Monday, February 22, 2016

ಇದು ಕಥೆಯಲ್ಲ...!!ರಂಗಮ್ಮ ಹೊದೇಕಲ್


ಬರೆಯುತ್ತ ಸರಳವಾಗಬೇಕು ಅನ್ನುವ ಬರಗೂರ್ ಸರ್ ಮಾತು ನನಗಿಷ್ಟ.ಆರಂಭದಲ್ಲಿ ತೋಚಿದ್ದನ್ನುಗೀಚಿಕೊಂಡಿದ್ದ ನನ್ನಬರಹಗಳನ್ನು ಯಾರಿಗೆ ತೋರಿಸುವುದು?ಆಗಷ್ಟೆ ಮದುವೆಯಾದ ಆಕೆ ನಮ್ಮ ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದಳು.ಹಿರೇಹಳ್ಳಿ ಯ ಆಕೆಯನ್ನು ರಾಯಚೂರಿನಿಂದ ಇಲ್ಲ ಗ್ರಾನೈಟ್ ಕೆಲಸಕ್ಕೆ ಬಂದು ನೆಲೆ ನಿಂತವನಿಗೆ ಮಧ್ಯೆ ಒಂದಷ್ಟು ಹಿರಿಯರು ಸೇರಿ ಮದುವೆಮಾಡಿದ್ದರು.

ನಾಲ್ಕನೇ ತರಗತಿ ಅಷ್ಟೇ ಓದಿಕೊಂಡಿದ್ದ ಆಕೆ ಅದೆಷ್ಟು ಗೆಳತಿಯಾದಳೆಂದರೆ ನಾನು 'ಶೈನಾ'ಬರೆದು ಮುಗಿಸುವುದು ಸರ ಹೊತ್ತಾದರೂ ನನ್ನೊಂದಿಗೆ ಇರುತ್ತಿದ್ದಳು!ಬರೆದ ಕವಿತೆ,ಲೇಖನ ಓದಿಸಿಕೊಂಡು ಚಪ್ಪಾಳೆ ಹೊಡೆಯುತ್ತಿದ್ದಳು!ದುಃಖ ಹಂಚಿಕೊಂಡು ಅತ್ತು ಹಗುರಾಗಿ ಕುಲುಕುಲು ನಗುತ್ತ ಬದುಕು ಅಂದ್ರೆ ಇಷ್ಟೇ ಮೇಡಂ-'ಅಳು-ನಗು 'ಅನ್ನುತ್ತಿದ್ದ ಆಕೆಯ ನಗುವಿಗೆ ನಾನೂ ಬೆರಗಾಗುತ್ತಿದ್ದೆ!ಆಕೆಯ ವಯಸ್ಸಾದ ಅಮ್ಮ,ಅಪ್ಪನೂ ಈಕೆಯ ಆಶ್ರಯಕ್ಕೆ ಬಂದ ಮೇಲೆ ಅವಳಿಗೆ ಬದುಕು ಇನ್ನೊಂದು ತೆರನಾದ ಕಷ್ಟ ಕೊಡಹತ್ತಿತ್ತು!ಹೆತ್ತವರ ಆರೈಕೆ ಜೊತೆಗೆ ಇಷ್ಟೂ ಜನಕ್ಕೆ ನಾನು ದುಡಿಯಬೇಕಲ್ಲ ಅನ್ನುವ ಸಿಟ್ಟಿನ ಗಂಡನನ್ನು ಸಂಭಾಳಿಸುತ್ತಲೇ ಎರಡು ಮುದ್ದಾದ ಮಕ್ಕಳ ತಾಯಾದಳು!ಆ ಎರಡು ಮಕ್ಕಳ ಬಾಣಂತನವೋ ದೇವರಿಗೇ ಪ್ರೀತಿ!ಬಡತನ,ಅಸಹಾಯಕತೆ ಕಿತ್ತು ತಿನ್ನುವ ಸ್ತಿತಿಯಲ್ಲೂ ಆಕೆಯದೂ ಯಾವತ್ತಿನದೇ ನಗು!ಈ ನಡುವೆ ಕುಡಿತದ ವ್ಯಸನಕ್ಕೆ ತೀವ್ರವಾಗಿ ಜೋತುಬಿದ್ದ ಆಕೆಯ ಗಂಡ ನಿತ್ಯ ಕುಡಿದು ಬಂದು ಬಡಿಯತೊಡಗಿದ...ನಿಂದಿಸತೊಡಗಿದ...ನಾವಾದರೂ ಎಷ್ಟಂತ ತಡದೇವು!ಒಮ್ಮೊ ಮಧ್ಯೆ ಹೋದ ನನಗೂ ಇದು 'ನಂ ಸಂಸಾರದ ವಿಷಯ' ಅಂದುಬಿಟ್ಟ!ಆಕೆ ಕೈ ಮುಗಿದು 'ನೀವೇನೂ ಅನ್ನಿಸ್ಕೊಬಾರದು ಮೇಡಂ ಯಾರಿಂದಲೂ....' ಅಂದಾಗ ನನ್ನ ಕಣ್ಣಲ್ಲೂ ನೀರು!

ದಿನ ದಿನದ ಹೊಡೆದಾಟ ಅತಿಯಾಗಿ ಒಮ್ಮೆ ತಾಳಿಯನ್ನೇ ಕಿತ್ತೊಗೆದವ ಹೋಗೇ ಬಿಟ್ಟ....೧,೨,೩,೪,೫,೬ ವರ್ಷಗಳ ಕಾಲ!!ಮಕ್ಕಳು ಬೆಳೆದು,ಶಾಲೆಗೆ ಹೋಗುವಂತಾಗಿ ಆಕೆಯೂ ಗಾರ್ಮೆಂಟ್ಸ್ ಸೇರಿಕೊಂಡು ದುಡಿಯತೊಡಗಿ ಇತ್ತೀಚೆಗೆ ಹಿರೇಹಳ್ಳಿಯಲ್ಲಿಯೇ ಮನೆ ಮಾಡಿಕೊಂಡು ತನ್ನ ಮಕ್ಕಳು,ತನ್ನ ತಾಯಿ ಜೊತೆ ಬದುಕನ್ನು ಏಗುತ್ತಿರುವಾಗ ಮತ್ತೆ ಪುಣ್ಯಾತ್ಮ(!?)ಅವಳ ಮನೆ ಬಾಗಿಲಲ್ಲಿ ಪ್ರತ್ಯಕ್ಷವಾಗಬೇಕೆ!?

ಬಿಲ್ಕುಲ್ ಒಳಗೆ ಬಿಟ್ಟುಕೊಳ್ಳದ ಆಕೆ ಯಾವ ಕಾರಣಕ್ಕೂ ನಿನ್ನ ಜೊತೆ ಬಾಳ್ವೆ ಮಾಡಲಾರೆ ಅಂದಿದ್ದಾಳೆ.ನಾನು ಆಕೆಯ ಆತ್ಮೀಯಳು ಅನ್ನುವ ಕಾರಣಕ್ಕೆ ನನ್ನಲ್ಲಿಗೆ ಬಂದಾತ ನಿಮ್ಮ ಮಾತು ನಡೆಯುತ್ತೆ ಹೇಳಿ ಅಂದ!'ನೋಡೋಣವೆಂದು ಏನವ್ವ ತೀರ್ಮಾನ ಅಂದೆ!'ಮೇಡಂ,ನಿಮ್ಮ ಬಗ್ಗೆ ಪ್ರೀತಿ,ಗೌರವ ಎರಡೂ ಇದೆ ನನಗೆ.ಆದರೆ ಇದೊಂದು ವಿಷಯದಲ್ಲಿ ನೀವು ರಾಜಿಯಾಗು ಅನ್ಬೇಡಿ!ಗಂಡ ನಿಲ್ಲದೆ ಬದುಕು ಅಭ್ಯಾಸವಾಯ್ತು ಅಂದುಬಿಟ್ಟಳು!

'ಹ್ಞೂಂ,ಮಿಸ್ಸಮ್ಮ,ಅಮ್ಮ ಸಾಕು 'ಅಂದುಬಿಟ್ಟಳು ಏಳನೇ ತರಗತಿ ಓದುವ ಮಗಳು!ಹೆಮ್ಮೆ ಅನ್ನಿಸಿತು.
ಈಗಾತ ಎಲ್ಲಿದ್ದಾನೋ....!?

ಅಂದ ಹಾಗೆ ಆಕೆಯ ಹೆಸರು-ರತ್ನ.!ಅಮ್ಮನ ಬಾಯಲ್ಲಿ 'ರತ್ನದಂತಹ ಹುಡುಗಿ'!

ಯಾವ ಸಂಭ್ರಮ,ಆಚರಣೆಯೂ ಇಲ್ಲದೆ ತೊಟ್ಟಿಲೊಳಗಿದ್ದ ಆ ಮಕ್ಕಳನ್ನು ಅಂಗೈಯಲ್ಲಿಟ್ಟುಕೊಂಡು ಕಿವಿಯಲ್ಲಿ ಕೂಗಿದ್ದೆ ನಾನು
'ಭೂಮಿಕಾ...ಶರಣ...!!ಅದೇ ನಾಮಕರಣ!!

ಇಬ್ಬರೂ ಚೆಂದಗೆ ಓದುತ್ತಿದ್ದಾರೆ.ಸಂಘಟನೆಯ ಕಾರ್ಯಕ್ರಮಗಳಿಗೆ ರತ್ನ ಬರುತ್ತಾರೆ.
'ನಗು ಪ್ರವಾಹದ ವಿರುದ್ಧದ ಈಜು'ಅನ್ನುವುದು ನನಗಿಂತ ಚೆನ್ನಾಗಿ ರತ್ನಾಗೆ ಗೊತ್ತಿದೆ!!

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...