Saturday, February 13, 2016

ಮೂರು ಪ್ರೇಮ ಕವಿತೆಗಳು



ಪ್ರೀತಿ

ಪ್ರೀತಿ!
ಸದ್ದಿಲ್ಲದೆ ಹುಟ್ಟುತ್ತದಂತೆ!
ವಿನಾಕಾರಣ ಬೆಳೆಯುತ್ತದಂತೆ!
ಪ್ರೀತಿ ಕುರುಡಂತೆ ಹಾಗಂತೆ ಹೀಗಂತೆ!!
ನಾನೆಂತೂ ಕಂಡಿದ್ದೇನೆ
ಹುಟ್ಟುತ್ತಲೇ ಪ್ರೀತಿ ಸದ್ದು ಮಾಡಿದ್ದನ್ನು
ಸಕಾರಣವಾಗಿ ಬೆಳೆದು ಹಬ್ಬಿದ್ದನ್ನು
ಕಂಡರೂ ಕಾಣದಂತಿರುವುದನು!
ಪ್ರೀತಿಯಿಲ್ಲದ ಮೇಲೆ ಮಾತಿಲ್ಲವಂತೆ!?
ಕೇಳಿದ್ದೇನೆ ಪ್ರತಿದಿನ ಯಾತರಾದರೂ ನೆಪ
ಕೈಯಲ್ಲೊಂದು ಫೋನು ಇದ್ದರೆ ಸಾಕು
ಬೈದಾದರೂ ತೀರಿಸಿಕೊಳ್ಳುವ ಚಟ
ಕೇಳಿದ್ದೇನೆ ಸಾವಿರ ಬಾರಿ
ಪ್ರೀತಿಯೆಂದರೆ ಹೆಣ್ಣು-ಗಂಡಿಗೆ ಸೀಮಿತವಲ್ಲ
ಕಾಣುತ್ತಿದ್ದೇನೆ ಪ್ರತಿ ನಿತ್ಯ
ಸೂರಿಲ್ಲದ ಹಸುಳೆಗಳು, ಅಪ್ಪ, ಅಮ್ಮಂದಿರು
ಕಸದ ತೊಟ್ಟಿಯಲ್ಲಿ, ಬಟಾಬಯಲಿನಲ್ಲಿ
ದಿಕ್ಕೆಟ್ಟು ನಿಂತಿರುವುದನು
ಪ್ರೀತಿಸಲೂ ಒಂದು ದಿನವಂತೆ
ಗುಲಾಬಿ ಹೂಗಳ, ಪ್ರೇಮಪತ್ರಗಳ ಜಾತ್ರೆ
ಮುಳ್ಳ ಮುಚ್ಚಿಟ್ಟು ಎಳಸು ಹೂಗಳಂತೆ
ಮೆರೆದಿದ್ದೇ ಬಂತು ಹೊಸ ಬಟ್ಟೆ ತೊಟ್ಟು
ಪ್ರೀತಿಗೆ ಸೋಲಿಲ್ಲವಂತೆ!
ಸದ್ದಾದ ಪ್ರೀತಿ, ಸಕಾರಣ ಬೆಳೆದು
ಕಂಡೂ ಕಾಣದಂತೆ ಆದೀತೆ?
ಪ್ರತಿ ಜೀವಿಯ ಎದೆಯಾಳದಿ
ವ್ಯಷ್ಟಿಯಿಂ ಸಮಷ್ಟಿಯೆಡೆ ಬೆಳೇದೀತೆ?
ಆಗ ಮಾತ್ರ ಕಾಣುತ್ತೇನೆ
ಪ್ರೀತಿ ಗೆಲ್ಲುತ್ತದೆ!!

 - ಶೀಲಾ ಭಟ್


 


ಪ್ರೇಮದ ಹೂ 

 
ಅರಿವಿನ ಮೂರ್ತ ರೂಮಿ ಅಮೂರ್ತ ಶಂಸ್
ದೇಹ ಅಲ್ಲಮ ಆತ್ಮ ಗುಹೇಶ್ವರ
ಕಾಣುವ ಹೂ ಅಕ್ಕ ಕಾಣದ ಗಂಧ ಚೆನ್ನ
ಹೀಗೆ ಮೂರ್ತ ಅಮೂರ್ತಗಳ ಮಿಲನ
ಗುರುವಿಲ್ಲದ ಶಿಷ್ಯನಿಲ್ಲದ
ಹಾದಿಯೇ ಇಲ್ಲದ ನಡುಗೆ

ಸ್ಥಾವರ ಗಿಡದ ಮೇಲೆ
ಜಂಗಮ ಹಕ್ಕಿಯ ಸರಸ
ಬೆಟ್ಟ ಸುತ್ತುವ ಗಾಳಿ
ಅಲಗುವ ಎಲೆಗಳ ಚಿನ್ನಾಟ
ತೈಲ ಬತ್ತಿ
ಕಿಡಿ ತಾಗಿದರೆ
ಬೆಳಕಿನ ಹೊಸ ಮುಖ

ನಿಷ್ಠೆಯ ಮಾತು ಮರೆತು ಬಿಡು
ನಿಯತ್ತು ನಿಭಾವಣೆ
ನಿಷ್ಠೆಗಳೆಲ್ಲ ಖಾಲೀ ಡಬ್ಬಗಳು
ಅರಿವಿನ ಕೂಡಿಕೆಯಾದರೆ
ಮರಳುಗಾಡಿನಲ್ಲೂ
ಅರಳಿಯೇ ತೀರುತ್ತದೆ ಪ್ರೇಮದ ಹೂ  


-ಬಸೂ




ಯಾಕೆ?

ಯಾಕೆ ಸ್ವಲ್ಪ ಪ್ರೀತಿ ಬೆಳೆಸಿಕೊಳ್ಳಬಾರದು?
ಒಂದಿಷ್ಟು ಕರುಣೆ ಆವಾಹಿಸಿಕೊಳ್ಳಬಾರದು?
ಯಾಕೆ  ಅಂತ:ಕರಣದ ಮಾತು ಕೇಳಿಸಿಕೊಳ್ಳಬಾರದು?
ಯಾಕೆ ಹಾಲುಗಲ್ಲದ ಹಸುಳೆಯ ಅಳುವ ಆಲಿಸಬಾರದು?
ಬದಿಗಿಟ್ಟು ಬಂದೂಕು ಬಾಂಬುಗಳ ಸದ್ದನು
ಕೇಳಿಸಿಕೊಳ್ಳಬಾರದೇಕೆ ಹೃದಯಗಳ ಬಡಿತವ
ಕಾಣಿಸುತಿಲ್ಲವೇ ಮನುಕುಲದ ಅಂತ್ಯದ ಚಿತ್ರ
ಕೇಳಿಸುತಿಲ್ಲವೇ  ಅಂತ್ಯಕಾಲದ ಆಕ್ರಂದನದ ಚೀತ್ಕಾರ
ಯಾಕೆ? ಯಾಕೆ? ಯಾಕಿಂತಹ ದ್ವೇಷಾಗ್ನಿಯ ಆರಾಧನೆ
ಯಾವ ಪುರುಷಾರ್ಥಕ್ಕಿಂತಹ ಹಟಸಾಧನೆ!
***

ಕು.ಸ.ಮಧುಸೂದನರಂಗೇನಹಳ್ಳಿ



1 comment:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...