Friday, January 08, 2016

ಡಾ.ಎಂ.ಎಂ.ಕಲ್ಬುರ್ಗಿ ಹಂತಕರನ್ನು ಬಂಧಿಸದ ಸರಕಾರದಿಂದ ಪ್ರಶಸ್ತಿ ಬೇಡ :ಅಕಾಡೆಮಿ ಅಧ್ಯಕ್ಷರಿಗೆ ದಯಾನಂದ ಪತ್ರ


 

ಇವರಿಗೆ..
ಅಧ್ಯಕ್ಷರು,
ಕರ್ನಾಟಕ ಸಾಹಿತ್ಯ ಅಕಾಡೆಮಿ
ಬೆಂಗಳೂರುವಿಷಯ: ವಿಚಾರವಾದಿ ಎಂ.ಎಂ. ಕಲ್ಬುರ್ಗಿಯವರನ್ನು ಕೊಂದ ಹಂತಕರನ್ನು ಬಂಧಿಸದ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನಿರಾಕರಣೆ.ಮಾನ್ಯರೆ,

ನಮ್ಮ ನಾಡಿನ ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿಯವರ ಘೋರ ಹತ್ಯೆಯ ನಂತರ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿವೆ. ಈಗಾಗಲೇ ಸಾಹಿತಿಗಳು, ಕಲಾವಿದರು, ಸಿನಿಮಾ ತಂತ್ರಜ್ಞರು, ವಿಜ್ಞಾನಿಗಳನೇಕರು ಅಸಹಿಷ್ಣುತೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಅನೇಕರು ತಮಗೆ ದೊರೆತ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ.

ಸಾಹಿತಿ- ಚಿಂತಕರು ಇಂಥ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಮೌನವಾಗಿರುವುದು ಆತ್ಮಘಾತುಕತನ. ಸಾಹಿತಿಗೆ ಬರಹ, ಕಲಾವಿದನಿಗೆ ಕಲೆ, ಸಿನಿಮಾ ತಂತ್ರಜ್ಞನಿಗೆ ಸಿನಿಮಾ ಅಭಿವ್ಯಕ್ತಿಯೇ ಮಾಧ್ಯಮವೆಂಬುದೇನೋ ನಿಜ. ಆದರೆ ಇದಕ್ಕೆ ಹೊರತಾಗಿಯೂ ನಾವೆಲ್ಲರೂ ದೇಶದ ತುಂಬೆಲ್ಲ ಅಸಹಿಷ್ಣುತೆ ದಿನೇದಿನೇ ಹೆಚ್ಚುತ್ತಿರುವಾಗ ಬೇರೆ ರೂಪದ ಪ್ರತಿಭಟನೆಗೆ ಇಳಿಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಸುತ್ತಮುತ್ತ ದಾದ್ರಿಯ ಘಟನೆಯಂಥದ್ದು ನಡೆಯುವಾಗ, ವಿಚಾರವಾದಿಗಳ ಸರಣಿ ಹತ್ಯೆ ನಡೆಯುವಾಗ, ಸಾಹಿತಿಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು ಹಲ್ಲೆ ಮಾಡಿ, ಬೆದರಿಸಿ ಅಂಕೆಯಲ್ಲಿಟ್ಟುಕೊಳ್ಳುವ ಅಮಾನುಷ ಘಟನೆಗಳು ನಡೆಯುವಾಗ ಸಾಹಿತಿಗಳು-ಕಲಾವಿದರು ಸುಮ್ಮನಿರುವುದಾದರೂ ಹೇಗೆ ಸಾಧ್ಯ?

ಅಸಹಿಷ್ಣುತೆಯ ಬಗ್ಗೆ ಮಾತನಾಡುವುದೇ ಅಪರಾಧ ಎನ್ನುವಂಥ`ಅಸಹಿಷ್ಣು’ ಭಾರತವನ್ನು ಸೃಷ್ಟಿಸುವ ಕಡೆಗೆ ಈ ದೇಶದ ಕಂದಾಚಾರಿಗಳು, ಮೂಲಭೂತವಾದಿಗಳು ಮುನ್ನಡೆಯುತ್ತಿದ್ದಾರೆ. ಹೀಗಾಗಿ ಈಗಾಗಲೇ ಪ್ರಶಸ್ತಿ ಹಿಂದಿರುಗಿಸಿದ ಸಾಹಿತಿಗಳ ಮೇಲೂ ಹೀನ ಸ್ವರೂಪದ ನಿಂದನೆಗಳು ವ್ಯಕ್ತವಾಗುತ್ತಿವೆ. ಇದೆಲ್ಲದರ ಜತೆಗೆ ನಮ್ಮ ಪ್ರಭುತ್ವವೂ ಸಹ ಇಂಥ ಅಸಹಿಷ್ಣುತೆಯ ಜನ್ಮದಾತರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುತ್ತಲೇ ಬಂದಿದೆ.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮದೇ ರಾಜ್ಯದ ವಿಚಾರವಾದಿಗಳಾದ ಎಂ.ಎಂ. ಕಲ್ಬುರ್ಗಿಯವರ ಅನ್ಯಾಯದ ಹತ್ಯೆ ನಡೆದು ಇಲ್ಲಿಗೆ ನಾಲ್ಕು ತಿಂಗಳುಗಳು ಸಂದವು. ಇದುವರೆಗು ಸಹ ಈ ಸಂಬಂಧ ನಡೆದ ತನಿಖೆಯಲ್ಲಿ ಕನಿಷ್ಠಮಟ್ಟದ ಪ್ರಗತಿಯೂ ಕಾಣಿಸುತ್ತಿಲ್ಲ.

ಒಬ್ಬ ಮನುಷ್ಯತ್ವದ ಪರವಿದ್ದ ಕಳಕಳಿಯ ಜೀವ ಕಲ್ಬುರ್ಗಿಯವರ ಹತ್ಯೆಗೆ ಇಡೀ ವಿಶ್ವವೇ ಬೆಚ್ಚಿಬಿದ್ದು ಪ್ರತಿಕ್ರಿಯಿಸಿದರೂ ತನಿಖೆಯಲ್ಲಿ ಪ್ರಮುಖ ಬೆಳವಣಿಗೆಯಾಗಲೀ, ಹಂತಕರ ಕುರಿತಾದ ಪ್ರಮುಖ ಸುಳಿವಾಗಲೀ ತನಿಖೆ ನಡೆಸುತ್ತಿರುವ ಸರ್ಕಾರದ ತನಿಖಾಸಂಸ್ಥೆಗೆ ಇನ್ನು ಸಿಕ್ಕಿಲ್ಲ ಎಂಬುದೇ ಆಘಾತಕಾರಿ ವಿಷಯ.

ಎಂಥದೇ ಹತ್ಯಾ ಪ್ರಕರಣವಾಗಿದ್ದರೂ ತ್ವರಿತವಾಗಿ ತನಿಖೆ ನಡೆಸುವ ಸರ್ಕಾರದ ತನಿಖಾಸಂಸ್ಥೆಗಳು ಕಲ್ಬುರ್ಗಿಯವರನ್ನು ಹತ್ಯೆಗೈದವರ ಬಗ್ಗೆ ಕನಿಷ್ಠಮಟ್ಟದ ಸುಳಿವನ್ನಾದರೂ  ಪತ್ತೆ ಮಾಡದೆ ನಿರ್ಲಕ್ಷಿಸುತ್ತಿರುವುದು ನೋವಿನ ಅತ್ಯಂತ ಯಾತನೆ ಹುಟ್ಟಿಸುವ ಸಂಗತಿ. ಜೀವಪರ ನಿಲುವಿನ ಮನೆಯ ಹಿರಿಯ ಜೀವವೊಂದು ಹಾಡಹಗಲಲ್ಲೇ ಕೊಲೆಯಾಗಿ ಬಿದ್ದು ಅದಕ್ಕೊಂದು ನ್ಯಾಯವೂ ದಕ್ಕದೆ ಮನುಷ್ಯಪರ ಜೀವಗಳ ಮನೆಯಲ್ಲಿ ಸೂತಕ ಹೆಪ್ಪುಗಟ್ಟಿರುವಾಗ, ವರ್ತಮಾನದಲ್ಲಿ ಕಂದಚಾರಗಳನ್ನು ಪ್ರಶ್ನಿಸುವರ ಮೇಲೆ ಕೊಲೆಯತ್ನಗಳು, ಜೀವಬೆದರಿಕೆಗಳು, ಹಲ್ಲೆಗಳು ಎಲ್ಲೆಡೆ ಜರುಗುತ್ತಿರುವಾಗ.. ಎಲ್ಲದಕ್ಕು ಮೌನದ ಮುದ್ರೆಯೊತ್ತಿ ಜಾಣಗುರುಡಿನೊಳಗೆ ಮೈಮರೆತ ಸರ್ಕಾರದ ಶಾಮಿಯಾನದ ಕೆಳಗೆ ಪ್ರಶಸ್ತಿ-ಸಂಭ್ರಮಗಳ ಪಾಯಸದೂಟ ಮಾಡಲು ನನಗೆ ಕಿಂಚಿತ್ತು ಒಪ್ಪಿಗೆಯಿಲ್ಲ.

ಈ ಎಲ್ಲ ಹಿನ್ನೆಲೆಯಲ್ಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ನನಗೆ ಕೊಡ ಮಾಡಿರುವ ಪ್ರಶಸ್ತಿಗಳನ್ನು ಪಡೆಯಲು ಅತೀವ ಮುಜುಗರ ಮತ್ತು ಹಿಂಜರಿಕೆಯಾಗುತ್ತಿದೆ. ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಪಡೆದು ಸಂಭ್ರಮಿಸುವ ಮನಸ್ಥಿತಿಯಲ್ಲಿ ನಾನಿಲ್ಲ ಎಂದು ತಮಗೆ ತಿಳಿಸಲು ಬಯಸುತ್ತೇವೆ. ಹೀಗಾಗಿ ನನ್ನ ರಸ್ತೆನಕ್ಷತ್ರ ಕೃತಿಗೆ ತಾವು ನನಗೆ ಕೊಡಮಾಡಿದ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಿಲ್ಲ, ಮತ್ತು ಕಲ್ಬುರ್ಗಿಯವರ ಸಾವಿಗೆ ನ್ಯಾಯ ಸಿಕ್ಕದ ಈ ವಿಷಘಳಿಗೆಯಲ್ಲಿ ಪ್ರಶಸ್ತಿ-ಫಲಕ ಪಡೆಯಲು ಒಪ್ಪಿಗೆಯೂ ಇಲ್ಲ ಎಂದು ವಿನಯಪೂರ್ವಕವಾಗಿ ತಮಗೆ ತಿಳಿಸಲು ಬಯಸುತ್ತೇವೆ. ಪ್ರಶಸ್ತಿಗಾಗಿ ನನ್ನನ್ನು ಗುರುತಿಸಿದ್ದಕ್ಕೆ ಸಾಹಿತ್ಯ ಅಕಾಡೆಮಿಗೆ ನನ್ನ ಕೃತಜ್ಞತೆಯಿದೆ.

ಆದರಪೂರ್ವಕವಾಗಿ
ದಯಾನಂದ ಟಿ.ಕೆ. ( ಬರಹಗಾರ)

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...