Tuesday, January 19, 2016

ಪಟ್ಟಭದ್ರರ ಅಟ್ಟಹಾಸಕ್ಕೆ ಛಿದ್ರವಾಯಿತು ಯುವಚೇತನ





ಅಪೂರ್ವಾನಂದ





ನಕ್ಷತ್ರಲೋಕಕ್ಕೆ ಲಗ್ಗೆ ಇಡಬೇಕಿದ್ದ ಯುವಕ ಅಡ್ಡಿ ನಿವಾರಿಸುವಲ್ಲೇ ಕಾಲವಾದ

ವಿಧಿವಿಧಾನಗಳನ್ನು ಬರೆದುಕೊಳ್ಳುವುದನ್ನು ಮರೆತೆ. ನನ್ನನ್ನು ನಾನೇ ಕೊಂದುಕೊಳ್ಳುವ ಈ ಕೃತ್ಯಕ್ಕೆ ಯಾರೂ ಕಾರಣರಲ್ಲ. ಯಾರೂ ತಮ್ಮ ಕಾರ್ಯಗಳ ಮೂಲಕವಾಗಲಿ, ಮಾತಿನ ಮೂಲಕವಾಗಲಿ ನನಗೆ ಪ್ರಚೋದನೆ ನೀಡಿಲ್ಲ. ಇದು ನನ್ನ ನಿರ್ಧಾರ ಹಾಗೂ ಇದಕ್ಕೆ ನಾನು ಮಾತ್ರ ಜವಾಬ್ದಾರ. ನನ್ನ ಈ ಕೃತ್ಯದ ಬಳಿಕ ಸ್ನೇಹಿತರಿಗಾಗಲೀ ಅಥವಾ ಶತ್ರುಗಳಿಗಾಗಲಿ ತೊಂದರೆ ಕೊಡಬೇಡಿ.

ರವಿವಾರ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರೋಹಿತ್ ವೇಮುಲಾ ಬರೆದ ಪತ್ರದಲ್ಲಿ ವ್ಯಕ್ತವಾದ ಸ್ಪಷ್ಟ ನಿರ್ಧಾರ ಇದು. ಈ ಪ್ರಕರಣವನ್ನು ಯಾರಾದರೂ ಹಿಂದಿನಿಂದಲೂ ಗಮನಿಸಿಕೊಂಡು ಬಂದಿದ್ದರೆ, ವೇಮುಲಾ, ಹೈದ್ರಾಬಾದ್ ವಿಶ್ವವಿದ್ಯಾನಿಲಯದಿಂದ ಕಳೆದ ಆಗಸ್ಟಿನಲ್ಲಿ ಅಮಾನತುಗೊಂಡಿದ್ದ ಐವರು ದಲಿತ ವಿದ್ಯಾರ್ಥಿಗಳಲ್ಲಿ ಒಬ್ಬ ಎನ್ನುವುದು ಖಚಿತವಾಗಿ ತಿಳಿದಿರುತ್ತದೆ. ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರ ಜೊತೆ ಜಗಳ ಮಾಡಿದ್ದಾರೆ ಎಂಬ ಕಾರಣಕ್ಕೆ ಇವರನ್ನು ಅಮಾನತು ಮಾಡಲಾಗಿತ್ತು. ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಬಂಡಾರು ದತ್ತಾತ್ರೇಯ ಅವರು ವಿಶ್ವವಿದ್ಯಾನಿಲಯ ಅಧಿಕಾರಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ , ಅವರು ಈ ಪ್ರಕರಣದಲ್ಲಿ ವೈಯಕ್ತಿಕ ಆಸಕ್ತಿ ವಹಿಸಿದ್ದು ಗಮನಕ್ಕೆ ಬಂದಿತ್ತು . ಇದರಿಂದ ವಿವಾದ ಉಲ್ಬಣಿಸಿತ್ತು .

ವಕೀಲರ ಕೈ ಸೇರಿರುವ ವೇಮುಲಾ ಆತ್ಮಹತ್ಯೆ ಟಿಪ್ಪಣಿ, ಹೈದರಾಬಾದ್ ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು, ಎಬಿವಿಪಿ ಪದಾಧಿಕಾರಿಗಳನ್ನು ಹಾಗೂ ಬಂಡಾರು ದತ್ತಾತ್ರೇಯ ಅವರನ್ನು ಕಾಪಾಡಲು ಸಾಕಾಗುತ್ತದೆ. ಈ ವಿದ್ಯಾರ್ಥಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ರಕ್ಷಣೆ ಪಡೆಯಲು ಇಷ್ಟು ಸಾಕುವವರು. ಇದನ್ನು ಭಾರತದ ರಾಷ್ಟ್ರೀಯವಾದಿ ಮುಖಂಡರು ಭಾರತೀಯ ದಲಿತರ ಸಹಿಷ್ಣುತೆಯನ್ನು ಬಿಂಬಿಸಲು ಸಾಕ್ಷ್ಯವಾಗಿ ಬಳಸಿಕೊಳ್ಳಬಹುದು. ಅವರು ತಮ್ಮ ಸಾವನ್ನು ತಾವೇ ತಂದುಕೊಂಡರೂ, ಅವರ ಸಂಕಷ್ಟ ಅಥವಾ ನರಳಿಕೆಗೆ ಬೇರೆಯವರ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುವುದಿಲ್ಲ ಎಂದು ವಿವರಿಸಬಹುದು .

ಆದರೆ ಸಾವಿನ ಅಂಚಿನಲ್ಲಿದ್ದ ಆ ಯುವ ಹೃದಯದ ಉದಾತ್ತತೆ, ನಮ್ಮಿಂದ ಒಂದು ಕಹಿ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ರೋಹಿತ್ ವೇಮುಲಾ ಸತ್ತಿರುವುದು ನಮ್ಮ ಹೇಡಿತನದಿಂದ. ನಮ್ಮ ಸಹ ಶಿಕ್ಷಣತಜ್ಞರ ಹೇಡಿತನದಿಂದ; ಅಧಿಕಾರಸ್ಥರ ಒತ್ತಡಕ್ಕೆ ಮಣಿದು ಅವರ ಆದೇಶದ ಅನುಸಾರ, ವೇಮುಲಾ ಹಾಗೂ ಅವರ ಸಹಪಾಠಿಗಳನ್ನು ಹಾಸ್ಟೆಲಿನಿಂದ ಹೊರಹಾಕಿ, ಗ್ರಂಥಾಲಯ ಹಾಗೂ ಕ್ಯಾಂಪಸಿನ ಸಾಮಾನ್ಯ ಪ್ರದೇಶ ಪ್ರವೇಶಿಸುವುದಕ್ಕೆ ತಡೆ ಒಡ್ಡಿದ ವಿಶ್ವವಿದ್ಯಾನಿಲಯದ ಆಡಳಿತದಿಂದ. ವೇಮುಲಾ ಹಾಗೂ ಆತನ ಸಹಚರರು ಎಬಿವಿಪಿ ಸದಸ್ಯರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾರೆ ಎಂಬ ಆರೋಪಕ್ಕೆ ಯಾವ ಪುರಾವೆಯೂ ಇಲ್ಲ ಎಂದು ವಿಶ್ವವಿದ್ಯಾನಿಲಯ ನೇಮಿಸಿದ ಸಮಿತಿ ಖಚಿತಪಡಿಸಿದ್ದರೂ, ಈ ಸಮಿತಿಯ ವರದಿಯನ್ನು ಕಡೆಗಣಿಸಿ, ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ನ ಐವರು ವಿದ್ಯಾರ್ಥಿಗಳನ್ನು ಉಚ್ಚಾಟಿಸಲಾಯಿತು.
ಆತ ಹೇಳದೇ ಇದ್ದುದೇನು ?

ಈ ಆತ್ಮಹತ್ಯೆ ಟಿಪ್ಪಣಿಯಲ್ಲಿ ವೇಮುಲಾ ತನ್ನ ಸಾವಿಗೆ ಕಾರಣವಾದ ಘಟನಾವಳಿಗಳನ್ನು ಪಟ್ಟಿ ಮಾಡದಿರಲು ನಿರ್ಧರಿಸಿದ್ದ. ‘ಮುಝಫ್ಫನಗರ ಬಾಕಿ ಹೇ’ ಎಂಬ ಕೋಮುಹಿಂಸೆ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದನ್ನು ಹೇಳಿಕೊಳ್ಳಲಾರ. ಈ ಘಟನೆಗಳು ಎಬಿವಿಪಿಯ ಆಕ್ರೋಶಕ್ಕೆ ಕಾರಣವಾಗಿದ್ದವು ಎನ್ನುವುದನ್ನು ಅಥವಾ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿಗೆ ಪತ್ರ ಬರೆದು, ದೇಶದ್ರೋಹಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಇದು ಕಾರಣವಾಯಿತು ಎನ್ನುವುದನ್ನು ಉಲ್ಲೇಖಿಸಿಲ್ಲ . ಅಂತೆಯೇ ಕಳೆದ ಎರಡು ವಾರಗಳಿಂದ ಬಯಲಲ್ಲೇ ನಿದ್ರಿಸುತ್ತಿದ್ದೆ ಎನ್ನುವುದನ್ನೂ ಹೇಳಲಾರ.

ಇವೆಲ್ಲದರ ಬದಲಾಗಿ, ಈ ಕ್ಷಣದಲ್ಲಿ ನನಗೆ ಯಾವುದೇ ನೋವಾಗಿಲ್ಲ. ನನಗೆ ಬೇಸರವೂ ಆಗಿಲ್ಲ. ನಾನು ಖಾಲಿ ಮನಸ್ಸಿನವನಾಗಿದ್ದೇನೆ. ನನ್ನ ಬಗ್ಗೆಯೇ ನನಗೆ ಚಿಂತೆ ಇಲ್ಲ. ಇದು ನಿಜಕ್ಕೂ ಶೋಚನೀಯ. ಈ ಕಾರಣದಿಂದ ನಾನು ಈ ಕೃತ್ಯಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾನೆ.

ತಾನು ಅರ್ಥ ಮಾಡಿಕೊಳ್ಳಲು ಬಯಸಿದ ವಿಶ್ವ ತನಗೆ ಶೋಚನೀಯ ಎನಿಸಿದೆ. ಇದರ ಬದಲಾಗಿ ಪ್ರೀತಿ, ನೋವು, ಜೀವನ ಹಾಗೂ ಸಾವಿನ ಬಗ್ಗೆ ಹತಾಶವಾಗುವ ತುರ್ತನ್ನು ಕಂಡಿದ್ದಾನೆ ಎಂಬ ಅಂಶವನ್ನು ಉಲ್ಲೇಖಿಸಲು ಸಾಧ್ಯವಾಗಿಲ್ಲ . ಮನುಷ್ಯನೊಬ್ಬನ ಮೌಲ್ಯ ಆತನ ತಕ್ಷಣದ ಗುರುತಿಸುವಿಕೆಗೆ ಸೀಮಿತವಾಗಿದೆ ಹಾಗೂ ತೀರಾ ಸನಿಹದ ಸಾಧ್ಯತೆಗಳಿಗಷ್ಟೇ ಸೀಮಿತವಾಗಿದೆ. ಮತಕ್ಕಾಗಿ; ಸಂಖ್ಯೆಗಾಗಿ, ಒಂದು ಅಂಶಕ್ಕಾಗಿ. ಒಂದು ಮನಸ್ಸಾಗಿ ಮನುಷ್ಯನನ್ನು ಪರಿಗಣಿಸುತ್ತಿಲ್ಲ ಎನ್ನುವಲ್ಲಿ ಆತನ ಹತಾಶೆ ಸ್ಪಷ್ಟವಾಗಿ ಬಿಂಬಿತವಾಗಿದೆ.

ಅಧ್ಯಯನ, ಬೀದಿ, ಜೀವನ ಹಾಗೂ ಸಾವು ಎಲ್ಲದರಲ್ಲೂ ಮನುಷ್ಯರ ಮನಸ್ಸನ್ನು ತೇಜಃಪುಂಜವಾಗಿ ಪರಿಗಣಿಸಬೇಕು ಎಂದು ವೇಮುಲಾ ಬಯಸಿದ್ದ.

ಹೊಸ ಸಖ್ಯ
ವೇಮುಲಾ ವಿಜ್ಞಾನ ಲೇಖಕನಾಗುವ ಆಕಾಂಕ್ಷೆ ಹೊಂದಿದ್ದ. ಇಡೀ ಜಗತ್ತಿನ ಶಬ್ದಗಳ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದ. ಆತ ಈ ಕ್ಷಣದ ಗುರುತಿಸುವಿಕೆಗೆ ಅದನ್ನು ಸೀಮಿತಗೊಳಿಸಿಕೊಳ್ಳಲು ನಿರಾಕರಿಸಿದ್ದ. ಆತ ದಲಿತನಾಗಿ ಸಾಯಲು ಬಯಸಲಿಲ್ಲ ಅದನ್ನು ಕಳಚಿಕೊಳ್ಳಲು ಬಯಸಿದ್ದ. ಅದನ್ನು ಅನಂತಕ್ಕೆ ವಿಸ್ತರಿಸಿ, ನಕ್ಷತ್ರ ಪ್ರವಾಸದ ಕನಸು ಕಂಡಿದ್ದ. ರಅದಾಗ್ಯೂ ಆ ಅಡೆತಡೆಗಳನ್ನು ಮುರಿದು ಮುನ್ನುಗ್ಗುವ ಭರದಲ್ಲಿ ಜೀವ ಕಳೆದುಕೊಂಡ. ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಸದಸ್ಯನಾಗಿ, ರಾಷ್ಟ್ರೀಯವಾದಿ ಒಮ್ಮತಕ್ಕೆ ಸವಾಲು ಹಾಕಿದ್ದ. ಭಾರತದ ದುರ್ಬಲ ಮುಸ್ಲಿಮರ ಪರ ನಿಂತಿದ್ದ. ಇದು ಆತನ ಅಲ್ಪಾವಧಿ ಜೀವನದ ಅಂತಿಮ ಕಾರ್ಯವೆಂದರೆ ಹೊಸ ಬಗೆಯ ಐಕ್ಯಮತ್ಯವನ್ನು ರೂಪಿಸಿದ್ದು. ಆದರೆ ವಿಶ್ವ ಆತನ ವೇಗಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗದೇ, ಅದಕ್ಕೆ ಆತ ತನ್ನ ಜೀವವನ್ನೇ ಬೆಲೆ ತೆರಬೇಕಾಗಿ ಬಂತು.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಕಳೆದ ಕೆಲ ವಾರಗಳಿಂದ ನಡೆದ ನಾಟಕ ಎಲ್ಲರಿಗೂ ಪರಿಚಿತ. ಇದರ ಮೂಲಭೂತ ಅಂಶಗಳು ದೇಶದ ಇತರ ಕ್ಯಾಂಪಸ್ಸುಗಳಲ್ಲೂ ಪ್ರದರ್ಶನಗೊಳ್ಳುತ್ತಿವೆ . ಭಾರತದ ವಿಶ್ವವಿದ್ಯಾನಿಲಯಗಳು ವೇಮುಲಾನಂಥ ಯುವ ಕನಸುಗಾರರಿಗೆ ಗೂಡಾಗಿ ಉಳಿದಿಲ್ಲ. ವಾಸ್ತವವಾಗಿ ಸಮಾಜ ಅಪಾಯಕಾರಿ ಎಂದುಕೊಳ್ಳುವ ಎಲ್ಲ ಇತಿಮಿತಿಗಳನ್ನು ಮುರಿಯುವ, ಆ ನಿಟ್ಟಿನಲ್ಲಿ ದಿಟ್ಟವಾಗಿ ಕಾರ್ಯನಿರ್ವಹಿಸುವ ಧೈರ್ಯವನ್ನು ಯುವಜನತೆಯಲ್ಲಿ ತುಂಬಿ, ಅವರ ಬೆಂಬಲಕ್ಕೆ ನೀಡುವ ಕಾರ್ಯವನ್ನು ಮಾಡಬೇಕಾದ ಮಂದಿ ತಮ್ಮ ಕರ್ತವ್ಯವನ್ನು ಮರೆತು ಈಗ ಸ್ವಸಹಾಯದ, ತಮ್ಮ ಲಾಭವನ್ನಷ್ಟೇ ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮಾತ್ರ ಯೋಚಿಸುತ್ತಿದ್ದಾರೆ.

ಇಂದಿನ ರಾಜಕೀಯದ ಬಗೆಗೆ ಅಸಹನೆ ಹೊಂದಿರುವ ಹೊಸ ಆಕಾಂಕ್ಷೆಯ ವರ್ಗದಿಂದ ದೊಡ್ಡ ಧ್ವನಿ ಇದೀಗ ಕೇಳಿಬರುತ್ತಿದೆ. ವೇಮುಲಾ ಅಂಥ ಮಹತ್ವಾಕಾಂಕ್ಷೆಯ ಯುವಮನಸ್ಸು ಅಲ್ಲವೇ ? ಹಾಗಿದ್ದೂ, ಆತ ಒಬ್ಬಂಟಿ ಹಾಗೂ ಖಾಲಿ ಎಂಬ ಭಾವನೆ ಆತನಲ್ಲಿ ಏಕೆ ಬಂತು ?

ಕೃಪೆ: ಸ್ಕ್ರಾಲ್ ಡಾಟ್ . ಇನ್
ಸೌಜನ್ಯ: ವಾಭಾ ೧೯.೧.೨೦೧೬

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...