Tuesday, January 19, 2016

ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲಾ ಬರೆದ ಎರಡು ಪತ್ರಗಳು

1

ದಲಿತ ವಿದ್ಯಾರ್ಥಿಗಳಿಗೆ
ವಿಷ, ನೇಣುಹಗ್ಗ ವಿತರಿಸಿ!


ಸೋಮವಾರ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆನುಲಾ ಅವರು, ದೌರ್ಜನ್ಯದಿಂದ ಹತಾಶರಾಗಿ ಹೈದರಾಬಾದ್ ವಿ.ವಿ. ಉಪಕುಲಪತಿಗೆ ಬರೆದಿರುವ ಕೊನೆಯ ಪತ್ರ ಇಲ್ಲಿದೆ.

ರಿಗೆ,
ಉಪಕುಲಪತಿ,
ಹೈದರಾಬಾದ್ ವಿ.ವಿ.
ವಿಷಯ: ದಲಿತ ಸಮಸ್ಯೆಗೆ ಪರಿಹಾರ
ಮಾನ್ಯರೆ,


ದಲಿತರ ಬಗ್ಗೆ ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ, ಎಬಿವಿಪಿ ಅಧ್ಯಕ್ಷರೊಬ್ಬರನ್ನು ಪ್ರಶ್ನಿಸಿದ್ದಕ್ಕಾಗಿ, ದಲಿತರ ಆತ್ಮಗೌರವದ ಚಳವಳಿಯ ಬಗ್ಗೆ ನೀವು ನೀಡಿದ ‘ಶ್ರದ್ಧಾಪೂರ್ವಕ’ಹೇಳಿಕೆಗಾಗಿ ಮೊದಲಿಗೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಈ ವಿಷಯದ ಬಗ್ಗೆ ನೀವು ವೈಯಕ್ತಿಕವಾಗಿ ತೋರಿದ ಆಸಕ್ತಿಯು, ಐತಿಹಾಸಿಕ ಹಾಗೂ ಅಭೂತಪೂರ್ವವಾದುದು. ಐವರು ದಲಿತ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ನಲ್ಲಿ ‘‘ಸಾಮಾಜಿಕವಾಗಿ ಬಹಿಷ್ಕರಿಸಲಾಗಿದೆ’’. ನಿಮ್ಮ ಬದ್ಧತೆಗಳನ್ನು ಕಾಣುವಾಗ, ಡೋನಾಲ್ಡ್ ಟ್ರಂಪ್ ಕೂಡಾ ಲಿಲಿಪುಟ್‌ನಂತೆ ಭಾಸವಾಗುತ್ತಿರುವುದರಿಂದ, ನಾನು ನೈತಿಕತೆಯ ಸಂಕೇತವಾಗಿ ಎರಡು ಸಲಹೆಗಳನ್ನು ನೀಡಲಿಚ್ಚಿಸುತ್ತೇನೆ. ಈ ಮೂಲಕ ನೀವು ದಲಿತರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.


1. ಪ್ರವೇಶಾತಿಯ ಸಮಯದಲ್ಲಿ ಎಲ್ಲಾ ದಲಿತ ವಿದ್ಯಾರ್ಥಿಗಳಿಗೆ ದಯವಿಟ್ಟು 10 ಮಿ.ಗ್ರಾಂ. ಸೋಡಿಯಂ ಆಸಿಡ್ ವಿಷವನ್ನು ನೀಡಿರಿ. ಅಂಬೇಡ್ಕರ್ ಓದುತ್ತಿದ್ದಾಗ ಎದುರಿಸಿದ ಪರಿಸ್ಥಿತಿಯೇ ತಮಗಾಗುತ್ತಿದೆಯೆಂಬ ಅನುಭವಾದಲ್ಲಿ ಅವರು ಅದನ್ನು ಬಳಸಿಕೊಳ್ಳಲಿ.


2. ನಿಮ್ಮ ಸಂಗಡಿಗರಾದ, ಮಹಾನ್ ಮುಖ್ಯ ವಾರ್ಡನ್ ಮೂಲಕ ಎಲ್ಲಾ ದಲಿತ ವಿದ್ಯಾರ್ಥಿಗಳ ಕೊಠಡಿಗೆ ಒಳ್ಳೆಯ ನೇಣು ಹಗ್ಗವನ್ನು ಪೂರೈಕೆ ಮಾಡಿರಿ.


ನಾವು ವಿದ್ವಾಂಸರು, ಪಿಎಚ್‌ಡಿ ವಿದ್ಯಾರ್ಥಿಗಳು ಈಗಾಗಲೇ ಆ ಹಂತವನ್ನು ಹಾದುಹೋಗಿದ್ದೇವೆ ಹಾಗೂ ಈಗಾಗಲೇ ದಲಿತ ಆತ್ಮಗೌರವ ಚಳವಳಿಯ ಸದಸ್ಯರಾಗಿದ್ದೇವೆ. ದುರದಷ್ಟವಶಾತ್, ಇಲ್ಲಿಂದ ನಮಗೆ ನಿರ್ಗಮಿಸುವ ಸುಲಭ ಮಾರ್ಗ ನಮಗೆ ತೋಚುತ್ತಿಲ್ಲ.


ಹೀಗಾಗಿ, ಮಹನೀಯರಾದ ತಾವು, ನನ್ನಂತಹ ವಿದ್ಯಾರ್ಥಿಗಳಿಗೆ ‘‘ದಯಾಮರಣ’’ದ ಸೌಲಭ್ಯವನ್ನು ಒದಗಿಸಲು ಸಿದ್ಧತೆಗಳನ್ನು ನಡೆಸುವಂತೆ ನಾನು ನಿಮ್ಮನ್ನು ಕೋರುತ್ತೇನೆ ಮತ್ತು ನಿಮಗೆ ಮತ್ತು ನಿಮ್ಮ ಕ್ಯಾಂಪಸ್‌ಗೆ ಸದಾ ಶಾಂತಿ ದೊರೆಯಲಿ ಎಂದು ಹಾರೈಸುತ್ತೇನೆ.


ಧನ್ಯವಾದಗಳು.


ನಿಮ್ಮ ವಿನಮ್ರ,
ವೆಮುಲಾ ಆರ್. ಚಕ್ರವರ್ತಿ2
ಆತ್ಮಹತ್ಯಗೆ ಶರಣಾದ ದಲಿತ ಯುವಕ ರೋಹಿತ್ ರವರ ಕೊನೆಯ ಪತ್ರ ;"ನಾನು ವಿಜ್ಞಾನ ಮತ್ತು ನಕ್ಷತ್ರಗಳನ್ನು ಪ್ರೀತಿಸುತ್ತಿದ್ದೆ. . . .

ಶುಭ ಮುಂಜಾನೆ,

ಈ ಪತ್ರವನ್ನು ಓದುವ ಹೊತ್ತಿಗೆ ನಾನು ಇರುವುದಿಲ್ಲ ! ನನ್ನ ಮೇಲೆ ಸಿಟ್ಟಾಗಬೇಡಿ ನನಗೆ ಗೊತ್ತು ನಿಮ್ಮಲ್ಲಿ ಹಲವರು ನನ್ನ ಮೇಲೆ ತುಂಬಾ ಕಾಳಜಿ ವಹಿಸಿದ್ದಿರಾ , ಪ್ರೀತಿಸಿದ್ದಿರಾ, ತುಂಬಾ ಚೆನ್ನಾಗಿ ನೋಡಿಕೊಂಡಿದ್ದಿರಾ , ನನಗೆ ಯಾರ ಮೇಲೂ ದೂರುಗಳಿಲ್ಲ ! ಹಾಗೆ ನೋಡಿದರೆ ನನಗೆ ಸಮಸ್ಯೆಗಳು ನನ್ನೊಂದಿಗೆ ಇದ್ದವು ! ನಿಜ ಹೇಳಬೇಕು ಎಂದರೆ ನನಗೆ ಬೆಳೆಯುತ್ತಿರುವ ನನ್ನ ದೇಹ ಮತ್ತು ಆತ್ಮದ ನಡುವೆ ಅಂತರವಿದೆ ಎಂಬ ಭಾವ ಅವರಿಸುತ್ತಿದೆ.

ನಾನು ಒಬ್ಬ ಬರಹಗಾರನಾಗಬೇಕು ಎಂದು ಆಶಿಸುತ್ತಿದ್ದೆ , ಕಾರ್ಲ್ ಸಗಾನ್ ರಂತೆ ಒಬ್ಬ ವಿಜ್ಞಾನದ ಬರಹಗಾರನಾಗಬೇಕು ಎಂಬುದು ನನ್ನ ಆಸೆಯಾಗಿತ್ತು . ಆದರೆ ಕೊನೆಗೆ ನನಗೆ ಈ ಕಡೆಯ ಪತ್ರ ಬರೆಯುವ ಅವಕಾಶ ಮಾತ್ರ ನನಗೆ ಸಿಕ್ಕಿದೆ .
ನಾನು ವಿಜ್ಞಾನ, ನಕ್ಷತ್ರ ಮತ್ತು ನಿಸರ್ಗವನ್ನು ಪ್ರೀತಿಸಿದೆ. ಅನಂತರ ನನಗೆ ಅರಿವಿಲ್ಲದೆ ನಿಸರ್ಗದ ಬಂಧವನ್ನು ಕಡಿದುಕೊಂಡ ಮನುಷ್ಯರನ್ನು ಪ್ರೀತಿಸಿದೆ. ಆದರೆ ವಾಸ್ತವದ ಜಗತ್ತಿನಲ್ಲಿ ಮನುಷ್ಯರ ನಡುವಿನ ಭಾವನೆಗಳು ಸೆಕೆಂಡ್ ಹ್ಯಾಂಡೆಡ್ ಆಗಿ ಬದಲಾಗಿವೆ , ಇಲ್ಲಿ ಪ್ರೀತಿಯೂ ಕೃತಕವಾಗಿ ನಿರ್ಮಿಸಲ್ಪಟ್ಟಿದೆ, ನಮ್ಮ ಭಾವನೆಗಳಿಗೆ ಬಣ್ಣ ಕೊಡಲಾಗಿದೆ. ನಮ್ಮ ನೈಜತೆಯು ಕೃತಕ ಕಲೆಯ ಮೂಲಕವೇ ಮೌಲ್ಯೀಕರಣಗೊಳ್ಳುವ ಹಂತಕ್ಕೆ ನಾವು ತಲುಪಿದ್ದೇವೆ. ನಿಜ ಹೇಳಬೇಕು ಎಂದರೆ ಇಂದು ಜಗತ್ತಿನಲ್ಲಿ ನೋವು ಇಲ್ಲದ ಪ್ರೀತಿಯನ್ನು ಪಡೆಯುವುದು ಅಂತ್ಯಂತ ಕಷ್ಟಕರವಾಗಿದೆ...

ಮನುಷ್ಯನೊಬ್ಬನ ಮೌಲ್ಯ ಈ ನಿಮಿಷದ ಗುರುತಿಸುವಿಕೆ ಮತ್ತು ಈ ಕ್ಷಣದ ಅವಕಾಶಗಳಿಗೆ ಪೂರಕವಾಗಿ ಸಂಕುಚಿತಗೊಳ್ಳುತ್ತಿದೆ. ಈ ಜಗತ್ತಿನಲ್ಲಿ ಮನುಷ್ಯ ನೈಸರ್ಗಿಕವಾಗಿ ಪ್ರಜ್ಞೆಯುಳ್ಳ ಜೀವಿಯಾಗಿ ಗುರುತಿಸಲ್ಪಡದೆ ಮತವಾಗಿ, ಸಂಖ್ಯೆಯಾಗಿ, ವಸ್ತುವಾಗಿ ಪರಿಗಣಿಸಲ್ಪಡುತ್ತಿದ್ದಾನೆ. ಜಗತ್ತಿನ ನೈಜ ಸೌಂದರ್ಯವನ್ನು ಇಂದು ಧೂಳು ಅವರಿಸುತ್ತಿದೆ. ಇದು ಎಲ್ಲಾ ಕ್ಷೇತ್ರಗಳನ್ನು ಅಂದರೆ ಅಧ್ಯಯನ, ಬೀದಿಗಳು, ರಾಜಕೀಯ , ಸಾವು, ಬದುಕು ಎಲ್ಲವನ್ನೂ ಅವರಿಸುತ್ತಿದೆ .
ನಾನು ಈ ರೀತಿಯ ಪತ್ರವನ್ನು ಮೊದಲ ಬಾರಿ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ಪತ್ರವಾಗಿದೆ. ನನ್ನ ಭಾವಗಳನ್ನು ನಿಮಗೆ ಅರ್ಥ ಮಾಡಿಸಲು ಸಾಧ್ಯವಾಗದಿದ್ದರೆ ಕ್ಷಮೆ ಇರಲಿ.
ಈ ಜಗತ್ತನ್ನು, ನೋವನ್ನು, ಪ್ರೀತಿಯನ್ನು, ಬದುಕು ಮತ್ತು ಸಾವುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಾನು ತಪ್ಪಿರಬಹುದು ಅವಸರವೇನಿಲ್ಲ ! ಆದರೆ ನನಗೆ ಬದುಕನ್ನು ಬದುಕಬೇಕೆಂಬ ಉತ್ಸಾಹವಿತ್ತು ! ಕೆಲವು ಜನರಿಗೆ ಬದುಕು ಎಂಬುದು ಒಂದು ಸಂಗತಿ ಅಷ್ಟೆ ಹಾಗೆ ನೋಡಿದರೆ ನನ್ನ ಹುಟ್ಟು ಒಂದು ಆಕಸ್ಮಿಕ ನಾನು ನನ್ನ ಬಾಲ್ಯದ ಒಂಟಿತನದಿಂದ ಚೇತರಿಸಿಕೊಂಡಿಲ್ಲ ! ನಾನು ಗತದಲ್ಲಿ ಯಾರೂ ಹೊಗಳದ, ಗುರುತಿಸದ ಮಗುವಾಗಿದ್ದೆ .

ಈ ನಿಮಿಷದಲ್ಲಿ ನಾನು ನೊಂದಿಲ್ಲ , ಬೇಸರದಲ್ಲಿ ಇಲ್ಲ ಆದರೆ ಖಾಲಿಯಾಗಿದ್ದೇನೆ. ನನ್ನ ಕುರಿತು ನನಗೆ ಯಾವುದೇ ನಿರೀಕ್ಷೆಗಳಿಲ್ಲ ತನ್ನೂಳಗೆ ತಾನು ಇಲ್ಲದಿರುವ ಈ ಸ್ಥಿತಿ ಬದುಕಿನ ಅಂತ್ಯಂತ ಕರುಣಾಜನಕ ಸಂಗತಿ! ಆ ಕಾರಣಕ್ಕೆ ನಾನು ಈ ಕೃತ್ಯವನ್ನು ಮಾಡುತ್ತಿದ್ದೇನೆ.

ನಾನು ಹೋದ ಮೇಲೆ ಜನ ನನ್ನನ್ನು ಹೇಡಿ, ಸ್ವಾರ್ಥಿ, ಮೂರ್ಖ ಎನ್ನಬಹದು ! ನಾನು ನನ್ನನ್ನು ಏನೆಂದು ಕರೆಯುತ್ತಾರೆ ಎಂಬುದರ ಕುರಿತು ಯೋಚಿಸುವುದಿಲ್ಲ . ನಾನು ಸಾವಿನ ಅನಂತರದ ಬದುಕಿನ ಕುರಿತಾದ ದೆವ್ವ , ಆತ್ಮಗಳ ಕಥೆಗಳನ್ನು ನಂಬುವುದಿಲ್ಲ ನಾನು ಏನಾದರು ನಂಬುವುದಿದ್ದರೆ ನಾನು ಬೇರೆ ಲೋಕವನ್ನು ಕುರಿತು ಅರಿಯಲು ನಕ್ಷತ್ರಗಳ ಕಡೆ ಪಯಣಿಸುತ್ತೇನೆ ಎಂಬುದನ್ನು ಮಾತ್ರ ನಂಬುತ್ತೇನೆ.

ಈ ಪತ್ರ ಓದುತ್ತಿರುವವರು ನನಗೆ ಒಂದು ಸಹಾಯ ಮಾಡುತ್ತಿರ ಎಂದು ನಂಬುತ್ತೇನೆ . ನನಗೆ ಏಳು ತಿಂಗಳಿನ ಶಿಷ್ಯವೇತನ ಒಂದು ಲಕ್ಷದ ಎಪ್ಪತ್ತೈದು ಸಾವಿರ ಮಂಜೂರಾಗಿದೆ. ಅದನ್ನು ದಯಮಾಡಿ ನನ್ನ ಕುಟುಂಬಕ್ಕೆ ಕಳುಹಿಸಿ ನಾನು ರಾಮ್ ಜಿಗೆ ನಲವತ್ತು ಸಾವಿರ ಹಣ ನೀಡಬೇಕು ಅವನು ಎಂದೂ ಅದನ್ನು ಕೇಳಿಲ್ಲ ಈ ಹಣದಲ್ಲಿ ಅದನ್ನು ಆತನಿಗೆ ನೀಡಿ.
ನನ್ನ ಅಂತಿಮ ಸಂಸ್ಕಾರ ಮೌನ ಮತ್ತು ಸರಳವಾಗಿ ನಡೆಯಲಿ, “ಹೀಗೆ ಕಂಡು ಹಾಗೆ ಹೋದ” ಎಂಬಂತೆ ಭಾವಿಸಿ. ನನಗೊಸ್ಕರ ಕಣ್ಣಿರು ಹರಿಸಬೇಡಿ ಏಕೆಂದರೆ ನಾನು ಬದುಕುವುದಕ್ಕಿಂತ ಸಾಯುವುದರಲ್ಲಿ ಸುಖಿಯಾಗಿದ್ದೇನೆ ಎಂಬುದನ್ನು ಗ್ರಹಿಸಿ. ನನ್ನ ಬದುಕು ನೆರಳಿನಿಂದ ನಕ್ಷತ್ರದವರೆಗೆ . . . .

ಉಮಾ ಅಣ್ಣ ಈ ಕೆಲಸಕ್ಕೆ ನಿನ್ನ ಕೋಣೆ ಬಳಸುತ್ತಿರುವುದಕ್ಕೆ ಕ್ಷಮಿಸು, ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ನನ್ನ ಕುಟುಂಬ ನಿಮ್ಮನ್ನು ನಿರಾಸೆ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ ನಿಮ್ಮೆಲ್ಲರ ಭವಿಷ್ಯಗಳು ಉಜ್ವಲವಾಗಲಿ ಎಂದು ಹಾರೈಸುತ್ತೇನೆ .
ಕೊನೆಯದಾಗಿ

ಜೈ ಭೀಮ್

ಇಷ್ಟೆಲ್ಲಾ ಬರೆದು ಈ ಪತ್ರದ ವಿಧಿ ವಿಧಾನಗಳನ್ನು ಬರೆಯಲು ಮರೆತೆ.
ನನ್ನ ಈ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ನನ್ನನ್ನು ಯಾರೂ ಅವರ ವರ್ತನೆಗಳಿಂದಾಗಲಿ, ಮಾತುಗಳಿಂದಾಗಲಿ ಈ ಕೃತ್ಯಕ್ಕೆ ಪ್ರೇರೆಪಿಸಿಲ್ಲ ಇದು ನನ್ನ ಸ್ವಂತ ನಿರ್ಧಾರ, ಇದಕ್ಕೆ ನಾನೇ ಹೊಣೆ. ನಾನು ಹೋದ ಮೇಲೆ ನನ್ನ ಮಿತ್ರರು ಮತ್ತು ಶತ್ರುಗಳಿಗೆ ತೊಂದರೆ ನೀಡಬೇಡಿ . . . .

 ವೆಮುಲಾ ಆರ್. ಚಕ್ರವರ್ತಿ

ಹೈದರಾಬಾದ್ ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟ ದಲಿತ ಯುವಕ ರೋಹಿತ್ ವೆಮುಲ ಅವರು ಆತ್ಮಹತ್ಯಗೆ ಶರಣಾಗಿದ್ದಾರೆ ಅವರ ಕೊನೆಯ ಪತ್ರ ದ ಕನ್ನಡ ಭಾಷಾಂತರ ಇಲ್ಲಿದೆ:


ಸೌಜನ್ಯ : ವಾಭಾ ೧೯.೧.೨೦೧೬


 

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...