Thursday, February 11, 2016

ಯು ಆರ್ ಎಂಬ ನೀವು ; ಪುಸ್ತಕದ ಎಸ್.ಆರ್. ವಿಜಯಶಂಕರ ಮುನ್ನುಡಿ

ಸಾವಿನ ಜೊತೆ ಈ ಲೋಕ ಏನು?


ಶೂದ್ರ ಶ್ರೀನಿವಾಸ ಅವರಿಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮುಖ್ಯರೊಡನೆ ಇರುವ ಆಪ್ತ ನಂಟು ಎಲ್ಲರಿಗೂ ತಿಳಿದಿರುವ ವಿಚಾರ. ಯು.ಆರ್. ಅನಂತಮೂರ್ತಿ ಹಾಗೂ ಪಿ.ಲಂಕೇಶ್ ಇವರಿಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯಗಳಿದ್ದಾಗಲೂ ಶೂದ್ರ ಶ್ರೀನಿವಾಸ ಇಬ್ಬರೊಡನೆಯೂ ಆಪ್ತವಾಗಿ ನಡೆದುಕೊಂಡವರು. ಶ್ರೀನಿವಾಸರ ವಿಚಾರ ಪರಿಭಾವನೆಗಳಲ್ಲಿ ಸಾಹಿತ್ಯದ ಓದಿನೊಡನೆ ಆ ಲೇಖಕರ ಅಥವಾ ಅವರ ಬಳಗದವರೊಡನೆ ಇದ್ದ ಆಪ್ತತೆಯಿಂದ ತಿಳಿದ ವಿಚಾರಗಳೂ ಸೇರಿರುತ್ತವೆ. ಆದ್ದರಿಂದ ಶೂದ್ರ ಶ್ರೀನಿವಾಸ ಸಮಕಾಲೀನ ಸಾಹಿತ್ಯದ ಬಗ್ಗೆ ಬರೆಯುವಾಗ ಕೃತಿ ಹಾಗೂ ಕೃತಿಕಾರ ಇಬ್ಬರೂ ಸೇರಿದ ವಿಚಾರ ಹಾಗೂ ವಿಮರ್ಶೆಗಳಿರುತ್ತವೆ. ಹಾಗಾಗಿ ವಿಚಾರ ಮತ್ತು ವ್ಯಕ್ತಿ ಕಥನಗಳಿಂದ ಪಡೆವ ವಿವರಗಳು ಸಮಕಾಲೀನ ಸಂದರ್ಭಗಳು ನಮ್ಮ ಎದುರು ನಡೆಯುವಂತೆ ನಿರೂಪಣೆ ನಿರ್ಮಾಣವಾಗುತ್ತದೆ. ಇದು ಶೂದ್ರ ಶ್ರೀನಿವಾಸ ತಮ್ಮ ಕಾಲದ ವರ್ತಮಾನವನ್ನು ಸಾಹಿತ್ಯ ಚರಿತ್ರೆಗೆ ಸೇರಿಸುವ ಕ್ರಮ.


ಶೂದ್ರ ಶ್ರೀನಿವಾಸ ಅವರಿಗೆ ಯು.ಆರ್. ಅನಂತಮೂರ್ತಿ ಅವರೊಡನೆ ಇದ್ದ ಆಪ್ತ ಸಂಬಂಧ ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತರು ಮಾಲಿಕೆಯಲ್ಲಿ ಬರೆದ ಯು.ಆರ್. ಅನಂತಮೂರ್ತಿ ಒಂದು ಆಪ್ತ ಓದು ಎಂಬ ಕೃತಿ ಸಾದರಪಡಿಸುತ್ತದೆ. ಅದರಲ್ಲಿ ಶೂದ್ರ ಅವರ ಅನಂತಮೂರ್ತಿ ಅಧ್ಯಯನ ಹಾಗೂ ಅವರೊಡನಿದ್ದ ಒಡನಾಟ ಎರಡೂ ಮಿಳಿತವಾದ ಚಿತ್ರಣ ಇದೆ.

ಅದು ಅನಂತಮೂರ್ತಿಯವರು ಬದುಕಿರುವಾಗಲೇ ೨೦೧೧ರಲ್ಲಿ ಪ್ರಕಟವಾದ ಪುಸ್ತಕ. ಈಗ ಹೊರಬರುತ್ತಿರುವ ’ಯು.ಆರ್. ಎಂಬ ನೀವು’ ಎಂಬ ಸಮುಚ್ಚಯ ಅನಂತಮೂರ್ತಿಯವರು ತೀರಿಕೊಂಡ ಸಂದರ್ಭದಲ್ಲಿ ೨೦೧೪ರಲ್ಲಿ ಬರೆದ ಲೇಖನಗಳು. ಅವುಗಳು ಅಂಕಣ ರೂಪದಲ್ಲಿ ಪ್ರತಿ ವಾರ ಪ್ರಕಟವಾದರೂ ಅದು ಅನಂತಮೂರ್ತಿ ಯವರು ಇಲ್ಲ ಎಂದಾದಾಗ ಉಂಟಾದ ಮಾನಸಿಕ ಶೂನ್ಯದ ಅನುಭವವನ್ನು ಆ ಮೂಲಕ ತನ್ನೊಳಗೇ ಅನುಭವಿಸಿದ ನೋವನ್ನು ಅರಿಯಲು ಮಾಡಿದ ಪ್ರಯತ್ನ. ಬರವಣಿಗೆ ಮೂಲಕ ಮನಸ್ಸಿನ ಮೂಕ ನೋವನ್ನು ಅರ್ಥ ಮಾಡಿಕೊಂಡು ಅಲ್ಲಿಂದ ಬಿಡುಗಡೆ ಪಡೆಯಲು ತೊಡಗಿದ ಅಂತರಂಗ ಲೋಕವನ್ನು ಇತರ ಓದುಗರೊಡನೆ ಹಂಚಿಕೊಂಡ ಕ್ರಮ.

ಸಾವಿನ ಜೊತೆ ಈ ಲೋಕ ಏನು? ಎಂಬುದರ ಬಗೆಗಿನ ವೈರಾಗ್ಯ ಮೂಲದ ವಿಚಾರವೊಂದು ಹರಿದು ಬರುತ್ತದೆ. ಅಂತಹ ಕ್ಷಣಗಳಲ್ಲಿ ಆತಂಕಕ್ಕೊಳಗಾದ ಮನಸ್ಸು ತತ್ವ ಶಾಸ್ತ್ರೀಯ ನೆಲೆಗಳಲ್ಲಿ ತೊಳಲಾಡುತ್ತಿರುತ್ತದೆ. ಇಂತಹ ಕ್ಷಣಗಳಲ್ಲಿ ಶೂದ್ರ ಅವರಿಗೆ ’ದಾವ್ ದ ಜಿಂಗ್’ ಫಿಲಾಸಫಿ ಒದಗಿ ಬಂದಿದೆ. ಅನಂತಮೂರ್ತಿ ಅವರು ತೀರಿಕೊಂಡ ಸಂದರ್ಭದಲ್ಲಿ ಅನಂತಮೂರ್ತಿಯವರೇ ಅನುವಾದಿಸಿದ್ದ ಕೃತಿಯೊಂದು ಸಾವಿನ ತಾತ್ವಿಕತೆ ಮೂಲಕ ಈ ಜಗತ್ತನ್ನು ಮತ್ತು ಅನಂತಮೂರ್ತಿಯವರ ಚಿಂತನೆ, ವ್ಯಕ್ತಿತ್ವ ಹಾಗೂ ವಿಚಾರಗಳನ್ನು ಒಟ್ಟಾಗಿ ಅರಿಯಲು ಬಂತು.
ಲಾವತ್ಸು ವಿರಚಿತ ದಾವ್ ದ ಜಿಂಗ್ (ಪಥ ಧರ್ಮ ಸೂತ್ರ) ಎಂಬ ಅನಂತಮೂರ್ತಿಯವರ ಅನುವಾದ ಅಕ್ಷರ ಚಿಂತನ ಮಾಲಿಕೆಯಲ್ಲಿ ಮೊದಲಿಗೆ ಪ್ರಕಟವಾಯಿತು.

ಅನಂತಮೂರ್ತಿಯವರ ಪೂರ್ವ ಪಶ್ಚಿಮಗಳ ಅರಿವಿನ ಹಿಂದೆ ಒಂದು ಗ್ರಹೀತವಿದೆ. ಅವರ ಪ್ರಕಾರ ಐರೋಪ್ಯ ವಿದ್ವಾಂಸರು ಬಹುಶ್ರುತರು, ಉತ್ತಮ ಶೋಧಕರು. ಆದರೆ ಐರೋಪ್ಯ ಮನಸ್ಸಿಗೆ ಏಷ್ಯಾದ ಚಿಂತನಕ್ರಮ ಅರ್ಥವಾಗುವುದಿಲ್ಲ, ಭಾವುಕರಾಗಿ ಅವರು ಒಲಿದಾಗಲೂ ಶಾಸ್ತ್ರೀಯವಾಗಿ ಅವರು ಒಲಿಯಲಾರರು. ಅವರು ಏಷ್ಯಾದ ಅನುಭಾವವನ್ನು ಪರಿಶುದ್ಧ ಸ್ಥಿತಿಯಲ್ಲಿ ಕಾಣಲು ಆಸೆಪಡುತ್ತಾರೆ. ಅನುಭಾವ ಹಾಗೂ ಲೌಕಿಕ ಒಟ್ಟಿಗೆ ಇರುವ ಕಲ್ಪನೆ ಏನೆಂದು ಅವರ ಅರಿವಿಗೆ ದಕ್ಕುವುದಿಲ್ಲ. ಆದರೆ ಅನಂತಮೂರ್ತಿ ಯವರು ಗ್ರಹಿಸುವಂತೆ ಏಷ್ಯಾದಲ್ಲಿ ಇವೆರಡೂ ಒಟ್ಟಿಗೆ ಸೇರಬಲ್ಲದು. ವ್ಯಾವಹಾರಿಕ ಬದುಕು ಮತ್ತು ಆಧ್ಯಾತ್ಮಿಕವಾದ ಪರಮ ಸತ್ಯ ನಮ್ಮ ಅತ್ಯುತ್ತಮ ಅನುಭಾವಿಗಳಿಗೆ ಬೇರೆ ಬೇರೆ ಅಲ್ಲ.

ಈ ಲೌಕಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಸಾವಿನ ಸಂದರ್ಭ ಒಟ್ಟಿಗೆ ನೋಡುವಂತೆ ಪ್ರೇರೇಪಿಸುತ್ತದೆ. ಶೂದ್ರ ಶ್ರೀನಿವಾಸ ಅನಂತಮೂರ್ತಿಯವರು ತೀರಿಕೊಂಡ ಸಂದರ್ಭದಲ್ಲಿ ಬರೆದ ಬರಹಗಳಲ್ಲಿ ಹೀಗೆ ಪುನರಪಿ ದಾವ್ ದ ಜಿಂಗ್ ಅನ್ನು ನೆನಪಿಸಿಕೊಳ್ಳಲು ಅನಂತಮೂರ್ತಿಯವರು ಲೌಕಿಕ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ನಮ್ಮ ಸಂದರ್ಭದಲ್ಲಿ ಒಟ್ಟಾಗಿ ಚಿಂತಿಸಿ ಬದುಕಿನ ಸತ್ಯವನ್ನು ಕಾಣಲು ಮಾಡಿದ ಪ್ರಯತ್ನ ಪ್ರೇರಣೆ ನೀಡಿರಲೂಬಹುದು.

ದಾವ್ ದ ಜಿಂಗ್‌ನ ಒಂದು ಅನುವಾದ ನೋಡಿ:
ನಿನ್ನ ಬಟ್ಟಲನ್ನು ಅಂಚಿನ ತನಕ ತುಂಬಕ್ಕೆ ಆಸೆಪಟ್ಟರೆ
ತುಳುಕಿ ಚೆಲ್ಲುತ್ತೆ
ನಿನ್ನ ಚಾಕನ್ನು ತೀರ ಹರಿತ ಮಾಡಕ್ಕೆ ಹೋದರೆ
ಸವೆದು ಬಡ್ಡಾಗುತ್ತೆ
ವಜ್ರ ವೈಢೂರ್ಯಗಳು ನಿನ್ನ ನಿವಾಸದಲ್ಲಿ ಚೆಲ್ಲಾಡಿದರೆ
ಕಳ್ಳರ ಭಯ ಕಾಡುತ್ತೆ
ಐಶ್ವರ್ಯ ಅಧಿಕಾರಿಗಳ ಮದದಲ್ಲಿ ನೀನು ಸೊಕ್ಕಿದರೆ
ಸೊರಗುವ ಕಾಲವೂ ಬರುತ್ತೆ
ಗೆಯ್ಯೋದನ್ನ ಗೆಯ್ದು ಹಿಂದೆ ಸರಿದರೆ ಮಾತ್ರ
ಹಾಯಾಗಿರುತ್ತೆ.

ಹೀಗೆ ಬಿಟ್ಟುಕೊಡುವುದನ್ನು ಅರಿಯುವ ಮನೋಭಾವ ಅನಂತಮೂರ್ತಿ ಅವರಿಗೆ ಬಹು ಆಪ್ತರಾಗಿದ್ದ ಶೂದ್ರ ಶ್ರೀನಿವಾಸರಿಗೂ ಮೇಷ್ಟ್ರ ಮರಣದ ಸಂದರ್ಭದಲ್ಲಿ ಅನಿವಾರ್ಯವಾಗಿತ್ತು. ಅಂತಹ ಆರ್ದ್ರಭಾವದ ಸಂದರ್ಭದಲ್ಲಿ ಅನಂತಮೂರ್ತಿಯವರ ವೈಚಾರಿಕತೆ ಮೂಲಕ ಅವರನ್ನು ಕಾಣಿಸುತ್ತಾ ತಾನೂ ತಣಿದ ಬರಹ ಗುಚ್ಛಗಳಿವು. ಆದ್ದರಿಂದ ಈ ಸಾವಿನ ಸಂದರ್ಭದಲ್ಲಿ ಶೂದ್ರರಿಗೆ ’ಬಂಧುಬಳಗ ಮತ್ತು ಒಡಹುಟ್ಟಿದವರಿಗಿಂತ ಮಿಗಿಲಾಗಿ ಕೃತಿಗಳು ಹತ್ತಿರವಾಗಿ’ ಕಂಡಿವೆ.

ಇಲ್ಲಿನ ಬರಹಗಳ ವಿವರಗಳೂ ಶೂದ್ರ ಶ್ರೀನಿವಾಸ ಅವರ ಇತರ ಬರಹಗಳ ಕ್ರಮದಂತೆ ಅನೇಕ ವಿವರಗಳ ಜೊತೆಯೇ ಇವೆ. ಲಂಕೇಶ್, ಡಿ.ಆರ್. ಮಾತ್ರವಲ್ಲ ಶೂದ್ರರ ಬರಹದಲ್ಲಿ ಗೋಪಾಲಗೌಡ, ಎಸ್.ವೆಂಕಟರಾಮ್, ರಾಜೀವ ತಾರಾನಾಥ್, ಸುಮತೀಂದ್ರ ನಾಡಿಗ್, ಕಿ.ರಂ.ನಾಗರಾಜ್, ಎನ್. ವಿದ್ಯಾಶಂಕರ್ ಹಾಗೂ ಇನ್ನೂ ಅನೇಕ ಸಾಹಿತ್ಯ ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಹಾದು ಹೋಗುತ್ತಾರೆ. ಮುಖ್ಯಮಂತ್ರಿಗಳಿಂದ ಪ್ರಾರಂಭಿಸಿ ಹೋಟೆಲ್ ಮಾಣಿವರೆಗೆ, ಸಮಾಜದ ನಾನಾ ಸ್ತರಗಳ ಮೂಲಕ ದಕ್ಕುವ ವಿವರಗಳಿಂದ ಅವರು ಚಿತ್ರಗಳನ್ನು ಕಟ್ಟಿಕೊಡುತ್ತಾರೆ. ಅಲ್ಲಿ ಟಿ.ಎನ್. ಸೀತಾರಾಮ್, ಪಟ್ಟಾಭಿರಾಮರೆಡ್ಡಿ ಹೀಗೆ ಎಲ್ಲರೂ ಸುತ್ತಮುತ್ತ ಇರುತ್ತಾರೆ.

ಇಲ್ಲಿನ ವಿವರಗಳಲ್ಲಿ ಇತರ ಚಾರಿತ್ರಿಕ ವಿವರಗಳ ನೇರ ದಾಖಲಾತಿಯೂ ಇದೆ. ಉದಾಹರಣೆ ’ಒಕ್ಕೂಟ’ದ ಹುಟ್ಟು ಅದರ ಜೊತೆ ಶೂದ್ರ ಹಾಗು ಅನಂತಮೂರ್ತಿ ಅವರ ಸಂಬಂಧಗಳ ವಿವರ ಸಾಹಿತ್ಯದ ಹಾಗೂ ಸಾಂಸ್ಕೃತಿಕ ಚರಿತ್ರೆಯ ದೃಷ್ಟಿಯಿಂದಲೂ ಮುಖ್ಯವಾದ ದಾಖಲಾತಿ. ಅಲ್ಲಿಂದ ಮುಂದೆ ಬಂಡಾಯ ಸಂಘಟನೆ ಬೆಳೆದ ಕ್ರಮ ಹಾಗೂ ಅದರೊಡನೆ ತೊಡಗಿಕೊಂಡ ವ್ಯಕ್ತಿಗಳ ವಿವರಗಳೂ ಮುಖ್ಯವಾದ ಪ್ರಥಮ ನೆಲೆಯ ದಾಖಲಾತಿಯಾಗಿಯೇ ಒದಗಿ ಬರುತ್ತದೆ.
ಅನಂತಮೂರ್ತಿಯವರು ಪ್ರಸಿದ್ಧರಾದ ಬಳಿಕವೂ ಸಾಮಾನ್ಯನಂತೆ ಸಾಹಿತ್ಯ ಸಭೆ ಸಮಾರಂಭಗಳಲ್ಲಿ ಅನೇಕ ಸಲ ಭಾಗವಹಿಸುತ್ತಿದ್ದರು. ಆ ವಿವರಗಳ ಮೂಲಕ ಶೂದ್ರ ಅನಂತಮೂರ್ತಿಯವರ ವ್ಯಕ್ತಿತ್ವದ ಇನ್ನೊಂದು ಮಗ್ಗುಲನ್ನೂ ಕಾಣಿಸಲು ಪ್ರಯತ್ನಿಸುತ್ತಾರೆ.

ಅನಂತಮೂರ್ತಿಯವರಿಗೆ ಮಾತನ್ನು ಮಾಣಿಕ್ಯಗೊಳಿಸುವ ಖುಷಿ ಇತ್ತ. ಆದರೆ ಅದನ್ನು ಸಾಧಿಸುವ ಹಾಗೂ ಮುಂದೆ ಅದೊಂದು ಸೃಜನಶೀಲ ರೂಪಕವಾಗಿ ಪರಿವರ್ತನೆಗೊಳ್ಳುವ ಮೊದಲು ಸಾಗುವ ಮಾನವ ಸಂಪರ್ಕ, ಸಂಬಂಧಿ ಚರ್ಚೆಗಳ ಹಾದು ಹೋಗುವಿಕೆಯನ್ನು ದಾಖಲಿಸಲು ಶೂದ್ರ ಶ್ರೀನಿವಾಸ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಾರೆ.

ಮರುಕ ಮಾನವ್ಯದ ಮೂಲ ಪ್ರವೃತ್ತಿ ಆಗಿರಬಹುದು ಎಂಬುದನ್ನು ಚರ್ಚಿಸುವ ಅನಂತಮೂರ್ತಿಯವರ ವಿಚಾರಗಳು ಶೂದ್ರ ಶ್ರೀನಿವಾಸರಿಗೆ ತುಂಬಾ ಮುಖ್ಯವಾದ್ದು. ಸಂಸ್ಕಾರದಲ್ಲಿ ಪ್ರಾರಂಭವಾದ ಈ ಚಿಂತನೆ ’ಸೂರ್ಯನ ಕುದುರೆ’ವರೆಗೆ ಹೇಗೆ ಹರಿದುಬಂದಿದೆ ಎಂಬುದನ್ನು ಶೂದ್ರ ಇಲ್ಲಿ ಗುರುತಿಸುತ್ತಾರೆ.  ಅನಂತಮೂರ್ತಿಯವರ ಸಾಮಾಜಿಕ ನ್ಯಾಯ, ಚಿಂತನೆಗಳ ಹಿಂದೆ ಇರುವ ತುಡಿತ ಮರುಕ ಎಂಬ ಶೂದ್ರರ ವಿಚಾರ ಚರ್ಚೆಗೆ ಒಳಗಾಗಬೇಕಾದುದು. ಆದರೆ ಅದೊಂದು ಗಮನಿಸಬೇಕಾದ ನೋಟ ಎಂಬುದು ಇಲ್ಲಿ ಮುಖ್ಯ. ನಜೀರ್ ಸಾಬ್, ರಾಮಕೃಷ್ಣ ಹೆಗಡೆ ಇವರ ಸಂಪರ್ಕಗಳ ಮೂಲಕವೂ ಶೂದ್ರ ಈ ವಿಚಾರವನ್ನು ವಿಸ್ತರಿಸುವುದರಿಂದ ಶೂದ್ರರ ಬರವಣಿಗೆಗೆ ಸಹಜವಾದ ವಿಸ್ತಾರದ ವಿವರಗಳಿಂದ ನಾವು ಬೇಕಾದ ನೋಟಗಳನ್ನು ಆರಿಸಿಕೊಳ್ಳಬೇಕು.

ಇದೀಗ ಅನಂತಮೂರ್ತಿಯವರು ನಮ್ಮನ್ನು ಅಗಲಿ ಒಂದು ವರುಷವಾಗುತ್ತಾ ಬಂದಿದೆ. ಈ ಒಂದು ವರುಷದಲ್ಲಿ ಮೇಷ್ಟ್ರ ವಿಚಾರಗಳು ಪುನರಪಿ ಮನಸ್ಸಿಗೆ ಬರುತ್ತಾ ಇರುತ್ತದೆ. ಅವರು ನಮ್ಮೊಡನೆ ಇದ್ದ ಸಾರ್ವಜಕ ವ್ಯಕ್ತಿತ್ವವಿದ್ದ ಅಪರೂಪದ ಬುದ್ಧಿಜೀವಿ. ಆ ವ್ಯಕ್ತಿತ್ವದ ಆಳದಲ್ಲಿ ಇದ್ದ ಮಾನವೀಯ ತುಡಿತ ಬದುಕು ಹಾಗೂ ಸಮಾಜಗಳ ಬಗೆಗಿನ ಕಳಕಳಿ ಬಹಳ ಮುಖ್ಯವಾದ್ದು. ಬೌದ್ಧಿಕವಾಗಿ ಅವರು ಈ ಲೋಕವನ್ನು ಅರಿತು ಸಾಮಾಜಿಕವಾಗಿ ವಿವರಿಸಲು ಪ್ರಯತ್ನಿಸಿದರು. ಅವರ ಆಪ್ತ ಒಡನಾಡಿಗಳಲ್ಲಿ ಒಬ್ಬರಾಗಿದ್ದ ಶೂದ್ರ ಶ್ರೀನಿವಾಸ ಅವರು ಯು.ಆರ್.ಅನಂತಮೂರ್ತಿ ಅನುಭವಿಸಿದಂತೆ ಹೇಳಿದ್ದಾರೆ. ಆ ಮೂಲಕ ಅವರಿಗೆ ತಮ್ಮ ಗೌರವವನ್ನು, ವಿಚಾರಗಳಿಗೆ ಶ್ರದ್ಧೆಯನ್ನು ತೋರಿದ್ದಾರೆ. ಈ ಬರವಣಿಗೆ ಮೂಲಕ ಅವರ ಅಗಲಿಕೆಯ ನೋವನ್ನು ತಮ್ಮದೇ ಆದ ರೀತಿಯಲ್ಲಿ ಸಹಿಸಿಕೊಂಡು ವಿಚಾರಗಳನ್ನು ಮುಂದಕ್ಕೆ ಒಯ್ದಿದ್ದಾರೆ.

ಅನಂತಮೂರ್ತಿಯವರ ಬಗೆಗಿನ ಈ ಕಿರು ಹೊತ್ತಿಗೆಯನ್ನು ಓದಲು ಈ ನನ್ನ ಮುನ್ನುಡಿ ರೂಪದ ಮಾತುಗಳು ಒಂದು ಪ್ರವೇಶ ಸೂಚಿ ಮಾತ್ರ. ಆ ಮೂಲಕ ಅನಂತಮೂರ್ತಿಯವರ ವಿಚಾರಗಳನ್ನು ಇನ್ನಷ್ಟು ಅರಿತುಕೊಳ್ಳಲು ಇದು ಹಾಗೂ ಶೂದ್ರ ಶ್ರೀನಿವಾಸರ ಬರವಣಿಗೆ ಸಹಕಾರಿಯಾದೀತು ಎಂದು ಆಶಿಸುತ್ತೇನೆ.

ಎಸ್.ಆರ್. ವಿಜಯಶಂಕರ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...