Tuesday, December 01, 2015

ಜಾಗತೀಕರಣದ ವೈಪರೀತ್ಯದ ಧಾವಂತದಲ್ಲಿ ಅನ್ನದಾತನ ಅಸಹಜ ಸಾವು!ಮಂಜುನಾಥ ಉಲುವತ್ತಿ ಶೆಟ್ಟರ್


ಕಳೆದ ನಾಲ್ಕು ದಶಕಗಳಲ್ಲಿ ನಾವು ಕೃಷಿ ಉತ್ಪನ್ನವನ್ನು ಹೆಚ್ಚು ಮಾಡುವ ನೆಪದಲ್ಲಿ ಸುಧಾರಿತ ಹೈಬ್ರೇಡ್ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಅತಿಯಾಗಿ ಬಳಸಿಕೊಂಡು ದೊಡ್ಡ ಪ್ರಮಾಣದಲ್ಲಿ ಉತ್ಪನ್ನ ಮಾಡಿದ್ದಾಯಿತು, ಇಂದು ನಾವು ಜಾಗತೀಕರಣವೆಂಬ ಕಬಂಧಬಾಹುಗಳ ಮಾರುಕಟ್ಟೆ ವ್ಯವಸ್ಥೆಯ ಪೂರ್ವ ನಿರ್ಧರಿತ ದಾಳಗಳಲ್ಲಿ ಬಂಧಿಯಾಗಿ ಕೃಷಿ ವಲಯದಲ್ಲಿ ಸೆರೆಯಾದವರ, ಅದನ್ನೇ ಬಹುವಾಗಿ ನಂಬಿದವರ ಬದುಕನ್ನು ಕಗ್ಗೊಲೆ ಮಾಡುತ್ತಲೇ ಮುಂದೆ ಸಾಗುತ್ತಿದ್ದೇವೆ. ಕಳೆದ ಮೂರು ದಶಕಗಳಲ್ಲಿ ಆಧುನಿಕ ಕೃಷಿ ಸಂಬಂಧಿ ಪರಿಕರಗಳ ಬಳಕೆಯಿಂದ ಭೂಮಿಯ ಮೇಲ್ಮೈಯ ಫಲವತ್ತತೆಯು ನಾಶವಾಗಿದೆಯಲ್ಲದೆ, ಭೂಮಿಯ ಫಲವತ್ತತೆಯ ಮುಕ್ಕಾಲು ಭಾಗ ಸಾರ ಕಳೆದುಕೊಂಡಿದೆ. ಈಗ ಸಹಜ ಕೃಷಿಯಿಂದ ಭೂಮಿಯನ್ನು ಈಗಲೇ ಸಾರಯುಕ್ತ ಮಾಡಲು ಸಾಧ್ಯವೇ?


ಈಗಾಗಲೇ ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕದೆ ಕಂಗಾಲಾಗಿರುವ ಕೃಷಿಕನು ಜರ್ಜರಿತನಾಗಿ ಆತ್ಮಹತ್ಯೆಯ ಕಡೆ ಮುಖ ಮಾಡಿರುವುದು ಜಗಜ್ಜಾಹೀರಾಗಿದೆ. ಆಧುನಿಕತೆಯ ವಿಷವರ್ತುಲದ ಆರ್ಥಿಕ ಸಂಕಷ್ಟದ ಪರಧಿಯೊಳಗೆ ರೈತ ಬಂಧಿತನಾಗಿದ್ದಾನೆ. ಈಗ ಕೃಷಿಕನು ಸಹಜ ಕೃಷಿಯನ್ನು ಮಾಡಲು ಹೋದರೆ ಹಿಂದೆ (ಹೈಬ್ರೆಡ್ ಬೀಜಗಳನ್ನು ಬಳಕೆ ಮಾಡಿದ ಮೇಲೆ)ಒಂದು ಏಕರೆ ಪ್ರದೇಶದಲ್ಲಿ 30 ಕ್ವಿಂಟಾಲ್ ಇಳುವರಿ ಬರುತ್ತಿದ್ದ ಧಾನ್ಯವು ಈಗ 8ರಿಂದ 10 ಕ್ವಿಂಟಾಲ್ ಬರಬಹುದು ಇಲ್ಲವೇ ವಿಕೋಪದ ವೈಪರೀತ್ಯದಿಂದ ಅದೂ ಬಾರದೆ ಇರಬಹುದು. ಕೃಷಿಕನು ಸಹಜ ಕೃಷಿಯತ್ತ ಈಗ ಮುಖ ಮಾಡಿದರೆ ಭೂಮಿಯು ಅದರ ಮೂಲ ಫಲವತ್ತತೆಯ ಸ್ಥಿತಿಗೆ ಬರಬೇಕಾದರೆ ಕನಿಷ್ಠವೆಂದರೂ ಒಂದು ದಶಕವಾದರೂ ಬೇಕು. ಅಲ್ಲಿಯತನಕ ಕೃಷಿಕನ ದೈನಂದಿನ ಪಾಡೇನು?. ಜಾಗತೀಕರಣದ ಭರಾಟೆಯಲ್ಲಿ ಬೆಲೆಗಳ, ಕೃಷಿ ನೀತಿಗಳ ತಾಕಲಾಟಗಳಲ್ಲಿ ಆರ್ಥಿಕವಾಗಿ ನಲುಗಿ ಹೋಗಿರುವ ಅನ್ನದಾತನು ಸಹಜ ಕೃಷಿ ಕೈಗೊಂಡು ಕಡಿಮೆ ಉತ್ಪನ್ನದಲ್ಲಿ ತನ್ನ ದೈನಂದಿನ ಬದುಕನ್ನು ಮಾಡಲು ಸಾಧ್ಯವೇ?


 ಈ ದೇಶದ ಕೃಷಿಕ ಎದುರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರೈತನ ಬಿಡುಗಡೆಯ ಅನುಕರಣೀಯ ಮಾದರಿಯಾಗಿ ಕಾಣುವ ಪುಕುವೋಕನ ಕೃಷಿದರ್ಶನದ ನಾಲ್ಕು ತತ್ತ್ವಗಳನ್ನು ಅನುಸರಿಸುವ ಮೊದಲು ಅದರಲ್ಲಿರುವ ವಾಸ್ತವಾಂಶದ ಬಗ್ಗೆ ಅರಿವು ಮಾಡಿಕೊಳ್ಳಬೇಕು. ಹಸಿರುಕ್ರಾಂತಿಯ ಮೂಲಕ ಈಗಾಗಲೇ ಆಹಾರ ಉತ್ಪಾದನೆ ಹೆಚ್ಚಿದ್ದೇನೋ ನಿಜ ಆದರೆ 1992ರ ನಂತರ ಹೊಸ ಆರ್ಥಿಕ ನೀತಿಯನ್ನು ನಾವು ಒಪ್ಪಿಕೊಂಡ ಮೇಲೆ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅವು ಯಾವುವೆಂದರೆ, ಒಂದು ಬೆಲೆಯ ಕುಸಿತ, ಇನ್ನೊಂದು ಕೃಷಿಕ ಬೆಳೆದ ಉತ್ಪನ್ನಗಳನ್ನು ಸಂಗ್ರಹಿಸಿಡುವ ದಾಸ್ತಾನು ಮಳಿಗೆಗಳ ಕೊರತೆ. ಬೆಲೆ ಕುಸಿದಾಗ ಆಹಾರಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡಿ ಕೊರತೆ ಕಂಡು ಬಂದ ಪ್ರದೇಶಗಳಲ್ಲಿ ಕ್ರಮಬದ್ಧವಾಗಿ ಹಂಚಲು ಸಕಲ ಏರ್ಪಾಡುಗಳನ್ನು ನಾವು ಮಾಡಿಕೊಂಡಿದ್ದೇವೆಯೇ?. ಆಹಾರ ನಿಗಮಗಳ ಮೂಲಕ ಇಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ಅದು ಸಾಧ್ಯವಾಗಿದೆಯೇ ಎಂಬುದೇ ಯಕ್ಷಪ್ರಶ್ನೆ. ಈಗಾಗಲೇ ವರದಿಗಳು ಪ್ರಕಟ ಮಾಡಿದಂತೆ, ದಾಸ್ತಾನು ಮಾಡಿದ ಆಹಾರ ಧಾನ್ಯದಲ್ಲಿ ಶೇ.25ರಿಂದ 30ರಷ್ಟು ಇಲಿ, ಹೆಗ್ಗಣಗಳ ಪಾಲಾಗುತ್ತಿವೆ. ಉಗ್ರಾಣಗಳ ಕೊರತೆಯಿಂದ ಬಿಸಿಲು, ಧೂಳುನಿಂದ ಹಾಳಾಗುತ್ತಿರುವ ಧಾನ್ಯದ ನಷ್ಟವನ್ನು ಕೊನೆಯದಾಗಿ ಬರಿಸುವುವರಾರು? ಅದೇ ಅನ್ನದಾತ ತಾನೇ!.


ದೇಶದ ಬೆನ್ನುಲುಬಾದ ರೈತರು ಕಾರ್ಪೊರೇಟ್ ಸಂಸ್ಥೆಗಳ ದಾಳಿಯಿಂದಾಗಿ ಈಗಾಗಲೇ ಬೆನ್ನುಮೂಳೆಯನ್ನು ಮುರಿಸಿಕೊಂಡಾಗಿದೆ. ರೈತ ಈಗ ವ್ಯವಸ್ಥೆಯ ಗೊಂದಲಗಳ ನಿರ್ಧಾರಗಳಿಂದ ಕೃಷಿಯಿಂದ ವಿಮುಖನಾಗಬೇಕೆನ್ನುವ ತರಾತುರಿಯಲ್ಲಿದ್ದಾನೆ. ಒಂದು ವೇಳೆ ವಿಮುಖನಾದ ಮೇಲೇನು ಎಂಬ ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ನಿರಂತರ ಶೋಧನೆ ನಡೆಸಿದ್ದಾನೆ. ಕೊನೆಯದಾಗಿ ಯಾವುದೇ ಮಾರ್ಗ ಸರಿಬಾರದೇ ಇದ್ದಾಗ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ನಮ್ಮ ದೇಶದಲ್ಲಿ ಇಂದು ಆಧುನಿಕತೆಯ ಒಲೈಕೆಯಲ್ಲಿ ವಾಸ್ತವಿಕತೆಯನ್ನು ಮರೆಮಾಚುವ, ಸಮಸ್ಯೆಯನ್ನು ಸಮಸ್ಯೆಯಾಗಿ ಉಳಿಸಿಕೊಂಡು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಒಂದು ವರ್ಗವು ಅವಿರತವಾಗಿ ಶ್ರಮಿಸುತ್ತಿದೆ. ಆದರೆ ಅನ್ನದಾತನ ಸಂಕಷ್ಟಕ್ಕೆ ಯಾರೂ ತಲೆಕೆಡಿಸಿಕೊಂಡಂತಿಲ್ಲ.

ಅನ್ನದಾತನನ್ನು ಸಾಲದಿಂದ ಮತ್ತು ಸಾವಿನ ದವಡೆ ಯಿಂದ ಪಾರು ಮಾಡುವ ಒಂದೇ ಉಪಾಯವೆಂದರೆ ಪ್ರಾದೇಶಿಕವಾಗಿ ಬೆಳೆಯುವ ಕೃಷಿ ಉತ್ಪನ್ನಗಳಿಂದ ಕೃಷಿಕರಿಗೆ ಅಲ್ಪ ಪ್ರಮಾಣದಲ್ಲಾದರೂ ಲಾಭ ಆಗುವ ರೀತಿಯಲ್ಲಿ ಬೆಲೆ ನಿಗದಿ ಮಾಡಬೇಕು. ಒಂದು ವೇಳೆ ಪ್ರಕೃತಿ ವಿಕೋಪಗಳಿಂದ ಮತ್ತು ಕೀಟಬಾಧೆಯಿಂದ ಬೆಳೆ ಹಾಳಾಗುವ ಸ್ಥಿತಿಯಿದ್ದರೆ ತಕ್ಷಣವೇ ವಿಮಾ ಸೌಲಭ್ಯದ ಅಡಿಯಲ್ಲಿ ಅದರ ನಷ್ಟವನ್ನು ಭರಿಸಿಕೊಡಬೇಕು. ಸದ್ಯದ ವಿಮಾ ವ್ಯವಸ್ಥೆಯಲ್ಲಿರುವ ಕೆಲ ತಾಂತ್ರಿಕ ತೊಡಕುಗಳನ್ನು ನಿವಾರಿಸಿ, ಕೃಷಿಕರು ಕಡ್ಡಾಯವಾಗಿ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅನ್ನದಾತನ ಆತ್ಮಸ್ಥೈರ್ಯ ಹೆಚ್ಚಿಸಲು ಆತನ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಆತನನ್ನು ಮಾನಸಿಕವಾಗಿ ಸದೃಢಗೊಳಿಸಲು ವಿವಿಧ ಸಂಘಟನೆಗಳು,ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಈ ಸಾಮಾಜಿಕ ಜವಾಬ್ದಾರಿಯನ್ನು ತಮ್ಮ ಖಾಸಗಿ ಜವಾಬ್ದಾರಿಯಂತೆ ನಿರ್ವಹಿಸಿದಾಗ ಮಾತ್ರ ಆತನನ್ನು ಸಂಕಷ್ಟದಿಂದ ಪಾರು ಮಾಡಬಹುದು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...