಬೇಕು.. ಅದೇನು ಹೇಳಬೇಕಂದ್ಕೊಂಡಿದಾಳೋ..


What yaa…So much curious about that building..?”
“Yes,   I badly want to know and you worstly love to inform me what it is, don’t you?

ಅವಳು ನಂಬಲಾರದವಳಂತೆ ನೋಡಿದಳು ನನ್ನನ್ನೇ.. ಅವೊತ್ತು ತಿರುಗಿ ಬೀಳಲು ನಿರ್ಧರಿಸಿ, ದೃಷ್ಟಿ ತಪ್ಪಿಸದೆ ನಾನೂ ನೋಡಿದೆ.
ಅವಳಿಗೆ ರೇಗಿಹೋಯಿತೋ ಅಥವಾ ತಾನೇ ಮುಂದಿನ ಭಾಗವನ್ನು ಹೇಳಬೇಕೆಂದೇ ನಿರ್ಧರಿಸಿದ್ದಳೋ.....
“So, you want to know… it is an abortion centre.. got it..? ಅದನ್ಯಾಕೆ ನೋಡ್ತಿರ‍್ತೀಯ ಯಾವಾಗಲೂ.. ಅಬಾರ್ಷನ್ ಮಾಡಿಸ್ಕೋಬೇಕಾ..? ಅದು ಅಬಾರ್ಷನ್ ಸೆಂಟರ್ ಅಂತ ಗೊತ್ತಿಲ್ವಾ..?
ಬಂಗಾಳಿ ಉಚ್ಛಾರದ ಇಂಗ್ಲಿಷಿನಲ್ಲಿ ಅವಳು ಪಟಪಟನೆ ಹೇಳಿದಾಗ....

ಭೂಮಿಗಿಳಿದುಹೋದೆನಾ.. ? ದಿಗ್ಭ್ರಾಂತಗೊಂಡೆನಾ..? ಬೆಚ್ಚಿ ಮೂರ್ಛೆ ಹೋಗುವಂತಾದೆನಾ.. ?

ಏನೂ ತಿಳಿಯದಷ್ಟು ಅನಿರೀಕ್ಷಿತವಾಗಿತ್ತು ಅವಳ ಮಾತು..


ನೋ.. ಎಂದಷ್ಟೇ ಹೇಳಲು ಸಾದ್ಯವಾಗಿತ್ತು ನನಗೆ. ಅವಳೋ.... ಚಿತ್ತುಮಾಡಿಬಿಡುವ ಉತ್ಸಾಹದಲ್ಲಿದ್ದಳು..
“What no?  ಪ್ರೆಗ್ನೆಂಟ್ ಅಲ್ವಾ..? ಹೀಗೇ ನೋಡ್ತಾ ಇರು ಆ ಬಿಲ್ಡಿಂಗನ್ನ.. ಪ್ರೆಗ್ನೆಂಟ್ ಆಗ್ತೀಯಾ.. ಗೊತ್ತಾಯ್ತಾ..?
ಅವಳೂ, ನಾನೂ ಆಗ ೧೫-೧೬ ವರ್ಷಗಳ ವಯಸಿನವರು. ನಾನು ಫಸ್ಟ್ ಪಿಯುಸಿ, ಅವಳು ಸೆಕೆಂಡ್ ಪಿಯುಸಿ. ಇಬ್ಬರೂ ಉನ್ನತವ್ಯಾಸಂಗದ ಕನಸು ಹೊತ್ತ್ತು, ನಿದ್ದೆಗೆಟ್ಟು ಓದುತ್ತಿರುವ ಸೈನ್ಸ್ ವಿದ್ಯಾರ್ಥಿನಿಯರೇ..
ವೀರ್ಯಾಣು, ಅಂಡಾಣು, ಗರ್ಭಾಶಯ, ಗರ್ಭಧಾರಣೆಯ ಕುರಿತು ಚಿತ್ರಸಮೇತ ಪುಟದಷ್ಟು ವಿವರಣೆ ನೀಟಾಗಿ ಬರೆದು ಜೀವಶಾಸ್ತ್ರದಲ್ಲಿ ಹತ್ತು ಅಂಕ ಪೂರಾ ತೆಗೆದುಕೊಳ್ಳಬಲ್ಲವರೇ..

ಪ್ರಶ್ನೆ ಅದಲ್ಲ. ಅದೇ ಬೇರೆ, ಇದೇ ಬೇರೆ ಎನಿಸಿದ್ದು, ದೈಹಿಕ ಆಸಕ್ತಿ ದೇಹದ ಅಂಗಾಂಗಗಳ ಚಿತ್ರಗಳಲ್ಲಿರೋದಿಲ್ಲ. ಇಷ್ಟುದ್ದದ ವಿವರಣೆಯಲ್ಲಿರೊದಿಲ್ಲ. ಅಸಲು ದೇಹದಲ್ಲಿಯೇ ಇರೋದಿಲ್ಲ, ಮನಸಿನಲ್ಲಿರುತ್ತೆ ಎಂಬುದು ಅರ್ಥವಾಗಿದ್ದು, ಅದು ಕೂಡಾ ಸ್ಪಷ್ಟವಾಗದೇ ಒದ್ದಾಡಿದ್ದು ಆಗಲೇ. (ಈಗಲೂ..!) ಇದನ್ನು ಹೇಗೆ ವಿವರಿಸೋದು? ಅದಕ್ಕೆ ಅಂಕಗಳು ಬರ‍್ತಾವಾ? ಯಾರು ಮಾಡ್ತಾರೆ ವ್ಯಾಲ್ಯುವೇಶನ್..? ಅವಳು ಇಂಥದ್ದೇ ಏನನ್ನೋ ಕಿತಾಪತಿ ಥರದ್ದು ಹೇಳೋಕೆ ಇಟ್ಕೊಂಡಿದಾಳೆಂಬ ಊಹೆಯಿತ್ತು. ಆದರೆ, ಇಂಥಾ ಮಾತು ಹೇಳ್ತಾಳೆ ಎಂಬ ಕಲ್ಪನೆಯಿರಲಿಲ್ಲ. ಬಿಲ್ಡಿಂಗನ್ನ ದಿಟ್ಟಿಸಿ ನೋಡಿದರೆ ಅಂಥದ್ದೇನೂ ನಡೆಯೋಲ್ಲ ಎಂಬುದು ಅವಳಿಗೂ ಗೊತ್ತು, ನನಗೂ ಗೊತ್ತು.
ಪ್ರಶ್ನೆ ಇದು ಕೂಡಾ ಅಲ್ಲ.

ಮನಸಿನ ಚಿತ್ರ ಬರೆಯೋದು ಹೇಗೆ? ಅದಕ್ಕೆ ವಿವರಣೆಯನ್ನು ಹೇಗೆ, ಎಷ್ಟು ವಾಕ್ಯಗಳಲ್ಲಿ ಬರೆಯಬಹುದು? ಅವಳ ಮನಸಿನಲ್ಲಿ ಹೀಗೆ ಹೇಳಿ ನನ್ನನ್ನು ಹೆದರಿಸುವ ಆಶೆ ಹುಟ್ಟಿದ್ದೇಕೆ? ನನಗಾದರೂ ಅವಳೇನು ಹೇಳ್ತಾಳ ಎಂಬ ಕುತೂಹಲ ಮನಸಿನಲ್ಲಿ ಯಾಕಾದರೂ ಉಂಟಾಯ್ತು? ಪ್ರತಿಸಲದಂತೆ ತಲೆತಗ್ಗಿಸಿ ಹೋಗಿಬಿಡಬಹುದಿತ್ತಲ್ಲ..? ರ‍್ಯಾಗಿಂಗ್ ಅನ್ನೋದನ್ನ ನಾನಾಗೇ ಇಷ್ಟಪಟ್ಟು ಮೈಮೇಲೆ ಎಳೆದುಕೊಂಡೆನಾ?

ಅದಕ್ಕೂ ಮಿಕ್ಕಿ ಹೀಗೆ ಇಂಥಾ ಕಲ್ಪನೆ-ಹೆದರಿಕೆಗಳೆಲ್ಲಾ ಹುಡುಗಿಯರಿಗೇ ಯಾಕೆ ಮೀಸಲು?
ಹುಡುಗರು ಬಿಂದಾಸಾಗಿರ‍್ತಾರಲ್ವಾ? ಹುಡುಗಿಯರಿಗ್ಯಾಕಿರುತ್ತೆ ಬೆಚ್ಚುವಿಕೆ, ಗಾಬರಿ, ದಿಗ್ಭ್ರಮೆ ಎಲ್ಲ?
ಇದು ದೈಹಿಕವೂ ಅಲ್ಲದ, ಮಾನಸಿಕವೂ ಅಲ್ಲದ ಸಾಮಾಜಿಕ ಆಯಾಮ ಎನ್ನುವುದೇ ಆದಲ್ಲಿ ಅಲ್ಲಿಯೂ ಹೆಣ್ಣನ್ನೇ ಹೆದರಿಸುತ್ತದಲ್ಲ ಸಮಾಜ..? ಇದೆಲ್ಲಕ್ಕೂ ಹೊರತಾಗಿ ತಾಯ್ತನದ ನೋವು-ನಲಿವು, ಅವಮಾನ-ಹೆಮ್ಮೆಗಳೂ ಒಬ್ಬ ಹೆಣ್ಣು ಇನ್ನೊಬ್ಬ ಹೆಣ್ಣನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಾಧನಗಳೆ ಆಗುತ್ತವಲ್ಲ.. ಇದಕ್ಕೂ ಸಮಾಜವನ್ನೇ ಹೊಣೆ ಮಾಡೋಣವೇ ಹೇಗೆ?

ಹಾಗೆ ಮಾಡುವುದು ಸಾಧುವೇ? ಸಮಂಜಸವೇ? ಉತ್ತರದ ಹಂಗಿಲ್ಲದ ಪ್ರಶ್ನೆಗಳು ಇವು. ಒಮ್ಮೊಮ್ಮೆ ಹೇಗೇ ಅಲ್ಲವೇ..?
ಉತ್ತರಗಳಿಗಿಂತ ಪ್ರಶ್ನೆಗಳೇ ಹಿತವಾಗಿರುತ್ತವೆ.... ಪ್ರಶ್ನೋತ್ತರಗಳು ಒಂದರೊಳಗೊಂದು ಮಿಳಿತವಾಗಿ, ಯೋಚಿಸಿದಂತೆಲ್ಲ ನಮ್ಮನ್ನು ಬೆಳೆಸುತ್ತಾ ಹೋಗುತ್ತವೆ..

ನಾನು ಸುಮಾರು ದಿನ ಅವಳನ್ನು ಮಾತಾಡಿಸಲು ಹೋಗಲಿಲ್ಲ. ಎದುರಿಗೆ ಕಂಡರೂ ಮುಖ ತಿರುಗಿಸಿದ್ದೆ. ಡೈನಿಂಗ್ ಹಾಲ್ ನಲ್ಲಿ ಅವಳು ನಮ್ಮ ಟೇಬಲ್ ಬಳಿ ಸುಳಿದಾಡಿದರೆ, ಊಟ ಬಿಟ್ಟೇ ಎದ್ದು ಬಂದೆ ಒಂದೆರಡು ಸಲ.
ಆಮೇಲೇನಾಯ್ತೂ ಅಂದ್ರೆ ಅವಳು ನನ್ನ ರೂಂ ಮೇಟ್ ಕೈಯಲ್ಲಿ ಹಿಂದಿನ ವರ್ಷಗಳ ಪ್ರಶ್ನೆಪತಿಕೆಗಳ ಸೆಟ್ ಕೊಟ್ಟು ನನಗೆ ಕೊಡಲು ಹೇಳಿದ್ದಳಂತೆ. ನಾನು ಮೂರ‍್ನಾಲ್ಕು ದಿನ ಅವುಗಳನ್ನು ಮುಟ್ಟಲೇ ಇಲ್ಲ. ಆಮೇಲೆ ಆಗೀಗ ಗುಡ್ ಮಾರ‍್ನಿಂಗ್ ಹೇಳಿದ್ದಳು. ಹೋಗಲಿ ಬಿಡು ಎಂದು ನಾನೂ ಮುಗುಳ್ನಕ್ಕೆ.

ಒಂದಿನ ಕೇಳಿದಳು- ಕ್ವಶ್ಚನ್ ಪೇಪರ್ ರೆಫರ್ ಮಾಡಿದ್ಯಾ ಸುಧಾ ? ನಿನಗೇಂತ ಕೊಟ್ಟಿದ್ದೆನಲಾ..
ನಾನೇನು ಕಮ್ಮಿ..? ಹೇಳಿದೆ... ಮುಟ್ಟಿದ ತಕ್ಷಣ ನಾನು ಪ್ರಗ್ನೆಂಟ್ ಆಗಿಬಿಟ್ರೆ ? ಹಾಗೇನೂ ಆಗೋಲ್ಲ ಅಂತ ನೀನು ಅಶ್ಯೂರೆನ್ಸ್ ಕೊಡು ಮೌಷುಮಿ.. ಆಮೇಲೆನೇ ಕ್ಚಶ್ಚನ್ ಪೇಪರ್ ಮುಟ್ಟೋದು ನಾನು
ಇಬ್ಬರೂ ಗೊಳ್ಳನೆ ನಕ್ಕುಬಿಟ್ಟೆವು. ಎಲ್ಲ ಸರಿಹೋಯ್ತು. ನಂತರ ಅವಳು ತನ್ನ ಡೈನಿಂಗ್ ಟೇಬಲ್ ಗೇನೇ ನನ್ನನ್ನು ಕರೆದುಕೊಂಡಳು. ಒಂದು ವರ್ಷ ಕಾಲ- ನನ್ನ ಬ್ರೆಡ್ ಗೆ ಅವಳು ಬಟರ್ ಸವರಿ, ಅವಳ ಬ್ರೆಡ್ ಮೇಲೆ ನಾನು ಆಮ್ಲೆಟ್ ಹಾಕಿಕೊಟ್ಟು ಹಂಚಿಕೊಂಡು ಊಟ ಮಾಡಿದ ಸವಿರುಚಿಯ ಆ ಸವಿನೆನಪಿಗೆ ಕಣ್ಣಹನಿಗಳೇ ಕಾಣಿಕೆ..!  ಒಂದೇ ರೂಮಿನಲ್ಲಿದ್ದರೆ ಎಷ್ಟು ಚೆನ್ನಾಗಿರ‍್ತಿತ್ತು ಎಂದು ಮಾತಾಡಿಕೊಂಡಿದ್ದೆಷ್ಟೋ ಸಲ. ಆದರೆ ಫಸ್ಟ್ ಪಿಯು ಹುಡುಗಿಯರು ಸೆಕೆಂಡ್ ಪಿಯು ಹುಡುಗಿಯರ ರೂಮಿಗೆ - ಡಿಸ್ಟರ್ಬ ಆಗುತ್ತೆ ಅನ್ನೊ ಕಾರಣಕ್ಕಾಗಿ-ಹೋಗುವಂತಿರಲಿಲ್ಲ. ಹಾಸ್ಟೆಲ್ ರೂಲ್ಸು.. ಆದರೂ ಸಾಕಷ್ಟು ಸಮಯ ಜೊತೆಗೆ ಕಳೆದೆವು. ಲೈಬ್ರೆರಿಯಲ್ಲಿ ಒಳ್ಳೊಳ್ಳೆ ಸೈನ್ಸ್ ಪುಸ್ತಕಗಳನ್ನು ಪರಿಚಯಿಸಿದಳು. ಪರೀಕ್ಷೆಯ ಕೆಲ ಹಿಂಟ್ಸ್ ಹೇಳಿಕೊಟ್ಟಳು. ಮತ್ತು ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಎಂಟ್ರೆನ್ಸ್ ಎಕ್ಸಾಮ್ ನಲ್ಲಿ ಒಳ್ಳೆ ಅಂಕಗಳೊಂದಿಗೆ ಸೆಲೆಕ್ಟ್ ಆದಳು.

ಡೆಕ್ಕನ್ ಕ್ರಾನಿಕಲ್ ಪತ್ರಿಕೆಯಲ್ಲಿ ಅವಳ ಫೊಟೋ ಬಂದಿತ್ತು ( ೧೯೮೯ ಬ್ಯಾಚ್)

ನಂತರ ಅವಳದೊಂದು ದಾರಿ.. ನನ್ನದೊಂದು ದಾರಿ..

ಇಷ್ಟೆಲ್ಲಾ ಯಾಕೆ ದಿಢೀರನೆ ತಲೆಯೊಳಗಿಂದ ಎದ್ದು ಬಂದಿತೆಂದರೆ, ಇತ್ತೀಚೆಗೆ ಮಗಳನ್ನು ಸೇರಿಸಲು ಅದೇ ಬೆಂಗಳೂರಿನಲ್ಲೊಂದು ಇಂಜಿನಿಯರಿಂಗ್ ಕಾಲೇಜಿಗೆ ಹೋಗಿದ್ದೆನಲ್ಲಾ.. ಅಲ್ಲಿ ಕಾಲೇಜು, ಹಾಸ್ಟೆಲ್ ಎರಡೂ ಕಡೆ ರ‍್ಯಾಗಿಂಗ್ ನಿಷೇಧಿಸಲಾಗಿದೆ  ರ‍್ಯಾಗಿಂಗ್ ಶಿಕ್ಷಾರ್ಹ ಅಪರಾಧ ಎಂಬ ಬೋರ್ಡುಗಳು ಢಾಳಾಗಿ ಕಂಡವು. ಮೌಷುಮಿಯನ್ನು ನೆನಪಿನಿಂದ ಮೇಲೆತ್ತಿದವು.


ನನ್ನ ನೆನಪು, ನನ್ನ ಆಸ್ತಿ, ನನಗೆ ಸ್ವಂತ.. ..


It so sensitively happened in my life, once upon a time..!

ಇನ್ನು ಬರೆಯದೆ ಬಿಡುಗಡೆಯೆಲ್ಲಿ.. ತೇವಗೊಂಡ ಕಂಗಳೊಂದಿಗೆ.. ?!

ಥ್ಯಾಂಕ್ಯೂ ಮೌಷುಮಿ, ಥ್ಯಾಂಕ್ಯೂ ರ‍್ಯಾಗಿಂಗ್ ಎನ್ನದೇ ವಿಧಿಯೆಲ್ಲಿ, ನೆನಪಿನ ಗುಂಗಿನೊಂದಿಗೆ ?!
***

ಸುಧಾ ಚಿದಾನಂದ ಗೌಡ (೧೯೭೦) ಓದು ಬರಹಗಳೆಡೆಗೆ ತೀವ್ರ ತುಡಿತ ಇರುವ ಕವಿ. ಶೇಕ್ಸ್‌ಪಿಯರ್ ಕುರಿತು ಎಂಫಿಲ್ ಮಾಡಿರುವ ಸುಧಾ ಮೂರು ಕಥಾ ಸಂಕಲನಗಳು, ಒಂದು ಕವನ ಸಂಕಲನ, ಒಂದು ಪ್ರಬಂಧ ಸಂಕಲನ ಹಾಗೂ ಒಂದು ಸಂಶೋಧನಾ ಕೃತಿಯನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸರ್ಕಾರಿ ಪಪೂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿದ್ದಾರೆ. ಸೇಡಂನ ಅಮ್ಮ ಪ್ರಶಸ್ತಿ, ಕವನಸಂಕಲನಕ್ಕೆ ಕರ್ನಾಟಕ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ ಮೊದಲಾದ ಮನ್ನಣೆಗಳನ್ನು ಗಳಿಸಿದ್ದಾರೆ.

ವಿಳಾಸ: ಉಪನ್ಯಾಸಕರು, ಇಂಗ್ಲಿಷ್ ವಿಭಾಗ, ಸರ್ಕಾರಿ ಪಪೂ ಕಾಲೇಜು, ಹಗರಿಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ.

nrsudhachi@gmail.com

9481566894


-ಸುಧಾ ಚಿದಾನಂದಗೌಡ
ಹಗರಿಬೊಮ್ಮನಹಳ್ಳಿ
No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...