Tuesday, December 01, 2015

ಅಹಿಂದ ಸರಕಾರದಲ್ಲಿ ದಲಿತರ ಸೌಲಭ್ಯಗಳು ಮೊಟಕು
  ಪ್ರೊ. ಎಂ.ನಾರಾಯಣ ಸ್ವಾಮಿ
 
 
 
 

ಪರಿಶಿಷ್ಟ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿಗೆ ಸಂಚಕಾರ

ಭಾರತದಲ್ಲಿ ಉನ್ನತ ಶಿಕ್ಷಣವು ಮೇಲ್ಜಾತಿ ಹಿಂದೂಗಳ ಏಕಸ್ವಾಮ್ಯದಲ್ಲಿದೆ. ಅಸ್ಪಶ್ಯರಿಗೆ ಉನ್ನತ ಶಿಕ್ಷಣವನ್ನು ನಿರಾಕರಿಸಲಾಗುತ್ತಿದೆ. ಬಡತನದ ಕಾರಣದಿಂದಾಗಿ ಉನ್ನತ ಶಿಕ್ಷಣ ವಂಚಿತರಾದ ಅಸ್ಪಶ್ಯರು ಸಾರ್ವಜನಿಕ ಸೇವೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಲಾಗುತ್ತಿಲ್ಲ. ಉನ್ನತ ಶಿಕ್ಷಣವನ್ನು ಪಡೆಯಲು ಅಗತ್ಯವಿರುವ ಸೌಲಭ್ಯಗಳನ್ನು ಸರಕಾರವು ಅಸ್ಪಶ್ಯರಿಗೆ ಕೊಡುತ್ತಿಲ್ಲ. ಹಿಂದೂ ಸವರ್ಣೀಯರ ಧರ್ಮದತ್ತಿ ಸಂಸ್ಥೆಗಳು ಅವರವರ ಜಾತಿಗಳಿಗೆ ಸೀಮಿತವಾಗಿರುವುದು ಶೋಚನೀಯವಾಗಿದೆ. ಹೀಗಿರುವಾಗ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಸ್ಪಶ್ಯರು ಉನ್ನತ ಹುದ್ದೆಗಳಿಗೆ ಏರಬೇಕೆನ್ನುವ ಸವರ್ಣೀಯರ ವಾದವು ಕುಟಿಲತನದಿಂದ ಕೂಡಿದೆ. -ಡಾ.ಬಾಬಾಸಾಹೇಬ್ ಅಂಬೇಡ್ಕರ್
    
ಡಾ.ಬಿ.ಆರ್.ಅಂಬೇಡ್ಕರರು ಹೇಳಿರುವ ಈ ಮಾತುಗಳನ್ನು ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ನೀತಿನಿರ್ಧಾರಗಳನ್ನು ಕೈಗೊಳ್ಳುವವರು ಕೆಲಸಂದರ್ಭಗಳಲ್ಲಿ ಸಂಪೂರ್ಣವಾಗಿ ಮನದಟ್ಟು ಮಾಡಿಕೊಂಡಂತೆ ಕಂಡುಬರುತ್ತಿಲ್ಲ. ಇದರಿಂದಾಗಿಯೇ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸೋಲಾಗುತ್ತಿದೆ. ಹೀಗಾದಾಗ ಅಸ್ಪಶ್ಯರು ಇನ್ನಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಅಸ್ಪಶ್ಯರ ಅಭಿವೃದ್ಧಿಗೆ ಕೊಡಲಿ ಏಟು ಬಿದ್ದಂತಾಗುತ್ತ್ತಿದೆ. ರಾಜ್ಯ ಸರಕಾರವು ಮ್ಯಾಟ್ರಿಕ್ಯುಲೇಷನ್ (ಎಸೆಸೆಲ್ಸಿ) ನಂತರದ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶುಲ್ಕ ವಿನಾಯಿತಿಯ ಸವಲತ್ತನ್ನು ಮೊಟಕುಗೊಳಿಸುತ್ತಿದೆ. ಶುಲ್ಕ ವಿನಾಯಿತಿಯ ವಿಷಯದಲ್ಲಿ ಪರಿಶಿಷ್ಟರ ಹಿತಾಸಕ್ತಿಯನ್ನು ಕಾಪಾಡಬೇಕಾದ ಸಮಾಜ ಕಲ್ಯಾಣ ಇಲಾಖೆಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಂಪೂರ್ಣ ಅರಿವಿದ್ದಂತಿಲ್ಲ. ಈ ಸೌಲಭ್ಯವನ್ನು ಕ್ರಮೇಣವಾಗಿ ಹಿಂಪಡೆಯಲಾಗುತ್ತಿದೆಯೇ ಎಂಬ ಪ್ರಶ್ನೆಯೆ ದ್ದಿದೆ. ಹೀಗಾದರೆ, ಪರಿಶಿಷ್ಟರ ಉನ್ನತ ವ್ಯಾಸಂಗಕ್ಕೆ ಹಿನ್ನಡೆಯಾಗುತ್ತದೆ. ಇಲ್ಲವೇ, ಶುಲ್ಕ ಭರಿಸುವ ಕುಟುಂಬಗಳು ಆರ್ಥಿಕವಾಗಿ ಜರ್ಜರಿತವಾಗುತ್ತವೆ. ಅಸ್ಪೃಶ್ಯರು ಉನ್ನತ ಹುದ್ದೆಗಳನ್ನು ಹೊಂದಬೇಕೆನ್ನುವ ಡಾ. ಅಂಬೇಡ್ಕರರ ಆಶಯ ಫಲಿಸದಾಗುತ್ತದೆ. ಅಧಿಕಾರಿಗಳ ದರ್ಪಕ್ಕೆ ನಲುಗಿಹೋದ ದಲಿತ ವಿದ್ಯಾರ್ಥಿನಿ
      

ಇದು ಮಾರ್ಚ್ 17, 2006ರಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ. ಬೆಂಗಳೂರಿನ ಕೃಷಿವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ. (ಕೃಷಿ) ಪದವಿಯನ್ನು ಶೇ. 86 ಅಂಕಗಳೊಂದಿಗೆ ಪೂರ್ಣಗೊಳಿಸಿದ ಪ್ರತಿಭಾವಂತ ದಲಿತ ವಿದ್ಯಾರ್ಥಿನಿ ಅನಿತಾಲಕ್ಷ್ಮೀ. ಆ ಬ್ಯಾಚಿನಲ್ಲಿ ಆಕೆಯೇ ಟಾಪರ್ ಆಗಿದ್ದರಿಂದ ಹೆಕ್ಸ್ಟ್ ಕಂಪೆನಿ ಪ್ರಾಯೋಜಿತ ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕವನ್ನು ಘೋಷಿಸಲಾಗಿತ್ತು. ಸ್ನಾತಕ ಪದವಿಯ ನಂತರ ಎಂ.ಎಸ್ಸಿ. (ಕೃಷಿ) ಪದವಿಯ ವ್ಯಾಸಂಗಕ್ಕೆ ಆಕೆ ಸೇರಿಕೊಂಡಿದ್ದಳು. ಮೊದಲ ವರ್ಷದ ಒಂದು ಸೆಮಿಸ್ಟರ್ ಮುಗಿಯುವುದರಲ್ಲಿತ್ತು. ಅಷ್ಟರಲ್ಲಿ ಘಟಿಕೋತ್ಸವ ಬಂತು. ಎಂ.ಎಸ್ಸಿ. ವ್ಯಾಸಂಗದ ಪ್ರಥಮ ವರ್ಷದ ಅವಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಇನ್ನೂ ಮಂಜೂರಾಗಿರಲಿಲ್ಲ. ಆಕೆ ಅರ್ಜಿ ಸಲ್ಲಿಸಿಕೊಂಡಿದ್ದಳು. ಅರ್ಜಿ ಸಲ್ಲಿಸಿಕೊಂಡ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಅನುದಾನ ಬಂದಮೇಲೆ ಬಿಡುಗಡೆ ಮಾಡಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ವಿಶ್ವವಿದ್ಯಾನಿಲಯಕ್ಕೆ ದಿನಾಂಕ 19.11.2005ರಂದು ಬರೆದ ಪತ್ರಮುಖೇನ ತಿಳಿಸಿದ್ದರು. ಆದರೆ, ವಿವಿಯ ಅಧಿಕಾರಿಗಳು ಘಟಿಕೋತ್ಸವದಲ್ಲಿ ಭಾಗವಹಿಸಿ ಪದವಿ ಪ್ರಮಾಣ ಪತ್ರ ಮತ್ತು ಚಿನ್ನದ ಪದಕ ಪಡೆಯಬೇಕೆಂದರೆ ಬಾಕಿ ಶುಲ್ಕವನ್ನು ಇಂದೇ ಪಾವತಿಸಬೇಕು ಎಂದು ಘಟಿಕೋತ್ಸವ ಇನ್ನೆರಡು ದಿನ ಇರುವಾಗ ಅನಿತಾಲಕ್ಷ್ಮೀಗೆ ತಾಕೀತು ಮಾಡಿದರು. ಬಡವಳಾದ ಆಕೆ ಗುರುಹಿರಿಯರಲ್ಲಿ ಕೇವಲ ಎರಡು ಸಾವಿರ ರೂಪಾಯಿಗಳ ಸಾಲಕ್ಕಾಗಿ ಮೊರೆ ಇಟ್ಟಿದ್ದಾಳೆ. ಯಾವುದೂ ಕೈಗೂಡದಿದ್ದಾಗ ನೇರ ಹಾಸ್ಟೆಲ್‌ಗೆ ಹೋಗಿ ಸಂಜೆ ಐದು ಘಂಟೆ ಸುಮಾರಿಗೆ ನೇಣು ಬಿಗಿದುಕೊಂಡುಬಿಟ್ಟಳು. ಬಡಕುಟುಂಬದಿಂದ ಬಂದ ಅನಿತಾಲಕ್ಷ್ಮೀ ಎಂಬ ದಲಿತ ವಿದ್ಯಾರ್ಥಿನಿ ಶುಲ್ಕ ಪಾವತಿಸಲಾಗದೆ ಇಹಲೋಕ ತ್ಯಜಿಸಿದ್ದು ಅಲ್ಲಿನ ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಯಿತು. ತದನಂತರ ವಿದ್ಯಾರ್ಥಿಗಳಿಂದ ಧರಣಿ, ಬೇಡಿಕೆ ಎಲ್ಲ ನಡೆದವು. ಆದರೇನು ಫಲ? ಚೆನ್ನಾಗಿ ಓದಿ ನೌಕರಿ ಸೇರಬೇಕೆಂಬ ಹೆತ್ತವರ ಆಸೆಯನ್ನು ಪೂರೈಸಲಾಗದೆ ಅನಿತಾಲಕ್ಷ್ಮೀ ಅಸಹಾಯಕಳಾಗಿ ಹೊರಟುಬಿಟ್ಟಳು. ವಿದ್ಯಾರ್ಥಿವೇತನಕ್ಕೆ ಅರ್ಹರಿರುವ, ಅರ್ಹರಿಲ್ಲದ ಹಲವಾರು ಪರಿಶಿಷ್ಟ ವಿದ್ಯಾರ್ಥಿಗಳು ಇಂದಿಗೂ ಇಂತಹುದೇ ಸಮಸ್ಯೆಗಳಲ್ಲಿದ್ದಾರೆ. ಅವರ ನೆರವಿಗೆ ಬರುವವರು ಯಾರು? ಸಂವಿಧಾನವೇ? ಸರಕಾರವೇ? ಆದೇಶಗಳೇ? ದಲಿತ ರಾಜಕಾರಣಿಗಳೇ? ರಾಜಕೀಯ ಇಚ್ಛಾಶಕ್ತಿಯೇ? ..... ? ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಕ್ಷ ದಲಿತ ಅಧಿಕಾರಿ ಶ್ರೀ ಸಿದ್ದಯ್ಯನವರು 14.09.2012ರಂದು ಸುತ್ತೋಲೆಯೊಂದನ್ನು ಹೊರಡಿಸಿ ‘‘ಪರಿಶಿಷ್ಟ ವಿದ್ಯಾರ್ಥಿಗಳು ಶುಲ್ಕ ಪಾವತಿಸುವಂತೆ ಒತ್ತಾಯಿಸಕೂಡದು’’ ಎಂದಿದ್ದರು. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ವಿಶ್ವವಿದ್ಯಾನಿಲಯಗಳ ಎಸ್ಸಿ/ಎಸ್ಟಿ ಸೆಲ್‌ಗಳ ಅಧಿಕಾರಿಗಳು ಸಂಬಂಧಿಸಿದ ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಮನ್ವಯತೆ ಸಾಧಿಸಿಕೊಳ್ಳಲು ಕೋರಲಾಗಿತ್ತು. ಶುಲ್ಕ ವಿನಾಯಿತಿಯ ಇತಿಹಾಸ

 
ಕೇಂದ್ರ ಸರಕಾರ ಕಾಲಕಾಲಕ್ಕೆ ನಿಗದಿಗೊಳಿಸಿದ ಆದಾಯ ಮಿತಿಯೊಳಗಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗಷ್ಟೇ ಭಾರತ ಸರಕಾರದ ವಿದ್ಯಾರ್ಥಿ ವೇತನ ಮತ್ತು ಶೈಕ್ಷಣಿಕ ಶುಲ್ಕದ ಪಾವತಿ ಸೌಲಭ್ಯ ಸಿಗುತ್ತದೆ. ಆದಾಯದ ಮಿತಿ ಮೀರಿದವರಿಗೆ ವಿದ್ಯಾರ್ಥಿ ವೇತನ ಬರುವುದಿಲ್ಲ. ಶುಲ್ಕವೂ ಬರುವುದಿಲ್ಲ. ಆಗ ರಾಜ್ಯ ಸರಕಾರವು ಶುಲ್ಕ ವಿನಾಯಿತಿಯ ಸೌಲಭ್ಯವನ್ನು ನೀಡಬೇಕಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯು 1968ರಲ್ಲಿ ಹೊರಡಿಸಿರುವ ಆದೇಶದಲ್ಲಿ ಶುಲ್ಕ ವಿನಾಯಿತಿಯ ಸ್ಪಷ್ಟ ನಿರ್ದೇಶನವಿದೆ. ಮೈಸೂರು ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಯಾವುದೇ ವಯೋಮಾನದ ಮಿತಿಯಿಲ್ಲದೆ, ಆದಾಯ ಮಿತಿಯಿಲ್ಲದೆ ಮತ್ತು ಅನುತ್ತೀರ್ಣತೆಯ ಮಿತಿಯಿಲ್ಲದೆ ಸರಕಾರದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ರಿಯಾಯಿತಿಗೆ ಅರ್ಹರು ಎಂಬ ನಿಯಮವಿದೆ. ಮುಂದುವರಿದು ‘‘ಭಾರತ ಸರಕಾರದ ವಿದ್ಯಾರ್ಥಿ ವೇತನ ಪಡೆಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಶುಲ್ಕ ವಿನಾಯಿತಿಯ ನಿಯಮ ಅನ್ವಯವಾಗುತ್ತದೆ’’ ಎಂದೂ ವಿವರಿಸಲಾಗಿದೆ. ಇದೇ ಆದೇಶದಲ್ಲಿ ಅದಕ್ಕೂ ಹಿಂದೆ ಇದ್ದ 1966ರ ಶುಲ್ಕ ವಿನಾಯಿತಿಯ ಆದೇಶವನ್ನೂ ಉಲ್ಲೇಖಿಸಲಾಗಿದೆ. ಶುಲ್ಕ ವಿನಾಯಿತಿಯ ಇತಿಹಾಸವನ್ನು ಪರಿಶೀಲಿಸಿದರೆ 1968ರ ಆದೇಶ 1982ರವರೆಗೆ ಜಾರಿಯಲ್ಲಿತ್ತು ಎನ್ನುವುದು ವೇದ್ಯವಾಗುತ್ತದೆ. 

1982ರ ಪರಿಷ್ಕೃತ ಸಮಗ್ರ ಆದೇಶ
  

ಡಿಸೆಂಬರ್ 16, 1982ರಲ್ಲಿ ಸಮಾಜ ಕಲ್ಯಾಣ ಇಲಾಖೆಯು ಶುಲ್ಕ ವಿನಾಯಿತಿಯ ಪರಿಷ್ಕೃತ ಆದೇಶವನ್ನು ಹೊರಡಿಸಿದೆ. ಅದರಂತೆ, ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಹಿಂದುಳಿದ ಪಂಗಡ (ಬಿಟಿ)ವನ್ನು ಹೊರತುಪಡಿಸಿ ಹಿಂದುಳಿದ ಸಮುದಾಯ (ಬಿಸಿಎಂ), ಹಿಂದುಳಿದ ಜಾತಿ (ಬಿಸಿಟಿ) ಮತ್ತು ಹಿಂದುಳಿದ ವಿಶೇಷ ಗುಂಪು (ಬಿಎಸ್‌ಜಿ) ಗಳಿಗೆ ಶುಲ್ಕ ವಿನಾಯಿತಿಯ ಸವಲತ್ತನ್ನು ನೀಡಲು ವಾರ್ಷಿಕ ಆದಾಯ ಮಿತಿಯನ್ನು ರೂ. 3,600ಕ್ಕೆ ನಿಗದಿಗೊಳಿಸಿದೆ. ಇದೇ ಆದೇಶದಲ್ಲಿ ಭಾರತ ಸರಕಾರದ ವಿದ್ಯಾರ್ಥಿ ವೇತನ ಪಡೆಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿಯಿಲ್ಲದೆ ಶುಲ್ಕ ವಿನಾಯಿತಿ ನೀಡುವ ಅಂಶವನ್ನು ಪುನರುಚ್ಚರಿಸಲಾಗಿದೆ. ಇದು ಪರಿಶಿಷ್ಟರ ಉನ್ನತ ಶಿಕ್ಷಣದ ವ್ಯಾಸಂಗಕ್ಕೆ ಅನುಕೂಲಕರ ಅಂಶವಾಗಿದೆ. 1982ರ ಆದೇಶದ ಪ್ರಕಾರ ಸರಕಾರದ ಎಲ್ಲ ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಪರಿಶಿಷ್ಟರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಜೊತೆಗೆ, ಅನುದಾನಿತ ಹಾಗೂ ಅನುದಾನಿತವಲ್ಲದ ಮಾನ್ಯತೆ ಪಡೆದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಶುಲ್ಕ ವಿನಾಯಿತಿ ನೀಡಲಾಗಿದೆ. ಇಂತಹ ಶುಲ್ಕ ವಿನಾಯಿತಿ ನೀಡಲು ನಿಗದಿತ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಉದಾಹರಣೆಗೆ, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ತಮ್ಮ ಅಧೀನದ ಮಾನ್ಯತೆ ಪಡೆದ ಖಾಸಗಿ ಮತ್ತು ಅನುದಾನಿತ ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ಘೋಷಿಸಬೇಕು. ಸರಕಾರದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದಲ್ಲಿ ಆಯಾಯ ಸಂಸ್ಥೆಯ ಪ್ರಾಂಶುಪಾಲರು ಶುಲ್ಕ ವಿನಾಯಿತಿಯ ತೀರ್ಮಾನವನ್ನು ತೆಗೆದುಕೊಳ್ಳಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಕುಲಸಚಿವರು ಇಂತಹ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಡಿಸೆಂಬರ್ 1982ರ ಆದೇಶವೇ ಬಹುತೇಕ ಕಡೆ ಇಂದಿಗೂ ಜಾರಿಯಲ್ಲಿದೆ. ಈ ಆದೇಶವನ್ನು ಸ್ಥಗಿತಗೊಳಿಸಲಾಗಿಲ್ಲ. ಇಂತಹ ಸಮಗ್ರ ಆದೇಶ ಹೊರಬರಲು ಅಂದಿನ ರಾಜಕೀಯ ಇಚ್ಛಾಶಕ್ತಿ ಕಾರಣವಾಗಿತ್ತು. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಜಿಎಫ್‌ಮೀಸಲು ಕ್ಷೇತ್ರದಿಂದ ಶಾಸಕರಾಗಿದ್ದ ಅಂಬೇಡ್ಕರ್‌ವಾದಿ ಸಿ.ಎಂ.ಆರ್ಮುಗಂರವರು ಸಾಕಷ್ಟು ದಲಿತಪರ ಕೆಲಸಗಳನ್ನು ಮಾಡಿಸಿದವರು. ಶುಲ್ಕ ವಿನಾಯಿತಿಯ ಪರಿಷ್ಕೃತ ಸಮಗ್ರ ಆದೇಶವೂ ಅಂತಹ ಉತ್ತಮ ಕೆಲಸಗಳಲ್ಲೊಂದು. ಜೊತೆಗೆ, ದಿವಂಗತ ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆಯಂತಹ ಧೀಮಂತ ದಲಿತ ರಾಜಕಾರಣಿಗಳ ಒತ್ತಾಸೆಯೂ ಪರಿಶಿಷ್ಟರ ಪರವಾಗಿ ಹಾಗೂ ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸಿದೆ. ಇದೇ ಸಾಲಿನಲ್ಲಿ ಬಿ.ಶ್ಯಾಮಸುಂದರ್, ಟಿ.ಚನ್ನಯ್ಯ, ಬಿ.ರಾಚಯ್ಯ, ಎನ್.ರಾಚಯ್ಯ, ಬಿ.ಸೋಮಶೇಖರ್, ಗೋಪಾಲ ಮುಕುಂದ ಕಾನಡೆ, ಡಾ.ಜಿ.ಪರಮೇಶ್ವರ, ಆರ್.ಧ್ರುವನಾರಾಯಣ ಮುಂತಾದವರು ನಿಲ್ಲುತ್ತಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...