Tuesday, January 19, 2016

'ಯುವ ಕಾವ್ಯ- 6': ಮೂರು ಕವಿತೆ
ಆತ್ಮೀಯರೆ,
ಜನೇವರಿ 24 ರಂದು ರವಿವಾರ ಧಾರವಾಡದ ಆಲೂರ ವೆಂಕಟರಾವ್ ಭವನದಲ್ಲಿ ಸಂಜೆ 5.30 ಗಂಟೆಗೆ 'ಯುವ ಕಾವ್ಯ: ಓದು-ಮಾತು -6' ಕಾರ್ಯಕ್ರಮದಲ್ಲಿ ಚನ್ನಪ್ಪ ಅಂಗಡಿ ಅವರು ಓದುವ ಕವಿತೆಗಳು. ಗಮನಿಸಿ. 24 ರಂದು ಸೇರೋಣ ಬನ್ನಿ.. ಕಾವ್ಯದ ಕುರಿತು ಮಾತಾಡೋಣ..

ನಿಮ್ಮ ಸ್ನೇಹಿತರಿಗೂ ತಲುಪಿಸಿ
ಹಮ್ಮಿಂಗ್ ಬರ್ಡ್‌ನ ಸ್ವಗತ 


ಸಣ್ಣದದೇನಿದ್ದರೂ ಚೆಂದವೆಂಬುಪಾಧಿಯಿದೆ
ಬಣ್ಣವದದೇನಿದ್ದರೂ ಸೃಷ್ಟಿಯಲದಕೊಂದು ನಿಯತಿಯಿದೆ
ನಾನೂ ಹಾರುತ್ತೇನೆ ಎಲ್ಲ ಹಕ್ಕಿಗಳಂತೆ
ರೆಕ್ಕೆಗಳಿವೆ ಹಾರುವ ನಿಯಮದಂತೆ
ತಾಯ್ನೆಲ ಕಾಯ್ವ ಯೋಧನ ಸಮವಸ್ತ್ರದಂತೆ.

ಜೇನು ಹೀರುತ್ತೇನೆ ಶಲಾಕಾಗ್ರದ ತಳದಿಂದ
ಮಧುವ ಮುಕ್ಕಳಿಸುಗುಳುವ ಮಹಾಂತನಂತೆ
ಹಾಡಿ ಹೊಗಳುತ್ತಾರೆ ಕವಿಗಣಂಗಳು
ಹೊಟ್ಟೆ ತುಂಬದಿದ್ಯಾವುದೂ ಹಸಿವಿಗಾಗಿ ಹಸಿದವಗೆ.

ಸೆಡ್ಡು ಹೊಡೆಯುತ್ತೇನೆ ಪುಟಿದೆದ್ದು
ಹಾರುವ ಹದ್ದು ಗಿಡುಗಗಳ ಸದ್ದಿಗೆ
ನೆಲದ ನೆತ್ತಿಯ ಮೇಲೆ ರೆಕ್ಕೆಗಳನಗಲಿಸಿ
ಮಸಿಗತ್ತಲೆ ಹರಡುವ ಮದೋನ್ಮತ್ತನಿಗೆ
ಝಳಪಿಸುವ ಕಿರಣದಿಂದೆದೆಗಿರಿಯುವಾಗ
ಕೊಂಕಿಸುವ ಕೊರಳಿಗೆ ಜಿಗುಪ್ಸೆಯೇ ಬೇಟೆ !

ಸಂದಿಗೊಂದಿ ಬಿರುಕಿನಲಿ ಸ್ಥಿರ-ಚರಾಸ್ತಿ, ಗಂಟು
ಹೂವಿನೊಡಲೊಳಗೆ ಬಂಡಾಯದ ಬಂಡಿನಂಟು
’ಅದಕು ಇದಕು ಎದಕೂ’ ತಬ್ಬಿರುವ ನಂಟು
ಮುದ್ದಿಗೂ ಸದ್ದಿಗೂ ಬಿದ್ದಿದ್ದೆ ಜಿದ್ದು
ನನ್ನಾನಂದದ ಮುಂದೆ ನಿನ್ನಧಿಕಾರದ ದರ್ಪ
ನಿನ್ನ ಸುತ್ತಿ ಹತ್ತಿಕ್ಕಿರುವ ಏಳು ಹೆಡೆ ಸರ್ಪ.

ಕಾರುವ ಬೆಂಕಿಗೆ ಬೆಳದಿಂಗಳುಡುಗೆ ತೊಡಿಸಿ
ಎರಗಿದ ಮೈಯ ಎಡಬಲಕೆ ಕಚಗುಳಿಯಿಟ್ಟು
ಕಕ್ಕುವ ವಿಷದಲಿ ಗಂಧ ತೇಯ್ದು ಲೇಪಿಸಿ
ಕುಕ್ಕುವ ಕೊಕ್ಕಿಗೆ ಕಣ್ಣಪಾಪೆಯನು ಮುಂದಿಟ್ಟು
ನೆಗೆಯುತ್ತೇನೆ ಕ್ಷಣದಲಿನ್ನೂರು ಸಲ ರೆಕ್ಕೆ ಬಡಿದು
ಒಲವಿನೆಡೆಗೆ ಝೇಂಕಾರ ; ಬಲವ ಹೇರಲು ಬಂದರದೇ
ಹೂಂಕಾರ, ಉದಾಸೀನಕೆ ವಾಸಿಯಾಗದೆ ರೋಗ : ಅಹಂಕಾರ.

ರೆಕ್ಕೆಯಗಲಕಿದೆ ಅಲ್ಲಮನ ಬಯಲ ವ್ಯಾಪ್ತಿ
ಬಣ್ಣ-ಗಾತ್ರ ಮೀರಿ ದಶದಿಕ್ಕಿಗೆ ಬೆಳೆವ ಪ್ರಾಪ್ತಿ
ಹುರಿದು ಮುಕ್ಕಿದರು ದಕ್ಕದು ರಕ್ಕಸನ ಹೊಟ್ಟೆಗೆ
ನನ್ನ ಗಮ್ಯಸ್ಥಾನವೋ, ಇನ್ನಿಲ್ಲದ ಶೂನ್ಯಸಂಪಾದನೆ.

ಕಬ್ಬಿನ ಗದ್ದೆ ಆಡಿ ಬೆಳೆಯುವ ತೊಟ್ಟಿಲು
ಪ್ರತಿ ಗೂಡು, ಸಕ್ಕರೆ ತುಂಬಿದ ಬಟ್ಟಲು
ದೇವದೂತನೊಲುಮೆ-ದ್ವಿಗುಣಗೊಂಡ ಸಂಕುಲ
ಅಗಣಿತ ಬೇರು ಬಿಳಲುಗಳಿಗಿರುವುದೊಂದೇ ನೆಲ
ಹಸಿವು ಬಾಯಾರಿಕೆ ನೀಗಲು ರಟ್ಟೆಯೇ ಬಲ

ಸಮರಗಳದೆಷ್ಟು ನಡೆದವೊ ಭೂಗೋಳದ ಹೋಳಿಗೆ
ಉಸಿರುಗಟ್ಟುವ ಅಹಿತಕೆ ಕೊಸಿರೇಳುವ ಕ್ರಾಂತಿ
ಸಣ್ಣದೆಂಬ ಬಣ್ಣನೆಗೆ ಉಬ್ಬಿ ಹೋಗದ ಭ್ರಾಂತಿ
ತಲೆಯೆತ್ತಿದ ಭುಜದ ಮೇಲೆ ಬದ್ಧತೆಯ ಸಿದ್ಧಾಂತ
ಚಿಗುರೊಡೆದು ಬೆಳೆದ ಚೆಂಗುಡಿ : ಚೆಗೆವಾರ

ನೇರ ದೃಷ್ಟಿಯೊಂದಿಗೆ ನೀಳ ಚುಂಚಿನ ಸಹವಿಕಾಸ
ಕೋವಿ ಕಾವ್ಯದೆದೆಗೆ ದಂಗೆಯೇಳುವ ಮಂದಹಾಸ !
 ***

ಟಿಪ್ಪಣಿ :
ವಿಶ್ವದ ಅತ್ಯಂತ ಸಣ್ಣ ಹಕ್ಕಿ ಹಮ್ಮಿಂಗ್ ಬರ್ಡ್‌ನ ನೆಲೆ ಕ್ಯೂಬಾ ದೇಶ. ಸಕ್ಕರೆ ಕಣಜವಾಗಿರುವ ಕ್ಯೂಬಾ ಅಂಗೈಯಗಲದ ರಾಷ್ಟ್ರ. ಹಮ್ಮಿಂಗ್ ಬರ್ಡ್‌ನಂತ ಕ್ಯೂಬಾದ ಮೇಲೆ ಹದ್ದಿನಂತೆರಗುವ ಅಮೆರಿಕಾಕ್ಕೆ ಈ ಚಿಕ್ಕ ರಾಷ್ಟ್ರ ಸೆಡ್ಡು ಹೊಡೆಯುತ್ತದೆ, ಸ್ವಾಭಿಮಾನದಿಂದ ಬದುಕುವ ತನ್ನ ಹಕ್ಕಿಗಾಗಿ.
-ಚನ್ನಪ್ಪ ಅಂಗಡಿ
 

ನೀರಿಗಂಜುತ


ನೀರಿಗಂಜುತ ಕುಳಿತರೆ ಇಲ್ಲಿ ಈಜಲಾಗುವದಿಲ್ಲ
ಬೆಂಕಿಗಂಜುತ ಕುಳಿತರೆ ಇಲ್ಲಿ ಬೆಳಗಲಾಗುವದಿಲ್ಲ

ಹದ್ದು ಹಾರಬೇಕು ಹಾವು ಹಿಡಿಯಬೇಕು
ಸಾವಿಗಂಜುತ ಕುಳಿತರೆ ಇಲ್ಲಿ ಬದುಕಲಾಗುವದಿಲ್ಲ

ಬಿದ್ದು ಏಳಬೇಕು ಎದ್ದು ಕುಣಿಯಬೇಕು
ಬೀಳಲಂಜುತ ಕುಳಿತರೆ ಇಲ್ಲಿ ಏಳಲಾಗುವದಿಲ್ಲ

ನುಗ್ಗಿ ಹರಿಯಬೇಕು ಜಗ್ಗಿ ಹಿರಿಯಬೇಕು
ಗೋಳಿಗಂಜುತ ಕುಳಿತರೆ ಇಲ್ಲಿ ಬಾಳಲಾಗುವದಿಲ್ಲ

ಕಲ್ಲು ಮುಳ್ಳಿರಲಿ ’ಈರ’, ಕೆಸರು ಕತ್ತಲೆ ಇರಲಿ
ತುಳಿಯಲಂಜುತ ಕುಳಿತರೆ ಇಲ್ಲಿ ಉಳಿಯಲಾಗುವದಿಲ್ಲ.
  ***  
ಪ್ರೊ. ಇಟಗಿ ಈರಣ್ಣ
    
                     ಏನಾಗುತ್ತೆ?
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು
ಮದುವೆಯಾದರೆ ಏನಾಗುತ್ತೆ?
ಏನೂ ಆಗಲ್ಲ,
ಮುದ್ದಾದ ಎರಡು ಮಕ್ಕಳಾಗುತ್ತೆ!

ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ
ಇಟ್ಟರೆ ಏನಾಗುತ್ತೆ?
ಏನೂ ಆಗೊಲ್ಲ.
ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ!

ಹಿಂದೂಸ್ಥಾನ-ಪಾಕಿಸ್ತಾನ
ಒಂದಾದರೆ ಎನಾಗುತ್ತೆ?
ಏನೂ ಆಗೊಲ್ಲ,
ಅಶಾಂತಿ ಆತಂಕ ಕಮ್ಮಿಯಾಗುತ್ತೆ!

ಹೇಳು....ಏನಾಗುತ್ತೆ, ಎನಾಗುತ್ತೆ?
ಹಿಂದೂಸ್ಥಾನ ಪಾಕಿಸ್ತಾನ  ಒಂದಾದರೆ ಏನಾಗುತ್ತೆ?
ಏನೂ ಆಗೊಲ್ಲ.
ಒಂದು ಹಳೆಯ ರೋಗ ವಾಸಿಯಾಗುತ್ತೆ!
 ***
                                    ಸವಿತಾ ನಾಗಭೂಷಣ

   

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...