Wednesday, February 10, 2016

ವಚನಗಳಲ್ಲಿ ಜಾಗತೀಕರಣಕ್ಕೆ ಉತ್ತರ

-ರಂಜಾನ್ ದರ್ಗಾ

 
(ಜೀವಸಂಕುಲಕ್ಕೆ ಮತ್ತು ಭೂಮಿಗೆ ಸಹಕಾರಿಯಾಗುವಂಥ ಕಾಯಕ; ಕಾಯಕದಿಂದ ಬಂದುದನ್ನು ದೇವರ ಪ್ರಸಾದ ಎಂದು ಸ್ವೀಕರಿಸುವ ಮನೋಭಾವ ಮತ್ತು ಬಂದುದರಲ್ಲಿ ದಾಸೋಹ ಭಾವದಿಂದ ಹಂಚಿ ತಿನ್ನುವ ಸಾಮಾಜಿಕ ಪ್ರಜ್ಞೆಯಿಂದ ೧೨ನೇ ಶತಮಾನದ ಶರಣರು ಬದುಕುತ್ತ ನವಸಮಾಜದ ನಿರ್ಮಾಪಕರಾದರು. ಆದರೆ ಇಂದು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಯಿಂದಾಗಿ ನಮ್ಮ ನೆಲ ಜಲ ಸಂಪನ್ಮೂಲಗಳು ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುತ್ತಿವೆ.  ಉದಾರೀಕರಣವೆಂದರೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕಡಿಮೆ ದರದಲ್ಲಿ ಭೂಮಿ, ವಿದ್ಯುತ್ ಮತ್ತು ನೀರಿನ ಸೌಲಭ್ಯ ಒದಗಿಸುವುದು. ಖಾಸಗೀಕರಣವೆಂದರೆ ಸರ್ಕಾರಿ ಸ್ವಾಮ್ಯದ (ಪಬ್ಲಿಕ್ ಸೆಕ್ಟರ್) ಉದ್ದಿಮೆಗಳನ್ನು ಕಡಿಮೆ ಮಾಡುತ್ತ ಖಾಸಗೀ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡುವುದು. ಜಾಗತೀಕರಣವೆಂದರೆ ಜಗತ್ತಿನ ರಾಷ್ಟ್ರಗಳ ಮಧ್ಯೆ ಉತ್ಪಾದನೆ ಮತ್ತು ವಹಿವಾಟಿನ ಸಂಬಂಧವನ್ನು ಉದಾರೀಕರಣ ಮತ್ತು ಖಾಸಗೀಕರಣದ ಆಧಾರದ ಮೇಲೆ ಕುದುರಿಸುವುದು. ಇಂಥ ವ್ಯವಸ್ಥೆಯಿಂದಾಗಿ ಬಡದೇಶಗಳ ಮಾನವ ಸಂಪನ್ಮೂಲಗಳಿಂದಲೇ ಅವುಗಳ ನೈಸರ್ಗಿಕ ಸಂಪನ್ಮೂಲಗಳನ್ನು ಸೂರೆಗೊಳ್ಳುವ ಕ್ರಿಯೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಲ್ಲೀನವಾಗಿವೆ. ನಾವು ಮತ್ತು ಇಡೀ ಜಗತ್ತು ಈ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಶರಣರ ಬದುಕಿನ ಸೂತ್ರಗಳ ಬಗ್ಗೆ ಮರುಚಿಂತನೆ ಮಾಡುವುದು ಅವಶ್ಯವಾಗಿದೆ. ಪುರಾತನ ಕಾಲದಿಂದಲೂ ಇರುವ ಪಪಾಯಿ ಗಿಡದ ಎಲೆಗಳ ರಸದಿಂದ ಹೊಸಾದಾಗಿ ಕಂಡುಬಂದ ಡೇಂಗೂ ರೋಗದ ಜ್ವರಪೀಡಿತರನ್ನು ರಕ್ಷಿಸುವಂತೆ ಶರಣರ ವಚನಗಳ ಮೂಲಕ ಜಾಗತೀಕರಣದ ಸಮಸ್ಯೆಗಳನ್ನು ನಿವಾರಿಸಬಹುದು. ವಚನಗಳು ಸರಳ ಸಹಜ ಬದುಕಿನ ಪಾಠ ಹೇಳುತ್ತವೆ. ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆಯುತ್ತ ನಮ್ಮ ದೇಶದ ಜನರ ಮತ್ತು ಸಂಪನ್ಮೂಲಗಳ ಸಂರಕ್ಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ೨೦೧೫ನೇ ಡಿಸೆಂಬರ್ ೧೮ ಮತ್ತು ೧೯ರಂದು ಏರ್ಪಡಿಸಿದ್ದ ’ಸಾಹಿತ್ಯ, ಸಾಹಿತಿ ಮತ್ತು ವರ್ತಮಾನ ವಿಚಾರಸಂಕಿರಣ’ದಲ್ಲಿ ’ಜಾಗತೀಕರಣದ ಸವಾಲುಗಳು’ ಕುರಿತ ಎರಡನೇ ದಿನದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾಡಿದ ಭಾಷಣವಿದು.)

  ಸಾಹಿತ್ಯ ಹಿತಕಾರಿಯಾಗಿದ್ದು ಕಾವ್ಯನ್ಯಾಯ ಒದಗಿಸಲು ಇರುವಂಥದ್ದು. ಅಗೋಚರವಾದದ್ದನ್ನು ಕಾಣುವಂಥ ಕ್ರಾಂತದೃಷ್ಟಿ ಸಾಹಿತಿಯಾದವನಿಗೆ ಇರಲೇಬೇಕು. ಅದಿಲ್ಲದೆ ಆತ ಸೃಜನಶೀಲ ಸಾಹಿತಿ ಆಗಲಾರ. ಮಾನವರು ಸೇರಿದಂತೆ ಇಡೀ ಜೀವಸಂಕುಲದಿಂದ ಕೂಡಿದ ನಿಸರ್ಗದ ಬಗ್ಗೆ ಕಾಳಜಿ ಇರುವ ಸಾಹಿತಿ ಮಾತ್ರ ಇಂಥ ಕ್ರಾಂತದೃಷ್ಟಿಯನ್ನು ಹೊಂದಲು ಸಾಧ್ಯ. ಕ್ರಾಂತದರ್ಶಿಯಾದ ಸಾಹಿತಿ ತನ್ನ ಜನಾಂಗ, ದೇಶ ಮತ್ತು ಕಾಲವನ್ನು ಮೀರಿ ಚಿಂತಿಸಬಲ್ಲವನಾಗಿರುತ್ತಾನೆ.
 ಮಾನವ ಜನಾಂಗದ ಸಾಂಸ್ಕೃತಿಕ ಪರಂಪರೆಯನ್ನು ತನ್ನ ಅನುಭವಗಳ ಮೂಲಕ ಸಮೃದ್ಧಗೊಳಿಸುತ್ತಲೇ ತನ್ನ ಕಾಲದ ಬದುಕಿನಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳ ಬಗ್ಗೆ ಜಾಗೃತವಾಗಿರುತ್ತಾನೆ. ಇಂಥ ಅಹಿತಕರ ಬೆಳವಣಿಗೆಗಳು ಮುಂದಿನ ಜನಾಂಗಕ್ಕೆ ಎಂಥ ಅನಾಹುತವನ್ನು ತಂದೊಡ್ಡಬಲ್ಲವು ಎಂಬುದರ ಬಗ್ಗೆ ಚಿಂತಿಸುತ್ತಾನೆ ಆ ಮೂಲಕ ಕ್ರಾಂತದೃಷ್ಟಿ ಪಡೆಯುತ್ತಾನೆ.

 ಇಂದು ಬಹಳ ಹೀನಾಯವಾದ ಪರಿಸ್ಥಿತಿಯ ಕಡೆಗೆ ನಾಂದಿ ಹಾಡುವ ಕಾಲಮಾನದಲ್ಲಿ ನಾವಿದ್ದೇವೆ. ಎಲ್ಲ ರಾಜಕೀಯ ಸಿದ್ಧಾಂತಗಳು, ಎಲ್ಲ ಧರ್ಮಗಳು ಮತ್ತು ಎಲ್ಲ ಜೀವನವಿಧಾನಗಳು ಜಾಗತೀಕರಣದ ಮುಂದೆ ದುರ್ಬಲವಾಗಿ ಕಾಣುವ ಸ್ಥಿತಿಯನ್ನು ತಲಪುತ್ತಿವೆ. ವಸ್ತುಮೋಹಿಯಾಗುತ್ತ ಮೋಸ, ದಬ್ಬಾಳಿಕೆ ಮತ್ತು ಹಿಂಸೆಯಿಂದ ಮಾತ್ರ ಐಷಾರಾಮಿಯಾಗಿ ಬದುಕಲು ಸಾಧ್ಯ ಎಂಬ ಸಿದ್ಧಾಂತವೊಂದು ರೂಪುಗೊಳ್ಳುತ್ತಿದೆ. ಇವೆಲ್ಲ ಆಯಾ ಧರ್ಮಗಳನ್ನು ಮತ್ತು ಸಿದ್ಧಾಂತಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸುವುದರ ಮೂಲಕವೇ ನಡೆಯುತ್ತಿವೆ.

 ಇಂಥ ಕಲುಷಿತ ವಾತಾವರಣದಲ್ಲಿ ಜಾಗತೀಕರಣದ ಗಾಳಿ ಬೀಸುತ್ತಿದ್ದು, ಜೀವನಮೌಲ್ಯಗಳು ಬಹುಬೇಗನೆ ಮಾರುಕಟ್ಟೆ ಮೌಲ್ಯಗಳಾಗಿ ಪರಿವರ್ತನೆಗೊಳ್ಳುತ್ತಿವೆ. ನಾವು ತಿನ್ನುವ ವಸ್ತು, ಧರಿಸುವ ಬಟ್ಟೆ, ಬಳಸುವ ವಸ್ತುಗಳು ಮತ್ತು ಇರುವ ಸ್ಥಳ ಹೀಗೆ ಎಲ್ಲವೂ ಥಳುಕುಬಳುಕಿನಿಂದ ಕೂಡಿರಬೇಕು ಎಂಬುದರ ಪಾಠ ಕಲಿಸುತ್ತ, ಕೊಳ್ಳುಬಾಕ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಹಬ್ಬಿಸುವುದೇ ಜಾಗತೀಕರಣ ಎಂಬುದು ನಮಗೆ ಅರ್ಥವಾಗಬೇಕಾದರೆ ನಾವು ಅದರ ನಶೆಯಿಂದ ಹೊರಬರಬೇಕಾಗುತ್ತದೆ.
 ’ಆಸೆ ಎಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ’ ಎಂದು ಬಸವಣ್ಣನವರ ಸಮಕಾಲೀನ ಶರಣೆ ಆಯ್ದಕ್ಕಿ ಲಕ್ಕಮ್ಮ ಪ್ರಶ್ನಿಸಿದ್ದಾಳೆ. ಸಾಮ್ರಾಜ್ಯಶಾಹಿಗಳ ರಾಜಕೀಯ ಆಶ್ರಯದೊಂದಿಗೆ ಜಾಗತೀಕರಣದ ರೂವಾರಿಗಳಾಗಿರುವ ಬಹುರಾಷ್ಟ್ರೀಯ ಕಂಪೆನಿಗಳ ಮಾಲೀಕರೇ ಈ ಕಾಲದ ಅರಸರು. ಅವರ ಆಸೆ ಎಷ್ಟಿದೆ ಎಂದರೆ, ಅವರು ತಮ್ಮ ಲಾಭಕ್ಕಾಗಿ ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಬಂಡವಾಳದ ಹಿಡಿತಕ್ಕೆ ತಂದು ಜಗತ್ತನ್ನು ಸರ್ವನಾಶ ಮಾಡಲೂ ಸಿದ್ಧರಿದ್ದಾರೆ!

 ಶೋಷಣೆಯೊಂದೇ ಗುರಿಯಾಗಿರುವಾಗ ಜನರನ್ನು ಗ್ರಾಹಕರನ್ನಾಗಿ ಪರಿವರ್ತಿಸುವುದು ಜಾಗತೀಕರಣ ವ್ಯವಸ್ಥೆಗೆ ಅನಿವಾರ್ಯವಾಗುತ್ತದೆ. ಇಂಥ ವಾತಾವರಣದಲ್ಲಿ ಅರ್ಜುನನಿಗೆ ಗುಬ್ಬಚ್ಚಿಯ ಕತ್ತು ಮಾತ್ರ ಕಾಣುವ ಹಾಗೆ ಇವರಿಗೆ ಗ್ರಾಹಕರು ಮಾತ್ರ ಕಾಣತೊಡಗುತ್ತಾರೆ. ಅದೇರೀತಿ ಗ್ರಾಹಕರಿಗೆ ಇವರು ಉತ್ಪಾದಿಸುವ ವಸ್ತುಗಳು ಮಾತ್ರ ಕಾಣತೊಡಗುತ್ತವೆ. ಜಾಗತೀಕರಣ ವ್ಯವಸ್ಥೆ ಇಷ್ಟಕ್ಕೇ ತೃಪ್ತಿಗೊಳ್ಳುವುದಿಲ್ಲ. ಗ್ರಾಹಕ ಮೋಹಗೊಂಡು ವಸ್ತುಗಳನ್ನು ಬಳಸುತ್ತಿರುವಾಗಲೇ ಅದಕ್ಕೂ ಹೆಚ್ಚು ಆಕರ್ಷಕವಾದ ವಸ್ತುಗಳನ್ನು ಅದು  ತಯಾರಿಸುತ್ತದೆ. ಇರುವುದನ್ನು ಬಿಟ್ಟು ಹೊಸದಾಗಿ ಬರುವುದರ ಕಡೆಗೆ ಗ್ರಾಹಕ ಸದಾ ಗಮನ ಹರಿಸುವಂತೆ ಜಾಹೀರಾತುಗಳ ಕಸರತ್ತಿನ ಮೂಲಕ ಯಶಸ್ಸನ್ನು ಸಾಧಿಸುತ್ತದೆ. ಹೀಗೆ ಮಾನವರು ’ಬ್ರ್ಯಾಂಡ್’ ಹೆಸರಿನಲ್ಲಿ ಜಾಹೀರಾತುಗಳ ಗುಲಾಮರಾಗುವ ಮೂಲಕ ಗ್ರಾಹಕರಾಗಿ ಪರಿವರ್ತನೆ ಹೊಂದುತ್ತ ಸಾಗುತ್ತಾರೆ.

 ಈ ಜಾಹೀರಾತುಗಳು ಗ್ರಾಹಕರನ್ನು ಎಷ್ಟೊಂದು ಆಕರ್ಷಣೆಗೆ ಒಳಪಡಿಸುತ್ತವೆ ಎಂಬುದು ಗಾಬರಿ ಹುಟ್ಟಿಸುವ ವಿಚಾರ. ಗ್ರಾಹಕರು ಜಾಹೀರಾತಿನ ಪ್ರಕಾರ ತಮ್ಮ ಮನೆಗಳಿಗೆ ಬಳಿದ ಬಣ್ಣ ತೆಗೆದು ಹೊಸ ಬಣ್ಣ ಬಳಿಯಲು ಪ್ರಾರಂಭಿಸುತ್ತಾರೆ. ತಂದೆಯ ಕಾಲದ ಒಳ್ಳೆಯ ಗಟ್ಟಿಮುಟ್ಟಾದ ಸೋಫಾಸೆಟ್ಟುಗಳನ್ನು ಬದಲಾಯಿಸುತ್ತಾರೆ. ಟಿ.ವಿ., ವಾಷಿಂಗ್ ಮಷಿನ್, ರೆಫ್ರಿಜರೇಟರ್, ಮೊಬೈಲ್, ವಾಚು, ಬನಿಯನ್, ನಿಕರ್ ಹೀಗೆ ಎಲ್ಲವನ್ನೂ ಬದಲಿಸುತ್ತ ಆಧುನಿಕವಾಗುವ ಹುಚ್ಚು ಹಚ್ಚಿಕೊಳ್ಳುತ್ತಾರೆ.

 ಇಂಥ ಸ್ಥಿತಿಯಲ್ಲಿ ಸಾಹಿತ್ಯದ ಸೂಕ್ಷ್ಮತೆಯನ್ನು ಅರಿಯಲು ಅವರಿಗೆಲ್ಲಿ ಸಮಯವಿದೆ? ಅದೇನೇ ಇದ್ದರೂ ಈ ವಸ್ತುಮೋಹಕ್ಕೆ ಒಳಗಾಗದವರಲ್ಲಿ ಮತ್ತು ವಸ್ತುಮೋಹಕ್ಕೆ ಒಳಗಾಗುವಂಥ ಆರ್ಥಿಕ ಪರಿಸ್ಥಿತಿ ಇಲ್ಲದವರಲ್ಲಿ ಸಾಹಿತ್ಯ ಆಸಕ್ತಿಯುಳ್ಳವರು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಾರೆ. ಅವರು ಸಹೃದಯರಾಗಿಯೋ ಸಾಹಿತ್ಯ ಕೃಷಿಕರಾಗಿಯೋ ಇರುತ್ತಾರೆ. ಅವರೆಲ್ಲರನ್ನು ಒಂದಾಗಿ ನೋಡಿದರೂ ಅವರ ಒಟ್ಟು ಸಂಖ್ಯೆ ’ಸಾರಸ್ವತಲೋಕದ ಅಲ್ಪಸಂಖ್ಯಾತರು’ ಎಂಬಂತೆ ಇರುತ್ತದೆ. ಹೀಗೆ ಜಾಗತೀಕರಣವು, ಒಳನೋಟಗಳಿಂದ ಕೂಡಿದ ವಿಶ್ವಸಾಹಿತ್ಯಕ್ಕೆ ಮಾರಕವಾಗಿದೆ. ಅದಕ್ಕೆ ಪರ್ಯಾಯವಾಗಿ ಅದು ಕಾಮಪ್ರಚೋದಕ, ಹಿಂಸಾಪ್ರಚೋದಕ ಅಥವಾ ಇತರೆ ಲಘು ಸಾಹಿತ್ಯವನ್ನು ಬಹುಪ್ರಕಾರವಾಗಿ ಮತ್ತು ಅತ್ಯಾಕರ್ಷಕವಾಗಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ಯದ ಜೊತೆಗೇ ಕಾರ್ಪೊರೇಟ್ ಶ್ರೀ ಶ್ರೀಗಳನ್ನು ಬೆಳೆಸಿ ಅವರ ಭ್ರಮಾತ್ಮಕ ಚಿಂತನೆಗಳನ್ನು ಕೂಡ ತನ್ನ ಬೆಳವಣಿಗೆಗೆ ಬಳಸಿಕೊಳ್ಳುತ್ತದೆ. ಹೀಗೆ ಜಾಗತೀಕರಣವಾದಿ ಲಾಭಕೋರರ ’ಬದುಕುವ ಕಲೆ’ ವೈವಿಧ್ಯದಿಂದ ಕೂಡಿದೆ.

 ಜಾಗತೀಕರಣವಾದಿಗಳಲ್ಲೂ ಸಂಗೀತವಿದೆ. ಆದರೆ ಅದರ ’ರಾಗ’ಗಳೇ ಬೇರೆಯಾಗಿವೆ. ಅವರ ಚಿತ್ರಕಲೆಯ ’ಗೆರೆ’ಗಳೇ ಬೇರೆಯಾಗಿವೆ. ಅವರ ಆಹಾರದ ’ರುಚಿ’ಯೆ ಬೇರೆಯಾಗಿದೆ. ಅವರ ಉಡುಪುಗಳ ಶೈಲಿಯೇ ಬೇರೆಯಾಗಿದೆ. ಹೀಗೆ ಎಲ್ಲವನ್ನೂ ಬೇರೆ ರೀತಿಯಲ್ಲಿ ಉತ್ಪಾದಿಸುತ್ತ ಗ್ರಾಹಕರ ಮನಸ್ಸನ್ನು ಸೆಳೆಯುವುದು ಅವರ ಗುಣಧರ್ಮವಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳು ಅದನ್ನು ಸಾಧಿಸುವುದಕ್ಕಾಗಿ ಎಲ್ಲ ರೀತಿಯ ಬೆಂಬಲ ಕೊಡುವ ಸರ್ಕಾರಗಳಿವೆ.
 ಮಾನವರ ಮನಸ್ಸಿನ ಸೂಕ್ಷ್ಮತೆಯನ್ನು ಕಳೆದು, ನಯನಾಜೂಕಿನ ವಸ್ತುಗಳನ್ನು ತಯಾರಿಸುವುದು ಮತ್ತು ಆ ವಸ್ತುಗಳ ವಿನ್ಯಾಸದ ಆಕರ್ಷಣೆ ಹಾಗೂ ಉಪಭೋಗದ ತೀವ್ರತೆಯನ್ನು ಹೆಚ್ಚಿಸುವುದು ಅವರ ಸಂಶೋಧನೆ ಮತ್ತು ಅಭಿವೃದ್ಧಿಯ ಮಾದರಿಯಾಗಿದೆ.

 ಹಿಂದಿನ ಕಾಲದಲ್ಲಿ ಜನರು ತಮ್ಮ ಹಳೆಯ ಕಾಲದ ವಸ್ತುಗಳ ಬಗ್ಗೆ ಅಭಿಮಾನ ಪಡುತ್ತಿದ್ದರು. ಈಗಲೂ ಅನೇಕ ಕಡೆ ಜನ ತಮ್ಮ ಮನೆಯಲ್ಲಿ ಹಳೆ ಸೀರೆ, ಧೋತರ ಮುಂತಾದ ಬಟ್ಟೆಬರೆಗಳನ್ನು ಕೂಡಿಸಿಡುತ್ತಾರೆ. ಅವುಗಳನ್ನು ಕತ್ತರಿಸಿ ಗಟ್ಟಿಯಾಗಿರುವ ಭಾಗವನ್ನು ಜೋಡಿಸುತ್ತ ರಂಗುರಂಗಿನ ಹಾಸುವ ಮತ್ತು ಹೊದೆಯುವ ಕೌದಿಗಳನ್ನು ಹೊಲಿಯುತ್ತಾರೆ. ಅವು ಬೇಸಗೆಯಲ್ಲಿ ತಂಪಾಗಿರುತ್ತವೆ. ಚಳಿಗಾಲದಲ್ಲಿ ಬೆಚ್ಚಗಾಗಿರುತ್ತವೆ. ಆ ಕೌದಿಗಳ ಮೇಲೆ ಬಟ್ಟೆಯ ತುಕಡಿಗಳಿಂದಲೇ ಆಕರ್ಷಕ ಚಿತ್ತಾರವನ್ನು ಬಿಡಿಸಿರುತ್ತಾರೆ. ಕೌದಿಯ ಪ್ರತಿಯೊಂದು ತುಕಡಿ ಅವರ ಅಜ್ಜನ ಧೋತರದೋ, ಅಂಗಿಯದೋ, ಅಜ್ಜಿಯ ಸೀರೆಯದೊ, ಅಮ್ಮನ ಕುಪ್ಪಸದೋ, ಮದುವೆ ಮುಂಚೆ ಅಕ್ಕ ಉಟ್ಟಿಕೊಳ್ಳುತ್ತಿದ್ದ ಲಂಗ ದಾವಣಿಯದೊ ಅಥವಾ ಅಣ್ಣ ಬಾಲಕನಿದ್ದಾಗಿನ ಚಡ್ಡಿಯದೋ ಇರುತ್ತದೆ. ಗತಿಸಿ ಹೋದ ಹಿರಿಯರ ಮತ್ತು ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣುಮಕ್ಕಳ ಹಾಗೂ ಮನೆಯಲ್ಲೇ ಇರುವವರು ಉಟ್ಟುಕೊಂಡ ಉಡುಪುಗಳ ಸಮ್ಮಿಲನವಾಗಿರುತ್ತದೆ ಆ ಕೌದಿ. ಹೀಗಾಗಿ ಅದು ಆ ಮನೆಯವರನ್ನು ನೆನಪಿನ ಅಂಗಳದಲ್ಲಿ ಒಯ್ದು ನಿಲ್ಲಿಸುತ್ತದೆ. ಅವಿಭಕ್ತ ಕುಟುಂಬದ ಸಂಕೇತವಾಗಿ ಕಾಣುತ್ತದೆ. ಇದ್ದವರ, ಹೊರಗೆ ಹೋದವರ ಮತ್ತು ಸತ್ತವರ ಸಂಬಂಧಗಳ ಹೊಲಿಗೆಯಾಗಿರುತ್ತದೆ!

 ಆ ಕೌದಿ ಹಳೆಯದಾಗಿ ಹರಿದ ನಂತರ ಅದನ್ನು ಸುಟ್ಟು ಬೂದಿ ಮಾಡಿ ಎಣ್ಣೆಯಲ್ಲಿ ಕಲಿಸಿ ಮೊರಕ್ಕೆ ಸವರುವುದರ ಮೂಲಕ ಅದನ್ನು ಗಟ್ಟಿಗೊಳಿಸಲಾಗುತ್ತದೆ ಮತ್ತು ಅದು ಚೆನ್ನಾಗಿ ಕೇರಲು ಬರುವಂತಾಗುತ್ತದೆ. ಆ ಮೊರಕ್ಕೆ ತೂತು ಬಿದ್ದ ಮೇಲೆ ಅದನ್ನು ತಿಪ್ಪೆಗೆ ಎಸೆಯಲಾಗುವುದು. ಆಗ ಅದು ಗೊಬ್ಬರದಲ್ಲಿ ಗೊಬ್ಬರವಾಗಿ ಹೋಗುವುದು! ಹೀಗೆ ಅದು ಕೊನೆಗೆ ಗೊಬ್ಬರವಾಗಿಯೂ ಉಪಯೋಗವಾಗುವುದು.

 ಇಂದಿನ ’ಯೂಸ್ ಅಂಡ್ ಥ್ರೋ’ ಯುಗದಲ್ಲಿ, ಉಪಯೋಗಿಸಿ ಎಸೆಯುವ ವಸ್ತುಗಳೇ ನಾಗರೀಕತೆಯ ಪ್ರತೀಕವಾಗುತ್ತಿವೆ. ಹೊಸ ಹೊಸ ವಸ್ತುಗಳ ಬಗ್ಗೆ ಅಭಿಮಾನ ಪಡುವಂಥ ಮತ್ತು ಹಳೆ ವಸ್ತುಗಳನ್ನು ಬಿಸಾಕುವಂಥ ಮನಸ್ಥಿತಿಯ ನಿರ್ಮಾಣವಾಗಿದೆ. ಗೊಬ್ಬರವಾಗಲಾರದ ಪ್ಲ್ಯಾಸ್ಟಿಕ್‌ನಿಂದ ತಯಾರಾದ ವಸ್ತುಗಳಿಂದ ತುಂಬಿದ ಕಸದ ರಾಶಿಗಳಿಂದ ಮುಂದೊಂದು ದಿನ ಇಡೀ ಜಗತ್ತೇ ದಿಗ್ಭ್ರಮೆಗೊಳ್ಳುವ ದಿನಗಳು ಬರುವುದರಲ್ಲಿ ಸಂಶಯವಿಲ್ಲ.

 ’ಜನಸಮುದಾಯಕ್ಕಾಗಿ ಉತ್ಪಾದನೆ’ ಎಂಬುದು ಮಾಯವಾಗಿ ’ಬೃಹತ್ ಪ್ರಮಾಣದ ಉತ್ಪಾದನೆ’ ಎಂಬ ಮಂತ್ರವನ್ನು ಜಾಗತೀಕರಣದ ಪಂಡಿತರು ಉಚ್ಚರಿಸುತ್ತಿದ್ದಾರೆ. ಈ ಬೃಹತ್ ಪ್ರಮಾಣದ ಉತ್ಪಾದನೆಗೆ ಗಿರಾಕಿಗಳನ್ನು ಸೃಷ್ಟಿಸುವುದೇ ಅವರ ಬಹುದೊಡ್ಡ ಕಲೆಯಾಗಿದೆ. ಜಾಗತೀಕರಣದ ಹುಚ್ಚು ಹಿಡಿದ ಗಿರಾಕಿಗಳು, ಕೆಲಸಕ್ಕೆ ಬರುವ ಹಳೆಯ ವಸ್ತುಗಳನ್ನು ಕೂಡ ಮೂಲೆಗುಂಪು ಮಾಡಿ ಹೊಸ ಬದಲಿ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಮಾಡುವುದು ಅವರ ಘನತೆಗೆ ತಕ್ಕದ್ದು ಎಂಬ ವಾತಾವರಣದ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಹೊಸದಾಗಿ ಪೇಟೆಗೆ ಬರುವ ವಸ್ತುಗಳನ್ನು ಕೊಳ್ಳದೆ ಬದುಕಲು ಸಾಧ್ಯವೇ ಇಲ್ಲ ಎಂಬ ಮಾನಸಿಕ ಸ್ಥಿತಿ ನಿರ್ಮಾಣವಾಗಿದೆ. ಬಳಸಿ ಎಸೆಯುವ ವಸ್ತುಗಳಿಂದಾಗಿ ನದಿ, ಸಮುದ್ರಗಳ ಸಮೇತ ಇಡೀ ವಿಶ್ವವೇ ಕೊಳಚೆ ಮತ್ತು ಕಸಕಡ್ಡಿಗಳ ಗುಡ್ಡೆಯಾಗುತ್ತಿದೆ.

 ಯಂತ್ರನಾಗರೀಕತೆಯ ಮತ್ತು ಕಂಪ್ಯೂಟರ್ ಯುಗದ ಯಾವುದೇ ವಸ್ತುಗಳಿಲ್ಲದೆ ಮಾನವಕುಲ ಹತ್ತಾರು ಸಹಸ್ರವರ್ಷಗಳಿಂದ ಬೃಹತ್ ಸಂಸ್ಕೃತಿ ಮತ್ತು ನಾಗರೀಕತೆಗಳ ನಿರ್ಮಾಣ ಮಾಡಿದೆ. ಪಿರ‍್ಯಾಮಿಡ್ಡುಗಳ ಅಥವಾ ತಾಜಮಹಲ್ ನಿರ್ಮಾಣದ ವೇಳೆ ಯಂತ್ರಗಳ ಆವಿಷ್ಕಾರ ಕೂಡ ಆಗಿರಲಿಲ್ಲ. ವಿದ್ಯುತ್, ಕಂಪ್ಯೂಟರ್, ಟಿವಿ, ಮೊಬೈಲ್, ತಾಂತ್ರಿಕ ಶಿಕ್ಷಣ ಇವೆಲ್ಲ ಇರಲೇ ಇಲ್ಲ. ಆದರೆ ಈ ಕಾಲದವರು ಕೂಡ ಅಚ್ಚರಿ ಪಡುವಂಥದ್ದನ್ನು ಹಿಂದಿನ ನಾಗರೀಕತೆ ಮತ್ತು ಸಂಸ್ಕೃತಿಗಳ ಜನಸಮುದಾಯಗಳು ಸಾಧನೆ ಮಾಡಿ ತೋರಿಸಿವೆ. ಸಂಸ್ಕಾರಗಳಿಂದ ಕೂಡಿದ್ದ ಮಾನವೀಯ ಮೌಲ್ಯಗಳನ್ನು ಸೃಷ್ಟಿಸಿವೆ. ಇದರರ್ಥ ’ಹಳೆಯದೆಲ್ಲವೂ ಸರಿ’ ಎಂದಲ್ಲ. ಆ ಹಳೆಯದನ್ನು ಸುಧಾರಿಸುತ್ತ ಮತ್ತು ಕೆಟ್ಟದ್ದನ್ನು ನಿವಾರಿಸುತ್ತ ಮುಂದಕ್ಕೆ ಒಯ್ಯುವ ವ್ಯವಧಾನವೇ ಇಲ್ಲದಂಥ ನಾಗರಿಕ ಸಮಾಜವನ್ನು ಐಹಿಕ ಅಭ್ಯುದಯದ ಜಾಗತೀಕರಣ ಸೃಷ್ಟಿಸಿದೆ.
 ಇಂದು ಮೌಲ್ಯಗಳ ಜಾಗತೀಕರಣವಾಗಬೇಕಿದೆ. ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ಮತ್ತು ಜಾಗತೀಕರಣ ವ್ಯವಸ್ಥೆಗಳು ಬರುವ ಮೊದಲಿಗೆ ಇದ್ದ ಊಳಿಗಮಾನ್ಯ ಪದ್ಧತಿಯ ಕ್ರೌರ್ಯಗಳು ಕೂಡ ನಮಗೆ ಗೊತ್ತಿವೆ. ಜನಾಂಗವಾದ, ವರ್ಣಭೇದನೀತಿ, ಜಾತೀಯತೆ, ಅಸ್ಪೃಶ್ಯತೆ ಮತ್ತು ಶೋಷಣೆಯ ಪಳೆಯುಳಿಕೆಗಳು ಇಂದಿಗೂ ಜೀವಂತವಾಗಿವೆ.

 ಹಾಗೆ ನೋಡಿದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮೊದಲಬಾರಿಗೆ ಕೆಳಜಾತಿ, ಕೆಳವರ್ಗದವರು ಸಹಸ್ರಾರು ವರ್ಷಗಳ ಯಥಾಸ್ಥಿತಿ ಬದುಕಿನಿಂದ ಹೊರ ಬರುವ ಅವಕಾಶವನ್ನು ಸ್ವಲ್ಪಮಟ್ಟಿಗಾದರೂ ಪಡೆದುಕೊಂಡರು. ದುಡಿಯುವ ಜನರು ಮೊದಲ ಬಾರಿಗೆ ಕಷ್ಟಪಟ್ಟು ಸಂಘಟನೆ ಮಾಡಿಕೊಳ್ಳುವ ಸಾಮರ್ಥ್ಯ ಪಡೆದರು. ಇದೆಲ್ಲ ಸಾಧ್ಯವಾದುದು ಔದ್ಯೋಗಿಕ ಕ್ರಾಂತಿಯ ನಂತರದ ಬಂಡವಾಳಶಾಹಿ ವ್ಯವಸ್ಥೆ ಗಟ್ಟಿಗೊಳ್ಳುವ ಸಂದರ್ಭದಲ್ಲಿ. ಆದರೆ ಈ ಅಭಿವೃದ್ಧಿ ಪಥ ಮಾನವಸಂಪನ್ಮೂಲದ ಜೊತೆ ನೈಸರ್ಗಿಕ ಸಂಪನ್ಮೂಲವನ್ನೂ ನಾಶಗೊಳಿಸುತ್ತಿದೆ. ೩೦೦೦ ವರ್ಷಗಳಲ್ಲಿ ನೈಸರ್ಗಿಕ ಸಂಪನ್ಮೂಲ ಹಾಳಾದಷ್ಟು ಕಳೆದ ೩೦೦ ವರ್ಷಗಳಲ್ಲಿ ಆಗಿದೆ. ಇನ್ನು ಮುಂದಿನ ೩೦ ವರ್ಷಗಳಲ್ಲಿ ಎಷ್ಟೊಂದು ಹಾಳಾಗುತ್ತದೆ ಎಂದರೆ, ಅದು ಹಿಂದಿನ ಎಲ್ಲವನ್ನೂ ಮೀರಿಸುತ್ತದೆ! ಈ ಹಾಳಾಗುವಿಕೆಯು ಭೂಮಿ, ನೀರು, ವಾಯು, ಆಕಾಶವನ್ನು ಮಲಿನಗೊಳಿಸುತ್ತಿದೆ.  ಇಡೀ ಬದುಕನ್ನೇ ವಿಷಮಯಗೊಳಿಸುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ ಎಂಬುದು ಮನುಷ್ಯ ವಿರೋಧಿ ನಿಲವಿಗೆ ಬದ್ಧವಾಗಿರುವುದರಲ್ಲಿ ಸಂಶಯವಿಲ್ಲ. ಬಂಡವಾಳವು ಪ್ರಧಾನವಾದಲ್ಲಿ ಮನುಷ್ಯರು ಅದರ ಅಧೀನವಾಗಲೇ ಬೇಕು. ಜಾಗತೀಕರಣಕ್ಕೆ ಧನಸಂಪಾದನೆಯೊಂದೇ ಮುಖ್ಯ. ಅದಕ್ಕೇ ಬಿಲ್ ಗೇಟ್ಸ್ ’ನಾನು ಶೈಕ್ಷಣಿಕ ರಂಗದಲ್ಲಿ ಪ್ರತಿಭಾವಂತನಾಗಿರಲಿಲ್ಲ; ಆದರೆ ನನ್ನ ಪ್ರತಿಭಾವಂತ ಸಹಪಾಠಿಗಳು ನನ್ನ ಕಂಪನಿಯಲ್ಲಿ ಕೆಲಸಕ್ಕಿದ್ದಾರೆ’ ಎಂದು ಹೇಳುತ್ತಾರೆ. ನಿಜ; ಹಣಕ್ಕೆ ಎಲ್ಲರನ್ನೂ ಎಲ್ಲವನ್ನೂ ಕೊಳ್ಳುವ ಶಕ್ತಿ ಇದೆ. ಈ ವ್ಯವಸ್ಥೆಯ ಅತ್ಯುನ್ನತ ಮಟ್ಟವೇ ಜಾಗತೀಕರಣ. ಧನವೇ ದೇವರಾಗುವ ಸಂದರ್ಭವಿದು.

 ಹಣ ಗಳಿಕೆಯೆ ಮುಖ್ಯವಾಗುವ ವ್ಯವಸ್ಥೆಯಲ್ಲಿ ಮಾನವ ಕುಬ್ಜನಾಗುತ್ತಾನೆ. ಹಣವಿಲ್ಲದವನು ಹೆಣದಂತಾಗುತ್ತಾನೆ. ಯಾವ ವ್ಯವಸ್ಥೆಯಲ್ಲಿ ಮಾನವರಿಗೆ ಬೆಲೆ ಇಲ್ಲವೋ ಆ ವ್ಯವಸ್ಥೆಯಲ್ಲಿ ಅಭದ್ರತೆಯಿಂದ ನರಳುವವರು ಕೋಮುವಾದಿ, ಮೂಲಭೂತವಾದಿ ಮತ್ತು ಉಗ್ರವಾದಿಗಳಾಗುವ ಸ್ಥಿತಿಯನ್ನೂ ತಲಪುವ ಸಾಧ್ಯತೆಗಳಿರುತ್ತವೆ. ಅಭದ್ರತೆಯ ಮನಸ್ಸು ಕ್ರೂರವಾಗುವ ಸಾಧ್ಯತೆಗಳನ್ನು ಪಡೆದುಕೊಂಡಿರುತ್ತದೆ.

 ಅಸ್ತಿತ್ವಕ್ಕಾಗಿ ಎಲ್ಲಿ ಹೋರಾಟಗಳು ನಡೆಯುವುದಿಲ್ಲವೋ ಅಲ್ಲಿ ಸಾಮಾಜಿಕ ಕ್ರೌರ್ಯ ವಿವಿಧ ಅವತಾರಗಳಲ್ಲಿ ಸೃಷ್ಟಿಯಾಗುತ್ತ ಹೋಗುತ್ತದೆ. ಸಾಮಾಜಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸದ ದೇಶಗಳು ಯುದ್ಧದಲ್ಲಿ ತೊಡಗುತ್ತ ಜನರ ಲಕ್ಷ್ಯ ಅವರ ಸಮಸ್ಯೆಗಳ ಕಡೆಗೆ ತಿರುಗದಂತೆ ನೋಡಿಕೊಳ್ಳುತ್ತವೆ. ಜನರು ಅನ್ಯಾಯದ ವಿರುದ್ಧ ಹೋರಾಟದ ಮನೋಭಾವ ತಾಳಿದರೆ, ಸರ್ಕಾರಗಳು ತಮ್ಮ ಜನರ ಮೇಲೆಯೆ ದಬ್ಬಾಳಿಕೆ ಮಾಡಲು ಆರಂಭಿಸುತ್ತವೆ. ಇಂಥ ವ್ಯವಸ್ಥೆ ಇಂದು ಜಾಗತಿಕ ವ್ಯವಸ್ಥೆಯಾಗಿದೆ.

 ಕನ್ನಡ ಸಾಹಿತಿಗಳೂ ಸೇರಿದಂತೆ ವಿಶ್ವದ ವಿವಿಧ ದೇಶ ಭಾಷೆಗಳ ಸಾಹಿತಿಗಳಿಗೆ ಈ ಕಾಲ ಬಹುದೊಡ್ಡ ಸವಾಲಾಗಿದೆ. ಮಾರುಕಟ್ಟೆ ಜಾಗತೀಕರಣದಿಂದ ಸ್ಥಳೀಯ ಅಸ್ಮಿತೆಯನ್ನು ರಕ್ಷಿಸುವ ಮೂಲಕ ಮೌಲ್ಯಗಳ ಜಾಗತೀಕರಣ ಮಾಡದಿದ್ದರೆ ಮತ್ತು ವಿವಿಧ ಜನಸಮುದಾಯಗಳು ಅದಕ್ಕೆ ಸ್ಪಂದಿಸದಿದ್ದರೆ ಈ ಜಗತ್ತು ವಿನಾಶದ ಅಂಚಿಗೆ ಸರಿಯುವುದರಲ್ಲಿ ಸಂಶಯವಿಲ್ಲ.
 ಜಾಗತೀಕರಣ ಕೇವಲ ಬಂಡವಾಳಶಾಹಿ ವ್ಯವಸ್ಥೆಗೆ ಸಂಬಂಧಿಸಿಲ್ಲ. ಕಮ್ಯೂನಿಸ್ಟ್ ದೇಶಗಳು ಸೇರಿದಂತೆ ಎಲ್ಲ ದೇಶಗಳು, ಎಲ್ಲ ಜನಾಂಗಗಳು ಮತ್ತು ಎಲ್ಲ ಧರ್ಮಗಳು ಜಾಗತೀಕರಣದ ಸೋಂಕಿನೊಂದಿಗೆ ಬದುಕುತ್ತಿವೆ.
ಜಾಗತೀಕರಣವೆಂಬುದು ಸಿಹಿ ಕ್ಯಾಪ್ಸೂಲಿನ ವಿಷವಿದ್ದಂತೆ. ಅದು ನಮಗೆ ಸಿಹಿಯಾದ ಸುಖಾನುಭವ ಕೊಡುವುದು ಆದರೆ ಅದರ ಪರಿಣಾಮ ವಿಷಕಾರಿಯಾಗಿರುತ್ತದೆ.

 ಜಾಗತೀಕರಣದ ಪರಿಣಾಮದಿಂದಾಗಿ ಜಗತ್ತಿನ ಜನಸಮುದಾಯ ಕಂಪ್ಯೂಟರ್, ಮೊಬೈಲ್, ಇಂಟರ್‌ನೆಟ್ ಮುಂತಾದ ಸೌಲಭ್ಯಗಳನ್ನು ಪಡೆದಿದೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗಿದೆ. ’ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳು ಜಾಗತೀಕರಣದ ಫಲ’ ಎನ್ನುವುದು ಅತಾರ್ಕಿಕವಾದುದು. ’ತಮ್ಮ ಸ್ವಾರ್ಥಕ್ಕಾಗಿ ಜಾಗತೀಕರಣವನ್ನು ಬೆಂಬಲಿಸುವವರು ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ನಮ್ಮ ಶೋಷಣೆ ಮಾಡುತ್ತಿದ್ದಾರೆ’ ಎಂಬ ಸತ್ಯವನ್ನು ಜನರು ತಿಳಿಯುವವರೆಗೂ ಇದು ನಡೆದೇ ಇರುತ್ತದೆ.

 ಕೆಂಟುಕಿ, ಮ್ಯಾಕ್‌ಡೊನಾಲ್ಡ್, ಪೆಪ್ಸಿ ಮುಂತಾದವುಗಳಿಲ್ಲದೆ ಬದುಕೇ ಇಲ್ಲ ಎಂಬ ವಿಚಿತ್ರ ಮಾನವ ತಳಿಯೊಂದರ ಸೃಷ್ಟಿಯಾಗಿದೆ. ಪೆಪ್ಸಿಯಲ್ಲಿ ಮಾನವ ಶರೀರಕ್ಕೆ ಉಪಯೋಗವಾಗುವಂಥದ್ದು ನೀರು ಮಾತ್ರ ಎಂಬುದು ನಮಗೆ ಅರ್ಥವಾಗದೆ ಹೋಗಿದೆ. ಅದರೊಳಗಿನ ಉಳಿದ ವಸ್ತುಗಳು ಶೌಚಾಲಯದ ಸ್ವಚ್ಛತೆಗೆ ಅಥವಾ ಕೀಟನಾಶಕವಾಗಿ ಮಾತ್ರ ಉಪಯೋಗವಾಗುವಂಥವು! ಕೆಂಟುಕಿ ಚಿಕನ್ ಹಿಂದಿನ ಕ್ರೌರ್ಯ ಮತ್ತು ಅದರ ರುಚಿಯ ಹಿಂದಿರುವ ರೋಗ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಪಿಜಾ ಹಟ್ ಮತ್ತು ಮ್ಯಾಕ್‌ಡೊನಾಲ್ಡ್ ಆಹಾರಗಳು ಕೂಡ ಈಗಾಗಲೇ ವಿವಾದಕ್ಕೆ ಒಳಗಾಗಿವೆ. ಮುದ್ದೆ, ರೊಟ್ಟಿ, ಮಜ್ಜಿಗೆ, ಎಳೆನೀರು ಮುಂತಾದವುಗಳ ಮಹತ್ವ ನಮ್ಮ ಅರಿವಿಗೆ ಎಂದು ಬರುವುದೊ ಗೊತ್ತಿಲ್ಲ.

 ’ಸಾಮ್ರಾಜ್ಯವಾದ ಎಂಬುದು ಬಂಡವಾಳಶಾಹಿಯ ಅತ್ಯುನ್ನತ ಘಟ್ಟ’ ಎಂದು ಲೆನಿನ್ ಹೇಳಿದ್ದರು. ಆದರೆ ಇಂದು ಜಾಗತೀಕರಣ ಎಂಬುದು ಸಾಮ್ರಾಜ್ಯವಾದದ ಅತ್ಯುನ್ನತ ಘಟ್ಟವಾಗಿದೆ. ಬಂಡವಾಳಶಾಹಿಗಳಿಗಷ್ಟೇ ಇದು ಸೀಮಿತವಾಗಿಲ್ಲ. ಕಮ್ಮೂನಿಸ್ಟ್ ಮತ್ತು ಸಂಪ್ರದಾಯಬದ್ಧ ದೇಶಗಳು ಕೂಡ ’ಜಾಗತೀಕರಣವೆಂಬುದು ಈ ಕಾಲದ ಅನಿವಾರ್ಯತೆ’ ಎಂಬ ಮನಸ್ಥಿತಿಯನ್ನು ಹೊಂದುತ್ತಿವೆ. ಅವಿರತವಾದ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಿಂದಾಗಿ ಭೂಮಿ ವಿಷಮಯವಾಗುತ್ತಿದೆ. ನದಿಗಳು ಚರಂಡಿಗಳ ಹಾಗೆ ಕಾಣುತ್ತಿವೆ. ನಗರಗಳು ಕೊಳಚೆ ಪ್ರದೇಶಗಳಾಗುತ್ತಿವೆ. ಹಳ್ಳಿಗಳು ಅಸಹಾಯಕರ ತಾಣಗಳಾಗುತ್ತಿವೆ. ಇಂಥ ಸ್ಥಿತಿಯಲ್ಲೂ ಸಾಹಿತಿಗಳು ಸಂಭ್ರಮ ಹಂಚಿಕೊಳ್ಳುವುದರಲ್ಲೇ ಮಗ್ನವಾದರೆ ಕ್ರಾಂತದೃಷ್ಟಿ ಬರುವುದಾದರೂ ಹೇಗೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

 ಬರಿ ಸೈದ್ಧಾಂತಿಕ ಮಾತುಗಳಿಂದ ಜಾಗತೀಕರಣವನ್ನು ತಡೆಯಲಿಕ್ಕಾಗದು. ನಮ್ಮೊಳಗೆ ಆಗುವ ಪರಿವರ್ತನೆಯಿಂದ ಮಾತ್ರ ಇದು ಸಾಧ್ಯ. ಆಯಾ ದೇಶಗಳ ಗಿರಾಕಿಗಳು ಮತ್ತೆ ಪ್ರಜ್ಞಾವಂತ ಪ್ರಜೆಗಳಾಗಿ ತಮ್ಮೊಳಗಿನ ಅರಿವನ್ನು ಆಚರಣೆಯಲ್ಲಿ ತಂದ ಕ್ಷಣದಲ್ಲೇ ವಸ್ತುಗಳ ಜಾಗತೀಕರಣ ವ್ಯವಸ್ಥೆ ಅನಾಥವಾಗುತ್ತದೆ. ಅದರ ಜಾಗದಲ್ಲಿ ಮೌಲ್ಯಗಳ ಜಾಗತೀಕರಣದ ಉದಯವಾಗುತ್ತದೆ.

 ನಾನು ೩೩ ವರ್ಷಗಳ ಹಿಂದೆ ಅಂದಿನ ಸೋವಿಯತ್ ದೇಶದ ಪ್ರವಾಸದಲ್ಲಿದ್ದಾಗ ’ನಿಮ್ಮ ಏರೋಫ್ಲೋತ್ ವಿಮಾನಗಳಿಗಿಂತ ನಮ್ಮ ವಿಮಾನಗಳು ಹೆಚ್ಚು ಐಷಾರಾಮಿ’ ಎಂದು ನನ್ನ ಗೈಡ್‌ಗೆ ಹೇಳಿದ್ದೆ. ಆಕೆ ಸಮಾಧಾನ ಚಿತ್ತದಿಂದ ’ನಮ್ಮ ವಿಮಾನಗಳನ್ನು ನಾವೇ ತಯಾರಿಸುತ್ತೇವೆ’ ಎಂದು ಹೇಳಿದ್ದಳು. ಆಗ ನಾನು ಮೌನವಾದೆ. ಅದೇ ದೇಶ ಮುಂದೆ ಎಂಟು ವರ್ಷಗಳೊಳಗಾಗಿ ಬಂಡವಾಳಶಾಹಿಗಳ ಜಾಗತೀಕರಣದಿಂದ ಉಂಟಾಗುತ್ತಿದ್ದ ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಯಿತು ಎಂಬುದು ಬಹಳ ಜನರಿಗೆ ಗೊತ್ತಿಲ್ಲ.

 ಸೋವಿಯತ್ ಯುವಜನಾಂಗ ಜೀನ್ಸ್ ಪ್ಯಾಂಟ್, ರೇಬ್ಯಾನ್ ಗಾಗಲ್, ಹೊಸ ಮಾದರಿಯ ವಾಚ್, ನಿಕಾನ್ ಕ್ಯಾಮರಾ ಮುಂತಾದ ವಸ್ತುಗಳಿಗಾಗಿ ಹಾತೊರೆಯುತ್ತಿತ್ತು. ಅಂದಿನ ಸೋವಿಯತ್ ದೇಶದ ಯಾವುದೇ ವಸ್ತುವಿನ ಬೆಲೆ ಅರ್ಧಶತಮಾನದಿಂದ ಹೆಚ್ಚಾಗಿರಲಿಲ್ಲ. ಆ ವಸ್ತುಗಳ ವಿನ್ಯಾಸದಲ್ಲಿಯೂ ವ್ಯತ್ಯಾಸವಾಗಿರಲಿಲ್ಲ. ಹೀಗಾಗಿ ಯುವಕರು ಸೋವಿಯತ್ ದೇಶದಲ್ಲಿನ ಡಾಲರ್ ಶಾಪ್‌ಗಳಲ್ಲಿ ಮಾತ್ರ ಸಿಗುತ್ತಿದ್ದ ವಿದೇಶಿ ವಸ್ತುಗಳಿಗಾಗಿ ಡಾಲರ್ ಹೊಂದಿಸಲು ಪ್ರಯತ್ನಿಸುತ್ತಿದ್ದರು. ಆ ಕಾಲದಲ್ಲಿ ಎಕ್ಸೇಂಜ್ ಆಫೀಸಿನಲ್ಲಿ ನೂರು ಡಾಲರ್‌ಗೆ ೯೦ ರೂಬಲ್ ಸಿಗುತ್ತಿದ್ದವು. ಆದರೆ ಯುವಕರು ವಿದೇಶಿ ಪ್ರವಾಸಿಗರಿಗೆ ೩೦೦ ರೂಬಲ್ ಕೊಟ್ಟು ೧೦೦ ಡಾಲರ್ ಪಡೆಯುತ್ತಿದ್ದರು! ಆ ಡಾಲರ್‌ಗಳನ್ನು ತೆಗೆದುಕೊಂಡು ಡಾಲರ್ ಶಾಪ್‌ಗೆ ಹೋಗಿ ಹೊಸ ವಿನ್ಯಾಸದ ವಿದೇಶಿ ವಸ್ತುಗಳನ್ನು ಕೊಳ್ಳುತ್ತಿದ್ದರು.

 ಅಂದು ಸೋವಿಯತ್ ಯುವಕರು ಯಾವ ವಸ್ತುಗಳಿಗೆ ಹಾತೊರೆಯುತ್ತಿದ್ದರೋ ಆ ವಸ್ತುಗಳು ಇಂದು ನಮ್ಮ ದೇಶದ ನಗರಗಳ ಬೀದಿ ಬದಿಯ ಮಾರಾಟಗಾರರಲ್ಲಿ ಸಿಗುತ್ತವೆ! ನಾವು ವಿಪರೀತವಾಗಿ ವಸ್ತುಮೋಹಕ್ಕೆ ಒಳಗಾಗಿರುವುದರ ದ್ಯೋತಕವಿದು. ನಮ್ಮ ಕಂಬಾರರು, ಕುಂಬಾರರು, ನೇಕಾರರು, ಖಾದಿ ಗ್ರಾಮೋದ್ಯೋಗಿಗಳು, ಸಮಗಾರರು, ಮೇದಾರರು ಮುಂತಾದ ಕಾಯಕ ಜೀವಿಗಳ ಉತ್ಪನ್ನಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಯಂತ್ರಗಳ ಸಹಾಯದೊಂದಿಗೆ ಬೃಹತ್ ಪ್ರಮಾಣದಲ್ಲಿ ಉತ್ಪನ್ನವಾಗಿ ಕಡಿಮೆ ದರದಲ್ಲಿ ಸಿಗುವ ವಸ್ತುಗಳೇ ಬಂಡವಾಳಶಾಹಿಗಳ ನಿಜವಾದ ಸೈನ್ಯ. ಈ ಸೈನ್ಯ ಯಾವುದೇ ದೇಶದ ಎಂಥದೇ ಮೂಲೆಯಲ್ಲಿರುವ ಜನರನ್ನೂ ತಲುಪಬಲ್ಲುದು. ಅದು ಚೈನಾಗೋಡೆಯನ್ನೂ ದಾಟಬಲ್ಲುದು ಎಂದು ಕಾರ್ಲ್ ಮಾರ್ಕ್ಸ್ ೧೯ನೇ ಶತಮಾನದಲ್ಲೇ ಹೇಳಿದ್ದಾರೆ.

 ಇಂದು ಚೀನ ಕೂಡ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿದೆ. ಜಗತ್ತಿನ ಬಂಡವಾಳಶಾಹಿ ರಾಷ್ಟ್ರಗಳಿಗೆ ಗ್ರಾಹಕರ ವಸ್ತುಗಳನ್ನು ಸರಬರಾಜು ಮಾಡುವುದರಲ್ಲಿ ಅದು ತಲ್ಲೀನವಾಗಿದೆ. ಅಮೆರಿಕ, ಫ್ರಾನ್ಸ್, ಆಸ್ಟ್ರೇಲಿಯಾ ಮುಂತಾದ ಬಂಡವಾಳಶಾಹಿ ದೇಶಗಳ ಲಿಬರ್ಟಿ ಪ್ರತಿಮೆ, ಐಫೆಲ್ ಟಾವರ್ ಮತ್ತು ಒಪೆರಾಗಳ ಸ್ಮರಣಿಕೆಗಳು ತಯಾರಾಗುವುದು ಚೀನದಲ್ಲೇ. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್‌ಫ್ರ್ಯಾನ್ಸಿಸ್‌ಕೊ ನಗರದ ಬಳಿ ಇರುವ ’ಸಿಲಿಕಾನ್ ವ್ಯಾಲಿ’ ಎಂದು ಕರೆಯಿಸಿಕೊಳ್ಳುವ ಪ್ರದೇಶ ವಿಶ್ವದ ಪ್ರಮುಖ ಯಾಪಲ್ ಮುಂತಾದ ಕಂಪೆನಿಗಳ ತಾಣವಾಗಿದೆ. ಆದರೆ ಈ ಕಂಪನಿಗಳಿಗೆ ಸಂಬಂಧಿಸಿದ ಮೊಬೈಲ್ ಫೋನ್, ಐಪ್ಯಾಡ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳ ಬಿಡಿಭಾಗಗಳ ಜೋಡಣೆ ಆಗುವುದು ಚೀನದಲ್ಲೇ. ಚೀನದ ಕಾಯಕಜೀವಿಗಳು ಮತ್ತು ತಂತ್ರಜ್ಞರು ತಮ್ಮ ತಮ್ಮ ಉದ್ಯೋಗಗಳಲ್ಲಿ ಬಹಳ ಪರಿಣತರಾಗಿದ್ದಾರೆ. ಅಮೆರಿಕದ ಕಂಪನಿಗಳು ಕೂಡ ಅವರನ್ನು ಸಂದರ್ಶನವಿಲ್ಲದೆ ಕೆಲಸಕ್ಕೆ ತೆಗೆದುಕೊಳ್ಳುವಷ್ಟು ಅವರ ಶ್ರಮಸಂಸ್ಕೃತಿ ಪ್ರಸಿದ್ಧವಾಗಿದೆ.

 ಇಂದು ಜಗತ್ತಿನಲಿ ಬಂಡವಾಳಶಾಹಿಗಳು ಮತ್ತು ಕಮ್ಯೂನಿಸ್ಟರ ಮಧ್ಯೆ ಹೋರಾಟವಿದೆ ಎನ್ನುವುದಕ್ಕಿಂತಲೂ ಬಂಡವಾಳ ಮತ್ತು ಶ್ರಮದ ಮಧ್ಯೆ ಯುದ್ಧ ನಡೆದಿದೆ ಎನ್ನುವುದೇ ಸೂಕ್ತ. ಶ್ರಮವು ಬಂಡವಾಳದ ಮೇಲೆ ವಿಜಯ ಸಾಧಿಸುತ್ತಿದೆ. ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಜನ ಕಡಿಮೆ; ಬಂಡವಾಳ ಹೆಚ್ಚು. ಚೀನದಲ್ಲಿ ಜನ ಹೆಚ್ಚು. ಈ ಜನ ತಮ್ಮ ಶ್ರಮದಿಂದ ವಿಶ್ವದ ತಂತ್ರಜ್ಞಾನದ ಮೇಲೆ ಆಧಿಪತ್ಯ ಸಾಧಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರವನ್ನು ತಮ್ಮ ಬೌದ್ಧಿಕ ಮತ್ತು ಶಾರೀರಿಕ ಶ್ರಮದಿಂದ ಸಾಕಾರಗೊಳಿಸುತ್ತಿದ್ದಾರೆ. ಹೀಗಾಗಿ ಚೀನ ತನ್ನ ದೇಶದ ಶ್ರಮದ ಮೂಲಕ ಬಂಡವಾಳವನ್ನು ಸಂಗ್ರಹಿಸುತ್ತಿದೆ. ಆದರೆ ಆದದ್ದೇನು? ನಿಸರ್ಗದ ಬಲಿ!

 ಚೀನ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಜಾಗತೀಕರಣದ ಸೂತ್ರದ ಮೇಲೆಯೆ ಎಂಬುದನ್ನು ಮರೆಯಬಾರದು. ಮಗು ಹಾಲು ಕುಡಿಯಲು ಬೇಕಾದ ನಿಪ್ಪಲ್ ಮೊದಲು ಮಾಡಿ ವಿಮಾನಿನ ಬಿಡಿ ಉಪಕರಣಗಳನ್ನು ಕೂಡ ಬಂಡವಾಳಶಾಹಿ ರಾಷ್ಟ್ರಗಳಿಗಾಗಿ ಚೀನ ದೇಶ ತಯಾರಿಸುತ್ತಿದೆ. ಅದನ್ನು ಬಗ್ಗುಬಡಿಯುವ ಉದ್ದೇಶದಿಂದ ಬಂಡವಾಳಶಾಯಿ ರಾಷ್ಟ್ರಗಳು ಅದರ ಉತ್ಪನ್ನಗಳನ್ನು ತಿರಸ್ಕರಿಸಲು ಆರಂಭಿಸಿದಾಗ ಪರಿಸ್ಥಿತಿ ಏನಾಗಬಹುದು? ಇಂಥ ಹೊಡೆತ ಬಿದ್ದಾಗ ಅದರ ಪಾಲಿಗೆ ಉಳಿಯುವುದು ಹೊಗೆಮಂಜು ಮಾತ್ರ!

 ಚೀನ ದೇಶದಲ್ಲಿನ ಹೊಗೆಮಂಜು, ಕಾಶ್ಮೀರ ಮತ್ತು ಚೆನ್ನೈನಲ್ಲಿ ’ಜಲಪ್ರಳಯ’, ಭಾರತ, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲಂಡ್, ಇಂಡೊನೇಷ್ಯಾ, ಫಿಲಿಪ್ಪೀನ್ಸ್ ಮುಂತಾದ ಕಡೆಗಳಲಿ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪಗಳು, ಜಗತ್ತಿನ ವಿವಿಧ ಕಡೆಗಳಲ್ಲಿ ಮಹಾಪೂರದಲ್ಲಿ ನಗರಗಳೇ ಕೊಚ್ಚಿ ಹೋಗುವಂಥ ಘಟನೆಗಳು, ’ಹಸಿರುಮನೆ ಪರಿಣಾಮ’ದಿಂದ ಧ್ರುವ ಪ್ರದೇಶದ ಹಿಮ ಕರಗಿ ಉಂಟಾಗುವ ಸಮುದ್ರ ಕೊರೆತ ಮುಂತಾದ ಸಮಸ್ಯೆಗಳು, ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುತ್ತಿರುವ ಓಜೋನ್ ಪದರದಲ್ಲಿನ ತೂತುಗಳು, ವಿವಿಧ ಕಡೆಗಳಲ್ಲಿ ಸುರಿಯುತ್ತಿರುವ ಆಮ್ಲ ಮಳೆ ಮುಂತಾದ ಅನಿಷ್ಟಗಳಿಗೆ ಮುಖ್ಯ ಕಾರಣವೆಂದರೆ ಮಾನವ ನಿಸರ್ಗವನ್ನು ಬೇಕಾಬಿಟ್ಟಿ ಶೋಷಣೆ ಮಾಡುತ್ತಿರುವುದು.

 ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ವಿಶಸಂಸ್ಥೆ ೨೦೧೫ನೇ ನವೆಂಬರ್ ೩೦ರಿಂದ ಡಿಸೆಂಬರ್ ೧೨ರ ವೆರೆಗೆ ಪ್ಯಾರಿಸ್‌ನಲ್ಲಿ ’ಹವಾಮಾನ ಬದಲಾವಣೆ’ ಕುರಿತಂತೆ ೨೧ನೇ ಸಮ್ಮೇಳನ ಏರ್ಪಡಿಸಿತ್ತು. ಈ ಜಗತ್ತು ಸುರಕ್ಷಿತವಾಗಿರುವ ರೀತಿಯಲ್ಲಿ ಹೊಸ ಮಾದರಿಯ ಅಭಿವೃದ್ಧಿ ಪಥವನ್ನು ಕಂಡುಕೊಳ್ಳುವುದು ಅವಶ್ಯವಾಗಿದೆ ಎಂಬುದು ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಶ್ವಸಂಸ್ಥೆಯ ೧೯೩ ಸದಸ್ಯ ದೇಶಗಳ ಭಾವನೆಯಾಗಿತ್ತು. ಶೀಘ್ರವಾಗಿ ಈ ಪಥವನ್ನು ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಯಿತು. ಎಲ್ಲ ದೇಶಗಳು ಸಾಮೂಹಿಕವಾಗಿ ಈ ಸವಾಲನ್ನು ಸ್ವೀಕರಿಸಿ ಪರಿಹಾರ ಕಂಡುಕೊಳ್ಳಬೇಕಿದೆ.

ಭೂಮಿಯ ತಾಪಮಾನ ಏರಿಕೆ ೧.೫ ಡಿಗ್ರಿ ಸೆಲ್ಸಿಯಸ್ ಮೀರದಂತೆ ನೋಡಿಕೊಳ್ಳಬೇಕಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜಾಗತಿಕ ಉಷ್ಣಾಂಶ ನಮ್ಮ ಜೀವಿತ ಅವಧಿಯಲ್ಲೇ ೫.೫ ಸೆಲ್ಸಿಯಸ್‌ನಷ್ಟು ಹೆಚ್ವಾಗುವ ಸಾಧ್ಯತೆಗಳಿವೆ. ಭಾರತದ ಮಟ್ಟಿಗೆ ಹೇಳಬೇಕೆಂದರೆ, ಇದರಿಂದಾಗಿ ಭಾರಿ ಸಮುದ್ರ ಕೊರೆತ ಉಂಟಾಗಿ ಕರಾವಳಿ ಪ್ರದೇಶದ ಬಹುಭಾಗ ಸಮುದ್ರ ಪಾಲಾಗುತ್ತದೆ. ಹಿಮಾಲಯದ ಹಿಮ ಕರಗಿ ’ಜಲಪ್ರಳಯ’ವಾಗಿ ದೇಶದ ಅರ್ಧದಷ್ಟು ಜನಸಮುದಾಯ ನಿರಾಶ್ರಿತವಾಗುತ್ತದೆ. ಹೊಸ ಬಗೆಯ ರೋಗ ರುಜಿನಗಳಿಂದಾಗಿ ಎಲ್ಲೆಡೆ ಹಾಹಾಕಾರದ ಪರಿಸ್ಥಿತಿ ಉಂಟಾಗುತ್ತದೆ. ಬಾಂಗ್ಲಾದೇಶದ ಅರ್ಧಭಾಗ ಸಮುದ್ರ ಪಾಲಾಗುತ್ತದೆ!

 ಕಳೆದ ಕೇವಲ ೨೦ ವರ್ಷಗಳ ಅವಧಿಯಲ್ಲಿ ಉಷ್ಣಾಂಶದಲ್ಲಿ ಭೂಮಿಯ ತಾಪಮಾನ ೧ ಸೆಲ್ಸಿಯಸ್‌ವರೆಗೆ ಹೆಚ್ಚಾಗಿದೆ! ಹೀಗೆ ತಾಪಮಾನ ಹೆಚ್ಚಾಗುವಲ್ಲಿ ೫೫ ದೇಶಗಳ ಪಾತ್ರ ಶೇಕಡಾ ೫೫ರಷ್ಟಿದೆ. ಅರಣ್ಯ ನಾಶ ಮತ್ತು ಹೆಚ್ಚುತ್ತಿರುವ ಅಂಗಾರಾಮ್ಲವಾಯು ಈ ಹವಾಮಾನ ವೈಪರೀತ್ಯಕ್ಕೆ ಪ್ರಬಲ ಕಾರಣವಾಗಿವೆ. ಪಳಿಯುಳಿಕೆ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲ್, ಡೀಸಲ್ ಮತ್ತು ಅಡುಗೆ ಅನಿಲದಂಥ ವಸ್ತುಗಳು ಅಂಗಾರಾಮ್ಲ ವಾಯುವನ್ನು ಹೆಚ್ಚಿಸುತ್ತ ಓಜೋನ್ ಪದರಿಗೆ ತೂತು ಬೀಳುವುದಕ್ಕೆ ಮತ್ತು ಭೂತಾಪಮಾನ ಹೆಚ್ಚುವುದಕ್ಕೆ ಪ್ರಮುಖ ಕಾರಣಗಳಾಗಿವೆ.

 ಸಮುದ್ರದ ತಳಪದರುಗಳಲ್ಲಿ ಉಂಟಾಗುವ ಘರ್ಷಣೆಯಿಂದ ಏರಿಳತಗಳಾಗಿ ಸುನಾಮಿ ಸೃಷ್ಟಿಯಾಗುತ್ತದೆ. ಆಗ ಸಮುದ್ರ ಉಕ್ಕಿ ಕರಾವಳಿ ಪ್ರದೇಶದ ಜನಸಮುದಾಯ ಜಲಸಮಾಧಿಯಾಗುತ್ತದೆ. ಟೊರ್ನಾಡೊದಂಥ ಸುಂಟರಗಾಳಿಗಳು ಬೀಸುತ್ತವೆ. ಹರಿಕೇನ್ ಸ್ಯಾಂಡಿಯಂಥ ಭಯಾನಕ ಮಳೆಗಾಳಿ ಬೀಸುತ್ತದೆ. ಇಂಥ ನೈಸರ್ಗಿಕ ವಿಕೋಪದಿಂದಾಗಿ ಭಾರಿ ನಗರಗಳು ತತ್ತರಿಸುತ್ತವೆ.

 ಔದ್ಯೋಗಿಕ ಕ್ರಾಂತಿಯಾದಾಗಿನಿಂದ ಇಂದಿನ ಜಾಗತೀಕರಣದ ವರೆಗೂ ಮಾನವ ವಿಶ್ವದ ಕೇಂದ್ರಬಿಂದುವೆಂದೇ ಭ್ರಮಿಸಿದ್ದಾನೆ. ಹೀಗಾಗಿ ಪೃಥ್ವಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ. ಈತನ ಕುಕೃತ್ಯದಿಂದಾಗಿ ಜೀವಸಂಕುಲದ ಎಷ್ಟೋ ಪಶು, ಪಕ್ಷಿ ಮತ್ತು ಸಸ್ಯರಾಶಿ ನಾಶವಾಗಿವೆ. ಇನ್ನೂ ನಾಶವಾಗುತ್ತಲೇ ಇವೆ.

 ಡಚ್ಚ ನಾವಿಕರು ೧೫೯೮ರಲ್ಲಿ ಮಾರಿಷಸ್ ದ್ವೀಪಕ್ಕೆ ಬಂದರು. ಅಲ್ಲಿ ಬಾತುಕೋಳಿಯ ಹಾಗೆ ಕಾಣುವ ಮೂರಡಿ ಎತ್ತರದ ಡೊಡೊ ಪಕ್ಷಿಗಳಿದ್ದವು. ಹಾರುವಂಥ ರೆಕ್ಕೆ ಇಲ್ಲದ ಅವು ಭಾರಿ ದೇಹದೊಂದಿಗೆ ನೆಲದ ಮೇಲೆ ಓಡಾಡಿಕೊಂಡಿದ್ದವು. ನಾಲಗೆ ರುಚಿಗಾಗಿ ನಾವಿಕರು ಬೇಟೆಯಾಡುತ್ತ ೧೬೮೧ರೊಳಗಾಗಿ ಅವುಗಳ ಕುಲವನ್ನೇ ನಾಶಮಾಡಿದರು. ಆ ಡೊಡೋಗಳು ಕಲ್ವಾರಿಯಾ ಎಂಬ ಗಿಡಗಳಿಂದ ಬಿದ್ದ ಹಣ್ಣುಗಳನ್ನು ತಿಂದು ಹಿಕ್ಕಿ ಹಾಕಿದಾಗ, ಅದರೊಳಗಿನ ಬೀಜಗಳು ಮೊಳಕೆಯೊಡೆದು ಗಿಡ ಮರಗಳಾಗುತ್ತಿದ್ದವು. ಡೋಡೋಗಳು ನಾಶವಾದ ನಂತರ ಆ ಗಿಡಮರಗಳೂ ನಾಶವಾದವು. ಹೀಗೆ ಜಗತ್ತಿನ ನೂರಾರು ಕಡೆ ಜೀವಜಾಲದ ಕೊಂಡಿಗಳನ್ನು ಮಾನವ ತನ್ನ ಸ್ವಾರ್ಥದ ಕಾರಣ ಕಳಚಿಬಿಟ್ಟಿದ್ದಾನೆ. ಇನ್ನೂ ಅನೇಕ ಪ್ರಾಣಿ, ಪಕ್ಷಿ ಮತ್ತು ಸಸ್ಯಗಳು ಅಳಿವಿನ ಅಂಚಿನಲ್ಲಿವೆ. ಇಷ್ಟೆಲ್ಲ ಹಾಳು ಮಾಡಿದ ಮಾನವ ಈಗ ಪ್ರಕೃತಿ ಮುನಿಯುತ್ತಿರುವ ಬಗ್ಗೆ ಗಾಬರಿಗೊಳ್ಳುತ್ತಿದ್ದಾನೆ.

 ಇವೆಲ್ಲವುಗಳ ಮಧ್ಯೆ ಈ ವಸ್ತುಮೋಹದ ಜಗತ್ತಿನಲ್ಲಿ ಮಾನವರು ದೇಶ, ಭಾಷೆ, ಧರ್ಮಗಳ ಹೆಸರಲ್ಲಿ ಕೊಲೆಗಡುಕರಾಗುತ್ತಿದ್ದಾರೆ. ಇಡೀ ಜಗತ್ತು ಯುದ್ಧ, ಯಾದವೀ ಕಲಹ, ಜನಾಂಗ ದ್ವೇಷ ಮತ್ತು ಜನಾಂಗ ಹತ್ಯೆಯಿಂದ ನರಳುತ್ತಿದೆ.

 ಔದ್ಯೋಗೀಕರಣದ ನಂತರ ಬೆಳೆದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆದಷ್ಟು ಭೀಕರ ಯುದ್ಧಗಳು ಮತ್ತು ಜನಾಂಗ ಹತ್ಯೆ ಹಿಂದೆದೂ ಆಗಿಲ್ಲ. ಇಂದು ಜಾಗತೀಕರಣದ ವ್ಯವಸ್ಥೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆ ಶೀಘ್ರ ಗತಿಯಲ್ಲಿದ್ದು ಬಳಕೆಯ ಪ್ರಮಾಣಕೂಡ ಅತ್ಯುನ್ನತ ಮಟ್ಟಕ್ಕೇರಿದೆ. ಇಂಥ ಅಭಿವೃದ್ಧಿ ತನ್ನದೆ ಆದ ಸಂಘರ್ಷಗಳನ್ನು ಮತ್ತು ರೋಗರುಜಿನುಗಳನ್ನು ತಂದೊಡ್ಡಿದೆ.

 ’ಸಂಪತ್ತಿನ ಗುಲಾಮನನ್ನು ದೇವರು ತಿರಸ್ಕರಿಸುವನು’ ಎಂದು ಪವಿತ್ರ ಕುರಾನ್‌ನಲ್ಲಿ ಹೇಳಲಾಗಿದೆ. ಇಂದು ಜಗತ್ತಿನಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸುತ್ತಿರುವ ದುಷ್ಟಶಕ್ತಿ ಎಂದರೆ ಸುನ್ನಿ ಪಂಥದವರೆಂದು ಹೇಳಿಕೊಳ್ಳುವ ಉಗ್ರರಿಂದ ಕೂಡಿದ ಐಎಸ್‌ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ).

 ಇಸ್ರೇಲ್ ಬಿಟ್ಟರೆ ಮಧ್ಯಪ್ರಾಚ್ಯ ದೇಶಗಳೆಲ್ಲ ಮುಸ್ಲಿಂ ದೇಶಗಳಗಿವೆ. ಎರಡನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಇಂಗ್ಲಂಡ್ ಸೇರಿಕೊಂಡು ಅಲ್ಲಿನ ಪ್ಯಾಲೆಸ್ತೀನ್ ದೇಶದಲ್ಲಿ ಯಹೂದಿಗಳನ್ನು ಬಿಡುವ ಮೂಲಕ ಇಸ್ರೇಲ್ ದೇಶ ಸೃಷ್ಟಿಸಿದರು. ಇಂದು ಇಸ್ರೇಲಿಗಳು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತ ೪೨ ಲಕ್ಷ ಜನಸಂಖ್ಯೆಯ ಪ್ಯಾಲೆಸ್ತೀನ್ ದೇಶವನ್ನು ಎರಡು ತುಕಡಿಯಾಗಿಸಿ ಮೂಲೆಗುಂಪು ಮಾಡಿದ್ದಾರೆ. ಇಸ್ರೇಲ್ ದೇಶದ ಸಹಾಯದೊಂದಿಗೆ ಅಮೆರಿಕ ಇಡೀ ಮಧ್ಯಪ್ರಾಚ್ಯದಲ್ಲಿ ಆತಂಕ ಸೃಷ್ಟಿಸಿದೆ. ಅಮೆರಿಕ ದೇಶ ಇಸ್ರೇಲ್ ಮೂಲಕ ಐಎಸ್‌ಐಎಸ್ ಉಗ್ರರಿಗೆ ಸಹಾಯ ಮಾಡುತ್ತ ಅವರನ್ನು ಸಂಪತ್ತಿನ ಗುಲಾಮರನ್ನಾಗಿ ಮಾಡಿದೆ.

 ಸಾಮ್ರಾಜ್ಯಶಾಹಿ ಮತ್ತು ಜಾಗತೀಕರಣದ ಪ್ರಭಾವ ಆ ಉಗ್ರರ ಮೇಲೆ ಎಷ್ಟೊಂದು ಆಗಿದೆ ಎಂದರೆ, ಇಂದು ಅವರು ತಮ್ಮ ಸ್ವಾರ್ಥಕ್ಕಾಗಿ ಇಸ್ಲಾಮಿನ ಎಲ್ಲ ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅಧಿಕಾರ ಮತ್ತು ಸಂಪತ್ತಿನ ಮುಂದೆ ಅವರಿಗೆ ಎಲ್ಲವೂ ತೃಣ ಸಮಾನವಾಗಿ ಕಾಣುತ್ತಿದೆ. ತಮಗೆ ಹೇಗೆ ಬೇಕೋ ಹಾಗೆ ಕುರಾನನ್ನು ಅರ್ಥೈಸುತ್ತ ಮುಸ್ಲಿಮೇತರರು ಇಸ್ಲಾಂ ಬಗ್ಗೆ ಭಯ ಪಡುವಂತೆ ಮಾಡುತ್ತಿದ್ದಾರೆ.

 ಇಲ್ಲಿಯ ವರೆಗೆ ಇತಿಹಾಸ ಕಂಡ ಎಲ್ಲ ಕ್ರೂರಶಕ್ತಿಗಳನ್ನು ನೆನಪಿಸುವ ಹಾಗೆ ಐಎಸ್‌ಐಎಸ್ (ಇದಕ್ಕೆ ಐಸಿಸ್ ಮತ್ತು ಐಎಸ್ ಎಂದೂ ಕರೆಯುತ್ತಾರೆ) ಉಗ್ರರು ಹಿಂಸಾಕೃತ್ಯಗಳಲ್ಲಿ ತೊಡಗಿದ್ದಾರೆ. ಇರಾಕ್ ಮತ್ತು ಸಿರಿಯಾದ ಕೆಲ ಭಾಗಗಳ ಮೇಲೆ ಹಿಡಿತ ಸಾಧಿಸಿ ನಿರಂತರ ಹಿಂಸೆ ಮತ್ತು ಅತ್ಯಾಚಾರದಲ್ಲಿ ತೊಡಗಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮುಸ್ಲಿಮರ ಕೊಲೆ ಮಾಡಿದ್ದಾರೆ. ಮಧ್ಯಪ್ರಾಚ್ಯದ ಇರಾನ್, ಇರಾಕ್, ಸಿರಿಯಾ, ಸಾವುದಿ ಅರೆಬಿಯಾ, ಟರ್ಕಿ, ಮುಂತಾದ ಮುಸ್ಲಿಂ ದೇಶಗಳ ಮೇಲೆ ದಾಳಿ ಮಾಡಿದ್ದಾರೆ. ಐಎಸ್‌ಐಎಸ್ ನಾಯಕ ಅಬು ಬಕ್ರ್ ಅಲ್ ಬಗದಾದಿ, ತಾನು ಜಗತ್ತಿನ ಮುಸ್ಲಿಮರ ನಾಯಕ (ಕಲಿಫಾ) ಎಂದು ಘೋಷಿಸಿದ್ದಾನೆ.

 ಐಎಸ್‌ಐಎಸ್ ಬಳಸುವ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಾಹನಗಳು ಅಮೆರಿಕ ಸಾಮ್ರಾಜ್ಯಶಾಹಿಗಳ ಕೊಡುಗೆ ಎಂಬುದು ಸಾಬೀತಾಗಿದೆ. ಇಸ್ರೇಲ್ ಸಹಾಯದೊಂದಿಗೆ ಅಮೆರಿಕದವರು ಐಎಸ್ ಉಗ್ರರಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಮಾನವತಾವಾದಿಗಳು ಸಾಕ್ಷಾಧಾರಗಳೊಂದಿಗೆ ಎತ್ತಿತೋರಿಸುತ್ತಿದ್ದರೂ ಸಾಮ್ರಾಜ್ಯಶಾಹಿ ಕೈಗೊಂಬೆಗಳಾದ ಅನೇಕ ವಿಶ್ವವ್ಯಾಪಿ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ದೊಡ್ಡ ಪತ್ರಿಕೆಗಳು ಆ ಕಡೆ ಗಮನ ಹರಿಸುತ್ತಿಲ್ಲ. ಆದರೆ ಈ ಅಮಾನುಷ ಉಗ್ರರು ’ಅಲ್ಲಾ ಹೋ ಅಕ್ಬರ್’ ಎಂದು ನಾಟಕೀಯವಾಗಿ ಘೋಷಣೆ ಕೂಗುತ್ತ, ಕುಂಬಳ ಕಾಯಿ ಕೊಯ್ಯುವ ಹಾಗೆ ಅಮಾಯಕರ ರುಂಡ ಮುಂಡಗಳನ್ನು ಬೇರ್ಪಡಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭಿಸುವಂತೆ ಮಾಡುತ್ತಿದ್ದಾರೆ.

 ಇಂಥ ದುಷ್ಟಶಕ್ತಿಗಳ ಕೈಯಲ್ಲಿ ನ್ಯೂಕ್ಲಿಯರ್ ಬಾಂಬ್‌ಗಳು ಸಿಕ್ಕರೆ ಏನಾಗಬಹುದು ಎಂಬುದನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಇಂದು ಜಗತ್ತಿನ ೧೯೯ ದೇಶಗಳ ೭೦೦ ಕೋಟಿ ಜನರು ಒಂದಿಲ್ಲೊಂದು ರೀತಿಯ ಯುದ್ಧ ಮತ್ತು ಜನಾಂಗೀಯ ಗಲಭೆಗಳ ಭಯದಲ್ಲೇ ಬದುಕುತ್ತಿದ್ದಾರೆ. ಅಮೆರಿಕಾ, ಚೀನ, ರಷ್ಯಾ, ಸಾವುದಿ ಅರೆಬಿಯಾ, ಫ್ರಾನ್ಸ್, ಯು.ಕೆ. ಜರ್ಮನಿ, ಜಪಾನ, ಭಾರತ, ಪಾಕಿಸ್ತಾನ, ದಕ್ಷಿಣ ಕೋರಿಯಾ ಮುಂತಾದ ದೇಶಗಳು ೨೦೧೩ರಲ್ಲಿ ಮಿಲಿಟರಿ ಮೇಲೆ ೧೭೪೭ ಶತಕೋಟಿ ಡಾಲರ್ ಖರ್ಚು ಮಾಡಿವೆ!

  ಈ ಜಗತ್ತನ್ನು ಸಂಪೂರ್ಣವಾಗಿ ನಾಶ ಮಾಡುವಷ್ಟು ಶಕ್ತಿಶಾಲಿ ನ್ಯೂಕ್ಲಿಯರ್ ಬಾಂಬ್‌ಗಳನ್ನು ಶ್ರೀಮಂತ ದೇಶಗಳು ಹೊಂದಿವೆ. ಇಸ್ರೇಲಿ ಸರ್ಕಾರದಿಂದಾಗಿ ಪ್ಯಾಲೆಸ್ತೀನ್‌ನ ಗಾಜಾ ಪ್ರದೇಶ ಸ್ಮಶಾನ ಸದೃಶವಾಗಿದೆ. ಅದೇ ರೀತಿ ಐಎಸ್‌ಐಎಸ್ ದಾಳಿಗಳಿಂದ ಸಿರಿಯಾ ಸ್ಮಶಾನವಾಗುತ್ತಿದೆ. ಯು.ಕೆ. ಮತ್ತು ರಷ್ಯಾ ಮುಂತಾದ ದೇಶಗಳು ಉಗ್ರರನ್ನು ನಿಯಂತ್ರಿಸಲು ಸಿರಿಯಾ ಮೇಲೆ ದಾಳಿ ಮಾಡಿವೆ. ಉಗ್ರರನ್ನು ನಿಯಂತ್ರಿಸಲು ಸಿರಿಯಾ ಅಧ್ಯಕ್ಷ ಬಸೀರ್ ಅಲ ಅಸಾದ್ ವಿಷಾನಿಲ ಪ್ರಯೋಗವನ್ನು ಮಾಡಿದರು. ಈ ಎಲ್ಲ ಅನಾಹುತಗಳಿಗೆ ಸಿರಿಯಾದ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಬಲಿಯಾಗುತ್ತಿದ್ದಾರೆ. ಸಿರಿಯಾ ಜನ ಬಾಂಬುಗಳ ದಾಳಿಗಳಿಂದಾಗಿ ಮನೆಯಲ್ಲೇ ಉಳಿದು ಹಸಿದು ಹಲ್ಲಿ ತಿನ್ನುವಂಥ ಹೃದಯವಿದ್ರಾವಕ ಪರಿಸ್ಥಿತಿ ನಿರ್ಮಾಣವಾಗಿದೆ.

 ಐಎಸ್‌ಐಎಸ್ ಇಸ್ಲಾಂ ವಿಚಿತ್ರವಾಗಿದೆ. ಇಸ್ಲಾಂ ವಿರುದ್ಧ ಐತಿಹಾಸಿಕವಾಗಿ ದ್ವೇಷ ಸಾಧನೆ ಮಾಡಿದ ಜನಾಂಗದ ಮಹಿಳೆಯರು ಯುದ್ಧ ಕೈದಿಗಳಾಗಿ ಸಿಕ್ಕರೆ ಅವರ ಮೇಲೆ ಅತ್ಯಾಚಾರ ಮಾಡುವುದು ಮತ್ತು ಮಾರಾಟ ಮಾಡುವುದು ಧರ್ಮಸಮ್ಮತ ಎಂದು ಈ ಉಗ್ರರು ವಾದಿಸುತ್ತಾರೆ.

 ಅಲ್ಪಸಂಖ್ಯಾತ ಯಜಿದಿ ಧರ್ಮದ ಮಹಿಳೆಯರನ್ನು ಬಂಧಿಸುತ್ತಾರೆ. ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ. ಕೊನೆಗೆ ಅವರನ್ನು ಗುಲಾಮರಂತೆ ಮಾರಾಟ ಮಾಡುತ್ತಾರೆ. ಇದಲ್ಲದೆ ಉತ್ತರ ಇರಾಕ್‌ನಲ್ಲಿ ಈಗಾಗಲೆ ಐದು ಸಾವಿರ ಯಜಿದಿಗಳ ಕೊಲೆ ಮಾಡಿದ್ದಾರೆ.

  ದುಷ್ಟ ಐಎಸ್‌ಐಎಸ್ ನೀತಿಯ ಪ್ರಕಾರ ಇಸ್ಲಾಂಗೆ ಮತಾಂತರಗೊಂಡವರು ಮರಳಿ ತಮ್ಮ ಹಳೆಯ ಧರ್ಮಕ್ಕೆ ಹೊರಟರೆ ಮತ್ತು ಮುಸ್ಲಿಮರು ಇನ್ನೊಂದು ಧರ್ಮ ಸ್ವೀಕರಿಸಲು ಹೊರಟರೆ ಅವರನ್ನು ವಧಿಸುವುದು ಧರ್ಮಸಮ್ಮತ! ಹೆಣ್ಣು ಮಕ್ಕಳು ಮುಖ ತೋರಿಸುವುದು ಅಧರ್ಮ! ಗಂಡ ಬಯಸಿದಾಗಲೆಲ್ಲ ಕಾಮತೃಷೆ ತೀರಿಸದೆ ಇರುವುದು ಅಧರ್ಮ! ಜೆಹಾದ್‌ನಲ್ಲಿ ಹುತಾತ್ಮರಾದ ಪ್ರತಿಯೊಬ್ಬರಿಗೂ ಸ್ವರ್ಗದಲ್ಲಿ ೭೨ ಅಚ್ಯುತ ಕನ್ಯೆಯರು ಕಾಯುತ್ತಿರುತ್ತಾರೆ! ಹುತಾತ್ಮರು ತಮ್ಮ ಪಾಲಿಗೆ ಬಂದ ಆ ಕನ್ನೆಯರನ್ನು ಭೋಗಿಸುತ್ತಾರೆ! ಎಂದು ಮುಂತಾಗಿ ಸುಳ್ಳು ಪ್ರಚಾರವನ್ನು ಅವರದೇ ಆದ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರು ಹರಿಬಿಡುತ್ತಲೇ ಇರುತ್ತಾರೆ. ಜಗತ್ತಿನ ಅನೇಕ ದೇಶಗಳ ಮುಸ್ಲಿಮ ಯುವಕರು ಮತ್ತು ಯುವತಿಯರು ಅತ್ಯಲ್ಪ ಪ್ರಮಾಣದಲ್ಲಾದರೂ ಈ ಮೋಸಕ್ಕೆ ಬಲಿಯಾಗುತ್ತಿದ್ದಾರೆ.

 ಇತ್ತೀಚೆಗೆ ಸಿರಿಯಾದ ರಖ್ಖಾದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆಯಿತು. ಅಲ್ಲಿನ ಇಸ್ಲಾಮಿಕ್ ಉಗ್ರರ ಸೈನ್ಯಕ್ಕೆ ಸೇರಿದ ಅಲಿ ಸಕ್ರ ಅಲ್ ಕಾಸಿಂ ಎಂಬ ೨೦ ವರ್ಷದ ಯುವಕನ ೪೫ ವರ್ಷದ ತಾಯಿ ಲೆನಾ ಅಲ್ ಕಾಸಿಂ ’ಆ ಉಗ್ರರ ಸಂಗದಿಂದ ತಪ್ಪಿಸಿಕೊಂಡು ಹೋಗು’ ಎಂದು ಮಗನಿಗೆ ತಿಳಿಸಿದ್ದಾಳೆ. ಉಗ್ರರಿಗೆ ತನ್ನನ್ನೇ ಸಮರ್ಪಿಸಿಕೊಂಡಿರುವ ಮಗ ಅಲಿ ’ಪಲಾಯನ ಮಾಡಲು ತಾಯಿ ಒತ್ತಾಯಿಸುತ್ತಿದ್ದಾಳೆ’ ಎಂದು ಉಗ್ರರ ನಾಯಕನಿಗೆ ತಿಳಿಸಿದ್ದಾನೆ. ’ನಿನ್ನ ತಾಯಿ ಧಾರ್ಮಿಕ ಕಟ್ಟಳೆಗಳನ್ನು ಮೀರಿದ್ದಾಳೆ. ಆದ್ದರಿಂದ ರಖ್ಖಾ ಹೊರವಲಯದಲ್ಲಿ ಆಕೆ ಕೆಲಸ ಮಾಡುವ ಕಚೇರಿಯ ಮುಂದೆಯೆ ಸಾರ್ವಜನಿಕವಾಗಿ ನೀನೇ ಗುಂಡಿಕ್ಕಿ ಕೊಲ್ಲಬೇಕು.’ ಎಂದು ಆ ಉಗ್ರರ ನಾಯಕ ಅಲಿಗೆ ಆದೇಶ ಮಾಡಿದ್ದಾನೆ. ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಅಲಿ ಭಾರಿ ಜನಸಮೂಹದ ಎದುರೇ ತನ್ನ ತಾಯಿಯನ್ನು ಗುಂಡಿಟ್ಟು ಕೊಂದಿದ್ದಾನೆ! ಹೀಗೆ ಇಸ್ಲಾಮಿನ ಶಾಂತಿ ಮತ್ತು ಸಹೋದರತ್ವದ ಮೌಲ್ಯಗಳನ್ನು ಐಎಸ್‌ಐಎಸ್ ಬಲಿಕೊಡುತ್ತ ಕ್ರೌರ್ಯವನ್ನು ಪ್ರದರ್ಶಿಸುತ್ತಿದೆ.

 ತಾವು ಪ್ರತಿಪಾದಿಸುವ ಇಸ್ಲಾಂ ಧರ್ಮದ ಕಟ್ಟಳೆ ಮೀರುವವರು, ಧರ್ಮ ತೊರೆಯುವವರು ಮತ್ತು ತೊರೆಯುವಂತೆ ಒತ್ತಾಯ ಮಾಡುವವರಿಗೆ ಮರಣ ದಂಡನೆ ಶಿಕ್ಷೆ ನೀಡಬೇಕೆಂಬುದು ಸಿರಿಯಾದಲ್ಲಿ ಐಎಸ್‌ಐಎಸ್ ನಿಯಮವಾಗಿದೆ. ಆ ತಮ್ಮದೇ ಆದ ಕ್ರೂರ ನಿಯಮದ ಪ್ರಕಾರವೇ ಉಗ್ರರು ಮಗನಿಂದ ತಾಯಿಯ ಹತ್ಯೆ ಮಾಡಿಸಿದ್ದಾರೆ.

 ಸ್ವರ್ಗವು ತಾಯಿಯ ಪದತಲದಲ್ಲಿದೆ ಎಂದು ಮುಹಮ್ಮದ ಪೈಗಂಬರರು (೫೭೦-೬೩೨) ತಿಳಿಸಿದ್ದಾರೆ. ಏಕದೇವೋಪಾಸನೆ ಮತ್ತು ಶಾಂತಿಯನ್ನು ಇಸ್ಲಾಂ ಪ್ರತಿಪಾದಿಸುತ್ತದೆ. ಇಸ್ಲಾಂ ಎಂದರೆ ಏಕ ದೇವೋಪಾಸಕರಾಗಿದ್ದು ಅಲ್ಲಾಹನಿಗೆ ಶರಣಾಗತರಾಗಿರುವುದು ಮತ್ತು ನೆಮ್ಮದಿಯಿಂದ ಶಾಂತಿಯುತವಾಗಿ ಬದುಕುವುದು.

 ‘ಬರುವ ವರ್ಷ ನಿಮ್ಮನ್ನು ಕಾಣುವೆನೊ ಇಲ್ಲವೊ ಗೊತ್ತಿಲ್ಲ. ಅದಕ್ಕಾಗಿ ಓ ಜನರೇ ನನ್ನ ಮತುಗಳ ಕಡೆ ಗಮನವಿಡಿ, ಅಧರ್ಮವಾದ ಪದ್ಧತಿಗಳೆಲ್ಲ ನನ್ನ ಪದತಲದಲ್ಲಿ ನಿರ್ನಾಮಗೊಂಡಿವೆ. ಅರಬರು ಅರಬರಲ್ಲದವರಿಗಿಂತ ಹೆಚ್ಚಿನವರಲ್ಲ. ಅರಬರಲ್ಲದವರು ಅರಬರಿಗಿಂತ ಹೆಚ್ಚಿನವರಲ್ಲ. ನೀವೆಲ್ಲ ಆದಂನ ಮಕ್ಕಳು. ಆದಂನನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ. .... ನಿಮ್ಮ ಗುಲಾಮರು! ನೀವು ಉಣ್ಣುವಂಥ ಆಹಾರ ಅವರಿಗೆ ಕೊಡಿ. ನೀವು ಉಡುವಂಥ ಬಟ್ಟೆ ಅವರಿಗೆ ಕೊಡಿ. ಅಜ್ಞಾನ ಕಾಲದ ರಕ್ತಪಾತಮಯವಾದ ಬದ್ಧದ್ವೇಷವನ್ನು ನಿಷೇಧಿಸಲಾಗಿದೆ.’

 ಹಜರತ್ ಮುಹಮ್ಮದ್ ಪೈಗಂಬರರು ತಮ್ಮ ಕೊನೆಯ ಹಜ್ ಯತ್ರೆಯ ನಂತರ ಮೆಕ್ಕಾ ಸಮೀಪದ ಅರಫಾ ಮೈದಾನದಲ್ಲಿ ಯತ್ರಿಕರಿಗೆ ವಿದಾಯ ಹೇಳುವಾಗ ಆಡಿದ ಈ ಕೊನೆಯ ಮತು ಮನವ ಜನಾಂಗಕ್ಕೆ ಅನುಪಮ ಕೊಡುಗೆಯಗಿದೆ.
 ಕೋಮುವಾದ ಅಂದರೆ ಏನು? ಎಂದು ಪ್ಯಾಲೆಸ್ತೀನ್ ಮಹಿಳೆಯೊಬ್ಬಳು ಮುಹಮ್ಮದ್ ಪೈಗಂಬರರಿಗೆ ಕೇಳಿದಳು. ‘ನಿನ್ನ ಜನಾಂಗದವರು ತಪ್ಪು ಮಡುತ್ತಿದ್ದಾಗ್ಯೂ ನೀನು ಅವರಿಗೆ ಸಹಾಯ ಮಡಿದರೆ ಅದು ಕೋಮುವಾದ’ ಎಂದು ಪೈಗಂಬರರು ಉತ್ತರಿಸಿದರು. ಎತ್ತಿ ಕಟ್ಟಬೇಕಾಗಿರುವುದು ತಮ್ಮ ತಮ್ಮ ಧರ್ಮದವರನ್ನಲ್ಲ, ಸತ್ಯವನ್ನು ಎಂದು ಪೈಗಂಬರರು ಸೂಚಿಸಿದ್ದಾರೆ. ೧೫೦೦ ವರ್ಷಗಳಷ್ಟು ಹಿಂದೆ ಪೈಗಂಬರರು, ಕೋಮುವಾದಕ್ಕೆ ನೀಡಿದ ವ್ಯಾಖ್ಯಾನ ಇಂದು ಹೆಚ್ಚು ಪ್ರಸ್ತುತವಾಗಿದೆ.

 ಆದರೆ ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್, ಜರ್ಮನಿಯ ನಾಗರಿಕರನ್ನು ಮೋಸಗೊಳಿಸುತ್ತ ಹಿಂಸೆಯಲ್ಲಿ ತೊಡಗುವಂತೆ ಅವರಿಗೆ ಪ್ರಚೋದನೆ ಮಾಡಿದ ರೀತಿಯಲ್ಲಿ ಈ ಉಗ್ರರು ಜಗತ್ತಿನ ಮುಸ್ಲಿಮರನ್ನು ಪ್ರಚೋದನೆ ಮಾಡುವ ವಿಫಲ ಯತ್ನ ನಡೆಸಿದ್ದಾರೆ.

 ರಾಜಸ್ಥಾನದಲ್ಲಿನ ಅಜ್ಮೇರ್ ದರ್ಗಾದ ಉರುಸ್ (ಸೂಫಿ ಸಂತ ಗರೀಬ್ ನವಾಜ್ ಮೈನುದ್ದೀನ್ ಚಿಸ್ತಿ ಅವರ ಪುಣ್ಯತಿಥಿ) ಕಳೆದ ಡಿಸೆಂಬರ್‌ನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಸೇರಿದ್ದ ಜಗತ್ತಿನ ವಿವಿಧ ದೇಶಗಳ ೭೦ ಸಾವಿರ ಮುಸ್ಲಿಂ ಧರ್ಮಗುರುಗಳು ಐಎಸ್‌ಐಎಸ್, ತಾಲಿಬಾನ್, ಅಲ್ ಖೈದಾ ಮುಂತಾದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಫತ್ವಾ (ಧಾರ್ಮಿಕ ಆದೇಶ) ಹೊರಡಿಸಿದ್ದಾರೆ. ಈ ಉಗ್ರವಾದಿ ಸಂಘಟನೆಗಳು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದವುಗಳಲ್ಲ. ಇವು ಮಾನವೀಯತೆಗೆ ಕಂಟಕವನ್ನುಂಟು ಮಾಡುವಂಥವುಗಳಾಗಿವೆ ಎಂದು ಅವರು ಹೊರಡಿಸಿದ ಫತ್ವಾದಲ್ಲಿ ಹೇಳಲಾಗಿದೆ. ಉರುಸ್‌ನಲ್ಲಿ ಪಾಲ್ಗೊಂಡ ೧೫ ಲಕ್ಷ ಮಂದಿ ಈ ಭಯೋತ್ಪಾದಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಒಬ್ಬ ಮುಗ್ಧನನ್ನು ಕೊಂದರೆ ಇಡೀ ಮಾನವ ಕುಲವನ್ನು ಕೊಂದಂತೆ ಎಂಬ ಹೇಳಿಕೆ ಪವಿತ್ರ ಕುರಾನ್‌ನಲ್ಲಿದೆ ಎಂದು ಅಜ್ಮೇರ್ ದರ್ಗಾದ ಸಜ್ಜಾದಾ ನಶೀನ್ (ಧರ್ಮಾಧಿಕಾರಿ) ಮುಹಮ್ಮದ್ ಎಹ್ಸಾನ್ ರಜಾಖಾನ್ ತಿಳಿಸಿದ್ದಾರೆ.  ಆದರೆ ಆ ಐಎಸ್‌ಐಎಸ್ ಮುಂತಾದ ಅಮಾನುಷ ಶಕ್ತಿಗಳ ವಿರುದ್ಧ ೭೦ ಸಾವಿರ ಮುಸ್ಲಿಂ ಧರ್ಮಗುರುಗಳು ಒಂದಾಗಿ ಹೊರಡಿಸಿದ್ದ ಫತ್ವಾಗೆ ನಮ್ಮ ಮಾಧ್ಯಮಪತಿಗಳು ಪ್ರಚಾರ ಕೊಡದೆ ಮಾಧ್ಯಮದ ಘನತೆಗೆ ಕುಂದು ತಂದಿದ್ದಾರೆ. 

 ಹಿಂಸೆ ಮತ್ತು ಜಾಗತೀಕರಣಕ್ಕೆ ಉತ್ತರ ಕೊಡುವ ಶಕ್ತಿ ಕನ್ನಡ ಸಾಹಿತ್ಯಕ್ಕೆ ಇದೆ. ಕನ್ನಡ ಸಾಹಿತ್ಯ ಸಹಸ್ರ ವರ್ಷಗಳಿಂದ ಜನಪರವಾಗೇ ಇದೆ. ಒಂಬತ್ತನೆ ಶತಮಾನದ ಕನ್ನಡ ಕಾವ್ಯಗಳ ಲಕ್ಷಣಗ್ರಂಥ ’ಕವಿರಾಜಮಾರ್ಗ’ದಲ್ಲೇ ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವದ ಬೀಜಗಳಿವೆ. ಕಸವರಮೆಂಬುದು ನೆಱೆ ಸೈರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ (ಅನ್ಯರ ವಿಚಾರಗಳನ್ನು ಮತ್ತು ಧರ್ಮವನ್ನು ಸಂಪೂರ್ಣವಾಗಿ ಸಹಿಸಲು ಸಾಧ್ಯವಾದರೆ ಆ ಮನಸ್ಸೇ ಶುದ್ಧ ಬಂಗಾರ) ಎಂದು ರಾಷ್ಟ್ರಕೂಟ ದೊರೆ ನೃಪತುಂಗನ ಆಸ್ತಾನದಲ್ಲಿದ್ದು ಕವಿರಾಜಮಾರ್ಗ ಕೃತಿ ರಚಿಸಿದ ಶ್ರೀವಿಜಯ ಹೇಳಿದ್ದಾನೆ.
 ’ನೆತ್ತರ ಕೋಡಿಯೊಳ್ ಜಿಗುಳೆ ಬಳೆವ ತೆಱದಿಂ ಬಳೆದಂ’ ಎಂದು ಮಹಾಕವಿ ಪಂಪ ’ವಿಕ್ರಮಾರ್ಜುನ ವಿಜಯ’ದಲ್ಲಿ ದೊರೆ ಅರಿಕೇಸರಿ ಮಗುವಾಗಿದ್ದಾಗ ಬೆಳೆದ ಬಗೆಯನ್ನು ತಿಳಿಸಿದ್ದಾನೆ. ರಕ್ತ ಹೀರಿ ಬೆಳೆಯುವ ಜಿಗಣೆಯ ಹೋಲಿಕೆಯೊಂದಿಗೆ ಅರಿಕೇಸರಿಯ ಬೆಳವಣಿಗೆಯನ್ನು ತಿಳಿಸುವ ಮೂಲಕ ತನ್ನ ಕಾಲದ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಬಗ್ಗೆ ಅಸಹನೆಯನ್ನು ಸೂಚಿಸಿದ್ದಾನೆ.

 ’ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ’ ಎಂದು ಹೇಳಿದ ಬಸವಣ್ಣನವರು, ೧೨ನೇ ಶತಮಾನದಲ್ಲೇ ಭೂಮಿಯ ಮಹತ್ವವನ್ನು ಸಾರಿದ್ದಾರೆ. ಮುಂದೆ ಈ ಭೂಮಿಯ ಮೇಲೆ ಆಗುವ ಅನಾಹುತಗಳ ಕುರಿತು ಎಚ್ಚರಿಸಿದ್ದಾರೆ.
 ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲು ಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವೊಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ.
ಎಂದು ಬಸವಣ್ಣನವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಆತಂಕ ೨೧ನೇ ಶತಮಾನದ ಆತಂಕವೂ ಆಗಿದೆ. ಹಿಂದಿನ ಕಾಲದಲ್ಲೂ ಮಾನವ ನಿರ್ಮಿತ ಅವಘಡಗಳು ಸಂಭವಿಸುತ್ತಿದ್ದವು. ಆದರೆ ಅವುಗಳನ್ನು ನಿಯಂತ್ರಿಸುವ ಶಕ್ತಿ ಮಾನವರಿಗಿತ್ತು. ಇಂದು ಅದೇ ಮಾನವ ಔದ್ಯೋಗಿಕ ಕ್ರಾಂತಿಯ ನಂತರ ಬಂಡವಾಳವಾದ, ಸಾಮ್ರಾಜ್ಯವಾದ ಮತ್ತು ಜಾಗತೀಕರಣದ ಮೂಲಕ ಮಾಡಿದ ಹವಾಮಾನ ವೈಪರೀತ್ಯದಂಥ ಅವಘಡಗಳನ್ನು ಆತ ಸರಿಪಡಿಸಲಾರದಷ್ಟು ಭಯಾನಕವಾಗಿವೆ.

 ಬಂಡವಾಳಶಾಹಿ ರಾಷ್ಟ್ರಗಳೊಂದಿಗೆ ಪೈಪೋಟಿಗೆ ಇಳಿದ ಕಮ್ಯೂನಿಸ್ಟ್ ರಾಷ್ಟ್ರಗಳು ಕೂಡ ಬಂಡವಾಳಶಾಹಿಗಳು ಬಳಸಿದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುತ್ತ ಅದೇ ತಪ್ಪನ್ನು ಮಾಡಿವೆ. ಪೆಟ್ರೋ ಡಾಲರ್ ಮೂಲಕ ಬೇಕಾಬಿಟ್ಟಿ ಬೆಳೆದ ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ನಿಸರ್ಗವಿರೋಧಿ ಅಭಿವೃದ್ಧಿಯ ಪಥ ತುಳಿದ ಇನ್ನುಳಿದ ರಾಷ್ಟ್ರಗಳು ಕೂಡ ಈ ಸುಂದರ ಪೃಥ್ವಿಯನ್ನು ಹಾಳುಮಾಡುವಲ್ಲಿ ಸ್ವಲ್ಪಮಟ್ಟಿಗಾದರೂ ಪಾಲುದಾರರಾಗಿವೆ.

 ಇಂಥ ಧರೆ ಹತ್ತಿ ಉರಿಯುವ ದಿನಗಳ ಕಡೆಗೆ ಸಾಗುತ್ತಿದ್ದೇವೆ. ನೀರನ್ನು ಹಿಡಿದಿಡುವ ಏರಿಯೇ ನೀರು ಕುಡಿಯುತ್ತದೆ. ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುವುದನ್ನು ಇದು ಜ್ಞಾಪಿಸುತ್ತದೆ. ಅಂತೆಯ ನಮ್ಮ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಗ್ರೈನೆಟ್ ಶಿಲೆಗಳು, ಕಬ್ಬಿಣ ಮತ್ತು ಮ್ಯಾಂಗನೀಜ ಅದಿರು ರಾಷ್ಟ್ರೀಯ ಸಂಪತ್ತಾಗಿದ್ದರೂ ಅದರಿಂದ ಕೆಲವರು ನೂರಾರು ಕೋಟಿಗಳಿಗೆ ಅಧಿಪತಿಗಳಾಗಿದ್ದಾರೆ. ಕಾನೂನುಗಳನ್ನು ತಿರುವುದರಿಂದ ಬೇಲಿಯೆ ಹೊಲವನ್ನು ಮೆಯ್ಯುವಂತಾಗಿದೆ. ನಾರಿ ತನ್ನ ಮನೆಯಲ್ಲಿ ಕಳ್ಳತನ ಮಾಡುವ ಹಾಗೆ ಆಳುವವರು ದೇಶವನ್ನು ಲೂಟಿ ಮಾಡುವಂಥ ಸ್ಥಿತಿ ಬಂದೊದಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ದುರ್ಬಳಿಕೆಯಿಂದಾಗಿ ತಾಯಿಯ ಮೊಲೆಹಾಲಿನಲ್ಲಿ ಡಿಡಿಟಿ ಅಂಶಗಳು ಕಂಡುಬಂದಿವೆ. ಹೀಗೆ ತಾಯ ಮೊಲೆ ಹಾಲು ನಂಜಾಗುತ್ತಿದೆ. ನಾವು ನಮ್ಮನ್ನೇ ದೂರಿಕೊಳ್ಳುವ ಪರಿಸ್ಥಿತಿ ಇದಾಗಿದೆ.

 ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ?
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ.
                               -ಬಸವಣ್ಣ
 ಸರ್ವೋದಯ ನೀತಿಯಿಂದಾಗಿ ಊರ ಮುಂದೆ ಹಾಲಹಳ್ಳ ಹರಿಯುವಂಥ ಸಾಮಾಜಿಕ ವ್ಯವಸ್ಥೆಗೆ ಬಸವಣ್ಣನವರು ಕಾರಣರಾಗಿದ್ದರು. ಆದರೆ ಬಂಡವಾಳಶಾಹಿಯ ಅಭಿವೃದ್ಧಿ ಪಥದಿಂದಾಗಿ ಊರುಗಳ ಮುಂದೆ ಹರಿಯುವ ಹಳ್ಳಗಳು ಚರಂಡಿಗಳ ಅವತಾರ ತಾಳಿವೆ. ಬೆಂಗಳೂರಿನ ಜ್ಞಾನಗಂಗೋತ್ರಿಯ ಮುಂದೆ ವೃಷಭಾವತಿ ನದಿ ದುರ್ಗಂಧದೊಂದಿಗೆ ಚರಂಡಿಯಾಗಿ ಹರಿಯುತ್ತಿದೆ!


 ಇಂಥ ದಿನಗಳು ಬರಬಾರದೆಂದೆ ಬಸವಣ್ಣನವರು ೧೨ನೇ ಶತಮಾನದಲ್ಲೇ ಜೀವಜಾಲ ಸಮತೋಲನದ ಕುರಿತು ತಿಳಿಸಿದ್ದಾರೆ.
 ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳಿತಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು.
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ.
ಎಂದು ಬಸವಣ್ಣನವರು ಜೀವಜಾಲದ ಮಹತ್ವವನ್ನು ತಿಳಿಸಿದ್ದಾರೆ.

 ಮಹಾದೇವನು ಸೆಟ್ಟಿಯಾಗಿ ಭೂಮಿಯ ಮೇಲೆ ಹಿರಿದಾದ ಲೋಕವ್ಯವಹಾರದ ಅಂಗಡಿಯನಿಟ್ಟುಕೊಂಡು ವ್ಯಾಪಾರಕ್ಕೆ ಕುಳಿತಿದ್ದಾನೆ. ಆ ದೇವರು ಒಮ್ಮನ (ಒಂದೇ ಮನಸ್ಸು ಮತ್ತು ನಾಲ್ಕು ಸೊಲಿಗೆ)ವಾದರೆ ಕೂಡಲೆ ಮಾತನಾಡುವನು. ಇಮ್ಮನ (ಎಂಟು ಸೊಲಿಗೆ ಮತ್ತು ಇಬ್ಬಗೆಯ ಮನಸು)ವಾದರೆ ಮಾತನಾಡುವುದಿಲ್ಲ. ಕಾಣಿ (ಚಿಕ್ಕ ನಾಣ್ಯ ಮತ್ತು ಪರಡೆಗಳ ಸಮತೋಲನ ಕಾಪಾಡಿಕೊಳ್ಳುವುದಕ್ಕಾಗಿ ತಕ್ಕಡಿಯ ದಂಡಿಗೆಗೆ ಕಟ್ಟುವ ವಸ್ತು) ಯಷ್ಟು ಕೂಡ ಸೋಲುವುದಿಲ್ಲ. ಅರ್ಧಗಾಣಿಯಷ್ಟು ಕೂಡ ಗೆಲ್ಲುವುದಿಲ್ಲ. ಆದ್ದರಿಂದಲೇ ಮಹಾದೇವಸೆಟ್ಟಿ ಎನಿಸಿದ ನಮ್ಮ ಕೂಡಲಸಂಗಮದೇವರು ಜಾಣ ಎಂದು ಬಸವಣ್ಣನವರು ಹೆಮ್ಮೆ ಪಡುತ್ತಾರೆ.

 ಗಾಂಧೀಜಿಯವರು ಹೇಳಿದಂತೆ ಸೃಷ್ಟಿಯು ಮಾನವರ ಅವಶ್ಯಕತೆಗಳನ್ನು ಪೂರೈಸುತ್ತದೆ ಹೊರತಾಗಿ ದುರಾಸೆಯನ್ನಲ್ಲ. ಬಸವಣ್ಣನವರ ದೇವರು ಜೀವಜಾಲಸಮತೋಲನದ ದೇವರು. ಜೀವಜಾಲ ಸಮತೋಲನಕ್ಕೆ ಧಕ್ಕೆ ತರುವ ಯಾವುದೇ ಕೃತ್ಯ ದೇವವಿರೋಧಿ ಕೃತ್ಯವಾಗಿರುತ್ತದೆ. ಅದು ಜೀವವಿರೋಧಿ ಕೃತ್ಯವೂ ಆಗಿರುತ್ತದೆ. ಸೃಷ್ಟಿಕರ್ತ ತನ್ನ ಸೃಷ್ಟಿಯ ಬಗ್ಗೆ ಕಾಳಜಿ ಹೊಂದಿದ್ದಾನೆ. ಒಮ್ಮನಸ್ಸಿನಿಂದ ಬದುಕುವವರು ಮತ್ತು ಅವಶ್ಯಕತೆ (ನಾಲ್ಕು ಸೊಲಿಗೆ) ಇದ್ದಷ್ಟು ಮಾತ್ರ ಪ್ರಕೃತಿಯಿಂದ ಪಡೆಯುವವರು ದೇವರ ಪ್ರೀತಿಗೆ ಪಾತ್ರರಾಗುತ್ತಾರೆ. ಇಬ್ಬಂದಿತನದಿಂದ ಬದುಕುವವರು ಮತ್ತು ದುರಾಸೆಯುಳ್ಳವರು (ಎಂಟು ಸೊಲಿಗೆಗೆ ಹಾತೊರೆಯುವವರು) ದೇವರ ಪ್ರೀತಿಯನ್ನು ಸಂಪಾದಿಸಲಾರರು. ಪ್ರಕೃತಿ ನಿಯಮದಲ್ಲಿ ಸೋಲು ಗೆಲುವಿನ ಪ್ರಶ್ನೆಯೆ ಇಲ್ಲ. ದೇವರು ಪ್ರಕೃತಿಯಲ್ಲಿ ಚಿಕ್ಕ ನಾಣ್ಯದಷ್ಟೂ ಬಿಟ್ಟುಕೊಡುವುದಿಲ್ಲ. ಅಂದರೆ ಒಂದಿಷ್ಟೂ ಹಾಳು ಮಾಡುವುದನ್ನು ಇಷ್ಟಪಡುವುದಿಲ್ಲ. ಅದರ ಅರ್ಧ ನಾಣ್ಯದಷ್ಟೂ ಉಳಿಸಿಕೊಳ್ಳ ಬಯಸುವುದಿಲ್ಲ. ಆತನ ಜೀವಜಾಲದ ತಕ್ಕಡಿ ಸದಾ ಸಮತೋಲನದಲ್ಲಿರುತ್ತದೆ.

 ಸಮತೋಲನ ಕಾಪಾಡಿಕೊಳ್ಳುವುದೆಂದರೆ ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿಕೊಳ್ಳುವುದು. ಆಹಾರ ಸರಪಳಿಯು ಈ ಸಮತೋಲನವನ್ನು ನಿಯಂತ್ರಿಸುತ್ತದೆ. ಮಾನವ ಇದರಲ್ಲಿ ಕೈ ಹಾಕದಂತೆ ಬದುಕಬೇಕಾಗುವುದು ಅವಶ್ಯವಾಗಿದೆ.
 ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ?
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು.
ಎಂದು ಬಸವಣ್ಣವರು ಹೇಳುವಲ್ಲಿ ಈ ಜಗತಿನ ಉಪಭೋಗ ಮತ್ತು ಸಂರಕ್ಷಣೆಯ ತತ್ತ್ವವನ್ನು ಸೂಚಿಸಿದ್ದಾರೆ.

 ಸಸ್ಯರಾಶಿಗೂ ಜೀವವಿದೆ ಎಂದು ಅವರು ಹೇಳುತ್ತಾರೆ. ಬದುಕಲು ಆಹಾರ ಅವಶ್ಯವಾಗಿದೆ ಎಂದು ತಿಳಿಸುತ್ತಾರೆ. ಅದಕ್ಕಾಗಿ ಸಸ್ಯವನ್ನು ಕೊಂದು ತಿನ್ನುವುದು ಅನಿವಾರ್ಯವಾಗಿದೆ. ಆದರೆ ಹುಲ್ಲು, ಹುಲ್ಲೆ, ಹುಲಿ, ಮಾನವ ಮೊದಲುಮಾಡಿ ಅಮಿಬಾದಿಂದ ಮಾನವನ ವರೆಗೆ ಮತ್ತು ಮಣ್ಣಿನಿಂದ ಹಿಮಾಲಯದ ವರೆಗೆ ಚರಾಚರವೆಲ್ಲವೂ ಜೀವಜಾಲದಲ್ಲೇ ಇದೆ. ಈ ಜೀವಜಾಲದ ಆಹಾರ ಸರಪಳಿಯನ್ನು ಅರಿತುಕೊಂಡು ಅದರ ಕೊಂಡಿಗಳು ಕಳಚದಂತೆ ಎಚ್ಚರಿಕೆ ವಹಿಸಿ ಉಪಭೋಗಿಸುವಂಥ ಪರಿಜ್ಞಾನ ಮಾನವನಿಗೆ ಇರಬೇಕಾಗುತ್ತದೆ. ಇದನ್ನು ಅರಿತುಕೊಂಡು ಬದುಕುವುದನ್ನು ಬಸವಣ್ಣನವರು ತೋರಿಸಿಕೊಟ್ಟಿದ್ದಾರೆ.

 ಸಾಹಿತ್ಯ ಹೀಗೆ ಕ್ರಾಂತದೃಷ್ಟಿಯನ್ನು ಹೊಂದಿರುತ್ತದೆ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎಂದು ಬಸವಣ್ಣನವರು ಹೇಳುತ್ತಾರೆ. ಅಂದರೆ, ಮನುಷ್ಯನು ವಿಶ್ವದ ಕೇಂದ್ರಬಿಂದು ಅಲ್ಲ; ಸಕಲಜೀವಾತ್ಮರು ವಿಶ್ವದ ಕೇಂದ್ರಬಿಂದು ಎಂಬ ವಿಚಾರ ಈ ಮಾತಿನಲ್ಲಿ ಅಡಗಿದೆ.

 ಒಡಿಶಾದ ನಿಯಮಗಿರಿ, ಅಲ್ಲಿನ ಆದಿವಾಸಿಗಳಿಗೆ ಪವಿತ್ರಸ್ಥಳ. ೨೫೦ ಚದರ ಕಿಲೊ ಮೀಟರ್ ವಿಸ್ತಾರದ ಈ ನಿಯಮಗಿರಿಯಲ್ಲಿ ಆದಿವಾಸಿಗಳ ನಿಯಮರಾಜ ದೇವರ ಸ್ಥಾನವಾಗಿದೆ. ನಿಯಮಗಿರಿ ತನ್ನ ಗರ್ಭದಲ್ಲಿ ಅಲ್ಯೂಮಿನಿಯಂ ತಯಾರಿಕೆಗೆ ಬೇಕಾದ ಬಾಕ್ಸೈಟ್ ಖನಿಜ ಸಂಪತ್ತನ್ನು ತುಂಬಿಕೊಂಡಿದೆ. ವೇದಾಂತ ಗ್ರೂಪ್ ಈ ಪ್ರದೇಶದಲ್ಲಿ ಬಾಕ್ಸೈಟ್ ಗಣಿಗಾರಿಕೆಗಾಗಿ ೧೭೦ ಕೋಟಿ ಡಾಲರ್ ವೆಚ್ಚದ ಬಾಕ್ಸೈಟ್ ಮೈನಿಂಗ್ ಪ್ರೊಜೆಕ್ಟ್ ಆರಂಭಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ ಅಲ್ಲಿನ ಡೋಂಗ್ರಾಕೊಂಢ್ ಹಾಗೂ ಕಟಿಯಾ ಕಂಧಾ ಆದಿವಾಸಿಗಳು ಈ ಯೋಜನೆಯನ್ನು ವಿರೋಧಿಸಿದರು.

 ಆದರೆ ಆ ಬಹುರಾಷ್ಟ್ರೀಯ ಕಂಪೆನಿಯ ಅಧಿಕಾರಿಗಳು ನಿಯಮಗಿರಿಗೆ ಹೋಗಿ ಅಲ್ಲಿನ ಆದಿವಾಸಿಗಳ ಸಭೆ ಕರೆದಿದ್ದಾರೆ. ಪರ್ವತ ಪ್ರದೇಶದ ಅರ್ಧ ಭಾಗವನ್ನು ಆದಿವಾಸಿಗಳಿಗೆ ಬಿಟ್ಟುಕೊಡುವುದಾಗಿ ಮತ್ತು ಆದಿವಾಸಿಗಳಿಗೆ ರಸ್ತೆ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆ. ಆಗ ಒಬ್ಬ ಆದಿವಾಸಿ ಮಹಿಳೆ ಕೇಳಿದ್ದಿಷ್ಟೇ ’ನಮ್ಮ ಪವಿತ್ರವಾದ ನಿಯಮಗಿರಿಯ ಅರ್ಧಭಾಗವನ್ನು ನಮಗೆ ಬಿಟ್ಟುಕೊಡುವ ನೀವು ಯಾರು?’
 ಆಕೆಯ ಪ್ರಶ್ನೆಗೆ ಉತ್ತರಿಸಲಿಕ್ಕಾಗದ ಆ ಕಂಪೆನಿ ಅಧಿಕಾರಿಗಳು ಬಾಯಿ ಮುಚ್ಚಿಕೊಂದು ವಾಪಸ್ ಬರಬೇಕಾಯಿತು.
 ಸಾಂಪ್ರದಾಯಿಕ ಅರಣ್ಯವಾಸಿಗಳು ಮತ್ತು ಆದಿವಾಸಿಗಳ ಸಾಮುದಾಯಿಕ ಹಾಗೂ ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವ ರೀತಿಯಲ್ಲಿ ನಿರ್ಣಯ ಕೈಗೊಳ್ಳುವ ಹಕ್ಕು ಅಲ್ಲಿನ ಗ್ರಾಮಸಭೆಗಳಿಗೆ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು.

 ಆದಿವಾಸಿಗಳು ಮತ್ತು ಅರಣ್ಯದ ಮಧ್ಯೆ ಜೈವಿಕ ಸಂಬಂಧವಿದೆ. ನಿಯಮಗಿರಿಯಲ್ಲಿ ಗಣಿಗಾರಿಕೆ ನಡೆಸುವುದರಿಂದ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಲಿದೆ ಎಂಬ ವಾಸ್ತವದ ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಆದಿವಾಸಿಗಳ ಪರ ತೀರ್ಪು ನೀಡಿತು.

 ’ಮೇಕ್ ಇನ್ ಇಂಡಿಯಾ’ ಪ್ರತಿಪಾದಕರಾದ ಪ್ರಧಾನಿ ಮೋದಿ ಅವರು ಇಂಥ ಸಂಪದ್ಭರಿತ ತಾಣಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುವ ಉದ್ದೇಶದಿಂದಲೇ ’ಭೂ ಸ್ವಾಧೀನ ಕಾಯ್ದೆ’ ಜಾರಿಗೆ ತರಲು ಶ್ರಮಿಸಿ ವಿಫಲರಾದರು.
 ’ಮೇಕ್ ಇನ್ ಇಂಡಿಯಾ’ ಕರೆಯೊಂದಿಗೆ ಜಗತ್ತನ್ನು ಸುತ್ತುವಾಗ ಗಾಂಧೀಜಿಯವರ ಬಹುತ್ವ ಸಂಸ್ಕೃತಿಯ ತತ್ತ್ವಗಳನ್ನು ಎತ್ತಿಹಿಡಿಯುವ ಮೋದಿ ಅವರು ತಮ್ಮ ಪಕ್ಷದ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ’ನಾನೊಬ್ಬ ಹಿಂದೂ ರಾಷ್ಟ್ರವಾದಿ’ ಎಂದು ಹೇಳಿದರು. ಇದು ಭಾರತದ ಜಾತ್ಯತೀತ ಸಂವಿಧಾನಕ್ಕೆ ಮಾಡಿದ ಅಪಮಾನ. ನಾವು ಹಿಂದೂ ರಾಷ್ಟ್ರವಾದಿ ಅಥವಾ ಮುಸ್ಲಿಂ ರಾಷ್ಟ್ರವಾದಿಯಾಗಬೇಕಿಲ್ಲ. ನಾವೆಲ್ಲ ಭಾರತ ರಾಷ್ಟ್ರವಾದಿಗಳಾಗಿ ಬದುಕಿದಾಗ ಮಾತ್ರ ದೇಶದೊಳಗಿನ ಹಿಂಸೆಯನ್ನು ಮತ್ತು ಜಾಗತೀಕರಣದ ಶೋಷಣೆಯನ್ನು ತಡೆಗಟ್ಟಲು ಸಾಧ್ಯ.
 ಜಾಗತೀಕರಣ ತಜ್ಞರ ದೃಷ್ಟಿಯಲ್ಲಿ ಭಾರತ ಬಹುದೊಡ್ಡ ಗ್ರಾಹಕರ ದೇಶವಾಗಿ ಕಾಣಲು ನಮ್ಮ ಜಾತೀಯತೆ ಮತ್ತು ಮೂಢನಂಬಿಕೆಗಳಿಂದ ಕೂಡಿದ ಜೀವನವಿಧಾನವೂ ಕಾರಣವಾಗಿದೆ. ಅವರು ಎಲ್ಲ ಜಾತಿಗಳ ಮತ್ತು ಧರ್ಮಗಳ ಜನಸಮುದಾಯಗಳಿಗೆ ಬೇಕಾದ ವಸ್ತುಗಳನ್ನು ಉತ್ಪಾದಿಸುವಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಶುಭ ಸಂಕೇತಗಳೆಂದು ಹೇಳುವ ಅನೇಕ ಮೂಢ ನಂಬಿಕೆಯ ವಸ್ತುಗಳನ್ನು ಮಧ್ಯಮವರ್ಗ ಮತ್ತು ಶ್ರೀಮಂತರ ಮನೆಗಳಲ್ಲಿ ಕಾಣಬಹುದು. ಇವುಗಳಲ್ಲಿ ಬಹುಪಾಲು ವಸ್ತುಗಳು ಕಮ್ಯೂನಿಸ್ಟ್ ಚೀನದಲ್ಲಿ ತಯಾರಾದುದೊಂದು ವಿಪರ್ಯಾಸ. ಅವರು ತಯಾರಿಸುವ ಆಮೆ, ಬಾಯಲ್ಲಿ ದುಡ್ಡು ಹಿಡಿದ ಕಪ್ಪೆ, ಸೌಭಾಗ್ಯದ ಲಕ್ಷಣವಾದ ಪುಟ್ಟ ಬೆತ್ತದ ಸಸಿ, ಹ್ಯಾಪಿ ಮ್ಯಾನ್ ಮುಂತಾದವು ಭಾರತೀಯ ಶ್ರೀಮಂತರು ಮತ್ತು ಮಧ್ಯಮವರ್ಗದವರ ಲಕ್ಷಾಂತರ ಮನೆಗಳೊಳಗೆ ಪ್ರವೇಶ ಪಡೆದಿವೆ. ಯಂತ್ರ-ತಂತ್ರ-ಮಂತ್ರ ಮತ್ತು ಜ್ಯೋತಿಷ ಶಾಸ್ತ್ರದ ಮೂಲಕ ಟಿ.ವಿ.ಗಳಲ್ಲಿ ಮೂಢನಂಬಿಕೆಗಳನ್ನು ಹಬ್ಬಿಸುವವರು ಮಾನಸಿಕ ಭಯೋತ್ಪಾದಕರ ಹಾಗೆ ಕಾಣುತ್ತಿದ್ದಾರೆ.

 ಆಧುನಿಕತೆ ಕಾಲಿಡುವ ಮೊದಲು ಭಾರತದ ಜಾತಿವ್ಯವಸ್ಥೆ ದೈಹಿಕವಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಅದು ಮಾನಸಿಕವಾಗಿ ಬೆಳೆಯುತ್ತದೆ ಎಂದು ಗುರುದೇವ ರಾನಡೆ ಅವರು ಸ್ವಾತಂತ್ರ್ಯ ಬರುವ ಕೆಲ ದಿನಗಳ ಮುಂಚೆ ಹೇಳಿದ್ದರು. ನಮ್ಮ ಟಿ.ವಿ.ಗಳು ಬಹುಪಾಲು ಸಮಯವನ್ನು ಮೂಢನಂಬಿಕೆ, ಸಂಪ್ರದಾಯ ಮತ್ತು ಕ್ರೈಂ ಸ್ಟೋರಿಗಳಿಗೆ ಮೀಸಲಿಟ್ಟಿವೆ. ಈ ಮೂಢನಂಬಿಕೆ ಮತ್ತು ಸಂಪ್ರದಾಯದ ದೃಶ್ಯಗಳು ನಮ್ಮ ಜನರನ್ನು ಹೆಚ್ಚು ಹೆಚ್ಚು ಮಾನಸಿಕವಾಗಿ ಜಾತಿವಾದಿಗಳನ್ನಾಗಿಸುತ್ತಿವೆ. ಭಾರತೀಯರನ್ನು ಮಾನಸಿಕ ಗುಲಾಮರನ್ನಾಗಿಸಲು ಸಾಮ್ರಾಜ್ಯಶಾಹಿಗಳು, ಕೋಮುವಾದಿ ಹಾಗೂ ಉಗ್ರವಾದಿಗಳು ಸತತ ಪ್ರಯತ್ನ ಮಾಡುತ್ತಿರುತ್ತಾರೆ. ಅವರ ಈ ಪ್ರಯತ್ನ ಸಾಮ್ರಾಜ್ಯಶಾಹಿಗಳಿಗೆ ಬಹಳ ಉಪಯೋಗವಾಗುತ್ತದೆ.

 ’ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಮಾತಿನಂತೆ, ಮನುಷ್ಯ ಜಾತಿ ಒಂದೇ ಸತ್ಯ ಎಂದು ತಿಳಿದು ಭಾರತೀಯರೆಲ್ಲ ಜಾತಿ ಮತಗಳನ್ನು ದೂರ ಸರಿಸಿ ಒಂದಾಗಬೇಕು. ಒಂದಾಗುವುದರ ಮೂಲಕ ದೇಶದ ನೆಲ, ಜಲ, ಪ್ರಾಣಿ, ಪಕ್ಷಿ, ಸಸ್ಯಸಂಕುಲ ಮತ್ತು ಮಾನವರ ಒಳಿತಿಗಾಗಿ ಕರ್ತವ್ಯ ನಿಭಾಯಿಸುವ ಕಡೆಗೆ ಗಮನ ಹರಿಸಬೇಕು. ದುಷ್ಟ ಶಕ್ತಿಗಳು ಜನರನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬೇರ್ಪಡಿಸಿ ಶೋಷಣೆ ಮಾಡುವ ತಂತ್ರಗಳನ್ನು ಅರಿತಾಗ ಮಾತ್ರ ಜನರು ಒಂದಾಗಿ ಬದುಕುತ್ತ ಎಲ್ಲ ಸವಾಲುಗಳನ್ನು ಎದುರಿಸಲು ಸಾಧ್ಯ.

 ಆಡುವುದು ಹಾಡುವುದು ಹೇಳುವುದು ಕೇಳುವುದು
ನಡೆವುದು ನುಡಿವುದು
ಸರಸ ಸಮ್ಮೇಳನವಾಗಿಪ್ಪುದಯ್ಯಾ ಶರಣರೊಡನೆ.
ಚೆನ್ನಮಲ್ಲಿಕಾರ್ಜುನಯ್ಯಾ ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಗಳ ಕಳೆವೆನು.
ಎಂದು ಅಕ್ಕ ಮಹಾದೇವಿ ಹೇಳುತ್ತಾಳೆ.

 ಮನುಷ್ಯರು ಹೇಗೆ ಶಾಂತಿಯುತ ಸಹಬಾಳ್ವೆ ಮಾಡಬೇಕೆಂಬುದನ್ನು ಈ ವಚನ ಸೂಚಿಸುತ್ತದೆ. ಆಡುವಿಕೆ, ಹಾಡುವಿಕೆ, ಹೇಳುವಿಕೆ, ಕೇಳುವಿಕೆ, ನಡೆಯುವಿಕೆ, ನುಡಿಯುವಿಕೆ, ಸರಸ ಸಮ್ಮೇಳನವಾಗಿರುವಿಕೆಯ ಕುರಿತು ಅಕ್ಕ ಹೇಳಿದ್ದಾಳೆ. ಈ ಭೂಮಿಯ ಮೇಲೆ ಇರುವ ವರೆಗೆ ಯಾರೊಡನೆ ಹೀಗೆ ಇರಬೇಕು? ಎಂಬ ಪ್ರಶ್ನೆಗೆ ಶರಣರೊಡನೆ ಹೀಗೆ ಇರಬೇಕು ಎಂಬುದು ಉತ್ತರವಾಗಿದೆ. ಸಕಲಜೀವಾತ್ಮರಿಗೆ ಲೇಸನು ಬಯಸುವವರೆಲ್ಲರೂ ಶರಣರು. ಅಂಥವರ ಸತ್ಸಂಗದಲ್ಲಿ ಮಾನವರು ಜೀವಜಾಲ ಸಮತೋಲನಕ್ಕೆ ಧಕ್ಕೆ ತರದೆ ಬದುಕುವಂಥ ಸಂಸ್ಕಾರವನ್ನು ಪಡೆಯುತ್ತಾರೆ. ಶರಣರು ಲಿಂಗಸುಖಿಗಳು. ಲಿಂಗಸುಖಿಗಳೆಂದರೆ ಎಲ್ಲ ಜೀವಸಂಕುಲದ ಪ್ರತಿಯೊಂದು ಜೀವಿಯ ಒಳಗೆ ದೇವರಿರುವನೆಂಬ ಅರಿವಿನೊಂದಿಗೆ ’ಯಾವುದೂ ನನ್ನದಲ್ಲ; ಎಲ್ಲವೂ ನಮ್ಮದು’ ಎಂದು ಭಾವಿಸಿ, ಯಾವುದಕ್ಕೂ ಸಮಸ್ಯೆ ಒಡ್ಡದಂತೆ ಕಾಯಕ ಮಾಡುತ್ತ ಬದುಕುವುದರಲ್ಲಿ ಸುಖ ಕಾಣುವವರು. ಅವರೇ ಶರಣರು. ಇಂಥ ಸುಖಿಗಳು ನಾವಾಗಬೇಕಾದರೆ ವಸ್ತುಮೋಹಕ್ಕೆ ಕಾರಣವಾಗುವ ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬರಬೇಕು.

 ಇಂದಿಗೆ ನಾಳಿಂಗೆ ಎನ್ನದೆ, ಬಂದ ತತ್ಕಾಲಕ್ಕೆ ಉಂಟು ಎಂದು ಹೇಳುತ್ತ, ವಸ್ತುಮೋಹದಿಂದ ದೂರ ಉಳಿಯುವ ಶಕ್ತಿಯನ್ನು ಕೊಡುವ ವಚನ ಸಾಹಿತ್ಯವೆಂದರೆ ವಚನ ಸಾಹಿತ್ಯ. ಇಡೀ ಜಗತ್ತನ್ನು ವಸ್ತುಮೋಹಕ್ಕೆ ಒಳಗಾಗುವಂತೆ ಮಾಡುವ ಜಾಗತೀಕರಣಕ್ಕೆ ವಚನ ಸಾಹಿತ್ಯ ಪ್ರಬಲ ಉತ್ತರವಾಗಿದೆ.

 ಎಲ್ಲ ಧರ್ಮ, ಸಿದ್ಧಾಂತ ಮತ್ತು ಜೀವನವಿಧಾನಗಳಲ್ಲಿನ ಒಳ್ಳೆಯದನ್ನು ಕ್ರೋಡೀಕರಿಸುತ್ತ ಮಾನವಧರ್ಮವಾಗಿಸಿ ಬದುಕುವುದರಲ್ಲೇ ನಿಜವಾದ ಆನಂದವಿದೆ. ಇಂದು ಉದಾತ್ತ ವಿಚಾರಗಳ ಜಾಗತೀಕರಣವಾಗಬೇಕಿದೆ. ಪಕ್ಷಿ, ಪ್ರಾಣಿ, ಮರ, ಗಿಡ, ಬಳ್ಳಿ ಮತ್ತು ಮಾನವ ಕುಲದ ಬಗ್ಗೆ ಕಾಳಜಿ ವಹಿಸುತ್ತ, ನೆಲ, ಜಲ, ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳುತ್ತ ಬದುಕುವ ಕಲೆಯನ್ನು ಕಲಿಯಬೇಕಾಗಿದೆ.

 ಒಂದು ಧರ್ಮದವರು ಇನ್ನೊಂದು ಧರ್ಮದಲ್ಲಿ ಲೋಪದೋಷಗಳಿವೆ ಎಂದು ಆರೋಪಿಸುತ್ತ ಹೋದಂತೆ, ಮಾನವ ಮಾನವರ ಮಧ್ಯೆ ದ್ವೇಷವೇ ಹರಡುತ್ತದೆ. ಆದರೆ ಎಲ್ಲ ಧರ್ಮಗಳ ಗ್ರಂಥಗಳನ್ನು ಓದುತ್ತ ಅವುಗಳೊಳಗಿನ ಜೀವನ ಮತ್ತು ನಿಸರ್ಗ ಪ್ರೀತಿಯನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಂಡು ಅದನ್ನೇ ಜನಸಮುದಾಯಗಳ ಮಧ್ಯೆ ಹಂಚುತ್ತ ’ಸರ್ವರಿಗಾಗಲಿ ಮಂಗಲ’ ಎಂದು ಹೇಳುತ್ತ ಹೋದರೆ ದೇಶದೊಳಗಿನ ಆಂತರಿಕ ಹಿಂಸೆ, ಲೂಟಿ ಮತ್ತು ಕೊಲೆ ಸುಲಿಗೆಗಳು ನಿರ್ನಾಮವಾಗುತ್ತವೆ. ಆಗ ದೇಶದ ಸ್ಥಿತಿಗತಿಗಳ ಕಡೆಗೆ ಲಕ್ಷ ಕೊಟ್ಟು ಸರ್ವೋದಯದ ಪ್ರಜ್ಞೆಯಿಂದ ಒಂದಾಗಿ ದುಡಿದಾಗ ನೆಮ್ಮದಿಯ ಬದುಕು ನಿರ್ಮಾಣವಾಗುತ್ತದೆ.

 ಹೀಗೆ ನಾವು ಬದಲಾದಾಗ ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚುವುದನ್ನು ಕಲಿಯುತ್ತೇವೆ. ಇಂಥ ಮನಸ್ಥಿತಿಯ ಮೂಲಕ ಮಾರುಕಟ್ಟೆಯ ಜಾಗತೀಕರಣದಿಂದ ಮೌಲ್ಯಗಳ ಜಾಗತೀಕರಣದ ಕಡೆಗೆ ಸಾಗುತ್ತೇವೆ. ಆಗ ’ಮೇಕ್ ಇನ್ ಇಂಡಿಯಾ’ದ ಪ್ರಶ್ನೆಯೂ ಬರುವುದಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳನ್ನು ಆಹ್ವಾನಿಸುತ್ತ ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸುಲಿಗೆಗೆ ಅವಕಾಶ ಕಲ್ಪಿಸುವ ಅನಿವಾರ್ಯತೆಯೂ ಬರುವುದಿಲ್ಲ. ಆದ್ದರಿಂದ ಸೃಜನಶೀಲ ಸಾಹಿತ್ಯದಲ್ಲಿ ಮತ್ತು ಧಾರ್ಮಿಕ ಸಾಹಿತ್ಯದಲ್ಲಿ ಇಂಥ ಮನಸ್ಥಿತಿಯನ್ನು ಸೃಷ್ಟಿಸುವ ಅಂಶಗಳ ಕಡೆಗೆ ಗಮನ ಹರಿಸಬೇಕಿದೆ ಮತ್ತು ಅಸಹಿಷ್ಣುತೆಯನ್ನು ನಿವಾರಿಸುವ ಸಾಹಿತ್ಯ ರಚನೆಯ ಕಡೆಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕಿದೆ.
***
                                                                                                                                                 ರಂಜಾನ್ ದರ್ಗಾ
                                                                                                                                            ಸಿದ್ಧಾರೂಢ ಕಾಲನಿ
                                                                                                                                                        ಮದಿಹಾಳ
                                                                                                                                  ಧಾರವಾಡ- ೫೮೦ ೦೦೬
                                                                                                                        ಮೊಬೈಲ್: ೯೨೪೨೪೭೦೩೮೪No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...