Friday, December 25, 2015

ಮೂರು ಜನ ಕವಿಯತ್ರಿಯರು : ಮೂರು ಕವಿತೆಗಳು

ಪ್ರಿಯರೆ
ನಾಳೆ 27 ರಂದು ರವಿವಾರ  'ಯುವ ಕಾವ್ಯ : ಓದು-ಮಾತು -4' ರಲ್ಲಿ ವೀಣಾ ಬಡಿಗೇರ ಅವರು ಓದುವ ಕವಿತೆಗಳು..
ಬನ್ನಿ. ಕಾವ್ಯದ ಕುರಿತು ಮಾತಾಡೋಣ1
ಮಸಿ ಅರಿವೇಯ ಸ್ವಗತ

ಹಾ, ಎಷ್ಟು ಚಂದ ಇದ್ದೆ ನಾನು
ಮನೆ ಒಡತಿ ತನ್ನ ಹೂಮೈಗೆ
ನನ್ನ ಸುತ್ತಿಕೊಂಡು ಕನ್ನಡಿಯೆದರು
ನಿಂತಾಗ ನಾನೆಷ್ಟು ಬೀಗುತ್ತಿದ್ದೆ
ಗತ್ತಿನಿಂದ ಸೆರಗಾಗಿ ಹಾರುತ್ತಿದ್ದೆ.

ಶುದ್ಧ ಹಾಲಿನ ಬಣ್ಣದೊಳಗೆ ಹೂಬಳ್ಳಿ
ಎಲೆಗಳ ಚಿತ್ತಾರ
ದಂಡೆಗೊಂದಿಷ್ಟು ನಾಜೂಲಿದ ಗರಿ ಅಂಚು
ಮುಟ್ಟಿದರೆ ಹಾಯ್ ಎನಿಸುವಷ್ಟು ನವಿರು(ಮೃದು)
ಶುದ್ಧ ಹತ್ತಿಯಿಂದ ಕೈಯಲ್ಲೇ ನೇಯ್ದದ್ದಂತೆ
ನೋಡಿ ಅಲ್ಲಿ ಆಕೆ ಉಟ್ಟ ಸೀರೆ
ಆಗಂತೂ ಹೀಗೆ ಹೆಮ್ಮೆಯಿಂದ ಉಟ್ಟಿ
ಹೆಜ್ಜೆ ಹೆಜ್ಜೆಗೂ ನೆರಿಗೆಯಾಗಿ ಪುಟಿದಿದ್ದೆ

ಭವ್ಯ ಬಂಗಲೆಗಳು ದೊಡ್ಡ ಮಹಲುಗಳು
ಜಾತಣಕೂಟ ಸಂಗೀತ ಕಛೇರಿ
ನಿನಿನೂ ನಾಟಕಗಳು
ಹೋದಲ್ಲೆಲ್ಲಾ ಮೆಚ್ಚುಗೆ ಗಳಿಸಿ, ಒಡತಿಯ
ಅಂದ ಇಮ್ಮಡಿಗೊಳಿಸಿ ಮಿಂಚುತ್ತಿದ್ದೆ
ಮತ್ತೆ ವಾಷಿಂಗ್ ಮಷೀನಿನ ಘಮಗುಡುವ
ಸಾಬೂನಿನ ಸ್ನಾನ ಗಂಜಿ ಹಾಕಿದ ಗರಗರಿ ಇಸ್ತ್ರಿ

ಈಗೀಗ ಕನ್ನಡಿ ಕಾಣುವುದೇ ಇಲ್ಲ
ಒಂದೊಂದು ಸಲ ಆಕಸ್ಮಾತಾಗಿ ಎದುರಾಗುವ
ಪಾತ್ರೆ, ತಟ್ಟೆಗಳಲ್ಲಿ ಹೀಗೊಂದಿಷ್ಟು ಮುಖದರ್ಶನ
ಅರೆ...?? ಇದು ನಿಣೇನಾ?|
ಹೀಗೇಕೆ ಕಪ್ಪು ಸುರುವಿದ್ದಾರೆ ನನ್ನ ಮೇಲೆ
ಮತ್ತೆ ಅಲ್ಲೊಂದು ಇಲ್ಲೊಂದು ತೂತು
ನಾನು ಶೂವಿನ ಚಿತ್ತಾರದ ಸೆರಗೋ
ಜರಿಯಂಚಿನ ದಂಡೆಯೋ !ಇಲ್ಲ
ಪುಟಿಯುತ್ತಿದ್ದ  ನೆರಿಗೆಯೋ..?
ಊಹುಂ! ನನ್ನ ಆಸ್ತಿಕತ್ವವೇ ಹೊಳೆಯುತ್ತಿಲ್ಲ

ನನ್ನಡೊತಿಗೆ, ನನ್ನ ಕಂಡರೆ ದಿವ್ಯ ನಿರ್ಲಕ್ಷ್ಯ
ಒಮ್ಮೊಮ್ಮೆ ನೆಲಗುಡಿಸುವ ಅರಿವೆಯಾದರೆ
ಇನ್ನೊಮ್ಮೆ, ಡಬ್ಬಿಗಳ ಪೇರಿಸಿಟ್ಟ ಮಾಡಿನ
ಧೂಳು ಕೊಡೆಯುವ ಕಾರ್ಯ
ಬಿಸಿ ಹಾಲಿನ ಪಾತ್ರೆ ಮುಟ್ಟುವಾಗಂತೂ
ಮೈಯೆಲ್ಲಾ ನಡುಕ
ಸೋಸಿನ ಬುರುಗೇಳುವ ನೀರಿನಲ್ಲಿ ಮಿಂದು
ಅದೆಷ್ಟು ದಿನವಾಯಿತೋ??
ಅಭ್ಯಾಸವಾಗಿದೆ ವಾರಕೊಮ್ಮೆ ಕೆಲಸದ ಕಲ್ಪನಾ
ಮೂಡಿಸುವ ಒಣ ಒಣ ಸ್ನಾನ

ಇನ್ನೇನಿದ್ದರೂ, ಇನ್ನೊಂದಿಷ್ಟು ಮಸಿ, ದೂಳು
ಹೇರಿಕೊಂಡಿರಬೇಕು
ಗತವೈಭವದ ಚಹರೆಗಳ ಮೇಲಿನ
ಚಿತ್ರಪಟದಲ್ಲಿ ಹುಡುಕಬೇಕು.
      
-ವೀಣಾ ಬಡಿಗೇರ 
                     
                                   
                                             

2
ಸುತ್ತು

ಕಚ್ಚುತ್ತದೆ ಎಂದು ತೆಗೆದಿಟ್ಟ
ಕಾಲುಂಗುರ ಬೆಳ್ಳಗೆ
ಗುರುತುಸಿದು ಬೆರಳಿನಲ್ಲಿ
ಹಳದಿ ಕೆನ್ನೆಯ ಕೆಂಪು ಪೀತಾಂಬರದ
ಗರತಿಯರು ಬಂದ ಕೆಲಸ
ಮುಗುಸಿ ಹೋಗದೇ
ಸುಮ್ಮನೆ ಗಮನಿಸುತ್ತಾರೆ ಅಲ್ಲಿ
ಮತ್ತೆ ಪ್ರಶ್ನಿಸುತ್ತಾರೆ ಅಧಿಕಾರ
ತುಸು ಅನುಮಾನದಲ್ಲಿ
ಅರೆ...!
ಕಾಲುಂಗುರವೆಲ್ಲಿ?

ಅದು ಬಿಗಿಯುತ್ತಿತ್ತು
ತುರಿಸಬೇಕು ಎಂಬ ತೆವಲು
ಹುಟ್ಟಿಸಿ ಆಗಾಗ ನನ್ನ ಬಗ್ಗಿಸುತ್ತಿತ್ತು
ಹೊಸದಾಗಿ ಕಲಿತ ಗಾಡಿ ಏರುವಾಗ
ನೆರಿಗೆಗೆ ಸಿಲುಕಿ ದಿನವೂ
ಮುಗ್ಗರಿಸಿ ಬೀಳಿಸುತ್ತಿತ್ತು
ಆಗುಂಟಿ ಮಡಿಸುವುದಂತೂ ಆಗಿ
ಹೋಗದ ಮಾತಾಗಿ ನೆಟಿಕೆ ಮುರಿಯುವ
ಆಸೆಗೆ ಕಡಿವಾಣ ಹಾಕಿಟ್ಟು
ವರ್ಷವೇ ಆಗಿತ್ತು
ಹಾಗಾಗಿ...

ತೆಗೆದಿಟ್ಟಿದ್ದೇನೆ ಒಳಗೆ ಪೆಟ್ಟಿಗೆಯಲ್ಲಿ
ಅಲ್ಲೇ ಇದೆ ಹೊಡೆಮರಳಿ
ಕಚ್ಚಲಾಗದ ಬೇಗುದಿಯಲ್ಲಿ
 ಹೇಳಿ ಹೇಳಿ
ನನಗಂತೂ ಬಾಯಿಪಾಠವಾಗಿತ್ತು
ಬೇಕಿದ್ದರೆ ನೋಡಿ
ಕೊಂಡು ಹೋಗಿರುವಿರಂತೆ ಬನ್ನಿ
ಎಂದೂ ಸಿಟ್ಟಿನಲಿ ಒಮ್ಮೆ
ಒದರಿಯಾಗಿತ್ತು.

ಬರಲಿಲ್ಲ ಅವರು
ಬದಲಾಗಿ ಮುಂದುವರಿಸಿದರು
ಹೊರಟಲ್ಲಿಗೇ ಹೊರಟು ನಿಂತ
ಹಳೇ ಬಸ್ಸಿನ ಸವೆದ ಟಾಯರಿನಂತೆ
ಮೆಟ್ಟಿಕೊಂಡ ದೆವ್ವವನ್ನು
ಬಿಟ್ಟೋಡಿಸಲು ಕಾದುನಿಂತ
ಕಹಿಬೇವಿನ ಗೊಂಚಲಿನಂತೆ

ಏಳು ಸುತ್ತಿನದು ಕಚ್ಚಿದರೆ
ಎರಡು ಸುತ್ತಿನದ್ದಾದರೂ ಧರಿಸಬೇಡವೇ
ಗಂಡುಳ್ಳ ಗರತಿ ಹೀಗೆ ಬೆತ್ತಲೆ
ಅನಾಮಿಕೆಯಾಗಿ ತಿರುಗಿದರೆ
ಏನೆಂದಾನು ಗಂಡ ಮತ್ತೆ
ಅತ್ತೆಮಾವಂದಿರು..?

ಅರೆ..! ಹೌದಲ್ಲ
ಇವರು ಹೇಳುವವರೆಗೆ
ನನಗಿದು ಗೊತ್ತೇ ಇರಲಿಲ್ಲ
ನನಗೆ ಕಾಲುಂಗರವಿಲ್ಲದ್ದು
ಮನೆಯವರಿನ್ನು ನೋಡಿಯೇ ಇಲ್ಲ..
 
-ರೇಣುಕಾ ರಮಾನಂದ
                                          


3

ಕಳಚಿ ಬಿದ್ದ ಮೊಗ್ಗು

ಪರದೆ ಸರಿಯುತ್ತದೆ
ಪುಟವೊಂದರಿಂದ ಅಲೈಸ್
ಇಣುಕುತ್ತಾಳೆ
ಎಂದಿನಂತೆ
ಕಡಲ ಆಳದ ಮೊರೆತಕ್ಕಾಗಿ
ಗವ್ವನೆಯ ಬಿಲದ
ಕತ್ತಲ ಉಮೆದಿಗಾಗಿ.

ಜಿಗಿಯುತ್ತಾಳೆ
ಒಳಕ್ಕೆ
ಆಳಕ್ಕೆ
ಇಳಿದಂತೆಲ್ಲಾ ಆವರಿಸುತ್ತದೆ
ಕಡಲ ಮೋಹಕತೆ
ಮೆಲ್ಲನೆ
ಪುಟಿಯುತ್ತಾಳೆ
ಅಮಲೇರುತ್ತಾಳೆ,

ಇನ್ನೆಲ್ಲೋ
ಬಾಲ್ಕನಿಯಲ್ಲಿ
ಏರು ಬಿಸಿಲಿಗೆ
ಕಳಚಿಬಿದ್ದ ಮೊಗ್ಗುಗಳು,
ಹಾಡಬಹುದಾಗಿದ್ದ ರಾಗಗಳ
ನೆನೆದು
ಪುಳಕಗೊಳಗಳ್ಳುವ
ಗಿಳಿಯ ಹಸಿರೊಳಗೊಂದಾದ
ಎಲೆಗಳು.

ತವಕಿಸುತ್ತಾಳೆ
ಕುಗ್ಗುತ್ತಾ
ಹಿಗ್ಗುತ್ತಾ
ಪಡೆವಂತೆ ರೂಪದ
ಥರಾವರಿ ಸೀಸೆಗಳ ನಡುವೆ
ಸ್ಪರ್ಶಿಸುತ್ತಾಳೆ ಎಲ್ಲದನೂ
ಬಾಚುವಂತೆ ಕೈಗತ್ತುವಷ್ಟು
ಕಪ್ಪೆ ಚಿಪ್ಪುಗಳ.

ಈ ತವಕಿಸುವ
ಆಟದಲ್ಲಿ
ಹೊಕ್ಕು ಬರುತ್ತಾಳೆ ಹೊಸ ಬಿಲಗಳ
ಕಳೆಯುತ್ತಾಳೆ ಹಗಲು ರಾತ್ರಿಗಳ
ನಡೆಯುತ್ತಾಳೆ ಸಲೀಸಾಗಿ
ಖಾಲೀತನಗಳ ಕೈ ಹಿಡಿದು
ನಡೆಯುತ್ತಾ ನಡೆಯುತ್ತಾ
ಮತ್ತೆ ಮತ್ತೆ
ಮೋಹಕ್ಕೆ ಬೀಳುತ್ತಾಳೆ.

ಕಡೆಗೆ
ಆಳದಲಿ ಬಲು ವಿಸ್ತಾರದ ಬಯಲು
ಆ ಬಯಲು ತುಂಬಾ ದತ್ತೂರಿ ಗಿಡಗಳು!
ಚಕ್ಕನೆ ತಿರುಗುತ್ತಾಳೆ
ಮೆಲ್ಲಗೆ ಮೇಲೇಳುತ್ತಾಳೆ
ಮತ್ತೆ
ಪುಟವ ಸೇರುವ ಇರಾದೆಯಲಿ...

ಪರದೆಯ ಹಿಂದೆ
ಕಾಫಿ ಹೀರುತ್ತಾ
ಇವಳೇಡೆಗೇ ನೋಡುತ್ತಿರುವ
ಅವನಿಗೊಂದು
ಹೂನಗೆ ಬೀರುತ್ತಾಳೆ.

-ಸ್ಮಿತಾ ಮಾಕಳ್ಳಿ


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...