Friday, January 22, 2016

ಸಂಭ್ರಮದಲ್ಲಿ ಗಿರಡ್ಡಿಯವರ ಬಾಲ ಗಂಗಾಧರ ಅವತಾರ!


ರಂಜಾನ್ ದರ್ಗಾ 

ಧಾರವಾಡದಲ್ಲಿ ‘ಧಾರವಾಡ ಸಾಹಿತ್ಯ ಸಂಭ್ರಮ’ ಆರಂಭವಾಗಿದೆ. ಈ ಬಾರಿಯ ಸಾಹಿತ್ಯ ಸಂಭ್ರಮವನ್ನು ಡಾ. ಕಲಬುರ್ಗಿ ಅವರಿಗೆ ಅರ್ಪಿಸಲಾಗಿದೆ. ಈ ಸುದ್ದಿ ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದ ಪ್ರಮುಖ ವಿಷಯ, ಬಹು ಚರ್ಚಿತ ‘ಅಸಹಿಷ್ಣುತೆ’. ಹಿಂದಿನ ಮೂರು ಆವೃತ್ತಿಗಳಲ್ಲಿ ‘ಸಂಭ್ರಮ’ದ ಗೌರವಾಧ್ಯಕ್ಷರಾಗಿ, ಗೋಷ್ಠಿಗಳ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಆಯೋಜನೆ ಕುರಿತು ಅಮೂಲ್ಯ ಸಲಹೆ-ಸೂಚನೆ ನೀಡಿದ್ದ ಡಾ. ಕಲಬುರ್ಗಿ ‘ಈ ಬಾರಿ ಇಲ್ಲ’ ಎನ್ನುವ ನೋವು ಆಯೋಜಕರನ್ನು ಮಾತ್ರವಲ್ಲ, ಪ್ರತಿವರ್ಷ ಭಾಗವಹಿಸುವ ಪ್ರತಿನಿಧಿಗಳನ್ನೂ ಕಾಡುತ್ತಿದೆ ಎಂದು ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಅವರು ತಿಳಿಸಿದ್ದಾರೆ.

ಕಲಬುರ್ಗಿ ಅವರು ಈ ಬಾರಿಯ ಸಂಭ್ರಮದಲ್ಲೂ ಇರುತ್ತಾರೆ; ಅವರ ಹತ್ಯೆ ಬಿತ್ತಿದ ಭೀತಿ, ಅದರ ಬೆನ್ನಲ್ಲೇ ಭುಗಿಲೆದ್ದ ‘ಅಸಹಿಷ್ಣುತೆ’ ಎಂಬ ಆತಂಕದ ಬಗೆಗಿನ ಚರ್ಚೆಯ ಮೂಲಕ ಎಂದು ಅವರು ನುಡಿದಿದ್ದಾರೆ. ಆದರೆ ಇದೇ ಅಧ್ಯಕ್ಷ ಮಹಾಶಯರು ಮುಂದುವರಿದು ಹೇಳಿದ್ದೇನು ಗೊತ್ತೆ?

”ಕಲಬುರ್ಗಿ ಅವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಎನ್ನುವುದು ಬೆಳೆದು, ನಂತರ ಅದುವೇ ಅವರ ಸಾವಿಗೆ ಕಾರಣವಾಗುವಂಥ ಪರಿಸ್ಥಿತಿ ನಿರ್ಮಾಣವಾಯಿತು” ಎಂದು ‘ತೀರ್ಪು’ ನೀಡಿದ್ದಾರೆ.
ಇದೆಂಥ ಸಂಭ್ರಮ? ಇದೆಂಥ ಅರ್ಪಣೆ? ಡಾ. ಗಿರಡ್ಡಿ ಗೋವಿಂದರಾಜ ಅವರು ಇಷ್ಟೊಂದು ಸಂವೇದನಾಹೀನ ವ್ಯಕ್ತಿಯೆ?
ಇನ್ನು ಈ ‘ಸಂಭ್ರಮ’ದ ಆಶಯ ಕೂಡ ವಿಚಿತ್ರವಾಗಿದೆ. ಇ.ಎಸ್. ಸುಧೀಂದ್ರ ಪ್ರಸಾದ್ ಡಾ. ಗಿರಡ್ಡಿ ಗೋವಿಂದರಾಜ ಅವರನ್ನು ಮಾತನಾಡಿಸಿ ಬರೆದ ಈ ಪುಟ್ಟ ಲೇಖನದ ಶೀರ್ಷಿಕೆ ‘ಮಧ್ಯಮ ಮಾರ್ಗಕ್ಕೆ ಬಲ ತುಂಬುವ ಆಶಯ’ ಎಂದಿದೆ. ಈ ‘ಸಂಭ್ರಮ’ ಬುದ್ಧನ ‘ಮಧ್ಯಮ ಮಾರ್ಗ’ದ ಕಡೆಗೆ ವಾಲಿರಬಹುದು ಎಂಬ ಭಾವನೆಯೊಂದಿಗೆ ಓದುತ್ತ ಹೋದಂತೆ ಭ್ರಮನಿರಸನವಾಯಿತು.

ಎಡ ಮತ್ತು ಬಲ ಪಂಥಗಳು ಅತಿರೇಕಕ್ಕೆ ಹೋಗಿ ಹೆಚ್ಚು ಪ್ರಖರವಾಗಿ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಅವಲಂಬಿಸಿರುವ ಅನೇಕ ಜನರು ಇದ್ದಾರೆ. ಆದರೆ, ಅವರ ಪ್ರಯತ್ನ ಅಷ್ಟಾಗಿ ಮುಂದಕ್ಕೆ ಬರುತ್ತಿಲ್ಲ. ಈ ಪ್ರಯತ್ನವನ್ನು ಬಲಪಡಿಸುವ ಉದ್ದೇಶ ಈ ಬಾರಿಯ ಸಂಭ್ರಮದ ಆಶಯ ಎಂದು ಡಾ. ಗಿರಡ್ಡಿ ಗೋವಿಂದರಾಜ ಅವರು ಸ್ಪಷ್ಟಪಡಿಸಿದ್ದಾರೆ.

ಏನಿದರ ಮರ್ಮ? ಎಂಬ ಪ್ರಶ್ನೆ ಸಹಜವಾಗಿಯೆ ಏಳುತ್ತದೆ. ಈ ಅವಕಾಶವಾದ ಖಂಡಿತವಾಗಿಯೂ ಯಥಾಸ್ಥಿತಿಯ ಪರವಾಗೇ ಇರುವಂಥದ್ದು. ಇದು ಮಧ್ಯಮ ವರ್ಗದ ಗುಣವಿಶೇಷವೂ ಹೌದು. ಇಂದಿನ ಕಾರ್ಪೊರೇಟ್ ಜಗತ್ತಿಗೆ ಬೇಕಾಗಿರುವುದು ಇಂತ ಮನಸ್ಥಿತಿಯೆ ಎಂಬುದನ್ನು ಒತ್ತಿ ಹೇಳುವ ಅವಶ್ಯಕತೆ ಇಲ್ಲ. ಕಾರ್ಪೊರೇಟ್ ಜಗತ್ತಿಗೆ ದಲಿತ ಮತ್ತು ಎಡಪಂಥೀಯ ಚಳವಳಿಗಳು ಬೇಡ. ಬಲಪಂಥೀಯ ಪ್ರಖರತೆಯನ್ನು ಬೇಕಾದಾಗ ಮಾತ್ರ ಉಪಯೋಗಿಸಿಕೊಳ್ಳುವ ತಂತ್ರಗಾರಿಕೆ ಅವರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರಗತವಾಗಿದೆ.

ಅಸಹಿಷ್ಣುತೆಗೆ ಬಲಪಂಥೀಯ ಅತಿರೇಕದ ಕೃತ್ಯಗಳು ಮತ್ತು ಎಡಪಂಥೀಯರ ದುರ್ಬಲ ಪ್ರತಿರೋಧಗಳು ಎಂಬುದು ಭಾರತೀಯ ವರ್ತಮಾನವನ್ನು ಸಹಜವಾಗಿ ನೋಡುವವರಿಗೂ ಅರ್ಥವಾಗುತ್ತದೆ. ಎಡಪಂಥೀಯರು ಪ್ರಬಲವಾಗಿದ್ದರೆ ಖಂಡಿತವಾಗಿಯೂ ಈ ಅಸಹಿಷ್ಣುತೆಯ ಕ್ರೌರ್ಯಕ್ಕೆ ಅವಕಾಶವಿರುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವ ಕಾರಣಕ್ಕಾಗಿಯೇ ದೇಶದ ನೂರಾರು ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು ಮತ್ತು ದೇಶರಕ್ಷಕರು ತಮಗೆ ಸಂದ ಗೌರವ ಪ್ರಶಸ್ತಿಗಳನ್ನು ಹಿಂದುರುಗಿಸಿ ಅಸಹಿಷ್ಣುತೆ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆ ಮೂಲಕ ದೇಶದ ಬಹುತ್ವ ಸಂಸ್ಕೃತಿಯ ರಕ್ಷಣೆಗೆ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ. ನಿಜಕ್ಕೂ ಅವರ ಈ ನಿರ್ಧಾರ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯ ಉಳಿವಿಗೆ ಬಹು ದೊಡ್ಡ ಕಾಣಿಕೆಯಾಗಿದೆ. ಸೃಜನಶೀಲ ಸಮುದಾಯ ಇದಕ್ಕಿಂತ ಹೆಚ್ಚಿಗೆ ಇನ್ನೇನು ಮಾಡಲು ಸಾಧ್ಯ? ಇಷ್ಟಾದರೂ ಈ ಸಂಭ್ರಮಿಸುವವರಿಗೆ ಅರ್ಥವಾಗಬಾರದೆ?
ದೇಶದಲ್ಲಿ ದಲಿತರ ಮೇಲೆ, ಮಹಿಳೆಯರ ಮೇಲೆ ಮತ್ತು ಆಹಾರ ಸಂಸ್ಕೃತಿಯ ಮೇಲೆ ಅನ್ಯಾಯ ಅತ್ಯಾಚಾರ ನಡೆಯುತ್ತಿದ್ದರೂ ಎಲ್ಲ ವಾಸ್ತವವನ್ನು ನಿರಾಕರಿಸುತ್ತ ‘ಮಧ್ಯಮ ಮಾರ್ಗ’ ಎಂದು ಹೇಳುವುದರಲ್ಲಿ ಏನಾದರೂ ಅರ್ಥವಿದೆಯೆ? ಏನು ಈ ಮಧ್ಯಮ ಮಾರ್ಗ ಎಂಬುದನ್ನು ಗಿರಡ್ಡಿ ವಿವರಿಸಬಲ್ಲರೆ? ‘ಹಾಗೂ ಸೈ, ಹೀಗೂ ಸೈ’ ಎಂಬುದು ಮಧ್ಯಮ ಮಾರ್ಗವೇ?

ಈ ಮಧ್ಯಮಮಾರ್ಗದ ಅವಕಾಶವಾದಿ ಸಿದ್ಧಾಂತದಿಂದಾಗಿಯೆ ಡಾ. ಕಲಬುರ್ಗಿ ಅವರಿಗೆ ‘ಧಾರವಾಡ ಸಾಹಿತ್ಯ ಸಂಭ್ರಮ’ವನ್ನು ಅರ್ಪಿಸುತ್ತಲೇ, ‘ಕಲಬುರ್ಗಿ ಅವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಬೆಳೆಯಿತು’ ಎಂಬ ಧಾಷ್ಟ್ರ್ಯವನ್ನು ತೋರಲು ಗಿರಡ್ಡಿ ಅವರಿಗೆ ಸಾಧ್ಯವಾಯಿತು ಎಂಬುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ.

***ಅಶೋಕ್ ಶೆಟ್ಟರ್ 
ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀಂದ್ರ ಪ್ರಸಾದ್ ಅವರ ವರದಿಯಲ್ಲಿ ಪ್ರಸ್ತಾಪವಾದಂತೆ "ಎಂ.ಎಂ.ಕಲಬುರ್ಗಿಯವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಎನ್ನುವದು ಬೆಳೆದು. ನಂತರ ಅದುವೇ ಅವರ ಸಾವಿಗೆ ಕಾರಣವಾಗುವಂಥ ಪರಿಸ್ಥಿತಿ ನಿರ್ಮಾಣವಾಯಿತು"..ಎಂದು ಗಿರಡ್ಡಿ ಗೋವಿಂದರಾಜರು ಹೇಳಿದರಂತೆ. ಗಿರಡ್ಡಿ ಗೋವಿಂದರಾಜರು ಯಾರೆಂಬುದು ಗೊತ್ತಿಲ್ಲದವರಿಗೆ ಸಂಕ್ಷಿಪ್ತವಾಗಿ ಹೇಳಬಹುದಾದದ್ದು ಏನೆಂದರೆ ಅವರು ಪ್ರಸ್ತುತ ಧಾರವಾಡದಲ್ಲಿ ನಡೆಯುತ್ತಿರುವ "ಧಾರವಾಡ ಸಾಹಿತ್ಯ ಸಂಭ್ರಮ" ವೆಂಬ ಒಂದು ಖಾಸಗಿ ಟ್ರಸ್ಟ್ ವರ್ಷೇ ವರ್ಷೇ ಆಯೋಜಿಸುವ ಸಾಹಿತ್ಯ-ಸಮಾವೇಶದ ಆಯೋಜಕರು.

ಅದೇ ವರದಿಯ ಪ್ರಕಾರ ಸಾಹಿತ್ಯ ಸಂಭ್ರಮದ ಹಿಂದಿನ ಮೂರು "ಆವೃತ್ತಿ"ಗಳಲ್ಲಿ ಸಂಭ್ರಮದ ಗೌರವಾಧ್ಯಕ್ಷರಾಗಿ ಗೋಷ್ಠಿಗಳ ರೂಪುರೇಷೆ ಹಾಗೂ ಕಾರ್ಯಕ್ರಮಗಳ ಆಯೋಜನೆ ಕುರಿತು ಅಮೂಲ್ಯ ಸಲಹೆ ಸೂಚನೆ ನೀಡಿದ್ದ ಡಾ. ಕಲಬುರ್ಗಿ 'ಈ ಬಾರಿ ಇಲ್ಲ' ಎಂಬ ನೋವೂ ಅವರನ್ನು ಕಾಡುತ್ತಿದೆಯಂತೆ. ಮತ್ತು ಧಾರವಾಡ ಸಾಹಿತ್ಯ ಸಂಭ್ರಮದ ಈ ಆವೃತ್ತಿ ಕಲಬುರ್ಗಿಯವರ ಸ್ಮರಣೆಗೆ ಸಮರ್ಪಿತವಂತೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಂಭ್ರಮದ ಪ್ರಮುಖ ವಿಷಯ ಬಹುಚರ್ಚಿತ "ಅಸಹಿಷ್ಣುತೆ" ಅಂತೆ 

ಅಲ್ಲಿಗೆ 'ಮಧ್ಯಮ ಮಾರ್ಗಿ' ಗಳಾದ ಗಿರಡ್ಡಿಯವರು "ಎಂ.ಎಂ.ಕಲಬುರ್ಗಿಯವರು ಹಾಕಿಕೊಟ್ಟ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಎನ್ನುವದು ಬೆಳೆಯಿತು" ಎನ್ನುವ ಮೂಲಕ ಕಲಬುರ್ಗಿಯವರ ಕುರಿತು ಬೆಲ್ಜಿಯನ್ ಪ್ರೊಫೆಸರ್ ಬಾಲಗಂಗಾಧರ್ ಎಂಬುವರು ತಮ್ಮದೊಂದು ಬರಹದಲ್ಲಿ ಹೇಳಿದ ಮಾತುಗಳನ್ನೇ ಬೇರೆ ಶಬ್ದಗಳಲ್ಲಿ ಹೇಳಿದ್ದಾರೆ.

ಗಿರಡ್ಡಿಯವರು ಪರೋಕ್ಷವಾಗಿ ಕಲಬುರ್ಗಿಯವರು ತಮ್ಮ ಸಾವಿಗೆ ತಾವೇ ಕಾರಣರು ಎಂದಿದ್ದಾರೆ ಅಥವಾ ಪ್ರಜಾವಾಣಿಯ ವರದಿಗಾರರು ಅದನ್ನು ತಪ್ಪಾಗಿ ಗ್ರಹಿಸಿದ್ದಾರೆ..ಪುರುಷೋತ್ತಮ ಬಿಳಿಮಲೆ 

ಮಾನ್ಯ ಗಿರಡ್ಡಿಯವರು ತುಂಬ ತಿಳಿದವರು, ಹಾಗೆ ಹೇಳಬಾರದಿತ್ತು . ಕಲಬುರ್ಗಿ ಅವರು ಕನ್ನಡದ ಮಾಹಿತಿಗಳ ಮೂಲಕವೇ ಕನ್ನಡವನ್ನು ಕಟ್ಟಿದ ಮಹನೀಯ. ಅವರ ಸಂಶೋಧನಾ ವಿಧಾನ ನಮಗೊಂದು ಮಾದರಿ. ಯಾರಿಗಾದರೂ ಅದು ಒಪ್ಪಿತವಲ್ಲದಿದ್ದರೆ, ಅವರು ಅವರ ವಿರುದ್ಧ ಬರೆಯಬಹುದು, ಬದಲು ಗುಂಡು ಹಾರಿಸುವುದಲ್ಲ.

ಸಾಹಿತ್ಯ ಸಂಭ್ರಮದಲ್ಲಿ ಅನೇಕ ಮಹನೀಯರಿದ್ದಾರೆ, ಅವರಿಗಿದು ತಿಳಿದೀತು ಅಂತ ನಾನು ಭಾವಿಸುವೆ.
 
***

ಶ್ರೀನಿವಾಸ ಕಾರ್ಕಳ


***

ಅಲವಿಕಾ ಲಾ

ಅರೆ! ಯಾರ ಸಂಶೋಧನೆಯ ಮಾದರಿಯ ಮೂಲಕ ಅಸಹಿಷ್ಣುತೆ ಬೆಳೆಯಿತು ಅಂತಿದ್ದಾರೋ ಅವರಿಗೇ ಗೋಷ್ಠಿಗಳು ಸಮರ್ಪಿತವೇ!?

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...