Tuesday, January 19, 2016

ಮೂರು ಜನ ಕವಿಗಳು ಮೂರು ಕವಿತೆಗಳು
ಆತ್ಮೀಯರೆ,
ಜನೇವರಿ 24 ರಂದು ರವಿವಾರ ಧಾರವಾಡದ ಆಲೂರ ವೆಂಕಟರಾವ್ ಭವನದಲ್ಲಿ ಸಂಜೆ 5.30 ಗಂಟೆಗೆ 'ಯುವ ಕಾವ್ಯ: ಓದು-ಮಾತು -6' ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಐನಳ್ಳಿ ಅವರು ಓದುವ ಕವಿತೆಗಳು. ಗಮನಿಸಿ. 24 ರಂದು ಸೇರೋಣ ಬನ್ನಿ.. ಕಾವ್ಯದ ಕುರಿತು ಮಾತಾಡೋಣ..

ನಿಮ್ಮ ಸ್ನೇಹಿತರಿಗೂ ತಲುಪಿಸಿ ಮೋಕ್ಷ ಸಿಕ್ಕ ಖುಷಿಯಲ್ಲಿ


ಕಣ್ಣೆದುರೇ ಕದ್ದನಂತೆ
ಕಂಡರಿಯದ ಸಾವಿರ ಕಾಸನು
ದಂಡು ದಂಡು ಸೇರಿ ಒದ್ದೇಬಿಟ್ಟರಲ್ಲ
ಮೈಕೈಗೆಲ್ಲಾ ಹಗ್ಗ ; ಅಂಗಡಿ ಮುಂದಿನ
ಕಂಬಕೆ ಹಿಡಿದು ಬಿಗಿದೇಬಿಟ್ಟರಲ್ಲ

ಕಟ್ಟಿಹಾಕಲಾದೀತೇ ಅವನೊಳಗಿನ
ಹಸಿವ? ಎಷ್ಟುದಿನದ್ದೋ?
ಕಣೀರೂ ಸುಳಿಯುತ್ತಿಲ್ಲ.
ಅರೆಕ್ಷಣ ಅತ್ತನೇನೋ? ;
ಜನರ ಗುಂಪಿಗೆ ಬೆದರಿ.
ಮರುಕ್ಷಣ ಪರಮಾಶ್ಚರ್ಯ; ಕದ್ದ
ಎರಡು ಬಾಳೆಹಣ್ಣಿಗೆ ಸಾವಿರ
ರೂಪಾಯಿ ಹೇಗಾದೀತೆಂದು.
ಗಲ್ಲಾಪೆಟ್ಟಿಗೆಯ ಮೇಲೆ ಹಳ್ಳುಕಟ್ಟಿನ
ಫೋಟೊ ; ಭಂಡಾರಿ ಬಸವ
ಬೆಕ್ಕಸ ಬೆರಗಾಗಿದ್ದಾನೆ-
ನವಯುಗದ ನಾಗರಿಕ ಜನ ಸಂಕಲನ
ಗುಣಾಕಾರದಲಿ ಪಡೆದ ಈ ಪರಿ ಪರಿಣಿತಿಯ ಕಂಡು...
ಬಳಕೆಯಲಿಲ್ಲದ ಬಾಗಾಕಾರ ವ್ಯವಕಲನವ
ಜನ ಮರೆತೇಹೋಗಿರುವುದ ಕಂಡು..!

ಪೋಲೀಸರು ಬರುವತನಕ
ತಂಡೋಪಾದಿ ಜನ.
’ಸೂಳೇಮಗ, ಕಡಿಬೇಕು ಇಂಥವ್ರನ್ನ’
ಪ್ರತಿಯೊಬ್ಬಗೂ ಹೊಸಶಿಕ್ಷೆಯ
ಸಲಹೆ ಕೊಡುವ ತವಕ.
ಎಷ್ಟು ದಿನ ಕಾದಿದ್ದೀ ನೀನು, ನಿನ ತಾಯಿನಾ...
ಬರಬಾರದಲ್ಲ ಇನ್ನು ವಾಪಸು-
ಅಂಗಡಿಯಾತ ಆರ್ಭಟಿಸುತ್ತಿದ್ದಾನೆ.
ಕಿಕ್ಕಿರಿದ ಜನ ಬೈದು ಮಾಡಿ ಸಾಕಾಗಿ
ಕದ್ದ ಕುಂಬಳವ ಹೆಗಲು ನೆನಪಿಸಿದ ಕ್ಷಣ
ಬಾಯಿಗೆಬಂದಂತೆ ಮತ್ತೆ ಬೈಯುತ್ತಿದೆ ;
ಪಾಪಪ್ರಜ್ಞೆಯ ನಿಯಂತ್ರಣಕ್ಕೆ .

ನೆಲೆಯಾದರೂ ಸಿಕ್ಕುತ್ತಲ್ಲ...
ದಿನಕ್ಕೊಂದೊತ್ತಾದರೂ ಕೂಳು...!
ಕಲ್ಲಿದ್ದರೆ ತೆಗೆದಾಕಿ, ಹುಳವಿದ್ದರೆ ಹೊರಗಾಕಿ
ನೆಮ್ಮದಿಯಿಂದ ದಿನಕ್ಕೊಂದೊತ್ತು ಉಂಡು... -
ಜೈಲಿನ ನೆನಪಾಗಿ
ಹುಡುಗ ಮೋಕ್ಷ ಸಿಕ್ಕ ಖುಷಿಯಲ್ಲಿ  !

ಕಾಡುತಿದೆ ಬಾಕಿಯುಳಿದ
ಬಹುದಿನದ ನಿದ್ದೆ.
ಜೈಲಿನಲಿ ನಾಳೆ ಒಂದೂಟ ; ಹೊಟ್ಟೆತುಂಬಾ..!
ಸುರಿಯುತ್ತಿರುವ ಶಾಪ ಆರೋಪಗಳ ಮಧ್ಯೆ
ಹುಡುಗ ತೂಕಡಿಸುತ್ತಿದ್ದಾನೆ
ಯುದ್ಧ ಗೆದ್ದ ದಣಿವಿನಲ್ಲಿ
                
                        - ಚನ್ನಬಸಪ್ಪ ಐನಳ್ಳಿಪ್ರಪಾತ ಪ್ರಲಾಪ

ನೆನ್ನೆಯ ಕನಸೊಂದರಲ್ಲಿ ಬೆನ್ನು ಮುರಿದುಕೊಂಡಿದ್ದ ನಾನು
ತೆವಳುತ್ತಲೇ ನಿನ್ನತ್ತ ಬರುತ್ತಿದ್ದೆ
ಗೊತ್ತಲ್ಲ! ನಿನ್ನದು ಮೃದು ಹೆಣ್ಣುಗಳ
ಪಾದಗಳು ಸೋಕಲಾರದಂಥ ಕಡು ಕಾಡ ಹಾದಿ
ನಿನ್ನ ಕಡಿದಾದ ಕಣಿವೆಗಳಿಂದ ಬಿರುಗಾಳಿ ದಾಳಿಗೆ
ಸಿಲುಕಿ ಕೀರಲುಗಟ್ಟಿದ ಗೆಜ್ಜೆಗಳ ಸದ್ದು ಕೇಳುತ್ತಿದೆ

ತೆವಳುತ್ತಿರುವಂತೆ ತೊಟ್ಟ ಬಟ್ಟೆ ಹರಿದು
ನೆಲದೆದೆಯನು ಅಪ್ಪಿದ ಬಿಳಿತೊಡೆಗಳು ಬೆತ್ತಲಾಗುತ್ತಿದ್ದವು
ನಡೆದು ಸಪಾಟು ಮಾಡಿದವರ ಕುರುಹೂ 
ಇಲ್ಲ ಇಡೀ ಇತಿಹಾಸದ ಪುಟದಲ್ಲಿ
ನಕ್ಷೆ ಬರೆದುಮುಗಿಸಿ ಸತ್ತವರಿಲ್ಲ
ಅಲ್ಲಲ್ಲಿ ನುಣುಪುಗೊಂಡ ಸ್ಥಳದಲ್ಲಿ
ಬೆನ್ನಟ್ಟಿ ಬಸವಳಿದು ವಾಪಾಸ್ಸುಹೋದವರ
ಕುರುಹುಗಳಿವೆ

ಹಿಮಗಟ್ಟಿರುವ ನಿನ್ನ ಮೌನದ ಕೊಳದಲ್ಲಿ
ಪಾಪ ಅದೆಷ್ಟು ಮೀರೆಯರ ತಂಬೂರಿಗಳ ಶೃತಿ
ಸ್ಥಬ್ಧಗೊಂಡಿವೆಯೋ ನೀನೂಂದು ಕಡಲಂತೆ !
ಮಧುರವಾದ ದನಿಯೊಂದು ಪಿಸುಗುಟ್ಟಿ ಗಾಳಿಯಲ್ಲಿ
ತೇಲಿಹೋಯಿತು ಕಡಲಾದರೇನಂತೆ ನನ್ನ ದಣಿವಾರಿಸಲು
ತೊಟ್ಟು ಹನಿಯುಣಿಸದವನ

ಹರಿದ ತೊಡೆಗಳಿಗೆ ಊಹೆಯ ಮುಲಾಮು
ಸವರುವಾಗ ನಿನ್ನ ಮುಡಿಸೇರದ ಹೂಗಳ ಹೂಳಿದ
ರುದ್ರಭೂಮಿ ಸಿಕ್ಕಿತು ಗೋರಿಗೋರಿಗಳ ಎದೆಯ
ಮೇಲೆ ಕನ್ನಡಿಸುತ್ತಿತ್ತು ನನ್ನ ಬಿಂಬ
ನದಿಯೂ ಹರಿದಿತ್ತೆ ನಿನ್ನೆಡೆಗೆ?
ಹಾದಿಯಲ್ಲಿ ಸಿಕ್ಕ ಮೈಲುಗಲ್ಲಿನ ನೆರಳಿನಲ್ಲಿ
ಮತ್ಸ್ಯಗಂಧಿಗಳ ಅಸ್ಥಿಪಂಜರಗಳ ಕಂಡೆ
ಇದ್ದಿರಬಹುದು ಬಿಡು!
ಚಾಲಾಕಿ ನೀನು ಕಡಲಾಗಿ ನಿಲ್ಲದೇ
ಮುಟ್ಟಲಾರದ ಮುಗಿಲಾದವ

ಹೇಳು ದಣಿದಾಗ ಗಟಗಟನೇ ಕುಡಿದು ಬರಿದಾಗಿಸಿದ
ನನ್ನ ಜೀವನದಿಯನೆಂತು ತುಂಬಿಕೊಳಲಿ!
ಕ್ಷಣಕಾಲ ಮಳೆಗರಿ ಸಾಕು ಹನಿಹನಿಯನೂ ಕಾಪಿಟ್ಟುಕೊಳುವೆ
ಒಣಗಿದ ತುಟಿಗಳಿಗೆ ಅಮೃತದಂತೆ ಸವರಿಕೊಳ್ಳುತ್ತ
ಅಳಿದುಳಿದ ಜೀವವ ಸಲುಹುವೆ

-    ರೂಪಶ್ರೀ ಕಲ್ಲಿಗನೂರ್ಆ ಹಕ್ಕಿ ಬೇಕಾದರೆ

ಮಂಗೋಲಿಯದಲ್ಲಿ ಒಬ್ಬ ರಾಜ
ಇದ್ದನಂತಲ್ಲ
    ಅವನು ಯಾವುದೋ
ದೂರ ದೇಶಕೆ ದಂಡೆತ್ತಿ ಹೋದಾಗ
ಅಲ್ಲೊಂದು ಹೊಸ ಹಕ್ಕಿ ಹಾಡು ಕೇಳಿಸಿ
ಆ ಹಾಡು ನನಗೆ ಬೇಕು ಎಂದು
ಹಾಡಿಗೆಂದು ಹಕ್ಕಿ ಹಿಡಿದು
ಹಕ್ಕಿಯ ಜೊತೆಗೆ ಗೂಡೆತ್ತಿ
ಗೂಡಿನಡಿ ರೆಂಬೆ
ರೆಂಬೆಗೆ ಕೊಂಬೆ
ಕೊಂಬೆಗೆ ಮರ
ಮರದಡಿಯ ಬೇರು
ಬೇರು ಸುತ್ತಿನ ಹೆಂಟೆ ಮಣ್ಣು
ಆ ಊರು
ನೀರು
ಹಿಂಗಾರು
ಆ ಪ್ರದೇಶ
ದೇಶ
ಆ ಇಡೀ ರಾಜ್ಯ
   ಎಲ್ಲ ಹೊತ್ತು ಹಾಕಬೇಕು
ಎನ್ನಿಸಿ
ಇದ್ದ ಬಿದ್ದ ಆನೆ ಕುದುರೆ ರಥ
ಸೈನ್ಯ ಎಲ್ಲ ಕೂಡಿಸಿ
ಇಡೀ ರಾಜ್ಯವನ್ನೆಲ್ಲ ಗೆದ್ದು
ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು

ಮನೆಗೇ ಹೋಗಲಿಲ್ಲ

-    ಎ.ಕೆ. ರಾಮಾನುಜನ್

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...