Thursday, February 18, 2016

ಅಭಿಸಾರಿಕೆಯೊಂದಿಗೆ ಪರಿಪ್ರೇಕ್ಷಣೆಯ ಪಯಣ..


ಸುಧಾ ಚಿದಾನಂದಗೌಡ
ಮನಸು ಅಭಿಸಾರಿಕೆ..

ಚಪ್ಪರಿಸಿಕೊಂಡು ಉಚ್ಛರಿಸಬಹುದಾದ ಶೀರ್ಷಿಕೆ ಇದು.

ಅಭಿಸಾರಿಕೆ ಎಂದರೆ ದೇವಲೋಕದ ಅಪ್ಸರೆಯೆಂದು ಜ್ಞಾನಕೋಶವೂ, ಚಂಚಲೆಯೆಂದು ಸಾಮಾನ್ಯ ಪದಕೋಶವೂ, ನಲ್ಲನನ್ನು ಕಾಣಲು ಹೊರಟ ಹೆಣ್ಣೆಂದು ಅಂತರ್ಜಾಲವೂ ಅರ್ಥ ಹೇಳುತ್ತದೆ. ಈ ಕಥೆಯ ನಾಯಕಿ ಇದೆಲ್ಲವೂ ಹೌದು.
ಪದಬಳಕೆಯ ಸೊಗಸುಗಾರಿಕೆಯಷ್ಟೇ ಅಲ್ಲ, ಆಂತರಿಕವಾಗಿಯೂ ಗಾಢವಾದ ಸತ್ಯವೊಂದನ್ನು ಗಟ್ಟಿತನದಿಂದ, ಪ್ರಾಮಾಣಿಕತೆಯಿಂದ ನಿರೂಪಿಸುವ ಅಂತಃಸತ್ವ ಈ ಒಂದು ಕಥೆಗಿದೆ. ಮಯೂರದಲ್ಲಿ ಪ್ರಥಮ ಪ್ರಕಟಣೆ ಕಂಡಿರುವ ಈ ಕಥೆ ಸತ್ಯಗಳನ್ನು ಒಪ್ಪಿಕೊಳ್ಳುವ, ಹುಸಿ ಭಾವುಕತೆ, ಪೊಳ್ಳು ಆದರ್ಶ, ತೋರಿಕೆಯ ಸೋಗಲಾಡಿತನ ಇದಾವುದೂ ಇಲ್ಲದೆ ಹೆಣ್ಣುಗಂಡಿನ ಸಂಬಂಧಗಳನ್ನು ದೌರ್ಬಲ್ಯದ ಸಮೇತ ತೆರೆದಿಡುವ ದಿಟ್ಟ ಕಥೆ. ಸಮಾಜ ಹೆಣ್ಣಿಗೆ ಯಾವ್ಯಾವ ಗುಣಸ್ವಭಾವಗಳನ್ನು ಆರೋಪಿಸಿದೆಯೋ ಅವುಗಳನ್ನು ಮೀರಿದ್ದೊಂದು ವಾಸ್ತವದ ಪರಿಪ್ರೇಕ್ಷಣೆ ಆಕೆಗಿದೆ ಮತ್ತು ಅದನ್ನು ಮೊದಲು ತಾನೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯ ಭಾರವನ್ನು ಈ ಹೊತ್ತಿನ ಸ್ತ್ರೀಸಮುದಾಯ ಹೊರಬೇಕಿದೆ. ಇದನ್ನು ಎಷ್ಟು ಚೆನ್ನಾಗಿ ಶಾಂತಿಯವರು ಮಂಡಿಸುತ್ತಾರೆಂದರೆ ಈ ಭಾರ ಹೊರುವುದು ಕಷ್ಟವೇನಲ್ಲ, ಭರಿಸಬಹುದು ಎಂಬುದೊಂದು ಆತ್ಮವಿಶ್ವಾಸವನ್ನು ಹೆಣ್ಣುಮಕ್ಕಳಲ್ಲೂ, ಹೀಗಿರುವ ವಾಸ್ತವವನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ ಬಿಡು ಎಂಬ ಭಾವನೆಯನ್ನು ಗಂಡಸರಲ್ಲೂ ಏಕಕಾಲದಲ್ಲಿ ಈ ಕಥೆ ಉಂಟುಮಾಡುತ್ತದೆ ಮತ್ತು ಆ ಮೂಲಕ ಸೂಕ್ಷ್ಮವಾದ, ಮಹತ್ವವಾದ ಬದಲಾವಣೆಯನ್ನು ಯಾವ ಘೋಷಣೆಯಿಲ್ಲದೆ, ಸ್ಲೋಗನ್ ಇಲ್ಲದೆ, ಅಬ್ಬರದ ಹಾವಳಿಯಿಲ್ಲದೆ, ಇಸಂಗಳ ಹಂಗಿಲ್ಲದೆ ಸಹಜವೆಂಬಂತೆ ಮಾಡುತ್ತದೆ. ಖಾಸಗಿತನವು ಸಮುದಾಯಿಕವೂ ಆಗುವ ರೀತಿ ಹೀಗೆ ಎಂದು ತೋರುತ್ತದೆ.

ಪಯಣ ಎಂಬುದು ಶಾಂತಿಯವರ ಮತ್ತೊಂದು ಗಾಢಕಥೆ. ಇದಕ್ಕೆ ವರ್ತಮಾನ.ಕಾಮ್ ಕಥಾಸ್ಫರ್ಧೆಯ ಪ್ರಥಮ ಬಹುಮಾನವೂ ಬಂದಿದೆ. ರೈಲೊಂದರಲ್ಲಿ ಕುಳಿತು ಪಯಣ ಹೊರಟಿರುವ ಕಥಾನಾಯಕಿಯ ಒಳತೋಟಿ ನವಿರುಭಾವುಕತೆಯ ಪ್ರೀತಿಯಲ್ಲಿ, ಆದರೆ ಆ ಪ್ರೀತಿಗಿರುವ ಮಿತಿಯನ್ನು ಕೂಡಾ ಸ್ವೀಕರಿಸುವುದರೊಂದಿಗೆ ಒಂದುಬಗೆಯ ಯಾತನಾಮಯ ಸುಖದಲ್ಲಿ ಕೊನೆಗೊಳ್ಳುತ್ತದೆ. ಸಾಮಾಜಿಕ ಚೌಕಟ್ಟಿನ ಮಿತಿ ನಿಜಕ್ಕೂ ಮಿತಿಯೇ ಅಲ್ಲ. ಪ್ರೀತಿಯ ತಾದಾತ್ಮ್ಯತೆ ಎಲ್ಲ ಮಿತಿಗಳನ್ನೂ ಮೀರಿದ್ದು ಮತ್ತು ಅದು ಹೆಣ್ಣಿಗೆ ಕೊಡುವ ಮಾನಸಿಕ ಸಂತೃಪ್ತಿ, ದಾಂಪತ್ಯದ ಚೌಕಟ್ಟಿನೊಳಗಿನ ದುಗುಡಕ್ಕೊಂದು ಸುಂದರ ಹೊರದಾರಿಯಂತೆ ತೆರೆದುಕೊಳ್ಳುತ್ತದೆ. ಹೊಸಶಕ್ತಿಯನ್ನೂ ಅವಳಲ್ಲಿ ತುಂಬುತ್ತದೆ. ಮುರಿದು ಹೋಗಬಹುದಾದೊಂದು ದಾಂಪತ್ಯಕ್ಕೆ ಹೊಸಭಾಷ್ಯೆಯೊಂದರ ಸಾಧ್ಯತೆಯಿದೆಯೆಂದು ನಿರೂಪಿಸುತ್ತದೆ. ತುಂಬದಿನ ನೆನಪಿನಲ್ಲುಳಿಯುವ ಕಥೆ ಇದು.

ಶಾಂತಿಯವರಿಗೆ ಲೋಕದ ಕಾಳಜಿಯೂ ಇದೆ ಮತ್ತು ಈ ಕಾಳಜಿ ವೈಯಕ್ತಿಕತುರ್ತನ್ನು ಅವಲಂಬಿಸಿದೆ ಎಂದವರು ನಂಬಿದ್ದಾರೆ. ಅದಕ್ಕೆ ಸಾಕ್ಷಿ ಬಾಹುಗಳು. ಈ ಕಥೆ ಕನ್ನಡದ ಪ್ರತಿಷ್ಠಿತ ಪ್ರಜಾವಾಣಿ ದೀಪಾವಳಿ ಕಥಾಸ್ಫರ್ಧೆಯ ಪ್ರಥಮವೂ ಆಗಿದೆ. ಆಫೀಸ್ ಎಂಬ ನೆರಳುಬೆಳಕಿನಾಟದ ಅಂಗಳದಲ್ಲಿ ಗಂಡಸೆಂದರೆ ದುಡ್ಡು, ಹೆಂಗಸೆಂದರೆ ಹಾಸಿಗೆ ಎಂಬ ಅಸಹ್ಯದ ಸತ್ಯವನ್ನೂ ಒಪ್ಪಿಕೊಳ್ಳುವ, ಹೇಗೋ ಒಟ್ಟಾರೆ ಬದುಕಬೇಕೆನ್ನುವ ಕಥಾನಾಯಕಿ ಆದರ್ಶದ ಭವ್ಯಕನಸಿನ ದಾರಿಯಲ್ಲಿರುವ ನಾಯಕನಿಗೆ ಲಾಯಕ್ಕಾದವಳೋ ಅಲ್ಲವೋ ಎಂಬುದು ಎಷ್ಟು ಮುಖ್ಯವೋ, ಇಂಥಾ ವ್ಯಕ್ತಿಗಳು ಅವರ ಲಿಂಗಕ್ಕೆ ಹೊರತಾಗಿಯೂ ಸಮಾಜದಲ್ಲಿರಲು ಲಾಯಕ್ಕಾದವರು ಹೌದೋ ಅಲ್ಲವೋ ಎಂಬುದೂ ಅಷ್ಟೇ ಮುಖ್ಯವಾದ, ದುಃಖದಾಯಕವಾದ ಪ್ರಶ್ನೆ. ಈ ಹೊತ್ತಿನ ಬದುಕಿನಲ್ಲಿ ಸಮಾಜದ ನೈತಿಕತೆಯು ಆಧುನಿಕತೆಯ ಹೊಡೆತಕ್ಕೆ ಸಿಕ್ಕಿ, ವ್ಯವಸ್ಥೆಯು ಜೀವದಾಯಿನಿಯಾದ ಗಂಗಾಜಲವಾಗದೆ ಕೊಳೆತ ಶವಗಳು ತೇಲುವ ಕಲುಷಿತ ಪ್ರವಾಹವಾಗುತ್ತಿರುವ ದುರಂತವನ್ನು ಸೊಗಸಾದ ನಿರೂಪಣೆ, ಬಣ್ಣನೆಯೊಡನೆ ಹೆಣೆದಿರುವ ತುಂಬ ಮೌಲ್ಯಯುತ ಕಥೆ...ಇಂಥಹಾ ೧೪ ಸೊಗಸಾದ ಕಥೆಗಳನ್ನು ಶಾಂತಿ ಓದಲು ಕೊಟ್ಟಿದ್ದಾರೆ ನಮಗೆ.

ಅಚ್ಚರಿಯಾಗುತ್ತದೆ, ಜೊತೆಗೆ ಸಮಾಧಾನ ಕೂಡ. ಅನೈತಿಕತೆಯ ಧಾಳಿ, ಧಾವಂತದ ಸುಳ್ಳುತನ  ಯಾವ ಕ್ಷೇತ್ರದನ್ನೂ ಬಿಡದಿರುವ, ಸೂಕ್ಷ್ಮಜ್ಞತೆಯನ್ನು ನುಂಗಿ ನೊಣೆಯುತ್ತಿರುವ ಈ ದಿನಗಳಲ್ಲಿ ಮೌಲ್ಯಗಳ ಕುರಿತು ಚಿಂತಿಸುತ್ತಾ, ಸ್ವಚ್ಛಕನ್ನಡದಲ್ಲಿ ದೀರ್ಘವಾದ, ಹೊಸತನದ ನಿರೂಪಣೆ ನೀಡಬಲ್ಲ ಗಟ್ಟಿ ಕಥೆಗಾರ್ತಿಯರು ಬೆಳಕಿಗೆ ಬರುತ್ತಿದ್ದಾರೆ ಎಂದು.
ನನ್ನ ಜಿಲ್ಲೆಯವರೇ ಆದ ವಸುಧೇಂದ್ರರ ಮನೀಷೆಯ ಕಥೆಗಳು ನನ್ನ ಚಿಟಟ ಣime ಜಿಚಿvoಡಿiಣe ಎನ್ನಲಡ್ಡಿಯಿಲ್ಲ. ಉಳಿದಂತೆ ವಿವಾದಗಳೇನೇ ಇರಲಿ, ಕೆಲಪ್ರಬಂಧ ಮತ್ತು ಕಥೆಗಳಲ್ಲಿ ವಸುಧೇಂದ್ರರ ಸಾಮುದಾಯಿಕ ನೋವು ನೂರು ಕನ್ನಡಿಗಳಲ್ಲಿ ಪ್ರತಿಫಲಿಸಿದೆ ಎಂಬುದು ಸತ್ಯ.  ಛಂದ ಪುಸ್ತಕ ಬಹುಮಾನ ನೀಡುವ ಮೂಲಕ ವಿನಯಾ ಒಕ್ಕುಂದ, ಸುನಂದಾ ಕಡಮೆಯವರಂಥಾ ಕಥೆಗಾರ್ತಿಯರನ್ನು ಗುರುತಿಸಿದವರು. ಇದೀಗ ಮನಸು ಅಭಿಸಾರಿಕೆ ಸಹಾ ಅಂಥದ್ದೊಂದು ಅರ್ಹವಾದ ಆಯ್ಕೆ. ಛಂದ ಪುಸ್ತಕ ಬಹುಮಾನಿತವಾದ ಈ ಪುಸ್ತಕ  ಫೆಬ್ರುವರಿ ೧೪ರಂದು  ಬಿಡುಗಡೆಯಾಗಿದೆ.

ಕನ್ನಡ ಕಥಾಲೋಕದ ನಾಳೆಗಳಲ್ಲಿ ತುಂಬ ನಿರೀಕ್ಷೆ ಹುಟ್ಟಿಸಿರುವ ಕಥಾಸಂಕಲನ ಇದು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...