Friday, December 04, 2015

ನುಡಿಸಿರಿ ಮತ್ತು ಸಾಹಿತ್ಯದ ಕಾರ್ಪೋರೇಟೀಕರಣ
-ಅರುಣ್ ಜೋಳದಕೂಡ್ಲಿಗಿಸಕಲವೂ ಜಾಗತೀಕರಣದಲ್ಲಿ ಮಾರಾಟದ ಸರಕು. ಪ್ರೀತಿ ಸ್ನೇಹ ನಗು ಅಳು ಸಂತಸ ಉಲ್ಲಾಸ ಹೀಗೆ ಮುನುಷ್ಯ ಸಹಜ ಭಾವನೆಗಳನ್ನೂ ಮಾರಾಟದ ಸರಕಾಗಿಸಲಾಗಿದೆ. ಆಥವಾ ಈ ಭಾವನೆಗಳಿಗೆ ಸ್ಪಂದಿಸುವ ಸರಕು ಸಾಮಗ್ರಿಗಳನ್ನು ಅವುಗಳಿಗೆ ಅಂಟಿದ ನಂಟಿನ ಹಾಗೆ ತಳಕು ಹಾಕಲಾಗಿದೆ. ನಿಸರ್ಗ ಸಹಜ ಜೀವಜಲ ಮಾರಾಟದ ಸರಕಾಗಿ ಅದು ಸಹಜವೆಂಬಂತೆ ಒಪ್ಪಿತವಾಗಿದೆ. ಹೀಗೆ ಕಾರ್ಪೋರೇಟ್ ಜಗತ್ತು ಯಾವ ಯಾವ ಸಂಗತಿಗಳು ಮನುಷ್ಯನ ಕುತೂಹಲವನ್ನು ಕೆರಳಿಸುತ್ತವೆಯೋ, ಯಾವ ಸಂಗತಿಗಳು ಮನುಷ್ಯನನ್ನು ಸಂತಸದಲ್ಲಿಡುತ್ತವೋ ಅವುಗಳನ್ನೆಲ್ಲಾ ಅಲಂಕಾರಿಕವಾಗಿಸಿ ಮಾರಾಟದ ಸರಕಾಗಿ ಪರಿವರ್ತಿಸಲಾಗುತ್ತದೆ. ಅವುಗಳನ್ನು ಕಾಲಾನಂತರದ ಸಹಜ ಫಲವೆಂಬಂತೆ ಬಿಂಬಿಸಲಾಗುತ್ತದೆ.

ಈ ಎಲ್ಲಾ ಬೆಳವಣಿಗೆಯನ್ನು ಅಪಾಯಗಳನ್ನೂ, ಒಳ ಹುನ್ನಾರಗಳನ್ನೂ ಒರೆಗಚ್ಚಿ ಹೇಳಬೇಕಾದ `ಬರಹ’ `ತಿಳಿವು’ ಗಳನ್ನೂ ಮಾರಾಟದ ಸರಕನ್ನಾಗಿಸುವ ಪ್ರಯತ್ನ ಒಂದು ದಶಕದಿಂದಲೂ ನಡೆಯುತ್ತಿದೆ. ಈ ದಾರಿಯಲ್ಲಿ `ಸಾಹಿತ್ಯ’ ಸಂಬಂಧಿ ಚಟುವಟಿಕೆಗಳೂ ಮಾರುಕಟ್ಟೆಯ ಸರಕಾಗುತ್ತಿವೆ. ಅವನ್ನೂ ಅಂದಗಾಣಿಸಿ `ಲಿಟರರಿ ಫೆಸ್ಟಿವೆಲ್’ ಎಂಬ ಸೊಫೆಸ್ಟಿಕೇಟೆಡ್ ನುಡಿಗಟ್ಟಿನ ರೂಪದಲ್ಲಿ ಮಾರಾಟಮಾಡಲಾಗುತ್ತಿದೆ. ಕಂಫರ್ಟ್ ಜೋನಿನ ಭಾಗವಾದ ಮಧ್ಯಮ ವರ್ಗದ ಒಂದು ಗುಂಪು ತನ್ನ ಇತರೆ ಲಘುಭಾವನೆಗಳಂತೆ ಸಾಹಿತ್ಯ ಸಂವೇದನೆಯನ್ನು ತೀರ ಲಘುವಾಗಿಸುವ ಹುನ್ನಾರ ನಡೆಸುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅವಿಶ್ವಾಸ ಮತ್ತು ವಿರೋಧ ಮೂಡಿಸುವ ಕೆಲಸಗಳನ್ನು ಎನ್.ಜಿ.ಓಗಳು ವ್ಯವಸ್ಥಿತವಾಗಿ ಮಾಡುತ್ತಿದೆ. ಇದಕ್ಕಾಗಿ ಅಮೇರಿಕಾ ಮುಂತಾದ ಪ್ರಭಲ ರಾಷ್ಟ್ರಗಳು ದೊಡ್ಡಮಟ್ಟದಲ್ಲಿ ಹಣ ವ್ಯಯಮಾಡುತ್ತಿವೆ. ಸರಕಾರಿ ಸಂಸ್ಥೆಗಳ ಅವ್ಯವಸ್ಥೆ ಮತ್ತು ಅಶಿಸ್ತನ್ನು ಬೂತಗನ್ನಡಿಯಲ್ಲಿ ತೋರುತ್ತಾ ಆ ಮೂಲಕ ಸರಕಾರಿ ವಿರೋಧಿ ಭಾವನೆಯನ್ನು ಜನರಲ್ಲಿ ಬೆಳೆಸುವುದು, ಇಂತಹ ಪರಿಣಾಮಕಾರಿ ಪ್ರಯತ್ನಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಜನರಲ್ಲಿ ನಂಬಿಕೆಯನ್ನು ಹೋಗಲಾಡಿಸುವ ಹುನ್ನಾರಗಳು ನಡೆಯುತ್ತಿವೆ. ಇದರ ಪರಿಣಾಮವೆ ಜನರ ಒಲವು ಖಾಸಗಿ ಸಂಸ್ಥೆ ಮತ್ತು ಉತ್ಪಾದನೆಗಳ ಕಡೆ ಒಲಿಯುವಂತೆ ಮಾಡುವುದು. ಆ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿಯೂ ಖಾಸಗಿ ವಲಯ ಪ್ರವೇಶಿಸುವುದು ಇದರ ಆಳದ ಉದ್ದೇಶ. ಇದೀಗ ಈ ಉದ್ದೇಶ ಈಡೇರುತ್ತಿರುವುದು ನಮಗೆ ಕಾಣುತ್ತಿದೆ.

ನಮ್ಮಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಆಧರಿಸಿ ಸಾಮಾಜಿಕ ವಿದ್ಯಮಾನಗಳನ್ನು ವಿಶ್ಲೇಷಿಸಿದರೆ ಕೆಲವರಿಗೆ ಕ್ಲೀಶೆಯಂತೆಯೂ, ಸಿನಿಕತೆಯಂತೆಯೂ ಕಾಣುವುದಿದೆ. ಜನಸಾಮಾನ್ಯರನ್ನು ಸೂಜಿಗಲ್ಲಿನಂತೆ ಸೆಳೆವ ಸಾಂಸ್ಕøತಿಕ ಸಂಗತಿಗಳನ್ನು ಆಯೋಜಿಸಿ ಆ ಮೂಲಕ ಈ `ಸೆಳೆತ’ವನ್ನೆ ಬಂಡವಾಳವನ್ನಾಗಿಸಿಕೊಳ್ಳುವ ನಡೆಗಳು ಇದೀಗ ದೇಶವ್ಯಾಪಿ ಹೆಚ್ಚಾಗಿವೆ. ಜೀವವಿರೋಧಿ ಚಟುವಟಿಕೆಗಳಿಂದ ಹಣಗಳಿಸಿ ಅದರ ಬಿಡಿಗಾಸಿನಲ್ಲಿ ಸಾಂಸ್ಕøತಿಕ ಸಂಗತಿಗಳನ್ನು ಆಯೋಜಿಸಿ ಒಳ್ಳೆತನಕ್ಕೆ ಸಾಕ್ಷಿಗಳನ್ನು ಕೂಡಿಹಾಕುವ ನಟಿಸುವಿಕೆಯೂ ಇದರ ಹಿಂದಿದೆ. ತನ್ನ ಜೀವವಿರೋಧಿ ಸಂವಿಂಧಾನ ವಿರೋಧಿ ಚಟುವಟಿಕೆಗಳ ಸಂಗತಿಗಳನ್ನು ಜನರಿಂದ ಮರೆಯಿಸಿ ಸಾಂಸ್ಕøತಿಕ ಸಂಗತಿಯೊಂದನ್ನು ಮೇಲೆ ತರುವ ಪ್ರಯತ್ನಗಳನ್ನು ರಾಜಕಾರಣಿ, ಬಂಡವಾಳಶಾಹಿ, ವ್ಯಾಪಾರಸ್ತರು ಆಯೋಜಿಸುವ ಸಾಂಸ್ಕøತಿಕ ಸಮಾವೇಶಗಳ ಮೂಲಕ ನಡೆಯುತ್ತಿದೆ. ಕರ್ನಾಟಕದ ಸಂದರ್ಭದಲ್ಲಿಯೂ ಇಂತಹ ಪ್ರಯತ್ನಗಳು ಸಾಂಘಿಕವಾಗಿಯೂ ವ್ಯಕ್ತಿಗತ ನೆಲೆಯಲ್ಲಿಯೂ ನಡೆಯುತ್ತಿವೆ. ವ್ಯಕ್ತಿಗತ ನೆಲೆಯಲ್ಲಿ `ಆಳ್ವಾಸ್ ನುಡಿಸಿರಿ’ ಎಂಬ ವ್ಯಾಪಾರಿ ಜಾಹೀರಾತಿನಂತಿರುವ ಸಾಹಿತ್ಯ ಕಾರ್ಯಕ್ರಮದ ಆಯೋಜನೆಯನ್ನು ನೋಡಬಹುದು.

ಬಹುಶಃ ಕನ್ನಡದ ಜಾತ್ರೆಯಂತೆ ಎಲ್ಲರನ್ನೂ ಒಳಗೊಂಡು ಜನಜಂಗುಳಿಯಲ್ಲಿ ಜರುಗುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಶಿಸ್ತಿನ ಆಗರವೆಂಬಂತೆ ಬಿಂಬಿಸಿದ್ದೇ ಆಳ್ವಾಸ್ ನುಡಿಸಿರಿಯ ಆಯೋಜನೆ. ಅಂದರೆ ಇಷ್ಟು ದೊಡ್ಡ ಜನರು ಸೇರುವ `ಕನ್ನಡದ ಸಂಗತಿ’ಯನ್ನು ಬಂಡವಾಳ ಮಾಡಿಕೊಳ್ಳುವುದರ ಭಾಗವಾಗಿಯೇ ಇದು ಆರಂಭವಾಯಿತು. ಲಕ್ಷಾಂತರ ಜನರು ಕನ್ನಡದ ಹೆಸರಲ್ಲಿ ಒಂದುಗೂಡುವ ಸಾಹಿತ್ಯ ಸಮ್ಮೇಳನದಲ್ಲಿ ಸಹಜವಾಗಿ ಕೆಲವು ಅಡೆತಡೆಗಳು ನಡೆಯುತ್ತಿದ್ದವು. ಅದನ್ನು ಇನ್ನಷ್ಟು ವ್ಯವಸ್ಥಿತವಾಗಿ ರೂಪಿಸುವ ನಮ್ಮ ಹೊಣೆಗಾರಿಕೆಯೇನು? ಇದನ್ನು ಚೆಂದಗಾಣಿಸುವಲ್ಲಿ ಕಸಾಪ ಯಾವ ಬಗೆಯ ತಯಾರಿ ಮಾಡಬೇಕು ಮುಂತಾದ ಚರ್ಚೆ ಸಂವಾಗಳು ನಡೆದು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ರೂಪಿಸಬೇಕಾಗಿತ್ತು. ಆದರೆ ಇದನ್ನು ಬಿಟ್ಟುಕೊಟ್ಟು ಸಿದ್ಧಗೊಂಡ ಖಾಸಗಿ ಆಯೋಜನೆಯ `ನುಡಿಸಿರಿ’ ಯೇ ಪರ್ಯಾಯವೆಂಬಂತೆ ಕನ್ನಡದ ಹಿರಿಕಿರಿಯ ಸಾಹಿತಿಗಳ ದಂಡೇ ಸಾಗುತ್ತಿತ್ತು. ಇದೀಗ ಅದಕ್ಕೆ ತಡೆಯಾಗಿದೆ.

ಡಾ. ಮೋಹನ್ ಆಳ್ವ ಅವರು ಶಿಕ್ಷಣದ ಕಾರ್ಖಾನೆಯನ್ನು ತೆಗೆದು ವಿದ್ಯಾರ್ಥಿಗಳನ್ನು ಬಂಡವಾಳವನ್ನಾಗಿಸಿಕೊಂಡು ಲಾಭ ತೆಗೆಯುವ ಕುಶಲ ಉದ್ಯಮಿ ಮತ್ತು ಜಮೀನ್ದಾರರು. ಈ ಶಿಕ್ಷಣಕ್ಕೆ ಹೊಂದಿಕೊಂಡಂತಿರುವ ಸಾಂಸ್ಕøತಿಕ ಸಂಗತಿಯನ್ನೂ ಕೂಡ `ಸರಕನ್ನಾಗಿಸುವ’ ಚಟುವಟಿಕೆಯೇ `ನುಡಿಸಿರಿ’ ಆಯೋಜನೆ. ಇದು ಪರೋಕ್ಷವಾಗಿ ತನ್ನ ಶಿಕ್ಷಣ ಸಂಸ್ಥೆಗಳಿಗೊಂದು ಬಹುದೊಡ್ಡ ವಾರ್ಷಿಕ ಜಾಹೀರಾತು. ಈ ನುಡಿಸಿರಿಯಲ್ಲಿ ಭಾಗವಹಿಸುವ ಕನ್ನಡದ ಸಾಂಸ್ಕøತಿಕ ದಿಗ್ಗಜರುಗಳನ್ನೆಲ್ಲಾ ರೂಪದರ್ಶಿಗಳಂತೆ ಬಿಂಬಿಸಲಾಗುತ್ತಿದೆ. ದಿಗ್ಗೆನ್ನುವ ಜಗಮಗಿಸುವ ಕಣ್ಣು ಕೋರೈಸುವ ವೇದಿಕೆಗಳಲ್ಲಿ ಮಾಯದ ದಂಡವೊಂದು ತಮ್ಮ ಮೇಲೆ ಹಾದು ಹೋದಂತೆ ಸಾಂಸ್ಕøತಿಕ ದಿಗ್ಗಜರುಗಳೆಲ್ಲಾ ಮೈದುಂಬಿ ನುಡಿಸಿರಿಯನ್ನು ಹಾಡಿ ಹೊಗಳುತ್ತಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾಸಗಿ ದರ್ಬಾರು ಅನೇಕ ಸಾಹಿತಿ ದಿಗ್ಗಜರಿಗೆ ಮುಜುಗರವನ್ನೇ ತರಲಿಲ್ಲ. ಜಮೀನ್ದಾರಿಕೆಯ ಸಂಕೇತದಂತಿರುವ ನಾಲ್ಕು ಜನರು ಹೊತ್ತೊಯ್ಯುವ ಪಲ್ಲಕ್ಕಿಯ ಮೇಲೆ ಕೂತು ಬೀಗಿದರು. ಖಾಸಗಿ ದರ್ಬಾರನ್ನು ಹೊಗಳುತ್ತಾ ಪ್ರಜಾಸತ್ತಾತ್ಮಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತೆಗಳುವ ಮಟ್ಟಕ್ಕೂ ಬಂದರು. ನುಡಿಸಿರಿಗೆ ನೀರಿನಂತೆ ಖರ್ಚಾಗುತ್ತಿರುವ ಹಣ ಸಂವಿಧಾನಬದ್ಧವಾಗಿ ಗಳಿಸಿದ್ದೇ? ಒಬ್ಬ ಶಿಕ್ಷಣದ ವ್ಯಾಪಾರಿ ಜಮೀನ್ದಾರನ ದರ್ಭಾರಿನಲ್ಲಿ ನಾವು ಮೆರೆಯುವುದು ಸರಿಯೇ? ಎಂದು ಯಾರೂ ಪ್ರಶ್ನಿಸಿಕೊಳ್ಳಲಿಲ್ಲ. ಶಿಕ್ಷಣದ ಹೆಸರಲ್ಲಿ ಸಾಮಾನ್ಯ ಜನರಿಂದ ರಕ್ತದಂತೆ ಹೀರಿದ ಹಣದಲ್ಲಿ ನುಡಿಸಿರಿಯ ವೈಭವ ಜರುಗುವ ಬಗ್ಗೆ ಬಹುಪಾಲು ಜನರಿಗೆ ಕಿಂಚಿತ್ತು ಅಳುಕು ಕಾಣಲಿಲ್ಲ.

ಇದೀಗ ದೇಶವ್ಯಾಪಿ ಅಸಹಿಷ್ಣತೆ ಹೆಚ್ಚುತ್ತಿದೆ. ಇದರ ಭಾಗವಾಗಿಯೇ ಲೇಖಕರು ಚಿಂತಕರು ಇದನ್ನು ವಿರೋಧಿಸಿ ತಮಗೆ ಸಂದ ಗೌರವಗಳನ್ನು ಹಿಂತಿರುಗಿಸುತ್ತಿದ್ದಾರೆ. ಈ ಅಸಹಿಷ್ಣತೆಯನ್ನು ಹುಟ್ಟುಹಾಕುತ್ತಿರುವ ಶಕ್ತಿಗಳೆಲ್ಲವೂ ಬಲಪಂಥೀಯ ಎಂಬ ವಿಷಯ ಗುಟ್ಟಾಗಿಯೇನು ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್‍ಗೆ 50 ವರ್ಷಗಳಾದ ಹಿನ್ನೆಲೆಯ ಆಚರಣೆಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರನ್ನು ರಾಷ್ಟ್ರೀಯ ಗೌರವಾಧ್ಯಕ್ಷರನ್ನಾಗಿಯೂ, ಮೋಹನ್ ಆಳ್ವ ಅವರನ್ನು ರಾಜ್ಯಮಟ್ಟದ ಗೌರವಾಧ್ಯಕ್ಷರನ್ನಾಗಿಯೂ ನೇಮಿಸಿದೆ.

ಈ ಮೂಲಕ ದೇಶದಲ್ಲಿ `ಹಿಂದೂ’ ಎನ್ನುವ ಏಕರೂಪಿ ಸಂಸ್ಕøತಿಯನ್ನು ಹುಟ್ಟುಹಾಕುವ ಸಂವಿಧಾನದ ಆಶಯಗಳಿಗೆ ವಿರುದ್ದವಾದ ಮೂಲಭೂತವಾದಿ ಚಟುವಟಿಕೆಗಳಲ್ಲಿ ಮೋಹನ್ ಆಳ್ವ ಅವರು ನೇರವಾಗಿ ಭಾಗಿಯಾದಂತಾಗಿದೆ. ಇಂಥವರು ಬಹುತ್ವದ ಜೀವಂತಿಕೆ ಇರುವ ಕನ್ನಡ ಸಾಹಿತ್ಯ ಸಂಸ್ಕøತಿಯನ್ನು ಒಳಗೊಂಡ ‘ನುಡಿಸಿರಿ’ಯನ್ನು ಆಯೋಜಿಸುವುದರ ವೈರುಧ್ಯವನ್ನು ಗಮನಿಸಬೇಕು.

ಹನ್ನೊಂದು ವರ್ಷಗಳ ಕಾಲ ಕನ್ನಡ ಬದುಕು ನುಡಿಯ ಬಗ್ಗೆ ನುಡಿಸಿರಿಯನ್ನು ಆಯೋಜಿಸುವ ಆಳ್ವ ಅವರನ್ನು ಈ ಚಿಂತನೆಗಳೇ ವೈಚಾರಿಕವಾಗಿ ಎಚ್ಚರದಲ್ಲಿಡಬೇಕಿತ್ತು. ಆದರೆ ಯಾವ ಮುಜುಗರವೂ ಇಲ್ಲದೆ ಆಳ್ವ ಅವರು ವಿಹಿಂಪದ ಗೌರವಾಧ್ಯಕ್ಷರಾಗಿರುವುದು ಏನನ್ನೂ ಸೂಚಿಸುತ್ತಿದೆ? ಈ ನುಡಿಸಿರಿಯ ಚಿಂತನೆಗಳು ಅದರ ಆಯೋಜಕರನ್ನೆ ಬದಲಾಯಿಸದಿದ್ದದ್ದು ಇನ್ನಾರನ್ನು ಬದಲಾಯಿಸಲು ಸಾಧ್ಯ? ಇದನ್ನು ನೋಡಿದರೆ ಇಡೀ ನುಡಿಸಿರಿ ಪ್ರಖರ ವೈಚಾರಿಕತೆಯನ್ನು ಹುಟ್ಟಿಸದೆ ಉದಾರವಾದಿ ಚಿಂತನೆಯ ಸೋಗಲಾಡಿತನವನ್ನು ಹುಟ್ಟುಹಾಕುವ ಆಯೋಜನೆಯಾಗಿದೆ.
ಮತ್ತು ವೈಚಾರಿಕತೆಯ ಮೊನಚುತನ ಕಳೆದುಕೊಂಡಿರುವ ಒಂದು ಕನ್ನಡ ಬರೆಹಗಾರರನ್ನು ತನ್ನೊಳಗೆ ಜೀರ್ಣಿಸಿಕೊಳ್ಳುವ ಹುನ್ನಾರದಂತಿದೆ.

ಈಚೆಗೆ ನುಡಿಸಿರಿ ವಿರುದ್ಧದ ಮಾತುಗಳಲ್ಲಿ ಆಳ್ವ ಅವರ ಬಲಪಂಥೀಯತೆಯ ಬಗ್ಗೆ ಪ್ರಶ್ನೆ ಎತ್ತಿದಾಗ, ಆಳ್ವ ಅವರು ಈ ಹಿಂದೆ ನುಡಿಸಿರಿಯಲ್ಲಿ ಭಾಗವಹಿಸಿದ ಎಡಪಂಥೀಯ ಚಿಂತಕರ ಪಟ್ಟಿ ಕೊಟ್ಟು `ನೋಡಿ ನಾವು ಎಷ್ಟು ಪ್ರಗತಿಪರರು’ ಎಂದು ವಿವರಿಸಿದರು. ಇದನ್ನು ನೋಡಿದರೆ, ಮುಂದೊಂದು ದಿನ ಇಂತಹ ಪ್ರಶ್ನೆ ಎದ್ದರೆ ಸಾಕ್ಷಿಗೆ ಇರಲಿ ಎಂದು ಪೂರ್ವಯೋಜಿತವಾಗಿಯೇ ಎಡಪಂಥೀಯ ಲೇಖಕರನ್ನು ನುಡಿಸಿರಿಗೆ ಆಹ್ವಾನಿಸಿದ್ದರೂ ಅಚ್ಚರಿಪಡಬೇಕಿಲ್ಲ. ಇದೂ ಕೂಡ ಪ್ರಗತಿಪರತೆಯನ್ನು ತೋರುವ ಮುಖವಾಡದ ಭಾಗವೆಂದು ಸೂಕ್ಷ್ಮವಾಗಿ ಗಮನಿಸಬೇಕು. ಇನ್ನಾದರೂ ಕನ್ನಡದ ಚಿಂತಕರು ನುಡಿಸಿರಿಯಲ್ಲಿ ಭಾಗವಹಿಸುವ ಬಗ್ಗೆ ಎಚ್ಚರದಿಂದಿರಬೇಕು, ನುಡಿಸಿರಿ ಆಹ್ವಾನವನ್ನು ತಿರಸ್ಕರಿಸುವುದು ಕೂಡ ಜೀವಪರ ಸಂಗತಿಯ ಪರವಾದ ಪ್ರತಿರೋಧ ಎನ್ನುವುದನ್ನು ಅರಿಯಬೇಕಿದೆ.

ಈಚಿನ ಮೂರು ವರ್ಷಗಳಿಂದ ನುಡಿಸಿರಿಯನ್ನು ವಿರೋಧಿಸುವ `ಜನನುಡಿ’ ಎಂಬ ಪರ್ಯಾಯ ಚಿಂತನಾ ಸಮಾವೇಶ ಮಂಗಳೂರಿನಲ್ಲಿ ರೂಪುಗೊಳ್ಳುತ್ತಿದೆ. ಸುಖದ ಸುಪ್ಪತ್ತಿಗೆಯಲ್ಲಿದ್ದ ನುಡಿಸಿರಿಗೆ ಇದು ಮಗ್ಗಲು ಮುಳ್ಳಾಗಿ ಚುಚ್ಚುತ್ತಿದೆ. ಮೇಲೆ ಹೇಳಿದ ಎಲ್ಲಾ ಪ್ರಶ್ನೆಗಳನ್ನೂ `ಜನನುಡಿ’ ಆಯೋಜಕರು ಸಾಹಿತಿ ಸಂಸ್ಕøತಿ ಚಿಂತಕರ ಮುಂದಿಡುತ್ತಿದ್ದಾರೆ. ಇದರಿಂದಾಗಿ ಎಚ್ಚೆತ್ತಂತೆ ಬೆಚ್ಚಿಬಿದ್ದಂತೆ ಅನೇಕ ಸಾಹಿತಿ ಚಿಂತಕರು ಜನನುಡಿ ಎತ್ತುವ ಪ್ರಶ್ನೆಗಳಲ್ಲಿ ಸತ್ಯವಿದೆ ಎಂದು ನುಡಿಸಿರಿಯಲ್ಲಿ ಪಾಲ್ಗೊಳ್ಳಲು ಹಿಂದೆ ಸರಿಯುತ್ತಿದ್ದಾರೆ. ಇದೀಗ ನುಡಿಸಿರಿಯ ಜತೆ ಗುರುತಿಸಿಕೊಳ್ಳುವುದು ಮುಜುಗರದ ಸಂಗತಿಯಾಗಿ ಮಾರ್ಪಟ್ಟಿದೆ. ಇಷ್ಟರ ಮಟ್ಟಿಗೆ ಜನನುಡಿ ವೈಚಾರಿಕವಾಗಿ ಪರ್ಯಾಯ ಶಕ್ತಿಯನ್ನು ರೂಪಿಸುತ್ತಿದೆ.


ಜನನುಡಿ ಮುಖ್ಯವಾಗಿ ಹೊಸ ತೆಲೆಮಾರಿನ ಪ್ರತಿರೋಧವಾಗಿದೆ ಎನ್ನುವುದನ್ನು ಗಮನಿಸಬೇಕು. ಪತ್ರಕರ್ತ ನವೀನ್ ಸೂರಿಂಜೆ, ಮುನೀರ್ ಕಾಟಿಪಾಳ್ಯ ಮೊದಲಾದ ಸಂಗಾತಿಗಳು ಇದನ್ನು ರೂಪಿಸುತ್ತಿದ್ದಾರೆ. ಕರ್ನಾಟಕದ ಜೀವಪರ ಸಾಹಿತಿ ಚಿಂತಕರು ಇವರಿಗೆ ಬೆಂಬಲವಾಗಿದ್ದಾರೆ. `ಕೋಮುವಾದಿಗಳು, ಶಿಕ್ಷಣ ವ್ಯಾಪಾರಿಗಳು, ಧರ್ಮಾಧಿಕಾರಿಗಳು, ಜಮೀನ್ದಾರರು ನಡೆಸುತ್ತಿರುವ ಸಾಹಿತ್ಯ ಜಾತ್ರೆಗೆ ಪರ್ಯಾಯವಾಗಿ `ನುಡಿಯು ಸಿರಿಯಲ್ಲ ಬದುಕು’ ಎಂಬ ಘೋಷವಾಕ್ಯದಲ್ಲಿ ಆಯೋಜಿಸುವುದಾಗಿ ಜನನುಡಿ ಸಂಗಾತಿಗಳು ಸ್ಪಷ್ಟವಾದ ನಿಲುವನ್ನು ತಾಳಿದ್ದಾರೆ. ಜನನುಡಿಯು ಪ್ರತಿಕ್ರಿಯಾತ್ಮಕವಾದ ವಾರ್ಷಿಕ ಸಮಾವೇಶ ಮಾತ್ರವಾಗದೆ ಮಂಗಳೂರು ಒಳಗೊಂಡಂತೆ ದಕ್ಷಿಣ ಕನ್ನಡದಲ್ಲಿ ಬಲಗೊಳ್ಳುತ್ತಿರುವ ಬಲಪಂಥೀಯತೆಯ ವಿರುದ್ಧದ ಹೋರಾಟದ ವೇದಿಕೆಯಾಗಿಯೂ ವಿಸ್ತರಣೆಗೊಳ್ಳುವ ಅಗತ್ಯವಿದೆ.

ಭಾರತದ ಸಾಂಸ್ಕøತಿಕ ವಿಧ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಸಾಹಿತ್ಯ ಸಾಂಸ್ಕøತಿಕ ಸಂಗತಿಗಳನ್ನು ಮಾರುಕಟ್ಟೆಯ ಸರಕಾಗಿಸುವುದರ ಭಾಗವಾಗಿ ಕಾರ್ಪೋರೇಟ್ ಶಕ್ತಿಗಳು `ಲಿಟರರಿ ಫೆಸ್ಟಿವೆಲ್’ನ್ನು ಆಯೋಜಿಸುತ್ತಿವೆ. ಮುಂಬೈ, ಗೋವಾ, ಕೊಚಿ, ಜೈಪುರ, ಹೈದರಾಬಾದ್, ಲಕ್ನೋ, ಬೆಂಗಳೂರು ಲಿಟರರಿ ಫೆಸ್ಟಿವೆಲ್‍ಗಳನ್ನು ಗಮನಿಸಿದರೆ ಅವುಗಳ ಅದ್ದೂರಿತನ ಮತ್ತು ಅವು ರೂಪಿಸುತ್ತಿರುವ ಉದಾರವಾದಿ ಸಾಹಿತ್ಯದ ಪರಿಕಲ್ಪನೆಗಳು ಭಯವನ್ನು ಹುಟ್ಟಿಸುತ್ತಿವೆ. ಪ್ರಭುತ್ವಪರವಾದ, ಬಲಪಂಥೀಯವಾದಕ್ಕೆ ಪೂರಕವಾದ ಮನಸ್ಸುಗಳನ್ನು ಉತ್ಪಾದಿಸುವ ವೇದಿಕೆಗಳಂತೆ ಕಂಡುಬರುತ್ತಿವೆ.

ಇಂತಹ ವೇದಿಕೆಯಲ್ಲಿಯೇ ಅಶೀಶ್ ನಂದಿಯವರು ದಲಿತರಲ್ಲಿಯೇ ಹೆಚ್ಚು ಭ್ರಷ್ಟರಿರುವುದು ಎಂಬ ಹೇಳಿಕೆಯನ್ನು ಮಾಡಿದರು. ಇಂತಹ ಕಾರ್ಯಕ್ರಮಗಳ ಆಯೋಜನೆಯ ಹಿಂದಣ ಸಾಂಸ್ಕøತಿಕ ಹುನ್ನಾರಗಳನ್ನು ಅರಿಯದೆ ಹೋದರೆ ಸಾಹಿತ್ಯವೂ ಕಾರ್ಪೋರೇಟ್ ವಲಯಕ್ಕೆ ಬೇಕಾದ ಸರಕನ್ನು ಉತ್ಪಾದಿಸುವ ಚಟುವಟಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಈ ಬಗೆಯ ಸಾಂಸ್ಕøತಿಕ ಕಾರ್ಪೋರೇಟೀಕರಣದ ಅರಿವಿಲ್ಲದ ಅರಿವುಗೇಡಿಗಳು ಧಾರವಾಡದಲ್ಲಿ ಜೈಪುರ ಲಿಟರರಿ ಫೆಸ್ಟಿವೆಲ್‍ನ ಪಡಿಯಚ್ಚಿನಂತೆ `ಸಾಹಿತ್ಯ ಸಂಭ್ರಮ’ವನ್ನು ಆಯೋಜಿಸುತ್ತಿದ್ದಾರೆ. ಹಿರಿಯ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜು ಅವರ ನಾಯಕತ್ವದಲ್ಲಿ ಅನೇಕ ಹಿರಿಯ ಸಾಹಿತಿಗಳು ಇದರ ಭಾಗವಾಗಿದ್ದಾರೆ. ಇದನ್ನು ವಿರೋಧಿಸಿ ಎತ್ತುವ ಪ್ರಶ್ನೆಗಳ ಆಳದ ಕಾಳಜಿಯನ್ನೆ ಅರ್ಥಮಾಡುಕೊಳ್ಳದೆ ಸಾಹಿತ್ಯ ಸಂಭ್ರಮವನ್ನು ವಿರೋಧಿಸುವವರನ್ನು ಕೆಡುಕರು/ಕಿಡಿಗೇಡಿಗಳು ಎಂದು ಜರಿಯಲಾಗುತ್ತಿದೆ. ಈ ಮಧ್ಯೆಯೂ ಸಾಹಿತ್ಯ ಸಂಭ್ರಮವನ್ನು ವಿರೋಧಿಸಿ ದೊಡ್ಡಮಟ್ಟದ ಜನಾಭಿಪ್ರಾಯ ರೂಪಿಸುವ ಕೆಲಸ ಧಾರವಾಡದಲ್ಲಿ ನಡೆಯಿತು. ಎಂ.ಡಿ.ಒಕ್ಕುಂದ, ಬಸವರಾಜ ಸೂಳೀಬಾವಿ, ಶಂಕರ್ ಹಲಗತ್ತಿ, ಕೆ.ಆರ್.ದುರ್ಗಾದಾಸ್, ಸಂಜೀವ ಕುಲಕರ್ಣಿ, ಅಶೋಕ ಶೆಟ್ಟರ್ ಮೊದಲಾದವರು ಇದರ ಭಾಗವಾಗಿಯೇ ಧಾರವಾಡದಲ್ಲಿ ಪರ್ಯಾಯ `ಜನಸಾಹಿತ್ಯ ಸಮಾವೇಶ’ವನ್ನು ಹುಟ್ಟು ಹಾಕಿದರು. ಇದಕ್ಕೆ ಬೆಂಬಲವೆಂಬಂತೆ ಕರ್ನಾಟಕದ ಚಳವಳಿಗಾರರು, ಜೀವಪರ ಸಂಗಾತಿಗಳು, ಪ್ರಜ್ಞಾವಂತ ಸಾಹಿತಿಗಳೂ ಜತೆಗೂಡಿದರು. ಇದೀಗ ಜನಸಾಹಿತ್ಯ ಸಂಘಟನೆಯಾಗಿ `ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ’ ಕುರಿತ ರಾಷ್ಟ್ರೀಯ ಜಾಗೃತಿ ಮೂಡಿಸುವ ಚಿಂತನೆಗಳನ್ನು ಆಯೋಜಿಸುವಂತಹ ಕೆಲಸ ಮಾಡುತ್ತಿದೆ. ಅಂತೆಯೇ ಚಳವಳಿಯ ಸಂಗಾತಿಗಳನ್ನು ಸಂಬಂಧ ಬೆಸೆವ ಚರ್ಚೆ ಸಂವಾದಗಳನ್ನು ಧಾರವಾಡದಲ್ಲಿ ಆಯೋಜಿಸುತ್ತಿದೆ.

ಜನನುಡಿ ಮತ್ತು ಜನಸಾಹಿತ್ಯ ಸಂಘಟನೆ ಈ ಎರಡೂ ಸಂಗತಿಗಳು ಕನ್ನಡ ಸಾಹಿತ್ಯ ಚರಿತ್ರೆಯ ವಾಗ್ವಾದ ಪರಂಪರೆಯಲ್ಲಿ ಚಾರಿತ್ರಿಕ ವಿದ್ಯಮಾನಗಳಾಗಿವೆ. ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಗತಿಗಳು ಕಾರ್ಪೋರೇಟ್ ಶಕ್ತಿಗಳ ಕೈಯಲ್ಲಿ ಸಿಕ್ಕು ಮಾರುಕಟ್ಟೆಯ ಸರಕಾಗುವುದನ್ನು ತಡೆಯುವ ಹೋರಾಟದ ಭಾಗವಾಗಿಯೂ ಇವುಗಳ ಮಹತ್ವವಿದೆ.

ಈ ಎರಡೂ ಪರ್ಯಾಯಗಳಲ್ಲಿ `ಜನ’ ಎನ್ನುವ ಪದ ಮುಖ್ಯವಾಗಿರುವುದನ್ನು ಗಮನಿಸಬೇಕು. `ಸಿರಿ’ `ಸಂಭ್ರಮ’ ‘ಉತ್ಸವ’ಗಳೆಂಬ ಹೊಟ್ಟೆತುಂಬಿದವರ ದೌಲತ್ತಿನ ಪದಗಳಾಚೆ ಸಾಮಾನ್ಯ `ಜನ’ ಎಂಬ ಪದವು ಜನಸಾಮಾನ್ಯರನ್ನು ಒಳಗೊಳ್ಳುವ ಸಾಂಕೇತಿಕತೆಯಂತೆ ಕಾಣುತ್ತದೆ. ಸಾಹಿತ್ಯ ಮತ್ತು ಸಾಂಸ್ಕøತಿಕ ವಿದ್ಯಮಾನಗಳು `ಜನ’ ಸಾಮಾನ್ಯರ ಚೈತನ್ಯದ ಸಂಗತಿಗಳು ಎನ್ನುವ ನಿಲುವನ್ನು ಗಟ್ಟಿ ಮಾಡುವ ಪ್ರಯತ್ನದ ಭಾಗವೆಂದೇ ತಿಳಿಯಬೇಕಿದೆ. ಈ ಸಂಗತಿಗಳನ್ನು ಇನ್ನಷ್ಟು ವ್ಯವಸ್ಥಿತವಾಗಿಯೂ, ನಿಜಾರ್ಥದಲ್ಲಿ ಎಲ್ಲರನ್ನು ಒಳಗೊಳ್ಳುವ ವೇದಿಕೆಗಳನ್ನಾಗಿಯೂ ಹೋರಾಟದ ಸಂಗತಿಯನ್ನಾಗಿಯೂ ರೂಪಿಸಬೇಕಿದೆ. ಇದು ಈ ಕಾಲದ ತುರ್ತಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...