Tuesday, January 05, 2016

ನಾಲ್ಕು ಅನುವಾದಿತ ಮರಾಠಿ ಕವಿತೆಗಳುಅನು : ಡಾ. ಸರಜೂ ಕಾಟ್ಕರ್
1. 
ಮಹಾಕವಿಯೇ

ರಾಮರಾಜ್ಯದ ಒಣಸ್ತುತಿ ಹಾಡುವ
ಕವಿ ವಾಲ್ಮೀಕಿ
ಅದೆಂತಹ ಕವಿ ನೀನು?
ನೀನೊಬ್ಬ ರ್‍ಯಾಸ್ಕಲ್ ಸೂಳೆಮಗ
ಕ್ರೌಂಚ ಪಕ್ಷಿಯ ಆಕ್ರಂದನ ಕೇಳಿ
ಕರುಣೆ ಸೂಸಿದ ನಿನ್ನ ಹೃದಯ
ಯಾವ ವಸ್ತಿಯಲ್ಲಿ ನೀನು ಹುಟ್ಟಿದೆಯೋ
ಯಾವ ವಸ್ತಿಯಲ್ಲಿ ನೀನು ಬೆಳೆದೆಯೋ?
ಆ ನಿರ್ಲಕ್ಷಿತ ಜನರ ನೋವು
ವಿಷಾದದ ಮುಖಗಳು
ಹೃದಯ ಹಿಂಡುವ ದುಃಖ
ನೋಡಿ ನಿನಗೆ ಸ್ವಲ್ಪಾದರೂ ಕರುಣೆ ಹುಟ್ಟಲಿಲ್ಲವೆ?
ಮನುಷ್ಯತ್ವಕ್ಕಾಗಿ ಹಪಹಪಿಸಿದ ಅವರ
ಕೂಗು ನಿನಗೆ ಎಂದೂ
ಕೇಳಿಸಲಿಲ್ಲವೇ?
ನಿನ್ನ ರಕ್ತದಿಂದಲೇ ಹುಟ್ಟಿದ ಶಂಭೂಕನನ್ನು
ನೀನು ಶಾಸ್ತ್ರಗಳ ಆಧಾರದಿಂದ
ಕೊಂದುಹಾಕಿದೆ
ರಾಮರಾಜ್ಯದ ಸ್ತುತಿ ಹಾಡುವ ಮಹಾಕವಿಯೇ
ನಿನಗೆ ನಾನು ಮಹಾಕವಿ
ಎಂದು ಹೇಗೆ ಕರೆಯಲಿ?
ಈ ಅನ್ಯಾಯ ಅತ್ಯಾಚಾರ ದುಃಖ ನೋವು
ಗಳ ಬಗ್ಗೆ ಒಂದೇ ಒಂದಾದರೂ
ಸಾಲು ನೀನು ರಚಿಸಿದ್ದರೆ
ನಿನ್ನ ಹೆಸರನ್ನು ನಾನು ಹೃದಯದ
ಮೇಲೆ ಕೊರೆದುಕೊಳ್ಳುತ್ತಿದ್ದೆ
- ದಯಾ ಪವಾರ್
2. 
ನಾನು ನಿರಾಶನಾಗಿಲ್ಲ
 
ಆಕಾಶದಷ್ಟು ದೊಡ್ಡದಾದ ನೋವನ್ನು
ಅದೆಷ್ಟು ದಿನಗಳ ಕಾಲ ಮುಚ್ಚಿಡಲು ಸಾಧ್ಯ?
ಪ್ರಶ್ನೆಗಳ ಬಾಲ ದಿನದಿನಾ ಬೆಳೆಯುತ್ತಲೇ ಹೋಗುತ್ತದೆ.
ನಮ್ಮ ಬಿಡುಗಡೆಗೆ ಯಾರು ಬರಬಹುದು?
ಈ ರಾಜಕಾರಣಿಗಳು?
ಅವರು ಒಬೆರಾಯ್ ಶೆರಟನ್ ಹೋಟೆಲನ್ನು
ಉದ್ಘಾಟಿಸುತ್ತಿರಬಹುದು: ನಮ್ಮ ನೆನಪನ್ನು
ಅವರು ಖಂಡಿತ ತೆಗೆಯುತ್ತಾರೆ
ನಾಳಿನ ದಿನಪತ್ರಿಕೆಗಳ ಹೆಡ್ ಲೈನುಗಳಲ್ಲಿ ಮಿಂಚುತ್ತಾರೆ
ಇಲ್ಲಿಯ ಬುದ್ಧಿಜೀವಿಗಳು?
ಅವರಂತೂ ಒಬೆರಾಯ್ ಶೆರಟನ್
ನೀಡಿದ ಆತಿಥ್ಯದಲ್ಲಿ ಮುಳುಗಿ
ತಾವು ಆಡಬೇಕಾದ ಶಬ್ದಗಳಿಗಾಗಿ ತಡಕುತ್ತಿರಬಹುದು
ಇಲ್ಲಿಯ ವಿದ್ಯಾರ್ಥಿ ಸಮೂಹ?
ಪ್ಯಾಂಟಿನ ಬಾಟಮ್‌ಗಾಗಿ ಭೀಕರವಾಗಿ
ಜಗಳವಾಡಲಷ್ಟೇ ಯೋಗ್ಯರು ಈ ವಿದ್ಯಾರ್ಥಿಗಳು
ಇಲ್ಲಿಯ ಕಾರ್ಮಿಕ ಸಂಘಟನೆಗಳು?
ಅವರ ಹೋರಾಟ ಕೇವಲ ಬೋನಸ್‌ಗಾಗಿ
ಇಷ್ಟಿದ್ದರೂ ನಾನು ನಿರಾಶನಾಗಿಲ್ಲ
ದೂರದ ಮಂದ ಬೆಳಕಿನ ದೀಪ ನನಗೆ ಕಾಣಿಸುತ್ತಿದೆ
ಜನರ ಕಣ್ಣುಗಳಲ್ಲಿ ಆಶೆಯ ಮಿಣುಕು ಗೋಚರಿಸುತ್ತಿದೆ
ಖಂಡಿತ ನಾನು ನಿರಾಶನಾಗಿಲ್ಲ
ಆಗಸದಷ್ಟು ದೊಡ್ಡ ನೋವನ್ನು
ನಿಭಾಯಿಸುವುದು ಹೇಗೆಂಬ ಸತ್ಯ ನನಗೆ ಗೊತ್ತು
ನಾನು ನಿರಾಶನಾಗಿಲ್ಲ
ಉಜ್ವಲವಾದ ಒಂದು ಕನಸು
ನನ್ನ ಕಣ್ಣುಗಳ ಎದುರು
ತೂಗಾಡುತ್ತಿದೆ
ಅದು ನನಸಾಗುತ್ತದೆಂದೂ ಗೊತ್ತು ನನಗೆ
ಯಾಕೆಂದರೆ ನಾನೆಂದೂ ನಿರಾಶನಾಗಿಲ್ಲ.
 
 -ಅರ್ಜುನ್ ಡಾಂಗ್ಳೆ                            
 
3. 
ಶಬ್ದಗಳಿಗೆ
 
ನನ್ನ ಶಬ್ದಗಳಿಗೆ
ರೋಮಿಯೋ ಜ್ಯೂಲಿಯಟ್ಟರು ಬೇಡ
ನನ್ನ ಶಬ್ದಗಳಿಗೆ
ಸೂರ ಸಂಗೀತದ ಸ್ಪರ್ಶವೇ ಬೇಡ
ನನ್ನ ಶಬ್ದಗಳಿಗೆ
ಟಾಂಗಾದ ಕುದುರೆಯಾಗುವುದು ಬೇಡ
ನನ್ನ ಶಬ್ದಗಳಿಗೆ
ಕೇವಲ ಕವಿತೆಯಾಗುವುದು ಬೇಡ
ನನ್ನ ಶಬ್ದಗಳೇ:
ನೀವೆಂದೂ ಚಂದ್ರನ ಸಮೀಪವೂ ಸುಳಿದಾಡಬೇಡಿ
ಬಾಬಾಸಾಹೇಬರ ಮೂರ್ತಿಗೆ
ನತಮಸ್ತಕರಾಗಿ ಪ್ರತಿದಿನ ಯುದ್ಧಗೆಲ್ಲಲು ಹೊರಡಿ
 
-ಪಾಂಡೂ ಪಾಟೀಲ
 
 
4. 
ಯುದ್ಧ
 
ನನ್ನಜ್ಜಿ ಭಿಕ್ಷೆ ಬೇಡಿ ಬಂದ ನಂತರ
ಅವಳ ಜೋಳಿಗೆಯನ್ನು ನಾನು ಹುಡುಕಾಡಹತ್ತಿದೆ
ಕೈಗೆ ಬಿಸಿಬಿಸಿ ರೊಟ್ಟಿ ಸಿಕ್ಕಿತು
ಖಗೋಲ ವಿಜ್ಞಾನಿಗೆ ಹೊಸ
ಗ್ರಹ ಸಿಕ್ಕಷ್ಟು ಖುಷಿಯಿಂದ ನಾನು
‘ಇದನ್ಯಾರು ಕೊಟ್ಟರು? ಎಂದು ಕೇಳಿದೆ
‘ಮೇಲಿನ ಮನೆಯ ಪಾಟೀಲರು ಅಜ್ಜಿ ಹೇಳಿದಳು
ಕೈಗೆ ಚಂದ್ರ ಹಿಡಿದಂತೆ ರೊಟ್ಟಿ ಹಿಡಿದು ತಿನ್ನುವಾಗ
ಹಸಿ ಬಾಣಂತಿ ನನ್ನ ತಾಯಿ
ಆ ರೊಟ್ಟಿಯತ್ತ ಆಸೆ ಕಣ್ಣುಗಳಿಂದ ನೋಡುತ್ತಿದ್ದಳು
ಅಜ್ಜಿಯ ಕಾಲಿನೆಡೆಗೆ ನನ್ನ ಲಕ್ಷ್ಯ.
ಅವಳ ಕಾಲು ಸಂದುಗಳನ್ನು ನಾಯಿ ಹರಿದು ಹಾಕಿತ್ತು
ರಕ್ತದ ಕೋಡಿ ಕಾಲುಗಳಿಂದ ಜಿನುಗುತ್ತಿತ್ತು
ಈಗ ಅಜ್ಜಿ ನಾಯಿಯಂತೆ ಬೊಗಳಬಹುದೆಂದು
ನಾನು ಗಾಬರಿಯಾದೆ
ಹೊಟ್ಟೆಯಲ್ಲಿ ಹಸಿವಿನ ಬೆಂಕಿ
ಅಜ್ಜಿಯ ಗಾಯದಲ್ಲಿಂದ ನಗುವ
ಬುದ್ಧ ಗೋಚರಿಸಲಾರಂಭಿಸಿದ
ಗೋಚರಿಸಿದ ಬುದ್ಧ
ನಗಲಾರಂಭಿಸಿದ
-ಶರಣಕುಮಾರ ಲಿಂಬಾಳೆ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...