Wednesday, December 02, 2015

ಕಳಸಾ ಬಂಡೂರಿ-ಎತ್ತಿನ ಹೊಳೆ ಯೋಜನೆ ಒಂದೇ ನಾಣ್ಯದ ಎರಡು ಮುಖಗಳೇ?!


ಅನುಪಮಾ ಪ್ರಸಾದ್. ಸಮೃದ್ಧ ನದಿಗಳ ನಾಡಾದ ಅವಿಭಜಿತ ದಕ್ಷಿಣ ಕನ್ನಡವನ್ನು ದಾಟಿ ಕರಾವಳಿ, ಮಲೆನಾಡುಗಳ ಸೆರಗು ಹಾದು ಮುಂದುವರಿಯುತ್ತಿದ್ದಂತೆ ದಿಗಂತದಂಚಿಗೇ ಸಾಗಿದಂತೆನಿಸುವ ತಿರುವುಗಳಿಲ್ಲದ; ಏರಿಳಿತಗಳಿಲ್ಲವೆನಿಸುವ ಉದ್ದಾನುದ್ದ ರಸ್ತೆ; ಯಾವ ದಿಕ್ಕಿಗೆ ಕಣ್ಣು ಹಾಯಿಸಿದರೂ ಕಾಣುವ ವಿಸ್ತಾರದ ಒಣ ನೆಲ, ಹೊಲ-ಬಯಲು ಕಾಣಲು ಸುರುವಾಯಿತೆಂದರೆ ಬಯಲುಸೀಮೆಗೆ ಕಾಲಿಟ್ಟಾಯಿತೆಂದೇ ಲೆಕ್ಕ. ಜೊತೆಗೇ ಗವಗವ ರಾಚುವ ಬಿಸಿಲು. ಹುಚ್ಚು ಗಾಳಿಯ ಆವೇಶಕ್ಕೆ ಸದಾ ಹಾರುತ್ತಿರುವ ಧೂಳು. ಪಂಪ ಇಂದಿಗೂ ಸಮೃದ್ಧ ಮಲೆನಾಡು ಬನವಾಸಿಯನ್ನು ಹಂಬಲಿಸಿದರೆ ಲಕ್ಷ್ಮೀಶ ತನ್ನ ಬಯಲುನಾಡು ಲಕ್ಷ್ಮೇಶ್ವರದ ದಾಹ ನೆನೆದು ಹಲುಬಬೇಕು. ಲಕ್ಷ್ಮೇಶ್ವರವೆಂದಲ್ಲ ಹುಬ್ಬಳ್ಳಿ, ಧಾರವಾಡಗಳಾಚೆಯ ಸಾಲು ಸಾಲು ಬಯಲು ಸೀಮೆಯ ಊರುಗಳು- ಅದು ಬಂಕಾಪುರವಾಗಿರಲಿ, ಗಾನಗಂಗೆಯ ಹಾನಗಲ್ ಆಗಿರಲಿ, ನಾರಣಪ್ಪನ ಗದಗವಾಗಿರಲಿ ಅದರಾಚೆಯ ಬೆಟಗೇರಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ- ಎಲ್ಲವೂ ಒಂದಕ್ಕಿಂತ ಒಂದು ಐತಿಹಾಸಿಕ ಮಹತ್ವವಿರುವಂತವುಗಳೇ. ಇನ್ನೂ ಮುಂದೆ ಮುಂದೆ  ಹೋದಂತೆ ಹವಾಮಾನ ವೈಪರೀತ್ಯಗಳ ಹುಚ್ಚು ಹೊಳೆ. ಧನುರ್ಮಾಸ-ಮಾಘ ಮಾಸಗಳಲ್ಲಂತು ಹಗಲಿನಲ್ಲಿ ಮೈ ಚುಚ್ಚುವ ಬಿಸಿಲು ಚಳಿಗಳ ಮೇಲಾಟವಾದರೆ ರಾತ್ರಿ ಗದಗುಡುವ ಚಳಿ.

 ಕರ್ನಾಟಕದ ರಾಜಾಡಳಿತ ಕಾಲದ ಚರಿತ್ರೆಯಲ್ಲಿ ಅದರಲ್ಲೂ ಶಿಲ್ಪಕಲೆಯ ಕೃಷಿಗಳಲ್ಲಿ ಅಪ್ಪಟ ಬಯಲು ಸೀಮೆ ನಾಡಾದ ಬಾದಾಮಿ, ಪಟ್ಟದಕಲ್ಲು, ಐಹೊಳೆಗಳಿಗೆ ಪ್ರಮುಖ ಸ್ಥಾನವಿದೆ. ಈ ಊರುಗಳ ಹೆಸರು ಕೇಳಿದರೇ ಅನೂಹ್ಯ ವೈಭವದ ಚಿತ್ರಣ ಕಣ್ಣೊಳಗೆ ತೆರೆದುಕೊಳ್ಳುತ್ತದೆ. ಪಟ್ಟದ ಕಲ್ಲು, ಐಹೊಳೆಗಳಲ್ಲಿ ಕಡೆದು ಕೆತ್ತಿ ನಿರ್ಮಿಸಿದ ಶಿಲ್ಪಕಲೆಗಳಾದರೆ ಬಾದಾಮಿಯ ಗುಹೆಗಳೆಂದರೆ ಕಲ್ಲುಬೆಟ್ಟಗಳ ಸಾಲನ್ನೇ ಕೊರೆದು ನಿರ್ಮಿಸಿದ ಗುಹೆಗಳು.ಇಲ್ಲಿ ಬರುವ ಪ್ರವಾಸಿಗಳಿಗೆ ಶಿಲ್ಪಕಲೆಯ ಭೂರಿ ಭೋಜನ ಸವಿದು ಹೋಗುವ ಸಂಭ್ರಮವಾದರೆ; ಅಲ್ಲಿಯ ನಿವಾಸಿಗಳಿಗೆ ಮೂಲಭೂತ ಅವಶ್ಯಕತೆಗಳ ತತ್ವಾರದೊಂದಿಗೆ ಇದೇ ಗತವೈಭವವೂ ಮುಳುವಾಗುತ್ತಿದೆ.  

 ಚಾರ್ಮಾಡಿ, ಆಗುಂಬೆ, ಶಿರಾಡಿ, ಬಾಳೆಬರೆ, ಕೊಲ್ಲೂರು ಅಥವಾ ಇನ್ನಾವುದೇ ಘಾಟಿಗಳಲ್ಲೊ ಕಾಣುವ ಪಶ್ಚಿಮ ಘಟ್ಟಗಳ ಸೆರಗಿನಂತೆ ಹೆಚ್ಚು ಕಡಿಮೆ ಈ ಬಯಲು ಸೀಮೆಯ ಹಾದಿಗುಂಟ ಕಲ್ಲುಬೆಟ್ಟದ ಸೆರಗು. ಪಶ್ಚಿಮ ಘಟ್ಟದ ನಡುವೆ ಹಾದು ಹೋಗುವಾಗ ಕಣ್ಣಿಗೆ ಮನಸಿಗೆ ತಂಪಿನ ಅನುಭವವಾದರೆ ಈ ಹಾದಿಯುದ್ದಕ್ಕು ಸಾಗುವಾಗ ಭಣಗುಡುವ  ಒಣಭೂಮಿ; ಅಲ್ಲಲ್ಲಿ ಕಾಣ ಸಿಗುವ ಮುಳ್ಳು ಪೊದರುಗಳ ಕಲ್ಲುಬೆಟ್ಟಗಳು ಮನಸಿನ ತುಂಬ ಒಂದು ಬಗೆಯ ವಿಷಣ್ಣತೆಯನ್ನು, ಅರ್ಥವಾಗದ ಪಶ್ಚಾತ್ತಾಪ ಭಾವವನ್ನು ತುಂಬಿ ಬಿಡುತ್ತದೆ. ಹಾಗೆಯೇ ಈ ತಾಣಗಳನ್ನು ತಲುಪುವ ಹಾದಿಯ ಇಕ್ಕೆಲಗಳಲ್ಲಿರುವ ಸ್ಥಳಿಯ ಜನರ ಜೀವನ ಮಟ್ಟವನ್ನ ನೋಡುತ್ತ ಸಾಗುವಾಗ ಕೋಟೆ ಕೊತ್ತಲಗಳ, ಬುರುಜುಗಳ, ಶಿಲ್ಪಕಲೆಗಳ ವೈಭವದ ಕಲ್ಪನೆಗಳೆಲ್ಲ ಕಳೆದು ವರ್ತಮಾನದ ವಾಸ್ತವ ಕಣ್ಣಿಗೆ ರಾಚುತ್ತದೆ. ಈ ಭಾಗಗಳಲ್ಲೆಲ್ಲ ರಸ್ತೆಯ ಇಬ್ಬದಿಗಳಲ್ಲು ಮನೆಯೆಂದು ಕರೆಯಬಹುದಾದ ಪುಟ್ಟ ಪುಟ್ಟ ಗೂಡುಗಳು. ಕೆಲವು ಮನೆಗಳಿಗಂತು ಚಾಚಿಕೊಂಡ ಬಂಡೆಗಲ್ಲಿನ ಒಂದು ಭಾಗವೇ ಗೋಡೆ. ಹಿತ್ತಿಲುಗಳ ಪ್ರಶ್ನೆಯೇ ಇಲ್ಲ. ಪಾತ್ರೆ ತೊಳೆಯುವುದಿರಲಿ, ಬಟ್ಟೆ ತೊಳೆಯುವುದಿರಲಿ ಎಲ್ಲಾ ಮನೆಯೆದುರೇ. ಸಾಲು ಮನೆಗಳ ತ್ಯಾಜ್ಯ ನೀರು ಹರಿಯುವುದು ರಸ್ತೆಗೇ. ಇನ್ನು ಅಲ್ಲೇ ಆಸು ಪಾಸಿನಲ್ಲಿ ಚೆಂಬು ಇಟ್ಟುಕೊಂಡು ಶೌಚಕ್ಕೆ ಕುಳಿತುಕೊಳ್ಳುವುದಂತು ಮಾಮೂಲು ಸಂಗತಿ. ಇಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಶೌಚಾಲಯಕ್ಕೆ ಸುರಿಯಲು ಲೀಟರುಗಟ್ಟಲೆ ನೀರು ತರಲು ಎಲ್ಲಿಗೆ ಹೋಗಬೇಕು? ಸಾಮಾನ್ಯವಾಗಿ ಹಗಲಿನಲ್ಲಾದರೆ ಶೌಚ ಕಾರ್ಯಕ್ಕೆ ಚೆಂಬು ಹಿಡಿದು ಉದ್ದಾನುದ್ದ ಬಯಲಿನಲ್ಲಿ ಮುಳ್ಳು ಪೊದರುಗಳನ್ನ ಹುಡುಕಿ ಹೋಗುವ ಹಿರಿಯರು, ಸಣ್ಣ ಮಕ್ಕಳಾದರೆ ರಸ್ತೆಯ ಆ ಬದಿ ಈ ಬದಿಗಳನ್ನೇ ಆಯ್ದುಕೊಳ್ಳುತ್ತಾರೆ. ಸಂಜೆಯ ಹೊತ್ತಿಗಾದರೆ ದಾರಿ ಹೋಕರು ತಮ್ಮ ಕಣ್ಣಿಗೆ  ಕಾಣಿಸುವುದೇ ಇಲ್ಲವೆಂಬಂತೆ ಕುಳಿತ ಹೆಂಗಸರು ಹುಡುಗಿಯರೂ ವಾಹನದ ಬೆಳಕಲ್ಲಿ ಕಾಣ ಸಿಗುತ್ತಾರೆ. ಹಂದಿಗಳಂತು ಇವರ ಬೆನ್ನಿಗೇ ಇರುತ್ತವೆ.

ಕರಾವಳಿ-ಮಲೆನಾಡುಗಳಲ್ಲಿ ನೆನೆದರೆ ಸಿಗುವಂತಿರುವ ಜೀವ ನದಿಗಳು, ಹೊಳೆ-ಹಳ್ಳಗಳು ಈ ಭಾಗಗಳಲ್ಲಿ ಮಾರು ದೂರ ಸರಿದಿವೆ. ಎಲ್ಲೋ ಅಲ್ಲಲ್ಲಿ ಕಾಣ ಸಿಗುವ ಬತ್ತಿದ ಕೆರೆ ಕಟ್ಟೆಗಳಲ್ಲಿ ಒಂದೆಡೆ ಎಮ್ಮ್ಮೆಗಳಿಗೆ ಜಾಗ ಬೇಕು. ಮತ್ತೊಂದೆಡೆ ಪಾತ್ರೆ-ಬಟ್ಟೆ ತೊಳೆಯುವ ಹೆಂಗಸರಿಗೆ, ಸ್ನಾನಕ್ಕೆ ಜಾಗ ಬೇಕು. ವಿಪರ‍್ಯಾಸವೆಂದರೆ ಬಯಲು ಸೀಮೆಯ ಮುಕ್ಕಾಲಂಶವೂ ಕೃಷಿ ಆಧಾರಿತ ಬದುಕು. ಕೃಷಿ ಅಂದರೆ  ಅಡಿಕೆ-ರಬ್ಬರ್‌ಗಳಂತಹ ಯಾವುದೇ ವಾಣಿಜ್ಯ ಕೃಷಿಗಳಲ್ಲ. ಅಪ್ಪಟ ರೈತಾಪಿ ಬೆಳೆಗಳು. ಅದರಲ್ಲೂ ಪೌಷ್ಠಿಕಾಂಶಗಳ ಆಗರವಾದ ಸಜ್ಜೆ, ನವಣೆ, ಸಾಮೆ, ಜೋಳ, ರಾಗಿ ಹಾಗೆಯೇ ಹತ್ತಿ, ಸೂರ್ಯಕಾಂತಿ, ಶೇಂಗಾ - ಇತ್ಯಾದಿಗಳ ಬೆಳೆಗಾರರು. ಒಂದು ಕಾಲದಲ್ಲಿ ನೀರಿನ ಗಣಿಯಾಗಿದ್ದಿರಬಹುದಾದ ನಮು ನಮೂನೆಯ ಬಾವಿಗಳು, ಕೆರೆ-ಕಟ್ಟೆಗಳು ಇಂದು ಪಳೆಯುಳಿಕೆಗಳಾಗಿ ಬಯಲು ಸೀಮೆಯ ನಾಡಲ್ಲಿ ಕೆಲವೆಡೆ ಬಣಗುಡುತ್ತಿವೆ. ಹೀಗೇಕಾಯ್ತು? ಇಲ್ಲಿಯ ಭೌಗೋಳಿಕ ಸ್ಥಿತಿ ಒಂದು ಕಾರಣವಾಗಿರಬಹುದಾದರೂ, ಈ ಪ್ರಮಾಣದಲ್ಲಿ ನೀರಿನ ಒರತೆ ಮರೆಯಾಗಲು ಕಾರಣವೇನು ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿಯ ನೀರಿನ ತತ್ವಾರವನ್ನು ನೋಡುವಾಗ, ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಅನ್ನವ ಗಾದೆಯನ್ನ ನೀರು ಕಂಡರೆ ಹೆಣವೂ ಬಾಯಿ ಬಿಟ್ಟೀತು ಎಂದು ಬದಲಿಸಿಕೊಳ್ಳಬೇಕೇನೋ ಅನಿಸುತ್ತದೆ. ಇಂತಹ ಭೌಗೋಳಿಕ ಸ್ಥಿತಿಯನ್ನ ಪ್ರಕೃತಿ ತನ್ನ ಸಮತೋಲನಕ್ಕಾಗಿಯೇ ನಿರ್ಮಿಸಿಕೊಂಡಿದೆಯೋ ಅಥವಾ ಯಾವ ಕಾಲದಲ್ಲೋ ನಡೆದಿರಬಹುದಾದ ಭೌಗೋಳಿಕ ಸ್ಥಿತ್ಯಂತರದಿಂದಾಗಿ ಆಯಿತೋ ಅಥವಾ ನಾಗರೀಕ ಮಾನವನ ಅಭಿವೃದ್ದಿ ಪಥದಿಂದಾಗಿಯೇ ಈ ಅಸಮತೋಲನವೋ. ಆದರೆ, ಇಲ್ಲಿಯ ನೀರಿನ ಬವಣೆಯಿಂದಾಗಿ ಯಾತನೆಯ ಬದುಕನ್ನು ಬಾಳುತ್ತಿರುವ ಜನರನ್ನು ನೋಡಿದಾಗ ಯಾರಿಗೇ ಆದರೂ, ಯಾವುದೇ ಮೂಲದಿಂದಾದರೂ ಇಲ್ಲಿ ನೀರು ಹರಿಯಬೇಕು ಅನಿಸದಿರುವುದಿಲ್ಲ. ಆದರೆ, ಒಂದು ಭೂ ಭಾಗದ ಪ್ರಾಕೃತಿಕ ಸಮಸ್ಯೆಯ ಪರಿಹಾರಕ್ಕೆ  ಇನ್ನೊಂದು ಭೂಭಾಗದ ಪ್ರಾಕೃತಿಕ ಮೂಲವನ್ನು ಮುಟ್ಟುವ ಮೊದಲು ಅದರ ಸಾಧ್ಯಾ ಸಾಧ್ಯತೆಗಳು, ಅದು ಸಮಂಜಸ ಹೌದೋ ಅಲ್ಲವೋ ಅನ್ನುವ ಬಗ್ಗೆ ಸಮೂಲಾಗ್ರವಾಗಿ ತಜ್ಞರ ಸಮಿತಿಯನ್ನಿಟ್ಟುಕೊಂಡು ಅಧ್ಯಯನ ನಡೆಸಬೇಕು. ಅದು ರಾಜ್ಯಗಳ ಅಥವಾ ಜಿಲ್ಲೆಗಳ ಪ್ರಶ್ನೆಯಾಗಬಾರದು. ರಾಷ್ಟ್ರದ ಪ್ರಶ್ನೆಯಾಗಿ ಮತ್ತಷ್ಟು ವಿಶಾಲವಾಗಿ  ಭೂಮಿಯ ಜೀವಜಾಲದ ಪ್ರಶ್ನೆಯಾಗಬೇಕು. ಕಳಸಾ ಬಂಡೂರಿ ನಾಲಾ ಯೋಜನೆಗೆ ಸಂಬಂಧ ಪಟ್ಟಂತೆ ನೋಡುವುದಾದರೆ, ಈ ಬಗ್ಗೆ ನಡೆದ ರಾಜ್ಯಾತೀತ ತಜ್ಞ ಸಮಿತಿಯ ಅಧ್ಯಯನಗಳು ನೇತ್ಯಾತ್ಮಕ ವರದಿಗಳನ್ನು ನೀಡಿಲ್ಲ. ವ್ಶೆಜ್ಞಾನಿಕ ಅಧ್ಯಯನಗಳ ವರದಿಯ ಪ್ರಕಾರವೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಹುಟ್ಟುವ ಮಹದಾಯಿ ನದಿಗೆ ಅನೇಕ ಉಪನದಿಗಳಿದ್ದು ಈ ಪ್ರದೇಶ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಸರಾಸರಿ ೩, ೧೩೪ ಮಿಲಿಲೀಟರ್ ಮಳೆ ಬೀಳುತ್ತದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ‘ನೀರಿ’ (ನ್ಯಾಷನಲ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಟ್ಯೂಟ್); ಈ ಯೋಜನೆಯಿಂದ ಯಾವುದೇ ಹಾನಿಯಿಲ್ಲ. ಮಹದಾಯಿ ಕಣಿವೆ, ನೀರಿನ ಕೊರತೆ ಇರುವ ಪ್ರದೇಶವಲ್ಲ. ಮುಂಗಾರು ನಂತರ ಈ ನದಿ ನೀರಿನ ಹರಿಯುವಿಕೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಿಲ್ಲವೆಂದೇ ವ್ಶೆಜ್ಞಾನಿಕ ಅಧ್ಯಯನದ ಸುದೀರ್ಘ ರಿಪೋರ್ಟ್ ಕೊಟ್ಟಿದೆ. ಮುಂಗಾರುವಿನ ನಂತರ ನೀರಿನ ಹರಿಯುವಿಕೆಯಲ್ಲಿ ವ್ಯತ್ಯಯವಾಗುವುದಿಲ್ಲವೆನ್ನುವುದು ಮಹತ್ವದ ಅಂಶ.

ರಾಷ್ಟ್ರೀಯ ನೀರಿನ ಅಭಿವೃದ್ದಿ ಸಮಿತಿ, ಕೇಂದ್ರ ಜಲ ಆಯೋಗ ಅಧ್ಯಯನಗಳ ವರದಿಯೂ ಹೀಗೆಯೇ ಇದ್ದರೂ ಗೋವಾ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ತನ್ನ ಮೊಂಡುತನಕ್ಕೆ ಅಂಟಿಕೊಂಡಿದೆ. ಇನ್ನು ರಾಜ್ಯದ ಮೂಡು ದಿಕ್ಕಿನ ಬಯಲುನಾಡುಗಳ ನೀರಿನ ಹಾಹಾಕಾರ ಹೆಚ್ಚು ಕಡಿಮೆ ಹೀಗೆಯೇ. ಜೊತೆಗೆ ಅಂತರ್ಜಲ ಮಟ್ಟದ ಕುಸಿತದಿಂದಾಗಿ ಮತ್ತಷ್ಟು ಆಳಕ್ಕಿಳಿಯುತ್ತಿರುವ ಕೊಳವೆ ಬಾವಿಗಳ ನೀರಲ್ಲಿರುವ ಫ್ಲೋರೈಡ್‌ನಂತಹ ರಾಸಾಯನಿಕ ಅಂಶಗಳು ಮಿತಿಮೀರಿ ಅವುಗಳಿಂದಾಗುತ್ತಿರುವ ದುಷ್ಪರಿಣಾಮ ಗಾಯದ ಮೇಲೆ ಉದುರುತ್ತಿರುವ ಉಪ್ಪಿನಂತೆ. ಆದರೆ, ಇವುಗಳ ನಿವಾರಣೆಗೆಂದು ಕೈಗೊಳ್ಳುತ್ತಿರುವ ಎತ್ತಿನ ಹೊಳೆ ಯೋಜನೆ ಮಾತ್ರ ಶ್ರೀ ಸಾಮಾನ್ಯರಿಗೆ ಕಳಸಾ ಬಂಡೂರಿ ಯೋಜನೆಯಷ್ಟು ಸರಳವಾಗಿ ಅರ್ಥವಾಗುವಂತಿಲ್ಲ. ಮೇಲ್ನೋಟಕ್ಕೆ ಎರಡೂ ಯೋಜನೆಗಳೂ ನೀರಿಲ್ಲದ ನಾಡಿಗೆ ನೀರು ಹರಿಸುವುದಾಗಿದ್ದರೂ ಎರಡೂ ಸಂದರ್ಭಗಳಿಗೆ ತಜ್ಞರ ಸಮಿತಿ ವ್ಶೆಜ್ಞಾನಿಕ ಅಧ್ಯಯನ ನಡೆಸಿ ಕೊಟ್ಟ ರಿಪೋರ್ಟ್ ಎಲ್ಲರಿಗೂ ಗೊತ್ತಿರುವಂತದ್ದು.  ಎತ್ತಿನ ಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮೊದಲು ಅಡ್ಡಿಯಾಗುವುದೇ ಪರಿಸರ ಅಧ್ಯಯನದ ಬೇರೆ ಬೇರೆ ವರದಿಗಳು ಹಾಗು ಪಶ್ಚಿಮ ಘಟ್ಟದ ಜೀವ ವೈವಿದ್ಯಕ್ಕೆ ಆಪತ್ತಾಗುವ ಯೋಜನೆಗಳಿಗೆ ತಡೆಯೊಡ್ಡುವ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ನಿಯಮಾವಳಿ. ಒಂದೆಡೆ ರಾಜಕಾರಣಿಗಳು ವ್ಶೆಜ್ಞಾನಿಕ ವರದಿಗಳು ‘ಎತ್ತಿನ ಹೊಳೆ ಏತ ನೀರಾವರಿ ಯೋಜನೆ’ಯ ಪರವಾಗಿದೆ ಅನ್ನುತ್ತಾರಾದರೂ ಅದು ಹೇಗೆ ಅನ್ನುವುದನ್ನು ಜನರ ಮುಂದಿಟ್ಟು ಮನವರಿಕೆ ಮಾಡಿಸುವುದರಲ್ಲಿ ಯಶಸ್ವಿಯಾಗುತ್ತಿಲ್ಲ. ಏಕೆಂದರೆ, ಮಹತ್ವದ ಅಧ್ಯಯನಗಳೆಲ್ಲ ಈ ಯೋಜನೆ ಅವ್ಶೆಜ್ಞಾನಿಕವೆನ್ನುವುದರತ್ತಲೇ ಬೆರಳು ತೋರುತ್ತಿದೆ.  ಪರ್ಯಾಯ ಮಾರ್ಗವೇ ಇಲ್ಲದೆ ಅನಿವಾರ್ಯವಾಗಿ ಒಂದು ಭೂ ಭಾಗದ ಜೀವಜಲವನ್ನು ಇನ್ನೊಂದೇ ದಿಕ್ಕಿಗೆ ಹರಿಸಬೇಕಾಗಿ ಬಂದಾಗ ಅಂತಹ ಒಂದು ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಡುವ ಮೊದಲು ಆ ನೀರನ್ನಾಶ್ರಯಿಸಿ ಬದುಕುತ್ತಿರುವ ಆ ಪರಿಸರದ ಜೀವ ವೈವಿದ್ಯಕ್ಕಾಗುವ ಹಾನಿಯನ್ನು; ಆ ಮೂಲಕ ಆಗಬಹುದಾದ ಪ್ರಾಕೃತಿಕ ಅಸಮತೋಲನವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು.

ಜಲ ಹಾಗು ಪರಿಸರ ತಜ್ಞರೊಂದಿಗೆ ಆ ಪರಿಸರದ ಮಂದಿ ಭಾಗಿಯಾಗಿ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿ, ಸಂಶಯಗಳನ್ನು ನಿವಾರಿಸಿಕೊಳ್ಳುವಂತಹ ಅರಿವು ಮೂಡಿಸುವ ಚಿಂತನ ಸಭೆಗಳು ನಡೆಯಬೇಕು. ಇಂತಹ ಸಂದರ್ಭಗಳಲ್ಲಿ ಸಿದ್ಧಾಂತ ನಿಷ್ಠ ಅಭಿಪ್ರಾಯಗಳಿಗಿಂತ ಮುಖ್ಯವಾಗಿ ಎರಡೂ ಭಾಗದ ಜನರನ್ನು ಸೇರಿಸಿ ಸಂವಾದ ನಡೆಸಬೇಕು. ಈಗ ತರಾತುರಿಯಲ್ಲಿ ನಡೆಸುತ್ತಿರುವ ಮುಖಾಮುಖಿ ಪ್ರಶ್ನೋತ್ತರಗಳಲ್ಲು ಆಳುವ ಮಂದಿ ಉತ್ತರಿಸುವಲ್ಲಿ ತಡವರಿಸುತ್ತಿದ್ದಾರೆ. ಇದೆಲ್ಲದರ ನಡುವೆಯೇ ಯೋಜನೆ ಜಾರಿಯಾದರೂ ಈ ಯೋಜನೆ ಪೂರ್ಣಗೊಂಡು ನೀರು ಹರಿಯಲು ಎಷ್ಟು ವರ್ಷ ಬೇಕು? ನಂತರವಾದರೂ ಮೂಡಲ ಬಯಲು ನಾಡಿನ ನೀರಿನ ಸಮಸ್ಯೆಗೆ ಇದು ಶಾಶ್ವತ ಪರಿಹಾರ ಒದಗಿಸುತ್ತದೆಯೆ ಎಂದು ಪ್ರಶ್ನೆ ಹಾಕಿಕೊಂಡರೆ ಅಲ್ಲಿಯೂ ಉತ್ತರ ಶೂನ್ಯ. ಯಾವ ಭಾಗದ ಜಲ ಸಂತ್ರಸ್ತರಿಗೆ ನೀರು ಹರಿಸಿ ಉಪಕರಿಸುತ್ತೇವೆಂದು ಇವರುಗಳು ಹೇಳುತ್ತಿದ್ದಾರೋ ಆ ಭಾಗದ ಶಾಶ್ವತ ನೀರಾವರಿ ಯೋಜನೆಯನ್ನು ಬಯಸುವ ಜನರಲ್ಲೇ ಈ ಯೋಜನೆಯ ಬಗ್ಗೆ ತಕರಾರಿದೆ. ಇನ್ನು ಈ ನೀರೆತ್ತುವಿಕೆಗೆ ಬೇಕಾದ ವಿದ್ಯುತ್ ಶಕ್ತಿಯ ಬಗ್ಗೆ, ಈ ಹೊಳೆಯಲ್ಲಿ  ಹರಿಯುವ ನೀರಿನ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡ ಎಂತವರಿಗೇ ಆದರೂ ಈ ಯೋಜನೆಯಿಂದ ನಿಜವಾದ ಸಂತ್ರಸ಼ರಿಗೆ ಸಿಗಬಹುದಾದ ನೀರು ಎಷ್ಟು; ಈ ಯೋಜನೆಯ ಹಿಂದಿರುವ ಬೃಹತ್ ಉದ್ದಿಮೆ ಸ್ನೇಹಿ ಸ್ವಾರ್ಥ ಎಷ್ಟು ಎಂಬ ಸಂಶಯ ಕಾಡುತ್ತದೆ. ಈ ಯೋಜನೆಗೆ ಸ್ಮರಿಯಬೇಕಾದ ಕೋಟಿಗಟ್ಟಲೆ ದುಡ್ಡಿನಲ್ಲಿ ಶಾಶ್ವತ ನೀರಿನ ಯೋಜನೆಯನ್ನೇ ಮಾಡಬಹುದು. ಆಡಳಿತ ಯಂತ್ರ ಕೊಡುವ ಮಾಹಿತಿಯ ಪ್ರಕಾರ; ಎತ್ತಿನ ಹೊಳೆ ಏತ ನೀರಾವರಿ ಯೋಜನೆಯೆಂದರೆ; ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಡು ಹಂತಗಳಲ್ಲಿ ಎಂಟು ಅಣೆಕಟ್ಟುಗಳನ್ನು ನಿರ್ಮಿಸಿ ೨೪ ಟಿ.ಎಮ್.ಸಿ. ನೀರನ್ನು ದೇವರಾಯನ ದುರ್ಗದ ಬಳಿ ಜಲಾಶಯ ನಿರ್ಮಿಸಿ ಅಲ್ಲಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮುಂತಾದೆಡೆ ಹರಿಸಿ ಕೆರೆಗಳನ್ನು ತುಂಬಿಸುವುದು.

ನೀರಿನ ಅಭಾವಕ್ಕೆ ಬಲಿಯಾದ ಪೂರ್ವದ ಬಯಲು ನಾಡಿನ ಸಾಮಾನ್ಯ ಜನತೆಗಾಗಲಿ, ಕುಡಿಯುವ ನೀರಿನ ಮುಂದೆ ಬೇರಾವುದೂ ಮುಖ್ಯವಲ್ಲ ಎಂಬ ನೆಲೆಯಲ್ಲಿ ಯೋಚಿಸುವಾಗ ಇದು ಖಂಡಿತವಾಗಿ ಜನ ಸ್ನೇಹಿ ಯೋಜನೆಯೇ. ಆದರೆ, ಇದುವರೆಗಿನ ತಜ್ಞ ಅಧ್ಯಯನಗಳನ್ನ, ಇಲ್ಲಿ ನೀರು ಹರಿದ ಪ್ರಮಾಣವನ್ನು ಅಳತೆ ಮಾಡಿದ ಮಾಪಕಗಳ ಬೇರೆ ಬೇರೆ ಅಂಕಿ-ಅಂಶಗಳನ್ನ ಗಮನಿಸಿದರೆ ಮೇಲಿನ ಹೇಳಿಕೆಯನ್ನು ಸಂಶಯಾತೀತವಾಗಿ ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ೨೪ ಟಿ.ಎಮ್.ಸಿ. ನೀರೆತ್ತುವುದು ಯೋಜನೆಯ ಉದ್ದೇಶ. ಆದರೆ, ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಎಕಾಲಾಜಿಕಲ್ ಸೈನ್ಸಿನ ಪರಿಣಿತರ ಅಧ್ಯಯನದಲ್ಲಿ ದೊರೆಯುವ ಮಾಹಿತಿ ಪ್ರಕಾರ ಈ ಯೋಜನೆ ಹಾದು ಹೋಗುವ ಪ್ರದೇಶ ಎಕಾಲಾಜಿಕಲ್ ಸೆನ್ಸಿಟಿವ್ ಜೋನ್ ಹಾಗು ಮೇಲೆತ್ತಲು ಸಿಗಬಹುದಾದ ನೀರು ಕೇವಲ ೯.೫೫ ಟಿ.ಎಮ್.ಸಿ. ನೀರು. ಎತ್ತಿನ ಹೊಳೆ ಯೋಜನೆಯನ್ನು ವಹಿಸಿಕೊಂಡ ಕನೀನಿ(ಕರ್ನಾಟಕ ನೀರಾವರಿ ನಿಗಮ ನಿಯಮಿತ) ತೋರಿಸುವ ಮಳೆ ಮಾಪಕಗಳ ಅಂಕಿ ಅಂಶಗಳನ್ನು ಗಮನಿಸಿದರೆ ಅದೂ ಬೇರೆ ಬೇರೆಯೇ. ಅದರಲ್ಲೂ ಸಂಶಯಕ್ಕೆಡೆಮಾಡಿಕೊಡುವುದು ಕನೀನಿ ಹೇಳುತ್ತಿರುವ ಈ ಮಳೆಮಾಪಕಗಳೆಲ್ಲ ಖಾಸಗಿಯವರ ಮಳೆ ಮಾಪಕಗಳು. ಏಕೆಂದರೆ, ಜಲ ಸಂಪನ್ಮೂಲ ಇಲಾಖೆಯ ಜಲವಿಜ್ಞಾನ ಘಟಕದ ವರದಿಯಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳ ಕಾಲ ಬಿದ್ದ ಸರಾಸರಿ ಮಳೆ ಪ್ರಮಾಣ ೩೦೭೨ ಮಿ.ಮೀ. ಎನ್ನುವ ಮಾಹಿತಿ ಲಭ್ಯವಿದ್ದರೂ ಕನೀನಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಖಾಸಗಿ ಮಳೆಮಾಪಕಗಳ ಅಂಕಿ ಅಂಶಗಳನ್ನು ಪರಿಗಣಿಸುತ್ತದೆ. ಒಟ್ಟಾರೆಯಾಗಿ ಯೋಜನೆಯಲ್ಲಿರುವ ತಾಂತ್ರಿಕ ಲೋಪದೋಗಳು ಎದ್ದು ಕಾಣುತ್ತವೆ. ಹೀಗಿರುವಾಗ ಈ ಪರಿಸರದ ಶ್ರೀಸಾಮಾನ್ಯರು ಯಾವುದರ ಮೇಲೆ ವಿಶ್ವಾಸವಿಡಬೇಕು?! ಇಷ್ಟಕ್ಕು ಈ ಅಂಕಿ ಅಂಶಗಳನ್ನು, ಮಾಹಿತಿಗಳನ್ನು ಹುಡುಕಿಕೊಂಡು ಹೋಗಲು; ಅದರ ಸತ್ಯಾಸತ್ಯತೆಗಳ ಬೆನ್ನು ಹತ್ತಲು ಸಾಮಾನ್ಯ ಜನತೆಗೆ ಸಾಧ್ಯವಿಲ್ಲ.   

ಎತ್ತಿನ ಹೊಳೆ ಯೋಜನೆಯ ವಿರೋಧದ ಚಳುವಳಿ ಬಿರುಸುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡದ ರಾಜಕಾರಣಿಯೇ ಕಳಸಾ ಬಂಡೂರಿ ಯೋಜನೆಯನ್ನೂ, ಎತ್ತಿನ ಹೊಳೆ ಯೋಜನೆಯನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಪ್ರಯತ್ನಿಸಿ, ನ್ಶೆತಿಕತೆಯ ಮಾತೆತ್ತಿ, ಕುಡಿಯುವ ನೀರಿನ ಯೋಜನೆಗೆ ಅಡ್ಡಿ ಪಡಿಸುತ್ತಿರುವ ದಕ್ಷಿಣ ಕನ್ನಡದ ಜನ ಹೃದಯ ಹೀನರೆಂಬಂತೆ ಬಿಂಬಿಸಿ ಎರಡೂ ಭಾಗದ ಜನರ ಮನಸುಗಳನ್ನು ಒಡೆಯುವಂತಹ ಮಾತುಗಳನ್ನಾಡುತ್ತಿರುವುದು ಮತ್ತೆ ಬ್ರಿಟಿಷರ ಒಡೆದು ಆಳುವ ನೀತಿಯನ್ನೇ ನೆನಪಿಸುತ್ತದೆ. ನಾಡನ್ನಾಳುವವರು ನಿಜವಾಗಿಯೂ ಪ್ರಜ್ಞಾವಂತ ರಾಜಕಾರಣಿಗಳಾಗಿದ್ದಿದ್ದರೆ ಇಂತಹ ಹೇಳಿಕೆಗಳಿಂದ ಜೀವನಾವಶ್ಯಕ ಸಂಗತಿಗಳಿಂದ ವಂಚಿತರಾದವರನ್ನು ಭಾವನಾತ್ಮಕವಾಗಿ ಕೆರಳಿಸಿ ಬಳಸಿಕೊಳ್ಳುವಂತಹ ಸಣ್ಣತನದ ಮಾತನ್ನಾಡುತ್ತಿರಲಿಲ್ಲ. ಕಳಸಾ ಬಂಡೂರಿ ಯೋಜನೆಯ ತಾತ್ವಿಕ ಸ್ಥಿತಿಗತಿಗಳೇ ಬೇರೆ. ಎತ್ತಿನ ಹೊಳೆ ಯೋಜನೆಯ ಸ್ಥಿತಿಗತಿಯೇ ಬೇರೆ. ಎರಡೂ ಸಂದರ್ಭದಲ್ಲಿ ನೇತ್ಯಾತ್ಮಕವಾಗಿ ವರ್ತಿಸುತ್ತಿರುವುದು ಸ್ವಾರ್ಥ ರಾಜಕಾರಣ. ಇಂತಹ ಅಪಾಯಗಳನ್ನು ತಪ್ಪಿಸಬೇಕೆಂದರೆ ನೆಲ-ನೀರು, ಗಡಿ-ಭಾಷೆಯ ವಿಚಾರಗಳಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಅದರ ಪರಿಹಾರಕ್ಕೆ ತಜ್ಞರನ್ನೊಳಗೊಂಡ; ಭ್ರಷ್ಟಾಚಾರಕ್ಕೆ ಎಡೆಯಿಲ್ಲದ ಕೇಂದ್ರ ಸಮಿತಿಯೇ ಆಯಾಯ ಪ್ರದೇಶದ ಸಮಗ್ರ ಅಧ್ಯಯನ ನಡೆಸಿ ಯೋಜನೆ ರೂಪಿಸುವಂತಿರಬೇಕು. ಆಗ ಮಾತ್ರ ಕಳಸಾ ಬಂಡೂರಿ ಹಾಗು ಎತ್ತಿನ ಹೊಳೆ ಯೋಜನೆಯಲ್ಲಿರುವ ಸಾಧಕ-ಬಾಧಕಗಳ ಅರಿವಾಗುವುದು.

ಕಳಸಾ-ಬಂಡೂರಿ ಯೋಜನೆ ಅಂತರ್ರಾಜ್ಯಕ್ಕೆ ಸಂಬಂಧಿಸಿದ್ದಾದ್ದರಿಂದ ಗೋವಾದ ನಿಲುವಿನ ಹಿಂದೆ ರಾಜ್ಯ ಬೇಧವೆಂಬ ಸಂಕುಚಿತ ಭಾವವಿದೆ. ಆದರೆ, ಕಳಸಾ ಬಂಡೂರಿ ಹೋರಾಟದ ನಿಮಿತ್ತ ಕರ್ನಾಟಕದಾದ್ಯಂತ ಬಂದ್ ನಡೆದಾಗ ಕೆಲವು ಸಂಘಟನೆಗಳ ಹೊರತಾಗಿ ದಕ್ಷಿಣ ಕನ್ನಡದ ಪ್ರಮುಖ ಸಂಘಟನೆಗಳು ತಟಸ್ಥ ನೀತಿ ಅನುಸರಿಸಿದ್ದು ಮಾತ್ರ ಸಮಂಜಸವೆನಿಸುವುದಿಲ್ಲ. ಧರ್ಮ-ದೇವರು, ಸಂಸ್ಕೃತಿಯ ವಿಚಾರ ಬಂದಾಗ ಬಹು ಬೇಗನೆ ಕೆರಳುವ ದಕ್ಷಿಣ ಕನ್ನಡದ ಜನಕ್ಕೆ ಈ ಸಮಯದಲ್ಲಿ ಮಹಾಭಾರತದಲ್ಲಿ zsರ್ಮರಾಯ ಹೇಳುವ, ಹೊರಗಿನವರು ಬಂದಾಗ ನಾವು ನೂರಾ ಐದು ಮಂದಿ ಅನ್ನುವ ಮಾತು ಅಥವಾ ‘ಸರ್ವೇ ಜನಾಃ ಸುಖಿನೋ ಭವಂತು’ ಅನ್ನುವ ವೇದ ವಾಕ್ಯ ನೆನಪಾಗದಿರುವುದು ವಿಪರ‍್ಯಾಸ. ಎತ್ತಿನ ಹೊಳೆ ರಾಜ್ಯದೊಳಗಿನ ಸಂಗತಿ. ಈ ಯೋಜನೆಯ ಬಗ್ಗೆ ವ್ಶೆಜ್ಞಾನಿಕ ಅಧ್ಯಯನ ವರದಿಗಳ ಬೆನ್ನು ಹತ್ತಿದಾಗ ಇದು ಪಶ್ಚಿಮ ಘಟ್ಟದ ಜೀವ ಜಾಲಕ್ಕೇ ಅಪಾಯಕಾರಿಯಾಗಿ, ಈ ಪರಿಸರದ ಭೌಗೋಳಿಕ ಪರಿಸರದ ಸಮತೋಲನವನ್ನೇ ಬುಡಮೇಲು ಮಾಡಬಹುದೆಂಬ ಆತಂಕ ಜನತೆಯನ್ನು ಕಾಡುವುದು ಸಹಜ. ಒಮ್ಮೆ ನೀರಿನ ಮೂಲಗಳನ್ನು ರಾಡಿ ಮಾಡಿದರೆ ತಪ್ಪಾಗಿದೆಯೆಂದು ಮತ್ತೆ ಸರಿ ಪಡಿಸಲು ಸಾಧ್ಯವಿಲ್ಲ. ಮನುಷ್ಯನ ಅವಿವೇಕತನಕ್ಕೆ ಇಡೀ ಜೀವ ಜಗತ್ತೇ ಬಲಿಯಾಗಬೇಕಾದೀತು. ನೀರು ಒಂದು ಜಿಲ್ಲೆಗೆ ಒಂದು ರಾಜ್ಯಕ್ಕೆ ಒಂದು ದೇಶಕ್ಕಾಗಿರುವುದಲ್ಲ. ಭಾವನಾತ್ಮಕ ಆತಂಕದಲ್ಲಿ ಯೋಜನೆಯನ್ನು ವಿರೋಧಿಸುವ ಅಥವಾ ಬೆಂಬಲಿಸುವ ಬದಲು ಜನ ಸಂಘಟನೆಗಳೇ ಮುಂದಾಗಿ ಯಾವುದು ಹೆಚ್ಚು ಸೂಕ್ತ ಅನ್ನುವ ಅರಿವು ಮೂಡಿಸುವ ಸಭೆಗಳನ್ನೇರ್ಪಡಿಸಬೇಕು. ಚೆಲ್ಲಿ ಹೋಗುವ ಸೂರ್ಯ ಶಕ್ತಿಯನ್ನು ಶೇಖರಿಸಿ ಸೋಲಾರ್ ಬೆಳಕನ್ನು ಪಡೆಯುವಂತೆ ಮಳೆ ನೀರಿನ ಹನಿ ಹನಿಯನ್ನು ಹಿಡಿದಿಟ್ಟುಕೊಳ್ಳುವ ತರಾತುರಿ ನಮ್ಮದಾಗಬೇಕು. ಯಾವ ತಂತ್ರಜ್ಞಾನವನ್ನು ಬುದ್ದಿಮತ್ತೆಯನ್ನು ಬಳಸಿ ಭೂಗರ್ಭದ ಅಂತರ್ಜಲವನ್ನು ಮೇಲೆತ್ತಲಾಯಿತೋ ಅದೇ ತಂತ್ರಜ್ಞಾನವನ್ನು ಪ್ರತಿಭೆಯನ್ನು ಬಳಸಿ ಅಲ್ಲಲ್ಲಿಯ ನೆಲದ ಒರತೆ ಹೆಚ್ಚಿಸಿ ಅಂತರ್ಜಲವನ್ನು ಮತ್ತೆ ಚೇತರಿಸಿಕೊಳ್ಳುವಂತೆ ಶೇಖರಿಸಿ ಭೂಮಿಗೆ ಹನಿಸಿ ಅಲ್ಲಲ್ಲೇ ಇಂಗಿಸಿ ಒರತೆ ಹೆಚ್ಚಿಸುವುದು; ಜೊತೆಜೊತೆಗೆ ತುರ್ತು ಅಗತ್ಯವಾದ ಶುದ್ಧ ಕುಡಿಯುವ ನೀರನ್ನು ಶೀಘ್ರದಲ್ಲಿ ಪೂರೈಸುವ ಪರ್ಯಾಯ ದಾರಿಗಳನ್ನ ಅಭಿವೃದ್ಧಿಗೊಳಿಸುವಂತಹ ಯೋಜನೆಗಳ ಬಗ್ಗೆ ಗಮನವಿರಬೇಕಲ್ಲದೆ ತತ್ಕಾಲದ ರಾಜಕಾರಣಕ್ಕಾಗಿಯೋ; ಇನ್ನಾವುದೋ ದುರುದ್ದೇಶಕ್ಕಾಗಿಯೋ ಆತುರ ಬಿದ್ದು ಪ್ರಕೃತಿ ನಿರ್ಮಿತ ಭೌಗೋಳಿಕ ವ್ಯವಸ್ಥೆಯನ್ನೇ ವಿರೂಪಗೊಳಿಸಿ ಪರಿಸರ ಅಸಮತೋಲನವನ್ಮ್ನಂಟುಮಾಡುವ ವಿಕೃತಿಗಳತ್ತ ಅಲ್ಲ. ಹೆಚ್ಚೆಂದರೆ ನೂರು ವರ್ಷ ಆಯುಸ್ಸಿರುವ ಮನುಷ್ಯ ಭೂಮಿಯ ಮೇಲಿರುವ ಸಹಜೀವಿಗಳೊಂದಿಗೆ ಬದುಕಲಿರುವವನೇ ಹೊರತು ತಾನೊಬ್ಬನೇ ಬದುಕುವ ಹಕ್ಕಿರುವವನಲ್ಲ. ಅದು ಸಾಧುವೂ; ಸಾಧ್ಯವೂ ಅಲ್ಲ.

      ***
                                                   


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...