Tuesday, February 02, 2016

ಹಣ್ಣಾಗುವ ಮೊದಲೇ ಉದುರಬಹುದೇ ಎಲೆ?
ಡಾ. ಎಚ್. ಎಸ್. ಅನುಪಮಾಹಣ್ಣಾಗುವ ಮೊದಲೇ ಉದುರಬಹುದೇ ಎಲೆ?

ಹೈದರಾಬಾದಿನ ಸೆಂಟ್ರಲ್ ಯುನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಸಾವು ಕಾಡುತ್ತಿರುವ ಈ ಹೊತ್ತು ಥಟ್ಟನೆ ನೆನಪಿಗೆ ಬಂದದ್ದು ಗೌತಮ. ನಿಜ ಹೇಳಬೇಕೆಂದರೆ ಕೆಲವರ ಸಾವು ಅವರ ಬದುಕಿಗಿಂತ, ಬರಹಕ್ಕಿಂತ, ಅವರ ನಂಬಿಕೆಗಳಿಗಿಂತ ಹೆಚ್ಚು ಕಾಡುತ್ತದೆ. ಎನ್ಕೆ, ದೇವಯ್ಯ, ಗೌತಮ, ರೋಹಿತ್ ವೇಮುಲ.. ಆಶ್ಚರ್ಯವೆಂದರೆ ಕಾಡುವ ಸಾವುಗಳೆಲ್ಲ ಆತ್ಮಹತ್ಯೆಗಳೇ ಆಗಿವೆ. ಹೀಗೆ ತಂತಾವೇ ಕಳೆದುಹೋದವರಿಗಾಗಿ ಉಳಿದ ಲೋಕ ಕತ್ತಲಲ್ಲಿ ಕಣ್ಪಟ್ಟಿ ಕಟ್ಟಿಕೊಂಡು ಹುಡುಕುತ್ತ ಇರುವಂತೆ ಮಾಡಿರುವುದು ಸಾವು ತಲ್ಲಣಗೊಳಿಸುತ್ತಿರುವ ಕಾರಣವಿರಬಹುದೆ?

ಮೂವತ್ತೊಂದು ವರ್ಷಕ್ಕೆ ಇನ್ನು ಸಾಕು ಎಂದು ತನ್ನ ಬದುಕನ್ನು ಕೊನೆಗೊಳಿಸಿದ ಗೌತಮ ಎಂಬ ಚಾಮರಾಜನಗರದ ಹುಡುಗ ನನಗೆ ಪರಿಚಯವಾದದ್ದು ಒಂದೆರೆಡು ವರ್ಷಗಳ ಕೆಳಗೆ. ‘ಸಂವಾದ’ ಪತ್ರಿಕೆಯ ನನ್ನ ಅಂಕಣ ಬರಹವನ್ನು ತಪ್ಪದೆ ಓದುತ್ತ, ತನ್ನ ಗೆಳೆಯರಿಗೆ ಓದಿಸುತ್ತ, ಪ್ರತಿಕ್ರಿಯೆ ನೀಡುತ್ತ ಇದ್ದ ಗೌತಮ ತನ್ನ ವಾದ, ಚರ್ಚೆಗಳಿಂದಲೇ ಪರಿಚಿತನಾದ. ಆಗವನು ದೆಹಲಿಯಲ್ಲಿದ್ದು ಐಎಎಸ್‌ಗಾಗಿ ಓದುತ್ತಿದ್ದ. ಹಲವು ವಿಷಯ ಕುರಿತು ಚರ್ಚಿಸುತ್ತಿದ್ದ. ಅವನ ಮಾತುಗಳಲ್ಲಿ ತೀವ್ರ ಆಕ್ರೋಶ, ಸಿಟ್ಟು, ಅಧ್ಯಯನ ಇರುವ ಒಬ್ಬ ಭಾವೀ ಬರಹಗಾರ ನನಗೆ ಗೋಚರವಾಗಿದ್ದ. ಅವನ ಅಭಿಪ್ರಾಯಗಳನ್ನು ನಾನು ಒಪ್ಪುತ್ತಿದ್ದೆನೆಂದಲ್ಲ. ಗಾಂಧಿ ಕುರಿತ ಅವನ ಅತಿ ರೋಷವಾಗಲೀ, ತನ್ನ ಆದರ್ಶ ಮಾದರಿಗಳ ಕುರಿತ ಅತಿ ಆರಾಧನಾ ಭಾವವಾಗಲೀ ನನಗೆ ಅರ್ಥವಾಗುತ್ತಿರಲಿಲ್ಲ. ಅವು ನನ್ನ ಆಲೋಚನಾಕ್ರಮದ ವಿರುದ್ಧ ದಿಕ್ಕಿನಲ್ಲಿರುವಂತೆ ಭಾಸವಾಗುತ್ತಿದ್ದವು. ಇಂಥ ಹಲವು ಓದುಗ ಗೆಳೆಯಗೆಳತಿಯರಿದ್ದಾರೆ. ಅವರನ್ನು ಅವರ ಭಿನ್ನಮತಕ್ಕಾಗಿಯೇ ಗೌರವಿಸುತ್ತೇನೆ. ಭಿನ್ನಮತ ಹೇಳಬಲ್ಲ ಸೌಹಾರ್ದ ಸಮಕಾಲೀನರ ನಡುವೆ ಇರುವುದು ಆರೋಗ್ಯಕರ ಎಂದೇ ಭಾವಿಸುತ್ತೇನೆ.

ಗೌತಮ ಭೇಟಿಯಾದದ್ದು ಅವನ ಕೊನೆಯ ದಿನಗಳ ಹೊತ್ತಿಗೆ. ಅದೂ ತುಂಬ ಆಕಸ್ಮಿಕವಾಗಿ. ಒಮ್ಮೆ ಮಂಗಳೂರು ವಿಶ್ವವಿದ್ಯಾಲಯದ ಸೆಮಿನಾರೊಂದರಲ್ಲಿ ನನ್ನ ಮಾತು ಮುಗಿಸಿದ ನಂತರ ಚುರುಕಾದ, ದೀರ್ಘವಾದ ಸಂವಾದ ನಡೆಯಿತು. ವಿದ್ಯಾರ್ಥಿಗಳು ಚೀಟಿ ಮೇಲೆ ಚೀಟಿ ಕಳಿಸಿದ್ದರು. ಹುಡುಗನೊಬ್ಬ ಪುಂಖಾನುಪುಂಖ ಪ್ರಶ್ನೆಗಳ ಚೀಟಿ ಕಳಿಸಿದ್ದ. ಅವಕ್ಕೆಲ್ಲ ನಾನು ಸಾವಧಾನದಿಂದ ಉತ್ತರಿಸಿದ್ದೆ. ಸಂವಾದ ಮುಗಿದಿದ್ದೇ ನನ್ನೆದುರು ಪ್ರತ್ಯಕ್ಷನಾದ ಒಬ್ಬ ಹುಡುಗ ತಾನೇ ಗೌತಮನೆಂದು ಪರಿಚಯಿಸಿಕೊಂಡು, ನನ್ನ ಭಾಷಣ ಕೇಳಲು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದಾಗಿ ತಿಳಿಸಿದ! ನಂತರವೂ ಅವತ್ತಿನ ಸೆಮಿನಾರಿನ ವಿಷಯ ಕುರಿತೇ ಅವನ ಪ್ರಶ್ನೆಗಳಿದ್ದವು. ಜೊತೆಗೆ ತನ್ನ ಎಷ್ಟೋ ಅಭಿಪ್ರಾಯ, ಸಮಸ್ಯೆಗಳ ಚರ್ಚಿಸಿದ್ದ. ಆ ಭೇಟಿಯಲ್ಲಿ ತುಂಬ ದ್ವಂದ್ವ, ಹುಮ್ಮಸ್ಸು, ದುಡುಕುಗಳಿರುವ; ಜನರೆಡೆಗೆ ಅಸಾಮಾನ್ಯ ತುಡಿತವಿರುವ ಹುಡುಗ ಅವನೆನಿಸಿತ್ತು. ಆದರೆ ಅವನ ಅತೀವ ಚಡಪಡಿಕೆ ಕೊಂಚ ಕಸಿವಿಸಿಯನ್ನೂ ಹುಟ್ಟಿಸಿತ್ತು. ಈ ಹುಡುಗನ ಶಕ್ತಿಯನ್ನು ಸರಿಯಾಗಿ ಫೋಕಸ್ ಮಾಡಿಸುವ, ಸೂಕ್ತ ಮಾರ್ಗದರ್ಶನ ನೀಡುವ ‘ಗುರು’ ಒಬ್ಬರು ಸಿಕ್ಕಲ್ಲಿ ಅವನಿಗೆ ಉತ್ತಮ ಭವಿಷ್ಯವಿದೆಯೆಂದೂ ಅನಿಸಿತ್ತು. ಅವನಿಗೂ ನೆಚ್ಚಿನ ‘ಸಾರ್’ ಆಗಿದ್ದ ಬಸೂವಿನೊಡನೆ ಈ ವಿಷಯ ಪ್ರಸ್ತಾಪಿಸಿದ್ದೆ.

ಅವನ ಗೆಳೆಯರ ಬಳಗದ ಕೆಲವರಿಂದ ಗೌತಮನ ಕುರಿತು ಕೆಲ ವಿಚಾರ ತಿಳಿದಿದ್ದೆ. ಅದರಂತೆ ಊರೂರು ತಿರುಗುತ್ತ, ಅಲ್ಲಿಲ್ಲಿ ತಂಗುತ್ತ, ತನ್ನ ಸಮಕಾಲೀನ ಪೀಳಿಗೆಯವರನ್ನು ಸುದೀರ್ಘ ಮಾತುಕತೆಗೆಳೆದು ಸಂಘಟನೆಯ ಅವಶ್ಯಕತೆ ಬಗೆಗೆ ಹುಮ್ಮಸು ತುಂಬುತ್ತಿದ್ದ ಗೌತಮ ಬಹುಜನ ವಿದ್ಯಾರ್ಥಿ ಸಂಘಟನೆ ಕಟ್ಟಲು ಬಹಳ ಶ್ರಮ ಪಟ್ಟ ವ್ಯಕ್ತಿ. ಆತನಲ್ಲಿ ಭವಿಷ್ಯದ ಒಬ್ಬ ಭರವಸೆಯ ನಾಯಕನನ್ನು, ಸಂಘಟಕನನ್ನು, ಹೋರಾಟಗಾರನನ್ನು ಎಲ್ಲರೂ ಕಂಡಿದ್ದರು. ನಿರುದ್ಯೋಗ, ಬಡತನ, ಅವಮಾನಗಳಿಂದ ಬದುಕುವ ಭರವಸೆ ಕಳೆದುಕೊಂಡು ಹತಾಶರಾದ ಎಷ್ಟೋ ಹುಡುಗರ ಮನೆ, ಹಾಸ್ಟೆಲು ರೂಮಿಗೆ ಹೋಗಿ ಅವರೊಡನೆ ನಾಲ್ಕಾರು ದಿನ ಕಳೆದು ಜೀವನಮುಖಿಯಾಗುವಂತೆ ಅವರನ್ನು ಪರಿವರ್ತಿಸಿದ್ದನ್ನು ಆತನ ಗೆಳೆಯರು ನೆನೆಸಿಕೊಂಡಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕನಾಗಿ ನೌಕರಿಗೆ ಸೇರಿದ್ದ ಗೌತಮ ಆ ಕೆಲಸ ಬಿಟ್ಟು ಮುಂದೆ ಓದಿದ. ಓದುವಾಗಲೇ ಎಫ್‌ಡಿಎ, ಎಸ್ಸೈ ಕೆಲಸ ಸಿಕ್ಕರೂ ಹೋಗದೇ ಅವಕಾಶಗಳ ನಿರಾಕರಿಸಿದ. ಅದಕ್ಕೆ ಕಾರಣ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು. ಅದಕ್ಕಾಗಿ ಹೆಚ್ಚುಕಡಿಮೆ ಎರಡು ವರ್ಷ ದೆಹಲಿಯಲ್ಲೇ ಉಳಿದಿದ್ದ. ಅಂಬೇಡ್ಕರ್, ಫುಲೆ ಅವರನ್ನು ಬಹು ವಿವರವಾಗಿ ಓದಿಕೊಂಡಿದ್ದ. ಅವರ ಹೋರಾಟದ ದಾರಿಗಳ ಕುರಿತು, ಬೆಹೆನ್‌ಜಿ ಮಾಯಾವತಿ, ದಾದಾಸಾಹೇಬ್ ಕಾನ್ಶೀರಾಂ ಕುರಿತು ದೀರ್ಘವಾಗಿ, ಅಭಿಮಾನದಿಂದ ಮಾತನಾಡಬಲ್ಲವನಾಗಿದ್ದ. ಒಟ್ಟಾರೆ ಸಮೂಹದ ನಡುವೆಯೇ ಸಮೂಹದಲ್ಲೊಬ್ಬನಾಗಿ ಗುರುತಿಸಿಕೊಂಡು ಬದುಕುತ್ತಿದ್ದ ವ್ಯಕ್ತಿ ಗೌತಮ.

ಇಷ್ಟೆಲ್ಲ ‘ಇದ್ದ’ವ ಕೊನೆಗೆ ಅದು ಏಕೋ ತನ್ನ ಪರಿಚಿತರ ಕೈಯಲ್ಲಿ ಪುಟ್ಟ ಮೆಮೊರಿ ಕಾರ್ಡು ಉಳಿಸಿ ಒಂದು ಬೆಳಿಗ್ಗೆ ಯಾರನ್ನೂ ಕೇಳದೆ, ಯಾರಿಗೂ ಹೇಳದೇ ಏಕಮುಖವಾಗಿ ಉಸಿರು ನಿಲಿಸುವ ನಿರ್ಧಾರ ತೆಗೆದುಕೊಂಡ. ಬದುಕಿನೊಡನೆ ಭಿನ್ನಮತ ಇಟ್ಟುಕೊಳ್ಳುವುದು; ಸಮಾಜದೊಡನೆ ಭಿನ್ನಮತ ಹೊಂದುವುದು ಆರೋಗ್ಯಕರ ಮನಸಿನ ಲಕ್ಷಣ. ಅದು ಜೀವನಪ್ರೇಮದ ಸಂಕೇತವೂ ಹೌದು. ಅವನ್ನೆಲ್ಲ ಇಟ್ಟುಕೊಂಡೇ ಹೋರಾಟ ಕಟ್ಟಬೇಕು. ಇದೆಲ್ಲ ಅವನಿಗೆ ತಿಳಿದಿದ್ದೇ ಆಗಿತ್ತು. ಆದರೆ ತಾನು ತಿಳಿದಿದ್ದನ್ನು, ತಿಳಿಹೇಳಿದ್ದನ್ನು ಗೌತಮ ಮರೆತದ್ದು ಹೇಗೆ? ಏಕೆ? ಇದು ಎಲ್ಲರ ಕಾಡುವ ಪ್ರಶ್ನೆ.

ಆತ್ಮಹತ್ಯೆಗೆ ಖಿನ್ನತೆಯೇ ಕಾರಣ ಎಂಬ ವೈದ್ಯಕೀಯ ಪಠ್ಯದ ಒಂದು ಸಾಲು ಏನನ್ನೂ ವಿವರಿಸುವುದಿಲ್ಲ. ಒಂದು ಬದುಕಿಗೆ ಹೇಗೋ ಹಾಗೇ ಸಾವಿನ ಜೊತೆಗೂ ಪರಿಗಣಿಸಬೇಕಾದ ಸಂಗತಿಗಳು ಹಲವಿರುತ್ತವೆ. ಅದರಲ್ಲೂ ತಳಸಮುದಾಯಗಳ ವಿದ್ಯಾವಂತ ಹುಡುಗರು ಆತ್ಮಹತ್ಯೆಗೆ ಶರಣಾಗುವ ಅಪಾಯಕರ ಪ್ರವೃತ್ತಿ ಹೆಚ್ಚೆಚ್ಚು ಕಂಡುಬರುತ್ತಿರುವಾಗ ಕೊಂಚ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ.

ತಾನು ಅನುಭವಿಸುವ ನೋವು ತಾರತಮ್ಯಗಳನ್ನು ಗುರುತಿಸಲು ಅರಿತ ಕೂಡಲೇ ದಮನಿತ ಮನಸು ಕ್ಷೆಭೆಗೊಳ್ಳುತ್ತದೆ. ಶಿಕ್ಷಿತ-ಅಶಿಕ್ಷಿತ; ಬಡವ-ಸಿರಿವಂತ ಎನದೆ ಜಾತಿ ಅವಮಾನ ತಳಸಮುದಾಯಗಳನ್ನು ಕಾಡುತ್ತದೆ. ಅದಕ್ಕೆ ಕಾರಣ ಜಾತಿ ಕುರಿತು ಸಮಾಜಕ್ಕಿರುವ ಪೂರ್ವಗ್ರಹ. ಇದು ದಲಿತ ಮನಸಿನ ಗ್ರಹಿಕೆಗೆ ಬಂದಮೇಲೆ ತನಗೆ ಸಾಧ್ಯವಿರುವ ಬಗೆಗಳಲ್ಲಿ ಅದನ್ನು ಅಭಿವ್ಯಕ್ತಿಸಬಯಸುತ್ತದೆ. ಕೆಲವರು ಬರೆಯಬಹುದು. ಮತ್ತೆ ಕೆಲವರು ಧ್ವನಿಯೆತ್ತಿ ಮಾತಾಡಬಹುದು. ಮತ್ತೂ ಕೆಲವರು ತನ್ನಂತೆ ಅನುಭವಿಸುವವರ ಗುರುತಿಸಿ ಸಂಘಟನೆಯಲ್ಲಿ ತೊಡಗಿ ಹೋರಾಡಬಹುದು. ಅನುಭವವನ್ನು ಮೂಲದ್ರವ್ಯವಾಗಿಸಿ ಬರೆಯುವುದು, ಆಡುವುದು, ಸಂಘಟಿಸುವುದು ಅಪಾರ ಸ್ಟ್ರೆಸ್ ಅನ್ನು ಹುಟ್ಟು ಹಾಕುತ್ತದೆ. ತಕ್ಷಣಕ್ಕೆ ಸಿಗದ ಪ್ರತಿಫಲ ಹತಾಶೆಯನ್ನೂ ಹುಟ್ಟಿಸಿ ಯಾವುದೂ ಬದಲಾಗಲಾರದೇನೋ ಎಂಬ ಭಾವವನ್ನೂ ಆಗೀಗ ಮೂಡಿಸುತ್ತದೆ. ಆಗೆಲ್ಲ ಹೋರಾಟಗಾರನಿಗೆ ಕುಟುಂಬದ, ಗೆಳೆಯರ ಗುಂಪಿನ, ಹಿತೈಷಿಗಳ ಬೆಂಬಲ ಸಿಕ್ಕಿದರೆ ತಡೆಗಳ ದಾಟುವುದು ಸುಲಭ. ಆದರೆ ಎಲ್ಲರಿಗು ಅಷ್ಟು ಸಮಾಧಾನಚಿತ್ತವಾಗಲೀ, ಅವಕಾಶವಾಗಲೀ ಸಿಗದೆ ಹೋಗಬಹುದು. ಆಗ ತೀರಾ ಕ್ಷುಲ್ಲಕವೆಂದು ಉಳಿದವರಿಗನಿಸಬಹುದಾದ ವಿಷಯಗಳು, ಕೌಟುಂಬಿಕ ಚಕಮಕಿಗಳು, ಭಯಗಳು ಆತ್ಮಹತ್ಯೆಯ ತನಕವೂ ಕರೆದೊಯ್ದುಬಿಡಬಹುದು. ಗಾಜಿನಂತೆ ಎಲ್ಲವನ್ನು ಪ್ರತಿಫಲಿಸತೊಡಗಿದ ಅತಿಸೂಕ್ಷ್ಮ ಮನಸನ್ನು ಚೂರುಚೂರಾಗಿಸಲು ಬಂಡೆಗಲ್ಲು ಬೇಕಿಲ್ಲ; ಪುಟ್ಟ ಕಲ್ಲು ಬೀರಿದರೆ ಸಾಕು.

ವೇಗ ಈ ಕಾಲದ ಮುಖ್ಯ ಲಕ್ಷಣ. ಅದರಲ್ಲೂ ತರುಣ ಪೀಳಿಗೆ ವೇಗದ ಹಿಂದೇ ಇರುವವರು. ಆದರೆ ಬದಲಾವಣೆ ವೇಗದಲ್ಲಿ ಸಂಭವಿಸದು. ನೆಲ ಹಸನುಗೊಳಿಸಿ ಬೀಜ ಬಿತ್ತಿದ್ದೇ ಫಸಲು ತೆಗೆಯಲಾಗದು. ಎಲ್ಲಕ್ಕೂ ಒಂದು ಹದ ದಕ್ಕಿದಾಗಲಷ್ಟೆ ಮಾಗುವಿಕೆ ಸಾಧ್ಯ. ಆದರೆ ಮಾಗುವಿಕೆಗೂ ಒಂದಷ್ಟು ಸಮಯ ಬೇಕು. ಅಷ್ಟು ಸಮಯವನ್ನು ಯಾಕೆ ಈ ಹುಡುಗ ತನ್ನ ಬದುಕಿಗೆ ಕೊಡದೆ ಹೋದ? ಬದಲಾವಣೆಯ ಹಾದಿಯಲ್ಲಿ ಒಂದು ಹೆಜ್ಜೆಯಿಟ್ಟರೂ ಎದುರಾಗುವ ತೊಡಕುಗಳು ಹಲವಾರು. ಅವನ್ನೆಲ್ಲ ದಾಟಲು ಬೇಕಾದ ಚೈತನ್ಯವನ್ನು ತುಂಬಲು ಯಾವುದೂ ನೆರವಾಗಲಿಲ್ಲವೆ? ಸಮಾನತೆಯತ್ತ ತುಡಿಯುವ, ಅದಕಾಗಿ ಹೋರಾಡುವ ಮನಸುಗಳಿಗಿದು ಕಷ್ಟಕಾಲ. ಅಂಥವರಿಗೆ ಇದಷ್ಟೆ ಅಲ್ಲ, ಎಲ್ಲ ಕಾಲವೂ ಕಷ್ಟದ ಹಾದಿಯನ್ನೇ ಅವರೆದುರು ತೆರೆದಿಟ್ಟಿದೆ. ಫುಲೆಗಳಾಗಲೀ, ಅಂಬೇಡ್ಕರರಾಗಲೀ - ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನಲ್ಲಿ ಎದುರಿಸಿದ ತಲ್ಲಣಗಳು ಒಂದೆರೆಡಲ್ಲ. ಆದರೆ ಅವರಾರೂ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬರಲಿಲ್ಲವೆನ್ನುವುದು ಅವರ ಓದಿಕೊಂಡ ಗೌತಮನಿಗೆ ನೆನಪಾಗಲಿಲ್ಲವೆ?

ನೀನು ಮರಣಾಧೀನ ಅಲ್ಲದಿದ್ದರೆ ಮಾತ್ರ ಬೇರೆಯವರ ಮರಣದ ಕುರಿತು ದುಃಖಿಸು ಎನ್ನುತ್ತಾನೆ ಗಾಲಿಬ್. ಮರಣದ ಕುರಿತು ನಿಜವಾದ ದುಃಖಕ್ಕೆ ಕಾರಣ ಮರಣಹೊಂದಿದವರ ನೆಚ್ಚಿಕೊಂಡವರು ಎದುರಿಸಬೇಕಾಗುವ ಅತಂತ್ರ ಸ್ಥಿತಿ. ಹತ್ತುಹಲವಾರು ಯೋಜನೆಗಳನ್ನು, ಕಾರ್ಯಕ್ರಮಗಳನ್ನು, ಕ್ರಿಯಾಯೋಜನೆಗಳನ್ನು ಹಲವರ ಮನದಲ್ಲಿ ತುಂಬುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಇಲ್ಲವಾದನೆಂದರೆ ಅವನ ತಾಯ್ತಂದೆಯರಿಗೆ, ತಂಗಿ ರಾಜೇಶ್ವರಿಗೆ, ಗೆಳೆಯರ ಬಳಗದ ನಾಗರಾಜ್ ಮತ್ತಿತರರಿಗೆ ಹೇಗಾಗಿರಬೇಡ? ತಮ್ಮನ್ನಗಲಿದ ಜೀವವು ನಕ್ಷತ್ರವಾಗಿ, ದೈವವಾಗಿ, ಚೇತನವಾಗಿ ನಮ್ಮೊಡನಿರುವುದು ಎಂದೋ; ವರುಷಕ್ಕೊಮ್ಮೆ ಪಿತೃಪೂಜೆಯ ದಿನ ತಮ್ಮ ಬಳಿ ಬರುವುದು ಎಂದೋ ಜನಸಾಮಾನ್ಯರು ನಂಬಿಯಾರು. ಆದರೆ ಅಂಥ ನಂಬಿಕೆಯಿರದವರು ಆಪ್ತ ಜೀವಗಳು ಇಲ್ಲವಾದ ನಷ್ಟ ಭರಿಸುವುದು ಹೇಗೆ?

ಗೌತಮನ ಗೆಳೆಯರ ಬಳಗ ಆತ ಬರೆದ ಬರಹಗಳ ಒಗ್ಗೂಡಿಸಿ ಪ್ರಕಟಿಸುತ್ತಿರುವ ಈ ಹೊತ್ತಗೆಯು ಅವನಿಲ್ಲದ ನಷ್ಟ ಭರಿಸುವ ಒಂದು ಪ್ರಯತ್ನದಂತೆಯೇ ಕಾಣಿಸುತ್ತಿದೆ. ಈ ಪುಸ್ತಕದಲ್ಲಿ ವ್ಯಕ್ತಿಚಿತ್ರಗಳಿವೆ. ಐತಿಹಾಸಿಕ ಘಟನೆಗಳ ಕುರಿತ, ವ್ಯಕ್ತಿತ್ವಗಳ ಕುರಿತ ವಿಶ್ಲೇಷಣೆಯಿದೆ. ಇಲ್ಲಿನ ಬಹುಪಾಲು ಬರಹಗಳನ್ನು ಬರೆದಾಗ ಗೌತಮನ ವಯಸ್ಸು ೨೧-೨೨ರ ಆಸುಪಾಸು. ಅವನ ಕೆಲವು ವಾಕ್ಯಗಳು ಇಂತಿವೆ.

 *   ಬಾಬಾರ ವಿಮೋಚನಾ ರಥವನ್ನು ಆನೆಗಳಾಗಿ ಭೀಮ ವೇಗದಲ್ಲಿ ಎಳೆದು ಪ್ರಬುದ್ಧ ಭಾರತವನ್ನು ನಿರ್ಮಾಣ ಮಾಡೋಣ. (ಜನವರಿ ೨೦೦೪)

*    ಯಾವ ವ್ಯಕ್ತಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಾನೆ, ಭಾರತದ ಬಹುಜನರಿಗೆ ಅಂಟಿದ ಬಡತನ, ನಿರುದ್ಯೋಗಗಳಂತಹ ಭೀಕರ ಸಮಸ್ಯೆಗಳನ್ನು ಬೇರು ಸಮೇತ ಕಿತ್ತೊಗೆಯುತ್ತಾನೆ ಎಂಬ ಭರವಸೆ ನೀಡುತ್ತಾನೊ ಅವನನ್ನು ಆರಿಸಿ ದಿಲ್ಲಿಗೆ ಕಳುಹಿಸಬೇಕು. ಆತ ಆ ಕೆಲಸ ಮಾಡದಿದ್ದರೆ ಆತನನ್ನು ಇದೇ ’ಮತದಾನ’ದ ಹಕ್ಕಿನಿಂದ ಸೋಲಿಸಿ ಬೇರೆ ವ್ಯಕ್ತಿಯನ್ನು ಆರಿಸಬೇಕು.(ಮಾರ್ಚ್ ೨೦೦೪)

 *   ನಾವು ಇಂದು ನಮ್ಮ ಓಟುಗಳನ್ನು ಮಾರಿಕೊಳ್ಳುವುದರಿಂದಲೇ ನಮಗೆ ಬಡತನ, ಹಸಿವು, ಅನಕ್ಷರತೆ, ಅವಮಾನಗಳು ಕಾಡುತ್ತಿವೆ. ನಮ್ಮ ಶಾಸಕ ಮಂತ್ರಿಗಳು  ಶ್ರೀಮಂತರ ಪಾರ್ಟಿಗಳಲ್ಲಿ ಜೀತಗಾರರಾಗಿರುವುದರಿಂದಲೇ ನಾವು ಇಂದು ಶ್ರೀಮಂತರ ಹೊಲ-ಗದ್ದೆಗಳಲ್ಲಿ ಜೀತಗಾರರಾಗಿದ್ದೇವೆ. (ಏಪ್ರಿಲ್ ೨೦೦೪)

*    ಕನ್ನಡ ತಾಯಿಯ ಮಕ್ಕಳ ಪ್ರತಿಭೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದಲ್ಲವೇ? ವಿಜ್ಞಾನ ತಂತ್ರಜ್ಞಾನ ಮತ್ತು ವೈಜ್ಞಾನಿಕ ಯುಗದಲ್ಲಿ ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯ ಪೈಪೋಟಿ ನಡೆಸಿ, ರಾಜ್ಯದ, ರಾಷ್ಟ್ರದ ಪ್ರಗತಿಗಾಗಿ ದುಡಿಯಬೇಕಾದರೆ ಇಂದು ಅನ್ಯ ಭಾಷೆಗಳ ಅದರಲ್ಲೂ ಪ್ರಪಂಚದ ಸಂಪರ್ಕ ಭಾಷೆಯಾದ ಇಂಗ್ಲೀಷ್‌ನ ಅವಶ್ಯಕತೆ ಇದೆ. (ಆಗಸ್ಟ್-೨೦೦೫)

ಇಲ್ಲಿರುವ ಬರಹಗಳ ಹಿಂದಿರುವ ಅದಮ್ಯ ಉತ್ಸಾಹ, ಸಾತ್ವಿಕ ಸಿಟ್ಟು, ಆಕ್ರೋಶ, ತಿಳುವಳಿಕೆ ಬೆರಳಿಗೆ ತಾಗುವಂತಿವೆ. ಜೊತೆಜೊತೆಗೆ ಆ ವಯಸ್ಸಿಗೆ ಸಹಜವಾಗಿ ವಸ್ತುವಿಷಯಗಳನ್ನು ಬ್ಲ್ಯಾಕ್ ಅಂಡ್ ವೈಟ್‌ನಲ್ಲಿ ನೋಡುವ ಎಳಸುತನವೂ ಇದೆ. ಗೌತಮ ಇನ್ನೂ ಬರೆಯಬೇಕಾದ್ದು ಬಹಳಷ್ಟಿತ್ತು. ಮಾಗಬೇಕಾದ್ದೂ ಬಹಳವಿತ್ತು. ಅದಕ್ಕೆಲ್ಲ ಭಾಷಾ ಸಂಪತ್ತು, ಬುದ್ಧಿಮತ್ತೆ, ಬರೆವ ತುಡಿತ, ಹಂಚಿಕೊಳ್ಳುವ ತುರ್ತು ಎಲ್ಲವೂ ಇತ್ತು. ಆದರೆ ಹಣ್ಣಾಗುವ ಮೊದಲೇ ಎಲೆ ತೊಟ್ಟು ಕಳಚಿಕೊಂಡುಬಿಟ್ಟಿತು.

ಸಂಘಟನೆ ಎಂದರೆ ಚಲನೆ. ಚಳುವಳಿ ಎಂದರೆ ಚಲನೆ. ಆ ಚಲನೆಯ ಮಾರ್ಗ ಪೂರ್ವನಿರ್ಧರಿತವಲ್ಲ. ಪ್ರಶ್ನಿಸುತ್ತಾ, ಕೇಳುತ್ತಾ ಹೋದಹಾಗೆ ಅದು ತೆರೆದುಕೊಳ್ಳುತ್ತ ಹೋಗುತ್ತದೆ. ಹಾದಿ ಎಂದಮೇಲೆ ಏಳುಬೀಳು, ಸೋಲುಗೆಲುವು, ಆಸೆಆಮಿಷ ಎಲ್ಲ ಎದುರಾಗುತ್ತವೆ. ಅಂಥವನ್ನೆಲ್ಲ ಮೀರಿ ನಿಂತವರಷ್ಟೆ ಫುಲೆ, ಅಂಬೇಡ್ಕರ್, ಗಾಂಧಿ, ಭಗತನಂತೆ ಜನಸಮುದಾಯವನ್ನು ತಲುಪಲು ಸಾಧ್ಯವಾಗುತ್ತದೆ.

ಈ ಪುಸ್ತಕದಲ್ಲಿರುವ ಬರಹಗಳು ಬರಲಿರುವ ಪೀಳಿಗೆಗೆ ಬರೆವ ಸ್ಫೂರ್ತಿ ತುಂಬಲಿ; ಪ್ರಶ್ನಿಸುತ್ತಾ ನಡೆವ, ಸಂಘಟನೆಯೊಂದಿಗೆ ಹೆಜ್ಜೆ ಹಾಕುವ ಅವಶ್ಯಕತೆಯನ್ನು ಮನಗಾಣಿಸಲಿ; ಇಟ್ಟ ಹೆಜ್ಜೆ ಹಿಂತೆಗೆಯದೆ ಗೌತಮ ಮಾಡಬೇಕೆಂದುಕೊಂಡ ಕೆಲಸಗಳನ್ನು ಅವನ ಗೆಳೆಯರು ಮುಂದುವರೆಸಲಿ..

ಸಂಘಂ ಶರಣಂ ಗಚ್ಛಾಮಿ.

-    ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ.

2 comments:

  1. What is the title of the book about Gautham? Is that released? IF so where it is availbale. Am feeling ashamed of not knowing such kind of personality when he was alive...

    ReplyDelete
  2. ಬುದ್ಧ ತೋರಿಸಿದ ದಾರಿಯ ಹೆಗ್ಗಳಿಕೆಯಲ್ಲಿ ಇಹದ ಪ್ರೀತಿ; ನೋವು ಜೀವಜಗತ್ತಿನ ಅಸ್ತಿತ್ವದ ತಳಹದಿಯಾಗಿದೆ ಎಂಬ ಕಟುಸತ್ಯದ ಅರಿವು, ಮತ್ತು ಆಸ್ತಿ ಹಕ್ಕಿಲ್ಲದ, ತಾರತಮ್ಯವಿಲ್ಲದ ಸಾಮಾಜಿಕ ಬದುಕಿನ ಏರ್ಪಾಡು ಸೇರಿವೆ. ಆದರೆ ಅವನ್ನು ಸಾಕ್ಷಾತ್ಕರಿಸಲು ಬುದ್ಧನು ತೋರಿಸಿದ ಧ್ಯಾನಮಾರ್ಗ ಪ್ರಜ್ಞೆಯ ಒಳಸರಿಯುವಿಕೆಯ ಹಿಮ್ಮುಖ ಚಲನೆಯದ್ದು. ಬದುಕು ಸ್ವಾಭಾವಿಕವಾಗಿ ಹೊರಕ್ಕೆ ಹರಿಯುವ ಮುಮ್ಮುಖ ಚಲನೆಯದ್ದು. ಸಾಮಾಜಿಕ ಮತ್ತು ರಾಜಕೀಯ ಪರ್ಯಾಯವಾಗಿ ಬುದ್ಧನನ್ನು ಅನುಸರಿಸುವವರೆಲ್ಲಾ ಅನಿವಾರ್ಯವಾಗಿ ಪರಸ್ಪರ ಸ್ವವಿರೋಧಿಯಾದ ಈ ನಿಲುವನ್ನು ತಾಳುವುದು ಅನಿವಾರ್ಯವಾದ್ದರಿಂದ ಸೋಲು, ಸ್ವವಿನಾಶ ಕಟ್ಟಿಟ್ಟ ಬುತ್ತಿ.
    ಅಸ್ತಿತ್ವದ ಹೋರಾಟದ ಹೊರ ಹರಿವು ಮತ್ತು ಪ್ರಜ್ಞೆಯ ಒಳಸರಿಯುವಿಕೆ ಒಟ್ಟಿಗೆ ಇರಲಾರವು. ಅವನ್ನು ಹೊಂದಿಸಲು ಮಾಡುವ ವ್ಯರ್ಥ ಸರ್ಕಸ್ಸನ್ನು ಎಲ್ಲ ಬಗೆಯ ಸಾಧು-ಸಂತ ಮನಸ್ಥಿತಿಯ ಹೋರಾಟಗಾರರಲ್ಲೂ ಕಾಣಬಹುದು.
    ರೋಹಿತ್ ವೇಮುಲ ಮತ್ತು ಕನ್ಹಯ್ಯ ಕುಮಾರರ ಹೋರಾಟಗಳ ಹಿಂದಿನ ತಾತ್ವಿಕ ನೆಲೆಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...