Tuesday, January 19, 2016

ರೋಹಿತ್ ವೇಮುಲ : ಜಾತಿ ಕ್ರೌರ್ಯದ ವಿರಾಟ ದರ್ಶನ



ಸಿ. ಎಸ್. ದ್ವಾರಕಾನಾಥ್


"... ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನೇ ಎಡವಿರಬಹುದು ಪ್ರೀತಿ, ನೋವು, ಜೀವನ, ಸಾವು ಎಲ್ಲದರಲ್ಲೂ ತಪ್ಪಿರಬಹುದು. ಆದರೆ ನಾನು ಹೊಸದೊಂದು ಜೀವನ ಆರಂಭಿಸುವುದಕ್ಕಾಗಿ ಹತಾಶೆಯಿಂದ ಮುನ್ನುಗುತ್ತಲೇ ಇದ್ದೆ. ಆದರೆ ಈ ಎಲ್ಲದರ ನಡುವೆ ಕೆಲವು ಜನರಿಗೆ ಜೀವನವೇ ಒಂದು ಶಾಪ. ನಾನು ಎಂದೂ ನನ್ನ ಬಾಲ್ಯದ ಒಂಟಿತನದಿಂದ ಹೊರಬರುವುದು ಸಾದ್ಯವಿಲ್ಲ.."

ರೋಹಿತ್ ವೇಮುಲ ಎಂಬ ಈ ಹುಡುಗ ಏನನ್ನು ಹೇಳಲು ಹೊರಟಿದ್ದಾನೆ..? ಸಾಲುಗಳ ನಡುವೆ ಓದಿದರೆ ಅರ್ಥವಾಗಬಹುದೆ..? ಈತನ 'ಡೆತ್ ನೋಟ್' ಇಂದು ಹೃದಯವಿರುವ ಪ್ರತಿಯೊಬ್ಬರನ್ನೂ ಕಲಕಿದೆ.. ಜಾತೀಯ ತಾರತಮ್ಯವನ್ನು ಅನುಭವಿಸಿದವರನ್ನು ನೋವಿನಿಂದ ಕಲಕಿದ್ದರೆ, ಜಾತಿವಂತರನ್ನು 'ಗಿಲ್ಟ್' ನಿಂದ ಕಲಕಿರಬಹುದೇನೋ..? ಗೊತ್ತಿಲ್ಲ..

ರೋಹಿತ್ ಅಧ್ಯಯನ ಮಾಡುತ್ತಾ ಜಾತಿಯ ಕ್ರೌರ್ಯಕ್ಕೆ ತುತ್ತಾದ ಅದೇ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಾಗೂ ರೋಹಿತನ ಗೆಳೆಯ ಕಿರಣ್ ಕುಮಾರ್ ಗೌಡ್ ಎಂಬ ದಾವಣಗೆರೆಯ ಹುಡುಗ ಇದೀಗ ತಾನೆ ಹೈದರಾಬಾದಿನಿಂದ ಪೋನ್ ಮಾಡಿದ್ದ. ಕಳೆದ ತಿಂಗಳು ಗುಲ್ಬರ್ಗ ವಿ.ವಿ. ಯಲ್ಲಿ ಭಾಷಣವೊಂದಕ್ಕೆ ನಾನು ಹೋಗಿದ್ದಾಗ ಈ ಕಿರಣ್, ಚಿಕ್ಕಮಗಳೂರಿನ ಅಜರ್, ಆಂಧ್ರದ ರಾಜಶೇಖರ್, ರಾಕೇಶ್ ರೈನಾ ಹಾಗೂ ಪ್ರಸಾದ್ ಎಂಬ ಹುಡುಗರು ಪರಿಚಿತವಾಗಿದ್ದರು. ಹೈದರಾಬಾದಿನಿಂದ ಬಂದಿದ್ದ ಇವರೆಲ್ಲ ನಮ್ಮ ಬಿ.ವಿ.ಎಸ್ ಹುಡುಗರೊಂದಿಗೆ ಯಾವುದೋ ಅಧ್ಯಯನದಲ್ಲಿ ಕೆಲಸಮಾಡುತಿದ್ದರು. ಇವರು 'ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್' ನಲ್ಲಿ ಕೆಲಸಮಾಡುತ್ತಾ, ASA ಹೋರಾಟಕ್ಕೆ ಬೆಂಬಲಿಸುತ್ತಾ ರೋಹಿತ್‌ನ ಸ್ನೇಹಿತರಾಗಿದ್ದರು.. ಈ ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಹುಡುಗರು ಒಟ್ಟೊಟ್ಟಾಗಿ ಅಂಬೇಡ್ಕರ್ ಸಿದ್ಧಾಂತದ ಮೇಲೆ ಚಳುವಳಿ ರೂಪಿಸುತ್ತಿರುವುದನ್ನು ಕಂಡು ರೋಮಾಂಚಿತನಾಗಿದ್ದೆ!
"..ASA ವೊಂದಿಗೆ ನಮ್ಮ ವಿ.ವಿ.ಯಲ್ಲಿ progressive student union, Dalit student union, progressive theatre group, OBC student union, SFI, ಪುಲೆ ಸ್ಟಡಿ ಸರ್ಕಲ್ ಮುಂತಾಗಿ ನಾವು 14 ಗುಂಪುಗಳು ಒಂದಾಗಿ ಕೆಲಸ ಮಾಡುತ್ತೇವೆ.. ಮೇಲ್ಜಾತಿ, ಮೇಲ್ವರ್ಗದ ABVP ಯನ್ನು ಹೊರತುಪಡಿಸಿ.." ಎಂದು ಅಂದು ಆ ಹುಡುಗರು ಹೇಳಿದ್ದರು.
ಇಂದು ನನಗೆ ಪೋನ್ ಮಾಡಿದ ಕಿರಣ್ ಧ್ವನಿಯಲ್ಲಿ ದುಖಃ ಮಡುಗಟ್ಟಿತ್ತು.. "..ಅಂಕಲ್, ನಮ್ಮ ವಿ.ವಿ. ಮತ್ತೊಬ್ಬ ರೋಹಿತ್‌ನನ್ನು ಸೃಷ್ಟಿಸಲು ಸಾಧ್ಯವಿಲ್ಲ.. ಅವನಂತಹ intellectual ಇಡೀ ವಿ.ವಿ.ಯಲ್ಲೇ ಇಲ್ಲ.. ಮಾರ್ಕ್ಸ್, ಅಂಬೇಡ್ಕರ್, ಪುಲೆಗಳನ್ನು ಅವನಷ್ಟು ಆಳವಾಗಿ ಅರಿಯಲು ಅವನ ವಯಸ್ಸಿನವರಿಗೆ ಸಾಧ್ಯವಿಲ್ಲ.. ನಮ್ಮ ಎಲ್ಲಾ ಸಂಘಟನೆಗಳಿಗೂ ಅವನೇ ಸಿದ್ಧಾಂತದ ಗಣಿ!! ಧರಣಿ ಕುಂತಾಗಲೂ ಓದುತಿದ್ದ..ಸುಮ್ಮನೆ ನಿಂತಾಗಲೂ ಓದುತ್ತಲೇ ನಿಲ್ಲುತಿದ್ದ, ಓದೇ ಅವನ ಉಸಿರು.. ಅಕಾಡೆಮಿಕ್ ಆಗಿ Msc(molecular Bio chemistry)ಮುಗಿಸಿದ್ದ, ಅವನ ಆಸಕ್ತಿಗಾಗಿ ಓಪನ್ ಯೂನಿವರ್ಸಿಟಿಯಲ್ಲಿ MA(sociology) ಮಾಡಿದ್ದ..! ಈಗ ಫೆಲೋಷಿಫ್ ಪಡೆದು ಎರಡನೇ ವರ್ಷದಲ್ಲಿ Phd ಮಾಡುತಿದ್ದ.. ತಂದೆಯಿಲ್ಲದ ರೋಹಿತ್‌ನನ್ನು ತಾಯಿ ಟೈಲರಿಂಗ್ ಮಾಡಿ ಓದಿಸುತಿದ್ದಳು.. ಗುಂಟೂರಿನ ಸಾವಿತ್ರಿಬಾಯಿ ಪುಲೆ ಕಾಲೋನಿಯಲ್ಲಿದ್ದ ಅಮ್ಮ, ತಮ್ಮನಿಗೆ ರೋಹಿತ್‌ನ ಫೆಲೋಷಿಪ್ ಹಣವೇ ಆದಾರವಾಗಿತ್ತು.. " ಎಂದು ಹೇಳುತಿದ್ದ ಕಿರಣ್ ಸಂಘಪರಿವಾರದ ಜಾತೀಯತೆ ನಮ್ಮ ರೋಹಿತ್‌ನನ್ನು ಬಲಿ ತೆಗೆದುಕೊಂಡಿತು ಅಂಕಲ್.." ಎಂದು ಗದ್ಗದಿತನಾದ.

ನಾನು ಮತ್ತೆ ಮತ್ತೆ ರೋಹಿತ್‌ನ 'ಡೆತ್ ನೋಟ್' ಓದಿದೆ.. ಆತ ಹೇಳಿದ್ದಕಿಂತಲೂ ಹೇಳದೇ ಉಳಿದಿದ್ದೇ ಹೆಚ್ಚು ಎನಿಸುತಿತ್ತು.. ಐದಾರು ವರ್ಷಗಳ ಹಿಂದೆ GKVK ವಿ.ವಿ.ಯಲ್ಲಿ ಇದೇ ಜಾತಿಹಿಂಸೆಗೆ ತುತ್ತಾದ ರಮೇಶ್ ನೆನಪಾದ, ಅದೇ ರೀತಿ ಸುಖದೇವ್ ಥೋರಟ್ ವರದಿಯಲ್ಲಿ ನಮೂದಿಸಿರುವ ಪ್ರತಿಷ್ಠಿತ IIM, IIT, AIIMS ಗಳಲ್ಲಿ ಜಾತಿ ನಿಂದನೆ, ಜಾತಿ ಕಿರುಕುಳಕ್ಕೆ ತುತ್ತಾದ 18 ಮಂದಿ ಅಸ್ಪೃಷ್ಯ ಆತ್ಮಗಳು ನೆನಪಾದವು...

"... ನಾನು ಹೋದ ನಂತರ ನನ್ನ ಮಿತ್ರರಿಗಾಗಲಿ, ಶತೃಗಳಿಗಾಗಲಿ ತೊಂದರೆ ಕೊಡಬೇಡಿ.." ಎಂಬ ಮಾತನ್ನು ರೋಹಿತ್‌ನ 'ಡೆತ್ ನೋಟ್' ನಲ್ಲಿ ಓದಿದಾಗ.. ಅಂದು ಬಾಬಾಸಾಹೇಬರು ಪೂನಾ ಒಪ್ಪಂದದ ನಂತರ ಪಟ್ಟಿರಬಹುದಾದ ಯಾತನೆಯ ಮೌನ ನೆನಪಾಯಿತು..

ರೋಹಿತ್ "ಜೈ ಭೀಮ್" ಎಂದು ಪತ್ರ ಮತ್ತು ತನ್ನ ಜೀವನ ಮುಗಿಸಿದ್ದು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಸಂಕೇತದಂತೆ ಕಾಣುತ್ತಿತ್ತು...


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...