Monday, January 18, 2016

ಭ್ರಷ್ಟಾಚಾರದ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?


ಬಾಪು ಹೆದ್ದೂರಶೆಟ್ಟಿಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಭಾಸ್ಕರ ರಾವ ಅವರು ರಾಜೀನಾಮೆ ನೀಡಿದ ಅನಂತರ ಈಗ ಮತ್ತೆ ಭ್ರಷ್ಟಾಚಾರದ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರ ಹುಡುಕಾಟ ಪ್ರಾರಂಭವಾಗಿದೆ. ಆದರೆ ಹೊಸ ಹೆಸರಿನ ಪ್ರಸ್ತಾಪವಾದಾಗಲೇ ಅದರ ಬಗ್ಗೆ ವಿವಾದವೂ ಪ್ರಾರಂಭವಾಗಿದೆ.ಹೊಸ ಲೋಕಾಯುಕ್ತರನ್ನು ಆಯ್ಕೆ ಮಾಡಲು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಎಸ್.ಆರ್.ನಾಯಕರ ಹೆಸರನ್ನು ಬೆಂಬಲಿಸಿದರೆಂಬ ಕಾರಣದಿಂದ ಇನ್ನೊಬ್ಬರು, ವಿಕ್ರಮಜಿತ್ ಸೇನ್ ಅವರು, ತಮ್ಮ ಹೆಸರನ್ನು ಹಿಂದೆ ತೆಗೆದುಕೊಂಡಿದ್ದಾರೆ. ಆದರೆ ಈ ಘಟನಾವಳಿಯ ಬೆನ್ನ ಹಿಂದೆಯೇ, ಎಸ್.ಆರ್.ನಾಯಕರ ಪರಿವಾರದ ಸದಸ್ಯರ ಹತ್ತಿರ ಈಗಾಗಲೇ ಎರಡು ನಿವೇಶನಗಳಿದ್ದರೂ ಅವರು ಇನ್ನೂ ಒಂದು ನಿವೇಶನವನ್ನು ಪಡೆದಿರುವುದು ಕಾನೂನಿಗೆ ವಿರುದ್ಧ ಎಂದು ನಾಗರಿಕರೊಬ್ಬರು ಲೋಕಾಯುಕ್ತ ಪೊಲೀಸರ ಮುಂದೆಯೇ ದೂರು ಸಲ್ಲಿಸಿದ್ದಾರೆ. ಇಂಥದೇ ಕಾರಣಕ್ಕಾಗಿ ಹಿಂದೆ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರೊಬ್ಬರು ರಾಜೀನಾಮೆ ಕೊಡಬೇಕಾಗಿ ಬಂದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹಾಗೆ ನೋಡಿದರೆ ಲೋಕಾಯುಕ್ತ ಹಾಗೂ ಲೋಕಪಾಲರ ಪರಿಕಲ್ಪನೆ ರೂಪಿತಗೊಂಡಿದ್ದು ಸ್ಕ್ಯಾಂಡಿನೇವಿಯದ ಸಮಾಜವಾದಿ ರಾಷ್ಟ್ರಗಳಾದ ಸ್ವೀಡನ್, ನಾರ್ವೆ ಮೊದಲಾದ ದೇಶಗಳಲ್ಲಿ. ಇದನ್ನಲ್ಲಿ ಓಂಬುಡ್ಸಮನ್ ಎಂದು ಕರೆಯುತ್ತಾರೆ. ಈ ಶಬ್ದದ ಇನ್ನೊಂದು ಅರ್ಥ 'ಸಾರ್ವಜನಿಕ ವಕೀಲ' ಎಂದು. ಇದರ ಉದ್ದೇಶ ದುರಾಡಳಿತವನ್ನು ತಡೆಯುವುದು. ಅಂದರೆ ಆಡಳಿತದಲ್ಲಿ ಜನ ಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡುವುದು. ಆಡಳಿತದ ಬಗ್ಗೆ ಜನಸಾಮಾನ್ಯರ ದೂರುಗಳನ್ನು ವಿಚಾರಣೆಗೊಳಪಡಿಸಿ ಮಧ್ಯಸ್ತಿ ಕೆಯ ಅಥವಾ ಶಿಫಾರಸಿನ ಮೂಲಕ ಪರಿಹರಿಸುವುದು ಇದರ ಕಾರ್ಯವ್ಯಾಪ್ತಿ. ಆದರೆ ಭಾರತದಲ್ಲಿ ಅದು ಭ್ರಷ್ಟಾಚಾರವನ್ನು ತಡೆಗಟ್ಟುವ ಸಂಸ್ಥೆಯ ರೂಪ ತಾಳಿದೆ. ಭಾರತದಲ್ಲಿ ಈಗಾಗಲೇ ಈ ಕಾರ್ಯಕ್ಕಾಗಿ ವಿಜಿಲನ್ಸ್ ಕಮೀಷನರ್ ಹಾಗೂ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಎಂಬೆರಡು ಸಂಸ್ಥೆಗಳಿವೆ. ಅವೆರಡೂ ಸಾಲದ್ದಕ್ಕೆ ಈಗ ಇನ್ನೊಂದು ಸಂಸ್ಥೆಯನ್ನು ಕಲ್ಪಿಸಲಾಗಿದೆ- ರಾಷ್ಟ್ರಮಟ್ಟದಲ್ಲಿ ಲೋಕಪಾಲ ಹಾಗೂ ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ. ಈ ಸಂಸ್ಥೆಗಳು ಇಂದು ದುರಾಡಳಿತವನ್ನು ತಡೆಯುವುದಕ್ಕಿಂತ ಭ್ರಷ್ಟಾಚಾರವನ್ನು ತಡೆಯುವ ಕೆಲಸವನ್ನು ಮಾಡುತ್ತಿವೆ. ಇದೂ ಸಾಲದು ಎಂಬಂತೆ ಅಣ್ಣಾ ಹಜಾರೆ ಹಾಗೂ ಅರವಿಂದ ಕೇಜ್ರೀವಾಲರು 'ಜನ ಲೋಕಪಾಲ' ಎಂಬ ಸಂಸ್ಥೆಯನ್ನು ರಚಿಸಬೇಕೆಂದು ಒತ್ತಾಯಿಸಿದ್ದರು.

ಭ್ರಷ್ಟಾಚಾರವನ್ನು ತಡೆಯುವ ಕೆಲಸ ಮಾಡಬೇಕಿರುವ ಕರ್ನಾಟಕದ ಲೋಕಾಯುಕ್ತರ ಕಚೇರಿಯಲ್ಲಿಯೇ ಇಂದು ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆ ಎರಡು ವಾದಗಳಿಗೆ ಎಡೆಮಾಡುತ್ತದೆ. ವೆಂಕಟಾಚಲಯ್ಯ ಹಾಗೂ ಸಂತೋಷ ಹೆಗ್ಡೆಯವರು ಲೋಕಾಯುಕ್ತರಾಗಿದ್ದಾಗ ಹಲವಾರು ಭ್ರಷ್ಟಾಚಾರದ ಪ್ರಕರಣಗಳನ್ನು ಬೆಳಕಿಗೆ ತಂದಿದ್ದರು ಎಂದು ಹೇಳಲಾಗುತ್ತದೆ. ಆ ಪ್ರಕರಣಗಳ ಸತ್ಯಾಸತ್ಯತೆ ಹಾಗೂ ಅವು ಲೋಕಾಯುಕ್ತರ ಕಾರ್ಯವ್ಯಾಪ್ತಿಯಲ್ಲಿ ಬರಬೇಕೇ ಅಥವಾ ಬರುತ್ತವೆಯೇ ಎಂಬುದನ್ನು ಸದ್ಯ ಬದಿಗಿಟ್ಟು ನೋಡುವುದಾದರೆ, ಕಾನೂನು ಅಥವಾ ಸಂಸ್ಥೆ ಎಂಥದೇ ಆಗಿದ್ದರೂ ಅದನ್ನು ನಡೆಸುವವರು ಯೋಗ್ಯರಾಗಿದ್ದರೆ ಮಾತ್ರ ಆ ಸಂಸ್ಥೆಗಳು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಡೆಸಬಲ್ಲವು ಎಂಬ ವಾದವೊಂದಿದೆ. ಈ ವಾದ ಸಂಸ್ಥೆಗಿಂತ ವ್ಯಕ್ತಿಗೆ, ಸಮಷ್ಟಿಗಿಂತ ವ್ಯಷ್ಟಿಗೆ ಹೆಚ್ಚು ಮಹತ್ವ ಕೊಡುತ್ತದೆ. ವೆಂಕಟಾಚಲಯ್ಯನವರು ಹಾಗೂ ಸಂತೋಷ ಹೆಗಡೆಯವರು ಲೋಕಾಯುಕ್ತರಾಗಿದ್ದಾಗ ಆಡಳಿತದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಬಯಲಿಗೆ ಬಂದರೆ ಭಾಸ್ಕರರಾಯರು ಲೋಕಾಯುಕ್ತರಾಗಿರುವಾಗ ಲೋಕಾಯುಕ್ತ ಸಂಸ್ಥೆಯೊಳಗಡೆಯೇ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಈ ವಾದಕ್ಕೆ ಉದಾಹರಣೆಯನ್ನಾಗಿ ಕೊಡಬಹುದಾಗಿದೆ.

ಹಾಗಾದರೆ ನಾವು ಸಾಂಸ್ಥಿಕ ಚೌಕಟ್ಟುಗಳನ್ನು ನಿರ್ಮಿಸುವುದಕ್ಕಿಂತ ಒಳ್ಳೆಯ ವ್ಯಕ್ತಿಗಳನ್ನು ಹುಟ್ಟುಹಾಕುವತ್ತ ಗಮನ ಕೊಡಬೇಕೇ? ಒಳ್ಳೆಯ ಮನುಷ್ಯ ಒಳ್ಳೆಯ ಸಂಸ್ಥೆಗಳನ್ನು, ಪರಿಸರವನ್ನು ನಿರ್ಮಿಸು ತ್ತಾನೋ ಅಥವಾ ಒಳ್ಳೆಯ ಸಂಸ್ಥೆಗಳು, ಒಳ್ಳೆಯ ಪರಿಸರಗಳು ಒಳ್ಳೆಯ ಮನುಷ್ಯರನ್ನು ನಿರ್ಮಿಸುತ್ತವೆಯೋ? ಅನತಿ ಕಾಲದಿಂದ ನಡೆದು ಬರುತ್ತಿರುವ ನೇಚರ್ ಆರ್ ನರ್ಚರ್  ವಾದದಲ್ಲಿ ಇದು ಒಂದು ಪಕ್ಷ. ಇದು ಗಾಂಧಿವಾದಿ ವಾದ. ಮಾನವ ಮೂಲತಃ ಕೆಟ್ಟವನು, ಆದುದರಿಂದ ಪರಿಸರ ಆತನನ್ನು ಸುಧಾರಿಸಲು ಸಾಧ್ಯವಿಲ್ಲ, ಆತನನ್ನೇ ಸುಧಾರಿಸಬೇಕು ಎನ್ನುತ್ತದೆ ಈ ದೃಷ್ಟಿಕೋನ. ಹಾಗಾದರೆ ಇದು ಮಾನವನ್ನು ನೋಡುವ ಸರಿಯಾದ ದೃಷ್ಟಿಕೋನವೋ ಅಥವಾ ಮಾನವ ಮೂಲತಃ ಒಳ್ಳೆಯವನು, ಪರಿಸರ ಅವನನ್ನು ಕೆಟ್ಟವನನ್ನಾಗಿ ಮಾಡುತ್ತದೆ, ಆದುದರಿಂದ ಪರಿಸರವನ್ನು ಸರಿಪಡಿಸಿದರೆ ಆತನ ಒಳ್ಳೆಯತನ ವ್ಯಕ್ತವಾಗುತ್ತದೆ ಎನ್ನುವುದು ಸರಿಯಾದ ದಷ್ಟಿಕೋನವೋ?

ಈ ವಾದದ ಒಂದು ತುದಿಯಲ್ಲಿ ಯೇಸು ಕ್ರಿಸ್ತ, ಮಹಾತ್ಮಾ ಗಾಂಧಿ ಮೊದಲಾದವರು ಭ್ರಷ್ಟರ ಮನಃಪರಿವರ್ತನೆ ಮಾಡಿ ಎಂದು ಹೇಳಿದರೆ, ಇನ್ನೊಂದು ತುದಿಯಲ್ಲಿ ಅರವಿಂದ ಕೇಜ್ರೀವಾಲರಂತಹರು ಭ್ರಷ್ಟರನ್ನು ಹಿಡಿದು ಹಾಕಿ, ಜೈಲಿಗೆ ತಳ್ಳಿ ಎನ್ನುತ್ತಾರೆ, ಇನ್ನೂ ಮುಂದೆ ಹೋಗಿ ಅವರ ಗುರುಗಳಾದ ಅಣ್ಣಾ ಹಜಾರೆಯವರು ಭ್ರಷ್ಟರನ್ನು ಹಿಡಿದು ಮರಕ್ಕೆ ಬಿಗಿದು ಬಾರು ಕೋಲಿನಿಂದ ಥಳಿಸಿ ಎಂದು ಹೇಳುತ್ತಾರೆ. ಇವೆಲ್ಲದರ ಮೂಲದಲ್ಲಿ ರುವುದು ಮನುಷ್ಯನನ್ನು ಅವರು ನೋಡುವ ದೃಷ್ಟಿಕೋನ, ಮನುಷ್ಯ ಮೂಲತಃ ಕೆಟ್ಟವನು ಎನ್ನುವುದು. ಆದರೆ ದಂಡಂ ದಶಗುಣಂ ಭವೇತ್ ಎನ್ನುವುದು ಇಂದು ಸವಕಲು ನಾಣ್ಯ. ೧೫೦ ವರ್ಷಗಳ ಹಿಂದೆ ಮೆಕಾಲೆ ಬರೆದ ಭಾರತದ ದಂಡ ಸಂಹಿತೆಯಲ್ಲಿ ಕೊಲೆ ಮಾಡುವವನಿಗೆ ಮರಣ ದಂಡನೆ ವಿಧಿಸಲಾಗುವುದೆಂದು ಹೇಳಿದ್ದರೂ ಇಂದಿಗೂ ಕೊಲೆಗಳು ನಡೆಯುತ್ತಲೇ ಇವೆ. ಇಂದು ಕೊಲೆಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದಕ್ಕೆ ಕಾರಣ ಭಾರತದ ದಂಡ ಸಂಹಿತೆಯಲ್ಲ, ಮಾನವನ ಪರಿಸರ ಹೆಚ್ಚು ಮಾನವೀಯ ವಾಗುತ್ತ ಹೋಗುತ್ತಿರುವುದು, ಅವನ ಸಂಸ್ಕತಿ ಹಾಗೂ ಸಭ್ಯತೆ ಗಳು ಹೆಚ್ಚು ಉದಾತ್ತವಾಗುತ್ತ ಹೋಗುತ್ತಿರುವುದು.
ಆದರೆ ಈ ವಾದದ ಇನ್ನೊಂದು ಪಕ್ಷ, ಸರಿಯಾದ ಪರಿಸರವನ್ನು ನಿರ್ಮಿಸಿದರೆ ಅದು ಸರಿಯಾದ ವ್ಯಕ್ತಿಗಳನ್ನು ನಿರ್ಮಿಸುತ್ತದೆ ಎನ್ನು ವುದು. ಇಂದು ಕರ್ನಾಟಕದ ಲೋಕಾಯುಕ್ತರ ಕಚೇರಿಯ ಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎನ್ನುವುದು ವ್ಯಕ್ತಿ ಸರಿಯಾಗಿಲ್ಲ ಎನ್ನುವುದನ್ನು ರುಜುವಾತು ಪಡಿಸುವುದಿಲ್ಲ, ನಿರ್ಮಿಸಿದ ಪರಿಸರ ಸರಿಯಾಗಿಲ್ಲ ಎನ್ನುವುದನ್ನು, ಲೋಕಾಯುಕ್ತದಂತಹ ಸಂಸ್ಥೆಗಳಿಂದ ಭ್ರಷ್ಟಾಚಾರ ವನ್ನು ತಡೆಯುವುದು ಸಾಧ್ಯವಿಲ್ಲ, ಅದಕ್ಕೆ ಸರಿಯಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು ಎನ್ನುವುದನ್ನು ರುಜುವಾತು ಪಡಿಸುತ್ತದೆ ಎನ್ನುವುದು ಇನ್ನೊಂದು ವಾದ. ಸರಿಯಾದ ವ್ಯಕ್ತಿಯನ್ನೆಲ್ಲಿ ಹುಡುಕುವುದು, ಎಷ್ಟು ಜನ ಸರಿಯಾಗಿದ್ದಾರೆ? ಕರ್ನಾಟಕದ ಲೋಕಾಯುಕ್ತ ಸ್ಥಾನಕ್ಕೆ ನೇಮಕಗೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರು ಅನೈತಿಕ ವ್ಯವಹಾರ ಮಾಡಿದ್ದಾರೆಂದು ರಾಜೀನಾಮೆ ನೀಡಬೇಕಾಗಿ ಬಂದರೆ, ಇನ್ನೊಬ್ಬ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ತಮ್ಮ ಹೆಸರನ್ನು ಲೋಕಾಯುಕ್ತರ ಸ್ಥಾನಕ್ಕೆ ಪರಿಗಣಿಸಲೇ ಕೂಡದು ಎಂದು ಹೇಳಿಬಿಟ್ಟಿದ್ದರು. ಹಲವಾರು ತಿಂಗಳು ಖಾಲಿ ಇದ್ದ ಸ್ಥಾನಕ್ಕೆ ಕೊನೆಗೊಬ್ಬರನ್ನು ನೇಮಕ ಮಾಡಿದರೆ ಈಗ ಲೋಕಾಯುಕ್ತರ ಕಚೇರಿಯಲ್ಲಿಯೇ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ ಅವರ ರಾಜೀನಾಮೆಯನ್ನೇ ಕೇಳಲಾಯಿತು. ಕೊನೆಗೆ ಅವರನ್ನು ಕಾನೂನು ರೀತಿಯಲ್ಲಿ ಪದಚ್ಯುತಗೊಳಿಸಲು ಪ್ರಯತ್ನ ಗಳು ಪ್ರಾರಂಭವಾದಾಗ ಅವರು ರಾಜೀನಾಮೆಯನ್ನು ನೀಡ ಬೇಕಾಗಿ ಬಂತು.

ಹಿಂದೆ ರೈಲು ಪ್ರಯಾಣದ ಟಿಕೇಟುಗಳನ್ನು ಪಡೆಯುವುದರಲ್ಲಿ, ಅದರಲ್ಲೂ ಮಲಗಿ ಪ್ರಯಾಣ ಮಾಡುವ ಸೌಲಭ್ಯವನ್ನು ಪಡೆಯುವಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದುದು ಬಹಳ ಜನರಿಗೆ ನೆನಪಿರಬಹುದು. ಹಲವು ಕಾಳ ಸಂತೆಕೋರರು ಟಿಕೇಟು ಕೊಡುವ ಸಿಬ್ಬಂದಿಯೊಂದಿಗೆ ಕೈ ಮಿಲಾಯಿಸಿ, ಹತ್ತಾರು ಟಿಕೇಟುಗಳನ್ನು ಪಡೆದುಕೊಂಡು ಅನಂತರ ಅಮಾಯಕ ಪ್ರಯಾಣಿಕರಿಗೆ ಕಾಳಸಂತೆಯಲ್ಲಿ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಹಿಂದೆ ರೈಲ್ವೆ ಮಂತ್ರಿಗಳಾಗಿದ್ದ ಸಮಾಜವಾದಿ ಮಧು ದಂಡವತೆಯವರು ರೈಲು ಪ್ರಯಾಣದ ಟಿಕೇಟುಗಳನ್ನು ಕೊಂಡುಕೊಳ್ಳುವಲ್ಲಿ ಗಣಕಯಂತ್ರಗಳ ಬಳಕೆಯನ್ನು ಜಾರಿಗೆ ತಂದರು. ಇಂದು ನೀವು ಮನೆಯಲ್ಲಿದ್ದು ಕೊಂಡೇ ಅಥವಾ ರೈಲು ನಿಲ್ದಾಣಗಳಲ್ಲಿ ಸರದಿಯಲ್ಲಿ ನಿಂತುಕೊಂಡರೂ, ಸಲೀಸಾಗಿ, ಯಾವ ಕಾಳಸಂತೆಕೋರರ ಕಾಟವೂ ಇಲ್ಲದೇ ಟಿಕೇಟುಗಳನ್ನು ಪಡೆಯಬಹುದು. ಇಂದು ರೈಲು ಪ್ರಯಾಣದ ಟಿಕೇಟುಗಳನ್ನು ಕಾಳಸಂತೆಯಲ್ಲಿ ಮಾರುವವರ, ಆ ಟಿಕೇಟುಗಳನ್ನು ಕೊಡುವ ಅಪ್ರಾಮಾಣಿಕ ಸಿಬ್ಬಂದಿಯ ಸಂಖ್ಯೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿದೆಯಲ್ಲವೇ? ವ್ಯಕ್ತಿ ಕೆಟ್ಟವನೆಂದು ದೂರುವ ಬದಲು ಸರಿಯಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರೆ ವ್ಯಕ್ತಿ ತನ್ನ ಒಳ್ಳೆಯತನವನ್ನು ಮೆರೆಯುತ್ತಾನೆ ಎನ್ನುವುದಕ್ಕೆ ಇದು ಉದಾಹರಣೆಯಲ್ಲವೇ?
ತನ್ನ ಪಕ್ಕದಲ್ಲಿರುವ ವ್ಯಕ್ತಿ, ಪ್ರಾಮಾಣಿಕವಾಗಿಯೋ, ಅಪ್ರಾಮಾಣಿಕವಾಗಿಯೋ, ತನಗಿಂತ ಹೆಚ್ಚು ಒಳ್ಳೆಯ ಬದುಕನ್ನು ಬದುಕುತ್ತಿರುವುದನ್ನು ನೋಡಿ ವ್ಯಕ್ತಿ ತಾನೂ ಅಂತಹ ಬದುಕನ್ನು ಆಸೆ ಪಡುತ್ತಾನೆ. ತಾನು ಅಂತಹ ಬದುಕನ್ನು ಪ್ರಾಮಾಣಿಕವಾಗಿ ಪಡೆಯುವುದು ಸಾಧ್ಯವಿಲ್ಲ ಎಂದಾಗ ಆತ ಅಪ್ರಾಮಾಣಿಕನಾಗುತ್ತಾನೆ, ಭ್ರಷ್ಟನಾಗುತ್ತಾನೆ. ಆರ್ಥಿಕ ಅಸಮಾನತೆ ತಾಂಡವವಾಡುತ್ತಿರುವ ಸಮಾಜದಲ್ಲಿ ಇದು ಸ್ವಾಭಾವಿಕ ಮನುಷ್ಯ ಪ್ರಯತ್ನವಾಗುತ್ತದೆ. ಹಾಗಾದರೆ ಸಮಾನತೆಯನ್ನು ಸಾಧಿಸುವುದರ ಮೂಲಕ ತನ್ನ ಪಕ್ಕದಲ್ಲಿರುವ ವ್ಯಕ್ತಿ ತನಗಿಂತ ಉತ್ತಮ ಬದುಕನ್ನು ಬದುಕುತ್ತಿದ್ದಾನೆ ಎಂಬ ಉದಾಹರಣೆಗಳೇ ಇಲ್ಲದಂತೆ ಮಾಡಿದರೆ ವ್ಯಕ್ತಿ ಇಂತಹ ಆಮಿಷಕ್ಕೆ ಒಳಗಾಗುವ ಸಾಧ್ಯತೆಗಳು ಇಲ್ಲದಾಗುವಂತೆ ಮಾಡ ಬಹುದಲ್ಲವೇ?

ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ತಂದಾಗ ತನಗಿಂತ ಉತ್ತಮ ಬದುಕನ್ನು ಬದುಕುವವರ ಉದಾಹರಣೆಗಳೇ ಇಲ್ಲವಾ ಗುತ್ತವಲ್ಲವೇ? ಆದುದರಿಂದ ವ್ಯಕ್ತಿ ತನಗಿಂತ ಉತ್ತಮ ಬದುಕನ್ನು ಬದುಕುವವರನ್ನು ನಕಲಿಸುವ ಆಮಿಶವೇ ಉಳಿಯುವುದಿಲ್ಲ ಅಲ್ಲವೇ? ಹೀಗೆ ಸರಿಯಾದ ಪರಿಸರವನ್ನು ಕಲ್ಪಿಸಿದರೆ ಮಾನವನ ಒಳ್ಳೆಯತನ ಹೊರಹೊಮ್ಮುತ್ತದೆ. ಇದು ಸಮಾಜವಾದಿಗಳ ವಾದ. ಸಮಾನತೆಯನ್ನು ತರುವಲ್ಲಿ ಸಮಯ ಹಿಡಿಯಬಹುದು. ಅದರೆ ಅದೇ ಶಾಶ್ವತ ಪರಿಹಾರವಲ್ಲವೇ? ಕರವಸ್ತ್ರದಿಂದ ಮೂಗನ್ನು ಒರೆಸಿಕೊಂಡರೆ ನೆಗಡಿ ಹೋಗುವುದಿಲ್ಲ. ಹಾಗಾದರೆ ಭ್ರಷ್ಟಾಚಾರದ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರಯ್ಯ ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಏನು?
ಸೌಜನ್ಯ : ವಿಕ ೧೯.೧.೨೦೧೬

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...