Tuesday, January 19, 2016

ವ್ಯವಸ್ಥೆಗೆ ಬಲಿಯಾದ ಆಧುನಿಕ ಏಕಲವ್ಯ
ವಾರ್ತಾಭಾರತಿ ಸಂಪಾದಕೀಯ
ದಲಿತ ಸಮುದಾಯವನ್ನು ಮೇಲೆತ್ತುವಲ್ಲಿ ಮೀಸಲಾತಿ ಏಕೆ ವಿಫಲವಾಗಿದೆ ? ದಲಿತರು ಅಲಂಕರಿಸಬೇಕಾಗಿದ್ದ ಸಾವಿರಾರು ಹುದ್ದೆಗಳು ಏಕೆ ಸೂಕ್ತವಾದ ಅಭ್ಯರ್ಥಿಗಳಿಲ್ಲದೆ ಖಾಲಿ ಬಿದ್ದಿವೆ ? ಅದೇ ಸಂದರ್ಭದಲ್ಲಿ ಶೌಚಾಲಯ , ರಸ್ತೆ ಗುಡಿಸುವ ಹುದ್ದೆಗಳಿಗೆಲ್ಲ ದಲಿತರಷ್ಟೇ ಏಕೆ ಇನ್ನೂ ಭರ್ತಿಯಾಗುತ್ತಲೇ ಇದ್ದಾರೆ ? ‘ ಮೀಸಲಾತಿಯಿಂದ ದಲಿತರು ಕೊಬ್ಬಿದ್ದಾರೆ ’ ಎನ್ನುವ ಮೇಲ್ವರ್ಣೀಯರ ಕೊಬ್ಬಿದ ಮಾತುಗಳನ್ನು ಕೇಳುತ್ತಾ ಇವರು ಶೌಚಾಲಯಗಳಲ್ಲಿ, ರಸ್ತೆಗಳಿಗೇ ಏಕೆ ಸೀಮಿತವಾಗುತ್ತಿದ್ದಾರೆ ? ಇದಕ್ಕೆ ವಿದ್ಯಾವಂತ ಮೇಲ್ವರ್ಣೀಯರಲ್ಲಿ ಉತ್ತರಗಳಿವೆ ‘‘ದಲಿತರು ಸರಕಾರದಿಂದ ಸಿಕ್ಕ ದುಡ್ಡನ್ನು ಕುಡಿತಕ್ಕೆ ಬಳಸಿಕೊಳ್ಳುತ್ತಾರೆ. ಎಲ್ಲ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ . ಹೆಚ್ಚು ಕಲಿಯುವುದಕ್ಕೆ , ಸಾಧನೆ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಅವರ ವೈಫಲ್ಯವನ್ನು ಮೇಲ್ವರ್ಣೀಯರ ತಲೆಗೆ ಕಟ್ಟುತ್ತಿದ್ದಾರೆ ’’. ಆದರೆ ಈ ಎಲ್ಲ ಟೀಕೆ , ವ್ಯಂಗ್ಯಗಳಿಗೆ ಉತ್ತರ ನೀಡುವವನಂತೆ ಹೈದರಾಬಾದ್ ವಿಶ್ವ ವಿದ್ಯಾಲಯದ ದಲಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಈತನಿಗೆ ಅಂಬೇಡ್ಕರ್ ಸಂವಿಧಾನದ ಪೂರ್ಣ ಬೆಂಬಲವಿದ್ದರೂ, ಇವನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಯಿತು . ಇಲ್ಲಿ ರೋಹಿತ್ ಸಾಯುವ ಮೊದಲೇ, ಆತನ ಕನಸುಗಳನ್ನು ವಿಶ್ವವಿದ್ಯಾಲಯದ ಜಾತಿ ವ್ಯವಸ್ಥೆ , ಕೋಮು ರಾಜಕೀಯ ಸಾಯಿಸಿ ಹಾಕಿತ್ತು. ಕನಸುಗಳೇ ಸತ್ತು ಹೋದ ಮೇಲೆ ಅಸ್ತಿತ್ವಕ್ಕೆ ಏನು ಬೆಲೆ ? ಇದು ರೋಹಿತ್ ನನ್ನು ಆತ್ಮಹತ್ಯೆಯೆಡೆಗೆ ತಳ್ಳಿತು . ಒಂದು ರೀತಿಯಲ್ಲಿ ರೋಹಿತ್ ನನ್ನು ಕ್ರೂರ ಜಾತಿ ರಾಜಕೀಯ ವ್ಯವಸ್ಥಿತವಾಗಿ , ಉಪಾಯವಾಗಿ ಕೊಂದು ಹಾಕಿದೆ. ಪ್ರತಿಭಾವಂತರು ಹುಟ್ಟುವುದು ಮೇಲ್ವರ್ಣೀಯರಲ್ಲಿ ಮಾತ್ರ ಎಂಬ ಮನಃಸ್ಥಿತಿಯ ನಡುವೆ ರೋಹಿತ್ ನಂತಹ ಪ್ರತಿಭಾವಂತನನ್ನು ವಿಶ್ವವಿದ್ಯಾಲಯ ಪೋಷಿಸಿ ಬೆಳೆಸದೇ ಏಕೆ ಕೊಂದು ಹಾಕಿತು? ರೋಹಿತನಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಿ , ನೀರೆರೆದು ಅವರನ್ನು ಬೆಳೆಸಿ, ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು ರಾಜಕಾರಣಿಗಳ , ಪ್ರೊಫೆಸರ್ ಗಳ ಕರ್ತವ್ಯವಾಗಿತ್ತು . ಒಂದು ವೇಳೆ ಅಂತಹ ವಿದ್ಯಾರ್ಥಿಗಳು ಯಾವುದಾದರೂ ಸಣ್ಣ ಪುಟ್ಟ ಬಿಕ್ಕಟ್ಟು , ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದರಿಂದ ಅವರನ್ನು ಪಾರು ಮಾಡಿ, ಅವರ ದಾರಿಯನ್ನು ಸುಗಮ ಮಾಡಿಕೊಡುವುದು ವಿಶ್ವವಿದ್ಯಾಲಯದ ಕರ್ತವ್ಯ. ದಲಿತರಲ್ಲಿ ಅತ್ಯುನ್ನತ ಶಿಕ್ಷಣ ಪಡೆಯುವವರೇ ಕಡಿಮೆ ಇರುವಾಗ, ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ರಾಜಕೀಯ ಒಳಸಂಚಿನಿಂದ ವಿಶ್ವವಿದ್ಯಾಲಯದಿಂದಲೇ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾದಾಗ ತಕ್ಷಣ ಸರಕಾರ ಮಧ್ಯ ಪ್ರವೇಶಿಸಬೇಕಾಗಿತ್ತು . ರೋಹಿತ್ ಮತ್ತು ಅವನ ಸಂಗಡಿಗರ ಮೇಲೆ ಆದ ಅನ್ಯಾಯ ಗುಟ್ಟಿನ ವಿಷಯವೇನೂ ಅಲ್ಲ. ಕಳೆದ ಎರಡು ವಾರಗಳಿಂದ ಈತ ತನ್ನ ಸಂಗಡಿಗರ ಜೊತೆಗೆ ವಿಶ್ವವಿದ್ಯಾಲಯದ ಮೈದಾನದಲ್ಲಿ ಮಲಗುತ್ತಿದ್ದ .

ಮಾಧ್ಯಮಗಳಲ್ಲಿಯೂ ಈ ಸುದ್ದಿ ಚರ್ಚೆಗೊಳಗಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಕರಣ ತೀವ್ರ ಸ್ವರೂಪವನ್ನು ಪಡೆದದ್ದು, ಇದರಲ್ಲಿ ಕೇಂದ್ರ ಸಚಿವರೊಬ್ಬರು ಹಸ್ತಕ್ಷೇಪ ಮಾಡಿರುವುದರಿಂದ. ರೋಹಿತ್ ಸಂಗಡಿಗರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೇಂದ್ರ ಸಚಿವರ ನೇರ ಕುಮ್ಮಕ್ಕು ಇತ್ತು . ಆ ಮೂಲಕ ಅವರನ್ನು ವಿಶ್ವವಿದ್ಯಾಲಯದಿಂದ ಓಡಿಸಿ , ಶಾಶ್ವತವಾಗಿ ಅವರ ಬದುಕನ್ನು ಕತ್ತಲಲ್ಲಿ ತಳ್ಳುವುದು ಉದ್ದೇಶವಾಗಿತ್ತು . ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಚಟುವಟಿಕೆಗಳು ಇಂದು ನಿನ್ನೆಯವಲ್ಲ . ಬಿಜೆಪಿ ಮತ್ತು ಸಂಘಪರಿವಾರ ಪ್ರಾಥಮಿಕ ಶಾಲೆಗಳಲ್ಲೂ ತನ್ನ ಹಸ್ತಕ್ಷೇಪವನ್ನು ಆರಂಭಿಸಿದೆ . ಶಾಲೆಗಳಲ್ಲಿ ಸಂಘಪರಿವಾರ ಸಿದ್ಧಾಂತಗಳನ್ನು ಹರಡುವುದು, ಮಕ್ಕಳಲ್ಲಿ , ವಿದ್ಯಾರ್ಥಿಗಳಲ್ಲಿ ದ್ವೇಷ ಸಿದ್ಧಾಂತಗಳನ್ನು ಬಿತ್ತುವುದು ನಡೆಯುತ್ತಲೇ ಇದೆ .

ಕಾಲೇಜುಗಳ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ನೇರವಾಗಿ ಕಣಕ್ಕಿಳಿಯುತ್ತವೆ . ಹೊರಗಿನ ರಾಜಕೀಯ ಶಕ್ತಿಗಳು ಕಾಲೇಜುಗಳ ಪರಿಸರವನ್ನು ಈಗಾಗಲೇ ಕೆಡಿಸಿ ಹಾಕಿವೆ. ಎಬಿವಿಪಿ ಸಂಘಟನೆಗಳ ಪುಂಡಾಟಗಳಂತೂ ಮಿತಿ ಮೀರಿವೆ. ಈ ಹಿಂದೆ ವಿಶ್ವವಿದ್ಯಾನಿಲಯದ ಅಧ್ಯಾಪಕನನ್ನು ಈ ಸಂಘಟನೆಯ ಕಾರ್ಯಕರ್ತರು ಥಳಿಸಿ ಕೊಂದಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರ ಮೇಲೆ ಈ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ, ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆರೆಸ್ಸೆಸ್ ವಿಶ್ವವಿದ್ಯಾನಿಲಯಗಳಲ್ಲಿ ನೇರವಾಗಿ ಕೈಯಾಡಿಸುತ್ತಿದೆ. ದಲಿತ ವಿದ್ಯಾರ್ಥಿಗಳ ಸಂಘಟನೆಗಳನ್ನು, ಹೋರಾಟಗಳನ್ನು ದಮನಿಸಲು ವ್ಯವಸ್ಥಿತವಾಗಿ ಅಧಿಕಾರವನ್ನು ಬಳಸುತ್ತಿದೆ. ರೋಹಿತ್ ಅದರ ನೇರ ಬಲಿಪಶುವಾಗಿದ್ದಾರೆ. ರೋಹಿತ್ ತಂಡ ದಲಿತ ಸಂಘಟನೆಗಳಲ್ಲಿ ಸಕ್ರಿಯವಾಗಿರುವುದೇ ಕುಲಪತಿಯ ಕೆಂಗಣ್ಣು ಅವರ ಮೇಲೆ ಬೀಳುವುದಕ್ಕೆ ಕಾರಣವಾಗಿದೆ. ದಲಿತ ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿತ್ತು .
ಈಗಾಗಲೇ ಹಲವು ಪ್ರತಿಭಟನೆಗಳಲ್ಲಿ ಇವರು ಕಾಣಿಸಿಕೊಂಡದ್ದು ವಿಶ್ವವಿದ್ಯಾಲಯದ ಕುಲಪತಿಯ ಪಾಲಿಗೆ ಅಕ್ರಮ ಚಟುವಟಿಕೆಯಾಗಿ ಕಂಡಿದೆ. ದಲಿತರು ಮತ್ತು ಶೋಷಿತರು ಸಂಘಟಿತರಾಗುವುದನ್ನು ತಡೆಯುವ ಉದ್ದೇಶದಿಂದಲೇ , ಈ ವಿದ್ಯಾರ್ಥಿಗಳನ್ನು ರಾಜಕೀಯ ನಾಯಕರ ಆದೇಶದ ಮೇರೆಗೆ ಕಾಲೇಜಿನಿಂದ ವಜಾಗೊಳಿಸಲಾಗಿತ್ತು. ಒಬ್ಬ ದಲಿತ ವಿದ್ಯಾರ್ಥಿ ವಿಶ್ವವಿದ್ಯಾಲಯದವರೆಗೆ ಹೋಗುವುದಕ್ಕೆ ಅದೆಷ್ಟೋ ಸಂಘರ್ಷಗಳನ್ನು ಮಾಡಬೇಕು. ಅಂತಹ ಸಂದರ್ಭದಲ್ಲಿ ಆತನನ್ನು ಸಂಪೂರ್ಣವಾಗಿ ನಾಶ ಮಾಡಲು ಕುಲಪತಿಯೇ ನೇತೃತ್ವ ವಹಿಸಿದರೆ ಆ ವಿದ್ಯಾರ್ಥಿಯಾದರೂ ಏನು ಮಾಡಬೇಕು ? ಕಳೆದೆರಡು ವಾರಗಳಿಂದ ಮುಷ್ಕರ ಮಾಡುತ್ತಿದ್ದರೂ ಸಮಾಜ ಹೆಣದಂತೆ ಮಲಗಿರುವಾಗ, ವ್ಯವಸ್ಥೆಯ ವಿರುದ್ಧ ನಂಬಿಕೆ ಕಳೆದುಕೊಳ್ಳುವುದು ಸಹಜವೇ ಸರಿ. ಕುಲಪತಿಗೆ ಬರೆದ ಪತ್ರದಲ್ಲಿ ‘‘ದಲಿತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಅವರಿಗೆ ವಿಷ ಮತ್ತು ನೇಣು ಹಗ್ಗವನ್ನು ಉಚಿತವಾಗಿ ಕೊಡಿ’’ ಎಂದು ಮನವಿ ಮಾಡಿರುವುದೇ , ವಿಶ್ವವಿದ್ಯಾನಿಲಯದಲ್ಲಿ ದಲಿತರು ವಿದ್ಯಾರ್ಥಿಗಳು ಎದುರಿಸುತ್ತಿರುವ ಅಭದ್ರತೆಯನ್ನು ಎತ್ತಿ ಹಿಡಿಯುತ್ತದೆ.

ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿಕೊಂಡಂತೆಯೇ ರೋಹಿತ್ ನ ಕೊರಳನ್ನು ವಿಶ್ವವಿದ್ಯಾಲಯ ಕತ್ತರಿಸಿಕೊಂಡಿದೆ. ಅವನು ಕಲಿತ ವಿದ್ಯೆಯನ್ನೇ ಅವನಿಂದ ಕಿತ್ತು , ಆತ್ಮಹತ್ಯೆಗೆ ತಳ್ಳಿದೆ. ಇದರ ಹಿಂದಿರುವ ಎಲ್ಲ ರಾಜಕೀಯ ನಾಯಕರು ಮತ್ತು ವಿಶ್ವವಿದ್ಯಾಲಯದ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಜರಗದೇ ಇದ್ದರೆ , ಅದು ಅಂಬೇಡ್ಕರ್ ಸಂವಿಧಾನದ ಅತಿ ದೊಡ್ಡ ವೈಫಲ್ಯವಾಗಿ ಇತಿಹಾಸದಲ್ಲಿ ಗುರುತಿಸಲ್ಪಡುತ್ತದೆ.

ಸೌಜನ್ಯ : ವಾಭಾ ೧೯.೧.೨೦೧೬

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...